ನನ್ನ ಉಸಿರಾದ ಅಕ್ಕ

Share Button

ಡಾ. ಎಚ್ ಎಸ್. ಅನುಪಮಾ ವಿರಚಿತ ಮಹಾದೇವಿಯಕ್ಕನ ಕುರಿತ ಕಾದಂಬರಿ – ‘ಬೆಳಗಿನೊಳಗು’ ಓದಲು ಕೈಗೆತ್ತಿಕೊಂಡೆ. ಪುಸ್ತಕದ ಗಾತ್ರ ತುಸು ಹಿರಿದೇ. ನನ್ನ ಬಿಡುವಿಲ್ಲದ ದಿನಚರಿಯ ನಡುವೆ ಈ ಪುಸ್ತಕವನ್ನು ಓದಲು ಆದೀತೆ ಎಂಬ ಆತಂಕ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯಳಾಗಿರುವ ಗೆಳತಿ ಮಂಜುಳಾ ನೀಡಿದ್ದ ಪುಸ್ತಕವಾದ್ದರಿಂದ, ಆದಷ್ಟು ಬೇಗ ಓದಿ ಹಿಂತಿರುಗಿಸಬೇಕಿತ್ತು. ಮಹಾದೇವಿಯಕ್ಕನ ಬಗ್ಗೆ ಬರೆದ ಕಾದಂಬರಿ ಎಂದರೆ – ಶಿವ ಪಾರ್ವತಿಯರ ವರಪ್ರಸಾದದಿಂದ ಹುಟ್ಟಿದ ಕೂಸು, ಪೌರಾಣಿಕ ಕಥೆಯ ಹಂದರವಿರಬಹುದೇ ಅಥವಾ ಆಧ್ಯಾತ್ಮದ ಆಳ ಅಗಲದ ಹರಿವಿನಲ್ಲಿ ತೇಲಿಸಬಹುದೇನೋ ಎಂಬ ಭಾವಗಳು ಮನದಲ್ಲಿ ಸುಳಿದು ಹೋದವು. ಹೀಗೆ ಉಂಟಾದ ಅನಿಸಿಕೆಗಳ ಮಧ್ಯೆ ಪುಸ್ತಕ ಹಿಡಿದು ಕೂತೆ. ಮುಂದೆ ಏನಾಯಿತೋ ಗೊತ್ತಿಲ್ಲ, ಹಸಿವು, ನಿದ್ರೆ ಮರೆತಾಯಿತು, ಮನದ ತುಂಬಾ ಅಕ್ಕನ ಬಾಳಿನ ಪುಟಗಳು ಒಂದೊಂದಾಗಿ ತೆರೆದು ಕೊಂಡವು. ಅವಳ ಕಾಲದ ಸಾಮಾಜಿಕ, ಧಾರ್ಮಿಕ, ವ್ಯಾವಹಾರಿಕ ಸ್ಥಿತ್ಯಂತರಗಳು ಕಣ್ಣ ಮುಂದೆ ಹಾದು ಹೋದವು. ಅಕ್ಕನ ಸಮಕಾಲೀನಳಾಗಿ ಅವಳೊಂದಿಗೇ ಉಡುತಡಿಯಲ್ಲಿ ಓಡಾಡಿದೆ. ಕೌಶಿಕ ದೊರೆಯನ್ನು (ಕಾದಂಬರಿಯಲ್ಲಿ ಬರುವ ಹೆಸರು – ಕಸಪಯ್ಯ ನಾಯಕ) ವರಿಸಿದ ಮಹಾದೇವಿಯ ಸಂಘರ್ಷದಲ್ಲಿ ಪಾಲ್ಗೊಂಡೆ. ಅವನೊಡನೆ ಬಾಳುವುದು ಅಸಾಧ್ಯ ಎಂದೆನಿಸಿ ಮಹಾದೇವಿ, ಈ ಭವಬಂಧನವನ್ನು ಕಿತ್ತೊಗೆದು ಕಲ್ಯಾಣದತ್ತ ಹೆಜ್ಜೆ ಹಾಕಿದಾಗ ಅವಳ ಸಂಗಾತಿಯಾದೆ, ಮುಂದೆ ಕಲ್ಯಾಣದ ಅನುಭವ ಮಂಟಪದಲ್ಲಿ ಶಿವ ಶರಣರು ಮಹಾದೇವಿಗೆ ಅಕ್ಕನ ಪಟ್ಟ ನೀಡಿದಾಗ ಸಂಭ್ರಮಿಸಿದೆ. ಅಲ್ಲಿಂದ ಅಕ್ಕ ಶ್ರೀಶೈಲ ಗಿರಿಯತ್ತ ಧಾವಿಸಿದಾಗ, ಅವಳ ಮನೋಸ್ಥೈರ್ಯಕ್ಕೆ ಬೆರಗಾದೆ. ಅಕ್ಕ ಮಹಾದೇವಿ ಕದಳಿವನದಲ್ಲಿ ಚೆನ್ನಮಲ್ಲಿಕಾರ್ಜುನನೊಂದಿಗೆ ಐಕ್ಯಳಾದಾಗ ಆ ದಿವ್ಯಜ್ಯೋತಿಯಲ್ಲಿ ಮಿಂದು ಪುಳಕಿತಳಾದೆ. ತನ್ನ ಬಾಳಿನುದ್ದಕ್ಕೂ ನಡೆದ ಸಂಘರ್ಷಗಳನ್ನು ಎದುರಿಸಿ ಗಟ್ಟಿಯಾಗಿ ನಿಂತು ಆಗಸದೆತ್ತರಕ್ಕೆ ಬೆಳೆದ ವಿಸ್ಮಯವನ್ನು ಕಂಡೆ. ಅವಳು ಪದ ಕಟ್ಟಿ ಹಾಡಿದ ವಚನಗಳ ಸವಿಯನ್ನು ಚಪ್ಪರಿಸಿದೆ.

‘ಬೆಳಗಿನೊಳಗು‘ ಕಾದಂಬರಿಯ ಕೊನೆಯ ಪುಟ ತಿರುಗಿಸಿದಾಗ, ಪುಸ್ತಕವನ್ನು ಕೆಳಗಿಡುವ ಮನಸ್ಥಿತಿಯಿರಲಿಲ್ಲ, ಮತ್ತೆ ಮತ್ತೆ ಓದುವ ಮನಸ್ಸು. ಅಕ್ಕನನ್ನೇ ಧ್ಯಾನಿಸುತ್ತಾ ಶ್ರೀ ಶಿವಗಂಗಾ ಯೋಗಕೇಂದ್ರಕ್ಕೆ ಹೋದಾಗ ಸಂತಸದ ಸುದ್ದಿಯೊಂದು ನನಗಾಗಿ ಕಾಯುತ್ತಿತ್ತು. ಉಡುತಡಿಯಲ್ಲಿ ಮಹಾದೇವಿಯಕ್ಕನ ಪುತ್ಥಳಿಯ ಅನಾವರಣ ಕಾರ್ಯಕ್ರಮಕ್ಕೆ ಬರಲು ಇಚ್ಛಿಸುವವರು ಹೆಸರು ನೊಂದಾಯಿಸಿ ಎಂದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪತಿದೇವರ ಬಳಿ ಅನುಮತಿ ಕೇಳಿದಾಗ ಅವರು ಮನಃಪೂರ್ವಕವಾಗಿ ಒಪ್ಪಿಗೆ ನೀಡಿದರು. ಬಹುಶಃ ಕೌಶಿಕ ದೊರೆಯನ್ನು ಧಿಕ್ಕರಿಸಿ ನಡೆದ ಅಕ್ಕನ ನೆನಪಾಯಿತೇನೋ ಅಥವಾ ತಾನು – ಹೂಂ ಎಂದರೂ ಊಹೂಂ ಎಂದರೂ, ಇವಳು ಕಾರ್ಯಕ್ರಮಕ್ಕೆ ಹೋಗುವುದು ಗಟ್ಟಿ ಎನ್ನಿಸಿತೇನೋ?

ಮಾರ್ಚ್ 15, 2023 ರಂದು ಮುಂಜಾನೆ ಎಂಟು ಗಂಟೆಗೇ ಯೋಗಕೇಂದ್ರದ ಬಳಿ ಸೇರಿ, ಅಕ್ಕ ಹುಟ್ಟಿ ಬೆಳೆದ ಉಡುತಡಿಗೆ ಹೊರಟೆವು. ಪ್ರಯಾಣದ ಹಾದಿಯಲ್ಲಿ ಹಲವೆಡೆ ‘ಉಡುಗಣಿ’ ಎಂಬ ಫಲಕಗಳು ಕಾಣುತ್ತಿದ್ದವು. ಈ ಊರಿನ ಹೆಸರು ಉಡುಗಣಿಯೋ ಅಥವಾ ಉಡುತಡಿಯೋ ಎಂಬ ಗೊಂದಲ ಮೂಡಿತ್ತು. ಆಗ ನನ್ನ ಗೆಳತಿಯೊಬ್ಬಳು ಹೇಳಿದ ಮಾತು -ತನ್ನ ಪತಿಯೊಡನೆ ಸಂಘರ್ಷ ನಡೆದಾಗ ಮಹಾದೇವಿ ತಾನುಟ್ಟ ವಸ್ತ್ರಗಳನ್ನು ಕಿತ್ತೆಸೆದು ಹೊರಟು ನಿಂತಾಗ, ಆ ಊರಿನ ಹಿರಿಯರು, ನಿಲ್ಲು ಮಗಳೇ, ಉದ್ವೇಗಕ್ಕೆ ಒಳಗಾಗಬೇಡ ತಡಿ, ವಸ್ತ್ರವನ್ನು ಉಡು ಎಂದು ಸಾಂತ್ವನ ಹೇಳಿದರಂತೆ. ಹಾಗಾಗಿ ಉಡು ತಡಿ ಎಂಬ ಹೆಸರು ಬಂತಂತೆ ಈ ಊರಿಗೆ.

ನಾವೆಲ್ಲಾ ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದುದರಿಂದ ಓಂಕಾರದೊಂದಿಗೆ ನಮ್ಮ ಪ್ರಯಾಣ ಆರಂಭಿಸಿದೆವು. ನಂತರ ವಿಜಯಾ ಮೇಡಂ ಹೇಳಿಕೊಟ್ಟ ವಿನಾಯಕನ ಸ್ತೋತ್ರ ಹೇಳಿದೆವು. ನಂತರದಲ್ಲಿ ಅಕ್ಕನ ವಚನಗಳನ್ನು ಹಾಡುತ್ತಾ ಕೇಳುತ್ತಾ ನಲಿದೆವು. ಶಿಲ್ಪಾ ಹೇಳಿದ -”ಅಕ್ಕಾ ಕೇಳವ್ವಾ ನಾನೊಂದ ಕನಸ ಕಂಡೆ” ವಚನದಲ್ಲಿ ಬರುವ ಸುಲಿಪಲ್ಲ ಗೊರವನನ್ನು ಕಂಡು ಹಿಗ್ಗಿದೆವು. ಸುಮ ಹಾಡಿದ – ”ಬೆಟ್ಟದಾ ಮೇಲೊಂದು ಮನೆಯ ಮಾಡಿ .. ” ವಚನ ಕೇಳಿದಾಗ ಅಕ್ಕನ ಲೋಕಾನುಭವ ನಮ್ಮ ಕಣ್ಣು ತೆರೆಸಿತ್ತು. ಮುಂದೆ ಕನ್ನಡ ಸಿನೆಮಾವೊಂದರಲ್ಲಿ ಅಳವಡಿಸಿದ ”ತನು ಕರಗದವರಲ್ಲಿ” .. ವಚನ ಗಾಯನಕ್ಕೆ ಎಲ್ಲರೂ ಧ್ವನಿಗೂಡಿಸಿದೆವು. ಭಗವಂತನಿಗೆ ತನ್ನ ಭಕ್ತನಿಂದ ಬಯಸುವುದು ಬಾಹ್ಯ ಆಡಂಬರದ ಪೂಜೆಯನ್ನಲ್ಲ, ಬದಲಿಗೆ ಪರಿಶುದ್ಧವಾದ ಭಕ್ತಿ, ನಿಷ್ಟೆಯನ್ನು ಎಂಬ ಭಾವ ಈ ವಚನದಲ್ಲಿ. ಹೀಗೆ ಅಕ್ಕನ ವಚನಗಳನ್ನು ಹಾಡುತ್ತಾ ಉಡುತಡಿ ತಲುಪಿದೆವು. ಉಡುತಡಿಯನ್ನು ತಳಿರು ತೋರಣಗಳಿಂದ ಅಲಂಕರಿಸಿದ್ದರು, ಸುತ್ತಮುತ್ತಲಿವ ಹಳ್ಳಗಳಿಂದ ಜನರು ತಂಡ ತಂಡವಾಗಿ ಆಗಮಿಸುತ್ತಿದ್ದರು. ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ತನ್ನ ರಥದಲ್ಲಿ ಬಂದ ಸೂರ್ಯನು ಮೈಮರೆತು ಅಲ್ಲಿಯೇ ನಿಂತುಬಿಟ್ಟ. ಜನರು ಈ ಬಿರುಬಿಸಿಲಿನಲ್ಲಿ ಕಂಗೆಟ್ಟರೂ ಸರತಿ ಸಾಲಿನಲ್ಲಿ ನಿಂತು ಅಕ್ಕನ ದರ್ಶನ ಪಡೆಯುತ್ತಿದ್ದರು. ಅವಳಿಗೆಂದು ನಿರ್ಮಿಸಿದ ಗುಹೆ ಹೊಕ್ಕು ಬಂದೆವು,

ಅಕ್ಕನ ಪುತ್ಥಳಿ – ಉಡುತಡಿ

ಅಕ್ಕನ ಪುತ್ಥಳಿ ಆಗಸದೆತ್ತರ ನಿಂತಿತ್ತು – ಅಕ್ಕನ ಮುಖದ ಮೇಲಿನ ಮಂದಹಾಸ, ಅವಳು ಕುಳಿತ ಪದ್ಮಾಸನದ ಭಂಗಿ, ಅವಳ ದೇಹವನ್ನು ಮುಚ್ಚಿದ್ದ ವಿಫುಲವಾದ ಕೇಶರಾಶಿ, ಅವಳು ಹಿಡಿದಿದ್ದ ಇಷ್ಟಲಿಂಗದ ಮೇಲೆ ಹೊಳೆಯುತ್ತಿದ್ದ ಬಿಸಿಲಿನ ಕಿರಣಗಳನ್ನು ನೋಡುತ್ತಾ ಮೈಮರೆತವಳನ್ನು ಪುಟ್ಟ ಹುಡುಗಿಯೊಬ್ಬಳು ಎಚ್ಚರಿಸಿದಳು. ಅವಳಿಗೆ ನನ್ನ ಬಳಿಯಿದ್ದ ನೀರು ಬೇಕಿತ್ತು. ಅವಳು ನೀರನ್ನು ಗುಟುಕು ಗುಟುಕಾಗಿ ಕುಡಿಯುತ್ತಿರುವಾಗ ಅವಳನ್ನೇ ಗಮನಿಸಿದೆ. ಆರೇಳು ವರ್ಷವಿರಬಹುದು, ಮುದ್ದಾದ ಹುಡುಗಿ, ಬಟ್ಟಲು ಕಂಗಳು, ನೀಳವಾದ ಮೂಗು, ದಟ್ಟವಾದ ಕೂದಲು ಮುಖದ ಮೇಲೆಲ್ಲಾ ಹರಡಿತ್ತು. ಯಾವುದೇ ಸಂಕೋಚವಿಲ್ಲದೆ ನನ್ನ ಬಳಿ ಹರಟಿದಳು – ಈ ಮೂರ್ತಿ ಯಾರದು? ಯಾಕಿಷ್ಟು ಜನ ಸೇರಿದ್ದಾರೆ? ಇತ್ಯಾದಿ. ಅಷ್ಟೊತ್ತಿಗೆ ಅವಳಮ್ಮ ಅವಳನ್ನರಸುತ್ತಾ ಅಲ್ಲಿಗೆ ಬಂದಳು. ಈ ಮಗುವಿನ ಮುಗ್ಧತೆ, ಕುತೂಹಲ, ಮುಖದ ಮೇಲಿನ ಕಾಂತಿಯನ್ನು ನೋಡಿದಾಗ ಅವಳಲ್ಲಿ ನನಗೆ ಪುಟ್ಟ ಮಹಾದೇವಿ ಕಂಡಿದ್ದಳು, ಕಾಕತಾಳಿಯವೆಂಬಂತೆ ಅವಳ ಹೆಸರೂ ಮಹಾದೇವಿಯಾಗಿತ್ತು. ಸಭಾಂಗಣದಲ್ಲಿ ಗಾಯಕಿಯೊಬ್ಬಳು ಅಕ್ಕನ ವಚನಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದಳು. ಹಾಡುವಾಗ ಅವಳು ಕಣ್ಣುಮುಚ್ಚಿ ಅನುಭವಿಸುತ್ತಿದ್ದ ತನ್ಮಯತೆ ನೋಡಿದಾಗ ಅಕ್ಕನ ವ್ಯಕ್ತಿತ್ವ ನಿಧಾನವಾಗಿ ಅವಳಲ್ಲಿ ಹರಳುಗಟ್ಟುತ್ತಿರುವುದನ್ನು ಕಂಡೆ. ಅಕ್ಕ ಬೆಳೆದು ದೊಡ್ಡವಳಾದಾಗ ಈ ಹದಿ ಹರೆಯದ ಹುಡುಗಿಯ ಹಾಗಿದ್ದಿರಬಹುದೇನೋ ಎಂಬ ಅನಿಸಿಕೆ ಮೂಡಿತ್ತು. ಅಷ್ಟರಲ್ಲಿ ಹಿಂದಿನಿಂದ ಗಟ್ಟಿಯಾದ ಮಾತುಗಳು ಕೇಳಿ ಬಂದವು. ನಾನು ಹಿಂತಿರುಗಿ ನೋಡಿದಾಗ ಸಮಾರಂಭಕ್ಕೆಂದು ಹೊರಟು ಬಂದಿದ್ದ ಹೆಣ್ಣೊಬ್ಬಳನ್ನು ಅವಳ ಗಂಡ ಬಯ್ಯುತ್ತಿದ್ದ. ಆದರೆ ಆ ಹೆಣ್ಣು ಅವನೆಡೆ ತಿರುಗಿಯೂ ನೋಡದೆ ಮುಂದಿದ್ದ ಕುರ್ಚಿಯ ಮೇಲೆ ಗಟ್ಟಿಯಾಗಿ ಕುಳಿತಳು. ಕೌಶಿಕನನ್ನು ತ್ಯಜಿಸಿ ಹೊರಟ ಅಕ್ಕ ಅವಳಲ್ಲಿ ನನಗೆ ಕಂಡಳು. ಆಗೊಂದು ಸನ್ಯಾಸಿನಿಯರ ತಂಡ ಬಿಳಿ ಉಡುಪು ಧರಿಸಿ ಏಕತಾರಿ ಹಿಡಿದು ಅಕ್ಕನ ವಚನಗಳನ್ನು ಹಾಡುತ್ತಾ ಅಕ್ಕನ ಮೂರ್ತಿಯ ಬಳಿ ಬಂದು ನಿಂತಿತು. ಬಾಳೆಂಬ ಪಥದಲ್ಲಿ ಹಲವು ಎಡರು ತೊಡರುಗಳನ್ನು ಎದುರಿಸಿ ಬಸವಣ್ಣನ ದರ್ಶನಭಾಗ್ಯ ಪಡೆಯಲು ಕಲ್ಯಾಣದೆಡೆಗೆ ಸಾಗಿದ ಅಕ್ಕ ನೆನಪಾದಳು. ಕಲ್ಯಾಣದಿಂದ ಶ್ರೀಶೈಲಕ್ಕೆ ನಡೆದ ಅಕ್ಕನ ವಚನ ನೆನಪಾಗಿತ್ತು – ”ಕದಳಿ ಎಂಬುದು ತನು / ಕದಳಿ ಎಂಬುದು ಮನ / ಕದಳಿ ಎಂಬುದು ವಿಷಯಂಗಳು / ಈ ಕದಳಿ ಎಂಬುವ ಗೆದ್ದು ತವೆ ಬದುಕಿ ಬಂದು / ಕದಳಿಯ ಬನದಲ್ಲಿ ಭವಹರನ ಕಂಡೆನು ಭಾವ / ಗೆದ್ದು ಬಂದ ಮಗಳೇ ಎಂದು ಕರುಣದಿ ತೆಗೆದು / ಬಿಗಿದಪ್ಪಿದೆಡೆ ಚೆನ್ನಮಲ್ಲಿಕಾರ್ಜುನನ ಹೃದಯ /ಕಮಲದಲ್ಲಿ ಅಡಗಿದೆನು”

ಅಕ್ಕನ ಭವ್ಯವಾದ ವಿಗ್ರಹ ಲೋಕಾರ್ಪಣೆಗೊಂಡಿತ್ತು. ಮನೆಗೆ ಹಿಂತಿರುಗುವಾಗ ಉಡುತಡಿಯ ಮಹಾದೇವಿ ನಾಡಿನೆಲ್ಲೆಡೆ ಬೆಳಗಿದ್ದು ಹೇಗೆ ಎಂಬ ಚಿಂತನೆ ಮನದಲ್ಲಿ ನಡೆದಿತ್ತು. ಕಲ್ಯಾಣದ ಶರಣರು ಮಹಾದೇವಿಗೆ ನೀಡಿದ ಬಿರುದು ‘ಅಕ್ಕನೆಂದು’. ತನ್ನ ವಚನ ಸಾಹಿತ್ಯದ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದಲು ಯತ್ನಿಸಿದ ವಚನಕಾರ್ತಿ ಮಹಾದೇವಿಯಕ್ಕ. ಅಕ್ಕ ಒಂದು ಹೆಣ್ಣಲ್ಲ, ಒಬ್ಬ ವ್ಯಕ್ತಿಯಲ್ಲ. ಎಲ್ಲಾ ಹೆಣ್ಣುಮಕ್ಕಳ ಎದೆಯ ಬಡಿತ, ಉಸಿರು, ರಕ್ತದ ಕಣಕಣದಲ್ಲಿರುವ ಗಟ್ಟಿತನ, ಸವಾಲುಗಳನ್ನು ಎದುರಿಸಲು ಬೇಕಾದ ಧೈರ್ಯ, ಸ್ಥೈರ್ಯ ನೀಡುವ ಶಕ್ತಿ ಎನ್ನುವ ಭಾವ ನನ್ನಲ್ಲಿ ಮೂಡಿತ್ತು.

ಡಾ. ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

9 Responses

  1. ನನ್ನ ಉಸಿರಾದ ಅಕ್ಕ..ಬೆಳಗಿನೊಳು ಕಾದಂಬರಿಯ…ಓದು ಅದರಿಂದ ತಮ್ಮಲ್ಲುಂಟಾದ ಅನುಭವದ ಬುತ್ತಿಯನ್ನು..ಪಡಿಮೂಡಿಸಿರುವ ರೀತಿ ಪುಸ್ತಕ ವನ್ನು ಓದಬೇಕೆಂಬ ಹಂಬಲ ಹುಟ್ಟಿ ಸುವಂತಿದೆ..ಧನ್ಯವಾದಗಳು ಗಾಯತ್ರಿ ಮೇಡಂ.

  2. padmini kadambi says:

    ಪರಿಚಿತ ಅಕ್ಕನನ್ನು ಪರಿಚಯಿಸುವ ರೀತಿ ವಿಶಿಷ್ಟವಾಗಿದೆ

  3. ಸಹೃದಯ ಓದುವರಾದ ನಾಗರತ್ನ ಮತ್ತು ಪದ್ಮಿನಿಯವರಿಗೆ ನನ್ನ ಧನ್ಯವಾದಗಳು

  4. ನಯನ ಬಜಕೂಡ್ಲು says:

    Very nice

  5. Padma Anand says:

    ಪುಸ್ತಕ ಪರಿಚಯದಂತೆ ಪ್ರಾರಂಭವಾದ ಲೇಖನ, ಪ್ರವಾಸೀ ಕಥನವಾಗಿ ಮುಂದುವರೆದು ಅಕ್ಕ ನೀಡಿದ ಆಧ್ಯಾತ್ಮ ತತ್ವಗಳ ಸಾರವನ್ನು ತಿಳಿಯುವ ಹಸಿವನ್ನು ಮನದಲ್ಲಿ ಹುಟ್ಟಿಸುವುದರಲ್ಲಿ ಅತ್ಯಂತ ಸಫಲವಾಗಿದೆ. ಅಭಿನಂದನೆಗಳು.

  6. ಶಂಕರಿ ಶರ್ಮ says:

    ಅಕ್ಕಮಹಾದೇವಿ ಪುತ್ಥಳಿಯ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಹಾಜರಾಗಲು ಹೊರಟ ತಮ್ಮ ಪ್ರವಾಸದ ಅನುಭವ, ಅವರ ಕುರಿತ ಹೊತ್ತಗೆಯ ಸೂಕ್ಷ್ಮ ಪರಿಚಯ ಎಲ್ಲವೂ ಸೊಗಸಾಗಿ ಮೂಡಿಬಂದಿವೆ ಮೇಡಂ.

  7. ವಂದನೆಗಳು ಸೋದರಿಯರಿಗೆ

  8. ಮಂಜುರಾಜ್ ಮೈಸೂರು (H N Manjuraj) says:

    ಮಹದೇವಿಯಕ್ಕ ಎಲ್ಲ ಕಾಲದ ಅಂತಃಚಕ್ಷು. ಹೆಂಗರುಳಿನ ಪುರುಷನಿಗೂ ಧೀಮಂತ ಮಹಿಳೆಗೂ ಕಾಡುವ ನಿತ್ಯಸತ್ಯ. ಅವಳಿಲ್ಲದ ಚನ್ನಮಲ್ಲ ಪರಿಪೂರ್ಣನಲ್ಲ.
    ಆ ಮಟ್ಟಿಗೆ ಆಕೆ ವಚನಕೇಂದ್ರಿತ ಮತ್ತು ವಾಚಕಕೇಂದ್ರಿತ.

    ಇಂಥವಳ ಧ್ಯಾನಸ್ಥ ಪ್ರತಿಮೆ ಉಡುತಡಿಯಲ್ಲಿ ಪ್ರತಿಷ್ಠಾಪಿತವಾದದ್ದು ಹೆಮ್ಮೆ ತಂದ ಸಂಗತಿ. ನಿಮ್ಮ ಬರೆಹದಿಂದ ಆ ಪ್ರತಿಮೆಯೊಂದಿಗೇ ಸಂವಾದಿಸಿದಂತಾಯಿತು. ನಿಮ್ಮ ಅನುಭವ ಅನುಭಾವವಾಗಿ ಹೊರಹೊಮ್ಮಿದೆ. ಪರಿಚಯಿಸಿದ್ದಕೆ ಧನ್ಯವಾದಗಳು ಮತ್ತು ಪ್ರಕಟಿಸಿದ್ದಕ್ಕೆ ಸುರಹೊನ್ನೆಗೆ ಕೃತಜ್ಞತೆಗಳು.

  9. Thanks a lot for your responses

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: