ಮಲೆನಾಡಿನ ಜೀವನಾಡಿಗಳು ಅಂಕ-೪: ಅಂತಿಂತ ನದಿಯು ನೀನಲ್ಲ, ನಿನ್ನಂತ ನದಿಯು ಬೇರಿಲ್ಲ -ಭದ್ರಾ

Share Button


ಕುದುರೆಮುಖ ಅಭಯಾರಣ್ಯದ ವರಾಹ ಪರ್ವತಗಳ ಸಾಲಿನಲ್ಲಿರುವ ಗಂಗಾಮೂಲದಲ್ಲಿ ಜನಿಸಿದ ಭದ್ರೆ, ಸೋದರಿ ತುಂಗೆಯಷ್ಟು ಸೌಮ್ಯ ಸ್ವಭಾವದವಳಲ್ಲ, ನಯ ನಾಜೂಕಿನವಳೂ ಅಲ್ಲ, ಲಾವಣ್ಯವತಿಯೂ ಆಗಿಲ್ಲ. ಕುದುರೆಮುಖದ ಕಬ್ಬಣದ ಅದುರುಳ್ಳ ಬೆಟ್ಟಗುಡ್ಡಗಳ ಮಣ್ಣಿನ ಸಾರವನ್ನು ಹೀರುತ್ತಾ ಸಾಗುವಳು. ಇವಳ ಬಣ್ಣ ತುಂಗೆಗಿಂತ ತುಸು ಕಪ್ಪು, ಆದರೆ ಗಾತ್ರ ದೊಡ್ಡದೇ. ತುಂಗೆ 147 ಕಿ.ಮೀ. ಪಯಣಿಸಿದ ನಂತರ ಭದ್ರೆಯ ಜೊತೆ ಸೇರುವಳು, ಆದರೆ ಭದ್ರೆ 178 ಕಿ.ಮೀ. ಸಾಗಿದ ನಂತರವೇ ತುಂಗೆಯ ಒಡನಾಡಿಯಾಗುವಳು. ಇವಳ ದಡದಲ್ಲಿರುವ ಪ್ರಮೂಖ ಪಟ್ಟಣಗಳು ಕುದುರೆಮುಖ, ಕಳಸ, ಹೊರನಾಡು, ಬಾಳೇಹೊನ್ನೂರು, ನರಸಿಂಹರಾಜಪುರ, ಭದ್ರಾವತಿ ಇತ್ಯಾದಿ. ಇವಳು ಹರಿಯುವ ಪಾತ್ರದಲ್ಲಿ ಹಲವು ಉಪನದಿಗಳು ಜೊತೆಗೂಡುತ್ತವೆ – ಸೋಮವಾಹಿನಿ, ತಡಬೆಹಳ್ಳ, ಓಡಿರಾಯನಹಳ್ಳ ಇತ್ಯಾದಿ.

ಭದ್ರೆ ತಾಳುವ ಅವತಾರಗಳು ಹತ್ತು ಹಲವು ಕಳಸದಲ್ಲಿ ಶೈವರನ್ನು ಪೋಷಿಸುವ ಇವಳು, ನರಸಿಂಹರಾಜಪುರದಲ್ಲಿ ಜೈನ ಬಸದಿಗಳ ತವರೂರಾಗಿ ನಿಲ್ಲುವಳು. ಹೊರನಾಡಿನಲ್ಲಿ ಜನರ ಹಸಿವನ್ನು ನೀಗುವ ಮಾತೆ ಅನ್ನಪೂರ್ಣೆಗೆ ಆಸರೆಯಾಗುವಳು, ಭದ್ರಾವತಿಯನ್ನು ಉಕ್ಕಿನ ನಗರವನ್ನಾಗಿ ಪರಿವರ್ತಿಸಿದ ಮಹಾ ಗಟ್ಟಿಗಿತ್ತಿ ಹಾಗೂ ಭದ್ರಾ ಅಭಯಾರಣ್ಯದಲ್ಲಿ ವೈವಿಧ್ಯಮಯ ಸಸ್ಯ ಪ್ರಬೇಧಗಳಿಗೆ ಆಶ್ರಯ ನೀಡುತ್ತಾ ಹಲವು ಬಗೆಯ ಪ್ರಾಣಿ ಪಕ್ಷಿಗಳನ್ನು ತನ್ನ ಒಡಲಲ್ಲಿ ಹೊತ್ತು ನಿಂತ ಮಹಾಮಾತೆ. ಮೈಸೂರಿನ ಬಲಮುರಿ ಜಲಪಾತವನ್ನು ಹೋಲುವ ‘ಭದ್ರಾ ಜಲಪಾತ’ವು ಗೊಂದಿಯಲ್ಲಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಮೊದಲಿಗೆ ಗೊಂದಿ ಜಲಪಾತವೆಂದೇ ಕರೆಯಲ್ಪಡುತ್ತಿದ್ದ ಈ ಜಲಪಾತವನ್ನು ಭದ್ರಾ ಜಲಾಶಯವೆಂದು ಮರುನಾಮಕರಣ ಮಾಡಿರುವರು.

ಜೀವ ವೈವಿಧ್ಯತೆಯನ್ನು ಕಾಣಬೇಕೆ? ಹಾಗಿದ್ದಲ್ಲಿ ಬನ್ನಿ ಭದ್ರಾ ಅಭಯಾರಣ್ಯಕ್ಕೆ. 1951ರಲ್ಲಿ ಜಾಗೌರ್ ವ್ಯಾಳಿ ಎಂದು ಹೆಸರಾಗಿದ್ದ ಈ ಸ್ಥಳಕ್ಕೆ 1974 ರಲ್ಲಿ ಭದ್ರಾ ಅಭಯಾರಣ್ಯವೆಂದು ನಾಂಕರಣ ಮಾಡಲಾಯಿತು. 1998 ರಲ್ಲಿ ಸಂರಕ್ಷಿತ ಹುಲಿ ಅಭಯಾರಣ್ಯವೆಂದೂ ಘೋಷಿಸಲ್ಪಟ್ಟಿತು. ಇಲ್ಲಿ ಭದ್ರಾ ನದಿಯಲ್ಲಿ ದೋಣಿ ವಿಹಾರ, ಹಲವು ಬಗೆಯ ಜಲಕ್ರೀಡೆಗಳನ್ನೂ ಆಯೋಜಿಸಲಾಗಿದೆ. ವನ್ಯ ಜೀವಿಗಳನ್ನು ನೋಡಲು ಜೀಪ್ ಸಫಾರಿಯಲ್ಲಿ ಹೊರಟ ಪ್ರವಾಸಿಗರ ಉದ್ಗಾರಗಳನ್ನು ಕೇಳುವುದೇ ಮೋಜು. ಒಮ್ಮೆ ನಾವು ಭದ್ರಾ ಅಭಯಾರಣ್ಯಕ್ಕೆ ಕಾಲ್ನಡಿಗೆಯಲ್ಲಿ ಹೋದಾಗ ಹಾದಿಯಲ್ಲಿ ಇದ್ದಕ್ಕಿದ್ದಂತೆ ಧೂಳಿನ ಮೋಡ ಕವಿಯಿತು. ದೂರದಲ್ಲಿ 40,50 ಕಾಡೆಮ್ಮೆಗಳ ಗುಂಪೊಂದು ಓಡುತ್ತಾ ಬರುತ್ತಿತ್ತು. ನಾವು ಅಲ್ಲಿಂದ ಬೇಗ ಬೇಗನೆ ಕಾಲ್ಕಿತ್ತೆವು. ಒಂದೆರೆಡು ಕ್ಷಣಗಳು ಉರುಳಿರಬಹುದು – ನಮ್ಮ ಜೊತೆಯಿದ್ದ ಗೈಡ್ ಗಲಾಟೆ ಮಾಡಬೇಡಿ ಎಂದು ಸನ್ನೆ ಮಾಡಿದ. ನಮ್ಮ ಮುಂದೆ ಸಲಗವೊಂದು ನಿಧಾನವಾಗಿ ರಸ್ತೆ ದಾಟುತ್ತಿತ್ತು. ಭದ್ರೆಯಲ್ಲಿ ದೋಣಿವಿಹಾರ ಮಾಡಿ ಅಲ್ಲಿಂದ ಮಧುರ ನೆನಪುಗಳನ್ನು ಹೊತ್ತು ಹಿಂತಿರುಗಿದ್ದೆವು.

ಭದ್ರಾ ನದಿಯ ತಟದಲ್ಲಿರುವುದು ಹೊರನಾಡಿನ ತಾಯಿ ಅನ್ನಪೂರ್ಣೆಯ ದೇಗುಲ. ದೇಗುಲವು ಮೂರು ಕಡೆ ಹಸಿರು ಹೊದ್ದ ಬೆಟ್ಟ ಗುಡ್ಡಗಳಿಂದ ಆವರಿಸಲ್ಪಟ್ಟಿದ್ದರೆ, ಒಂದೆಡೆ ರಭಸವಾಗಿ ಹರಿಯುತ್ತಿರುವ ಭದ್ರೆ ಈ ನಾಡನ್ನು ಹೊರನಾಡೆಂದು ಗುರುತಿಸಿವೆ. ಅನ್ನಪೂರ್ಣ ಪದ ಬಿಡಿಸಿದಾಗ ಅನ್ನ ಎಂದರೆ ಆಹಾರ ಪೂರ್ಣ ಎಂದರೆ ಪರಿಪೂರ್ಣಳು ಎಂಬ ಅರ್ಥಪೂರ್ಣವಾದ ಮಾಹಿತಿ ದೊರೆಯುವುದು. ಎಂಟನೆಯ ಶತಮಾನದಲ್ಲಿ ಅಗಸ್ತ್ಯ ಮಹರ್ಷಿಗಳು ಇಲ್ಲಿ ದೇವಿಯ ಮೂರ್ತಿಯನ್ನು ಸ್ಥಾಪಿಸಿದರು ಎಂಬ ಐತಿಹ್ಯವೂ ಇದೆ. ಇಲ್ಲಿನ ಪೌರಾಣ ಕ ಹಿನ್ನೆಲೆಯೂ ಸ್ವಾರಸ್ಯ ಪೂರ್ಣವಾಗಿದೆ ಒಮ್ಮೆ ಶಿವನು ತನ್ನ ಪತ್ನಿ ಪಾರ್ವತಿಯೊಂದಿಗೆ ಚರ್ಚೆಯಲ್ಲಿ ತೊಡಗಿದ್ದ. ಈ ಭೂಮಿಯಲ್ಲಿರುವುದೆಲ್ಲವೂ ಮಾಯೆ, ಭ್ರಮೆ ಎಂದು ಹೇಳಿದ ಶಿವ. ಆಗ ಸತಿಯು, ಅನ್ನವು ಭ್ರಮೆಯಲ್ಲ, ವಾಸ್ತವ ಎಂದು ಮರುನುಡಿಯುತ್ತಾಳೆ. ತನ್ನ ವಾದವನ್ನು ಸಾಬೀತು ಪಡಿಸಲು ಅವಳು ಕಣ್ಮರೆಯಾಗುವಳು. ಅನ್ನವಿಲ್ಲದೆ ಜನಜೀವನ ಅಸ್ತವ್ಯಸ್ತವಾಗುವುದು. ಜಗತ್ತಿನಲ್ಲಿ ಹಾಹಾಕಾರ ಉಂಟಾಗುವುದು. ಆಗ ಪಾರ್ವತಿಯು ದೇವಿ ಅನ್ನಪೂರ್ಣೆಯ ಅವತಾರವೆತ್ತಿ ಎಲ್ಲರನ್ನೂ ಹರಸುವಳು. ಇವಳು ಭುವಿಗೆ ಬಂದ ದಿನವೇ ಅಕ್ಷಯ ತದಿಗೆ, ಹಾಗಾಗಿ ಅಂದು ನಾವು ಮಾಡಿದ ಕಾರ್ಯವೆಲ್ಲಾ ಅಕ್ಷಯವಾಗುವುದೆಂಬ ನಂಬಿಕೆ ಮೂಡಿಬಂದಿದೆ. ಹೊರನಾಡಿನ ಅನ್ನಪೂರ್ಣೇಶ್ವರಿ ದೇಗುಲಕ್ಕೆ ಆಗಮಿಸಿದ ಜನರಿಗೆಲ್ಲಾ ಅನ್ನ ದಾಸೋಹ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಅನ್ನಪೂರ್ಣೆಯ ಅನುಗ್ರಹಕ್ಕೆ ಪಾತ್ರರಾದವರಿಗೆ ಎಂದಿಗೂ ಅನ್ನದ ಕೊರತೆ ಇಲ್ಲವೇ ಇಲ್ಲ. ಹೊರನಾಡಿನ ಚೆಲುವನ್ನು ಸವಿದವರು, ಮತ್ತೆ ಮತ್ತೆ ದೇವಿಯ ದರ್ಶನಕ್ಕೆ ಬರುತ್ತಲೇ ಇರುವರು.

ಹತ್ತಾರು ವರ್ಷಗಳ ಹಿಂದೆ ಅನ್ನಪೂರ್ಣೆಯ ದರ್ಶನಕ್ಕೆ ಹೋಗುವವರು, ಭದ್ರಾ ನದಿಯನ್ನು ದೋಣಿಯ ಮೂಲಕ ದಾಟಿಯೇ ಹೋಗಬೇಕಿತ್ತು. ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆಯಾದಾಗ ಮಾತ್ರ ಭದ್ರೆಯನ್ನು ಕಾಲ್ನಡಿಗೆಯ ಮೂಲಕ ದಾಟಬಹುದಿತ್ತು. ನಂತರದಲ್ಲಿ ಬೆಟ್ಟ ಕಡಿದು ರಸ್ತೆ ನಿರ್ಮಿಸಿರುವರು. ಹೊರನಾಡಿನಿಂದ ಏಳು ಕಿ.ಮೀ. ದೂರದಲ್ಲಿರುವ ಕಳಸಕ್ಕೆ ಹೋಗೋಣ ಬನ್ನಿ. ಕಳಸದಲ್ಲಿ ಐದು ಪವಿತ್ರ ತೀರ್ಥಗಳಾದ ವಸಿಷ್ಠತೀರ್ಥ, ನಾಗತೀರ್ಥ, ಕೋಟಿತೀರ್ಥ, ರುದ್ರತೀರ್ಥ ಮತ್ತು ಅಂಬಾತೀರ್ಥಗಳು ಭದ್ರಾ ನದಿಯ ಒಡಲನ್ನು ಸೇರುತ್ತವೆ. ಇಲ್ಲಿನ ಪೌರಾಣಿಕ ಹಿನ್ನೆಲೆಯೂ ಶಿವ ಪಾರ್ವತಿಯರ ಸುತ್ತಲೇ ಇದೆ. ಹಿಮಾಲಯದಲ್ಲಿ ಶಿವ ಪಾರ್ವತಿಯರ ವಿವಾಹ ಮಹೋತ್ಸವಕ್ಕೆ ಕ್ಷಣಗಣನೆ ನಡೆಯುತ್ತಿದೆ, ಎಲ್ಲಾ ದೇವಾನುದೇವತೆಗಳೂ ಈ ಮದುವೆಯಲ್ಲಿ ಪಾಲ್ಗೊಳ್ಳಲು ಸಂಭ್ರಮ ಸಡಗರಗಳಿಂದ ಹಿಮಾಲಯದೆಡೆಗೆ ಧಾವಿಸುತ್ತಿದ್ದಾರೆ. ಆಗ ಭೂಮಿಯ ಚಲನೆ ತುಸು ದಿಕ್ಕು ತಪ್ಪಿದ್ದನ್ನು ಕಂಡ ಶಿವನು, ಭುವಿಯ ಚಲನೆಯನ್ನು ಸಮ ಸ್ಥಿತಿಗೆ ತರಲು, ಅಗಸ್ತ್ಯ ಮುನಿಗಳಿಗೆ ದಕ್ಷಿಣ ದಿಕ್ಕಿನೆಡೆ ತೆರಳಲು ಸೂಚಿಸುವನು. ಅಗಸ್ತ್ಯರು ಕಳಸದಲ್ಲಿ ತಂಗುವರು. ಆದರೆ ಅವರಿಗೂ ಶಿವ ಪಾರ್ವತಿಯರ ಲಗ್ನದಲ್ಲಿ ಪಾಲ್ಗೊಳ್ಳುವ ಬಯಕೆಯಿತ್ತು. ಆಗ ಶಿವನು ಅವರು ಹಿಡಿದಿದ್ದ ಕಮಂಡಲುವಿನಲ್ಲಿ ಶಿವಲಿಂಗದ ರೂಪದಲ್ಲಿ ಕಂಡುಬರುವನು. ಕಳಸದಲ್ಲಿ ಕಂಡ ಶಿವಲಿಂಗವನ್ನು ಮೇಲೆತ್ತಿ ಈ ಪವಿತ್ರ ಕ್ಷೇತ್ರದಲ್ಲಿ ಸ್ಥಾಪಿಸಿದಾಗ ಕಳಸೇಶ್ವರನೆಂಬ ಹೆಸರು ಬಂತು.

ಮುಂದೆ ಸಾಗುವ ಭದ್ರೆ, ಪಶ್ಚಿಮ ಘಟ್ಟಗಳ ಮಡಿಲಲ್ಲಿ ಬೆಳೆದು ನಿಂತ ಕಾಫಿ, ಏಲಕ್ಕಿ ತೋಟಗಳನ್ನು ತನ್ನ ಮುಡಿಗೇರಿಸಿ ಪರಿಮಳ ಬೀರುತ್ತಾ ಹೆಮ್ಮೆಯಿಂದ ಬೀಗುವಳು. ಬಾಳೆಹೊನ್ನೂರಿನ ರೇಣುಕರಿಗೆ ಶಿರಸಾಷ್ಟಾಂಗ ನಮನಗಳನ್ನು ಸಲ್ಲಿಸಿ ಮುನ್ನುಗ್ಗುವಳು. ಹಿಂದೂ ಧರ್ಮದ ವೀರಶೈವ ಪಂಥದ ಐದು ಪಂಚಪೀಠಗಳಲ್ಲಿ ಪುರಾತನವಾದುದು ರಂಭಾಪುರಿ ಪೀಠ. ಶಿವನು ರೇಣುಕಾಚಾರ್ಯರ ರೂಪದಲ್ಲಿ ಶಿವಲಿಂಗದಲ್ಲಿ ಉದ್ಭವಿಸಿದನೆಂಬ ಪ್ರತೀತಿ. ಬಾಳೆಹೊನ್ನೂರಿನಿಂದ ನರಸಿಂಹರಾಜಪುರಕ್ಕೆ ತೆರಳುವ ಭದ್ರೆ ಜೈನಧರ್ಮೀಯರಿಗೆ ಆಸರೆ ನೀಡಿದ್ದಾಳೆ. ಯಡೇಹಳ್ಳಿ ಎಂಬ ಹೆಸರು ಪಡೆದಿದ್ದ ಈ ಸ್ಥಳಕ್ಕೆ 1915 ರಲ್ಲಿ ಭೇಟಿ ನೀಡಿದ್ದ ನರಸಿಂಹರಾಜ ಒಡೆಯರ್‌ರವರ ಗೌರವಾರ್ಥವಾಗಿ ನರಸಿಂಹರಾಜಪುರ ಎಂದು ನಾಮಕರಣ ಮಾಡಲ್ಪಟ್ಟಿತು. ಇಲ್ಲಿ ಆರು ಜೈನ ಬಸದಿಗಳು ಇವೆ ಚಂದ್ರನಾಥ ದೇವಾಲಯ, ಪಾರ್ಶ್ವನಾಥಸ್ವಾಮಿ ದೇವಾಲಯ, ಜ್ವಾಲಾಮಾಲಿನಿ ದೇವಾಲಯ, ಶಾಂತಿನಾಥ ದೇವಾಲಯ, ಮಠ ದೇವಾಲಯ, ಕ್ಷೇತ್ರಪಾಲ ದೇವಾಲಯ ಚೆಂದದ ಶಿಲ್ಪ ಕಲೆಯನ್ನು ಬಿಂಬಿಸುತ್ತಿವೆ. ಈ ಜೈನ ಬಸದಿಗಳು ಅಂದಿನ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಗಿ ನಿಂತಿವೆ.

ಭದ್ರಾ ನದಿಗೆ ಅಡ್ಡಲಾಗಿ ಜಲಾಶಯವನ್ನು ಲಕ್ಕವಳ್ಳಿ ಬಳಿ ನಿರ್ಮಿಸಲಾಗಿದೆ. ಸುತ್ತಲೂ ಇರುವ ಬೆಟ್ಟ ಗುಡ್ಡಗಳು ತಮ್ಮ ಪ್ರತಿಬಿಂಬವನ್ನು ಭದ್ರೆಯಲ್ಲಿ ವೀಕ್ಷಿಸುತ್ತಾ ಸ್ತಬ್ಧವಾಗಿ ನಿಂತಿವೆ. ಈ ಜಲಾಶಯದ ಒಂದು ಬದಿಯಲ್ಲಿ ಪುಟ್ಟದಾದ ಜಲವಿದ್ಯುತ್ ಸ್ಥಾವರವು ತಲೆ‌ಎತ್ತಿ ನಿಂತಿದೆ. ಈ ಜಲಾಶಯದಲ್ಲಿ ಮುಳುಗಡೆಯಾದ ಪ್ರದೇಶಗಳೆಷ್ಟೋ, ಭತ್ತದ ಕಣಜವೆಂದೇ ಪ್ರಖ್ಯಾತಿಯಾಗಿದ್ದ ಫಲವತ್ತಾದ ಭೂಮಿಯ ಗತಿಯೇನಾಗಿದೆಯೋ ಹೇಳುವರಾರು?

ನಡೆ ಮುಂದೆ ಭದ್ರೆ, ನಿನ್ನದೇ ಹೆಸರು ಹೊತ್ತ ನಗರ – ಭದ್ರಾವತಿಗೆ. ಹಿಂದೆ ಕೈಗಾರಿಕಾ ನಗರವೆಂದೇ ಖ್ಯಾತಿ ಪಡೆದಿದ್ದ ಈ ನಗರ ಇಂದು ಮೌನಕ್ಕೆ ಶರಣಾಗಿದೆ. ಇಲ್ಲಿನ ಪ್ರಮುಖ ಕೈಗಾರಿಕೆಗಳು – ಸರ್. ಎಮ್. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ಕಾಗದ ಕಾರ್ಖಾನೆ, ಸಕ್ಕರ ಕಾರ್ಖಾನೆ. ದೇಶದ ಮೂಲೆ ಮೂಲೆಗಳಿಂದಲೂ ಜನರು ಉದ್ಯೋಗ ಅರಸಿ ಬರುತ್ತಿದ್ದ ಕಾಲವೊಂದಿತ್ತು. ಕಾರಣಾಂತರಗಳಿಂದ ಈ ಕಾರ್ಖಾನೆಗಳ ಸ್ಥಿತಿ ಚಿಂತಾಜನಕವಾಗಿದೆ. ಸಕ್ಕರೆ ಕಾರ್ಖಾನೆ ಮುಚ್ಚಲಾಗಿದೆ, ವಿ.ಐ.ಎಸ್.ಎಲ್. ತೀವ್ರ ನಿಗಾ ಘಟಕದಲ್ಲಿದ್ದರೆ ಎಮ್.ಪಿ.ಎಮ್. ಕುಂಟುತ್ತಾ ಸಾಗಿದೆ. ಪ್ರತೀ ಚುನಾವಣೆಯಲ್ಲಿಯೂ ರಾಜಕೀಯ ನಾಯಕರು ಕಾರ್ಖಾನೆಗಳ ಸ್ಥಿತಿ ಗತಿ ಸುಧಾರಿಸುತ್ತೇವೆ ಎಂಬ ಆಶ್ವಾಸನೆಯನ್ನು ನೀಡುತ್ತಲೇ ಬರುತ್ತಿದ್ದಾರೆ. ಭದ್ರಾವತಿಯಲ್ಲಿ ಕೈಗಾರಿಕಾ ಮಾಲಿನ್ಯಗಳಿಂದ ಕಲುಷಿತಳಾದ ಭದ್ರೆಯು ಉಸಿರು ಕಟ್ಟಿ ನರಳುತ್ತಾಳೆ, ತನ್ನ ಸೋದರಿ ತುಂಗೆಯ ನೆನೆಪು ಕಾಡುತ್ತದೆ. ಕೂಡಲಿ ಕಡೆ ಧಾವಿಸುವಳು, ತಂಗಿಯ ಜೊತೆಗೂಡಿದಾಗ ತುಸು ಗೆಲುವಾಗುವಳು. ತುಂಗಾ ಭದ್ರೆಯರು ಕೈ ಕೈ ಹಿಡಿದು ನಗುತ್ತಾ ನಲಿಯುತ್ತಾ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ತುಂಗಭದ್ರಾ ಎಂಬ ಹೆಸರಿನಿಂದ ಮುನ್ನೆಡೆಯುವರು.

(ಮುಂದುವರೆಯುವುದು)

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ.

5 Responses

  1. ಮಾಹಿತಿ ಪೂರ್ಣ …ಲೇಖನ ಮುಂದುವರೆದ ಭಾಗ ಸೊಗಸಾದ ನಿರೂಪಣೆ… ಧನ್ಯವಾದಗಳು ಗಾಯತ್ರಿ ಮೇಡಂ.

  2. ನಯನ ಬಜಕೂಡ್ಲು says:

    ಸೊಗಸಾದ ಲೇಖನ

  3. ವಂದನೆಗಳು ಸಹೃದಯ ಓದುಗರಿಗೆ

  4. Padma Anand says:

    ಭದ್ರೆಯ ಹುಟ್ಟು ಮತ್ತು ಚಲನೆಗಳು ಮುದ ನೀಡಿದವು.

  5. Padmini Hegde says:

    ಚೆಂದಾದ ಕುತೂಹಲಕಾರಿ ನಿರೂಪಣೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: