ಜೂನ್ ನಲ್ಲಿ ಜೂಲೇ : ಹನಿ 8

Share Button

  ‘ಪತ್ತರ್ ಸಾಹಿಬ್ ಗುರುದ್ವಾರ’

ಹಾಲ್ ಆಫ್ ಫೇಮ್’ ನಿಂದ ಹೊರಟು, ಲೇಹ್ ನಿಂದ ಕಾರ್ಗಿಲ್ ಗೆ ಹೋಗುವ ರಸ್ತೆಯಲ್ಲಿ 25  ಕಿ.ಮೀ ದೂರದಲ್ಲಿರುವ ಪತ್ತರ್ ಸಾಹಿಬ್  ಗುರುದ್ವಾರಕ್ಕೆ ಭೇಟಿ ಕೊಟ್ಟೆವು. ಸಮುದ್ರ ಮಟ್ಟದ 12000 ಅಡಿ ಎತ್ತರದಲ್ಲಿರುವ ಈ ಗುರುದ್ವಾರವು ಬೌದ್ಧರಿಗೂ, ಸಿಕ್ಖರಿಗೂ ಪೂಜನೀಯ ತಾಣ. ಐತಿಹ್ಯದ ಪ್ರಕಾರ 1515-17 ರ ಅವಧಿಯಲ್ಲಿ, ಗುರುನಾನಕ್ ಅವರು , ಕಾಶ್ಮೀರದ ಶ್ರೀನಗರದಿಂದ   ಪಂಜಾಬ್ ಗೆ ಹಿಂತಿರುಗುವ ದಾರಿಯಾಗಿ, ಇಲ್ಲಿಗೆ ಬಂದು ವಿಶ್ರಾಂತಿ ಪಡೆದಿದ್ದರಂತೆ.. ಸ್ಥಳೀಯ ರಾಕ್ಷಸನೊಬ್ಬ ಅವರಿಗೆ ಬಹಳ ತೊಂದೆರೆ ಕೊಡಲು ಪ್ರಯತ್ನಿಸಿದರೂ ಗುರುನಾನಕರಿಗೆ ಕಿಂಚಿತ್ತೂ ಹಾನಿಯಾಗಲಿಲ್ಲ. ಆತ ನಾನಕರತ್ತ ಬಂಡೆಯನ್ನೆಸೆದರೂ, ಅದು ಮೇಣದಂತೆ ಕರಗಿ ಅದರಲ್ಲಿ ನಾನಕರ ಬೆನ್ನ ಹಿಂದೆ ರಕ್ಷಕನಂತೆ ನಿಂತಿತು. ಆತನು ಕೋಪದಿಂದ ರಾಕ್ಷಸನ್ನು ಬಂಡೆಯನ್ನು ತುಳಿದಾಗ, ಇನ್ನೂ ಮೆತ್ತಗಿದ್ದ ಬಂಡೆಯಲ್ಲಿ  ಆತನ ಕಾಲಿನ ಗುರುತೂ ಮೂಡಿತು. ಇದನ್ನು ಗಮನಿಸಿದಾಗ, ನಾನಕರು ದೈವಾಂಶಸಂಭೂತರೆಂದು ಮನಗಂಡ ರಾಕ್ಷಸನು ಅವರಿಗೆ ಶರಣಾದ. ಅಂದಿನಿಂದ ಸಿಕ್ಖರೂ, ಸ್ಥಳೀಯ  ಬೌದ್ಧರೂ ಆ ಬಂಡೆಯನ್ನು ಪೂಜಿಸಿದರು.

1970 ರಲ್ಲಿ ಲೇಹ್ -ನಿಮು ರಸ್ತೆಯ ಕಾಮಗಾರಿ ವೇಳೆ ,  ಬುಲ್ ಡೋಜರ್ ಯಂತ್ರವು ಬಹಳ ಶ್ರಮ ಪಟ್ಟರೂ ದಾರಿಯಲ್ಲಿದ್ದ ಬಂಡೆಯನ್ನು ಸಿಡಿಸಲು ಸಾಧ್ಯವಾಗಲಿಲ್ಲ.  ಬುಲ್ ಡೋಜರ್ ಯಂತ್ರದ  ಡ್ರೈವರ್ ಗೆ ಕನಸಿನಲ್ಲಿ ಆ ಬಂಡೆಯನ್ನು ಎತ್ತಬಾರದು ಎಂದು ಪ್ರೇರಣೆಯಾಯಿತು.  ಇದನ್ನು ಸೇನೆಯ ಅಧಿಕಾರಿಗಳಿಗೆ ತಿಳಿಸಿದಾಗ ಕನಸಿಗೆ ಏನೂ ಮಹತ್ವ ಕೊಡಬೇಕಾಗಿಲ್ಲ ಎಂದರಂತೆ. ಆದರೆ , ಅವರಿಗೂ ಅದೇ ಕನಸು ಬಂತು. ಅಲ್ಲದೆ ಹಲವಾರು ಲಾಮಾಗಳು ಆ ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿಗೆ  ‘ನಾನಕ್ ಲಾಮಾ’ ಬಂದಿದ್ದುದನ್ನು ತಿಳಿಸಿ ಬಂಡೆಯನ್ನು ಸಿಡಿಸಬಾರದು ಅಂದರಂತೆ. ಹೀಗೆ ಅಲ್ಲಿ ‘ಪತ್ತರ್ ಸಾಹಿಬ್’ ಗುರುದ್ವಾರದ ನಿರ್ಮಾಣವಾಯಿತು. ಪ್ರಸ್ತುತ ಸೇನೆಯು ಈ ಗುರುದ್ವಾರದ ಉಸ್ತುವಾರಿ ನೋಡಿಕೊಳ್ಳುತ್ತದೆ.


‘ಪತ್ತರ್ ಸಾಹಿಬ್ ಗುರುದ್ವಾರ’

ಅಯಸ್ಕಾಂತದ ಬೆಟ್ಟ  Magentic Hill

ಪ್ರಯಾಣ ಮುಂದುವರಿದು, ಲೇಹ್ ನಿಂದ 30  ಕಿ.ಮೀ ದೂರದಲ್ಲಿ,  ಕಾರ್ಗಿಲ್ ಗೆ ಹೋಗುವ ರಸ್ತೆಯಲ್ಲಿರುವ ‘ಅಯಸ್ಕಾಂತದ ಬೆಟ್ಟದ ಬುಡಕ್ಕೆ (Magnetic Hill ) ಗೆ ತಲಪಿದೆವು. ಮೇಲ್ನೋಟಕ್ಕೆ ಇಲ್ಲಿ ವಿಶೇಷವೇನೂ ಅನಿಸುವುದಿಲ್ಲ.  ಸ್ಥಳೀಯ ಭೌಗೋಳಿಕ ರಚನೆಯಾದ ಬೆಟ್ಟಗಳ   ಮಧ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ನಾವು ಪ್ರಯಾಣಿಸುತ್ತಿರುತ್ತೇವೆ ಅಷ್ಟೆ. ಹಲವಾರು ಪ್ರವಾಸಿಗರು ಅಲ್ಲಿ ವಾಹನ ನಿಲ್ಲಿಸಿ ಫೋಟೋ ತೆಗೆಯುತ್ತಾ, ತಮ್ಮ  ಕಾರಿನ ಜೊತೆ ಪ್ರಯೋಗಶೀಲರಾಗಿರುವುದು ಕಂಡುಬಂತು.

ಪಕ್ಕದಲ್ಲಿ ಇಟ್ಟಿದ್ದ ಮಾಹಿತಿಫಲಕ ಪ್ರಕಾರ, ‘ರಸ್ತೆಯಲ್ಲಿ ಗುರುತಿಸಲಾದ  ಜಾಗದಲ್ಲಿ ವಾಹನದ ಇಂಜಿನ್ ಅನ್ನು ಆಫ್ ಮಾಡಿ, ನ್ಯೂಟ್ರಲ್ ಗೇರ್ ನಲ್ಲಿ ಟ್ಟರೆ, ಆ ವಾಹನವು ಬೆಟ್ಟದ ಕಡೆಗೆ ( ಹಿಮ್ಮುಖವಾಗಿ) ಚಲಿಸುತ್ತದೆ. ವಾಹನಗಳು ಬೆಟ್ಟದ ಕಡೆಗೆ, ಅಂದರೆ ಗುರುತ್ವಾಕರ್ಷಣೆಯ ವಿರುದ್ಧ ದಿಕ್ಕಿನಲ್ಲಿ ಚಲಿಸುವುದು ಈ ಸ್ಥಳದ ವಿಶೇಷತೆ’.  ನಮ್ಮ   ಡ್ರೈವರ್ ನೋಬ್ರುವಿಗೆ ವ್ಯಾನ್ ನ ಇಂಜಿನ್ ಅನ್ನು ನಿಲ್ಲಿಸಿ, ಪ್ರಯೋಗ ಮಾಡಿ ತೋರಿಸಯ್ಯಾ ಎಂದು ಮನವಿ ಮಾಡಿದೆವು.ಅದೇಕೋ ಆತ ತೀರಾ ನಿರಾಸಕ್ತಿಯಿಂದ ‘ ಇಸ್ ಮೇ ಕ್ಯಾ ಹೈ, ರಾಸ್ತಾ ಐಸಾ ಹೈ, ಗಾಡಿ ಐಸೇ ಹೀ ಜಾನಾ ಹೈ…ಫೋಟೋ ಚಾಹಿಯೇ ತೋ  ಕೀಂಚ್ ಲಿಯೇ’  ಎಂದುಬಿಟ್ಟ. 

ಆತನ ದಿವ್ಯನಿರ್ಲಕ್ಷ್ಯವೇ ನನಗೆ ಇನ್ನಷ್ಟು ಕುತೂಹಲ ಕೆರಳಿಸಿತು. ಏನಿದರ ವಿಸ್ಮಯ ಎಂದು ಅಂತರ್ಜಾಲದಲ್ಲಿ ಹುಡುಕಾಡಿದಾಗ ಸಿಕ್ಕ ಮಾಹಿತಿಯ ಪ್ರಕಾರ, ಇದು ಒಂದು ರೀತಿಯ ದೃಷ್ಟಿಭ್ರಮೆ (Optical illusion). ಸಾಮಾನ್ಯವಾಗಿ ಬೆಟ್ಟಗಳಿಂದ ಸುತ್ತುವರಿಗ ಜಾಗಗಳಲ್ಲಿ, ದಿಗಂತವು ಗೋಚರಿಸದಿರುವಂತಹ ಸನ್ನಿವೇಶಗಳಲ್ಲಿ, ಸ್ಥಳದ ಎತ್ತರವನ್ನು ಅಳೆಯಲು ಸರಿಯಾದ ಆಧಾರ ಇಲ್ಲದಿರುವ ಕಡೆಯಲ್ಲಿ, ಇರಬಹುದಾದ ವಾಲುವಿಕೆ/ಏರುವಿಕೆ ಅದರ ನೈಜತೆಗೆ ವಿರುದ್ದವಾಗಿರುವಂತೆ ಭ್ರಮೆ ಉಂಟಾಗುತ್ತದೆ. ಸ್ವಲ್ಪ ಓರೆಯಾಗಿರುವ ಮರ ನೆಟ್ಟಗೆ ಇರುವಂತೆ ಭಾಸವಾಗುತ್ತದೆ, ನದಿಯ ನೀರು ತಾನು ಹರಿಯುತ್ತಿರುವ ವಿರುದ್ಧ ದಿಕ್ಕಿಗೆ ಹರಿಯುವಂತೆ ಭಾಸವಾಗುತ್ತದೆ. ಅದೇ ರೀತಿ ಇಲ್ಲಿಯೂ, ಬೆಟ್ಟಗಳಿಂದಾಗಿ ದಿಗಂತ ಕಾಣಿಸುತ್ತಿಲ್ಲ, ನೆಲದ ಮಟ್ಟವನ್ನು ಅಂದಾಜಿಸಿಲು ಅಕ್ಕಪಕ್ಕದಲ್ಲಿ ನೆಟ್ಟಗಿನ ಮರಗಳೂ ಇಲ್ಲ, ಬೆಟ್ಟದ ಕಡೆಗಿನ ರಸ್ತೆ ಸ್ವಲ್ಪ ಮಟ್ಟಿಗೆ ಇಳಿಜಾರಾಗಿ ಇದೆ, ಆದರೆ ಅದು ಏರುಮುಖವಾಗಿರುವಂತೆ ನಮಗೆ ಭ್ರಮೆಯುಂಟಾಗುತ್ತದೆ, ನ್ಯೂಟ್ರಲ್ ಗೇರ್ ನಲ್ಲಿರುವ ಗಾಡಿಯನ್ನು ಸ್ವಲ್ಪ ಇಳಿಜಾರಿನಲ್ಲಿರುವ ರಸ್ತೆಯಲ್ಲಿ ನಿಲ್ಲಿಸಿದರೆ ಸಹಜವಾಗಿ ಅದರ ಭಾರದಿಂದಾಗಿ ವೇಗವನ್ನು ಪಡೆದುಕೊಂಡು ಚಲಿಸುತ್ತದೆ. ಜಗತ್ತಿನಲ್ಲಿ , ಈ ರೀತಿ ದೃಶ್ಯಭ್ರಮೆ ಸೃಷ್ಟಿಸುವ ಹಲವಾರು ಜಾಗಗಳಿವೆಯಂತೆ. ಒಟ್ಟಿನಲ್ಲಿ, ಡ್ರೈವರ್ ನ  ನಿರಾಸಕ್ತಿಗೆ ಒಂದು ಉತ್ತರ ಸಿಕ್ಕಿದಂತಾಯಿತು.

ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ :https://surahonne.com/?p=37062

ಮುಂದುವರಿಯುವುದು..
-ಹೇಮಮಾಲಾ, ಮೈಸೂರು

7 Responses

  1. ಎಂದಿನಂತೆ ಪ್ರವಾಸ ಕಥನ ಓದಿ ಸಿಕೊಂಡು ಹೋಯಿತು ನೀವು ಭೇಟಿ ಕೊಟ್ಟ ಸ್ಥಳ ಗಳ ಮಾಹಿತಿ ಅನುಭವ ಅದನ್ನು ವ್ಯಕ್ತ ಪಡಿಸುವ ರೀತಿ ಸೊಗಸಾಗಿ ಮೂಡಿಬರುತ್ತದೆ ಧನ್ಯವಾದಗಳು ಗೆಳತಿ ಹೇಮಾ

  2. ನಯನ ಬಜಕೂಡ್ಲು says:

    ಬಹಳ ಸುಂದರವಾಗಿದೆ. ಅಯಸ್ಕಾoತ ಬೆಟ್ಟ ಕುತೂಹಲಕಾರಿಯಾಗಿದೆ.

  3. Padma Anand says:

    ವೈಜ್ಞಾನಿಕ ಕುತೂಹಲಗಳನ್ನೊಳಗೊಂಡ ನಿಸರ್ಗದ ಸುಂದರ ಹಾಗೂ ರೋಚಕ ವಿವರಣೆ.

  4. ಶಂಕರಿ ಶರ್ಮ says:

    ಪತ್ತರ್ ಸಾಹಿಬ್’ ಗುರುದ್ವಾರದ ಹಿಂದಿನ ಹಿನ್ನೆಲೆಯ ರೋಚಕ ಕಥೆ ಹಾಗೂ ಆಯಸ್ಕಾಂತ ಬೆಟ್ಟದ ನಿಗೂಢತೆಯ ವೈಜ್ಞಾನಿಕ ಹಿನ್ನೆಲೆಯ ವಿವರಣ ಬಹಳ ಆಸಕ್ತಿದಾಯಕವಾಗಿವೆ. ನಿರೂಪಣೆ ಎಂದಿನಂತೆ ಚಂದ!

  5. Padmini Hegade says:

    ನಿಸರ್ಗದ ಸುಂದರ ಹಾಗೂ ರೋಚಕ ವಿವರಣೆ.ಕುತೂಹಲಕಾರಿಯಾಗಿದೆ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: