ಜೂನ್ ನಲ್ಲಿ ಜೂಲೇ : ಹನಿ 17

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಪ್ಯಾಂಗೋಂಗ್ ಸರೋವರ -‘ತ್ರೀ ಈಡಿಯಟ್ಸ್’


ಸಂಜೆ ಪ್ಯಾಂಗೋಂಗ್ ಸರೋವರದ ದಡ ತಲಪಿದೆವು. ಸಮುದ್ರ ಮಟ್ಟದಿಂದ 12930 ಅಡಿ ಎತ್ತರದಲ್ಲಿರುವ ಇದು  ಇದು ಪ್ರಪಂಚದಲ್ಲಿ  ಅತಿ ಎತ್ತರದಲ್ಲಿರುವ ‘ಉಪ್ಪು ನೀರಿನ ಸರೋವರ’ . ಅಂದಾಜು 160 ಕಿ.ಮೀ ಉದ್ದವಿರುವ ಹಾಗು ಒಂದು ಕಿ,ಮೀ ಅಗಲವಿರುವ ಈ ಸರೋವರದ  30 ಕಿ.ಮೀಗಳಷ್ಟು ಭಾಗ ಮಾತ್ರ ಭಾರತಕ್ಕೆ ಸೇರಿದೆ. ಹೆಚ್ಚಿನ ಭಾಗ ಟಿಬೆಟ್/ಚೀನಾಕ್ಕೆ ಸೇರಿದೆ.   ಪ್ರವಾಸಿಗಳಿಗೆ  ಸ್ವಲ್ಪ ಜಾಗಕ್ಕೆ ಮಾತ್ರ  ಹೋಗಲು ಅನುಮತಿಯಿದ್ದು, ಉಳಿದ ಜಾಗವು ಸೇನೆಯ ಸುಪರ್ದಿನಲ್ಲಿದೆ.

ಬಹಳ ಶಾಂತವಾಗಿ  ಅಕ್ಕಪಕ್ಕದ ಬೆಟ್ಟ ಹಾಗೂ ಆಕಾಶದ ಬಣ್ಣವನ್ನು ಪ್ರತಿಫಲಿಸಿ ಕಂಗೊಳಿಸುವ ಈ ಸರೋವರವು  ಇತ್ತೀಚಿನ ವರೆಗೂ ಹೆಚ್ಚಿನವರಿಗೆ ಅಪರಿಚಿತವಾಗಿಯೇ ಇತ್ತು. ಪ್ಯಾಂಗೋಂಗ್ ಸರೋವರದಲ್ಲಿ ಹಗಲಿನ ಸೊಗಸು ಒಂದು ವಿಧವಾದರೆ, ರಾತ್ರಿ ಚಂದ್ರನ ಬೆಳಕಿಗೆ ಇನ್ನಷ್ಟು ಚೆನ್ನಾಗಿ ಕಾಣಿಸುತ್ತಿತ್ತು. ಮಾನಸಸರೋವರದ ಪರಿಸರದ ಹಾಗೆಯೇ ಇದೆ ಎಂದರು ಅಲ್ಲಿಗೆ ಹೋಗಿ ಬಂದಿದ್ದ  ಪ್ರವಾಸಿಗರೊಬ್ಬರು.

2009 ರಲ್ಲಿ , ರಾಜಕುಮಾರ್ ಹಿರಾನಿ ನಿರ್ದೇಶನದ, ಅಮೀರ್ ಖಾನ್ ಮುಖ್ಯ ಪಾತ್ರದಲ್ಲಿರುವ  ‘ತ್ರೀ ಈಡಿಯಟ್ಸ್’ ಸಿನೆಮಾದ ಕೆಲವು ಭಾಗಗಳನ್ನು ಈ ಸರೋವರದ ತಟದಲ್ಲಿ ಚಿತ್ರೀಕರಿಸಿದ್ದರು. ಆ ಚಿತ್ರದ ಯಶಸ್ಸಿನಿಂದಾಗಿ, ಲಡಾಕ್ ನಲ್ಲಿ ಪ್ರವಾಸೋದ್ಯಮ ಬಹಳಷ್ಟು  ಅಭಿವೃದ್ಧಿಗೊಂಡಿದೆ. ಸ್ಥಳೀಯರು ಹೇಳುವ ಪ್ರಕಾರ, ಮೊದಲು ಇಲ್ಲಿಗೆ ವರ್ಷಕ್ಕೆ 500 ಪ್ರವಾಸಿಗರು ಬಂದರೆ ಹೆಚ್ಚು .ಆದರೆ ಈಗ ಮೂರು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗಳ ಅನುಕೂಲಕ್ಕೆ ತಕ್ಕಂತೆ ವಸತಿಗೃಹಗಳು ನಿರ್ಮಾಣಗೊಂಡಿವೆ.

ಸರೋವರದ ದಡದಲ್ಲಿ  ಯಾಕ್ ಮೃಗದ ಮೇಲೆ ಸವಾರಿ, ಸ್ಥಳೀಯ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಪಟ ಕ್ಲಿಕ್ಕಿಸುವ ಅವಕಾಶವಿದೆ. ಜೊತೆಗೆ,  ‘ತ್ರೀ ಈಡಿಯಟ್ಸ್’ ಚಿತ್ರದಲ್ಲಿ ಬಳಸಲಾದ ಹಳದಿ ಬಣ್ಣದ ಸ್ಕೂಟರ್, ‘ಈಡಿಯಟ್ಸ್’ ಗಳು ಅರ್ಧ ಮುಳುಗಿ ಕುಳಿತಿದ್ದ ಡ್ರಮ್ , ಪೀಠೋಪಕರಣ  ಇತ್ಯಾದಿಗಳನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿದ್ದು,  50 ರೂ ಕೊಟ್ಟು  ಅವುಗಳಲ್ಲಿ ಕುಳಿತು ಪಟ ಕ್ಲಿಕ್ಕಿಸಬಹುದು. ಸವಿತಾ, ಭಾರತಿ ಮತ್ತು ನಾನು ‘ತ್ರೀ ಈಡಿಯಟ್ಸ್’ ಆದೆವು! ಈ ಚಲನಚಿತ್ರದಿಂದಾಗಿ  ಲೇಹ್ -ಲಡಾಕ್ ಹೊರಜಗತ್ತಿಗೆ ಹೆಚ್ಚು ತೆರೆದುಕೊಂಡಿತು, ಬಹಳಷ್ಟು ಆಧುನಿಕವಾಗತೊಡಗಿದೆ. ಇದು ಸ್ವಾಗತಾರ್ಹವೂ ಹೌದು, ಆದರೆ  ವಿಪರೀತ ವಾಣಿಜ್ಯೀಕರಣವಾದ ಯಾವುದೇ  ಪ್ರೇಕ್ಷಣೀಯ ಜಾಗಗಳಲ್ಲಿ ಸ್ಥಳೀಯ ಸೊಬಗು, ಸೊಗಡು ಮರೆಯಾಗಿ, ಅನುಕೂಲತೆಗಳು ಹೆಚ್ಚಾಗಿ,  ಪರಿಸರವು ಕಲುಷಿತಗೊಂಡು, ಜನರೂ  ವ್ಯಾವಹಾರಿಕ ಚತುರತೆಯನ್ನು ಮಾತ್ರ ಬೆಳೆಸಿಕೊಳ್ಳುವುದು ವಾಸ್ತವ. ಹಾಗಾಗದಿರಲಿ ಎಂದು ನಮ್ಮ  ಆಶಯ.


ಪ್ಯಾಂಗೋಂಗ್ ಸರೋವರ -‘ತ್ರೀ ಈಡಿಯಟ್ಸ್’

ರಾತ್ರಿಯೂಟ  ಚೆನ್ನಾಗಿಯೇ ಇತ್ತು. ಸೂಪ್, ರೋಟಿ, ದಾಲ್ , ಸಬ್ಜಿ, ಅನ್ನ, ಮೊಸರು ಇತ್ಯಾದಿ ಇದ್ದುವು. ಪ್ಯಾಂಗಾಂಗ್ ಸರೋವರದ ದಂಡೆಯಲ್ಲಿ ನಮಗೆ ಟೆಂಟ್  ವಾಸ್ತವ್ಯ. ಇಲ್ಲಿಯ  ಟೆಂಟ್ ನೋಡಲು ಚೆನ್ನಾಗಿದ್ದರೂ, ಬಿಸಿನೀರಿನ ವ್ಯವಸ್ಥೆ ಸಾಕಷ್ಟಿರಲಿಲ್ಲ. ಶುಚಿತ್ವವೂ ಸುಮಾರಾಗಿತ್ತು. ರಾತ್ರಿ ವಿಪರೀತ ಚಳಿಯಾಗಿತ್ತು. ತೀರ ಗಡಿಬಿಡಿಯಲ್ಲಿ ನಿರ್ಮಿಸಿದ ಟೆಂಟ್ ಗಳಾಗಿದ್ದುವು. ಊಟದ ಹಾಲ್ ಸ್ವಲ್ಪ ದೂರದಲ್ಲಿದ್ದುದರಿಂದ ಆಗಾಗ ಬಿಸಿನೀರು, ಬೆಳಗಿನ ಕಾಫಿ ಕೇಳಿ ಪಡೆಯಲು  ಉದಾಸೀನವಾಗುತ್ತಿತ್ತು. ಒಟ್ಟಿನಲ್ಲಿ. ನುಬ್ರಾ ಕಣಿವೆಯ ಟೆಂಟ್ ನ ವಾಸದಷ್ಟು ಇಲ್ಲಿಯ ಟೆಂಟ್ ವಾಸ ಯಾರಿಗೂ ಖುಶಿಯಾಗಲಿಲ್ಲ. ಆದರೂ, ಇಷ್ಟು ದೂರದ, ದುರ್ಗಮವಾದ ಜಾಗದಲ್ಲಿ  ಅನುಕೂಲತೆಗಳನ್ನು ಕಲ್ಪಿಸಲು ಅವರಿಗೆಷ್ಟು ಕಷ್ಟ ಎಂಬುದನ್ನು ಗಮನಿಸಿ  ಸುಮ್ಮನಾದೆವು.

ಮರುದಿನ  ಬೆಳಗ್ಗೆ, ಉಪಾಹಾರಕ್ಕೆ ಅವಲಕ್ಕಿ ಒಗ್ಗರಣೆ, ಬ್ರೆಡ್ -ಜ್ಯಾಮ್ , ಕಾರ್ನ್ ಫ಼್ಲೇಕ್ಸ್ ಇದ್ದುವು. ನಾವಿದ್ದ ಹೆಚ್ಚಿನ ಕಡೆಯೂ  ಈ ತಿಂಡಿಗಳು ಖಾಯಂ ಆಗಿ ಇದ್ದುವು. ಬಹುಶ : ಸುಲಭದಲ್ಲಿ ತಯಾರಿಸಲು ಸಾಧ್ಯ ಎಂದಿರಬಹುದು.  ಉಪಾಹಾರ ಮುಗಿಸಿ, ಒಂಭತ್ತು ಗಂಟೆಗೆ ಲೇಹ್ ಗೆ ಹಿಂತಿರುಗಿದೆವು.

(ಮುಂದುವರಿಯುವುದು..)
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ :   https://surahonne.com/?p=37538

-ಹೇಮಮಾಲಾ, ಮೈಸೂರು

8 Responses

  1. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ. ತ್ರಿ ಈಡಿಯಟ್ಸ್ ನಂತಹ ಚಿತ್ರ ಚಿತ್ರೀಕರಣಗೊಂಡ ಜಾಗಕ್ಕೆ ಭೇಟಿ ನೀಡುವ ಅವಕಾಶ ಅದೃಷ್ಟ ವೆನ್ನಬಹುದು. ಸಣ್ಣ ಪುಟ್ಟ ತೊಂದರೆಗಳನ್ನು ದೊಡ್ಡದು ಮಾಡದೆ ಹೊಂದಿಕೊಂಡು ಹೋಗುವ ಮನಸ್ಥಿತಿಯ ಪರಿಚಯ ಪ್ರವಾಸ ಹೋಗುವವರಿಗೆ ಮಾದರಿ.

    • Hema says:

      ಆಪ್ತವಾದ ಪ್ರತಿಕ್ರಿಯೆಗೆ ಧನ್ಯವಾದಗಳು ಗೆಳತಿ..

  2. Padma Anand says:

    ಪ್ಯಾಂಗೋಂಗ್ಸ ಸರೋವರದ ವರ್ಣನೆ, ಚಿತ್ರಗಳು, ಅನುಭವಗಳು ಚಂದವಾದ ನಿರೂಪಣೆಯೊಂದಿಗೆ ಮೂಡಿ ಬಂದಿದೆ.

    • Hema says:

      ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು ಗೆಳತಿ..

  3. ಪ್ರವಾಸ ಮಾಡುವುದಷ್ಟೇ ಹೆಗ್ಗಳಿಕೆಯಲ್ಲ ಅದರ ಸವಿಯನ್ನು ಉಣಬಡಿಸುವುದು ಒಂದು ಹೆಗ್ಗಳಿಕೆ.. ಆ ಕಲಸವನ್ನು ಮಾಡುತ್ತಿರುವ ಗೆಳತಿ ಹೇಮಾ ನಿಮಗೆ ಧನ್ಯವಾದಗಳು.

    • Hema says:

      ಎಂದಿನಂತೆ, ಆಪ್ತವಾದ ಪ್ರತಿಕ್ರಿಯೆಗೆ ಧನ್ಯವಾದಗಳು ಗೆಳತಿ..

  4. ಪ್ಯಾಂಗಾಂಗ್ ಸರೋವರದ ತೀರದಲ್ಲಿ ಕುಳಿತು ತ್ರಿ ಈಡಿಯಟ್ಸ್ ಸ್ಟೂಲ್ಗಳ ಮೇಲೆ ಕುಳಿತು ಫೋಟೋ ತೆಗೆಸಿಕೊಂಡಿದ್ದು ನೆನಪಾಯಿತು
    ಚಂದದ ನಿರೂಪಣೆ, ಧನ್ಯವಾದಗಳು

  5. ಶಂಕರಿ ಶರ್ಮ says:

    ತ್ರೀ ಈಡಿಯೆಟ್ಸ್ ಡ್ರಮ್ ನಲ್ಲಿ ಮಜಾ, ಮಜಾ ಕೊಡದ ಟೆಂಟ್ ವಾಸ, ಸುಂದರವಾದ ಸರೋವರದ ಮೇಲೆ ಮೂರು ದೇಶಗಳ ಹಿಡಿತ, ಅವಲಕ್ಕಿ ಒಗ್ಗರೆಣೆಯ ಸವಿ…ಎಲ್ಲದರ ವಿವರಣೆಯೂ ಎಂದಿನಂತೆ ಚಂದ..ಧನ್ಯವಾದಗಳು ಹೇಮಾ.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: