ಕಾದಂಬರಿ: ನೆರಳು…ಕಿರಣ 42

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
‘ಸಿರಿ’ ಬೆಳೆಯುತ್ತಾ ಬರುತ್ತಿದ್ದಂತೆ ಮನೆಯ ವಿದ್ಯಮಾನಗಳ ಪರಿಚಯ, ಹೆತ್ತಮ್ಮನ ಗಾಂಭೀರ್ಯ, ವೇಷಭೂಷಣ, ಅನುಸರಿಸುತ್ತಿರುವ ಕಠಿಣ ಕಟ್ಟುಪಾಡುಗಳು ಮನಸ್ಸನ್ನು ಘಾಸಿಗೊಳಿಸುತ್ತಿದ್ದವು. ಈ ಬಗ್ಗೆ ಹಿರಿಯರನ್ನು ಪ್ರಶ್ನಿಸಿದಾಗೆಲ್ಲ ಸಾಮಾಜಿಕ ರೀತಿ ರಿವಾಜುಗಳ ದೊಡ್ಡ ಪಟ್ಟಿಯನ್ನೇ ಮುಂದಿಡುತ್ತಿದ್ದರು. ಪುಟ್ಟ ಭಾಷಣವನ್ನೇ ಮಾಡುತ್ತಿದ್ದರು. ಇವುಗಳಿಂದ ಅವಳಿಗೆ ಸಮರ್ಪಕ ಉತ್ತರವೆಂದೆನಿಸದೆ ಮೌನಕ್ಕೆ ಮೊರೆಹೋಗುವುದನ್ನು ಅಭ್ಯಾಸ ಮಾಡಿಕೊಂಡಳು. ಅಷ್ಟೇ ಅಲ್ಲದೆ ವಯಸ್ಸಿಗೆ ಮೀರಿದ ಗಾಂಭೀಂii ಅವಳಲ್ಲಿ ಮೂಡಿತು.

ಮನೆಯಲ್ಲಿಯೇ ಸಂಗೀತ ಕಲಿಕಾ ಕೇಂದ್ರವಿದ್ದು, ತಾಯಿಯೇ ಗುರುವಾಗಿದ್ದರೂ ಅವಳಿಗೆ ಅದರಲ್ಲಿ ಅಷ್ಟೊಂದು ಆಸಕ್ತಿ ಮೂಡದೆ ವೀಣಾವಾದನ ಕಲಿಕೆಗೆ ಒಲವು ತೋರಿದಳು. ಅಗ ಭಾಗ್ಯ ಯಾವ ತಕರಾರು ಮಾಡದೆ ಮಗಳಿಗೆ “ಆಯಿತು ಸಿರಿ ಶ್ರದ್ಧೆಯಿಟ್ಟು ಕಲಿತುಕೋ. ಇನ್ನೊಬ್ಬರಿಗೆ ಕಲಿಸುವ ಮಟ್ಟಕ್ಕೆ ಬೆಳೆಯಲು ಪ್ರಯತ್ನಿಸು” ಎಂದು ಹಾರೈಸಿ ಗೌರಿಯಮ್ಮನ ತಮ್ಮ ಮತ್ತವರ ಹೆಂಡತಿ ನಡೆಸುತ್ತಿದ್ದ ಸಂಗಿತಶಾಲೆಗೆ ಸೇರಿಸಿದಳು. ಅಮ್ಮನ ನಿರೀಕ್ಷೆಯನ್ನು ಹುಸಿಗೊಳಿಸದೆ ತನ್ನ ಪಠ್ಯ ವಿದ್ಯಾಭ್ಯಾಸದ ಜೊತೆಗೆ ವೀಣಾಕಲಿಕೆ ಎರಡನ್ನೂ ಸಾಗಿಸುತ್ತಾ ಮುನ್ನಡೆಯುತ್ತಿದ್ದಳು ಸಿರಿ.

ಅಪೂರ್ವ ಸೌಂದರ್ಯವತಿ, ಮಿಗಿಲಾಗಿ ವೀಣೆ ಹಿಡಿದು ಅಭ್ಯಾಸದಲ್ಲಿ ಕುಳಿತಳೆಂದರೆ ಸಾಕ್ಷಾತ್ ಸರಸ್ವತಿಯೇ ಭೂಮಿಗಿಳಿದು ಬಂದಂತೆ ಕಾಣುತ್ತಿದ್ದ ಮಗಳನ್ನು ಮರೆಯಲ್ಲಿಯೇ ನಿಂತು ವೀಕ್ಷಿಸಿ ಆನಂದ ಪಡುತ್ತಿದ್ದಳು ಭಾಗ್ಯ. ತನ್ನ ಮಗಳ ಚಲನವಲನಗಳನ್ನೆಲ್ಲ ಗಮನಿಸುತ್ತಾ ಅವಳ ಆಸೆ ಆಕಾಂಕ್ಷೆಗಳನ್ನು ಈಡೇರಿಸುತ್ತಿದ್ದರೂ ಅವಳಿಂದ ಅಂತರ ಕಾಯ್ದುಕೊಂಡು ಬರುತ್ತಿದ್ದ ಭಾಗ್ಯಳನ್ನು ಗಮನಿಸುತ್ತಿದ್ದ ಲಕ್ಷ್ಮಿ ಒಂದು ದಿನ ತಡೆಯಲಾರದೆ ಅದರ ಬಗ್ಗೆ ಪ್ರಶ್ನಿಸಿಯೇ ಬಿಟ್ಟರು.

ತಾಯಿಯ ಮಾತುಗಳನ್ನು ಕೇಳಿಸಿಕೊಂಡ ಭಾಗ್ಯ “ಹೌದಮ್ಮಾ, ನನ್ನ ಬದುಕಿನಲ್ಲಿ ತುಂಬ ಇಷ್ಟಪಡುತ್ತಿದ್ದವರನ್ನೆಲ್ಲ ಕಳೆದುಕೊಂಡಿದ್ದೇನೆ. ಅದಕ್ಕೆ ಮುದ್ದಿನ ಮಗಳಾದರೂ ಅವಳನ್ನು ಅತಿಯಾಗಿ ಹಚ್ಚಿಕೊಂಡರೆ ಅವಳೂ ದೂರಾಗುವಳೇನೋ ಎಂಬ ಭಯ. ಅದಕ್ಕೇ ನಾನು ದೂರದಿಂದಲೇ ಅವಳಿಗೆಲ್ಲ ನೆರವಾಗುತ್ತಾ ತಾಯಿಯ ಕರ್ತವ್ಯವನ್ನು ನೆರವೇರಿಸುತ್ತಿದ್ದೇನೆ.” ಎಂದು ಹೇಳಿ ಅಲ್ಲಿ ನಿಲ್ಲದೇ ಎದ್ದು ಒಳಗೆ ನಡೆದು ಬಿಟ್ಟಳು ಭಾಗ್ಯ. ಮಗಳ ಮಾತಿನ ಹಿಂದೆ ಇರುವ ನೋವಿನಾಳವನ್ನರಿತ ಲಕ್ಷ್ಮಿ ಮತ್ತೆಂದೂ ಅವಳನ್ನು ಪ್ರಶ್ನೆ ಮಾಡಲು ಹೋಗಲಿಲ್ಲ.

ಕಾಲ ಸರಿದಂತೆ ವಿಜ್ಞಾನದ ಆವಿಷ್ಕಾರಗಳು ಹೆಚ್ಚಾಗತೊಡಗಿದವು. ಅಂಗೈನಲ್ಲೇ ಅರಮನೆಯೇನು ಇಡೀ ಜಗತ್ತನ್ನೇ ತೋರಿಸುವ ಮೊಬೈಲ್ ಎಂಬ ಪುಟ್ಟ ಯಂತ್ರದ ಸೇರ್ಪಡೆ, ಮತ್ತು ಎರಡು ಚಕ್ರದ ಮೋಟರ್‌ಗಾಡಿಯು ಸಿರಿಯ ಕೈಸೇರಿತು. ಭಾವನಾಳ ಮಕ್ಕಳಿಂದ ವಾಹನ ನಡೆಸುವ ತರಬೇತಿ ಪಡೆದಳು. ಅಷ್ಟರಲ್ಲಿ ಪಿ.ಯು.ಸಿ., ಮುಗಿಸಿ ವೈದ್ಯಕೀಯ ಕಾಲೇಜಿಗೆ ಸೇರುವ ಅಭಿಲಾಷೆಯನ್ನು ವ್ಯಕ್ತಪಡಿಸಿದಳು. ಅದನ್ನು ಕೇಳಿದ ಬಂಧುಬಳಗ, ಆಪ್ತೇಷ್ಟರು “ಅಯ್ಯೋ ಆ ಹೆಣ ಕೊಯ್ಯುವ ಓದೇ, ರಾಮ ರಾಮಾ , ಹಾರವರ ಮನೆಯಲ್ಲಿ ಹುಟ್ಟಿ, ಅದೂ ಹೆಣ್ಣು ಮಗಳಾಗಿ, ಛೇ..ಏನುಕಾಲ ಬಂತಪ್ಪಾ, ಓದಲೇ ಬೇಕೆಂದರೆ ಬೇರೆ ಓದೇ ಇಲ್ಲವೇ?” ಹಾಗೆ ಹೀಗೆಂದು ಮೂಗು ಮುರಿದವರೇ ಹೆಚ್ಚು. ಈ ಮಾತುಗಳನ್ನು ಕೇಳಿ ಲಕ್ಷ್ಮಿ, ಭಟ್ಟರು, ನಾಣಜ್ಜ ಎಲ್ಲರೂ ವಿಚಲಿತರಾದರು. ಮೂರೂಜನ ಕುಳಿತು ಚರ್ಚಿಸಿ ಭಾಗ್ಯಳಿಗೆ ಹೇಳಿ ಮೊಮ್ಮಗಳ ಮನಸ್ಸನ್ನು ಬೇರೆಡೆಗೆ ಒಲಿಸಬೇಕೆಂದುಕೊಂಡರು. ನೇರವಾಗಿ ವಿಷಯ ಪ್ರಸ್ತಾಪಿಸಲಾರದೆ “ವೈದ್ಯಕೀಯ ವಿದ್ಯಾಭ್ಯಾಸವೆಂದರೆ ಐದುವರ್ಷಗಳ ದೀರ್ಘಾವಧಿಯ ಓದು, ನಂತರ ಒಂದು ವರ್ಷದ ತರಬೇತಿ ಕೂಡ ಉಂಟು. ಇನ್ನೂ ಹೆಚ್ಚಿನ ಪರಿಣತಿ ಪಡೆಯಬೇಕೆಂದರೆ ಮತ್ತೂ ಓದಬೇಕು. ಅಷ್ಟೊತ್ತಿಗೆ ವಯಸ್ಸು ಮೀರಿದರೆ ಮದುವೆಗೆ, ಮುಂದಿನ ಬದುಕಿಗೆ ಬಹಳ ಕಷ್ಟವಾಗುತ್ತದೆ. ಅಲ್ಲದೆ ಅದಕ್ಕೆ ತಗುಲುವ ಖರ್ಚುವೆಚ್ಚ ಬಹಳವೆಂದು ಕೇಳಿದ್ದೇವೆ. ಯೋಚಿಸು. ಬೇರೆ ಯಾವುದಾದರೂ ಕೋರ್ಸಿಗೆ ಸೇರಲಿ. ಹಾಗೆ ಹೀಗೆಂದು” ತಮ್ಮ ಮನಸ್ಸಿನ ಆತಂಕವನ್ನು, ಅಭಿಪ್ರಾಯವನ್ನು  ಮಗಳಿಗೆ ಪರೋಕ್ಷವಾಗಿ ತಿಳಿಸಿದರು.

ಅವರೆಲ್ಲರ ಅಭಿಪ್ರಾಯವನ್ನು ಗಮನವಿಟ್ಟು ಕೇಳಿದ ಭಾಗ್ಯ “ಅಮ್ಮಾ, ಕಾಲವು ಬದಲಾಗಿದೆ. ಯಾರೋ ಏನೋ ಹೇಳುತ್ತಾರೆಂದು ಗೊಡ್ಡು ಬೆದರಿಕೆಗಳಿಗೆ ಹೆದರುವ ಆವಶ್ಯಕತೆಯಿಲ್ಲ. ನನ್ನ ಮಗ:ಳಿಗೆ ಇಷ್ಟವಾಗುವುದನ್ನೇ ಅವಳು ಓದಲಿ. ಕಂಕಣಬಲ ಕೂಡಿಬಂದಾಗ ಯಾರಾದರೂ ಜೊತೆಗಾರ ಸಿಕ್ಕೇ ಸಿಗುತ್ತಾನೆ. ಮುಂದೆ ಏನೋ ಆಗುತ್ತದೆಂದು ಇಂದು ನಮ್ಮ ಮಗಳ ಆಸೆಯನ್ನು ಏಕೆ ಮುರುಟಿಸಬೇಕು? ನನ್ನ ಮಗಳಿಗೆ ಹಿಂದೆ ಮುಂದೆ ಹುಟ್ಟಿದವರ್‍ಯಾರೂ ಇಲ್ಲ ತೊಂದರೆಯಾಗುವುದಕ್ಕೆ, ಅಲ್ಲದೆ ನಮ್ಮ ಕೈಯಲ್ಲಿ ಓದಿಸಲಾಗದಷ್ಟು ಖರ್ಚೇನಲ್ಲ. ನಾನೆಲ್ಲವನ್ನೂ ವಿಚಾರಿಸಿದ್ದೇನೆ. ವರ್ಷದ ಕಾಲೇಜು, ಪರೀಕ್ಷೆ ಪೀಜೆಲ್ಲವೂ ಸೇರಿದರೂ ಒಂದು ಸಾವರದೊಳಗಿದೆ. ಇನ್ನು ಕಾಲೇಜು ಮನೆಗೆ ಹೋಗಿಬರುವುದು, ಪುಸ್ತಕಗಳ ಖರ್ಚು ಅವೆಲ್ಲವನ್ನೂ ನಿಭಾಯಿಸುವಷ್ಟು ಛಾತಿ ನನ್ನ ಮಗಳಲ್ಲಿದೆ. ಅವಳು ದುಂದುಗಾರಳೇನಲ್ಲ. ಮೇಲಾಗಿ ನಾನು ಇಷ್ಟುಕಾಲ ಕೂಡಿಟ್ಟಿರುವ ಹಣ ಅವಳಿಗಲ್ಲದೆ ಮತ್ಯಾರಿಗೆ?” ಎಂದು ತನ್ನ ಸ್ಪಷ್ಟ ನಿಲುವನ್ನು ತಿಳಿಸಿ ಮಗಳನ್ನು ವೈದ್ಯಕೀಯ ಕಾಲೇಜಿಗೆ ಸೇರಿಸುವ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಹೇಳಿದಳು.

PC: Internet

ಮುಂದೆ ಈ ವಿಷಯದ ಬಗ್ಗೆ ಹೊರಗಡೆ ಎಷ್ಟೇ ಆಕ್ಷೇಪಣೆ, ಕೊಂಕಿನ ಮಾತುಗಳು ಬಂದು ಹೋದರೂ ಮನೆಯೊಳಗೆ ಮತ್ತೆ ಚರ್ಚೆ ನಡೆಯದೆ ಸಿರಿ ಬೆಂಗಳೂರಿನ ಸರ್ಕಾರಿ ವೈದ್ಯಕಿಯ ಕಾಲೇಜಿಗೆ ಸೇರಿದಳು. ವೈದ್ಯಕೀಯ ಶಿಕ್ಷಣವನ್ನು ನಿಗದಿತ ಸಮಯದಲ್ಲಿ ಯಶಸ್ವಿಯಾಗಿ ಪೂರೈಸಿ ಎಂ.ಬಿ.ಬಿ.ಎಸ್., ಪದವೀಧರಳಾದಳು. ಮುಂದೆ ಸ್ನಾತಕೋತ್ತರ ಪದವಿಯನ್ನು ಓದಿ ಸ್ತ್ರೀರೋಗತಜ್ಞೆ ಎಂಬ ಪದವಿಯನ್ನು ಪಡೆದು ಡಾ. ಸಿರಿಯಾಗಿ ಹೊರಬಂದಳು.

ಅವಳ ಮದುವೆ ವಿಷಯ ಪ್ರಸ್ತಾಪಕ್ಕೆ ಬಂದಾಗ ಲಕ್ಷ್ಮಿ, ಭಟ್ಟರ ಕಿವಿಗಳು ನೆಟ್ಟಗಾದವು. ಅತಿ ಸಂಭ್ರಮ, ಉತ್ಸಾಹದಿಂದ “ಸಿರಿ ಪುಟ್ಟೀ, ನಿನಗೆ ಎಂಥಹ ಹುಡುಗ ಬೇಕು?” ಎಂದು ಕೇಳಿದರು.

ಅದನ್ನು ಕೆಳಿದ ಸಿರಿ ಮನಸ್ಸಿನಲ್ಲೆ ನಗುತ್ತಾ “ಅಜ್ಜೀ ನಾನು ಒಬ್ಬರನ್ನು ಇಷ್ಟಪಟ್ಟಿದ್ದೇನೆ. ಅವರು ನನ್ನ ಸಹಪಾಠಿ. ಡಾ. ಶ್ರೀಧರ್ ಅಂತ, ನಮ್ಮ ಮತಸ್ಥರೇ, ಆದರೆ ಒಳಪಂಗಡ ಬೇರೆ. ಅವರಿಗೆ ಹೆತ್ತವರಿಲ್ಲ. ಸಾಕಿದ ತಂದೆ ತಾಯಿಗಳು ನಮ್ಮ ಕಲ್ಯಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ರಿಜಿಸ್ಟರ್ ಮದುವೆ ಮಾಡಿಕೊಂಡು ಇಬ್ಬರೂ ಸೇರಿ ಒಂದು ಔತಣಕೂಟ ಏರ್ಪಡಿಸಿ ಬಂಧುಗಳನ್ನು, ಆಪ್ತವರ್ಗದವರನ್ನು ಆಹ್ವಾನಿಸುವುದೆಂದು ನಿರ್ಧರಿಸಿದ್ದೇವೆ. ದೇವಸ್ಥಾನದಲ್ಲಿ ಒಂದು ಪೂಜೆಯೂ ಉಂಟು. ಔತಣಕೂಟಕ್ಕೆ ಎಲ್ಲರೂ ಬಂದರೆ ಸಂತೋಷ. ಬಾರದಿದ್ದರೆ ದುಃಖವಿಲ್ಲ. ಅಮ್ಮನೊಡನೆ ಎಲ್ಲಾ ವಿಷಯವನ್ನೂ ತಿಳಿಸಿದ್ದೇನೆ. ಅವರಿಗೂ ಸಮ್ಮತವಿದೆ. ನೀವುಗಳೂ ದೊಡ್ಡ ಮನಸ್ಸಿನಿಂದ ಒಪ್ಪಿ ನಮ್ಮನ್ನು ಆಶೀರ್ವದಿಸಿ” ಎಂದು ಅವರ ಕುತೂಹಲಕ್ಕೆ ಮುಕ್ತಾಯ ಹಾಡಿದಳು ಸಿರಿ.

ಮೊಮ್ಮಗಳು ಹೇಳಿದ್ದನ್ನು ಕೇಳಿ ಲಕ್ಷ್ಮಿ ಮತ್ತು ಭಟ್ಟರಿಗೆ ಮನದಲ್ಲಿ ನಿರಾಸೆಯಾದರೂ ಬಹಿರಂಗವಾಗಿ ಅದನ್ನು ತೋರ್ಪಡಿಸಿಕೊಳ್ಳದೆ ಹೇಗೋ ಗೃಹಸ್ಥಾಶ್ರಮಕ್ಕೆ ಕಾಲಿಡುವ ಮನಸ್ಸು ಮಾಡಿದಳಲ್ಲ ಅಷ್ಟೇ ಸಾಕು ಎಂದುಕೊಂಡು “ಆಯಿತು ಪುಟ್ಟಿ, ನಮ್ಮ ಆಶೀರ್ವಾದ ಯಾವಾಗಲೂ ನಿನಗೆ ಇದ್ದೇ ಇರುತ್ತದೆ” ಎಂದರು.

5 Responses

  1. ನಯನ ಬಜಕೂಡ್ಲು says:

    ಸೊಗಸಾಗಿದೆ ಕಥೆ

  2. ಶಂಕರಿ ಶರ್ಮ says:

    ತನ್ನ ಮಗಳ ಸುಂದರ ಭವಿಷ್ಯಕ್ಕೆ ಮರೆಯಿಂದಲೇ ಬೆಂಬಲ ನೀಡುತ್ತಾ ಜೀವನ ಸವೆಸುತ್ತಿರುವ ಭಾಗ್ಯಳ ಬಗೆಗೆ ಕನಿಕರವೆನಿಸುತ್ತದೆ. ವೈದ್ಯೆಯಾಗುತ್ತಿರುವ ಸಿರಿಯ ಬಗೆಗೆ ಅಭಿಮಾನ ಮೂಡುತ್ತದೆ. ಚಂದದ ಕಥಾ ಹಂದರ …ನಾಗರತ್ನ ಮೇಡಂ

  3. ಧನ್ಯವಾದಗಳು… ನಯನ..ಹಾಗೂ.. ಶಂಕರಿ.. ಮೇಡಂ.

  4. Padmini Hegade says:

    ಕಥಾ ಹಂದರ ಚೆನ್ನಾಗಿ ಹಬ್ಬುತ್ತಿದೆ!

  5. ಧನ್ಯವಾದಗಳು ಪದ್ಮಿನಿ.. ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: