ದ್ರೌಪದಿಯ ಪ್ರತಿಜ್ಞೆ
ಧರ್ಮರಾಜ ದ್ಯೂತದಲ್ಲಿ ದುರ್ಯೋಧನನಿಗೆ ಸಂಪೂರ್ಣ ಸೋತು ದ್ರೌಪದಿಯನ್ನೂ ಪಣಕ್ಕೊಡ್ಡಿ ಅದರಲ್ಲೂ ಸೋತು ಹೋಗಿ ಸಭೆಗೆ ದ್ರೌಪದಿಯನ್ನು ಕರೆತರಲು ದುಃಶಾಸನನನ್ನು ಕಳುಹಿಸುತ್ತಾನೆ. ದುಃಶಾಸನ ದ್ರೌಪದಿಯನ್ನು ಸಭೆಗೆ ಎಳೆದು ತರುವ ಸಂದರ್ಭದಲ್ಲಿ ಅವರಿಬ್ಬರಲ್ಲಿ ನಡೆದ ಮಾತುಕತೆ.
ದುಃಶಾಸನ: ಪಾಂಚಾಲಿ ಬಾ. ನಿನ್ನ ಪತಿಗಳೈವರು ಜೂಜಿನಲ್ಲಿ ಪಣವಿಟ್ಟು ಎಲ್ಲವನ್ನು ಕಳೆದುಕೊಂಡು ಸೋತರು. ದ್ಯೂತದಲ್ಲಿ ಗೆದ್ದಿರುವ ನಮ್ಮ ಅಣ್ಣ ನಿನ್ನನ್ನು ಕರೆತರಲು ಹೇಳಿರುವನು. ಅವನೇ ಈಗ ಎಲ್ಲರಿಗೂ ಅಧಿಪತಿ. ಅವನ ಆಜ್ಞೆಯಾಗಿದೆ. ಹೊರಡು.
ದ್ರೌಪದಿ: ಇಲ್ಲ, ಇಲ್ಲ. ನಾನಲ್ಲಿಗೆ ಬರುವಂತಿಲ್ಲ. ನನ್ನನ್ನು ಬಿಡು. ಎಲಾ ಮೂರ್ಖ. ಚಂದ್ರವಂಶದಲ್ಲಿ ಹುಟ್ಟಿ ಹೀಗೆ ಕೈಹಿಡಿದು ಎಳೆದು ಅನಾರ್ಯನಂತೆ ವರ್ತಿಸುತ್ತಿಯಲ್ಲ. ಎಲೈ ಪಾಪಿ, ನಾನು ರಜಸ್ವಲೆ. ಈ ಸ್ಥಿತಿಯಲ್ಲಿ ನನ್ನನ್ನು ಎಳೆದುಕೊಂಡು ರಾಜಸಭೆಗೆ ಹೋಗುತ್ತಿರುವೆಯಾ? ನಿನಗೆ ನಾಚಿಕೆ ಇಲ್ಲವೆ? ಬಿಡು ಕೈ.
ದುಃಶಾಸನ: ನೀನು ಏನೇ ಆಗಿರು. ಒಂದೇ ಬಟ್ಟೆಯಲ್ಲಿರು. ಅದರಿಂದ ನಮಗೇನೂ ಇಲ್ಲ. ನೀನು ದ್ಯೂತದಲ್ಲಿ ಜಿತಳಾದ ನಮ್ಮ ದಾಸಿ. ಸಲ್ಲದ ಗೌರವ ಬಯಸಬೇಡ. ನಿನ್ನನ್ನು ಹೀಗೆಯೇ ಕರೆತರಲು ದುರ್ಯೋಧನ ಮಹಾರಾಜನ ಆಜ್ಞೆಯಾಗಿದೆ.
ದ್ರೌಪದಿ: ಅಯ್ಯೊ! ಈ ಸಭೆಯಲ್ಲಿ ವೃದ್ಧರೂ ಶ್ರೋತ್ರೀಯರು, ಶಾಸ್ತ್ರವೇತ್ತರು, ಕರ್ಮನಿಷ್ಠರು ಧರ್ಮಪರಾಯಣರು ಎಲ್ಲರೂ ಸೇರಿರುವಿರಿ. ಗುರುಜನರೂ, ಬ್ರಾಹ್ಮಣರೂ, ಹಿರಿಯರೂ ಆಗಿರುವ ನಿಮ್ಮಗಳ ಮುಂದೆ ನಾನು ಈ ಸ್ಥಿತಿಯಲ್ಲಿ ಹೇಗೆ ನಿಲ್ಲಲಿ? ನನ್ನ ಮಾನ ಹರಾಜಾಗುತ್ತಿದೆ. ಯಾವ ಸ್ತ್ರೀಗೂ ಇಂಥ ಪರಿಸ್ಥಿತಿ ಬಾರದಿರಲಿ. ಪವಿತ್ರವಾದ ಚಂದ್ರವಂಶಕ್ಕೆ ಸೊಸೆಯಾಗಿ ಬಂದು ನನ್ನನ್ನು ಹಸ್ತಿನಾವತಿಯಲ್ಲಿ ಎಲ್ಲರ ಸಮಕ್ಷಮದಲ್ಲಿ ಮಾನಕಳೆಯುವುದು ನ್ಯಾಯವೆ? ಧರ್ಮವೇ? ಇಲ್ಲಿ ಧರ್ಮ, ನ್ಯಾಯ ಅರಿತಿರುವ ಒಬ್ಬರೂ ಇಲ್ಲವೆ? ಮನುಜರಾಗಿ ಹೃದಯವಂತಿಕೆ ಇರುವವರು ಯಾರೂ ಇಲ್ಲವೇ?
ದುಃಶಾಸನ: ಎಲೆ ದಾಸಿ. ಸುಮ್ಮನೆ ಬಣಬಣಿಸಬೇಡ. ನಿನ್ನ ಗಂಡಂದಿರು ವಸ್ತ್ರಾಭರಣಗಳನ್ನು ತೆಗೆದಿರಿಸಿದರು. ನೀನೇಕೆ ಸುಮ್ಮನೆ ನಿಂತೆ? ದಾಸಿಗೂ ಇಷ್ಟು ಛಲವೆ? ನಾನೇ ನಿನ್ನ ಸೀರೆ ಹಿಡಿದೆಳೆಯುವೆ.
ದ್ರೌಪದಿ: ಅಯ್ಯೊ, ನನ್ನ ಮಾನ ರಕ್ಷಿಸಿ. ಯಾರೂ ಇಲ್ಲವೆ ಇಲ್ಲಿ? ನನ್ನನ್ನು ರಕ್ಷಿಸಿ. ಅಕ್ಕ, ಅಮ್ಮ, ನಿಮಗೆಲ್ಲ ಕರುಣೆಯೇ ಇಲ್ಲವೆ? ಓ ಕೃಷ್ಣ ಕಾಪಾಡು. ನೀನೇ ನನಗೆ ದಿಕ್ಕು. ದುಃಶಾಸನ ನನ್ನ ಸೀರೆ ಎಳೆಯುತ್ತಿರುವನು. ನಂಬಿದವರನ್ನು ಬೆಂಬಿಡದೆ ರಕ್ಷಿಸುವವನು ನೀನೊಬ್ಬನೆ. ಶರಣಾದೆ ಸ್ವಾಮಿ ನಿನಗೆ.
ದುಃಶಾಸನ: ಹಹಃ ಹಹ್ಹಹ್ಹ ದ್ರೌಪದಿ ಯಾರೂ ನಿನ್ನನ್ನು ರಕ್ಷಿಸಲಾರರು ಹ್ಹಹ್ಹ. ಇದೇನು ಸೀರೆ ಸೆಳೆದಷ್ಟು ಹೆಚ್ಚುತ್ತಿದೆಯಲ್ಲ. ಸೀರೆ ರಾಶಿ ನನ್ನಷ್ಟೆ ಎತ್ತರವಾಯುತು. ಇದೇನು ತಲೆ ತಿರುಗುತ್ತಿದೆಯಲ್ಲ. ಕೈ ಸೋತು ಹೋಗುತ್ತಿದೆ. ಅಬ್ಬ ಇನ್ನು ಸಾಧ್ಯವಿಲ್ಲ…..
ದ್ರೌಪದಿ: ಶ್ರೀಕೃಷ್ಣ ನನ್ನನ್ನು ರಕ್ಷಿಸಿದೆ. ನಿನಗಿದೋ ನಮನ. ಈ ದುಷ್ಟ ದುಃಶಾಸನ ಎಸಗಿದ ಕಾರ್ಯ ಬಲು ಹೀನವಾದುದು. ಇವನ ಬಿಸಿರಕ್ತದಿಂದ ನನ್ನ ತಲೆ ಕೂದಲನ್ನು ತೋಯಿಸಿಕೊಂಡು ಅವನ ನೀಳವಾದ ಕರುಳ ಪೂದಂಡೆಯನ್ನು ಮುಡಿದೇ ನಾನು ತೃಪ್ತಳಾಗುವುದು. ಈ ನನ್ನ ಪ್ರತಿಜ್ಞೆ ನೆರವೇರುವವರೆಗೆ ಈ ದುರಾತ್ಮನ ಕರಸ್ಪರ್ಶದಿಂದ ಬಿಚ್ಚಿಹೋಗಿರುವ ನನ್ನ ಮುಡಿಯನ್ನು ನಾನು ಕಟ್ಟುವುದಿಲ್ಲ. ಇದಕ್ಕೆ ಭಗವತ್‌ಸ್ವರೂಪಿಗಳಾದ ಸಜ್ಜನರೆಲ್ಲರೂ ಸಾಕ್ಷಿಯಾಗಲಿ.
(ವಿ.ಸೂ: ಮಕ್ಕಳಿಗೆ ಏಕಪಾತ್ರಾಭಿನಯ ಮಾಡಲು ಅನುಕೂಲವಾಗುವಂತೆ ಎರಡು ಪಾತ್ರಗಳ ನಡುವಿನ ಸಂಭಾಷಣೆಯ ರೂಪದಲ್ಲಿ ಇದನ್ನು ಬರೆಯಲಾಗಿದೆ.)
– ರುಕ್ಮಿಣಿಮಾಲಾ, ಮೈಸೂರು