ಸರೋವರಗಳ ನಾಡು ಸ್ಕಾಟ್‌ಲ್ಯಾಂಡ್

Share Button

ಅಂದು ಶನಿವಾರ, ಮುಂಜಾನೆ ಆರು ಗಂಟೆಗೆ ಮಗ ಸೊಸೆ, ಮೊಮ್ಮಕ್ಕಳೊಂದಿಗೆ ಅಬರ್‌ಡೀನ್ ಶೈರ್ ಬಳಿಯಿದ್ದ ಲೇಕ್ ಮುಯಿಚ್‌ಗೆ ಹೊರಟೆವು. ದಾರಿಯುದ್ದಕ್ಕೂ ಮುಗಿಲೆತ್ತರಕ್ಕೆ ನಿಂತಿದ್ದ ಪರ್ವತದ ಶಿಖರಗಳು, ಅಲ್ಲಲ್ಲಿ ಕೋನಿಫೆರಸ್ ಹಾಗೂ ಬರ್ಚ್ ಜಾತಿಯ ಮರದ ನೆಡುತೋಪುಗಳು, ಕುರಿಗಳಿಗೆ ಮತ್ತು ದನಗಳಿಗೇ ಮೀಸಲಾದ ಹುಲ್ಲುಗಾವಲುಗಳು, ಡಾನ್ ನದೀ ತೀರ, ಎಲ್ಲವನ್ನೂ ದಾಟಿ ಮುಯಿಚ್ ಸರೋವರವನ್ನು ತಲುಪಿದ್ದೆವು. ಬೆಟ್ಟದ ತಪ್ಪಲಿನಲ್ಲಿ ಹಾಯಾಗಿ ಮಲಗಿದ್ದ ಮುಯಿಚ್ ಸರೋವರ, ನೀಲಮಣಿಯಂತೆ ಫಳ ಫಳನೆ ಹೊಳೆಯುತ್ತಿತ್ತು. ಅಗಸ್ಟ್ ತಿಂಗಳಾದರೂ ಸೂರ್ಯದೇವನು ನಮಗಾಗಿ ಬೆಚ್ಚನೆಯ ವಾತಾವರಣ ನಿರ್ಮಾಣ ಮಾಡಿದ್ದ. ಬಣ್ಣ ಬಣ್ಣದ ಹೂಗಳು ತಂಗಾಳಿಯೊಂದಿಗೆ ಬಾಗುತ್ತಾ ಬಳುಕುತ್ತಾ ನಮ್ಮನ್ನು ಸ್ವಾಗತಿಸುತ್ತಿದ್ದವು. ಮಲ್ಲೆ, ಜಾಜಿ ಹೂಗಳನ್ನು ಹೋಲುತ್ತಿದ್ದ ಬಳ್ಳಿಯೊಂದು ನಮ್ಮ ಮನೆಯ ಹಿತ್ತಲಿನಲ್ಲಿ ಹರಡಿದ್ದ ಮಲ್ಲಿಗೆಯ ಕಂಪನ್ನು ಪಸರಿಸಿತ್ತು.

ಬಾಲಮೋರಿ ಎಸ್ಟೇಟ್‌ನ ಸಮೀಪವಿರುವ ಈ ಸಿಹಿ ನೀರಿನ ಸರೋವರವು ಮೂರೂವರೆ ಕಿ.ಮೀ. ಉದ್ದವಿದ್ದು ಅರ್ಧ ಕಿ.ಮೀ. ಅಗಲವಾಗಿದೆ. ಸರೋವರದ ಸುತ್ತಲೂ ಚಾರಣಿಗರಿಗೆಂದೇ ಒಂದು ಕಾಲುಹಾದಿಯನ್ನು, ಬೈಸಿಕಲ್ ಮೇಲೆ ಬರುವ ಸವಾರರಿಗೆಂದು ಇನ್ನೊಂದು ಹಾದಿಯನ್ನು ಮಾಡಲಾಗಿದೆ. ಚಾರಣಿಗರ ಹಾದಿ ಹನ್ನೆರೆಡೂವರೆ ಕಿ.ಮೀ. ಇದ್ದು, ಸರೋವರಕ್ಕೊಂದು ಪ್ರದಕ್ಷಿಣೆ ಹಾಕಲು ಸುಮಾರು ಮೂರು ಗಂಟೆಗಳ ಅವಧಿ ಬೇಕಾಗುವುದು. ಈ ಸರೋವರವು ಹಲವು ಬಗೆಯ ಪಕ್ಷಿಗಳು ಹಾಗೂ ವಿಶಿಷ್ಟವಾದ ಪ್ರಾಣಿಗಳ ನೆಲೆಯಾಗಿದೆ. ಈ ಪ್ರದೇಶವನ್ನು ಎತ್ತರವಾದ ಸ್ಥಳ ಎಂದು ಗುರುತಿಸಲಾದೆ. ಸ್ಕಾಟ್‌ಲ್ಯಾಂಡ್‌ನ್ನು ಹೈ ಲ್ಯಾಂಡ್ ಮತ್ತು ಲೋ ಲ್ಯಾಂಡ್ ಎಂದು ವಿಭಾಗಿಸಲಾಗಿದೆ, ಕಾಕತಾಳೀಯವೆಂಬಂತೆ ನಮ್ಮ ಕರಾವಳೀ ತೀರದವರನ್ನು ಘಟ್ಟದ ಕೆಳಗಿನವರೆಂದೂ ಹಾಗೂ ಮಲೆನಾಡಿನವರನ್ನು ಘಟ್ಟದ ಮೇಲಿನವರೆಂದೂ ಕರೆಯುವ ಹಾಗೆ.

ಸ್ಕಾಟ್‌ಲ್ಯಾಂಡ್‌ನ ಪ್ರಖ್ಯಾತ ಕವಿ ವಿಲಿಯಮ್ ಸ್ಕಾಟ್ ರಚಿಸಿರುವ ‘ಲೋಚಿನ್‌ವಾರ್’ ಎಂಬ ಕವನದಲ್ಲಿ ಹೈಲ್ಯಾಂಡಿನ ತರುಣನೊಬ್ಬ ತಾನು ಪ್ರೀತಿಸಿದ ಲೋಲ್ಯಾಂಡಿನ ಯುವತಿಯೊಂದಿಗೆ ಪಲಾಯನ ಮಾಡುವ ಘಟನೆಯ ವಿವರವಿದೆ. ಸಮಾಜ ಈ ಪ್ರೇಮ ವಿವಾಹಕ್ಕೆ ಅಡ್ಡಿ ಮಾಡಿದಾಗ, ಪ್ರೇಯಸಿಯನ್ನು ಕುದುರೆಯ ಮೇಲೆ ಕೂರಿಸಿಕೊಂಡು ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಹೊಳೆಯನ್ನು ದಾಟಲು ಮುನ್ನುಗ್ಗುವ ಪ್ರೇಮಿಯ ಕರುಣಾಜನಕ ದುರಂತ ಕಥೆಯಿದು. ಇಂದಿಗೂ ಈ ಅಮರ ಪ್ರೇಮಿಗಳ ಕೂಗು ಸ್ಕಾಟ್‌ಲ್ಯಾಂಡಿನ ಪರ್ವತಶ್ರೇಣಿಗಳ ಮಧ್ಯೆ ಪ್ರತಿಧ್ವನಿಸುತ್ತಿದೆಯಂತೆ.

ವಾರಾಂತ್ಯದಲ್ಲಿ ಸಂಭ್ರಮದಿಂದ ಸಾಗುತ್ತಿದ್ದವರ ಉತ್ಸಾಹವನ್ನೆಂತು ಬಣ್ಣಿಸಲಿ? ಕೆಲವರು ಕಾರನ್ನು ನಿಗದಿಯಾಗಿದ್ದ ಕಾರಿನ ನಿಲ್ದಾಣದಲ್ಲಿ ನಿಲ್ಲಿಸಿ, ಚಾರಣಕ್ಕೆಂದೇ ವಿಶೇಷವಾದ ಷೂ ಧರಿಸಿ, ಬ್ರೆಡ್, ಬಿಸ್ಕೆಟ್, ನೀರು ಇತ್ಯಾದಿಗಳಿದ್ದ ಚೀಲವನ್ನು ಬೆನ್ನಿಗೇರಿಸಿ, ತಮ್ಮ ಮುದ್ದಿನ ನಾಯಿಯನ್ನು ಹಿಡಿದು ಹೊರಡುತ್ತಿದ್ದರು. ಇನ್ನೂ ಕೆಲವರು ಕಾರಿಗೆ ಕಟ್ಟಿದ್ದ ಬೈಸಿಕಲ್ ಕೆಳಗಿಳಿಸಿ, ತಲೆಗೊಂದು ಹೆಲ್ಮೆಟ್ ಧರಿಸಿ ಸೈಕಲ್ ಸವಾರಿ ಹೊರಡುತ್ತಿದ್ದರು. ಮತ್ತೆ ಕೆಲವರು ಕಾರಿನ ಮೇಲೆ ಕಟ್ಟಿದ್ದ ದೋಣಿಯನ್ನು ಕೆಳಗಿಳಿಸಿ ದೋಣಿಸವಾರಿ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಸರೋವರದ ಸುತ್ತಮುತ್ತಲೂ ಶುಭ್ರವಾಗಿತ್ತು, ಎಲ್ಲಿಯೂ ಪ್ಲಾಸ್ಟಿಕ್ ಬಾಟಲಿಗಳಾಗಲೀ, ಪ್ಲಾಸ್ಟಿಕ್ ಚೀಲಗಳಾಲೀ ಕಂಡುಬರಲಿಲ್ಲ. ಇವರು ಸ್ವಚ್ಛತೆಗೆ ನೀಡುವ ಮಹತ್ವವನ್ನು ನೋಡಿ ಬೆರಗಾದೆ. ಹಾದಿಯಲ್ಲಿ ಎದುರಾದ ಅಪರಿಚಿತರೂ ಮುಗಳ್ನಗೆಯೊಂದಿಗೆ ‘ಹಯ್ಯಾ, ಗುಡ್ ಮಾರ್ನಿಂಗ್, ಸೊಗಸಾದ ಹವಾಮಾನ ಅಲ್ಲವೇ’ ಎಂದೆನ್ನುತ್ತಾ ಸಾಗುತ್ತಿದ್ದರು. ಪರಿಚಯವಿದ್ದವರು ಪರಸ್ಪರರ ಕೈಕುಲುಕುತ್ತಾ, ಒಬ್ಬರನ್ನೊಬ್ಬರು ತಬ್ಬಿಕೊಂಡು ಸ್ನೇಹ ವಿಶ್ವಾಸ ಪ್ರದರ್ಶಿಸುತ್ತಿದ್ದರು. ಇವರ ಮಾತುಗಳು ಹವಾಮಾನದ ಸುತ್ತಲೂ ಗಿರಕಿ ಹೊಡೆಯುವಂತೆ ತೋರುತ್ತಿದ್ದವು. ಬೆಚ್ಚಗಿನ ಹವಾಮಾನ ಇದ್ದರಂತೂ, ಇವರಿಗೆ ಆ ದಿನ ಸ್ವರ್ಗ ಸಮಾನ. ಏನೇ ಕೆಲಸ ಇದ್ದರೂ ಬಿಟ್ಟು ಪಿಕ್‌ನಿಕ್ ಹೊರಟುಬಿಡುವ ಮನೋಭಾವ ಇವರದು.

ನಾವೂ, ನಮ್ಮ ನಾಯಿ ರಿಯೂ ಜೊತೆ ಸರೋವರದ ಸುತ್ತಲೂ ಇದ್ದ ಕಾಲುದಾರಿಯಲ್ಲಿ ಚಾರಣ ಹೊರಟೆವು. ಕೆಲವೆಡೆ ಚಾರಣದ ಹಾದಿ ಸರೋವರದ ಬದಿಯಲ್ಲಿ ಸಾಗುತ್ತಿದ್ದರೆ, ಮತ್ತೆ ಕೆಲವೆಡೆ ಪಕ್ಕದಲ್ಲಿದ್ದ ಬೆಟ್ಟ ಗುಡ್ಡಗಳ ಮೇಲೆ ಏರಿಳಿಯುತ್ತಿತ್ತು, ಇನ್ನೂ ಕೆಲವೆಡೆ ಮರಳಿನ ರಾಶಿಯ ಮೇಲೆ, ಮತ್ತೆ ಕೆಲವೆಡೆ ಹಸಿರುಟ್ಟ ಅರಣ್ಯಗಳ ಮಧ್ಯೆ. ಸರೋವರದ ಸುತ್ತ ಮುಗಿಲೆತ್ತರಕ್ಕೆ ನಿಂತಿದ್ದ ಬೆಟ್ಟಗುಡ್ಡಗಳು, ಪಕ್ಷಿಗಳ ಕಲರವ, ಆ ಇನಿದನಿಗೆ ತಲೆದೂಗುತ್ತಿದ್ದ ಗಿಡಮರಗಳು, ಎಲ್ಲರನ್ನೂ ಕಣ್ಣರಳಿಸಿ ನೋಡುತ್ತಿದ್ದ ರಂಗುರಂಗಿನ ಹೂಗಳು – ಚಾರಣಿಗರು ಮೌನವಾಗಿ ಈ ಚೆಲುವನ್ನು ಆಸ್ವಾದಿಸುತ್ತಾ ಹೆಜ್ಜೆ ಹಾಕುತ್ತಿದ್ದರು. ಹಾದಿಯ ಪಕ್ಕದಲ್ಲಿದ್ದ ಪೊದೆಗಳ ಮಧ್ಯೆ ಹುಲುಸಾಗಿ ಬೆಳೆದಿದ್ದ, ಹಿಪ್ಪು ನೇರಳೆಯಂತೆ ಕಾಣುತ್ತಿದ್ದ, ಮಾಗಿದ ‘ಬ್ಲಾಕ್ ಬೆರೀಸ್’ ಹಣ್ಣುಗಳು ಬಾಯಲ್ಲಿ ನೀರೂರಿಸಿದ್ದವು. ನಾನು ಮಾಗಿದ ಒಂದೆರಡು ಹಣ್ಣುಗಳನ್ನು ಕಿತ್ತು ಬಾಯಿಗೆ ಹಾಕಿದೆ, ನಮ್ಮ ಮುಂದೆ ಸಾಗಿದ್ದ ಬಿಳಿಯ ಜೋಡಿಯೊಂದು ಹಿಂತಿರುಗಿ ನೋಡಿ ಒಂದು ಬಗೆಯ ಕೊಂಕು ನಗೆ ಬೀರಿದಂತೆನಿಸಿತ್ತು. ಮೊಮ್ಮಗಳು, ‘ಈ ಹಣ್ಣುಗಳಲ್ಲಿ ಮ್ಯಾಗಟ್ಸ್ ಎಂಬ ಕೀಟಗಳು ಇರುತ್ತವೆ, ತಿನ್ನಬೇಡಿ’ ಎಂದಳು. ನನಗೋ ಗಿಡದಲ್ಲೇ ಹಣ್ಣಾಗಿದ್ದ ಸಿಹಿ ಸಿಹಿಯಾದ ಹಣ್ಣುಗಳನ್ನು ಬಿಡಲು ಮನಸ್ಸಿಲ್ಲ. ಅವಳ ಕಣ್ತಪ್ಪಿಸಿ, ಹಣ್ಣುಗಳನ್ನು ಬಿಡಿಸಿ, ನನ್ನ ಬಳಿಯಿದ್ದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿದೆ. ಸರೋವರದ ನೀರಿನಲ್ಲಿ ತೊಳೆದು ಮೆಲ್ಲತೊಡಗಿದೆ. ನನ್ನ ಮುಂದಿದ್ದ ಮಕ್ಕಳು, ಗಾಬರಿಯಿಂದ ನನ್ನನ್ನೇ ದಿಟ್ಟಿಸಿ ನೋಡತೊಡಗಿದರು. ಅವರ ಪ್ರಕಾರ ಸೂಪರ್ ಸ್ಟೋರ್‌ಗಳಲ್ಲಿ ಮಾರುವ ಹಣ್ಣು ಮತ್ರ ತಿನ್ನಲು ಯೋಗ್ಯ.

ನಮ್ಮ ನಾಯಿ ರಿಯೋ ನೀರಿನೆಡೆ ಜಗ್ಗುತ್ತಿತ್ತು. ನನಗೂ ನೀರಿನಲ್ಲಿ ಕಾಲಾಡಿಸುವ ಆಸೆ. ಷೂ, ಸಾಕ್ಸ್ ಬಿಚ್ಚಿಟ್ಟು ಸರೋವರದತ್ತ ಸಾಗಿದೆ, ದಡದಲ್ಲಿ ಮರಳಿನ ರಾಶಿ, ಸ್ಪಟಿಕದಷ್ಟೇ ಶುಭ್ರವಾದ ನೀರು, ಹಾಗೆಯೇ ಮುಂದೆ ಸಾಗಿದವಳು ಬೊಗಸೆಯಲ್ಲಿ ನೀರು ತುಂಬಿ ಕುಡಿದೆ, ಎಳನೀರಿನಷ್ಟೇ ಸಿಹಿಯಾಗಿತ್ತು ಸರೋವರದ ನೀರು. ಈ ನೀರಿನ ಮೂಲವಾದರೂ ಏನು ಗೊತ್ತೆ? ಬೇಸಿಗೆಯಲ್ಲಿ ಗಿರಿ ಶಿಖರಗಳ ಮೇಲಿದ್ದ ಹಿಮ ಕರಗಿದ ನೀರು, ಮಳೆಗಾಲದಲ್ಲಿ ಸುರಿಯುವ ಜಲಧಾರೆ, ಮೊಮ್ಮಗಳ ಕೂಗು ಮತ್ತೊಮ್ಮೆ ಮಾರ್ದನಿಸಿತು -‘ಅಜ್ಜೀ, ಈ ನೀರನ್ನು ಕುಡಿಯಬೇಡಿ, ನಾಳೆಯೇ ಫ್ಲೂ ಬಂದು ಮಲಗುತ್ತೀರಿ, ನೀರಡಿಕೆಯಾಗಿದ್ದರೆ ತಗೊಳ್ಳಿ’, ಎಂದುಲಿದವಳು ಎಳನೀರಿನ ಡಬ್ಬಿಯೊಂದನ್ನು ಕೈಗಿತ್ತಳು. ನಮ್ಮೂರಿಗೆ ಬಂದಾಗ ಆಗ ತಾನೇ ಮರದಿಂದ ಇಳಿಸಿದ್ದ ಎಳನೀರನ್ನು ಕೆತ್ತಿಕೊಟ್ಟರೆ, ಕುಡಿಯಲು ನಿರಾಕರಿಸಿದ್ದ ಹುಡುಗಿ, ಎಂದೋ, ಏನೋ ಬಾಟಲಿಗಳಲ್ಲಿ ತುಂಬಿಸಿಟ್ಟ ಎಳನೀರನ್ನು ಸಂಭ್ರಮಿಸಿ ಕುಡಿಯುತ್ತಿದ್ದಳು.

ಮುಂದೆ ಸಾಗಿದ ಹಾಗೆ ಒಂದು ಸುಂದರವಾದ ಅರಮನೆಯೊಂದು ಕಣ್ಣಿಗೆ ಬಿತ್ತು. ಈ ಮಹಲಿನ ಹೆಸರು – Glas-allt-Shiel. ಸಪ್ತ ಸಾಗರದಾಚೆ ರಾಜಕುವರಿಯನ್ನು ಕರೆದೊಯ್ದಿದ್ದ ರಾಜಕುಮಾರನ ಕಥೆಯೊಂದು ನೆನೆಪಾಗಿತ್ತು. ಜಾನಪದ ಕಥೆಗಳಲ್ಲಿ ಕೇಳಿದ್ದ ಪ್ರಸಂಗಗಳ ಮೆರವಣಿಗೆ ಮನದಲ್ಲಿ ಹೊರಟಿತ್ತು. ಇದನ್ನು 1868 ರಲ್ಲಿ ಮಹಾರಾಣಿ ವಿಕ್ಟೋರಿಯಾಳಿಗಾಗಿ ಕಟ್ಟಲಾಯಿತಂತೆ. ಅಂದಿನ ಪ್ರಿನ್ಸ್ ಆಲ್‌ಬರ್ಟ್ ಬೇಟೆಗಾಗಿ ಬಂದಾಗ ಇಲ್ಲಿ ತಂಗುತ್ತಿದ್ದರಿಂದ, ಈ ಮಹಲನ್ನು ಬೇಟೆ ಕಾಟೇಜ್ (Hunting-Lodge) ಎಂದೇ ಕರೆಯಲಾಗುತ್ತಿತ್ತಂತೆ. ಪ್ರಿನ್ಸ್ ಆಲ್‌ಬರ್ಟ್‌ನ ನಿಧನವಾದನಂತರ ಶೋಕತಪ್ತಳಾದ ರಾಣಿಯು ಇಲ್ಲಿ ಕೆಲ ಸಮಯ ತಂಗಿದ್ದರಿಂದ ಇದನ್ನು ವಿಧವೆಯ ಕಾಟೇಜ್ (Widow’s Hut) ಎಂದೂ ಗುರುತಿಸಲಾಗಿದೆ. ಒಂದು ದಿನವಾದರೂ ಪ್ರಕೃತಿಯ ಮಡಿಲಲ್ಲಿರುವ ಇಂತಹ ಭವ್ಯವಾದ ಮಹಲಿನಲ್ಲಿ ಉಳಿಯುವ ಕನಸು ನನ್ನದಾಗಿತ್ತು. ಆದರೆ ಕನಸುಗಳೆಲ್ಲಾ ನನಸಾಗಲು ಸಾಧ್ಯವೇ? ಆ ಮಹಲಿನ ಮುಂದೆ ದಂಪತಿಗಳಿಬ್ಬರು ಮೀನು ಹಿಡಿಯುತ್ತಾ ಕುಳಿತಿದ್ದರು. ಇಲ್ಲಿ ಮೀನು ಹಿಡಿಯಲು ಅವಕಾಶವಿಲ್ಲ ಎಂಬ ಫಲಕ ಬೇರೆ ಇತ್ತು. ನಾನು ಸೊಸೆಯ ಕಡೆ ನೋಡಿದಾಗ, ವಿಶೇಷ ಅನುಮತಿ ಪಡೆದವರು ಇಲ್ಲಿ ಮೀನು ಹಿಡಿದು, ಮರಳಿ ಸರೋವರದಲ್ಲಿ ಬಿಡುತ್ತಾರೆ ಎಂದು ತಿಳಿಸಿದಳು. ನಾನು ಅಚ್ಚರಿಯಿಂದ ಅವರನ್ನೇ ಗಮನಿಸಿದೆ. ಗಾಳಕ್ಕೆ ಸಿಕ್ಕ ಮೀನುಗಳನ್ನು ಬಿಡಿಸಿ ಮತ್ತೆ ನೀರಿಗೇ ಎಸೆಯುತ್ತಿದ್ದರು. ಈ ಸಂಗತಿ ವಿಚಿತ್ರ ಆದರೂ ಸತ್ಯ ಎನ್ನುವಂತಿತ್ತು. ಇವರು ಮೀನು ಹಿಡಿಯುವುದಾದರೂ ಏಕೆ, ಬಲೆಗೆ ಬಿದ್ದ ಮೀನುಗಳನ್ನು ಮರಳಿ ನೀರಿಗೇ ಹಾಕುವುದಾದರೆ, ಇವರ ಸಮಯ, ಶ್ರಮ ಎಲ್ಲವೂ ವ್ಯರ್ಥವಲ್ಲವೇ? ಬಹುಶಃ ಇಂತಹ ಪ್ರಶಾಂತವಾದ ಸ್ಥಳದಲ್ಲಿ ಧ್ಯಾನಸ್ಥರಾಗಿ ಕುಳಿತು ಮೀನು ಹಿಡಿಯುವ ಕ್ರಿಯೆಯೇ ಇವರಿಗೆ ಆನಂದ ನೀಡುತ್ತಿತ್ತೇನೋ? ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ದಾಸರ ಪದ ನೆನಪಾಗಿತ್ತು.

Glas-allt-Shiel

ರಮಣೀಯವಾದ ಪ್ರಕೃತಿಯ ಮಡಿಲಲ್ಲಿದ್ದ ಸರೋವರದ ಸುತ್ತಲೂ ಇದ್ದ ಹನ್ನೆರೆಡೂವರೆ ಕಿ.ಮೀ. ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಸರೀವರದ ಅಂಚಿನಲ್ಲಿ ಕೆಲವರು ಟೆಂಟ್ ಹಾಕಿ, ಅಲ್ಲಿಯೇ ಇರುಳನ್ನು ಕಳೆಯಲು ಸಜ್ಜಾಗುತ್ತಿದ್ದರು. ನಾನು ಕುತೂಹಲದಿಂದ ಮಗನನ್ನು ಟೆಂಟ್‌ನಲ್ಲಿ ಉಳಿಯುವರ ಬಗ್ಗೆ ವಿಚಾರಿಸಿದೆ. ಪ್ರಕೃತಿಯೊಂದಿಗೆ ಸಹಬಾಳ್ವೆ ಎಂಬ ಸಿದ್ಧಾಂತದಡಿಯಲ್ಲಿ ವಿಶೇಷವಾಗಿ ಹೈಸ್ಕೂಲ್ ವಿಧ್ಯಾರ್ಥಿಗಳ ಎಂಟರಿಂದ ಹತ್ತು ಜನರ ತಂಡಗಳನ್ನು ರಚಿಸಿ ಮೂರು ದಿನಗಳ ಚಾರಣ ಏರ್ಪಡಿಸುತ್ತಾರಂತೆ. ಪ್ರತಿ ನಿತ್ಯ ಹತ್ತರಿಂದ ಹನ್ನೆರೆಡು ಕಿ.ಮೀ ಚಾರಣ ಮಾಡುವ ಇವರು ತಮ್ಮ ಸಾಮಾನು ಸರಂಜಾಮನ್ನೆಲ್ಲಾ ಬೆನ್ನ ಮೇಲೆ ಹೊತ್ತು ಸಾಗುವರು. (Bag Pack). ರಾತ್ರಿ ಉಳಿಯಲು ಟೆಂಟ್, ಅಡಿಗೆ ಮಾಡಿಕೊಳ್ಳಲು ಒಂದು ಸಣ್ಣ ಅಗಿಷ್ಟಿಕೆ, ಮಲಗಲು ಮಲಗುವ ಚೀಲ (Sleeping Bag) ಇತ್ಯಾದಿ. ಅಗಿಷ್ಟಿಕೆಗೆ ಬೇಕಾದ ಕಟ್ಟಿಗೆಯನ್ನು ಕಾಡಿನಲ್ಲಿ ಆರಿಸಿಕೊಂಡು, ಸ್ವಲ್ಪ ಎಣ್ಣೆ ಸುರಿದು ಸಿಗರೇಟ್ ಲೈಟರ್‌ನಿಂದ ಹೊತ್ತಿಸಿ ತಾವು ತಂದ ಆಹಾರವನ್ನು ಬಿಸಿ ಮಾಡಿಕೊಳ್ಳುತ್ತಿದ್ದರು. ಬಹಳಷ್ಟು ಜನ ಮಾಲುಗಳಲ್ಲಿ ದೊರೆಯುವ ಸಿದ್ಧಪಡಿಸಿದ್ಧ ಆಹಾರವನ್ನು ಕೊಂಡು ತಂದಿದ್ದರು. ಮತ್ತೆ ಕೆಲವರು ನೂಡಲ್ಸ್ ಬೇಯಿಸುತ್ತಿದ್ದರು. ಸರೋವರದಿಂದ ನೀರನ್ನು ಬಾಟಲಿಗಳಲ್ಲಿ ತುಂಬಿಸಿ ಬಿಸಿಮಾಡಿಕೊಂಡು ಕುಡಿಯುತ್ತಿದ್ದರು. ಇನ್ನು ಶೌಚಾಲಯಕ್ಕೆ ಹೋಗುವುದಾದರು ಎಲ್ಲಿ? ಕಾಡಿನ ಮಧ್ಯೆ ಕುಳಿತು ಮಲಮೂತ್ರ ವಿಸರ್ಜಿಸಬೇಕಾಗಿತ್ತು. ಆಧುನಿಕ ಬದುಕಿಗೆ ಹೊಂದಿಕೊಂಡವರು ಹಿಂದಿನ ಕಾಲದ ಸಹಜ ಬದುಕಿಗೆ ಮರಳಬೇಕಾಗಿತ್ತು. ಬಹುಶಃ ಇವರ ಮೂಲ ಉದ್ದೇಶ ಪರಸ್ಪರ ಸ್ನೇಹ, ವಿಶ್ವಾಸ, ಸಹಕಾರ ಮನೋಭಾವ ಬೆಳೆಸಿಕೊಳ್ಳುವ ಗುಣ, ಎಲ್ಲರೊಂದಿಗೆ ಹೊಂದಿಕೊಂಡು ಬಾಳುವ ಮನಸ್ಥಿತಿ, ಎಂತಹ ಪರಿಸ್ಥಿತಿಯಲ್ಲೂ ಬದುಕುವ ಗಟ್ಟಿತನ ಮೈಗೂಡಲಿ ಎಂದಿರಬಹುದೇನೋ. ನನ್ನ ಅನುಭವವನ್ನು ನಿರ್ಮಲಕ್ಕನ ಮುಂದೆ ಬಿಚ್ಚಿಟ್ಟಾಗ ಅವಳ ಪ್ರತಿಕ್ರಿಯೆ ವಾಸ್ತವಕ್ಕೆ ಹತ್ತಿರವಾಗಿತ್ತು – ‘ನಮ್ಮ ಬಾಲ್ಯದ ದಿನಗಳು ಹೀಗೇ ಇತ್ತಲ್ಲವೇ? ಹೊರಸಂಚಾರ ಹೊರಟಾಗ ನಮ್ಮ ಪರಿಸ್ಥಿತಿಯೂ ಹೀಗೇ ಇತ್ತಲ್ಲವೇ?’

ಅಂದಿನ ನಮ್ಮ ಪಿಕ್‌ನಿಕ್ ಮುಗಿಯುವ ಹಂತ ತಲುಪಿತ್ತು. ಸರೋವರದ ತೀರದಲ್ಲಿ ಕುಳಿತು ನಾವು ತಂದಿದ್ದ ಬುತ್ತಿಗಂಟನ್ನು ಬಿಚ್ಚಿದೆವು. ಉಳಿದದ್ದನ್ನು ನಾಯಿಗಳಿಗಾಗಲೀ, ಮೀನುಗಳಿಗಾಗಲೀ ಹಾಕುವಂತಿಲ್ಲ. ಮೊಮ್ಮಗಳು, ‘ಅಜ್ಜೀ, ನೀವು ತಿಂದು ಉಳಿದ ಊಟವನ್ನು ನಾಯಿಗಳಿಗೆ ಹಾಕುವುದು ಯಾವ ನ್ಯಾಯ?’ ಎಂದು ಹೇಳಿದಾಗ ಮೌನ ವಹಿಸಿದೆ. ಮನೆಗೆ ಹಿಂತಿರುಗುವಾಗ ಹಲವು ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು – ಪೊದೆಗಳಲ್ಲಿ ಮಾಗಿದ ಸಿಹಿಯಾದ ರಸಭರಿತವಾದ ಹಣ್ಣುಗಳನ್ನು ತಿನ್ನಲು ಅನರ್ಹವೇ? ಬೇಟೆಗೆಂದು ನಿರ್ಮಿಸಿದ ಮಹಲ್ ವಿಧವೆಯ ಕಾಟೇಜಾಗಿದ್ದು, ಬಲೆಹಾಕಿ ಹಿಡಿದ ಮೀನನ್ನು ನೀರಿಗೇ ಎಸೆಯುವ ಮಂದಿ, ಆಧುನಿಕ ಸೌಲಭ್ಯಗಳನ್ನು ಬದಿಗೊತ್ತಿ ಮರಳಿ ಪ್ರಕೃತಿಯ ಶಿಶುಗಳಾಗುವ ವಿದ್ಯಾರ್ಥಿಗಳು ಇತ್ಯಾದಿ.

-ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

6 Responses

  1. ಅಪರೂಪದ ಮಾಹಿತಿಯನ್ನು ಒಳಗೊಂಡ ಲೇಖನ ಸೊಗಸಾದ ನಿರೂಪಣೆ…ಧನ್ಯವಾದಗಳು ಮೇಡಂ

  2. ನಯನ ಬಜಕೂಡ್ಲು says:

    Very nice

  3. ಶಂಕರಿ ಶರ್ಮ says:

    ಸ್ಕ್ವಾರ್ಟ್ ಲ್ಯಾಂಡಿನ ಕುರಿತ ಅಪರೂಪದ ಮಾಹಿತಿಗಳನ್ನು ಒಳಗೊಂಡ ಲೇಖನ ತುಂಬಾ ಚೆನ್ನಾಗಿದೆ ಮೇಡಂ.. ಧನ್ಯವಾದಗಳು

  4. Krishnaprabha M says:

    ಚಂದದ ಲೇಖನ

  5. Padma Anand says:

    ಚಂದದ ನಿರೂಪಣೆಯ ಸುಂದರ ಪ್ರವಾಸೀ ಕಥನ. ಉತ್ತರಿಸಲಾಗದ ನೀವೆತ್ತಿದ ಪ್ರಶ್ನೆಗಳು ಓದುಗರ ಮನದಲ್ಲೂ ಮಡುಗಟ್ಟಿದೆ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: