ರಿಟರ್ನ್ಸ್ ಸಲ್ಲಿಕೆಗೆ ಗಡುವು ತಪ್ಪಿಸಿಕೊಂಡಿದ್ದೀರಾ?

Share Button

 

ರಿಟರ್ನ್ಸ್ ಸಲ್ಲಿಕೆಗೆ ಗಡುವು ತಪ್ಪಿಸಿಕೊಂಡಿದ್ದೀರಾ? ಅವಕಾಶ ಇನ್ನೂ ಇದೆ!

ಕಳೆದ 2013-14 ರ ಸಾಲಿನಲ್ಲಿ ನಿಮ್ಮ ಗಳಿಕೆಗೆ ಸಂಬಂಧಿಸಿದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಜುಲೈ 31 ರ ಗಡುವನ್ನು ತಪ್ಪಿಸಿದ್ದೀರಾ? ಇದಕ್ಕಾಗಿ ಪರಿತಪಿಸುತ್ತಿದ್ದೀರಾ? ಆದರೆ ಚಿಂತೆ ಬೇಡ. ನೀವು ಯಾವುದೇ ದಂಡ ಪಾವತಿಸದೆ ರಿಟರ್ನ್ಸ್ ಸಲ್ಲಿಸಲು ಇನ್ನೂ ಅವಕಾಶ ಇದೆ! ಹೌದು. ಅನೇಕ ತೆರಿಗೆದಾರರು ಸಾಮಾನ್ಯವಾಗಿ ಜುಲೈ 31 ರ ಗಡುವು ಮುಗಿದ ನಂತರ ಇನ್ನು ದಂಡ ತಪ್ಪಿದ್ದಲ್ಲ ಎಂದು ಭಾವಿಸುತ್ತಾರೆ. ಆದರೆ ಇದು ತಪ್ಪು. 2015 ರ ಮಾರ್ಚ್ 31 ರ ತನಕ ಯಾವುದೇ ದಂಡ ಕಟ್ಟದೆ ರಿಟರ್ನ್ಸ್ ಸಲ್ಲಿಸಬಹುದು. ಹೀಗಿದ್ದರೂ, ಇದಕ್ಕೆ ಕೆಲವು ಪ್ರಕ್ರಿಯೆಗಳಿವೆ. ಅವುಗಳೇನು? ಇಲ್ಲಿದೆ ವಿವರ.

1. ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ರ ಗಡುವು ಮುಗಿದಿದೆ. ಮುಂದೇನು ಮಾಡಬಹುದು?

ಇಲ್ಲಿ ಮುಖ್ಯವಾಗಿ ಕೆಲವು ನಿಯಮಗಳು ಇವೆ. ಮೊದಲನೆಯದಾಗಿ ತೆರಿಗೆದಾರರು ಎರಡು ಆರ್ಥಿಕ ವರ್ಷಗಳ ರಿಟರ್ನ್ಸ್‌ನ್ನು ಗಡುವು ಮುಕ್ತಾಯವಾದರೂ ಸಲ್ಲಿಸಬಹುದು. ಆದ್ದರಿಂದ ಈ ಸಲ ಜುಲೈ 31 ರೊಳಗೆ ಸಲ್ಲಿಸದಿದ್ದರೂ, 2016 ರ ಮಾರ್ಚ್ 31 ರ ತನಕ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಇದೆ. ಅದರಲ್ಲೂ ದಂಡವಿಲ್ಲದೆ ಮಾರ್ಚ್ 31, 2015 ರ ಒಳಗೆ ಪಾವತಿಸಬಹುದು. ನಂತರ 5,000  ರೂ.ಗಳ ದಂಡ ಸಹಿತ 2016 ರ ಮಾರ್ಚ್ 31 ರ ಅವಧಿಯೊಳಗೆ ಕಟ್ಟಬಹುದು.

2. ವಿಳಂಬದ ಕಾರಣವನ್ನು ಸ್ಪಷ್ಟಪಡಿಸಬೇಕೆ?
“ಹೌದು. ತೆರಿಗೆದಾರರು ನಿಗದಿತ ಗಡುವಿನ ಒಳಗೆ ರಿಟರ್ನ್ಸ್ ಸಲ್ಲಿಸಲು ವಿಫಲವಾಗಿದ್ದಕ್ಕೆ ಕಾರಣ ಏನೆಂಬುದನ್ನು ಸ್ಪಷ್ಟಪಡಿಸಿ 2015 ರ ಮಾರ್ಚ್ 31 ರೊಳಗೆ ರಿಟರ್ನ್ಸ್ ಸಲ್ಲಿಸಿದರೆ ದಂಡದಿಂದ ಬಚಾವ್ ಆಗಬಹುದು. ಅದು ಆರೋಗ್ಯ ಸಮಸ್ಯೆ ಅಥವಾ ಇತರ ನೈಜ ಸಮಸ್ಯೆಯಾಗಿರಬೇಕು” ಎನ್ನುತ್ತಾರೆ ಬೆಂಗಳೂರಿನ ಲೆಕ್ಕ ಪರಿಶೋಧಕ ಕೆ.ಎಂ.ದಿವಾಕರ್. ಹೀಗಿದ್ದರೂ, ನೀವು ಕೊಟ್ಟ ಕಾರಣಗಳನ್ನು ಪರಿಶೀಲಿಸಿ ದಂಡ ವಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ವಿವೇಚನೆ ಸಂಬಂಧಪಟ್ಟ ತೆರಿಗೆ ಇಲಾಖೆ ಅಕಾರಿಗಳದ್ದಾಗಿರುತ್ತದೆ.

3. ರಿಟರ್ನ್ಸ್ ಸಲ್ಲಿಕೆ ವಿಳಂಬ ಯಾಕೆ ಸೂಕ್ತವಲ್ಲ?
ಮತ್ತೆ ಎಂಟು ತಿಂಗಳಿನ ತನಕ ಮುಂದೂಡಿಕೆ ಸಮಂಜಸವಲ್ಲ. ಯಾಕೆಂದರೆ ನೀವು ಪಾವತಿಸಬೇಕಾದ ಆದಾಯ ತೆರಿಗೆಯ ಮೇಲೆ ಶೇ.1 ರ ಬಡ್ಡಿಯನ್ನು ಪ್ರತಿ ತಿಂಗಳಿನ ವಿಳಂಬಕ್ಕೂ ಅನ್ವಯವಾಗುವಂತೆ ನೀಡಬೇಕಾಗುತ್ತದೆ. ಆದ್ದರಿಂದ ಪ್ರತಿ ತಿಂಗಳು ವಿಳಂಬವಾಗುತ್ತಿದ್ದಂತೆ ಬಡ್ಡಿ ಸೇರ್ಪಡೆಯಾಗುತ್ತದೆ. ಜತೆಗೆ ರಿಟರ್ನ್ಸ್ ಸಲ್ಲಿಸದಿರುವುದಕ್ಕೆ ಶೇ.1 ರ ಬಡ್ಡಿ ನೀಡಬೇಕಾಗುತ್ತದೆ.ಸಕಾಲಕ್ಕೆ ಪಾವತಿಸುವ ಕ್ರಮ ಇದ್ದರೆ ರಿಫಂಡ್ ಇದ್ದರೆ ತ್ವರಿತವಾಗಿ ನಿಮ್ಮ ಖಾತೆಗೆ ಜಮೆಯಾಗುತ್ತದೆ.

4. ಬಡ್ಡಿ ಹೊರತುಪಡಿಸಿ ಇತರ ಸಂಭವನೀಯ ಸಮಸ್ಯೆಗಳು ಯಾವುದು?
ರಿಟರ್ನ್ಸ್ ಸಲ್ಲಿಕೆ ವಿಳಂಬಿಸಿದರೆ ಇತರ ತೊಂದರೆಗಳೂ ಎದುರಾಗುವ ಸಾಧ್ಯತೆಗಳಿವೆ. ಹಲವು ಸಲ ತೆರಿಗೆದಾರರಿಗೆ ರಿಟರ್ನ್ಸ್ ಸಲ್ಲಿಸುವಾಗ ಪ್ರಮಾದಗಳಾಗಬಹುದು. ಮಾಡಿದ ತಪ್ಪು ಬಳಿಕ ಗೊತ್ತಾಗಬಹುದು. ಇಂತಹ ಸಂದರ್ಭಗಳಲ್ಲಿ ಪರಿಷ್ಕೃತ ರಿಟರ್ನ್ಸ್ ಸಲ್ಲಿಕೆ ಉಪಯೋಗವಾಗುತ್ತದೆ. ಆದರೆ ನೀವು ಗಡುವು ತಪ್ಪಿಸಿಕೊಂಡಿದ್ದರೆ ಈ ಅವಕಾಶ ಕೂಡ ಮೀರಿ ಹೋಗಿರುತ್ತದೆ. ನೆನಪಿರಲಿ. ಜುಲೈ 31 ರ ನಂತರ ಪರಿಷ್ಕೃತ ರಿಟರ್ನ್ಸ್ ಸಲ್ಲಿಕೆಗೆ ಸಾಧ್ಯವಾಗುವುದಿಲ್ಲ.

5. ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿಕೊಳ್ಳಿ
ಜುಲೈ 31 ರ ಬಳಿಕ ರಿಟರ್ನ್ಸ್ ಸಲ್ಲಿಸುವುದಿದ್ದರೆ, ಅದರಲ್ಲಿ ಯಾವುದೇ ತಪ್ಪುಗಳಿರದಂತೆ ಎಚ್ಚರಿಕೆ ವಹಿಸಿ. ಯಾಕೆಂದರೆ ನಿಗದಿತ ದಿನದೊಳಗೆ ಸಲ್ಲಿಸಿದವರಿಗೆ ಸಿಗುವ ಎರಡನೇ ಅವಕಾಶ ಇಲ್ಲಿರುವುದಿಲ್ಲ. ಫಾರ್ಮ್-16, ಬ್ಯಾಂಕ್ ಸ್ಟೇಟ್‌ಮೆಂಟ್, ಎನ್‌ಜಿ‌ಒ ಗಳಿಂದ ದೇಣಿಗೆ ಕುರಿತ ರಸೀದಿ ಇದ್ದರೆ ಅವುಗಳನ್ನು ಸಂಗ್ರಹಿಸಿ. ಇವುಗಳ ವಿವರಗಳನ್ನು ತೆರಿಗೆ ರಿಟರ್ನ್ಸ್‌ನಲ್ಲಿ ನಮೂದಿಸಬಹುದು. ಬ್ಯಾಂಕ್ ಖಾತೆ ವಿವರಗಳನ್ನು ತಪ್ಪಿಲ್ಲದಂತೆ ಬರೆಯಿರಿ. ಯಾಕೆಂದರೆ ರಿಫಂಡ್ ಮೊತ್ತವನ್ನು ತೆರಿಗೆ ಇಲಾಖೆ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ.

6. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವ ಆದಾಯದ ವರ್ಗಗಳು ಯಾವುವು?
ವೇತನ, ಮನೆಯ ಆಸ್ತಿ, ಬ್ಯುಸಿನೆಸ್/ವೃತ್ತಿ, ಬಂಡವಾಳ ಗಳಿಕೆ, ಇತರ ಮೂಲಗಳ ಆದಾಯಗಳು ತೆರಿಗೆಯ ಬಲೆಗೆ ಬರುತ್ತವೆ. ಕೆಲವು ಆದಾಯಗಳಿಗೆ ತೆರಿಗೆ ಇಲ್ಲದಿದ್ದರೂ, ಮಾಹಿತಿಗೋಸ್ಕರ ತಿಳಿಸಬೇಕಾಗುತ್ತದೆ. ಉದಾಹರಣೆಗೆ ಕೃಷಿ ಆದಾಯ, ಷೇರು ವಿಕ್ರಯದ ಮೇಲೆ ದೀರ್ಘಕಾಲೀನ ಬಂಡವಾಳ ಗಳಿಕೆ, ಷೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿತ ಕಂಪನಿಯಿಂದ ಸಿಗುವ ಡಿವಿಡೆಂಡ್ ಇತ್ಯಾದಿ.

7. ರಿಟರ್ನ್ಸ್ ಸಲ್ಲಿಕೆ ವಿಳಂಬವಾದರೆ ಅದಕ್ಕಾಗಿಯೇ ಪ್ರತ್ಯೇಕ ಫಾರಂನಲ್ಲಿ ನಮೂದಿಸಿ ಸಲ್ಲಿಸಬೇಕೆ?
ಇಲ್ಲ. ಆಯಾ ಆದಾಯ ಮೂಲದವರಿಗೆ ಯಾವ ಫಾರಮ್ ನಿಗದಿಪಡಿಸಿದ್ದಾರೆಯೋ, ಅದನ್ನೇ ಬಳಸಿದರಾಯಿತು.

8. ವೇತನ ಮತ್ತು ಬಡ್ಡಿ ಆದಾಯ ಮೂಲದವರಿಗೆ ರಿಟರ್ನ್ಸ್ ಸಲ್ಲಿಕೆಗೆ ಅರ್ಜಿ ಯಾವುದು?
ಐಟಿ‌ಆರ್ 1 (ಸಹಜ್) ಅನ್ನು ವೇತನದಾರರು, ಬಾಡಿಗೆ ಆದಾಯ (ಒಂದು ಪ್ರಾಪರ್ಟಿಯಿಂದ) ಮತ್ತು ಇತರ ಆದಾಯ ಮೂಲದವರು ಬಳಸಬಹುದು. ಬ್ಯುಸಿನೆಸ್ ಅಥವಾ ವೃತ್ತಿ, ಕಂಪನಿಗಳ ಪಾಲುದಾರಿಕೆ ಹೊರತುಪಡಿಸಿ, ಇತರ ಮೂಲದ ಆದಾಯವಿದ್ದರೆ ಐಟಿ‌ಆರ್ 2 ತೆಗೆದುಕೊಳ್ಳಬಹುದು.

9. ವ್ಯಾಪಾರ (ಬ್ಯುಸಿನೆಸ್) ಅಥವಾ ವೃತ್ತಿಪರ ಮೂಲಗಳಿಂದ ಆದಾಯವಿದ್ದರೆ ಯಾವ ನಮೂನೆಯ ಫಾರಮ್?
ವ್ಯಾಪಾರ, ವೃತ್ತಿ ಮೂಲದ ಆದಾಯವಿರುವವರು ಐಟಿ‌ಆರ್ 4 ಅರ್ಜಿಯನ್ನು ಬಳಸಬೇಕು. ವೈಯಕ್ತಿಕ ತೆರಿಗೆದಾರರು ಐಟಿ‌ಆರ್ 1, ಐಟಿ‌ಆರ್ 2 , ಐಟಿ‌ಆರ್ 3 ಮತ್ತು ಐಟಿ‌ಆರ್ 4 ನ್ನು ಬಳಸಬೇಕು. ಎಲ್ಲ ಕಂಪನಿಗಳು, ಸಂಸ್ಥೆಗಳು, ಮಂಡಳಿಗಳು, ಸೀಮಿತ ಉತ್ತರದಾಯಿತ್ವದ ಪಾಲುದಾರಿಕೆ ಸಂಸ್ಥೆಗಳು ಐಟಿ‌ಆರ್ 5 ರ ವ್ಯಾಪ್ತಿಗೆ ಬರುತ್ತವೆ.

 

– ಕೇಶವ ಪ್ರಸಾದ್.ಬಿ ಕಿದೂರು

(ವಿಜಯ ಕರ್ನಾಟಕದಲ್ಲಿ ಪ್ರಕಟಿತ)

 

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: