ಚೋರ್ ಕೋ ಪಕಡೋ…

Share Button
Umesh Desai

ಉಮೇಶ್ ದೇಸಾಯಿ

ಪುಣೆಯ ಪ್ರಸಿದ್ಧ ಹೊಟೆಲ್ ಗಿಜಿಗುಡುತಿತ್ತು. ಸುರೇಶನೂ ಅಲ್ಲಿದ್ದ ರೇಶಿಮಿ ಪರಕಾರ ಪೋಲಕ ಹಾಕಿಕೊಂಡು ಅವನ ಮಗಳು ಓಡಾಡುತಿದ್ಲು. ಗೊಂಬಿಹಂಗ ಕಾಣತಿದ್ಲು. ಮಗಳ ಚೆಲುವನ್ನು ಕಣ್ಣಾಗ ತುಂಬಿಕೂತ. ಅಲ್ಲೇ ಹೆಂಗಸರ ನಡುವೆ ಇದ್ದ ಹೆಂಡತಿ ಕಡೆ ಆಗಾಗ ನೋಡುತ್ತ ತನ್ನ ಮಾಮಾಗೋಳ ಜೊತೆ ಬದಲಾದ ಹುಬ್ಬಳ್ಳಿ ಬಗ್ಗೆ ಹೇಳತಿದ್ದ ಸುರೇಶ. ಸುರೇಶಗ ಸ್ವಂತದ್ದು ಅಂತ ಬಳಗ ಇಲ್ಲ. ಸಾಲು ಸಾಲಾಗಿ ಅವನ ಅಪ್ಪ, ಅವ್ವ ಹಾಗೂ ಅಕ್ಕಳನ್ನು ಹಚ್ಚಿಕೊಂಡಿದ್ದ. ಅವರನ್ನ ಅವ ತನ್ನ ಸ್ವಂತ ಅಕ್ಕ ಅಣ್ಣ ಅಂತ ತಿಳಿಕೊಂಡಿದ್ದ. ಇದೆಲ್ಲಾಕೂ ಮ್ಯಾಲ ಅಂದ್ರ ಇಂದ್ರಾಕಾಕು ಇದ್ಲು. ಹೌದು ಸುರೇಶಗ ಆಕಿ ಮ್ಯಾಲ ಭಾಳ ಅಂತಃಕರಣ. ತನ್ನ ಬಾಳು ತಿದ್ದಿದಾಕಿ ಆಕಿಯಿಂದ ನಾ ಇವತ್ತು ಹಿಂಗ ಆಗೇನಿ ಇದು ಸುರೇಶ ತನ್ನ ಹೆಂಡತಿಗೆ ಆಗಾಗ ಹೇಳುತ್ತಿದ್ದ ಮಾತು.

ಆ ಇಂದ್ರಾಕಾಕು ಇಂದಿನ ಸಮಾರಂಭದ ಆಕರ್ಷಣಾ ಆಗಿದ್ಲು. ಆಕಿಗೆ ಮರಿಮೊಮ್ಮಗ ಹುಟ್ಟಿದ್ದ. ಆಕಿದು ಹೂ ಹಾರಿಸಿಕೊಳ್ಳುವ ಸಂಭ್ರಮ. ಇದನ್ನು ನೋಡಲಿಕ್ಕೆ ಅಂತ ಕುಟಂಬ ಸಮೇತ ಬಂದಿದ್ದ. ಇಂದ್ರಾಕಾಕುಗ ಕೊಡಲಿಕ್ಕೆ ಅಂತ ಬೆಳ್ಳಿ ಗಣಪತಿಮೂರ್ತಿ ತಂದಿದ್ದ… ಸಾಲಾ ಮಾಡಿ.

ಇಂದ್ರಾಕಾಕುಗ ನಾಲ್ಕು ಹೆಣ್ಣು ಮಕ್ಕಳು ಎರಡು ಗಂಡು ಮಕ್ಕಳು. ಎಲ್ಲಾರೂ ಜೀವನ ಯಾನದಾಗ ಯಶಸ್ಸು ಕಂಡಾರ ದೇಸಾಯರ ಮನೆತನದಾಗ ಅಪರೂಪ ಅನಬಹುದು. ಆಕಿ ಸಂಸಾರ ಅಂಥಾ ಪ್ರಸಿದ್ಧಿ ಇಂದ್ರಾಕಾಕು ಮತ್ತು ಆಕಿ ಮಕ್ಕಳು ಗಳಿಸ್ಯಾರ. ಇವತ್ತು ಇಂದ್ರಾಕಾಕುನ ಮರಿಮೊಮ್ಮಗನ ಬಾರಸಾ ಹಂಗ ಆಕಿಗೆ ಹೂ ಹಾರಿಸೋ ಕಾರ್ಯಕ್ರಮ. ಸಂಭ್ರಮ ಎಲ್ಲೆಡೆ ತುಂಬಿತ್ತು.

ಇಂದ್ರಾಕಾಕುನ ತೊಡಿಮ್ಯಾಲ ಸುರೇಶ ಸಹ ಆಡಿ ಬೆಳೆದಿದ್ದ. ಇಂದು ಆಕಿ ತೊಡಿಮ್ಯಾಲ ಮರಿಮೊಮ್ಮಗ ಮಲಗಿದ್ದ. ಮೊಮ್ಮಗ ಹಾಗೂ ಅವನ ಅಪ್ಪ, ಇಬ್ಬರೂ ಬಂಗಾರದ ಚಿಕ್ಕ ಚಿಕ್ಕ ಹೂ ಕಾಕುನ ತಲಿ ಮ್ಯಾಲ ಸುರುದ್ರು. ಎಲ್ಲಾರೂ ಚಪ್ಪಾಳೆ ಹೊಡದ್ರು. ಇಂದ್ರಾಕಾಕುನ ಕಣ್ಣಾಗೂ ನೀರ ಜಿಗಿದ್ವು. ತನ್ನ ಕೆಮರಾದಲ್ಲಿ ಈ ಅಪ್ರತಿಮ ಕ್ಷಣ ಸೆರಹಿಡಿದ ಸುರೇಶ ಹೆಮ್ಮೆಯಿಂದ ಬೀಗಿದ. ಊಟದ ತಯಾರಿ ನಡೀತು. ಟೇಬಲ್ ಕುರ್ಚಿ ಊಟ ಸುರೇಶನ ಹೆಂಡತಿ ಪೂನಾ ಸಿಸ್ಟಂ… ಅಂತ ಚಾಷ್ಟಿ ಮಾಡಿದ್ಲು.

ಇದಕ್ಕಿದ್ದಂಗ ಗದ್ಲಾ ಸುರು ಆತು. ಅಲ್ಲಿ ಇಲ್ಲಿ ಹರದಾಡಿದ ಸುದ್ದಿ ಸುರೇಶನ ಕಿವಿಗೂ ಬಿತ್ತು. ಇಂದ್ರಾಕಾಕುನ ಎರಡನೇ ಮಗಳು ಸುರೇಖಳ ಪರ್ಸು ಕಳು ಆಗೇದ ಅದರಾಗ ಆಕಿದು ಬಂಗಾರದ ತೋಡೆ ಇದ್ದವು ಅಂತ ಪ್ರಶಾಂತ ನೀರಿನ್ಯಾಗ ಕಲ್ಲು ಒಗದಂಗ ಆತು.

ಹೊಟೆಲ್ ಸೆಕ್ಯೂರಿಟಿ ಬಂದ್ರು ಪೋಲಿಸರನ್ನು ಕರೆಸುವ ಮಾತಾತು. ಇಂದ್ರಾಕಾಕುನ ಎರಡನೇ ಮಗ ಸುಭಾಶ ದೊಡ್ಡ ಬಾಯಿ ಮಾಡತಿದ್ದ.

ಇದ ಹಾಲಿನ್ಯಗ ಕಳ್ಳ ಇದ್ದಾನ… ಎಲ್ಲೂ ಓಡಿ ಹೋಗಲಾರ ಅವ… ಇಂದ್ರಾಕಾಕು ವಿಹ್ವಲ ಆಗಿದ್ಲು. ಅನಿರೀಕ್ಷಿತ ಘಟನಾ ಎಲ್ಲರಿಗೂ ತ್ರಾಸು ಮಾಡಿಸಿತ್ತು. ಸುರೇಶನೂ ನೊಂದಿದ್ದ.

stolen purseಸುಭಾಶ ಸುರೇಶನ ಬಳಿ ಬಂದು ಅವನ ಕೈಹಿಡಿದು ಮೂಲಿಗೆ ಕರಕೊಂಡು ಹೋದ.

ಸುರ್‍ಯಾ, ಖರೇ ಹೇಳು… ನಿಂದ ಹೌದಲ್ಲೊ ಈ ಕೆಲ್ಸ ಕದೀಲಿಕ್ಕೆ ಬಂದೀ ಹೌದಲ್ಲೊ… ಹಟಾತ್ ದಾಳಿಯಿಂದ ಸುರೇಶನಿಗೆ ಮಾತೆಲ್ಲ ಹೊರಡಲಿಲ್ಲ.

ಇದು ನಿಂದ ಕರಾಮತ್ತು ಅದ… ಪೋಲಿಸರಿಗೆ ಕೊಡತೇನಿ… ಸುಮ್ನ ತೋಡೆ ತಗದು ಕೊಡು…

“ಆದ್ರ ನಾಯಾಕ ಹಂಗ ಮಾಡಲಿ… ನಾನ ಮಾಡೇನಿ ಅಂತ ಹೆಂಗ ಹೇಳತಿ..”. ಸುರೇಶನ ದನಿ ನಡುಗುತ್ತಿತ್ತು.

ನೀ ಏನು ಅನ್ನೂದು ನಮಗೆ ಗೊತ್ತದ ನೋ ನಮ್ಮವ್ವ ಎಲ್ಲಾ ಹೇಳ್ಯಾಳ… ಸುಮ್ನ ಕೊಟ್ಟು ಹೊರಗ ನಡೀ… ಸುಭಾಶ ಓತಪ್ರೋತವಾಗಿ ಮಾತಾಡತಿದ್ದ. ತನ್ನ ಅಸ್ತಿತ್ವವೇ ಕುಸಿಯುತ್ತಿರುವಂತೆ ಸುರೇಶ ಓಡಿಹೋಗಿ ಇಂದ್ರಾಕಾಕುನ ಕಾಲು ಹಿಡದ. ಅತ್ತ ಚೀರಾಡಿದ. ಅವನ ಮಗಳು ಅಪ್ಪನ ಈ ವೇಷ ನೋಡಿ ಗಾಬರಿ ಆಗಿದ್ಲು. ಹೆಂಡತಿ ಕಲ್ಲು ನಿಂತಂಗ ನಿಂತಿದ್ಲು. ಇಡೀ ಹಾಲಿನ ಜನ ತನ್ನ ಸುತ್ತ ವೃತ್ತಾಕಾರವಾಗಿ ತಿರುಗುವ ಹಾಗೆ… ಅವನ ಆರ್ತನಾದ ಯಾರಿಗೂ ಕೇಳುತ್ತಲೇ ಇಲ್ಲ.

ಸುಭಾಶ ಸುರೇಶನ ಮೇಲೆ ಮಾಡಿದ ಅಪವಾದಕ್ಕೆ ಒಂದು ಇತಿಹಾಸ ಅದ. ಅವು ಸುರೇಶನ ಕಾಲೇಜಿನ ದಿನಗಳು ಅವನಿಗೆ ಸಿನೇಮಾದ ಹುಚ್ಚು. ಹುಬ್ಬಳ್ಳಿಯ ಯಾವ ಟಾಕೀಸೂ ಬಿಟ್ಟವನಲ್ಲ. ಮನಿಯೊಳಗೆ ಅವಗ ಫೀಸು ಪಾಸು ಅಂತ ಕಟಾನಕಟಿ ರೊಕ್ಕ ಕೊಡತಿದ್ರು. ತನ್ನ ಸಿನೇಮಾದ ಚಟ ತೀರಿಸಿಕೊಳ್ಳಲಿಕ್ಕೆ ಅಲ್ಲಿ ಇಲ್ಲಿಂದ ಹತ್ತಿಪ್ಪತ್ತು ರೂಪಾಯಿ ಕದೀತಿದ್ದ. ಅಕ್ಕನ ಬಾಣಂತನ ಅಂತ ಇಂದ್ರಾಕಾಕು ಬಂದಿದ್ಲು. ಆಕಿ ಬ್ಯಾಗಿಗೂ ಅವ ಕೈ ಹಾಕಿದ. ಒಂದ್ಸಲ ಸಿಕ್ಕಿ ಹಾಕಿಕೊಂಡ. ಇಂದ್ರಾಕಾಕು ಇವನನ್ನು ಹತ್ರ ಕೂಡಿಸಿಕೊಂಡು ಬುದ್ಧಿ ಹೇಳಿದ್ಲು. ಇದು ತಪ್ಪು ಅಂತ ತೋರಿಸಿಕೊಟ್ಟಳು. ಅವಳ ಮಾತು ಸುರೇಶನಿಗೆ ನಾಟಿತ್ತು ಸುರೇಶ ಬದಲಾದ ಕೆಲಸಕ್ಕೆ ಸೇರಿಕೊಂಡ. ಯಾರಿಗೂ ಹೇಳೊದಿಲ್ಲ ಅಂತ ಇಂದ್ರಾಕಾಕು ಇವಗ ಅಂದಿದ್ಲು ಖರೆ… ಆದ್ರ ಆಕಿದು ಬಾಯಿತಪ್ಪಿ ಹೋಗಿತ್ತು. ಸುರೇಶಗ ಇವತ್ತು ಇಂಥಾ ಪರಿಸ್ಥಿತಿ ತಂದಿತ್ತು.

ಸುರೇಶ ಅತ್ತು ಹೈರಾಣಾಗಿದ್ದ. ಯಾರೂ ಅವನ ಪರವಾಗಿ ಮಾತನಾಡುವವರಿಲ್ಲ. ಇಷ್ಟೂತ್ತನಾ ತಮ್ಮ ಜೊತೆ ಹರಟೆ ಹೊಡದ ಮನಿಶಾ ಈಗ ಕಳ್ಳ ಅನಿಸ್ಕೂಂಡಾನ ಇದು ಅಲ್ಲಿಯ ಚರ್ಚಾದ ವಿಷಯ ಆಗಿತ್ತು. ಸುರೇಶನ ಮಗಳು ತನ್ನ ಕೈಯಿಂದ ಅವನ ಕಣ್ಣಿರು ಒರಸತಿದ್ಲು. ಪೋಲಿಸರ ದಾರಿ ಎಲ್ಲಾರೂ ಕಾಯತಿದ್ರು… ಸುತ್ತಲಿನವರ ಹೇಳಿಕೆ ತಗೊಂಡು ಸುರೇಶನ್ನ ಕರಕೊಂಡು ಹೊರಟು ನಿಂತರು.

images (2)ಇಂದ್ರಾಕಾಕು ನಿಶ್ಚೇಶ್ಚಿತಳಾಗಿ ಕೂತಿದ್ಲು. ಸುರೇಶ ಹಿಂಗ್ಯಾಕ ಮಾಡಿದ ಇದು ಆಕಿ ತಲಿ ಕೊರಿತ್ತಿತ್ತು. ವಿಶ್ವಾಸದ್ರೋಹ ಮಾಡಿದ ಅಂತ ಬಾಜೂ ಇದ್ದಾವರ ಜೊತೆ ಹೇಳಿ ಅಳತಿದ್ಲು. ಸುರೇಶ ಪೋಲಿಸ್ ಜೀಪು ಏಕಬೇಕು ಅಷ್ಟರಾಗ ಸುರೇಖಳ ಮೊಮ್ಮಗಳು ಅಜ್ಜಿ ಬೀಳಿಸಿದ್ದ ಪರ್ಸು ಎತ್ತಿಕೊಟ್ಟಳು. ಅದರಾಗ ತೋಡೆನೂ ಇದ್ವು. ಪೋಲಿಸರಿಗೆ ಹೇಳಿದ್ರು. ಸುರೇಶನ್ನ ಇಳಿಸಿ ಜೀಪು ಮುಂದ ಹೋತು. ಇಂದ್ರಾಕಾಕು ದಡಬಡಾಯಿಸಿ ಎದ್ದು ಬಾಗಿಲಿಗೆ ಬಂದಳು. ಸುರೇಶ ಹೆಂಡತಿ ಮಗಳನ್ನು ಕರಕೊಂಡು ಹೊರಟಿದ್ದ. ಸುರೇಶನ ಮಗಳು ಅಪ್ಪನ ಹರಿಯುವ ಕಣ್ಣೀರು ಇನ್ನೂ ಒರಸತಿದ್ಲು. ಇಂದ್ರಾಕಾಕು ಒದರೇ ಒದರಿದ್ಲು… ಸುರೇಶಗ ಕೇಳಸಲೇ ಇಲ್ಲ.

 

 

– ಉಮೇಶ್ ದೇಸಾಯಿ

4 Responses

  1. Shruthi Sharma says:

    ತುಂಬಾ ವ್ಯತ್ಯಸ್ಥ ಕಥಾ ವಸ್ತು! ಚೆನ್ನಾಗಿದೆ 🙂

  2. Niharika says:

    ನಾವು ತೀರ ವಿಶ್ವಾಸದಿಂದ ಗೌರವಿಸುವ ವ್ಯಕ್ತಿ ನಮ್ಮನ್ನು ನಂಬದಿದ್ದರೆ ಆಗುವ ನೋವು ಅಪ್ಪರ. ಕಥೆ ಇಷ್ಟವಾಯಿತು.

  3. ದೇಸಾಯರ, ನೀವೂ ಎಲ್ಲೆಲ್ಲಿ ಬರೀತಿರಿಪಾ? 😉
    ಕತಿ ಓದಿಸಿಕೊಂಡು ಹೋಗತದ, ಚೊಲೊ ಬರದೀರಿ!

Leave a Reply to Shruthi Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: