ಜೇನುನೊಣವೂ ಮನೆನೊಣವೂ…ಮಕ್ಕಳ ಕಥೆ

Share Button

ಅಂದು ಬೆಳ್ಳಂಬೆಳಗ್ಗೆಯೇ “ಕಥೇ.. ಕಥೇ…” ಎಂದು ಅಜ್ಜಿಯನ್ನು ಪೀಡಿಸಿದಾಗ ಅಜ್ಜಿ ಕಣ್ಣು ಹೊರಳಿಸಿ ಹೆದರಿಸುವ ವ್ಯರ್ಥ ಪ್ರಯತ್ನ ಮಾಡಿದ್ದರು. ಮುನ್ನಾದಿನವಷ್ಟೇ ಎರಡು ಬಾರಿ ‘ಮೂರು ಕರಡಿ’ಗಳ ಕಥೆ ಹೇಳಿ ಸಾಕಾಗಿದ್ದ ಅಜ್ಜಿ ಹೇಗಾಅದರೂ ಅಡುಗೆ ಮನೆಯಿಂದ ನನ್ನ ಸಾಗಹಾಕುವ ಶತ ಪ್ರಯತ್ನ ಮಾಡುತ್ತಿದ್ದರು. ತಮ್ಮ ಸೀರೆಗಳ ಬಗ್ಗೆ ಅಪಾರ ಆಸೆ ಇಟ್ಟುಕೊಂಡಿದ್ದ ಅಜ್ಜಿಯ ಪೆಟ್ಟಿಗೆಯಲ್ಲಿದ ಪ್ರೀತಿಯ ಹಸಿರು ಸೀರೆ ಒದ್ದೆ ಕೈ ಒರೆಸಲು ಉಪ್ದಯೋಗಿಸುವುದಾಗಿ ನನ್ನ ಕಡೆಯ ಅಸ್ತ್ರ ಪ್ರಯೋಗಿಸಿದಾಗ ಅವರು “ಹೋಗು.. ಅಲ್ಲಿ ಕೂತಿದ್ದಾರಲ್ಲಾ..! ಅವರಿಗೆ ತುಂಬಾ ಕಥೆ ಗೊತ್ತು.. ಚೆನ್ನಾಗಿ ಹೇಳುತ್ತಾರೆ..” ಎಂದು ಅಜ್ಜನತ್ತ ಬೆಟ್ಟು ಮಾಡಿದ್ದರು.

ಅಂದಿನವರೆಗೂ ಅಜ್ಜ ಕಥೆ ಹೇಳುವುದನ್ನು ಕೇಳದಿದ್ದ ನನಗೆ ಅಜ್ಜನ ಕಥೆಯ ಸ್ಟ್ಯಾಂಡರ್ಡ್ ಬಗ್ಗೆ ಸಣ್ಣ ಅನುಮಾನ ಇತ್ತು. ನನಗೂ ಕಾಡಿ ಬೇಡಿ ಸಾಕಾಗಿತ್ತು. ಅಜ್ಜಿಯತ್ತ ಮೂತಿ ಸೊಟ್ಟ ಮಾಡಿ ಓಡಿ ಹೋಗಿ ಅಜ್ಜನ ಕೈಲಿದ್ದ ದಿನಪತ್ರಿಕೆಗೆ ಹಿಂದಿನಿಂದ ಜೋರಾಗಿ ಬಡಿದು ಮತ್ತೆ “ಕಥೇ.. ಕಥೇ..” ಎಂದು ರಾಗ ಎಳೆದಿದ್ದೆ. “ಬಸ್ಸು ಮುಷ್ಕರ ಕೊನೆಗೊಂಡಾಗ ಲಾರಿಯವರೂ ಮುಷ್ಕರ ಹೂಡಿದರಂತೆ..” ಎನ್ನುತ್ತಾ ಪೇಪರ್ ಮಡಚಿತ್ತು ನಕ್ಕು “ಸರಿ ಬಾ ಕಥೆಯೇ ಹೇಳುವಾ..” ಎಂದು ಶುರು ಹಚ್ಚಿದರು.


ಒಂದು ಊರು. ಅಲ್ಲಿ ತುಂಬಾ ಜನ. ಜನರಷ್ಟೇ ನೊಣಗಳು! ಅಷ್ಟೇ ಜೇನ್ನೊಣಗಳು ಕೂಡಾ ಇದ್ದುವಂತೆ. ಜನರು ಧಾರಾಳವಾಗಿ ಜೇನುತುಪ್ಪ ಬಳಸುತ್ತಾ ಇದ್ದರಂತೆ.

ಒಂದು ದಿನ ಪುಟ್ಟ ಜೇನ್ನೊಣವೊಂದು ಅಜ್ಜ ಜೇನ್ನೊಣದ ಬಳಿ ಬಂದು “ಅಜ್ಜಾ ಅಜ್ಜಾ! ಊರಿನ ಜನರೆಲ್ಲಾ ನಾವು ಕಷ್ಟ ಪಟ್ಟು ತಂದ ಜೇನನ್ನು ತಿಂದು ಖುಷಿ ಪಡುತ್ತಿದಾರೆ. ಆದರೆ ನಮ್ಮ ಬಗ್ಗೆ ಕಿಂಚಿತ್ತೂ ಪ್ರೀತಿಯಿಲ್ಲ.. ಯಾಕೆ?” ಅಂತ ಪ್ರಶ್ನೆ ಹಾಕಿತ್ತು!
ಅದಕ್ಕೆ ಅಜ್ಜ ಜೇನು ಹುಳ “ಸರಿಯಲ್ವೇ..!! ನಾವಿದಕ್ಕೇನಾದರೂ ಮಾಡಬೇಕು..” ಎನ್ನುತ್ತಾ ಪ್ರಶ್ನೆ ರಾಣಿ ಜೇನಿನ ಮುಂದಿಟ್ಟರು, ಜೇನ್ನೊಣಗಳ ಸಭೆಯಲ್ಲಿ ಈ ಮಾತು ಬಂದಾಗ ಸಭೆ ಸಮಸ್ತವೂ ಅಹುದಹುದೆಂದು ತಲೆ ಆಡಿಸಿತ್ತು. ಹಿರಿ ಜೇನು ಹುಳಗಳು ಮರಿಗೆ ಅಪಾರ ಬುದ್ಧಿಯೆಂದು ಬೆನ್ನು ತಟ್ಟಿದುವು.. 🙂 ಆಗ ಮಂತ್ರಿ ಜೇನಿಗೊಂದು ಅದ್ಭುತ ಉಪಾಯ ಹೊಳೆಯಿತು. “ಒಂದು ದಾರಿ ಇದೆ..!! ನಾವು ಊರು ಬಿಟ್ಟು ಸೀದಾ ಪಕ್ಕದ ಕಾಡಿಗೇ ಹೋಗೋಣ! ಜನರೇನು ಮಾಡುತ್ತಾರೆ ನೋಡೋಣ!!” ಮಂತ್ರಿಯ ತಂತ್ರವ ಕೇಳಿ ಎಲ್ಲರೂ ಖುಷಿಯಾದರು.. ಮರಿ ಜೇನುಗಳಂತೂ ಪ್ರವಾಸದ ಖುಷಿಯಲ್ಲಿ ಆಗಲೇ ಹಾರಾಡತೊಡಗಿದ್ದುವು 🙂 ಎಲ್ಲವೂ ಸರಿಸರಿಯೆನ್ನುತ್ತ ಹಿಗ್ಗಿ ಹಾಡಿ ಹಾರಾಡಿ ಗಂಟು ಮೂಟೆ ಕಟ್ಟಿ ಉತ್ಸಾಹದಿಂದ ಪಕ್ಕದ ವನಕ್ಕೆ ಹೊರಟವು.

ಕಾಡಿಗೆ ಹೋಗಿ ತಲುಪಿದುದಾಯಿತು. ಮತ್ತೆ ಹುರುಪಿನಿಂದ ಗೂಡು ಕಟ್ಟಿ ಜೇನು ಸಂಗ್ರಹಿಸಿದುವು. ಕಾಡಲ್ಲಂತೂ ಜೇನುತುಪ್ಪಕ್ಕೆ ಬರವಿಲ್ಲ.

   

 

ಇತ್ತ ಊರಿನಲ್ಲಿ ಜನರಿಗೆ ಒಮ್ಮಿಂದೊಮ್ಮೆಗೆ ಜೇನು ನೊಣಗಳನ್ನು ನೋಡದೆ ಆತಂಕ. ಜೇನು ತುಪ್ಪವೂ ಮುಗಿದು ಹೋಗಿತ್ತು. ಅಮ್ಮಂದಿರು ಹಲಸಿನಕಾಯಿ ದೋಸೆ ಮಾಡಿ ಮುಂದಿಟ್ಟಾಗ ದೋಸೆಗೆ ಜೇನು ತುಪ್ಪವಿಲ್ಲದೆ ತಿನ್ನುವುದಿಲ್ಲವೆಂದು ಹಠ ಕಟ್ಟಿ ಕೂತರು ಚಿಳ್ಳೆಪಿಳ್ಳೆಗಳು. 🙁 ಸರಿ, ಊರಿನ ಹಿರಿಯರು ಸಭೆ ಸೇರಿ ಜೇನು ನೊಣಗಳನ್ನು ಹೇಗೆ ಮತ್ತೆ ಊರಿಗೆ ವಾಪಸಾಗಿಸುವುದೆಂದು ಚರ್ಚಿಸಿದರು. ಡಂಗುರ, ಡೋಲು, ವಾದ್ಯಗಳ ಸಮೇತ ಹೋಗಿ ಕಾಡಿನಿಂದ ಜೇನು ನೊಣಗಳನ್ನು ಕರೆತರೋಣವೆಂದು ಎಲ್ಲರೂ ಸೇರಿ ತೀರ್ಮಾನಿಸಿದರು.

ಇದನ್ನೆಲ್ಲಾ ನೋಡುತ್ತಿದ್ದ ಗೂಢಚಾರಿ ನೊಣವೊಂದು ಹಾರಿ ಹೋಗಿ ಉಳಿದ ನೊಣಗಳ ಬಳಿ ಹೇಳಿತ್ತು..”ನೋಡಿ..! ‘ಈ ದರಿದ್ರ ನೊಣ!’ ಎಂದು ನಮಗೆ ಯಾವಾಗಲೂ ಬಯ್ಯುತ್ತಾ ಇರುವ ಊರಿನ ಮಂದಿ ಊರು ಬಿಟ್ಟು ಹೋಗಿರುವ ಜೇನ್ನೊಣ ಗಳನ್ನು ಸಕಲ ಗೌರವಗಳೊಂದಿಗೆ ಊರಿಗೆ ಮತ್ತೆ ವಾಪಸು ಬರಮಾಡಿಕೊಳ್ಳುತ್ತಿದ್ದಾರೆ..! ಇದು ಅನ್ಯಾಯವೇ ಸರಿ. ನಮಗಿಲ್ಲಿ ಎಳ್ಳಷ್ಟೂ ಬೆಲೆ ಇಲ್ಲ. ನೊಣಗಳು ತೊಲಗಿದರೆ ಸಾಕು ಎನ್ನುತ್ತಿರುತ್ತಾರೆ. ನಾವು ಇಲ್ಲದಿದ್ದರೆ ಮಾತ್ರ ಇವರಿಗೆ ನಮ್ಮ ಬೆಲೆ ತಿಳಿಯುವುದು, ಜನರಿಗೆ ಬುದ್ಧಿ ಕಲಿಸಲು ನಾವೂ ಹೋಗೋಣ ಕಾಡಿಗೆ..!” ಎಲ್ಲಾ ನೊಣಗಳಿಗೂ ಸರಿಯೆನ್ನಿಸಿತ್ತು. ಸೈ ಸೈ ಎನ್ನುತ್ತಾ ಎಲ್ಲವೂ ಸಾಮೂಹಿಕವಾಗಿ ರೊಯ್ಯನೆ ಕಾಡಿಗೆ ಹಾರಿದುವು.

ಇತ್ತ ಊರಿಗರು ಜೇನು ನೊಣಗಳನ್ನು ವಾಪಸು ಕರೆತರುವ ಆಪರೇಷನ್ ನಲ್ಲಿ ಯಶಸ್ವಿಯಾಗಿದ್ದರು 🙂

ಅಂದು ಮನೆಗಳಲ್ಲಿ ನೊಣಗಳನ್ನು ಕಾಣದೆ ಎಲ್ಲರಿಗೂ ಆನಂದವಾಯಿತು. “ಆಹಾ!! ಜೇನ್ನೊಣಗಳು ಊರಿಗೆ ಬಂದ ಹೊತ್ತು ಒಳ್ಳೆಯದು. ತೊಂದರೆ ಕೊಡುವ ನೊಣಗಳೂ ಎಲ್ಲೋ ಹೋದುವು. ಒಳ್ಳೆಯದಾಯಿತು..!” ಎಂದು ಅಲ್ಲೂ ಜೇನ್ನೊಣಗಳನ್ನು ಪರೋಕ್ಶವಾಗಿ ಹೊಗಳಿ ಹರ್ಷೋದ್ಗಾರ ತೆಗೆದರು. ಮಧ್ಯಾಹ್ನ ನೊಣಗಳ ಕಾಟದಿಂದ ನಿದ್ದೆ ಮಾಡಲಾಗದೆ ಕಷ್ಟಪಡುತ್ತಿದ್ದ ಅಜ್ಜಿಯರು ಹಾಯಾಗಿ ನಿದ್ದೆ ತೆಗೆದರು. ಅಡುಗೆ ಮನೆಗಳಲ್ಲಿ ಅಮ್ಮಂದಿರು ನಿಶ್ಚಿಂತೆಯಿಂದ ಅಡುಗೆ ಮಾಡಿಟ್ಟರು, “ಇಂದು ನೊಣ ಹಾಕದ ಸಾಂಬಾರ್ ಏನಮ್ಮಾ?” ಎನುತ್ತಾ ಮಕ್ಕಳು ತ್ರ್‍ಇಪ್ತಿಯಿಂದ ಉಂಡು ಶಾಲೆಗೆ ಹೋದರು. ಅಜ್ಜಂದಿರಿಗೂ ಖುಶಿ! ಇನ್ನು ನೊಣಗಳನ್ನು ಕೊಲ್ಲಲು ಹೊಸ ಹೊಸ ತಂತ್ರಗಳನ್ನು ಸಂಶೋಧಿಸಬೇಕಿಲ್ಲ!

    

ಹೀಗೇ ದಿನ, ವಾರ, ತಿಂಗಳುಗಳುರುಳಿದುವು. ಕಾಡಿನಲ್ಲಿ ನೊಣಗಳು ಸುಲಭವಾಗಿ ಆಹಾರ ಸಿಗದೆ ಕಷ್ಟಪಡುತ್ತಿದ್ದುವು. ಕಂಡು ಕೇಳರಿಯದ ಕೀಟಗಳು ನಾಲಿಗೆ ಚಾಚಿ ಮರಿ ನೊಣಗಳನ್ನು ನುಂಗತೊಡಗಿದಾಗ ಅಮ್ಮ ನೊಣಗಳು ಅಳತೊಡಗಿದುವು.. 🙁 ಗೂಢಚಾರ ನೊಣವು ಊರಿನ ಸ್ಥಿತಿಗತಿಗಳನ್ನು ನೋಡಿ ಬರಲು ಒಮ್ಮೆ ಊರಿನತ್ತ ಹಾರಿತು. ನೋಡಿದರೆ ಎಲ್ಲರೂ ಖುಷಿ ಖುಷಿಯಾಗಿದ್ದಾರೆ.. “ನೊಣಗಳಿಲ್ಲದ ಊರೆಷ್ಟು ಚೆನ್ನ!” ಎಂಬ ಮಾತಿನ ಒಗ್ಗರಣೆ ಬೇರೆ..! ಗೂಢಚಾರ ನೊಣಕ್ಕೆ ದುಃಖ, ಸಿಟ್ಟು ಒಟ್ಟಿಗೇ ಬಂತು. ನಾವು ಹೋದುದಕ್ಕೇ ಸಂತೋಷಪಡುತ್ತಿದ್ದಾರೆ ಇವರು! ಅದು ಮತ್ತೆ ಕಾಡಿಗೆ ಹೋಗಿ ಈ ವಿಚಾರ ಹೇಳಿತು. ನೊಣಗಳಲ್ಲಿ ವಿವೇಕಿಯೊಂದು ಹೇಳಿತು..”ನಿಜ.. ನಾವೂ ಜನರಿಗೆ ತುಂಬಾ ಕೀಟಲೆ ಕೊಡುತ್ತಿದ್ದುವು. ಮಕ್ಕಳಿಗೆ ನಿದ್ದೆ ಮಾಡಲೂ ಬಿಡುತ್ತಿರಲ್ಲಿಲ್ಲ, ಪಾಪ! ಅವು ಮಲಗಿದ್ದರೆ ಕಣ್ಣು ಮೂಗಿನ ಮೇಲೆ ಹಾರಿ ಕುಳಿತು ಹರಟುತ್ತಿದ್ದೆವು. ಎಷ್ಟು ತೊಂದರೆಯಾಗಿರಬೇಕು ಅವಕ್ಕೆ! ಈಗ ಕಾಡಿಗಿಂತ ಊರೇ ನಮಗೆ ಸರಿಯಾದ ಸ್ಥಳವೆಂದು ಅರ್ಥವಾಯಿತು. ವಾಪಸು ಹೋಗಿ ನಮ್ಮ ಪಾಡಿಗೆ ನಾವು ಬದುಕೋಣ, ಅವರಿಗೆ ತೊಂದರೆ ಕೊಡದೆ..!” ಎಲ್ಲಾ ನೊಣಗಳಿಗೂ ಸರಿಯೆನಿಸಿತ್ತು. ಮತ್ತೆ ಊರಿನತ್ತ ಹಾರಿದುವು ಎಲ್ಲ ನೊಣಗಳು. ಆ ಊರಿನಲ್ಲಿ ಮುಂದೆ ನೊಣಗಳು ಯಾರಿಗೂ ತೊಂದರೆ ಕೊಡಲಿಲ್ಲ.. ಜನರೂ ಅವುಗಳನ್ನು ಬಯ್ಯಲಿಲ್ಲ.

ಅಲ್ಲಿಗೆ ಕಥೆ ಮುಗಿಯಿತು. ಎಂದು ಅಜ್ಜ ಎದ್ದರು. ಈ ಊರಿನ ನೊಣಗಳ್ಯಾಕೆ ಹೀಗೆ ಎಂದುಕೊಳ್ಳುತ್ತಾ ನಾನೂ ಎದ್ದೆ….

 

ಶ್ರುತಿ ಶರ್ಮಾ, ಮೈಸೂರು.

4 Responses

  1. Hanumanth Gowda says:

    ನಾನು ಮಕ್ಕಳಂತೆ ಕಥೆ ಓದಿ ಆನಂದ ಪಟ್ಟೆ .. ಧನ್ಯವಾದಗಳು .
    ಅಲ್ಲಾ ಕಣ್ರೀ . ಆ ಮರಿ ಜೇನುಹುಳುವಿಗೆ ಎನ್ ಬುದ್ಧಿ ಐತ್ನೊಡ್ರಿ !!

  2. Dinesh Naik says:

    SUPER

  3. Rukmini Mala says:

    ಕಥೆ ಚೆನ್ನಾಗಿದೆ. ಕಥಾ ನಿರೂಪಣೆ ಮತ್ತೂ ಸೊಗಸು.

  4. savithrisbhat says:

    ಕಥೆ ತುಂಬಾ ಚೆನ್ನಾಗಿತ್ತು.ಇನ್ನು ನಿದ್ದೆ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: