ಪಾಂಡವ ಪುರೋಹಿತ ಧೌಮ್ಯ ಋಷಿ

Share Button

ಬದುಕಿನಲ್ಲಿ ಕಷ್ಟ ಕಾರ್ಪಣ್ಯಗಳು ಬೆಂಬಿಡದೆ ಕಾಡಿದಾಗ ಧೃತಿಗೆಡುತ್ತೇವೆ. ನಮ್ಮ ಮನಸ್ಸಾಕ್ಷಿ ಮುಗ್ಗರಿಸಿ ಬೀಳುತ್ತದೆ. ಇಂತಹ ಪರಿಸ್ಥಿತಿ ತೀರ ಹದಮೀರಿದಾಗ ಕೆಲವು ವೇಳೆ ಆತ್ಮಹತ್ಯೆಗೆ ಮನಸ್ಸು ವಾಲುವುದೂ ಇದೆ. ಆಗ ಧೈರ್ಯ ಸಾಂತ್ವನ ಹೇಳಿ ಮೇಲಕ್ಕೆತ್ತಲು ಆತ್ಮೀಯರೆನಿಸಿದವರು ಬಳಿಯಿದ್ದರೆ ಬಹಳ ಉಪಕಾರವಾಗುತ್ತದೆ.ಆತ್ಮಹತ್ಯೆಯತ್ತ ಮನಸ್ಸು ಮಾಡಿದವರನ್ನೂ ವಿವೇಕಯುತ ವಾಣಿಯಿಂದ ಎಚ್ಚರಿಸಿ ಸಮಾಧಾನ ನೀಡಿದಾಗ ಅವರು ಜೀವನದತ್ತ ಮುಖ ಮಾಡುವುದನ್ನುಕಾಣುತ್ತೇವೆ. ಬದುಕಿನ ಬವಣೆಗಳು ತಪ್ಪಿದ್ದಲ್ಲ. ಅದು ಎಲ್ಲರ ಬೆನ್ನೂ ಹತ್ತಿದೆ. ಇದಕ್ಕೆ ದೃಷ್ಟಾಂತವಾಗಿ ಪುರಾಣ ಪುರುಷರ ಜೀವನದಿಂದಲೂ ಬೇಕಾದಷ್ಟು ಪುರಾವೆಗಳು ನಮಗೆ ಸಿಗುತ್ತವೆ. “ನಿನ್ನ ಜೊತೆಗೆ ನಾನಿದ್ದೇನೆ. ಧೃತಿಗೆಡಬೇಡ, ಹೇಡಿಯಾಗಬೇಡ’ ಎಂದು ಧೈರ್ಯೋತ್ಸಾಹ ತುಂಬುವಂತಹ ಸಂಪನ್ಮೂಲ ವ್ಯಕ್ತಿಗಳು ಆಪ್ತರಾಗಿ ಬಂದರೆ ಅದೆಷ್ಟೋ ಅವಘಢಗಳು ತಪ್ಪಿ ತನ್ನಿಂತಾನೇ ಶಾಂತವಾತಾವರಣ ಉಂಟಾಗುತ್ತದೆ.

ಬದುಕಿನ ಕಷ್ಟಕ್ಕೆ ಹೆದರಿ ವೈರಾಗ್ಯ ತಂದುಕೊಂಡು ಜೀವನವೇ ಬೇಡ ಎನ್ನುವವರಿಗೆ ಮತ್ತೆ ಧೈರ್ಯ ತುಂಬಿ ಜೀವನಕ್ಕೆಳಸುವುದೆಂದರೆ ಅದು ಸಾಮಾನ್ಯ ಮಾತಲ್ಲ. ನಿಕ್ರೋಧ, ಸಂಯಮ, ಸಮಾಧಾನಿಸುವ ಕಲೆ ಎಲ್ಲವೂ ತಿಳಿದಿರಬೇಕಾಗುವುದಲ್ಲದೆ ನಿಪುಣರಾಗಿರಬೇಕಾಗುತ್ತದೆ. ಇಂತಹ ಕೆಲಸ ಮಾಡಿದವರಲ್ಲಿ ಕೆಲವು ಋಷಿವರ್ಯರುಗಳಿದ್ದರು. ಅವರಲ್ಲಿ ಧೌಮ್ಯರು ಒಬ್ಬರು. ಅವರು ಯಾರಿಗೆ, ಯಾವ ಸಂಧರ್ಭದಲ್ಲಿ ಧೈರ್ಯ ತುಂಬಿದರು ಎಂಬುದಾಗಿ ಅವರ ಬಗ್ಗೆ ಒಂದಿಷ್ಟು ತಿಳಿಯೋಣ.

ಧೌಮ್ಯರ ತಂದೆ ಅಷ್ಟವಸುಗಳಲ್ಲಿ ಒಬ್ಬನಾದ ಪ್ರತ್ಯೂಷ. ಬ್ರಹ್ಮರ್ಷಿ ದೇವಲನು ಈತನ ಸೋದರ. ಈತನು ಕಶ್ಯಪ ಮುನಿಯ ಗೋತ್ರದವನು. ದೌಮ್ಯರಿಗೆ ”ಅಯೋದನ” ನೆಂಬ ಹೆಸರೂ ಇದೆ. ಆಪೋದನನು ಇವರ ಪುತ್ರ. ಇವರು ಪಾಂಡವರ ಪುರೋಹಿತರೂ ಹಿತಚಿಂತಕರೂ ಆಗಿದ್ದರು. ಅಂಗಾರ ಪರ್ಣನು ಪಾಂಡವರಿಗೆ ಧೌಮ್ಯರನ್ನು ಪುರೋಹಿತರನ್ನಾಗಿ ಮಾಡಿಕೊಳ್ಳುವಂತೆ ಸೂಚನೆಯಿತ್ತನು. ಧೌಮ್ಯ ಋಷಿಯು ಧರ್ಮರಾಜನಿಗೆ ಸೂರ್ಯೋಷ್ಟೋತ್ತರ ಶ್ಲೋಕವನ್ನು ಉಪದೇಶ ಮಾಡಿ

ಸೂರ್ಯನಿಂದ ಆಕ್ಷಯ ಪಾತ್ರೆಯನ್ನು ಕೊಡಿಸಿದನು. ಪಾಂಡವರು ಅವರ ದಾಯಾದಿಗಳಾದ ಕೌರವರೊಡನೆ ದುರ್ಯೋದನನ ಒತ್ತಡದಿಂದ ಜೂಜಾಡಬೇಕಾಗುತ್ತದೆ. ಶಕುನಿ ದುರ್ಯೋದನರು ಕಪಟದಿಂದ ಜೂಜಾಡಿ ಪಾಂಡವರನ್ನು ಸೋಲಿಸುತ್ತಾರಷ್ಟೆ ! ಎಲ್ಲವನ್ನೂ ಕಳೆದುಕೊಂಡ ಪಾಂಡವರು ಕಾಡುಪಾಲಾಗಿ ಅತೀವ ದುಃಖದಲ್ಲಿದ್ದಾಗ ಅವರ ಶೋಕತಪ್ತ ಮನಕ್ಕೆ ಶಾಂತಿ ನೀಡುವ ಕೆಲಸವನ್ನು ಪುರೋಹಿತರಾದ ಧೌಮ್ಯ ಋಷಿಗಳು ಮಾಡುತ್ತಾರೆ. ಅವರ ಸಂಕಷ್ಟವನ್ನು ಕಡಿಮೆಗೊಳಿಸಲು ಅವರಿಂದಲೂ ಅಧಿಕ ರೀತಿಯಲ್ಲಿ ಬವಣೆಪಟ್ಟವರ ಸತ್ಯಕಥೆಗಳನ್ನು ಹೇಳಿ ಸಮಾಧಾನಪಡಿಸುತ್ತಾರೆ.

ಮಾತ್ರವಲ್ಲ ಅನೇಕ ತೀರ್ಥಗಳ ಮಹಿಮೆಗಳನ್ನೂ ವಿವರಿಸುತ್ತಾರೆ. ಅಜ್ಞಾತ ವಾಸಕಾಲದಲ್ಲೂ ಪಾಂಡವರ ಅಗ್ನಿ ಹೋತ್ರಗಳನ್ನು ಕಾಪಾಡಿಕೊಂಡು ಅರಣ್ಯದಲ್ಲೇ ಇರುತ್ತಾರೆ. ಧೌಮ್ಯರು ಪಾಂಡವರ ಹಿತಚಿಂತನೆ ಮಾಡುತ್ತಿದ್ದರು ಎಂಬುದಕ್ಕೆ

ವಿಶೇಷ ಉದಾಹರಣೆ. ಧೌಮ್ಯರು ಊಚಕ ತೀರ್ಥದ ಬಳಿ ತಪಸ್ಸು ಮಾಡುತ್ತಿದ್ದರಂತೆ. ಅರುಣಿ, ಉಪಮನ್ಯು, ಬೈದ ಮೊದಲಾದವರು ಇವರ ಶಿಷ್ಯರಾಗಿದ್ದರು. ಧೌಮ್ಯರು ಶಿವನಸಹಸ್ರ ನಾಮವನ್ನು ರಚಿಸಿದರೆಂದೂ ಉಲ್ಲೇಖವಿದೆ.

ಸಂಕಷ್ಟ ಪೀಡಿತರಿಗೆ, ಸಂಸಾರ ದುಃಖಗಳಿಗೆ ಅವರಿಗಿಂತಲೂ ಅಧಿಕ ನೊಂದವರನ್ನು ಉದಾಹರಿಸಿ ಸಾಂತ್ವನ ಪಡಿಸಲು ಧೌಮ್ಯರು ನಮಗೆ ಪರೋಕ್ಷವಾಗಿ ತಿಳಿಸುತ್ತಾರೆ. ಸೇವೆ, ತ್ಯಾಗ ಮೊದಲಾದ ಜೀವನ ಮೌಲ್ಯಗಳನ್ನು ತಿಳಿಯಲು ಇಂತಹ ಕತೆಗಳು ನಮಗೆ ನೆರವಾಗುತ್ತವೆ.

ವಿಜಯಾ ಸುಬ್ರಹ್ಮಣ್ಯ, ಕುಂಬಳೆ

9 Responses

  1. Vijayasubrahmanya says:

    ಧನ್ಯವಾದಗಳು ಓದುಗರಿಗೆ ಹಾಗೂ ಅಡ್ಮಿನರ್ ಹೇಮಮಾಲಾ ಅವರಿಗೆ.

  2. Vijayasubrahmanya says:

    ನಮಸ್ಕಾರ.
    ಈ ಲೇಖನದಲ್ಲಿ ಎರಡು ಮೂರು ಕಡೆ ಧೌಮ್ಯ ಆಗಬೇಕಾದಲ್ಲಿ ಭೌಮ್ಯ ಎಂಬ ಪ್ರಿಂಟ್ ಮಿಸ್ಟಿಕ್ ಇದೆ. ಸರಿಪಡಿಸಬೇಕಾಗಿ ವಿನಂತಿ.

  3. ನಯನ ಬಜಕೂಡ್ಲು says:

    Nice

  4. ಎಂದಿನಂತೆ… ಪೈರಾಣಿಕ..ಕಥೆ… ಮುದ..ತಂದಿತು.. ಅಭಿನಂದನೆಗಳು.. ಹಾಗೂ.. ಧನ್ಯವಾದಗಳು.. ವಿಜಯಾ.. ಮೇಡಂ

  5. Shashiprabha says:

    Nice

  6. Anonymous says:

    ಧನ್ಯವಾದಗಳು. ಹೇಮಮಾಲಾ ಹಾಗೂ ಓದುಗರಿಗೆ.

  7. Padmini Hegade says:

    ಅಕ್ಷಯಪಾತ್ರೆಯನ್ನು ಕೃಷ್ಣ ದ್ರೌಪದಿಗೆ ಕೊಟ್ಟ ಎಂಬ ಕಥೆಯೂ ಇದೆ. ಪಾಂಡವರು ಜೀವನ ಪ್ರೀತಿಯನ್ನು ಕಳೆದುಕೊಳ್ಳದಂತೆ, ಉತ್ಸಾಹಗುಂದದಂತೆ ನೋಡಿಕೊಳ್ಳುವುದರಲ್ಲಿ ಮನೋವಿಜ್ಞಾನಿಯಂತೆ ಶ್ರಮಿಸಿದ ದೌಮ್ಯ ಋಷಿಯ ಪಾತ್ರ ಹಿರಿದಾದದ್ದು.

  8. ಶಂಕರಿ ಶರ್ಮ says:

    ಉತ್ತಮ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಇಂತಹ ಪೌರಾಣಿಕ ಕಥೆಗಳು ಯಾವತ್ತಿಗೂ ಬಹು ಮಾನ್ಯ.

Leave a Reply to Vijayasubrahmanya Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: