ಆತ್ಮಾನುಬಂಧದ ಸಖಿಯೊಡನೆ ಒಂದು ಸಹೃದಯ ಸಂವಾದ

Share Button
ವರುಣ್ ರಾಜ್ ಜಿ.

ಕವಿ ಶ್ರೀ ರಾಘವೇಂದ್ರ ಡಿ. ತಳವಾರರ ಆತ್ಮಾನುಬಂಧದ ಸಖಿ ಕೃತಿಯ ಕುರಿತು ಇತ್ತೀಚೆಗೆ ತನುಶ್ರೀ ಪ್ರಕಾಶನದಿಂದ ಪ್ರಕಟಣೆಯಾಗಿದ್ದು ಅತ್ಯಲ್ಪ ಕಾಲದಲ್ಲಿಯೇ ಹಲವು ಸಹೃದಯರ ಮನಸ್ಸನ್ನು ಗೆದ್ದಿದೆ. ಈ ಕೃತಿಯು ರೂಪ – ಸ್ವರೂಪ ಮತ್ತು ವಿಷಯ ವ್ಯಾಪ್ತಿಯ ದೃಷ್ಠಿಯಿಂದ ಒಂದು ವಿಶಿಷ್ಟವಾದ ಕೃತಿ ಎನಿಸಿದ್ದು, ಓದುಗರನ್ನು ಎಲ್ಲಿಯೂ ನಿರಾಸೆಗೊಳಿಸದ ಗುಣ ಈ ಕೃತಿಯಲ್ಲಿದೆ.

“ಆತ್ಮಾನುಬಂಧದ ಸಖಿ” ಕೃತಿಯ ಕವನದ ಸಾಲುಗಳು ಪದ್ಯದಂತೆ ಓದುವವರಿಂದ ಪದ್ಯವಾಗಿಯೂ, ಗದ್ಯದಂತೆ ಓದುವವರಿಂದ ಗದ್ಯವಾಗಿಯೂ ಓದಿಸಿಕೊಳ್ಳುತ್ತವೆ. ಪದ್ಯದಂತೆ ಹಾಡಿದರೂ ಗದ್ಯದಂತೆ ಓದಿದರೂ ಅರ್ಥ ಮತ್ತು ಭಾವದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಕವಿಯು ಕಾವ್ಯ ನಿಯಮಗಳ ಬಂಧವನ್ನು ಮೀರಿ ಕೃತಿ ರಚಿಸಿದ್ದು, ಇದು ಈ ಕೃತಿಯ ವಿಶೇಷವೂ ಹೌದು. ಇಲ್ಲಿನ ಕವಿತೆಗಳಲ್ಲಿ ಪ್ರಾಸ ಸಹಜವಾಗಿ ಮೂಡಿ ಬಂದಿದೆ. ಪ್ರಾಸ ತರಲೇಬೇಕೆಂಬ ಒತ್ತಡಕ್ಕೆ ಕವಿ ಎಲ್ಲಿಯೂ ಸಿಲುಕಿಕೊಳ್ಳುವುದಿಲ್ಲ.

ಕೃತಿಯಲ್ಲಿನ ಕವನಗಳನ್ನು ಅಪ್ಪನ ಮೌಲ್ಯ-ಅಮ್ಮನ ವಾತ್ಸಲ್ಯ, ಹುಸಿಮನಸ್ಸು-ಸಿಹಿಗನಸು, ಅನುರಾಗ-ಅನುಭವ, ಬದುಕು – ಬವಣೆ- ಭರವಸೆ, ಸಮಾಜ- ಸುವಿಚಾರ, ಭಾವದುಸಿರ ಭಾವಬರಹ ಎಂಬ ಆರು ಉಪ ಶೀರ್ಷಿಕೆಗಳ ಅಡಿಯಲ್ಲಿ ವಿಂಗಡಿಸಿ, ಪ್ರತಿ ವಿಭಾಗದ ಪ್ರಾರಂಭದಲ್ಲಿ ನಿವೇದನಾ ರೂಪದ ಸಂದೇಶವನ್ನು ಕೊಟ್ಟಿರುವುದು ಈ ಕೃತಿಗೆ ಒಂದು ವಿಶೇಷ ಮೆರುಗನ್ನು ನೀಡಿದೆ.

ಆತ್ಮಾನುಬಂಧದ ಸಖಿ ಎಂಬ ಶೀರ್ಷಿಕೆಯು ಯುವ ಕವಿಯೊಬ್ಬನ ಪ್ರೇಮ ಕವಿತೆಗಳ ಸಂಗ್ರಹ ಎಂಬುದಾಗಿ ‘ಅವಳ ಲಜ್ಜೆ, ಎದೆಯ ಸಿಂಹಾಸಿನಿ ರತ್ನಮಂಜರಿ, ಮನದ ಬನದ ಹೂವು, ಮೂಗು ಮುರಿದು ಹೋದಾಕಿ, ಭಾವ ನಾದ, ಅವಳು, ಯಾರವಳು’ ಮುಂತಾದ ಕವಿತೆಗಳ ಮೂಲಕ ಮೇಲ್ನೋಟಕ್ಕೆ ಕಂಡರೂ ಕೃತಿಯ ಮುಖ ಪುಟವನ್ನು ಹಾಗೂ ಗೆಲ್ಲಬೇಕು ನೀವು ಗೆಲ್ಲಬೇಕು, ನೆನ್ನೆ – ಇಂದು- ನಾಳೆ, ಬಾಳು, ಚೇತನರು, ದೇವರಲ್ಲಿ ನಾನಿಡುವೆ ಅಹವಾಲು, ವರವೊಂದು ಕೊಡು ನನಗೆ, ಗಾಳಿದೀಪ ಮುಂತಾದ ಪದ್ಯಗಳನ್ನು ಗಮನಿಸಿದಾಗ ಕವಿಯ ಒಳ ಮನಸ್ಸಿನಲ್ಲಿರುವ ಸುಪ್ತ – ಗುಪ್ತ ಆಧ್ಯಾತ್ಮಿಕ ಅನುಭಾವದ ಒಂದು ‘ಟಚ್’ ಈ ಕವಿತೆಗಳನ್ನು ಆವರಿಸಿರುವುದು ನಮ್ಮ ಗಮನಕ್ಕೆ ಬರುತ್ತದೆ.

ಕೃತಿಯ ಆತ್ಮಾಭಿಮಾನಿ, ನಂಬಿಕೆ, ಹೃದಯ ವೈಶಾಲ್ಯತೆ, ನಾನು ನಾನಾಗಿ, ಕನಸೊಂದಿರಬೇಕು, ಮರೆತು ಬಿಡಿ, ಬದುಕು ಬರವಸೆ, ಗೆಲ್ಲಬೇಕೆ ? ನೀವು ಗೆಲ್ಲಬೇಕೆ?, ಸೋತವರು – ಗೆದ್ದವರು, ಗೆಲುವು, ಮತ್ತೊಂದು ಅವಕಾಶ, ಬಾಳ ಸ್ಪೂರ್ತಿ, ಯುವ ಭಾರತ, ಯುವದಿನ ಮುಂತಾದ ಕವನಗಳು ಓದುಗರನ್ನು ಮೋಟಿವೇಟ್ ಮಾಡುವ ಕೆಲಸವನ್ನು ಬಹಳ ಯಶಸ್ವಿಯಾಗಿ ಮಾಡುತ್ತವೆ.

ಉಳಿದಂತೆ,
‘ಅಗ್ನಿಪಥ’ ಕವಿತೆಯ
ಸೀತೆ ಒಮ್ಮೆ ಅಗ್ನಿ ಪರೀಕ್ಷೆ ಎದುರಿಸಿದಳು
ಈ ತಾಯಿಯ ದಾರಿ ಎಲ್ಲವೂ ಆಗ್ನಿಯೇ”
ಎಂಬ ಸಾಲುಗಳಲ್ಲಿ ವ್ಯಕ್ತವಾಗಿರುವ ನೋವು,

“ಹೃಯದ ವೈಶಾಲ್ಯತೆ” ಎಂಬ ಕವಿತೆಯ
“ನೋಯಿಸಿದವರ ಕ್ಷಮಿಸಿಬಿಡು
ನೊಂದವರಿಗೆ ಪ್ರೀತಿ ಕೊಡು
ಇದೇ ಮನುಜ ಧರ್ಮದ ತತ್ತ್ವ
ಪ್ರೀತಿಯೇ ಎಲ್ಲ ಸಂಬಂಧಗಳ ಸತ್ವ” ಎಂಬ ಸಾಲುಗಳಲ್ಲಿರುವ ಕವಿಯ ಹೃದಯ ವೈಶಾಲ್ಯತೆ,

“ಮರೆತು ಬಿಡು”ಎಂಬ ಕವಿತೆಯ
“ಮರೆಯುವುದು ಹೇಗೆಂದು ಹೇಳಿಕೊಡಿ. . . . . . . .
ನನ್ನೊಳಗಿನ;
ಋಣಾತ್ಮಕತೆಯ ಮರೆತು
ಧನಾತ್ಮಕತೆಯೆಡೆಗೆ ನಡೆವಂತೆ
ದ್ವೇಷ ಅಸೂಯೆಗಳ ಮರೆತು
ಪ್ರೇಮದ ಪ್ರತಿರೂಪ ನಾನಾಗುವಂತೆ” ಎಂಬ ಸಾಲುಗಳಲ್ಲಿರುವ ಆತ್ಮ ವಿಮರ್ಶೆ,

“ನಾನು ನಾನಾಗಿ” ಎಂಬ ಕವಿತೆಯ
“ನಾನು ಹಾಲು ಆಗದಿದ್ದರೇನಂತೆ,
ಸುಣ್ಣದ ನೀರಾಗಿ ಬಳಸಿದವರ ಮನೆಯ ಬೆಳಕಾಗುವೆ”,
“ನಾನು ವಿಶೇಷ ಆಗದಿದ್ದರೇನಂತೆ,
ಪ್ರತಿದಿನವೂ ವಿಕಾಸವಾಗುವೆ”,
“ನಾನು ಪ್ರಸಿದ್ದಿ ಆಗದಿದ್ದರೇನಂತೆ ಜ್ಞಾನ ಸಮೃದ್ಧನಾಗುವೆ”ಎಂಬು ಸಾಲುಗಳಲ್ಲಿನ ಕವಿಯ ವಿಧೇಯತೆ,

“ವಿಮರ್ಶಕಿ” ಕವಿತೆಯ
“ಮುನ್ನುಡಿಯನ್ನು ಮಾತ್ರ ಓದಿ,
ಮುನ್ನಡೆಯದೇ
ನನ್ನ ಬಾಳನ್ನು ವಿಮರ್ಶಿಸಿದ ನಿನ್ನ ಪರಿ ಸರಿಯೇ?” ಎಂಬ ಸಾಲುಗಳಲ್ಲಿನ ನೋವು ತುಂಬಿದ ಪ್ರಶ್ನೆ, ಇವು ಓದುಗರನ್ನು ಮತ್ತೆ ಮತ್ತೆ ಕಾಡದೇ ಇರಲಾರವು.

ಈ ಕೃತಿಯು ಒಬ್ಬ ಪ್ರೇಮಿಯನ್ನು, ಪ್ರೇಮಿಯ ವಿರಹವನ್ನು, ಸಂತನೊಬ್ಬನ ವಿಶ್ವಪ್ರೇಮವನ್ನು, ಒಬ್ಬ ವೈರಾಗಿಯನ್ನು, ಒಬ್ಬ ಮೋಟಿವೇಷನಲ್ ಮಾತುಗಾರನನ್ನು, ಒಬ್ಬ ವಿಧೇಯ ವಿದ್ಯಾರ್ಥಿಯನ್ನು, ಬಹುಮುಖೀ ವ್ಯಕ್ತಿತ್ವದ ಕವಿಯನ್ನು, ಮಾತೃ ಪ್ರೇಮಿಯನ್ನು, ಕಾಯಕ ನಿಷ್ಠ ಪ್ರಜೆಯನ್ನು ಓದುಗರ ಮುಂದೆ ಅನಾವರಣ ಮಾಡುತ್ತಾ ಸಾಗುತ್ತದೆ. ಇದು ಕವಿಯ ಬಹುಮುಖಿ ವ್ಯಕ್ತಿತ್ವದ ಅನಾವರಣವೂ ಹೌದು.

ಇಷ್ಟೆಲ್ಲ ವಿಶಿಷ್ಟತೆಗಳನ್ನು ಹೊಂದಿದಾಗ್ಯೂ ಎಲ್ಲ ಚೊಚ್ಚಲ ಕೃತಿಗಳಲ್ಲಿ, ಪ್ರಾಥಮಿಕ ಬರಹಗಳಲ್ಲಿ  ಮತ್ತು ಬರಹಗಾರರಲ್ಲಿ ಇರಬಹುದಾದ ಸಾಮಾನ್ಯ ಮಿತಿ ಹಾಗೂ ಲೋಪಗಳಿಂದ ಈ ಕೃತಿ ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ಹೇಳಲು ಬರುವುದಿಲ್ಲ. ಈ ಕೃತಿ ಸಮಕಾಲೀನ ವಿದ್ಯಮಾನಗಳ ಕುರಿತು, ಸಾಮಾಜಿಕ ಸಂವೇದನೆಗಳ ಕುರಿತು ಸಂಪೂರ್ಣವಾಗಿ ಮೌನ ವಹಿಸಿದೆ. ಅನುಭವ ಮತ್ತು ಅನುಭಾವಗಳ ಮತ್ತು ಭಾಷಾ ಪ್ರೌಡಿಮೆ, ವಿಷಯ ಪ್ರಬುದ್ಧತೆಗಳ ಗೈರು ಹಾಜರಿ ಕೃತಿಯ ಕೆಲವು ಕವನಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಓದುಗ ಸಹೃದಯ ಬಾಂಧವರು ಕೃತಿಯನ್ನು ಕೊಂಡು – ಓದಿ ಕೃತಿಕಾರರನ್ನು ಪ್ರೋತ್ಸಾಹಿಸಿ ಅವರ ಸಾಹಿತ್ಯ ಪಯಣದ ಹಾದಿಗೆ ಭರವಸೆಯ ಬೆಳಕನ್ನು ತುಂಬಬೇಕೆಂದು ಕೋರುವೆ. (ಪ್ರತಿಗಳಿಗಾಗಿ ಸಂಪರ್ಕಿಸಿ : 8105242732 )

ನಮಸ್ಕಾರಗಳು.

-ಶ್ರೀ ವರುಣ್ ರಾಜ್ ಜಿ.
ವಿಚಾರ ಮಂಟಪ ಸಾಹಿತ್ಯ ಬಳಗ.

4 Responses

  1. ಪುಸ್ತಕ ಪರಿಚಯ ಚೆನ್ನಾಗಿದೆ.

  2. ನೇತ್ರ g n says:

    ಮನಸು ಮೋಹಕವಾಗಿದೆ. ಅರ್ಥ ಗರ್ಭಿತ ಪದಗಳುಳ್ಳ ಸಾಲುಗಳು ನಿಲ್ಲಿಸದೆ ಓದಿಸಿಕೊಂಡು ಹೋಗುವಂತಿವೆ.

  3. ಶಂಕರಿ ಶರ್ಮ says:

    ಸೊಗಸಾದ ವಿವರಣಾತ್ಮಕ ಕೃತಿ ಪರಿಚಯ.

  4. Padma Anand says:

    ಸವಿಸ್ತಾರವಾದ ಕೃತಿ ಪರಿಚಯ ಪುಸ್ತಕದ ಬಗ್ಗೆ ಒಲವು ಮೂಡಿಸುವಂತಿದೆ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: