ಮಂಡ್ಯಕ್ಕೆ ಹೋಗಿ ‘ಮದ್ದೂರು ವಡೆ’ ತಂದಂತೆ…

Share Button

ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತವಿರುವ ಒಂದು ಗಾದೆ ‘ಎಂಕು ಪಣಂಬೂರಿಗೆ ಹೋದಂತೆ’. ಯಾರಾದರೂ ನಿರರ್ಥಕವಾಗಿ ಅಥವಾ ಅಲೋಚನಾಶೂನ್ಯರಾಗಿ ಪ್ರಯಾಣಿಸಿದರೆ ಈ ಗಾದೆ ಮಾತು ಹೇಳಿ ಹಾಸ್ಯ ಮಾಡುತ್ತಾರೆ. ಈ ಗಾದೆಯ ಹಿನ್ನೆಲೆ ಏನೆಂದರೆ, ಊರಿನಲ್ಲಿ ಒಬ್ಬ ಎಂಕು ಎಂಬ ಹೆಸರಿನ ಕೆಲಸಗಾರ ಇರುತ್ತಾನೆ. ಒಂದು ದಿನ ರಾತ್ರಿ ಅವನ ಯಜಮಾನ-ಯಜಮಾನತಿಯರು ‘ನಾಳೆ ಬೆಳಗ್ಗೆ ಎಂಕುವನ್ನು ಪಣಂಬೂರಿಗೆ’ ಯಾವುದೋ ಕಾರ್ಯನಿಮಿತ್ತ ಕಳುಹಿಸಬೇಕು ಎಂದು ಮಾತನಾಡಿಕೊಳ್ಳುತ್ತಾರೆ.ಇದನ್ನು ಅರ್ಧಂಬರ್ಧ ಕೇಳಿಸಿಕೊಂಡ ಎಂಕು, ಬೆಳಗಾಗುವ ಮೊದಲೇ ಪಣಂಬೂರಿಗೆ ಹೋಗಿ ಬರುತ್ತಾನೆ. ಬೆಳಗ್ಗೆ ಯಜಮಾನ ನೀನು ಪಣಂಬೂರಿಗೆ ಹೋಗಬೇಕು ಅನ್ನುವಷ್ಟರಲಿ ‘ಆಗಲೇ ಹೋಗಿಬಂದೆ’ ಎಂದು ಎಂಕು ಉತ್ತರಿಸುತ್ತಾನೆ. ಯಾಕೆ ಹೋದೆ, ಏನು, ಎತ್ತ ಎಂದು ಅವನಿಗೆ ಗೊತ್ತಿಲ್ಲ.

ಈವತ್ತು ನನ್ನ ಕಥೆಯೂ ಸುಮಾರಾಗಿ ಹೀಗೆಯೇ ಆಯಿತು. ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಲು ಮೈಸೂರಿನಿಂದ ಬೆಳಗ್ಗೆ ಹೊರಡುವ ಟ್ರೈನ್ ಹತ್ತಿ ಕುಳಿತ್ತಿದ್ದೆ. ಟ್ರೈನ್ ಸ್ವಲ್ಪ ದೂರ ಚಲಿಸಿದ ನಂತರ, ನಾನು ಹೋಗಬೇಕಾಗಿರುವ ಮೀಟಿಂಗ್ ಅನಿವಾರ್ಯ ಕಾರಣಗಳಿಂದ ಮುಂದೂಡಬೇಕಾಗುತ್ತದೆಯೆಂದು ಮೆಸೇಜ್ ಬಂತು. ಸರಿ, ಮುಂದಿನ ಸ್ಟೇಷನ್ ಮಂಡ್ಯದಲ್ಲಿ ಇಳಿದು ವಾಪಸ್ಸಾಗೋಣ ಎಂದು ನಿರ್ಧರಿಸಿ, ಮಂಡ್ಯದಲ್ಲಿ ಇಳಿದೆ. ಅಲ್ಲಿಂದ ಇನ್ನೊಂದು ಟ್ರೈನ್ ಕೂಡಲೇ ಸಿಕ್ಕಿತು.

Maddur vadaಮೈಸೂರು-ಬೆಂಗಳೂರು ಮಧ್ಯೆ ಪ್ರಯಾಣಿಸುವಾಗ ‘ಮದ್ದೂರು’ ಸಿಗುತ್ತದೆ. ಇಲ್ಲಿನ ‘ಮದ್ದೂರು ವಡೆ’ ತುಂಬಾ ರುಚಿ. ಈ ದಾರಿಯುದ್ದಕ್ಕೂ ಟ್ರೈನ್ ನಲ್ಲಿ ‘ಮದ್ದೂರು ವಡೆ’ ಮಾರುವವರು ಬರುತ್ತಾರೆ. ರವೆ, ಅಕ್ಕಿಹಿಟ್ಟು, ಮೈದಾಹಿಟ್ಟು, ಕರಿಬೇವಿನಸೊಪ್ಪು, ಉಪ್ಪು, ಖಾರ ಮತ್ತು ಧಾರಾಳವಾಗಿ ಈರುಳ್ಳಿ ಸೇರಿಸಿ ತಯಾರಿಸುವ ಮದ್ದೂರು ವಡೆ ಬಲು ರುಚಿ.  ಕ್ಯಾಲೊರಿ ಲೆಕ್ಕ ಹಾಕುವವರೂ, ಜಂಕ್ ಫುಡ್ ತಿನ್ನಲ್ಲ ಎಂಬ ಶಪಥ ಹಾಕಿರುವವರೂ ಟ್ರೈನ್ ನಲ್ಲಿ ಬರುವ ಮದ್ದೂರು ವಡೆಗೆ ಸ್ಪೆಷಲ್ ರಿಯಾಯಿತಿ ತೋರಿಸುತ್ತಾರೆ! ಹೋಟೆಲ್ ಗಳಲ್ಲಿ ಲಭ್ಯವಿದ್ದರೂ ರೈಲುಗಳಲ್ಲಿ ಸಿಗುವ ಮದ್ದೂರು ವಡೆಯೇ ಸೂಪರ್!

ಅಂತೂ ಈವತ್ತು ಬೆಳಗ್ಗೆ ಬೇಗನೇ ಎದ್ದು, ಮೈಸೂರಿನಿಂದ ಹೊರಡುವ ಮೊದಲ ಟ್ರೈನ್ ಗೇ ಮಂಡ್ಯ ವರೆಗೆ ಹೋಗಿ, ಮದ್ದೂರು ವಡೆಯನ್ನು ತಂದು, ಈ ಪೋಸ್ಟ್ ಅನ್ನು ಬರೆಯುವಷ್ಟರಲ್ಲಿ ಮೈಸೂರು ತಲಪಿಯಾಯಿತು!

– ಹೇಮಮಾಲಾ.ಬಿ

6 Responses

 1. Karunakar Kanchukar Karunakar Kanchukar says:

  ಈದ್ ಕುಟ್ಟಿ ಕುಂದಾಪ್ರಕ್ ಹೋದಂಗೆ

 2. Bhavikatti Laxmikanthsa Bhavikatti Laxmikanthsa says:

  ನಮ್ಮ ಕಡೆ –ಸಿದ್ದ ಕವಲೂರಿಗೆ ಹೋಗಿದ್ನಂತೆ

 3. Dinakar Rao Dinakar Rao says:

  ಹೇಮ ಮದ್ದೂರಿಗೆ ಹೋಗೆ ವಡೆ ಬಗ್ಗೆ ಸ್ಟೇಟಸ್ ಬರ್ದಂಗೆ…. ಹೊಸ ಗಾದೆ

 4. Rajesh Phadke Rajesh Phadke says:

  Enjoy maadi bitti trip with vada

 5. Avatar Krishnaveni Kidoor says:

  ಮದ್ದೂರು ವಡೆ ಖರೀದಿಸಿ ತಿನ್ನುವ ಯೋಗ ಆ ದಿನ ನಿಮಗಿದ್ದ ಕಾರಣ ಅಲ್ಲಿ ಇಳಿದ್ರೇನೋ?

 6. Avatar nagaraja babu says:

  ನಮ್ಮ ಕಡೆ “ಕುರುಡು ಚೆನ್ನ, ಹುಳಿಯಾರ್” ಗೆ ಹೋದ ಹಂಗೆ ಗಾದೆ ಮಾತು! ಈ ಗಾದೆ ಮಾತು ನಮ್ಮ ದೊಡ್ಡಮ್ಮನ ಮನೆಯಲ್ಲಿ ನಡೆದ ಒಂದು ಪ್ರಸಂಗ . ನನ್ನ ತಾಯಿಯ ದೊಡ್ಡ ಅಕ್ಕ “ರಾಜಲಕ್ಷ್ಮಿ ವೆಂಕಟರಾಮ್ ಭಟ್” ಎಂಬುವರು, ಈಗಿನ “ಹೆಬ್ಬುರ್”, ಚಿಕ್ಕನಾಯಕನಹಳ್ಳಿ ಹೋಬಳಿ , ಊರಿನಲ್ಲಿ ಇದ್ದಾಗ ನಡೆದ ಸಂಗತಿ. ಅವರ ಮನೆಯ ಆಳು “ಚೆನ್ನ” ಎಂಬುವನು “ಸ್ವಲ್ಪ ಅರೆ ಕುರುಡು” ಹಾಗು “ಐಬು” ಮತ್ತೆ “ಮರೆಕುಳಿ”. ರಾತ್ರಿ ಮನೆಯ ಯಜಮಾನ ಹಾಗು ಯಾಜಮಾನಿ “ನಾಳೆ ಚೆನ್ನ್ನನನ್ನು ಗಾಡಿ ಕಟ್ಟಲು ಹೇಳಬೇಕು ಹುಳಿಯಾರ್ ಗೆ ಹೋಗಲು ಎಂಬ ಮಾತನಾಡಿ ಕೊಂಡ ಮಾತನ್ನು ಕೇಳಿಸಿಕೊಂಡ ಇವಾ, ಮುಂಜಾನೆ ನಸುಕಿನಲ್ಲಿ ” ಎತ್ಹಿನ ಗಾಡಿ ಕಟ್ಟಿ “ಹೆಬ್ಬೂರ್” ನಿಂದ “ಹುಳಿಯಾರ್” ಗೆ ಸುಮ್ಮನೆ ಹೋದವ, ಅಲ್ಲಿ ಹುಲಿಯರ್ನಲ್ಲಿ, ಆ ರಾತ್ರಿ ತಂಗಿದ್ದು, ಮಾರನೆಯ ದಿನ ವಾಪಸ್ಸು ಬರುತಾನೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: