ದೀಪಾವಳಿಯ ವಿಶೇಷ…

Share Button

ಚಟ ಪಟ, ಢಾಂ ಢೂಂ,ಡಸ್ ಪುಸ್ ಬಾಲಂಗೋಚಿಯ , ಸರ್ ಪುರ್ ಲಕ್ಷಿ ಪಟಾಕಿಯ, ಬೆಂಕಿಯ ಹೂಗಳ ಕುಂಡದ, ವಿಷ್ಣು ಚಕ್ರವ, ಸುರು ಸುರು ಬತ್ತಿಯ,   ಕಿವಿಗಡಚಿಕ್ಕುವ ಪಟಾಕಿಗಳ ಸದ್ದಿನ ದೀಪಾವಳಿ ಇನ್ನೇನು ಬಂದೇ ಬಿಟ್ಟಿತು. ದಸರ ಹಬ್ಬದ ಸಡಗರ ಮರೆಯುವ ಮೊದಲೇ ದೀಪಾವಳಿಯ ಸಡಗರಕೆ ಎಲ್ಲರ ಸಿದ್ಧತೆ ಭರ್ಜರಿಯಾಗಿ ನಡೆದಿದೆ.

ಇದು ನಮ್ಮ ಹಿಂದೂಗಳ ಜನಪ್ರಿಯ ಹಬ್ಬ.  ಅಲ್ಲದೆ ಎಲ್ಲಾ ವರ್ಗದವರೂ ಕೂಡಾ ಆಚರಿಸುವ ಸಂಭ್ರಮದ ಹಬ್ಬ. ಮೇಲಾಗಿ ಜ್ಞಾನ ದೀಪವನ್ನು ಬೆಳಗುವ ಹಬ್ಬ. ದೀಪಗಳ ಸಾಲನ್ನೇ ತಿಂಗಳಪೂರ್ತಿ ಹಚ್ಚುವ ಈ ಹಬ್ಬದ ವಿಶೇಷ ಎಂದರೆ ಕಾರ್ತಿಕ ಮಾಸದಲ್ಲಿ ಬರುವ ಈ ಹಬ್ಬದಲ್ಲಿ ಶಿವದೀಪೋತ್ಸವ ಮತ್ತು ವಿಷ್ಣು ದೀಪೋತ್ಸವ ಎಂಬ ಎರಡು ವಿಧವಾದ ದೀಪೋತ್ಸವ ಬರುತ್ತದೆ. ಅನೇಕ ದಿನಗಳ ಕಾಲ ಸತತ ದೀಪಗಳನ್ನು ಹಚ್ಚಲಾಗುತ್ತದೆ. ಆದ್ದರಿಂದ ‘ದೀಪಾವಳಿ ‘ಎಂದೇ ಪ್ರತೀತಿ.

ಈ ದೀಪಾವಳಿಯ ವಿಶೇಷವೆಂದರೆ ಮಹಾ ವಿಷ್ಣುವಿನ ನರಕಾಸುರ ಸಂಹಾರದ ಕಥೆ ಕೇಳುತ್ತೇವೆ. ಬಲೀಂದ್ರನ ಪೂಜೆ ನಡೆಯುತ್ತದೆ. ತಾಯಿ ಮಹಾಲಕ್ಷ್ಮಿಯನ್ನು ಧನಲಕ್ಷ್ಮಿ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಮಹಾದೇವನ ಪೂಜೆ, ಮಹಾರಾತ್ರಿ ಪೂಜೆ, ಕುಬೇರ ಪೂಜೆ, ಯಮಧರ್ಮರಾಜನ ಪೂಜೆ, ಗೋಪೂಜೆಯನ್ನು ಇದೇ ದೀಪಾವಳಿಯಂದೇ ಆಚರಣೆ ಮಾಡಲಾಗುತ್ತದೆ. ಅನೇಕ ದೇವಾಲಯಗಳಲ್ಲಿ, ಮನೆ,ಮಠಗಳಲ್ಲಿ ಎಲ್ಲಾ ಕಡೆಯೂ, ನದಿ,ಕೊಳ, ಸರೋವರಗಳಲ್ಲಿಯೂ ಕಾರ್ತೀಕ ಮಾಸದ ದೀಪವನ್ನು ಸಂಭ್ರಮದಿಂದ ಹಚ್ಚಿ, ಇದಕ್ಕೊಂದು ಅರ್ಥ ಕೊಟ್ಟಿರುವರು. ಅಲ್ಲದೆ ಮನೆಮನೆಗಳ ಮುಂದೆ ರಾರಾಜಿಸುವ ಆಕಾಶದೀಪಗಳನ್ನು ನೋಡುವುದೇ ಒಂದು ಸಂಭ್ರಮ. ಆಕಾಶದ ನಕ್ಷತ್ರಗಳನ್ನು ಧರೆಗೆ ಇಳಿಸುವ ಈ ದೀಪಾವಳಿ ಸಣ್ಣ ಮಕ್ಕಳಿಗಂತೂ ವಿಶೇಷ ಹಬ್ಬ. ಏಕೆಂದರೆ ಅಭ್ಯಂಜನ ಮಾಡಿ, ಹೊಸ ದಿರಿಸುಗಳನ್ನು ಧರಿಸಿ, ಮುದ್ದಾಗಿ ಅಲಂಕರಿಸಿ ಕೊಂಡು ಪಟಾಕಿ ಹೊಡೆಯುವ ಸಂಭ್ರಮವನ್ನು ಏನು ಕೊಟ್ಟರೆ ಕೊಂಡುಕೊಳ್ಳಲಾದೀತು?

ಹಲವಾರು ಹೆಸರುಗಳಿಂದ ನಾನಾ ಭಾಗಗಳಲ್ಲಿ ಕರೆಯುವ ಈ ದೀಪಾವಳಿಯ ರಾತ್ರಿಯಂದು ಮಹಾಲಕ್ಷ್ಮಿಯನ್ನು ಆರಾಧಿಸುವುದರಿಂದ,ಬಂಧುಗಳ ಜೊತೆ ಸಂತೋಷದಿಂದ ಕಳೆಯುವುದರಿಂದ ‘ಸುಖಸುಪ್ತಿಕಾ’ ಎಂದೆನಿಸಿತು. ಯಕ್ಷರಾಜನಾದ ಕುಬೇರನನ್ನು ಪೂಜಿಸುವುದರಿಂದ ‘ಯಕ್ಷರಾತ್ರಿ’ಎಂದೆನಿಸಿತು. ನರಕವನ್ನು ವಿಷ್ಣುವು ಸಂಹರಿಸಿದ್ದರಿಂದ ಅದೂ ಚತುರ್ದಶಿಯ ದಿನವಾದ್ದರಿಂದ ‘ನರಕಚತುರ್ದಶಿ’ ಎಂದೆನಿಸುತ್ತದೆ. ವೀರಭಾಗತನಾದ ಬಲಿಚಕ್ರವರ್ತಿಯನ್ನು ಪೂಜಿಸುವುದರಿಂದ ‘ಬಲಿಪಾಡ್ಯಮಿ’ ಎಂದೆನಿಸಿತು, ಸಹೋದರರು ಸಹೋದರಿಯರ ಮನೆಗೆ ಹೋಗಿ ಪರಸ್ಪರ ಅಭಿನಂದಿಸುವುದರಿಂದ ಸೋದರ ಬಿದಿಗೆ, ‘ಭಗಿನೀದ್ವಿತೀಯ’ ಎಂದೆನಿಸಿತು,. ಯಮಧರ್ಮನು ತನ್ನ ಸಹೋದರಿಯಾದ ತನ್ನ ಸಹೋದರಿ ಯಮುನಾಳ ಮನೆಗೆ ದಯಮಾಡಿಸಿದ್ದರಿಂದ ‘ಯಮದ್ವಿತೀಯ’ಎಂದೂ ಕರೆಯುತ್ತಾರೆ. ಹೀಗೆಅನೇಕ ಹೆಸರುಗಳಿಂದ ಕರೆದರೂ ಸಹ ಅದು ಎಲ್ಲರ ಪಾಲಿಗೆ ದೀಪಾವಳಿಯಾಗಿಯೇ ಪರಿಚಯ.

ಕರ್ನಾಟಕದಲ್ಲಿ ನರಕಚತುರ್ದಶಿ ಮತ್ತು ಬಲಿಪಾಡ್ಯಮಿಗಳೆರಡನ್ನೂ ದೀಪಾವಳಿ ಎಂದರೇ, ಭಗಿನಿದ್ವಿತೀಯವೆಂದು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಮತ್ತು ಉತ್ತರ ಭಾರತಗಳಲ್ಲಿ ಆಚರಣೆಯಲ್ಲಿದೆ.

ನೀರು ತುಂಬುವ ಹಬ್ಬದಿಂದ ಪ್ರಾರಂಭವಾದ ದೀಪಾವಳಿ , ಮರುದಿನ ಮುಂಜಾನೆಯಲ್ಲಿ ಎದ್ದು ಎಲ್ಲರೂ ಅಭ್ಯಂಜನ ಮಾಡಿ, ಅಳಿಯ ಮತ್ತು ಮಗಳನ್ನು ಕರೆದು ಔತಣ ಕೂಟದಲ್ಲಿ ಭಾಗವಹಿಸುವಂತೆ ಮಾಡುವುದು, ಅಮಾವಾಸ್ಯೆಯ ದಿನ ತಾಯಿ ಲಕ್ಷ್ಮೀ ದೇವಿಯನ್ನು ಆರಾಧಿಸಿ, ಬಲಿಪಾಡ್ಯಮಿ ದಿನ ಬಲೀಂದ್ರ ಪೂಜೆ ಆದ ನಂತರ, ಹೊಸ ಉಡುಗೆ ತೊಡುಗೆಗಳನ್ನು ತೊಟ್ಟು ಸಂಭ್ರಮದಿ ನಲಿಯುವುದರೊಂದಿಗಿನ ಈ ಹಬ್ಬವನ್ನು ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ.

ಪುರಾಣದ ಪೂಜಾಕಲ್ಪಗಳಲ್ಲಿ ಹೇಳಿರುವ ದೀಪಾವಳಿಯ ಆಚರಣೆಯು ತ್ರಯೋದಶಿ ದಿನ ಅಪಮೃತ್ಯು ನಿವಾರಣೆಗೆ ಯಮಧರ್ಮನನ್ನು ಸಂತೋಷ ಪಡಿಸಲು ಮನೆಯ ಹೊರಗಡೆ, ದಕ್ಷಿಣದಿಕ್ಕಿಗೆ ದೀಪ ಹಚ್ಚಬೇಕು ಇದಕ್ಕೆ ‘ಯಮದೀಪ’ ಎಂದು ಕರೆಯುವರು.  ಸಾವಿನಿಂದಲೂ, ಪಾಶದಂಡಗಳಿಂದಲೂ,ಕಾಲಪುರಷನಿಂದಲೂ ಮತ್ತು ಶ್ಯಾಮದೇವಿಯಿಂದಲೂ ಕೂಡಿದ ರವಿಪುತ್ರ ಯಮಧರ್ಮನು ತ್ರಯೋದಶಿಯಂದು ಸಂತುಷ್ಟನಾಗಿರಲಿ ಎಂದು ಇಂದು ಈ ದೀಪ ಹಚ್ಚುವ ಪದ್ದತಿಇದೆ ಎಂದು ಸ್ಕಾಂದ ಮತ್ತು ಪದ್ಮಪುರಾಣಗಳು ಹೇಳುತ್ತವೆ.

ಕೃಷ್ಣ ಪಕ್ಷ ಚತುರ್ದಶಿಯಂದು ಪ್ರಾತಃ ಕಾಲದಲ್ಲಿ ಎಲ್ಲರೂ ಅಭ್ಯಂಗ ಸ್ನಾನವನ್ನು ಮಾಡತಕ್ಕದ್ದು. ಇದರಿಂದ ಶ್ರೀಮನ್ನಾರಾಯಣನು ಸಂತುಷ್ಟನಾಗಿ ನರಕಭೀತಿ ನಿವಾರಣೆ ಮಾಡುವನು. ಈ ಸ್ನಾನವನ್ನು ಚಂದ್ರೋದಯ ಸಮಯದಲ್ಲಿ ಮಾಡಬೇಕೆಂಬುದು ಹೇಳಲಾಗುತ್ತದೆ….”ಚತುರ್ದಯಶ್ಯಾಂ ಇನೋದಯೇ” ಎಂಬುದನ್ನು ಗಮನಿಸಬೇಕು.

ಅಲ್ಲದೇ ಅಂದು ರಾತ್ರಿ ನರಕಪರಿಹಾರಕ್ಕಾಗಿ ಎಲ್ಲಾ ಪ್ರದೇಶಗಳಲ್ಲೂ ದೀಪಗಳನ್ನು ಹಚ್ಚಲಾಗುತ್ತದೆ.  ಮುಖ್ಯವಾಗಿ ನರಕಾಸುರನ ನೆನಪಿಗಾಗಿ ನಾಲ್ಕು ಬತ್ತಿಗಳುಳ್ಳ ಒಂದು ದೀಪವನ್ನು ಹೊತ್ತಿಸಬೇಕು. ಅಂದು ಪ್ರಾತಃ ಕಾಲದಲ್ಲಿ ಎಣ್ಣೆಯಲ್ಲಿ ಲಕ್ಷ್ಮಿಯೂ ಮತ್ತು ನೀರಿನಲ್ಲಿ ಗಂಗೆಯೂ ನೆಲೆಸಿರುವುದರಿಂದ ಎಣ್ಣೆ ಮತ್ತು ನೀರನ್ನು ಬಳಸಿ ಆಗ ಸ್ನಾನ ಮಾಡುವನು ಯಮಲೋಕದಿಂದ ಮುಕ್ತನಾಗುವನೆಂದು, ಅಲಕ್ಷ್ಮಿಯೂ ದೂರ ಸರಿಯುವಳೆಂದು ಶಾಸ್ತ್ರಗಳು ತಿಳಿಸಿವೆ.( ಕೃಪೆ: ಪದ್ಮ ಪುರಾಣ ಮತ್ತು ನಾರದ ಸಂಹಿತೆ ).

ಅಮಾವಾಸ್ಯೆಯ ದಿನವೂ ಅಭ್ಯಂಜನ ಮಾಡಿ ಲಕ್ಷಿ ದೇವಿಯನ್ನು ಪೂಜಿಸಿ ದಾರಿದ್ರ್ಯ ಪರಿಹಾರ ಮಾಡಿಕೊಳ್ಳುವರು.   ಅಂದು ನೀರಿನಲ್ಲಿ ಅತ್ತಿ,ಅರಳಿ,ಮಾವು,ಆಲ ಮತ್ತು ಪ್ಲಕ್ಷ ದ ಮರಗಳ ತೊಗಟೆಯನ್ನು ನೀರಿನಲ್ಲಿ ಕುದಿಸಿ ಸ್ನಾನಕ್ಕೆ ಬಳಸುವ ಪದ್ಧತಿ ಇದೆ. ಆನಂತರ ಹೆಣ್ಣು ಮಕ್ಕಳಿಂದ ಗಂಡುಮಕ್ಕಳು ಆರತಿ ಮಾಡಿಸಿಕೊಳ್ಳುವ ಸಂಪ್ರದಾಯ ಕೂಡಾ ಇದೆ. ದೇವತೆಗಳ ಪೂಜೆಯ ಜೊತೆಗೆ ಪಿತೃದೇವತೆಗಳ ಪೂಜೆಯನ್ನು ತರ್ಪಣ ರೂಪದಲ್ಲಾದರೂ ಮಾಡಬೇಕೆಂಬ ಪ್ರತೀತಿ ಇದೆ. ಮನೆತುಂಬ ದೀಪಗಳನ್ನು ಹತ್ತಿಸಿ ಸಂತೋಷದಿಂದ ಕಾಲಕಳೆಯುವ ಹಬ್ಬ ಇದಾಗಿದೆ. ಹಲವು ಕಡೆ ಜಾಗರಣೆಕೂಡಾ ಇದ್ದು ಅಲಕ್ಷ್ಮಿಯನ್ನು ಓಡಿಸಲು ಅನೇಕ ಅಹಿತಕರ ಶಬ್ಧಗಳನ್ನು ಮಾಡುವರು. ಮನೆ,ಅಂಗಡಿ, ಮಠ, ದೇವಾಲಯ ಹೀಗೆ ಪ್ರತಿಯೊಂದು ಸ್ಥಳವೂ ಅಂದು ಶುದ್ಧಗೊಂಡು ಅಲಂಕೃತಗೊಳ್ಳುತ್ತವೆ.  ಈ ಅಮಾವಾಸ್ಯೆಯನ್ನು ‘ಸುಖಸುಪ್ತಿಕಾ ‘ಎಂಬ ಹೆಸರಿನಿಂದ ಕರೆಯುತ್ತಾರೆ. ಈ ದಿನ ರಾತ್ರಿ ಲಕ್ಷಿ ದೇವಿಯು ಎಚ್ಚರವಾಗಿರುವುದರಿಂದ ನಾವೂ ಕೂಡ ಆಕೆಯ ಜೊತೆಗೆ ಎಚ್ಚರವಾಗಿದ್ದು ಅವಳನ್ನು ಸಂತೃಪ್ತಿ ಗೊಳಿಸಬೇಕು. ಈಕೆಯ ಜೊತೆಗೆ ಧನಾಧ್ಯಕ್ಷನಾದ ಕುಬೇರನನ್ನೂ ಪೂಜಿಸುವ ಪದ್ಧತಿ ಇದೆ.

ಕಾರ್ತೀಕ ಮಾಸದ ಪಾಡ್ಯ ನಮಗೆ ಮುಖ್ಯವಾದ ದಿನ.  ಏಕೆಂದರೆ ಅಂದು ಬಲಿಪಾಡ್ಯಮಿ. ದೀಪಾವಳಿ ಕಳೆಗಟ್ಟುವುದೇ ಇಂದು. ಅಂದೇನಾದರೂ ಸ್ವಾತಿ ನಕ್ಷತ್ರ ಸೇರಿದ್ದರೆ ಬಹಳ ಶ್ರೇಷ್ಠವಾಗಿರುತ್ತದೆ. ಇಂದೂ ಕೂಡಾ ಅಭ್ಯಂಜನ ಸ್ನಾನ ಇರುತ್ತದೆ. ಬಲೀಂದ್ರ ಪೂಜೆಯೂ ಇಂದಿನ ವಿಧಿವಿಧಾನಗಳಲ್ಲಿ ಮುಖ್ಯವಾದುದು.

ಬಲೀಂದ್ರನ ರೂಪವನ್ನು ನಾನಾ ಭಾಗದಲ್ಲಿ ನಾನಾ ರೀತಿಯಿಂದ ಪೂಜಿಸುವರು.ಆತನಿಗೆ ಸ್ವಾಗತ ಕೋರಲು ಅಂಗಳದಲ್ಲಿ ಹೊನ್ನ ಬಣ್ಣದ ಪುಷ್ಪಗಳಿಂದ ಅಲಂಕರಿಸುವರು. ಆತನನ್ನು ಸಗಣಿಯಿಂದ ರಚಿಸಿ ಪೂಜಿಸುವುದು ಉಂಟು. ಬಲಿಪಾಡ್ಯಮಿಯ ದಿನವನ್ನು ಕೌಮುದೀ ಮಹೋತ್ಸವ ಎಂದು ಕರೆಯುತ್ತಾರೆ.

ನಮ್ಮ ಸಂಪ್ರದಾಯಗಳು ಹೇಳುವಂತೆ ಪುರಾಣಗಳು ಮಿತ್ರಸಂಹಿತೆ ಹಾಗೆ. ಹಾಗಾಗಿ ಅನೇಕ ಕಥೆ,ದೃಷ್ಟಾಂತ, ಸಾಮತಿಗಳನ್ನು ತಿಳಿಯುತ್ತೇವೆ. ಧರ್ಮವನ್ನು ಪಾಲನೆ ಮಾಡುತ್ತೇವೆ. ಕೇಳಿದ, ಓದಿದ ಅನೇಕ ವಿಚಾರಗಳು ನಿಮ್ಮೊಂದಿಗೆ ಹಂಚಿರುವೆ.

ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

-ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ.

4 Responses

  1. ನಯನ ಬಜಕೂಡ್ಲು says:

    Nice

  2. ದೀಪಾವಳಿ..ಹಬ್ಬ ವನ್ನು..ಕುರಿತ.. ಲೇಖನ..ಚೆನ್ನಾಗಿ.
    ಮೂಡಿಬಂದಿದೆ… ಧನ್ಯವಾದಗಳು.. ಗೆಳತಿ.. ಭಾಗ್ಯಲಕ್ಷ್ಮಿ.

    .

  3. ಶಂಕರಿ ಶರ್ಮ says:

    ಪಟಾಕಿ, ದೀಪಗಳ ಹಬ್ಬ …ದೀಪಾವಳಿ ಕುರಿತ ಸಕಾಲಿಕ ಲೇಖನ ಸೊಗಸಾಗಿದೆ.

  4. Padma Anand says:

    ದೀಪಾವಳಿ ಕುರಿತ ಸಮಗ್ರ ಪೌರಾಣಿಕ ವಿಷಯಗಳನ್ನೊಳಗೊಂಡ ಸುಂದರ ಲೇಖನ. ಅಭಿನಂದನೆಗಳು.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: