ಮಲೆನಾಡಿನ ಜೀವನಾಡಿಗಳು : ಅಂಕ 2

Spread the love
Share Button


ಕನ್ನಡ ನಾಡಿನ ಭಾಗೀರಥಿ

ಹೊಸ ವರ್ಷದ ಸಂಭ್ರಮಾಚರಣೆ ಯುಗಾದಿ ಹಬ್ಬದಂದು ಮುಗಿದಿತ್ತು, ಆದರೆ ಚಂದ್ರ ದರ್ಶನ ಇನ್ನೂ ಆಗಿರಲಿಲ್ಲ. ಬಯಲು ಸೀಮೆಯಲ್ಲಿ ಹುಟ್ಟಿ ಬೆಳೆದ ನನ್ನ ಯಜಮಾನರಿಗೆ ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಅವುಗಳ ಮೇಲೆ ತೇಲುವ ಮೋಡಗಳನ್ನು ನೋಡುವುದೇ ನಿಜವಾದ ಹಬ್ಬ ಎನ್ನುವ ಭಾವ. ಮಲೆನಾಡಿನ ಜೀವನಾಡಿಯಾದ ಶರಾವತಿ ನದಿಯ ಜನ್ಮಸ್ಥಾನವಾದ ಅಂಬುತೀರ್ಥಕ್ಕೆ ಹೋಗೋಣ ಎಂದು ಹೊರಡಿಸಿದರು. ಮುಂಜಾನೆ ಅರು ಗಂಟೆಗೇ ಮನೆಯಿಂದ ಹೊರಟೆವು. ವಸಂತಮಾಸದ ಆಗಮನವನ್ನು ಮರಗಿಡಗಳು ಹೊಸ ಉಡುಗೆ ತೊಟ್ಟು ಸ್ವಾಗತಿಸಿದರೆ, ಕೋಗಿಲೆ ತನ್ನ ಮಧುರವಾದ ಗಾಯನದಿಂದ ಆಹ್ವಾನಿಸುವಂತಿತ್ತು. ಹಾದಿಯುದ್ದಕ್ಕೂ ಮರ ಗಿಡಗಳ ಚಿಗುರೆಲೆಗಳನ್ನು ನೋಡುವುದೇ ಣ್ಣಿಗೆ ಹಬ್ಬವಾಯಿತು. ರಂಗು ರಂಗಿನ ಚಿಗುರೆಲೆಗಳು ತಂಗಾಳಿ ಬೀಸುವಾಗ ಉಯ್ಯಾಲೆಯಾಡುತ್ತಾ, ರವಿ ಕಿರಣಗಳ ಸ್ಪರ್ಶದಿಂದ ಥಳ ಥಳನೇ ಹೊಳೆಯುತ್ತಿದ್ದವು. ಅದೇನು ಬಣ್ಣ, ಅದೇನು ಚೆಲುವು – ಹಳದಿ ಮಿಶ್ರಿತ ಹಸಿರು, ಹವಳದ ವರ್ಣ, ಪಚ್ಚೆ ಹಸಿರು, ಕಂದು ಬಣ್ಣ ಯಾವ ಮಹಾಶಯ ಹೇಳಿದನೋ ಎಲೆಗಳ ಬಣ್ಣ ಹಸಿರೆಂದು ! ? ಜನವಸತಿ ಇದ್ದೆಡೆಯೆಲ್ಲಾ ಕಾಡುಗಳನ್ನು ಬೋಳಿಸಿ ತೆಂಗು,ಅಡಿಕೆ, ಬಾಳೆಯ ತೋಟಗಳನ್ನು ಮಾಡಿದ್ದರು. ಮಧ್ಯೆ ಮಧ್ಯೆ ಕಾಫಿ, ಏಲಕ್ಕಿ, ಮೆಣಸು ಮುಂತಾದ ಗಿಡಗಳೂ ನಮ್ಮನ್ನು ಸ್ವಾಗತಿಸುತ್ತಿದ್ದವು. ತೀರ್ಥಹಳ್ಳಿಯಿಂದ ಸುಮಾರು ಹದಿನಾರು ಕಿ.ಮೀ. ದೂರದಲ್ಲಿರುವ ಅಂಬುತೀರ್ಥ ತಲುಪಿದೆವು. ಶಿವಮೊಗ್ಗೆಯಿಂದ ಹೊರಟವರು ನಾವು – ನಮ್ಮ ಗಮ್ಯ ತಲುಪುವವರೆಗೂ ಉತ್ತಮವಾದ ರಸ್ತೆಗಳು, ಕಾರು ಓಡಿಸುತ್ತಿದ್ದ ಯಜಮಾನರಿಗೆ ಖುಷಿಯೋ ಖುಷಿ.

ರಾಮೇಶ್ವರ ದೇಗುಲ ಎಂಬ ಫಲಕ ಹೊತ್ತ ಹೆಬ್ಬಾಗಿಲು, ಮುಂದೆಯೇ ದಿ.ರಾಮಭಟ್ಟರಿಗೆ ನುಡಿನಮನ ಎಂಬ ಫ್ಲೆಕ್ಸ್ ಕಂಡೆವು. ಶಿಥಿಲವಾಗಿದ್ದ ರಾಮೇಶ್ವರ ದೇಗುಲದ ಸ್ಥಳದಲ್ಲಿ ಪುಟ್ಟದಾದ, ಸುಂದರವಾದ ಹೊಸ ದೇಗುಲ ನಿರ್ಮಾಣವಾಗಿತ್ತು. ಪಕ್ಕದಲ್ಲಿ ರಾಮದೇವರ ಗುಡಿ, ಜೊತೆಯಲ್ಲೇ ಇದ್ದರು ಸೀತಾ ಲಕ್ಷ್ಮಣರು. ಶರಾವತಿಯು ರಾಮೇಶ್ವರನ ಪಾದಕಮಲಗಳಿಗೆ ಅಭಿಷೇಕ ಮಾಡುತ್ತಾ ಭೂಗರ್ಭದಿಂದ ಮೆಲ್ಲನಡಿಯಿಡುತ್ತಾ ಬರುತ್ತಿದ್ದಳು. ದೇಗುಲದ ಮುಂದೆ ಅವಳಿಗಾಗಿ ಎರಡು ಪುಷ್ಕರಿಣಿಗಳನ್ನು ನಿರ್ಮಿಸಿದ್ದರು, ದೇವರ ಪೂಜೆಗಾಗಿ ಒಂದು ಮೀಸಲಾದರೆ, ಮತ್ತೊಂದು ಭಕ್ತರ ಬಳಕೆಗಾಗಿ. ಮುಂದೆ ನಕ್ಷತ್ರಾಕಾರದ ಪುಷ್ಕರಿಣ ಯಲ್ಲಿ ಶರಾವತಿಯ ಪಾತ್ರ ವಿಸ್ತಾರವಾಗುತ್ತಾ ಸಾಗುವುದು, ಮತ್ತೊಂದು ಕಲ್ಯಾಣಿಯೂ ಹಿಗ್ಗುತ್ತಾ ಸಾಗುವ ಹೊಳೆಯನ್ನು ಹಿಡಿದಿಟ್ಟಿದೆ. ಇಲ್ಲಿ ನೀರಿನ ಸೆಲೆ ಎಂದಿಗೂ ಬತ್ತದು, ಸದಾ ಒಂದೇ ರೀತಿಯ ಹರಿವು, ಮಳೆಗಾಲದಲ್ಲಿ ಮಾತ್ರ ಉಕ್ಕಿ ಹರಿಯುವ ಶರಾವತಿ. ದೇಗುಲದ ಸುತ್ತಲೂ ಕಾಡಿದೆ, ಅಲ್ಲಲ್ಲಿ ಅಡಿಕೆ ತೋಟಗಳನ್ನೂ ಕಟ್ಟಿದ್ದಾರೆ. ದೇಗುಲದ ಹಿಂಬದಿಯಲ್ಲಿ ಇರುವ ಗುಡ್ಡದಿಂದ, ಮಳೆಗಾಲದಲ್ಲಿ ಆಗಾಗ್ಗೆ ಜರುಗುವ ಮಣ್ಣು ಕುಸಿತದಿಂದ ರಾಮೇಶ್ವರ ದೇಗುಲವನ್ನು ಸಂರಕ್ಷಿಸಲು, ಒಂದು ತಡೆಗೋಡೆಯ ನಿರ್ಮಾಣವೂ ಆಗಿದೆ. ರಾಮೇಶ್ವರ ದೇಗುಲದ ಜೀರ್ಣೋದ್ದಾರ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಸನ್ಮಾನ್ಯ ದಿ.ರಾಮಭಟ್ಟರನ್ನು ಜನರು ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುತ್ತಾರೆ.

ಇನ್ನು ಈ ಕ್ಷೇತ್ರದ ಐತಿಹ್ಯವನ್ನು ತಿಳಿಯೋಣ ಬನ್ನಿ ತ್ರೇತಾಯುಗದಲ್ಲಿ ವನವಾಸಕ್ಕೆ ಹೊರಟ ರಾಮ, ಸೀತೆ, ಲಕ್ಷ್ಮಣರು ಈ ಸ್ಥಳವನ್ನು ತಲುಪಿದಾಗ, ಸೀತೆಯ ದಾಹವನ್ನು ತಣ ಸಲು ಶ್ರೀರಾಮನು ತನ್ನ ಧನುಸ್ಸಿನಿಂದ ಒಂದು ಬಾಣವನ್ನು ಬಿಟ್ಟನಂತೆ, ಆಗ ಉದ್ಭವಿಸಿದಳೇ ಶರಾವತಿ. ಶರ ಎಂದರೆ ಬಾಣ. ಈ ಸ್ಥಳದ ಹೆಸರು ಅಂಬುತೀರ್ಥ .’ಅಂಬು’ ಎಂದರೆ ಬಾಣ, ಅಂಬುವಿನಿಂದ ಚಿಮ್ಮಿದ ಜಲ, ಸೀತೆಯ ದಾಹವನ್ನು ತಣ ಸಿದ್ದರಿಂದ ‘ಅಂಬುತೀರ್ಥ’ ಎಂಬ ಹೆಸರಾಯಿತು. ಮುಂದೆ ನಾಲ್ಕು ಕಿ.ಮೀ. ದೂರದಲ್ಲಿ ತುಂಟ ಮಕ್ಕಳು ಜಿಗಿಯುವಂತೆ ಶರಾವತಿಯೂ ಅರಳಿಸುರಳಿ ಗ್ರಾಮದಲ್ಲಿ ‘ಅಚ್ಚಕನ್ಯ ಜಲಪಾತ‘ ಎಂಬ ಹೆಸರಿನಿಂದ, ಇಪ್ಪತ್ತು ಅಡಿ ಎತ್ತರದ ಬಂಡೆಯಿಂದ ಜಿಗಿಯುವ ದೃಶ್ಯ ಮನಮೋಹಕವಾಗಿದೆ. ಶರಾವತಿಯ ಸ್ನೇಹಕ್ಕೆ ಮನಸೋತ ಹಳ್ಳಕೊಳ್ಳಗಳು ಅವಳ ಜೊತೆ ಸೇರಿ ಮುಂದೆ ಸಾಗುವುವು ನಂದಿಹೊಳೆ, ಹರಿದ್ರಾವತಿ, ಮಾವಿನಹೊಳೆ, ಹಿಲ್ಕುಂಜಿ, ಎಣ್ಣೆಹೊಳೆ, ಹರ್ಲಿಹೊಳೆ, ನಾಗೋಡಿ ಹೊಳೆ ಮುಂತಾದವು.. ಲಿಂಗನಮಕ್ಕಿಯ ಬಳಿ, ಇವಳ ಹರಿವಿಗೆ ತಡೆಯೊಡ್ಡುವ ಯತ್ನದ ಫಲ-ಲಿಂಗನಮಕ್ಕಿ ಜಲಾಶಯ. ಆದರೆ ಗಂಗೆಯನ್ನು ಹಿಡಿದಿಡಲು ಸಾಧ್ಯವಾದೀತೆ? ಮಳೆಗಾಲದಲ್ಲಿ ತನ್ನೆಲ್ಲಾ ಬಲವನ್ನು ಒಗ್ಗೂಡಿಸಿ ಜೋಗದಲ್ಲಿ ವಿಶ್ವವಿಖ್ಯಾತ ಜಲಪಾತವಾಗಿ 900 ಅಡಿ ಎತ್ತರದಿಂದ ರಭಸವಾಗಿ ಧುಮ್ಮಿಕ್ಕುವ ಸೊಬಗನ್ನು ಮೂಗೂರು ಮಲ್ಲಪ್ಪನವರ ಮಾತಿನಲ್ಲೇ ಕೇಳಿದರೆ ಸೊಗಸುಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ / ಸಾಯೋತನಕ ಸಂಸಾರ್ದೊಳಗೆ ಗಂಡಾಗುಂಡಿ /ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ / ಇರೋದ್ರೊಳಗೆ ನೋಡು ಒಮ್ಮೆ ಜೋಗದ ಗುಂಡಿ.” ಜೋಗದ ಸಿರಿಯನ್ನು ಕಂಡು ಸಂತಸ ಪಡಿ ಎಂದು ಕವಿಯೊಬ್ಬ ಕರೆಕೊಟ್ಟರೆ, ವಿಜ್ಞಾನಿಯಾದ ಸರ್.ಎಮ್.ವಿಶ್ವೇಶ್ವರಯ್ಯನವರು ಜೋಗ ಜಲಪಾತವನ್ನು ಕಂಡಾಗ ನುಡಿದದ್ದು ‘ವಾಟ್ ಎ ವೇಸ್ಟ್ ಆಫ್ ಎನರ್ಜಿ? ‘ (ಅಬ್ಬಾ, ಎಷ್ಟೊಂದು ಶಕ್ತಿಯ ಅಪವ್ಯಯ) ಮುಂದೆ ಇಲ್ಲಿ ಜಲವಿದ್ಯುತ್ ಸ್ಥಾವರಗಳು ನಿರ್ಮಾಣವಾದವು. ಇಂದು ಈ ಜಲ ವಿದ್ಯುದಾಗಾರಗಳು ಕನ್ನಡ ನಾಡಿನ ಮೂಲೆಮೂಲೆಗೂ ಬೆಳಕನ್ನು ನೀಡುತ್ತಿವೆ.

ಜೋಗ ಜಲಪಾತ


ಶರಾವತಿ ಹಿನ್ನೀರಿನಲ್ಲಿ ಲಾಂಚ್‌ನಲ್ಲಿ ಕುಳಿತು ಸಿಗಂದೂರು ಚೌಡೇಶ್ವರಿ ಅಮ್ಮನವರ ದೇಗುಲಕ್ಕೆ ಹೋಗುವುದೇ ಒಂದು ಸೊಗಸಾದ ಅನುಭವ. ಭಕ್ತರ ಇಚ್ಛೆಯನ್ನು ಪೂರೈಸುತ್ತಾ ದೇವಿ ಇಲ್ಲಿ ನೆಲೆಯಾಗಿರುವಳು. ಮಲೆನಾಡಿನ ರೈತರ ತೋಟಗಳಲ್ಲಿ ‘ಈ ತೋಟದಲ್ಲಿ ಕಳ್ಳತನ ಮಾಡಿದರೆ ತಾಯಿ ಚೌಡೇಶ್ವರಿಯ ಶಾಪಕ್ಕೆ ತುತ್ತಾಗುವಿರಿ ‘ಎಂಬ ಎಚ್ಚರಿಕೆಯ ಫಲಕಗಳು ಸರ್ವೇಸಾಮಾನ್ಯ. ಹಾಗಾಗಿ ಇಲ್ಲಿ ಅಡಿಕೆ ಕಳ್ಳತನ ಮಾಡುವವರಿಗೆ ದೇವಿಯ ಭಯ ಕಾಡುತ್ತದೆ. ಮತ್ತೇನಿದೆ ಶರಾವತಿಯ ಮಡಿಲಲ್ಲಿ ಎನ್ನುವಿರಾ? ಬನ್ನಿ ಯುವ ಜನತೆಗಾಗಿ ಹಲವು ಬಗೆಯ ಜಲಕ್ರೀಡೆಗಳು ಸಾಗರ ತಾಲ್ಲೂಕಿನ ಬಳಿ ಇರುವ ಹೊನ್ನೆಮರಡಿಯಲ್ಲಿ ನಿಮ್ಮನ್ನು ಕೈಬೀಸಿ ಕರೆಯುತ್ತಿವೆ.

ಅಂಬುತೀರ್ಥದಲ್ಲಿ ಹುಟ್ಟಿದ ಈ ಬೆಡಗಿ ಸಾಗಿದ ಪಶ್ಚಿಮ ಘಟ್ಟದ ಹಾದಿಯೆಲ್ಲಾ ಹಸಿರೇ. ಹಲವು ಸಸ್ಯ ಪ್ರಬೇಧಗಳ, ವೈವಿಧ್ಯಮಯ ಪಶು ಪಕ್ಷಿಗಳ ನೆಲೆವೀಡು ಇವಳು. ಹಲವು ಉಪನದಿಗಳೊಂದಿಗೆ ಸೇರಿ ಮುಂದೆ ಸಾಗುವ ಇವಳು ಕನ್ನಡ ನಾಡಿನ ಸರಹದ್ದನ್ನು ದಾಟಲಿಲ್ಲ. ಶಿವಮೊಗ್ಗೆಯಲ್ಲಿ ಜನಿಸಿದವಳು 128 ಕಿ.ಮೀ. ಕ್ರಮಿಸಿ, ಕಾರವಾರದ ಅರಬ್ಬೀ ಸಮುದ್ರದಲ್ಲಿ ಲೀನವಾಗುವಳು.

‘ಲಿಂಗನಮಕ್ಕಿ ಜಲಾಶಯ’ದ ನಿರ್ಮಾಣ ಖ್ಯಾತ ಲೇಖಕ ನಾ. ಡಿಸೋಜರವರನ್ನು ಕಾಡಿದ್ದು ಹೇಗೆ? ಅವರ ಕೃತಿಗಳಲ್ಲಿ ಎದೆಯೊಳಗೆ ಸಂಭ್ರಮ ಉಂಟು ಮಾಡುವ ಶರಾವತಿಯ ಚಿತ್ರಣದ ಜೊತೆಜೊತೆಗೇ ಲಿಂಗನಮಕ್ಕಿ ಜಲಾಶಯದ ನಿರ್ಮಾಣವಾದಾಗ ಮುಳುಗಡೆಯಾಗಿರುವ ಹತ್ತು ಹಲವು ಗ್ರಾಮಗಳ ಚೀತ್ಕಾರ, ಗ್ರಾಮಸ್ಥರ ಗೋಳು ಪ್ರತಿಧ್ವನಿಸುತ್ತದೆ. ಅಭಿವೃದ್ದಿ ಹಾಗೂ ಪ್ರಕೃತಿಯ ಸಂರಕ್ಷಣೆ ಎರಡೂ ಜೊತೆಗೂಡಿ ನಡೆದರೆ ಎಷ್ಟು ಸೊಗಸಲ್ಲವೇ?

ಈ ಲೇಖನ ಸರಣಿಯ ಹಿಂದಿನ ಲೇಖನ ಇಲ್ಲಿದೆ: https://surahonne.com/?p=37670

(ಮುಂದುವರೆಯುವುದು)
ಡಾ. ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

3 Responses

  1. ಮಲೆನಾಡಿನ ಜೀವನಾಡಿ ಮುಂದುವರದ ಭಾಗ ಸೊಗಸಾದ ನಿರೂಪಣೆ ಯೊಂದಿಗೆ ಮುಕ್ತಾಯವಾಗಿ ಮುದ ಕೊಟ್ಟಿತು ಧನ್ಯವಾದಗಳು ಮೇಡಂ.

  2. Padma Anand says:

    ಶರಾವತಿಯ ಉಗಮ ಒನಪು ವಯ್ಯಾರಗಳ ಚಂದದ ನಿರೂಪಣೆ.

  3. ಶಂಕರಿ ಶರ್ಮ says:

    ಮಲೆನಾಡಿನ ಜೀವನಾಡಿಗಳಲ್ಲಿ ಒಂದಾದ ಶರಾವತಿಯ ಉಗಮ, ಗಮನ, ಜಲಪಾತದ ಮೂಲಕ ನಿರ್ಗಮನ….ಬಹಳ ಚಂದದ ನಿರೂಪಣೆ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: