ವೈಯಕ್ತಿಕ ಹಣಕಾಸು: ಹೊಸ ವರ್ಷದ ಸಾಧ್ಯತೆಗಳು ಹಲವು

ವೈಯಕ್ತಿಕ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಹೊಸ ವರ್ಷದ ಮುನ್ನೋಟ, ಸಾಕಷ್ಟು ಆಸಕ್ತಿದಾಯಕವಾಗಿದೆ. ಅದರಲ್ಲೂ ಆದಾಯ ತೆರಿಗೆ ವಿನಾಯಿತಿಯ ಮಿತಿ ಹೆಚ್ಚಳ, ಷೇರು ಮಾರುಕಟ್ಟೆ ಸೂಚ್ಯಂಕದ ಏರುಗತಿ, ಮ್ಯೂಚುವಲ್ ಫಂಡ್, ಬಾಂಡ್, ರಿಯಲ್ ಎಸ್ಟೇಟ್ನಲ್ಲಿ ಲಾಭದಾಯಕ ಹೂಡಿಕೆ, ಅಗ್ಗದ ಗೃಹ ಸಾಲ ಮುಂತಾದ ಹಲವಾರು ಸಾಧ್ಯತೆಗಳು ಮೇಳೈಸಿದ್ದು, ತಂಗಾಳಿಯಂತೆ ಮುದ ನೀಡುತ್ತಿವೆ. ಹಾಗಾದರೆ ಈ ಬದಲಾವಣೆಗಳ ಪ್ರಯೋಜನವನ್ನು ಹೇಗೆ ಪಡೆಯಬಹುದು? ಇಲ್ಲಿದೆ ಮಾಹಿತಿ.
1. ಆದಾಯ ತೆರಿಗೆ ವಿನಾಯಿತಿ ಮಿತಿ 3 ಲಕ್ಷ ರೂ.ಗೆ ವಿಸ್ತರಣೆ?
ಹಣಕಾಸು ಸಚಿವ ಅರುಣ್ ಜೇಟ್ಲಿ 2014 ರ ಜುಲೈನಲ್ಲಿ ಮಂಡಿಸಿದ್ದ ಚೊಚ್ಚಲ ಬಜೆಟ್ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ಗೆ ಏರಿಸಲಾಗಿತ್ತು. ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆಯುವ ವಾರ್ಷಿಕ ಉಳಿತಾಯದ ಮಿತಿಯನ್ನು 1.5 ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು. ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂ.ಗೆ ವಿಸ್ತರಿಸಲಾಗಿತ್ತು. ಗೃಹ ಸಾಲದಲ್ಲಿ ಬಡ್ಡಿತ ಮೇಲೆ ತೆರಿಗೆ ವಿನಾಯಿತಿಯನ್ನು ವೃದ್ಧಿಸಲಾಗಿತ್ತು. ತೆರಿಗೆ ರಿಯಾಯಿತಿ ಮಿತಿ 2015 ರಲ್ಲಿ ಈಗಿನ 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ವಿಸ್ತರಣೆಯಾಗಬಹುದು ಎನ್ನುತ್ತಾರೆ ತಜ್ಞರು. ಕಳೆದ ಬಜೆಟ್ನಲ್ಲಿ ತೆರಿಗೆ ದರದ ಶ್ರೇಣಿಯನ್ನು ಯಥಾಸ್ಥಿತಿಯಲ್ಲಿಡಲಾಗಿತ್ತು. ಆದರೆ ಜೇಟ್ಲಿಯವರು ಫೆಬ್ರವರಿಯಲ್ಲಿ ಮಂಡಿಸಲಿರುವ ಪೂರ್ಣಪ್ರಮಾಣದ ಬಜೆಟ್ನಲ್ಲಿ ತೆರಿಗೆ ದರ ಶ್ರೇಣಿಯನ್ನೂ ತಗ್ಗಿಸುವ ನಿರೀಕ್ಷೆ ಇದೆ.
2. ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 32000 ಕ್ಕೆ ಜಿಗಿತ?
ಹಣಕಾಸು ವಲಯದ ಹೆಸರಾಂತ ಸಂಸ್ಥೆಗಳು ನುಡಿದಿರುವ ಭವಿಷ್ಯ ನಿಜವಾದರೆ 2015 ರಲ್ಲಿ ಕೂಡ ಷೇರು, ಮ್ಯೂಚುವಲ್ ಫಂಡ್ಗಳಲ್ಲಿನ ಹೂಡಿಕೆ ನಿಮಗೆ ಲಾಭ ದೊರಕಿಸಿಕೊಡಲಿದೆ. ಜಾಗತಿಕ ಬ್ರೋಕರೇಜ್ ಕಂಪನಿ ಮೋರ್ಗಾನ್ ಸ್ಟ್ಯಾನ್ಲಿಯ ಪ್ರಕಾರ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2015 ರ ಡಿಸೆಂಬರ್ ವೇಳೆಗೆ 32.500 ಅಂಕಗಳ ಗಡಿಯನ್ನು ಕ್ರಮಿಸಲಿದೆ. 2014ರಲ್ಲಿ ಸೆನ್ಸೆಕ್ಸ್ 7,000ಕ್ಕೂ ಹೆಚ್ಚು ಅಂಕಗಳ ಜಿಗಿತ ಸಾಸಿ ಹೂಡಿಕೆದಾರರಿಗೆ ಶೇ.30 ಕ್ಕೂ ಹೆಚ್ಚು ಆದಾಯ ಕೊಟ್ಟಿತ್ತು. ಕಳೆದ 12 ತಿಂಗಳುಗಳಲ್ಲಿ ಭಾರತೀಯ ಷೇರು ಪೇಟೆಗೆ ವಿದೇಶಿ ಹೂಡಿಕೆಯ ಒಳ ಹರಿವು ಹೆಚ್ಚಿದೆ. ಹೊಸ ವರ್ಷ ಇದು ಮುಂದುವರಿಯಲಿದೆ ಎಂದು ಮೋರ್ಗಾನ್ ಸ್ಟ್ಯಾನ್ಲಿ ವರದಿ ಹೇಳಿದೆ. ರೆಲಿಗೇರ್ ಸೆಕ್ಯುರಿಟೀಸ್ನ ತಜ್ಞರ ಪ್ರಕಾರ ಕೂಡ ಸೆನ್ಸೆಕ್ಸ್ 32,000 ಅಂಕಗಳ ಮೈಲುಗಲ್ಲು ಸ್ಥಾಪಿಸಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಇಳಿಕೆ, ಸಗಟು ಹಣದುಬ್ಬರ ಶೂನ್ಯ ಮಟ್ಟಕ್ಕೆ ತಗ್ಗಿರುವುದು, ಎಚ್ಎಸ್ಬಿಸಿ ವರದಿಯ ಪ್ರಕಾರ ಡಿಸೆಂಬರ್ನಲ್ಲಿ ಉತ್ಪಾದನೆ ವಲಯ ಕಳೆದ ಎರಡು ವರ್ಷಗಳಲ್ಲಿಯೇ ಗರಿಷ್ಠ ಮಟ್ಟದ ಬೆಳವಣಿಗೆ ದಾಖಲಿಸಿರುವುದು ಅರ್ಥವ್ಯವಸ್ಥೆಯ ಚೇತರಿಕೆಗೆ ಸಾಕ್ಷಿಗಳಾಗಿವೆ. ಷೇರು ಸೂಚ್ಯಂಕಗಳ ಏರಿಕೆ ಇದನ್ನು ಬಿಂಬಿಸಿದೆ.
3. ಸಾಲದ ಬಡ್ಡಿ ದರಗಳು ಕಡಿಮೆಯಾಗುವ ಸಾಧ್ಯತೆ
ಹಣದುಬ್ಬರ ಕಡಿಮೆಯಾಗಿರುವುದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ವರ್ಷದಲ್ಲಿ ತನ್ನ ಪ್ರಮುಖ ದರಗಳನ್ನು ತಗ್ಗಿಸುವ ನಿರೀಕ್ಷೆ ಇದೆ. (ರೆಪೊ ದರ) ಇದು ಷೇರು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದ್ದರೆ, ಬ್ಯಾಂಕ್ಗಳಿಗೆ ಸಾಲದ ಬಡ್ಡಿ ದರ ಇಳಿಕೆಗೆ ಹಾದಿ ಸುಗಮವಾಗಲಿದೆ. ಬಡ್ಡಿ ದರ ಇಳಿಸಬೇಕೆಂಬ ಒತ್ತಡವಿದ್ದರೂ, ದೇಶದ ವಿತ್ತೀಯ ಪರಿಸ್ಥಿತಿಯನ್ನು ಅಳೆದೂ ತೂಗಿ ನಿರ್ಧರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿರುವುದು ಇದುವರೆಗಿನ ಹಣಕಾಸು ಪರಾಮರ್ಶೆಗಳಲ್ಲಿ ಸಾಬೀತಾಗಿದೆ. ಹಣದುಬ್ಬರ ಇಳಿದಿದ್ದರೂ, ಡಾಲರ್ ದಿನೇದಿನೆ ಪ್ರಬಲವಾಗುತ್ತಿದೆ. ಆದ್ದರಿಂದ ಕೇಂದ್ರ ಆಯವ್ಯಯದ ನಂತರ ಅರ್ಥವ್ಯವಸ್ಥೆಯ ಸ್ಪಷ್ಟ ಚಿತ್ರಣ ಲಭಿಸಲಿದ್ದು, ಬಳಿಕವಷ್ಟೇ ಆರ್ಬಿಐ ಬಡ್ಡಿ ದರ ಇಳಿಕೆಗೆ ಪರಿಶೀಲಿಸಬಹುದು ಎಂಬ ವಾದವಿದೆ. ಅದೇನೇ ಇದ್ದರೂ, ಸಾಲಗಳ ಬಡ್ಡಿ ದರ ತಗ್ಗುವ ಸಾಧ್ಯತೆ ದಟ್ಟವಾಗಿದಂತೂ ಹೌದು.
4. ಬಂಗಾರದ ಹೊಳಪು ಆದಾಯ ತರುತ್ತಿಲ್ಲ
ಅಮೆರಿಕದ ಅರ್ಥವ್ಯವಸ್ಥೆಯ ಚೇತರಿಕೆಯ ಸಲುವಾಗಿ, ಅಲ್ಲಿನ ಫೆಡರಲ್ ರಿಸರ್ವ್ 2008 ರಿಂದ ಅನುಸರಿಸಿಕೊಂಡು ಬಂದಿದ್ದ, ಬಾಂಡ್ ಖರೀದಿಯ ಆರ್ಥಿಕ ನೆರವಿನ ಪ್ಯಾಕೇಜನ್ನು ಕಳೆದ ವರ್ಷ ಮುಕ್ತಾಯಗೊಳಿಸಿದೆ. ಹಾಗೂ ಬಡ್ಡಿ ದರ ಏರಿಕೆಯ ಸಾಧ್ಯತೆ ಅಲ್ಲಿ ಉಂಟಾಗಿದೆ. ಇದರ ಪರಿಣಾಮ ಬಂಗಾರದ ಮೇಲಿನ ಹೂಡಿಕೆಯಲ್ಲಿ ಸಿಗುವ ಆದಾಯ ಕಡಿಮೆಯಾಗಿದ್ದು, ಬೇಡಿಕೆ ಕುಸಿದಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಭಾರತದಲ್ಲಿ ಕೂಡ ಚಿನ್ನದ ದರ 2014 ರಲ್ಲಿ ಶೇ.8ರಷ್ಟು ತಗ್ಗಿತ್ತು. ಬಂಗಾರದ ಬೆಲೆ ಇಳಿಕೆಯಾಗಿರುವುದರಿಂದ ಖರೀದಿಗೆ ಸಂದರ್ಭ ಸೃಷ್ಟಿಸಿದೆ. ಆದರೆ ಹೂಡಿಕೆಯ ದೃಷ್ಟಿಯಿಂದ ಹೊಸ ವರ್ಷ ನಿರಾಶಾದಾಯಕವಾಗಿದೆ ಎನ್ನುತ್ತಾರೆ ವಿಶ್ಲೇಷಕರು. ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಏರಿಸಿದರೆ ಮತ್ತು ಡಾಲರ್ ಪ್ರಬಲವಾದರೆ ಬಂಗಾರದ ಬೆಲೆಯೂ ಇಳಿಯಲಿದೆ. ಶೇ.10 ರಷ್ಟಿರುವ ಚಿನ್ನದ ಆಮದು ಸುಂಕವನ್ನು ಸರಕಾರ ಇಳಿಸಿದರೂ ಸ್ವರ್ಣ ದರ ಕಡಿಮೆಯಾಗುವುದು ಖಚಿತ. ಆದ್ದರಿಂದ ಹೂಡಿಕೆಯ ಉದ್ದೇಶವಿದ್ದರೆ ಉತ್ತಮ ಆದಾಯಕ್ಕೆ ದೀರ್ಘಾವ ಕಾಯಬೇಕಾದೀತು. ಅಗತ್ಯವಿರುಷ್ಟು ಖರೀದಿಸುವವರಿಗೆ ಒಳ್ಳೆಯ ಅವಕಾಶ ಬಂದೊದಗಿದೆ.
5. ಮ್ಯೂಚುವಲ್ ಫಂಡ್, ರಿಯಾಲ್ಟಿ ಹೂಡಿಕೆ ಹೇಗೆ?
ಮ್ಯೂಚುವಲ್ ಫಂಡ್ಗಳಲ್ಲಿ 2015 ರಲ್ಲಿ ಹೂಡಿಕೆ ಉತ್ತಮ ಆಯ್ಕೆಯಾಗಬಹುದು. ಮುಖ್ಯವಾಗಿ ಅಮೆರಿಕ ಮೂಲದ ಷೇರುಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ಯೋಜನೆಗಳು ಲಾಭದಾಯಕವಾಗಬಹುದು. ಏಕೆಂದರೆ ಡಾಲರ್ ಜಾಗತಿಕ ಮಟ್ಟದಲ್ಲಿ ಬಹುತೇಕ ಎಲ್ಲ ಕರೆನ್ಸಿಗಳೆದುರು ತನ್ನ ಮೌಲ್ಯವನ್ನು ವೃದ್ಧಿಸುತ್ತಿದೆ ಎನ್ನುತ್ತಾರೆ ವಿಶ್ಲೇಷಕರು. ಹಾಗೆಯೇ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆಯೂ ತಕ್ಕ ಪ್ರತಿಫಲ ಕೊಡಬಹುದು ಎಂದು ಅಂದಾಜಿಸಲಾಗಿದೆ. ದೇಶಾದ್ಯಂತ 100 ಸ್ಮಾರ್ಟ್ ಸಿಟಿಗಳನ್ನು ಸೃಷ್ಟಿಸುವ ಯೋಜನೆಯನ್ನು ಸರಕಾರ ಹೊಂದಿದೆ. ಇದಲ್ಲದೆ ಎಲ್ಲ ರಾಜ್ಯಗಳಲ್ಲಿ ನಗರ, ಪಟ್ಟಣಗಳ ಅಭಿವೃದ್ಧಿಗೆ ಸರಕಾರಗಳು ಒತ್ತು ನೀಡುತ್ತಿವೆ. ರಿಯಾಲ್ಟಿ ಅಭಿವೃದ್ಧಿಗೆ ಇದೆಲ್ಲ ಸಕಾರಾತ್ಮಕವಾಗಿ ಪರಿಣಮಿಸಬಹುದು. ಯುಕ್ತ ದರದ ಗೃಹ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆ ಅನುಕೂಲ ಪಡೆಯಬಹುದು. ಆದರೆ ಪ್ರಾಪರ್ಟಿ ಖರೀದಿಸುವ ಮುನ್ನ ಅದರ ದಾಖಲೆ ಪತ್ರಗಳು ಸಮರ್ಪಕವಾಗಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಿ. ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದಿದೆಯೇ ಎಂಬುದನ್ನು ತಪ್ಪದೆ ಖಾತರಿಪಡಿಸಿಕೊಳ್ಳಿ. ಅಗ್ಗದ ದರವೆಂದು ಈ ಅಂಶಗಳನ್ನು ಪರಿಗಣಿಸದೆ ಬಿಡಬೇಡಿ. ಆಸ್ತಿ ಖರೀದಿಸಿದ ನಂತರ ಕನಿಷ್ಠ ಮೂರು ವರ್ಷ ಇಟ್ಟುಕೊಂಡು ನಂತರ ವಿಕ್ರಯಿಸಿ.
ಒಳನೋಟ
ಕನಿಷ್ಠ 1ವರ್ಷ ಹೂಡಿಕೆಯ ಪ್ರಯೋಜನ
ಷೇರು ಮಾರುಕಟ್ಟೆಯಲ್ಲಿ 2ರಲ್ಲಿ ಹೂಡಿಕೆಗೆ ಮುಂದಾಗುವವರು ಷೇರಿನಲ್ಲಿ ಕನಿಷ್ಠ 1 ವರ್ಷ ಹೂಡಿಕೆ ಮಾಡುವುದು ಸೂಕ್ತ. ಇದರಿಂದ ಷೇರು ವಿಕ್ರಯದಿಂದ ಸಿಗುವ ಲಾಭ ತೆರಿಗೆ ಮುಕ್ತವಾಗಿರುತ್ತದೆ. ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡುವ ಬಗೆ ಹೇಗೆ ಎಂಬುದು ಗೊತ್ತಾಗದಿದ್ದರೆ ಈಕ್ವಿಟಿ ಮ್ಯೂಚುವಲ್ ಫಂಡ್ಗಳ ಮೂಲಕ ಹೂಡಿಕೆ ಉತ್ತಮ ಆಯ್ಕೆಯಾಗಬಹುದು. ಬ್ಯಾಂಕಿಂಗ್, ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಹೂಡಿಕೆಗೆ ಅನ್ವೇಷಣೆಯನ್ನೂ ಮಾಡಬಹುದು.
ಬಿ ಸ್ಮಾರ್ಟ್
ಭರವಸೆ ಮೂಡಿಸಿರುವ ವಲಯಗಳು
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ದರಕಡಿತ ಮಾಡುವ ಸಾಧ್ಯತೆ ಇರುವುದರಿಂದ 2015 ರಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಸಂಸ್ಥೆಗಳ ಷೇರುಗಳು ಹೂಡಿಕೆದಾರರಿಗೆ ಹೆಚ್ಚು ಲಾಭದಾಯಕವಾಗಬಹುದು ಎನ್ನುತ್ತಾರೆ ತಜ್ಞರು. ಬಡ್ಡಿ ದರಗಳು ತಗ್ಗಿದರೆ ಆಟೊಮೊಬೈಲ್ ಕಂಪನಿಗಳ ವಹಿವಾಟು ಹೆಚ್ಚಲಿದ್ದು, ಅವುಗಳ ಷೇರು ಮೌಲ್ಯ ವೃದ್ಧಿಸಬಹುದು. ತೈಲ ದರಗಳು ಇಳಿದಿರುವುದರಿಂದ ವಾಹನಗಳಿಗೆ ಕೂಡ ಬೇಡಿಕೆ ಹೆಚ್ಚುವ ಲಕ್ಷಣ ಇದೆ. ಹಣದುಬ್ಬರ ತಗ್ಗಿರುವುದರಿಂದ ಎಫ್ಎಂಸಿಜಿ ಷೇರುಗಳೂ ಲಾಭ ತರಬಹುದು.
ವಾರದ ಪ್ರಶ್ನೆ
ಷೇರುಗಳಲ್ಲಿ ಅಲ್ಪಕಾಲೀನ ಹೂಡಿಕೆ ಪ್ರಸ್ತುತ ಯಾಕೆ ಸೂಕ್ತವಲ್ಲ?
ಕಳೆದ 2014 ರಿಂದ ಈಕ್ವಿಟಿ ಮಾರುಕಟ್ಟೆ ಚೇತರಿಕೆಯ ಹಾದಿಗೆ ಮರಳಿದೆ. ಆದರೆ ಇನ್ನೂ ಉತ್ತಮ ಫಲಿತಾಂಶ ಬರಬೇಕಾಗಿದೆ. ಒಟ್ಟಾರೆ ಮಾರುಕಟ್ಟೆ ಸಕಾರಾತ್ಮಕವಾಗಿದ್ದರೂ, ಏರಿಳಿತಗಳು ಇರಬಹುದು. ಆದ್ದರಿಂದ 3-4 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಉತ್ತಮ ಆದಾಯ ನಿಮ್ಮದಾಗಬಹುದು ಎನ್ನುತ್ತಾರೆ ಪರಿಣತರು.
– ಕೇಶವ ಪ್ರಸಾದ್.ಬಿ.ಕಿದೂರು
(ವಿಜಯ ಕರ್ನಾಟಕದಲ್ಲಿ ಪ್ರಕಟಿತ)
ವೈಯು ಕ್ತಿಕ ಹಣಕಾಸು …………. ಇಂಥಹ ಮಾಹಿತಿಗಳು ಸುರಹೊನ್ನೆಯ ಕಿರೀಟಕ್ಕೆ ಗರಿ.
ಥ್ಯಾಂಕ್ಸ್.