ವಾಟ್ಸಾಪ್ ಕಥೆ: 1. ಬಣ್ಣದಿಂದ ಹೆಸರು ಬಾರದು.

Share Button
ರೇಖಾಚಿತ್ರ : ಬಿ.ಆರ್,ನಾಗರತ್ನ

ಆಕಾಶದಲ್ಲಿ ಹಾರಾಡುತ್ತಾ ಹೋಗುತ್ತಿದ್ದ ಕಾಗೆಯೊಂದಕ್ಕೆ ನೀರಿನಲ್ಲಿ ತೇಲುತ್ತಾ ಸಂಚರಿಸುತ್ತಿದ್ದ ಬಿಳಿಬಣ್ಣದ ಹಂಸವೊಂದು ಕಾಣಿಸಿತು. ತಕ್ಷಣ ಅದು ಹಂಸ ಈಜಾಡುತ್ತಿದ್ದ ಕೊಳದ ಬಳಿಗೆ ಬಂದಿತು. ಕಾಗೆ ಬಂದು ತನ್ನನ್ನೇ ನೋಡುತ್ತಾ ಸುಮ್ಮನೆ ಕುಳಿತಿದ್ದನ್ನು ಕಂಡು ಹಂಸಕ್ಕೆ ಅಚ್ಚರಿಯಾಯಿತು. ಅದು ಕಾಗಣ್ಣಾ ನೀನು ಯಾವಾಗಲೂ ಕಾ..ಕಾ..ಎಂದು ಕೂಗುತ್ತಾ ಹಾರಾಡುವವನು. ಹೀಗೆ ಒಂದೂ ಮಾತನಾಡದೆ ನನ್ನನ್ನೇ ನೋಡುತ್ತಾ ಕುಳಿತಿದ್ದೀಯಲ್ಲಾ ಏನು ವಿಶೇಷ? ಆರೋಗ್ಯವಾಗಿದ್ದೀಯ ತಾನೇ? ಎಂದು ಪ್ರಶ್ನಿಸಿತು.

ಹೂ ಹಂಸಕ್ಕಾ ನನ್ನ ಆರೋಗ್ಯಕ್ಕೇನು ಧಾಡಿ ಚೆನ್ನಾಗಿದ್ದೇನೆ. ನಿನ್ನ ಮೈಬಣ್ಣ ಎಷ್ಟು ಬಿಳಿಯದಾಗಿದೆ. ಎಷ್ಟು ಸುಂದರವಾಗಿ ಕಾಣಿಸುತ್ತಿದ್ದೀಯ. ನಿನ್ನ ಮುಂದೆ ನನ್ನ ಈ ಕಪ್ಪು ಬಣ್ಣ ಏನೇನೂ ಚೆನ್ನಾಗಿಲ್ಲ. ಅದಕ್ಕೇ ಹಾಗೇ ನಿನ್ನನ್ನು ನೋಡಬೇಕೆನ್ನಿಸಿತು ಕುಳಿತಿದ್ದೇನೆ ಎಂದಿತು.

ಅಯ್ಯೋ ಅಷ್ಟೇನಾ? ನೀನು ನನ್ನ ಬಿಳಿಬಣ್ಣಕ್ಕೇ ಮಾರುಹೋಗಿದ್ದೀಯಲ್ಲ. ಏನು ಹೇಳಲಿ. ನನಗೆ ಬರಿಯ ಬಿಳಿಬಣ್ಣವನ್ನೇ ನೋಡಿನೋಡಿ ಬೇಸರ ಬಂದಿದೆ. ಅಗೋ ಅಲ್ಲಿ ಮರದಮೇಲೆ ಕುಳಿತಿರುವ ಗಿಳಿಯನ್ನು ನೋಡು. ಎಷ್ಟು ಚಂದವಾಗಿದೆ. ಮೈಬಣ್ಣವೆಲ್ಲ ಹಚ್ಚ ಹಸಿರು. ಕೊಕ್ಕು ಮಾತ್ರ ಕೆಂಪು. ಕಣ್ಣು ಕಪ್ಪಗಿವೆ. ಇನ್ನೂ ನಾನಾಬಣ್ಣಗಳ ಗಿಳಿಗಳೂ ಇವೆ. ದೇವರು ನನಗೆ ಬರಿ ಒಂದೇ ಬಣ್ಣ ಕೊಟ್ಟದ್ದಾನಷ್ಟೇ ಎಂದು ನಿಡುಸುಯ್ದಿತು.

ಹಂಸದ ಮಾತುಗಳನ್ನು ಕೇಳಿಸಿಕೊಂಡ ಗಿಳಿಯು ಅಯ್ಯೋ ಹಂಸಪಕ್ಷಿಯೇ ನಿನಗಿಂತ ನಮ್ಮ ರಂಗು ತುಸು ಹೆಚ್ಚೇ ಇರಬಹುದು. ಆದರೆ ಅದೇ ದೂರದಲ್ಲಿ ಮರದ ಕೆಳಗೆ ಕಣ್ಣುಹಾಯಿಸು. ಅಲ್ಲಿ ನವಿಲು ತನ್ನ ಗರಿ ಬಿಚ್ಚಿಕೊಂಡು ಸಂತೋಷದಿಂದ ನರ್ತಿಸುತ್ತಿದೆ. ಅದರ ಮೈಬಣ್ಣದ ಜೊತೆಗೆ ಗರಿಗಳಲ್ಲಿರುವ ಮನಮೋಹಕ ಬಣ್ಣಗಳು ವೈವಿಧ್ಯಮಯವಾಗಿವೆ ನೋಡು. ಎಂದಿತು. ಗಿಳಿಯ ಮಾತು ಕೇಳಿ ಕಾಗೆ ಮತ್ತು ಹಂಸಗಳೆರಡೂ ನವಿಲಿನತ್ತ ಕಣ್ಣು ಹಾಯಿಸಿದವು. ಅವಕ್ಕೆ ಕೌತುಕವೆನ್ನಿಸಿತು. ಕಾಗೆ, ಹಂಸ ಮತ್ತು ಗಿಳಿ ಒಕ್ಕೊರಲಿನಿಂದ ನವಿಲನ್ನು ಹೊಗಳಿದವು. ಇವರುಗಳ ಮಾತನ್ನು ಕೇಳಿಸಿಕೊಂಡು ನವಿಲು ತನ್ನ ನೃತ್ಯದ ಶೈಲಿಯಲ್ಲೇ ಮೋಹಕವಾಗಿ ನಡೆದು ಅವುಗಳ ಸಮೀಪಕ್ಕೆ ಬಂದಿತು.

‘ಅಯ್ಯೋ ಬಂಧುಗಳಿರಾ ನೀವು ನನ್ನ ಬಣ್ಣಗಳ ಸೌಂದರ್ಯವನ್ನು ಹೊಗಳಿದ್ದು, ನನ್ನ ನರ್ತನವನ್ನು ಕಂಡು ಆನಂದಿಸಿದ್ದು ಎಲ್ಲವೂ ಸತ್ಯವೇ. ಆದರೆ ಅದರ ಹಿಂದೆ ಇರುವ ವ್ಯಥೆ ನಿಮಗೆ ಗೊತ್ತಿಲ್ಲ ಹೇಳುತ್ತೇನೆ ಕೇಳಿ. ನನ್ನ ಈ ಬಗೆಬಗೆಯ ಬಣ್ಣದ ಗರಿಗಳನ್ನು ಅಲಂಕಾರಕ್ಕಾಗಿ ಬಳಸಲು, ಬೀಸಣಿಗೆಗಳನ್ನು ತಯಾರಿಸಲು, ಮತ್ತು ನನ್ನನ್ನು ಮಾಂಸಕ್ಕಾಗಿ ಕೊಲ್ಲುವ ಬೇಟೆಗಾರರಿದ್ದಾರೆ. ನಾನು ಅವರೆಲ್ಲರ ಕಣ್ಣುತಪ್ಪಿಸಿ ಓಡಾಡಬೇಕಾಗಿದೆ. ನನ್ನ ಸೌಂದರ್ಯವೇ ನನ್ನ ಜೀವಕ್ಕೆ ಮುಳುವಾಗಿದೆ. ಸ್ವತಂತ್ರವಾಗಿ ಸ್ವೇಚ್ಛೆಯಾಗಿ ಬದುಕುವುದು ಕಷ್ಟವಾಗಿದೆ. ಇದು ನನ್ನ ಹಣೆಬರಹ’ ಎಂದು ನೊಂದು ನುಡಿಯಿತು.

ಸ್ವಲ್ಪ ಹೊತ್ತು ಎಲ್ಲ ಪಕ್ಷಿಗಳೂ ಮೌನವಾದವು. ನವಿಲೇ ಮೌನಮುರಿದು ಹೇಳಿತು ‘ಬರಿಯ ಬಣ್ಣಕ್ಕೆ ಪ್ರಾಮುಖ್ಯತೆ ಕೊಡಬೇಡ. ಎಲ್ಲರನ್ನೂ ಮುಂಜಾನೆ ಹೊತ್ತಿನಲ್ಲಿ ಕಾ..ಕಾ..ಎಂದು ಎಚ್ಚರಿಸುವ ಕೆಲಸವನ್ನು ನೀನು ಮಾಡುತ್ತೀಯೆ. ಮಾನವರು ತಮ್ಮ ಪಿತೃಗಳಿಗೆ ಪಿಂಡಪ್ರದಾನ ಮಾಡುವಾಗ ನಿನಗೇ ಅಲ್ಲವೇ ಆಧ್ಯತೆ ಕೊಡುವುದು. ನಮ್ಮನ್ನೆಲ್ಲಾ ಕರೆಯುತ್ತಾರಾ? ಸೃಷ್ಟಿಕರ್ತ ಭಗವಂತನು ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಕರ್ಮವನ್ನು ನಿಗದಿಪಡಿಸಿರುತ್ತಾನೆ. ಪ್ರತಿಯೊಬ್ಬರಲ್ಲೂ ಕುಂದು ಕೊರತೆಗಳಿದ್ದರೂ ವಿಶೇಷತೆಗಳೂ ಇರುತ್ತವೆ. ನಾವೀ ವಿಶೇಷತೆಗಳನ್ನು ಗಮನದಲ್ಲಿಟ್ಟುಕೊಂಡು ನೆಮ್ಮದಿಯಿಂದಿರಬೇಕು. ಇದೇ ಸೃಷ್ಟಿಯ ನಿಯಮ’ ಎಂದು ಹೇಳಿತು. ಅದನ್ನು ಕೇಳಿದಮೇಲೆ ಕಾಗೆಗೆ ಸತ್ಯದ ಅರಿವಾಗಿ ಸಮಧಾನದಿಂದ ಎಲ್ಲರಿಗೂ ಧನ್ಯವಾದ ಹೇಳಿ ಪುರ್ರೆಂದು ಹಾರಿಹೋಯಿತು.

ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು

7 Responses

  1. ನಯನ ಬಜಕೂಡ್ಲು says:

    Very nice

  2. ಶಂಕರಿ ಶರ್ಮ says:

    ವಾಟ್ಸಾಪ್ ನಲ್ಲಿ ಬರುವ ಕಥೆಯ ಸಂಗ್ರಹದ ಜೊತೆಗೆ ಪೂರಕ ಚಿತ್ರ ರಚನೆಯು ಬಹಳ ಸೊಗಸಾಗಿ ಮೂಡಿಬಂದಿದೆ ಮೇಡಂ…ಧನ್ಯವಾದಗಳು

  3. ಧನ್ಯವಾದಗಳು ನಯನ ಮೇಡಂ ಹಾಗೂಶಂಕರಿ ಮೇಡಂ

  4. B.k.meenakshi says:

    ತುಂಬ ಚಂದವಾಗಿ ಕತೆಗೆ ಪೂರಕವಾಗಿ ಬಿಡಿಸಿದ್ದೀರಿ. ಖುಷಿಯಾಯಿತು.

  5. ಧನ್ಯವಾದಗಳು ಗೆಳತಿ ಮೀನಾ

  6. Padmini Hegde says:

    ಅಬ್ಬಾ! ಕಥೆಯ ಜೊತೆಗೆ ಚಿತ್ರರಚನಾಕಾರರೂ ಆಗಿದ್ದೀರಿ! ಆಶ್ಚರ್ಯ ಸಂತೋಷ ಎರಡೂ ಆಗಿದೆ ಮೇಡಂ

  7. ಹಾ ಪದ್ಮಿನಿ ಮೇಡಂ..ಕಲೀತಿದ್ದೆ..ರೇಖಾ ಚಿತ್ರ ಒಂದು ಹಂತಕ್ಕೆ ಬಂತು ..ಮುಂದೆ.. ಬೇರೆ ಬೇರೆ ಆಯಾಮಗಳಿಗೆ ಹೋಗಬೇಕಿತ್ತು..ಅಷ್ಟರಲ್ಲಿ.. ನನ್ನ. ಉಪಾದ್ಯಾಯಿನಿ..ಮಗಳಿಗೆ..ಇಂಜಿನಿಯರಿಂಗ್.ವಿದ್ಯಾಭ್ಯಾಸ ದ ಸಲುವಾಗಿ ಬೆಂಗಳೂರಿಗೆ ಹಾರಿದರು..ನನ್ನ ..ಚಿತ್ರ ಕಲೆ ಬರೀ ರೇಖಾಚಿತ್ರ ಕ್ಕೆ ನಿಂತಿದೆ….ನೋಡೋಣ….ಅವಕಾಶಕ್ಕಾಗಿ ಕಾಯುತಿದ್ದೇನೆ…ಧನ್ಯವಾದಗಳು ಮೇಡಂ.

Leave a Reply to B.k.meenakshi Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: