ಮೂಕ ಶಂಕೆ…

Share Button

ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ತ್ರಿವೇಣಿಯವರ ಜನ್ಮದಿನ ಅಂಗವಾಗಿ, ಲೇಖಿಕಾ ಸಾಹಿತ್ಯ ವೇದಿಕೆ ಬೆಂಗಳೂರು ಮತ್ತು ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ (ರಿ) ಮೈಸೂರು ಇವರು ರಾಜ್ಯಮಟ್ಟದ ಮನೋವೈಜ್ಞಾನಿಕ ಕಥಾಸ್ಪರ್ಧೆಯನ್ನು ಆಯೋಜಿಸಿದ್ದರು. ಆಲ್ಲಿ ಪ್ರಥಮ ಬಹುಮಾನ ಪಡೆದ ಕಥೆ ಶ್ರೀಮತಿ ಬಿ.ಆರ್.ನಾಗರತ್ನ ಅವರು ಬರೆದ ‘ಮೂಕಶಂಕೆ’ ಎಂಬುದು ನಮಗೆ ಹೆಮ್ಮೆಯ ವಿಚಾರ. ಅಕ್ಟೋಬರ್ 15,2022 ರಂದು, ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಈ ಬಹುಮಾನ ವಿತರಣೆ ನೆರವೇರಿತು.ಶ್ರೀಮತಿ ಬಿ.ಆರ್. ನಾಗರತ್ನ ಅವರಿಗೆ ಹೃತ್ಫೂರ್ವಕ ಅಭಿನಂದನೆಗಳು.
ಮೂಕ ಶಂಕೆ’ ಕಥೆ ಇಲ್ಲಿದೆ….

‘ಲೋ ಮಾಧವಾ, ಕೂಸು ಯಾಕೊ ಇನ್ನೂ ಎದ್ದೇಯಿಲ್ಲ. ನಾನು ಕೂಗಿ ಕರೆದರೂ ಇಲ್ಲ, ಹತ್ತಿರ ಹೋಗಿ ರಮಿಸಿ ಕರೆದರೂ ಇಲ್ಲ, ಮುದ್ದು ಮಾಡಿದರೂ ಉಹುಂ..ಕಮಕ್ ಕಿಮಕ್ ಅನ್ನದೆ ಮಲಗಿದ್ದಾಳೆ. ಸ್ಕೂಲಿಗೆ ಹೋಗೋ ಟೈಮ್ ಆಗ್ತಿದೆ. ಇಷ್ಟೊತ್ತಿಗಾಗಲೇ ಎದ್ದು ತಯಾರಾಗುತ್ತಿದ್ದವಳು ಇವತ್ತು ಹೀಗೆ ಮಾಡ್ತಿದ್ದಾಳೆ. ಎಂದು ಆತಂಕದಿಂದ ಹೇಳುತ್ತಾ ನೀನೊಂದು ಸಾರಿ ನೋಡು ಬಾ..’ ಎಂದು ಮಗನನ್ನು ಕೂಗಿ ಕರೆದಳು ಲಲಿತಮ್ಮ.

ತಾಯಿಯ ಮಾತು ಹಾಲಿನಲ್ಲಿ ಪೇಪರ್ ಓದುತ್ತಾ ಕುಳಿತಿದ್ದ ಮಾಧವನಿಗೆ ಕೇಳಿಸಿತು. ‘ಅಮ್ಮಾ ಅವಳ ಮೈಕೈ ಏನಾದರೂ ಬಿಸಿಯಾಗಿದೆಯಾ ನೋಡಬೇಕಿತ್ತು’ ಎಂದ
‘ನೋಡ್ದೆ ಕಣೋ, ಅಂತಹದ್ದೇನೂ ಇಲ್ಲ. ನಾನೂ ಮೈಕೈ ಮುಟ್ಟಿ ನೋಡ್ದೆ’

‘ರುಕ್ಕು ಏನ್ಮಾಡ್ತಿದ್ದಾಳೆ?’
‘ಅವಳೇನು ಮಾಡ್ತಾಳೆ, ಅಡುಗೆ ಕೋಣೆ ಸೇರಿಕೊಂಡವಳೆ. ಈ ಮಗಳು ಅವರಮ್ಮನ ಹತ್ತಿರ ಅಷ್ಟಕ್ಕಷ್ಟೇ. ಮೊದಲಿಗೇನೋ ಜಡೆಪಡೆ ಹಾಕಿಸಿಕೊಳ್ಳೋದು. ಈಗಂತೂ ತಾನೇ ಎಲ್ಲ ಕಲಿತುಕೊಂಡವಳೆ. ಅದಕ್ಕೂ ಅಮ್ಮನ್ನ ಕರಿಯಲ್ಲ. ಯಾವಾಗಲೋ ಒಮ್ಮೊಮ್ಮೆ ಅಮ್ಮ ಮಗಳ ಮಾತುಕತೆ. ಮನೇಲಿರುವ ಹೊತ್ತೆಲ್ಲಾ ನಾನು ಇಲ್ಲ ನೀನು.. ಒಂದು ನಿಮಿಷ ಸುಮ್ಮನಿರೋಳಲ್ಲ ನನ್ನ ಮೊಮ್ಮಗಳು. ನೆನ್ನೆಯಿಂದ ನೋಡ್ತಾ ಇದ್ದೀನಿ, ಬಿಮ್ಮಗೇ ಅವಳೆ. ಅದೇನಾಗದೋ ಸ್ವಲ್ಪ ನೋಡು. ದೃಷ್ಟಿಗಿಷ್ಟಿ ಆಗೈತೋ ಏನೋ’ ಎಂದು ಮಗನಿಗೆ ಅವಸರ ಮಾಡಿದಳು ಲಲಿತಮ್ಮ.

ನೆನ್ನೆ ದಿನ ನಾನು ಅವಳನ್ನು ಸ್ಕೂಲಿಗೆ ಡ್ರಾಪ್ ಮಾಡಲಿಲ್ಲ, ನೀನೇ ಹೋಗಂತ ಕಳುಹಿಸಿದ್ದೆ. ಅದಕ್ಕೆ ಕೋಪ ಬಂದಿರಬೇಕು..ನನ್ನ ಮಗಳಿಗೆ ಎಂದುಕೊಳ್ಳುತ್ತಾ ಮಾಧವ ಎದ್ದು ಮಗಳು ಮಲಗಿದ್ದ ಕೋಣೆಗೆ ಬಂದ. ‘ನನ್ನ ಬಂಗಾರಾ, ಏಳಮ್ಮ ಸ್ಕೂಲಿಗೆ ಟೈಂ ಆಗಲ್ಲವಾ? ಇನ್ನೊಂದು ಸಲ ನಾನು ನಿನ್ನೊಬ್ಬಳನ್ನೇ ಹೋಗು ಅಂತ ಅನ್ನಲ್ಲ. ಸಾರಿ ಪುಟ್ಟೀ, ಹೋದವಾರ ನೀನೇ ಹೇಳಿದ್ದೆ ಕೊಕ್ಕೋ ಆಟಕ್ಕೆ ನಿನ್ನೇ ಕ್ಯಾಪ್ಟನ್ ಮಾಡಿದ್ದಾರೆ ಅಂತ. ಮುಂದಿನ ತಿಂಗಳು ಕೊನೇವಾರ ಟೂರ್‍ನಮೆಂಟಿದೆ ಅದಕ್ಕೆ ಪ್ರಾಕ್ಟೀಸ್ ಮಾಡಬೇಕೂ ಅಂತ, ಅದು ಇವತ್ತಿನಿಂದಲೇ ಅಲ್ವಾ? ಏಳಮ್ಮಾ’ ಎಂದು ಮಗಳನ್ನು ಅಲುಗಾಡಿಸಿ ಎಬ್ಬಿಸಲು ಪ್ರಯತ್ನಿಸಿದ.

‘ಪಪ್ಪಾ ನಾನು ಸ್ಕೂಲಿಗೆ ಹೋಗೋಲ್ಲ. ನನ್ನ ಬಲವಂತ ಮಾಡ್ಬೇಡ’ ಎಂದು ಮಗಳು ನಂದಿನಿ ಮುಸುಗಿಕ್ಕಿದಳು.
‘ಏನು? ಸ್ಕೂಲಿಗೆ ಹೋಗಲ್ಲವಾ? ನಂದೂ ನೀನು ಈ ಮಾತು ಹೇಳ್ತಿದ್ದೀಯಾ? ನಾವೆಲ್ಲಿಗಾದರೂ ಹೋಗಬೇಕಾದ ಅನಿವಾರ್ಯತೆ ಇದ್ದಾಗಲೂ, ಹುಷಾರು ತಪ್ಪಿದಾಗಲೂ ಸ್ಕೂಲಿಗೆ ತಪ್ಪಿಸಿಕೊಳ್ಳಲು ಸಂಕಟಪಡುತ್ತಿದ್ದೆ ನೀನು. ಹೀಗೆ ಏಕಾ‌ಏಕಿ ಹೋಗಲ್ಲ ಅಂದರೆ. ಪುಟ್ಟಾ ನೆನ್ನೆ ನಾನು ಕರೆದುಕೊಂಡು ಹೋಗಿ ಬಿಡ್ಲಿಲ್ಲಾಂತ ನನ್ನ ಮೇಲೆ ಕೋಪ ಇನ್ನೂ ಹೋಗಿಲ್ಲವಾ? ಏನು ಮಾಡಲಿ ಪುಟ್ಟೀ, ನೆನ್ನೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಒಬ್ಬರು ಬರುತ್ತೀನೆಂದವರು ಮೊದಲೇ ಫೋನ್ ಮಾಡದೇ ಬಂದುಬಿಟ್ಟರು. ನಿಮ್ಮ ಅಮ್ಮನ ವಿಷಯ ನಿನಗೆ ತಿಳಿದದ್ದೇ. ಅವಳಿಗೆ ಇವೆಲ್ಲಾ ಏನೂ ತಿಳಿಯೋದಿಲ್ಲ ನಾನಿರಲೇಬೇಕಾಯ್ತು. ಅದಕ್ಕೇ ನೀನೇ ಹೋಗು ಅಂದದ್ದು. ಹಂಗೂ ಆಟೋ ಶಂಕರಣ್ಣನ್ನ ಕರೀತೀನಿ ಅಂದಿದ್ದಕ್ಕೆ ಏನೂ ಬೇಡ, ನಾನೇ ಹೋಗ್ತೀನಿ ಅಂದೆ. ನಡೆದುಕೊಂಡು ಹೋಗಿ ಬಂದು ಆಯಾಸ ಆಯ್ತಾ? ನೀನು ಜಾಣೆ ಅಲ್ಲವಾ ಅರ್ಥ ಮಾಡಿಕೊಳ್ತೀಯಲ್ಲವಾ, ಈಗ ಏಳಮ್ಮಾ’ ಎಂದು ಮತ್ತೆ ಮತ್ತೆ ಪುಸಲಾಯಿಸಿದನು ಮಾಧವ.

ಊಹುಂ, ಜಪ್ಪಯ್ಯಾಂದ್ರೂ ಮಿಸುಕಾಡಲಿಲ್ಲ. ತುಂಬಾ ಜುಲುಮೆ ಮಾಡಿದ್ದಕ್ಕೆ ಒಂದೇ ಉತ್ತರ ”ನಾನು ಸ್ಕೂಲಿಗೆ ಹೋಗಲ್ಲಾ ” ಅದೇ ರಾಗ, ಅದೇ ಹಾಡು.

ಇದೆಲ್ಲವನ್ನೂ ಅಡುಗೆ ಮನೆಯಿಂದಲೇ ಗಮನಿಸುತ್ತಿದ್ದ ರುಕ್ಮಿಣಿ ತಡೆಯಲಾಗದೆ ಮಗಳ ರೂಮಿನ ಬಾಗಿಲಲ್ಲಿ ನಿಂತು ‘ಪುಟ್ಟೀ..ಹಠಮಾಡಬೇಡಮ್ಮಾ ಏಳಮ್ಮಾ. ಏಕೆ ಸ್ಕೂಲಿನಲ್ಲಿ ಯಾರಾದರೂ ಏನಾದರೂ ಅಂದರೇನೇ?’ ಎಂದು ವಿಚಾರಿಸಿದಳು.

‘ಏ ಹೋಗೇ ನೀನು ಒಳಕ್ಕೆ, ಮಾಧು ವಿಚಾರಿಸುತ್ತಿಲ್ಲವಾ? ಮಧ್ಯೆ ನಿನ್ನದೇನು ಮಾತು. ಅವಳು ಹೀಗಾಡಲು ನಿನ್ನದೇನಾದರೂ ಪುಳ್ಳೆ ಇದೆಯಾ? ಏಕೆಂದರೆ ನೀನು ಏಳನೆಯ ಕ್ಲಾಸಿನಲ್ಲೇ ಓದಿಗೆ ಕೃಷ್ಣಾರ್ಪಣ ಅಂದವಳು ಮಗಳು ಮುಂದಕ್ಕೆ ಹೋಗಿರುವುದನ್ನು ಕಂಡು ಹೊಟ್ಟೆಕಿಚ್ಚೇನೋ’ ಎಂದು ಲಲಿತಮ್ಮ ಲೇವಡಿ ಮಾಡಿದಳು.

‘ಅಜ್ಜಿಯ ಮಾತುಗಳನ್ನು ಕೇಳಿ ನಂದಿನಿ ಅಮ್ಮನೇನೂ ನನಗೆ ಹೇಳಿಕೊಟ್ಟಿಲ್ಲ. ನನಗೇ ಇಷ್ಟವಿಲ್ಲ. ನಾನು ಸ್ಕೂಲಿಗೆ ಹೋಗಲ್ಲ ಅಷ್ಟೇ’ ಎಂದಳು.

‘ಮಾಧವನಿಗೆ ಮಗಳನ್ನು ಹೆಚ್ಚಾಗಿ ಒತ್ತಾಯಿಸುವುದು ಸರಿಯಲ್ಲವೆನ್ನಿಸಿತು. ಆಯಿತು..ಸ್ಕೂಲಿಗೆ ಹೊಗದಿದ್ದರೇನಂತೆ ಎದ್ದು ಬೆಳಗಿನ ಕೆಲಸಗಳನ್ನು ಮುಗಿಸಿ ಸ್ನಾನಮಾಡಿ ತಿಂಡಿತಂದು ನನ್ನ ಜೊತೆಯಲ್ಲಿ ಅಂಗಡಿಗೆ ಬಾ. ಇವತ್ತು ಅಲ್ಲಿ ನೀನೇ ವ್ಯಾಪಾರ ಮಾಡುವಿಯಂತೆ ದಿನಪೂರ್ತಿಯೆಲ್ಲಾ. ನನಗೆ ಹೊರಗಡೆ ಸ್ವಲ್ಪ ಕೆಲಸವಿದೆ. ಅದನ್ನು ಮುಗಿಸಿ ಬರುತ್ತೇನೆ. ಅಲ್ಲಿಯವರೆಗೆ ನೋಡಿಕೊಳ್ತಿರು. ಓ..ಕೇನಾ, ಆಗಬಹುದಾ? ಚಿನ್ನು’ ಎಂದು ಹೇಳಿ ರೂಮಿನಿಂದ ಹೊರಬಂದ.

ತನ್ನ ತಂದೆ, ಅಜ್ಜಿ ರೂಮಿನಿಂದ ಹೊರಕ್ಕೆ ಹೋಗುತ್ತಿದ್ದಂತೆ ಹಾಸಿಗೆಯಿಂದೆದ್ದು ನಂದಿನಿ ಸ್ನಾನದ ಮನೆಕಡೆ ನಡೆದಳು. ಇತ್ತ ಮನೆಗೆ ಹೊಂದಿಕೊಂಡಂತೆಯೇ ಇದ್ದ ಅಂಗಡಿಯಲ್ಲಿ ಮಾಧವ ವ್ಯಾಪಾರದಲ್ಲಿ ತೊಡಗಿದ್ದರೂ ಅವನ ಮನಸ್ಸೆಲ್ಲಾ ಮಗಳ ಕಡೆಗೇ ವ್ಯಾಪಿಸಿತ್ತು. ಇದುವರೆಗೆ ಯಾವತ್ತೂ ಅವಳ ಈ ರೀತಿಯ ವರ್ತನೆ ನೋಡಿರದಿದ್ದ ಮಾಧವನಿಗೆ ಅಚ್ಚರಿಯೆನಿಸಿತು. ಅವಳಿಗೆ ಯಾವುದಕ್ಕೂ ಕಡಿಮೆ ಮಾಡದಂತೆ ಬೆಳೆಸಿದ್ದ ಅಕ್ಕರೆಯ ಮಗಳಾಗಿದ್ದಳು. ಎಂದಿಗೂ ಎದುರುತ್ತರ ಕೊಡದವಳು, ಸ್ಕೂಲಿನಲ್ಲಿ ಅಟ ಪಾಠ ಎರಡರಲ್ಲೂ ಮುಂಚೂಣಿಯಲ್ಲಿರುವವಳು ಏಕಾ‌ಏಕಿ ಈ ರೀತಿ ಹಠ ಮಾಡಿದ್ದಾಳೆ. ಒಂದು ಹೆಜ್ಜೆ ಸ್ಕೂಲಿಗೇ ಹೋಗಿ ಏನು ಕಾರಣ ತಿಳಿದು ಬರುವುದೇ ವಾಸಿ ಎಂದುಕೊಳ್ಳುತ್ತಿದ್ದಂತೆಯೇ ಅಂಗಡಿಗೆ ನಂದಿನಿ ಬಂದಳು.

‘ಓ..ಬಂದೆಯಾ, ಈ ನನ್ನ ಚಂದನದ ಗೊಂಬೆಗೆ ಇವತ್ಯಾಕೊ ಸ್ಕೂಲು ಬೇಡವಾಗಿದೆ. ಇರಲಿ ಇಲ್ಲೇ ಕುಳಿತು ನೀನೇ ನೋಡಿಕೋ. ನಾನು ಸ್ವಲ್ಪ ಹೊತ್ತಿನಲ್ಲೇ ಬಂದುಬಿಡುತ್ತೇನೆ’ ಎಂದು ಹೇಳಿ ಶಾಲೆಯತ್ತ ಧಾವಿಸಿದ ಮಾಧವ.

ಆಗಲೇ ಪ್ರಾರ್ಥನೆ ಮುಗಿದು ಮಕ್ಕಳೆಲ್ಲಾ ತರಗತಿಗಳಿಗೆ ತೆರಳುತ್ತಿದ್ದರು. ಅತ್ತಿತ್ತ ನೋಡುತ್ತಿರುವಂತೆಯೇ ನಂದಿನಿಯ ಕ್ಲಾಸ್‌ಟೀಚರ್ ಶಾರದಾಮೇಡಂ ಎದುರಾದರು. ಮಾಧವ ಅವರಿಗೆ ನಮಸ್ಕರಿಸಿದ. ಪ್ರತಿವಂದನೆಯ ನಂತರ ಶಾರದಾಮೇಡಂ ‘ನಂದಿನಿಗೆ ಆರೋಗ್ಯ ಸರಿಯಿಲ್ಲವೇ? ನೆನ್ನೆಯಿಂದಲೂ ಅವಳು ಸ್ಕೂಲಿಗೆ ಬಂದಿಲ್ಲ. ನಾನು ಕಂಡಂತೆ ಎಂದೂ ಆಕೆ ಹೇಳದೆ ಕೇಳದೆ ಸ್ಕೂಲಿಗೆ ಚಕ್ಕರ್ ಹಾಕುವವಳಲ್ಲ. ಇವತ್ತೂ ಬಂದ ಹಾಗಿಲ್ಲ. ಏನಾಗಿದೆ?’ ಪ್ರಶ್ನಿಸಿದರು.

‘ನೆನ್ನೆಯೂ ಅವಳು ಆಬ್ಸೆಂಟೇ? ಒಂದು ಕ್ಷಣ ವಿಚಲಿತನಾದಂತಾದ ಮಾಧವ ಕೂಡಲೇ ಸಾವರಿಸಿಕೊಂಡು ಮೇಡಂ, ತಪ್ಪು ತಿಳಿಯಬೇಡಿ, ಶಾಲೆಯಲ್ಲಿ ನನ್ನ ಮಗಳು ಯಾರ ಜೊತೆಯಲ್ಲಾದರೂ ಜಗಳಮಾಡಿಕೊಂಡಿದ್ದಾಳೆಯೆ’

ಅವನ ಮಾತನ್ನು ಅರ್ಧದಲ್ಲೇ ತಡೆದು ‘ಏನು ಮಾತ್ನಾಡುತ್ತಿದ್ದೀರಿ ಮಾಧವಾ, ನಿಮ್ಮ ಮಗಳು ನೋಡಲು ಚಂದವಷ್ಟೇ ಅಲ್ಲ, ಗುಣದಲ್ಲೂ ಅಪರಂಜಿ, ಯಾರಾದರೂ ಜಗಳವಾಡುತ್ತಿದ್ದರೆ ಅವರನ್ನು ತಡೆದು ಅನುನಯದಿಂದ ತಿದ್ದಿ ಬುದ್ಧಿ ಹೇಳುತ್ತಿದ್ದಳು. ಅಂಥಹವಳು..ಛೇ..ಛೇ ಸಾಧ್ಯವೇ ಇಲ್ಲ’ ಎಂದರು ಶಾರದಾಮೇಡಂ.

ಮಾಧವನ ಮನಸ್ಸಿನಲ್ಲಿ ಆಂದೋಲನವೇ ಎದ್ದಿತು. ಎಲ್ಲಿಯೋ ಲೆಕ್ಕ ತಪ್ಪಿದೆ ಎನ್ನಿಸಿ ಏನು ಮಾತನಾಡಬೇಕೆಂದು ತಿಳಿಯದೆ ಸಂಕ್ಷಿಪ್ತವಾಗಿ ತಮ್ಮ ಮನೆಯಲ್ಲಿ ಬೆಳಗ್ಗೆ ನಡೆದ ಘಟನೆಯ ವಿವರಗಳನ್ನು ಶಾರದಾಮೇಡಂ ಮುಂದೆ ಬಿಚ್ಚಿಟ್ಟ.

ಆತನ ಮ್ಲಾನವಾದ ಮುಖವನ್ನು ಗಮನಿಸಿದ ಶಾರದಾಮೇಡಂ ”ಯೋಚಿಸಬೇಡಿ, ಶಾಲೆಯು ಮುಗಿದ ನಂತರ ನಾನೇ ನಿಮ್ಮ ಮನೆಗೆ ಬರುತ್ತೇನೆ, ವಿಚಾರಿಸುತ್ತೇನೆ” ಎಂದವನಿಗೆ ಸಮಾಧಾನ ಹೇಳಿ ಉತ್ತರಕ್ಕೆ ಕಾಯದೆ ತರಗತಿಯತ್ತ ನಡೆದರು.

ಮನೆಯತ್ತ ನಡೆದ ಮಾಧವನ ತಲೆ ಕಾದ ಕಬ್ಬಿಣದಂತಾಗಿತ್ತು. ನಂಜುಮಳಿಗೆಯ ಸುತ್ತಮುತ್ತಲಿನಲ್ಲೇ ತನ್ನೆಲ್ಲ ವ್ಯವಹಾರದ ವ್ಯಾಪ್ತಿಯನ್ನು ಹೊಂದಿದ್ದ ಮಾಧವ ಮಗಳನ್ನು ಅಲ್ಲಿಯೇ ಸಮೀಪದಲ್ಲಿದ್ದ ಶಾಲೆಗೇ ಸೇರಿಸಿದ್ದ. ತಾನೇ ಅವಳನ್ನು ಪ್ರತಿದಿನ ಸ್ಕೂಲಿಗೆ ಕರೆದುಕೊಂಡು ಹೋಗಿ ಬಿಡುವುದು ಮತ್ತು ಕರೆತರುವುದು ಮಾಡುತ್ತಿದ್ದ. ಪಾಠದಲ್ಲಿ ಅಲ್ಲದೇ ಆಟಗಳು, ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದ. ಎಷ್ಟೇ ಕಷ್ಟವಾದರೂ ಮಗಳ ರಕ್ಷಣೆಗೆ ಕಂಕಣಬದ್ಧನಾಗಿದ್ದ. ಹೀಗಿದ್ದೂ ನೆನ್ನೆ ಒಂದು ದಿನ ಯಾವ ಭೂತ ಹೊಕ್ಕಿತ್ತೋ ತನಗೆ, ಯಾವುದೋ ಲೆಕ್ಕಾಚಾರದಲ್ಲಿ ಮೈಮರೆತದ್ದರಿಂದ ಇಂತಹ ಅನಾಹುತವಾಯಿತು ಎಂದು ಪರಿತಪಿಸಿದ. ನೆನ್ನೆ ಮಗಳು ಸ್ಕೂಲಿಗೇ ಹೋಗಿಲ್ಲವೆಂದರೆ ಎಲ್ಲಿಗೇ ಹೋಗಿರಬಹುದು? ಯಾರಾದರೂ ಪುಂಡರು ಇವಳು ಶ್ರೀಮಂತರ ಮನೆಯವಳೆಂದು ಅಪಹರಣ ಮಾಡಿರಬಹುದೇ? ಯಾರಿಗಾದರೂ ಹೇಳಿದರೆ ಕೊಲ್ಲುತ್ತೇವೆಂದು ಬೆದರಿಸಿರಬಹುದೇ? ಮಗಳು ಜಾಣತನದಿಂದ ತಪ್ಪಿಸಿಕೊಂಡು ಬಂದಿರಬಹುದೇ? ಎಲ್ಲಾ ರೀತಿಯ ಆಲೋಚನೆಗಳೂ ಮನದಲ್ಲಿ ತಾಕಲಾಡಿದವು. ಹಿಂದಿರುಗಿದ ಅವನಿಗೆ ಅಂಗಡಿಯಲ್ಲಿ ಮಗಳ ಬದಲು ಅವನ ಹೆಂಡತಿ ಕುಳಿತಿದ್ದುದು ಕಂಡಿತು. ”ಅರೇ ನಂದೂ ಎಲ್ಲಿ?” ಎಂದು ಕೇಳಿದ.

‘ಅವಳು ಏಕೋ ನಿದ್ರೆ ಬರುತ್ತದೆಂದು ಮನೆಗೆ ಹೋದಳು. ಅದಕ್ಕೆ ನಾನು ಬಂದೆ’ ಎಂದಳು ರುಕ್ಮಿಣಿ.
‘ನಂದೂ ನೆನ್ನೆ ಎಷ್ಟು ಹೊತ್ತಿಗೆ ಸ್ಕೂಲಿನಿಂದ ಬಂದಳು’?

‘ದಿನಾ ಸ್ಕೂಲಿನಿಂದ ಹಿಂದಕ್ಕೆ ಬರುವ ಹೊತ್ತಿಗೇ ಬಂದಳು. ನೀವೂ ಮನೆಯಲ್ಲಿದ್ದರಲ್ಲಾ. ಅವಳನ್ನು ಕರೆದುಕೊಂಡು ಬರಬೇಕೆಂದು ನೀವು ಹೊರಡುವಷ್ಟರಲ್ಲಿ ಅವಳೇ ಬಂದಳು’.

‘ಅವಳು ಚೀಲ ತೆಗೆದುಕೊಂಡು ಬಂದಾಗ ನಾನೇ ಕೇಳಿದೆ ನೀನೇ ಬಂದುಬಿಟ್ಟೆಯಾ ಪುಟ್ಟೀ ಎಂದು. ಅಮ್ಮಾ ನೋಡು ನನ್ನ ಮಗಳಿಗೆ ಜವಾಬ್ದಾರಿ ಬಂದು ಬಿಟ್ಟಿದೆ’ ಎಂದದ್ದಕ್ಕೆ ಮಗಳು ಏನೂ ಉತ್ತರ ಕೊಡದೇ ಒಳ ಸರಿದಿದ್ದಳು. ರಾತ್ರಿ ಊಟದ ವೇಳೆಯಲ್ಲಿಯೂ ಮೌನವಾಗಿದ್ದಳು. ಬೇಗನೇ ಮಲಗಿದ್ದಳು. ಅಟವಾಡಿ ಸಾಕಾಗಿರಬೇಕೆಂದು ನಾನೂ ಕೆದಕಿ ಕೇಳಲಿಲ್ಲ. ಇವತ್ತು ಬೆಳಗಿನಿಂದ ಇಷ್ಟೆಲ್ಲಾ ರಾಮಾಯಣ. ಸಂಜೆಗೆ ಶಾರದಾಮೇಡಂ ಬರುತ್ತೇನೆಂದು ಹೇಳಿದ್ದಾರೆ. ಆಗ ವಿಚಾರಿಸೋಣವೆಂದು ಹೆಂಡತಿಗೆ ಇನ್ನೇನೂ ಹೇಳದೆ ಅವಳನ್ನು ಮನೆಗೆ ಕಳುಹಿಸಿ ಅಂಗಡಿಯಲ್ಲಿ ಕುಳಿತ ಮಾಧವ.

ಸಂಜೆಗೆ ಮಾತುಕೊಟ್ಟಂತೆ ಶಾರದಾ ಮೇಡಂ ಮನೆಗೆ ಬಂದರು. ಅವರು ಬಂದದ್ದು, ಅಜ್ಜಿ, ಅಪ್ಪ ಅವರನ್ನು ಒಳಕ್ಕೆ ಕರೆದದ್ದು ತಿಳಿದರೂ ನಂದಿನಿ ತನ್ನ ರೂಮಿನಿಂದ ಹೊರಗೆ ಬರಲಿಲ್ಲ. ಮಗಳನ್ನು ಕರೆತರಲು ಹೊರಟ ಮಾಧವನನ್ನು ತಡೆದು ಶಾರದಾರವರೇ ತನ್ನ ಶಿಷ್ಯಳಿದ್ದಲ್ಲಿಗೇ ಹೊದರು. ರೂಮಿಗೆ ಅಡಿಯಿಡುತ್ತಲೇ ಸುತ್ತಲೂ ಕಣ್ಣಾಡಿಸುತ್ತಾ ”ನಂದೂ.. ನಂದಿನೀ ಎಲ್ಲಿದ್ದೀಯಾ? ನೋಡು ನಿನ್ನನ್ನು ಹುಡುಕಿಕೊಂಡು ನಾನೇ ಬಂದುಬಿಟ್ಟೆ. ಯಾಕಮ್ಮಾ ಸ್ಕೂಲು ಬೇಸರವಾಯಿತೇ? ನಿನ್ನೆ ಬಂದಿರಲಿಲ್ಲ. ಯಾರಾದರೂ ಏನಾದರೂ ಬೈದರೇ? ನಾನು ಯಾರಿಗೂ ಹೇಳಲ್ಲ. ನನ್ನ ಬಳಿ ಹೇಳು. ಮೈಗೆ ಸರಿಯಿಲ್ಲವಾ? ಹೋಗಲಿ ನನ್ನ ಮನೆಯಲ್ಲಿ ನಾನೊಬ್ಬಳೇ ಇರುವುದು ಗೊತ್ತಲ್ಲವಾ, ಅಲ್ಲಿಗೇ ಹೋಗೋಣ, ಅಲ್ಲಿಯೇ ಹೇಳುತ್ತೀಯಾ? ನೀನು ಸ್ಕೂಲಿಗೆ ಬರಲಿಲ್ಲವೆಂದು ಕೊಕ್ಕೋ ಆಟದ ಪ್ರಾಕ್ಟೀಸನ್ನು ಮುಂದಕ್ಕೆ ಹಾಕಿಸಿದ್ದೇನೆ. ನಾಳೆ ಬರುತ್ತೀಯಾ ತಾನೇ ”ಎಂದು ಮೃದುವಾಗಿ ಪ್ರಶ್ನೆ ಮಾಡಿದರು.

ಅಲ್ಲಿಯವರೆಗೆ ಮಿಸುಕಾಡದೇ, ತುಟಿಪಿಟಕ್ಕೆನ್ನದೆ ಇದ್ದ ನಂದಿನಿ ”ಇಲ್ಲಾ ನಾನೆಲ್ಲಿಗೂ ಬರೋಲ್ಲ. ಸ್ಕೂಲಿಗಂತೂ ಬರೋದೇ ಇಲ್ಲ” ಎಂದು ಗಟ್ಟಿಯಾಗಿ ಹೇಳಿ ಮತ್ತೆ ಮುಸುಗಿಕ್ಕಿ ಮಲಗಿಬಿಟ್ಟಳು.

ಈ ಮಾತನ್ನು ಕೇಳಿ ಶಾರದಾಮೇಡಂ ಈ ಮಾತನ್ನು ನನ್ನ ಪ್ರೀತಿಯ ಶಿಷ್ಯೆ ಹೇಳುತ್ತಿದ್ದಾಳೆಯೇ ಎಂದು ಅನುಮಾನವಾಯಿತು. ಅವಳನ್ನು ಚಿಕ್ಕ ವಯಸ್ಸಿನಿಂದಲೂ ನೋಡಿದವರು. ಯಾವಾಗಲೂ ಮೆತ್ತಗೆ ಮಾತನಾಡುತ್ತಿದ್ದವಳು ಹೀಗೆ ಕಠಿಣವಾಗಿ..ಇರಲಿ, ಹೆಚ್ಚು ಒತ್ತಾಯಿಸುವುದು ಬೇಡವೆಂದು ರೂಮಿನಿಂದ ಹೊರಗೆ ಬಂದವರೇ ಮನೆಯವರಿಗೆ ”ಒಂದೆರಡು ದಿನ ಅವಳ ಮುಂದೆ ಸ್ಕೂಲಿನ ವಿಷಯವನ್ನು ಎತ್ತಲೇಬೇಡಿ. ಅವಳಿಗೇ ಮನೆಯಲ್ಲಿ ಕುಳಿತು ಬೇಸರವಾದರೆ ಅವಳೇ ಖಂಡಿತ ಹೋಗುತ್ತೇನೆನ್ನುತ್ತಾಳೆ. ನಾನು ಮತ್ತೆ ಬರುತ್ತೇನೆ” ಎಂದು ಹೇಳುತ್ತಾ ತಮ್ಮ ಮನೆಗೆ ಹೊರಟರು.

ಹೀಗೆ ಒಂದೆರಡು ದಿನಗಳೂ ಕಳೆದವು. ಊಹುಂ…ಏನೂ ಬದಲಾವಣೆ ಕಂಡುಬರಲಿಲ್ಲ. ಅವಳು ಪುಸ್ತಕಗಳತ್ತ ಕಣ್ಣೆತ್ತಿಯೂ ನೋಡಲಿಲ್ಲ. ಅರಳು ಹುರಿದಂತೆ ಮಾತನಾಡುತ್ತಿದ್ದವಳು ಈಗ ಕೇಳಿದ್ದಕ್ಕಷ್ಟೇ ಉತ್ತರ ಹೇಳಿ ಸುಮ್ಮನಾಗುತ್ತಿದ್ದಳು. ಅವಳ ಗೆಳತಿಯರು ಬಂದರೂ ಅವರನ್ನು ಭೇಟಿಯಾಗಲು ಹೊರಗೇ ಬರಲಿಲ್ಲ. ಮಾಧವನಿಗೆ ಮಗಳು ಪ್ರಶ್ನಾರ್ಥಕವಾಗಿ ಕಂಡಳು.

ಹೀಗೇ ಒಂದು ವಾರಕೂಡ ಕಳೆಯಿತು. ಮನೆಯವರು ದೃಷ್ಟಿ ಆಗಿರಬಹುದೆಂದು ದೃಷ್ಟಿ ತೆಗೆಯುವವರನ್ನು ಕರೆಸಿದರು, ಜ್ಯೋತಿಷಿಗಳಿಗೆ ಅವಳ ಜಾತಕ ತೋರಿಸಿ ದೋಷನಿವಾರಣೆಗಾಗಿ ಪೂಜೆಗಳನ್ನು ಮಾಡಿಸಿದರು. ಯಾವುದೂ ಪ್ರಯೋಜನವಾಗಲಿಲ್ಲ. ಹುಡುಗಿ ದಿನೇದಿನೇ ಅಂತರ್ಮುಖಿಯಾಗುತ್ತಿದ್ದಳು. ಇದು ಮಾಧವನಿಗೆ ನುಂಗಲಾರದ ತುತ್ತಾಯಿತು. ಇದ್ದೊಬ್ಬ ಮುದ್ದಿನ ಮಗಳು ಹೀಗಾದಳಲ್ಲಾ ಎಂದು ಕೊರಗಿದ.

ತಾಯಿ ರುಕ್ಮಿಣಿಯೂ ಗಂಡ ಮತ್ತು ಅತ್ತೆ ಅಂಗಡಿಯಲ್ಲಿದ್ದ ಸಮಯ ಕಾದು ಪ್ರೀತಿಯಿಂದ ಮಗಳನ್ನು ಬಾಯಿಬಿಡಿಸುವ ಶತಪ್ರಯತ್ನ ಮಾಡಿ ಸೋತಳು. ವಾರದಿಂದ ನಡೆದ ವಿದ್ಯಮಾನಗಳಿಂದ ಚಿಂತಿತರಾಗಿ ಶಾರದಾಮೇಡಂ ಮಾಧವನ ಬಳಿ ”ತಪ್ಪು ತಿಳಿಯಬೇಡಿ, ನನಗೊಬ್ಬ ಮನಶ್ಶಾಸ್ತ್ರಜ್ಞರು ಪರಿಚಯವಿದ್ದಾರೆ. ಅವರನ್ನೊಮ್ಮೆ ಕಂಡು ಪ್ರಯತ್ನ ಮಾಡುವುದು ಒಳ್ಳೆಯದು. ಅವರಿಂದ ಏನಾದರೂ ಪರಿಹಾರ ದೊರೆಯಬಹುದೇನೋ ಅನ್ನಿಸುತ್ತದೆ. ಗಾಭರಿಯಾಗಬೇಡಿ ಅವರು ಆಸ್ಪತ್ರೆ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು ತಮ್ಮ ಮನೆಯಲ್ಲಿಯೇ ಆಪ್ತ ಸಮಾಲೋಚನೆ ಮಾಡುತ್ತಾರೆ. ನಾನೇ ಅವರನ್ನು ಮೊದಲು ಭೇಟಿಯಾಗಿ ಸಮಯ ನಿಗದಿಪಡಿಸಿಕೊಳ್ಳುತ್ತೇನೆ” ಎಂದು ಸಲಹೆ ನೀಡಿದರು.

ಶಾರದಾಮೇಡಂ ನೀಡಿದ ಸಲಹೆ ಮಾಧವ, ಮತ್ತು ಲಲಿತಮ್ಮನವರಿಗೆ ಪಥ್ಯವೆನ್ನಿಸದಿದ್ದರೂ ನಂದಿನಿ ಮನೆಗೆ ಬೆಳಕಾಗಬೇಕಾದವಳು ಮನೆಗೇ ಅಂಟಿಕೊಂಡು ದಿನೇದಿನೇ ನವೆದು ಹೋಗುತ್ತಿರುವುದನ್ನು ಕಂಡು ಪ್ರಯತ್ನಿಸೋಣವೆಂದು ತೀರ್ಮಾನಿಸಿದರು. ಶಾರದಾರವರ ನಿರ್ದೇಶನದಂತೆ ಡಾ. ಅಪರ್ಣಾರವರ ಮನೆಗೆ ಫೋನ್ ಮಾಡಿ ಯಾವತ್ತು ಬರಬೇಕೆಂದು ನಿಗದಿಪಡಿಸಿಕೊಂಡರು. ಸಮಯಕ್ಕೆ ಸರಿಯಾಗಿ ಹೆಂಡತಿ ಮಗಳೊಂದಿಗೆ ಡಾಕ್ಟರರ ಮನೆ ತಲುಪಿದ ಮಾಧವ. ಮೈಸೂರಿನ ಹೊರವಲಯದಲ್ಲಿದ್ದ ಭವ್ಯವಲ್ಲದಿದ್ದರೂ ಆಕರ್ಷಕವಾಗಿದ್ದ ಮನೆ, ಮುಂದೆ ವಿಶಾಲವಾದ ಕಾಂಪೌಂಡು, ಗೇಟಿನ ಬಳಿಯಿದ್ದ ವಾಚ್‌ಮನ್. ಅವನಿಗೆ ತಮ್ಮ ಪರಿಚಯ ಹೇಳಿಕೊಂಡು ಒಳಗೆ ಹೋಗಲು ಅನುಮತಿ ಪಡೆದುಕೊಂಡರು. ಕಾಂಪೌಂಡಿನೊಳಗೆ ಸುಂದರವಾದ ಕ್ಯತೋಟವಿತ್ತು. ಅಲ್ಲಿ ಕುಳಿತುಕೊಳ್ಳಲು ಬೆಂಚುಗಳನ್ನು ನಿರ್ಮಿಸಲಾಗಿತ್ತು. ಮುಂಭಾಗಿಲಿನಲ್ಲಿ ಯಾರೂ ಕಾಣಿಸಲಿಲ್ಲ. ಒಳಕ್ಕೆ ಹೋಗುವುದೇ ಬಿಡುವುದೇ ಎಂಬ ಜಿಗ್ನಾಸೆಯಲ್ಲಿರುವಾಗಲೇ ಒಬ್ಬ ಮಧ್ಯ ವಯಸ್ಸಿನ ಮಹಿಳೆ ಕಾಣಿಸಿದರು. ”ಬನ್ನಿ, ಅದೋ ಅಲ್ಲಿ ಟೀಪಾಯಿಯ ಮೇಲಿಟ್ಟಿರುವ ಪುಸ್ತಕದಲ್ಲಿ ತಮ್ಮ ಹೆಸರು, ವಿಳಾಸ ಬರೆದು ಪಾದರಕ್ಷೆಗಳನ್ನು ಹೊರಗಡೆ ಬಿಟ್ಟು ಎದುರಿಗೆ ಕಾಣಿಸುತ್ತಲ್ಲ ಆ ರೂಮಿಗೆ ಹೋಗಿ” ಎಂದು ನಿರ್ದೇಶಿಸಿದರು.

ಅವರು ಹೇಳಿದಂತೆಯೇ ಮಾಡಿ ಮಾಧವ, ಹೆಂಡತಿ ಮಗಳೊಂದಿಗೆ ಎದುರಿಗಿದ್ದ ರೂಮಿನ ಕಡೆಗೆ ಸಾಗಿದರು. ಇವರ ಹೆಜ್ಜೆಯ ಸದ್ದನ್ನು ಕೇಳಿಸಿಕೊಂಡರೇನೋ ಎಂಬಂತೆ ಒಳಗಿನಿಂದ ”ಬನ್ನಿ” ಎಂಬ ಕರೆ ಕೇಳಿಸಿತು.

ಒಳಗೆ ನಡೆದ ಮಾಧವ ಡಾಕ್ಟರರಿಗೆ ವಂದಿಸಿದ. ”ನಮಸ್ಕಾರ, ಬನ್ನಿ ಕುಳಿತುಕೊಳ್ಳಿ. ನನಗೆ ನಿಮ್ಮ ಸಮಸ್ಯೆಯ ಬಗ್ಗೆ ಶಾರದಾ ಎಲ್ಲವನ್ನೂ ಹೇಳಿದ್ದಾಳೆ. ಒಂದು ಮಾತು, ಸಂಕೋಚಪಟ್ಟುಕೊಳ್ಳಬೇಡಿ, ವೈದ್ಯರ ಹತ್ತಿರ ನೀವು ಯಾವುದೇ ಗುಟ್ಟು ಮಾಡಬಾರದು” ಎಂದರು ಡಾಕ್ಟರು.

ಮಾಧವ ಅವರನ್ನೇ ಸೂಕ್ಷ್ಮವಾಗಿ ಅವಲೋಕಿಸಿದ. ಶಾರದಾಮೇಡಂರಷ್ಟೇ ಸಮವಯಸ್ಕರು. ಸಾಧಾರಣ ವ್ಯಕ್ತಿತ್ವ. ನಗುಮುಖ, ನೋಡಿದೊಡನೆಯೇ ಗೌರವ ಹುಟ್ಟಿಸುವಂತಹ ನಿಲುವು, ಎಲ್ಲಕ್ಕಿಂತ ಮಿಗಿಲಾಗಿ ಅಯಸ್ಕಾಂತದಂತೆ ಸೆಳೆಯುವ ಕಣ್ಣುಗಳು. ಅಬ್ಬಾ ! ಎಂದುಕೊಂಡ. ಮುಜುಗರಪಟ್ಟುಕೊಂಡೇ ಅಲ್ಲಿಗೆ ಬಂದಿದ್ದ ಅವನಿಗೆ ಏನೋ ಒಂದು ರೀತಿಯ ಭರವಸೆ ಹುಟ್ಟಿತು. ಡಾಕ್ಟರ್ ಹೇಳಿದಂತೆ ಸಂಕೋಚವನ್ನು ಬದಿಗಿಟ್ಟು ಅಲ್ಲಿಯವರೆಗೆ ನಡೆದ ಘಟನೆಗಳನ್ನು ಅವರಿಗೆ ವಿವರಿಸಿದ.

ಎಲ್ಲವನ್ನು ಸಾವಧಾನವಾಗಿ ಆಲಿಸುತ್ತಾ ತಮ್ಮ ಮುಂದೆ ಕುಳಿತಿದ್ದ ಮೂರೂ ಜನರನ್ನು ತದೇಕ ದೃಷ್ಟಿಯಿಂದ ಗಮನಿಸುತ್ತಿದ್ದರು ಅಪರ್ಣಾ. ಅತಿ ಸಾಧಾರಣ ರೂಪಿನ ತಾಯಿ ರುಕ್ಮಿಣಿ, ನಾಲ್ಕು ಜನ ತಿರುಗಿ ನೋಡುವಂತಹ ರೂಪವಂತ ತಂದೆ ಮಾಧವ, ಅವನನ್ನು ಮೀರಿದ ಚಲುವನ್ನು ಹೊಂದಿದ ಬೊಂಬೆಯಂತೆ ಲಕ್ಷಣವಾದ ಮಗಳು ನಂದಿನಿ. ಅವಳ ಮುಖದಲ್ಲಾವರಿಸಿಕೊಂಡಿದ್ದ ಯಾವುದೋ ಆತಂಕ, ಗಾಭರಿ ಕಂಡುಬರುತ್ತಿತ್ತು. ಕಣ್ಣುಗಳಲ್ಲಿ ಭೀತಿ, ಇದುವರೆಗೆ ನಡೆಸಿದ ಪೂಜೆ, ದೃಷ್ಟಿ ನಿವಾರಣೆ ಶಾಸ್ತ್ರಗಳಿಂದ ಸೋತಂತಿದ್ದ ದೇಹ. ಇಷ್ಟವಿಲ್ಲದ ಸ್ಥಳಕ್ಕೆ ಕರೆತಂದಿದ್ದಾರೆಂಬ ಚಡಪಡಿಕೆ. ಇವೆಲ್ಲವೂ ತಮ್ಮ ಸ್ನೇಹಿತೆ ಶಾರದಾಮೇಡಂ ಹೇಳಿದಂತೆಯೇ ಇವೆ ಎಂದುಕೊಂಡರು.

ನಿಧಾನವಾಗಿ ನಂದಿನಿಯ ಕಡೆಗೆ ತಿರುಗಿ ಅವಳ ಹೆಸರು, ಅವಳ ಅಭಿರುಚಿ, ಜಾಣ್ಮೆ, ಹವ್ಯಾಸಗಳು ಎಲ್ಲ ವಿವರಗಳನ್ನು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಸೂಕ್ಷ್ಮವಾಗಿ ಬಾಯಿಬಿಡಿಸಿ ತಿಳಿದರು. ”ಮಗೂ ಇಷ್ಟೆಲ್ಲ ಜಾಣೆಯಾಗಿರುವ ನೀನು ಸ್ಕೂಲಿಗೆ ಹೋಗುವುದಿಲ್ಲ ಎಂದು ಹಠಾತ್ ತೀರ್ಮಾನಕ್ಕೆ ಬರಲು ಏನು ಕಾರಣ?” ಎಂದು ಪ್ರಶ್ನಿಸಿದರು.

”ಇಲ್ಲ, ನಾನು ಸ್ಕೂಲಿಗೆ ಹೋಗುವುದಿಲ್ಲ ಅಷ್ಟೇ” ಎಂದು ಒರಟಾಗಿ ಹೇಳಿ ಕುರ್ಚಿಯ ಮೇಲಿಂದ ಎದ್ದು ಪೋಷಕರ ಕೈ ಹಿಡಿದು ಮನೆಗೆ ಹೊರಡೋಣವೆಂದು ಅವಸರಪಡಿಸಿದಳು.

”ಹೂಂ..ಓ.ಕೆ, ಹೋಗುವೆಯಂತೆ, ಇಲ್ಲಿ ಬಾ ಮಗು” ಎಂದು ಅವಳನ್ನು ತಮ್ಮ ಹತ್ತಿರವಿದ್ದ ಕುರ್ಚಿಯಮೇಲೆ ತಾವೇ ಕೈಹಿಡಿದು ಕೂಡಿಸಿದರು. ಅವಳಿಗೆ ಒಂದು ಕಾಗದದ ಪ್ಯಾಡ್ ಮತ್ತು ಪೆನ್ ಕೊಟ್ಟು ”ನಿನ್ನ ಹ್ಯಾಂಡ್ ರೈಟಿಂಗ್ ಹೇಗಿದೆ ನೋಡಬೇಕು” ಅದಕ್ಕಾಗಿ ಅವಳಿಗೇನೆನ್ನಿಸುತ್ತದೆ ಅದನ್ನು ಬರೆಯುವಂತೆ ಹೇಳಿದರು.

ಅಷ್ಟರಲ್ಲಿ ಮಾಧವ ”ನೋಡಿದಿರಲ್ಲ ಡಾಕ್ಟರೇ, ಹೀಗೇ..ಹೀಗೇ ಯಾರು ಕೇಳಿದರೂ ಇದೇ ಉತ್ತರ. ಪಾಪ ಶಾರದಾಮೇಡಂ ಇವಳು ವಿಚಿತ್ರವಾಗಿ ಆಡಲು ಪ್ರಾರಂಭಿಸಿದ ದಿನದಿಂದ ಪ್ರತಿದಿನ ನಮ್ಮ ಮನೆಗೆ ಎಡತಾಕುತ್ತಲೇ ಇದ್ದಾರೆ. ಇವಳನ್ನು ಬಾಯಿಬಿಡಿಸಲು ಪ್ರಯತ್ನ ಮಾಡುತ್ತಲೇ ಇದ್ದಾರೆ. ಏನು ಮಾಡಬೇಕೆಂದೇ ತೋರುತ್ತಿಲ್ಲ. ಅದೇನೋ ಅವಳಿಗೆ ಮತ್ತು ಬರುವಂತೆ ಮಾಡಿ ಮನಸ್ಸಿನಲ್ಲಿರುವುದನ್ನು ಬಾಯಿಬಿಡಿಸುತ್ತಾರಂತಲ್ಲ ಅದರ ಬಗ್ಗೆ ಹೇಳುವುದನ್ನು ಕೇಳಿದ್ದೇನೆ. ಅಂತಹದ್ದನ್ನು ಮಾಡಿ ಇವಳ ಗುಟ್ಟನ್ನು ತಿಳಿಯುವುದಕ್ಕೆ ಆಗೋಲ್ಲವಾ ಡಾಕ್ಟರೇ? ನಾನು ಮಿತಿಮೀರಿ ಮಾತನಾಡಿದೆನೆಂದರೆ ದಯವಿಟ್ಟು ಕ್ಷಮಿಸಿ. ಹೇಗೋ ನನ್ನ ಮಗಳು ಎಂದಿನಂತೆ ಈ ಸ್ಥಿತಿಯಿಂದ ಮೊದಲಿದ್ದಂತೆ ಮಾಡಿ ಪುಣ್ಯ ಕಟ್ಟಿಕೊಳ್ಳಿ” ಎಂದು ಎರಡೂ ಕೈಗಳನ್ನು ಜೋಡಿಸಿ ದೀನನಂತೆ ಬೇಡಿಕೊಂಡ.

ಅಲ್ಲಿಯವರೆಗೆ ತುಟಿಬಿಚ್ಚದೆ ಕುಳಿತಿದ್ದ ನಂದಿನಿಯ ತಾಯಿ ರುಕ್ಮಿಣಿ ತಾನೂ ಅವರತ್ತ ಕೈಜೋಡಿಸಿದಳು. ಅವಳ ಕಣ್ಣು ತುಂಬಿದ್ದವು.
”ಹೆದರಬೇಡಿ, ನಿಮ್ಮ ಮಗಳಿಗೆ ಏನೂ ಆಗಿಲ್ಲ. ಅವಳ ಮನಸ್ಸು ಯಾವುದೋ ಅಹಿತಕರ ಘಟನೆಯಿಂದ ಘಾಸಿಕೊಂಡಿದೆ. ಟ್ರೀಟ್‌ಮೆಂಟಿನ ನಂತರ ಎಲ್ಲವೂ ಸರಿಹೋಗುತ್ತದೆ. ಮಾಧವರವರೇ ಈ ವಯಸ್ಸಿನ ಮಕ್ಕಳಿಗೆ ಹಾಗೆಲ್ಲಾ ಮಂಪರು ಬರುವ ಪರೀಕ್ಷೆ ಮಾಡಲಾಗದು. ಒಂದು ಇಂಜೆಕ್ಷನ್ ಕೊಡುತ್ತಾನೆ ಅದರಿಂದ ಅಂತರಂಗದಲ್ಲಿರುವುದೆಲ್ಲಾ ಹೊರಕ್ಕೆ ಬರುತ್ತದೆ” ಎಂದರು.

ಕಡೆಗಣ್ಣಿನಿಂದ ನಂದಿನಿಯ ಕಡೆಗೆ ನೋಡಿದರು. ಆಕೆ ಮೇಜಿನ ಮೇಲಿದ್ದ ಪ್ಯಾಡಿನ ಹಾಳೆಯ ಮೇಲೆ ಏನನ್ನೋ ಗೀಚಿದಂತೆ ಕಾಣಿಸಿತು. ಅವರೆಲ್ಲರಿಗೆ ”ಆಯಿತು, ನೀವುಗಳು ಹೋಗಿಬನ್ನಿ, ಮತ್ತೆ ಯಾವಾಗ ಬರಬೇಕಾಗುತ್ತದೆಂದು ಫೋನ್ ಮಾಡಿ ತಿಳಿಸುತ್ತೇನೆ. ಅಷ್ಟರಲ್ಲಿ ನಿಮ್ಮ ಹುಡುಗಿಯ ಮನಸ್ಸು ಬದಲಾಯಿಸಿ ಶಾಲೆಗೆ ಹೋಗಬೇಕೆಂದು ಹಂಬಲ ಹುಟ್ಟಬಹುದು. ಆದರೆ ನೀವುಗಳು ಯಾರೂ ಅವಳನ್ನು ಬಲವಂತ ಮಾಡಬೇಡಿ” ಎಂದು ಬೀಳ್ಕೊಟ್ಟರು. ಅವರೆಲ್ಲರೂ ಹೋದರೆಂದು ಖಚಿತವಾದಮೇಲೆ ಡಾ. ಅಪರ್ಣಾರವರು ನಂದಿನಿ ಬರೆದಿದ್ದ ಕಾಗದವನ್ನು ಪರಿಶೀಲಿಸಿದರು.

ಅದರಲ್ಲಿ ”ಡಾಕ್ಟರ್ ನನಗೆ ಇಂಜಕ್ಷನ್ ಅಂದರೆ ಬಹಳ ಭಯ. ನಾನು ನಿಮ್ಮ ಮುಂದೆ ಎಲ್ಲವನ್ನೂ ಹೇಳುತ್ತೇನೆ. ಆದರೆ ನಮ್ಮ ಅಪ್ಪ, ಅಮ್ಮ, ಅಜ್ಜಿ ಯಾರೂ ಎದುರಿಗಿರಬಾರದು. ನಾನು ಹೇಳುವುದು ಅವರಿಗೆ ಗೊತ್ತಾಗಬಾರದು”ಎಂದು ಅವಸರದಲ್ಲಿ ಗೀಚಿದ್ದಳು.
”ಓ ಹುಡುಗಿ ತುಂಬ ಚಾಣಾಕ್ಷಳಿದ್ದಾಳೆ. ಏನೋ ನಿಗೂಢವಾದ ಕಾರಣವಿದೆ. ಇದರ ಬಗ್ಗೆ ತಿಳಿದುಕೊಳ್ಳಲು ಇವರ ಕುಟುಂಬದ ಹಿನ್ನೆಲೆಯ ಬಗ್ಗೆ ಗೊತ್ತಿರುವ ಶಾರದೆಯನ್ನು ಕೇಳಬೇಕು” ಎಂದುಕೊಂಡರು.

ಅಷ್ಟರಲ್ಲಿ ”ಮೇಡಂ” ಎನ್ನುವ ಕರೆ ಕೇಳಿ ಅತ್ತಕಡೆಗೆ ತಿರುಗಿದರು. ಬಂದವರು ಶಾರದಾ ಮೇಡಂ. ‘ಅರೇ, ನಿನ್ನನ್ನೇ ಜ್ಞಾಪಿಸಿಕೊಳ್ಳುತ್ತಿದ್ದೆ. ನೀನ್ಯಾವಾಗ ಬಂದೆ?’ ಎಂದು ಕೇಳಿದರು.
”ನಾನಾವಗಲೇ ಬಂದು ಕಾರ್‍ ಷೆಡ್ಡಿನೊಳಗಿಂದ ಹಿಂದುಗಡೆ ರೂಮಿನೊಳಕ್ಕೆ ಬಂದು ಕುಳಿತಿದ್ದೆ. ಅವರುಗಳು ಹೋಗಲೆಂದು ಕಾಯುತ್ತಾ ಕುಳಿತಿದ್ದೆ. ಆ ಹುಡುಗಿ ತುಂಬ ಬುದ್ಧಿವಂತೆ, ಅವಳ ಈ ಸ್ಥಿತಿ ಕಂಡು ನನಗೇ ಕರುಣೆಯುಕ್ಕಿದೆ. ಏನಾದರೂ ಕ್ಲೂ ಸಿಕ್ಕಿತೇ? ಡಾಕ್ಟರ್” ಎಂದು ಕಳವಳದಿಂದ ಕೇಳಿದರು.

”ಒಂದು ಎಳೆ ಕಾಣಿಸುತ್ತಿದೆ. ಇಲ್ಲಿ ನೋಡು ನಿನ್ನ ಶಿಷ್ಯೆ ಗೀಚಿರುವುದನ್ನು. ಅವರ ಅಪ್ಪ ಅಮ್ಮನಿಗೆ ಗೊತ್ತಾಗದಂತೆ ಬರೆದುಕೊಟ್ಟಿದ್ದಾಳೆ. ಅವರ ಬಗ್ಗೆ ನಿನಗೆ ಮೊದಲಿನಿಂದಲೂ ಗೊತ್ತಲ್ಲವಾ? ಅವರ ಸಂಸಾರದ ಹಿನ್ನೆಲೆಯ ವಿಚಾರಗಳನ್ನು ವಿವರವಾಗಿ ಹೇಳು” ಎಂದರು.

”ಓಹೋ ಅದಕ್ಕೇನು, ನನ್ನ ತಂದೆಯ ಕಾಲದಿಂದಲೂ ಅವರ ಮನೆಯ ಒಡನಾಟವಿದೆ. ನಂದಿನಿಯ ಅಜ್ಜ, ಅಂದರೆ ಅವಳ ತಾಯಿ ರುಕ್ಮಿಣಿಯ ತಂದೆ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತಿದ್ದವರು. ಆಗಿನ ಕಾಲಕ್ಕೇ ಅವರು ಸ್ವಂತ ಕಾರಿಟ್ಟುಕೊಂಡು ಓಡಾಡುತ್ತಿದ್ದರು. ರುಕ್ಮಿಣಿ ಅವರಿಗೆ ಒಬ್ಬಳೇ ಮಗಳು. ರೂಪಿನಲ್ಲಿ, ಓದಿನಲ್ಲಿ ಅಷ್ಟಕ್ಕಷ್ಟೇ. ನಾನೇ ಅವಳಿಗೆ ಸ್ವಲ್ಪ ಕಾಲ ಪಾಠಹೇಳಿಕೊಟ್ಟದ್ದೂ ಉಂಟು. ಆದರೆ ಅವಳು ಏಳನೆಯ ತರಗತಿಯಿಂದ ಮುಂದಕ್ಕೆ ಹೋಗಲೇ ಇಲ್ಲ. ಬಹಳ ಬೇಗ ಅವರ ತಾಯಿಯನ್ನು ಕಳೆದುಕೊಂಡಿದ್ದಳು. ಅವರ ತಂದೆ ದೂರದ ಬಳಗದಲ್ಲಿ ಒಬ್ಬ ಬಡ ಹುಡುಗನನ್ನು ಹುಡುಕಿ ಮಗಳಿಗೆ ಮದುವೆ ಮಾಡಿಸಿ ಅಳಿಯನನ್ನು ಮನೆವಾಳ್ತನಕ್ಕೆ ಇಟ್ಟುಕೊಂಡರು. ಅವರೇ ಮಾಧವ. ರುಕ್ಮಿಣಿ ಬಹಳ ಮೃದು ಸ್ವಭಾವದ ಹೆಣ್ಣುಮಗಳು. ಅವಳ ತಂದೆಯ ಕಾಲಾನಂತರ ಅವಳ ಗಂಡನಿಗೇ ಯಜಮಾನಿಕೆ ಬಂದಿತು. ಅವರ ಅಂಗಡಿಯನ್ನೇ ಈತ ನಡೆಸಿಕೊಂಡು ಬರುತ್ತಿದ್ದಾನೆ. ಮಾಧವ ತನ್ನ ಹೆಂಡತಿಯನ್ನು ಪಂಜರದ ಗಿಳಿಯಂತೆ ಇಟ್ಟುಕೊಂಡಿದ್ದಾನೆ. ಅವಳಿಗೆ ಯಾವುದೇ ಸ್ವಂತಿಕೆ, ಸ್ವಾತಂತ್ರ್ಯವಿಲ್ಲ. ಅವಳೆಲ್ಲಿಗೇ ಹೋದರೂ ಅವನ ಜೊತೆಯಲ್ಲಿಯೇ ಹೋಗಬೇಕು. ಅದು ಬಿಟ್ಟು ಬೇರೆಯವರೊಡನೆ ಯಾವುದೇ ಮಾತುಕತೆ, ವ್ಯವಹಾರ ಮಾಡುವಂತಿಲ್ಲ. ಅವಳತ್ತೆ, ಮಾಧವನ ತಾಯಿ ಘಟವಾಣಿ ಹೆಂಗಸು. ಯಾವಾಗಲೂ ಸೊಸೆಯ ಮೇಲೊಂದು ಕಣ್ಣಿಟ್ಟೇ ಸರ್ಪಗಾವಲು ಕಾಯುತ್ತಾಳೆ. ಇದನ್ನು ಕಂಡು ನೆರೆಹೊರೆಯವರು ”ಆಹಾ ! ಸೀಮೆಗಿಲ್ಲದ ಹೆಂಡತಿ ತಂದವನಂಗೆ ಆಡ್ತಾನೆ ಆವಯ್ಯ, ನಾವು ಕಾಣದ ಶ್ರೀಮಂತಿಕೆ” ಅಂತೆಲ್ಲಾ ಆಡಿಕೊಳ್ಳುವುದುಂಟು. ಆದರೆ ನಂದಿನಿಯನ್ನು ಮಾತ್ರ ಅವರಪ್ಪ ಮತ್ತು ಅಜ್ಜಿ ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಾರೆ. ಆ ಹುಡುಗಿಯೂ ಹಾಗೇ ಯಾವಾಗಲೂ ಅವರಿಬ್ಬರಿಗೂ ಅಂಟಿಕೊಂಡಿತ್ತು. ಜೊತೆಗೆ ಅವಳು ಒಳ್ಳೆ ಸಂಸ್ಕಾರ ಬೆಳೆಸಿಕೊಂಡಿದ್ದಾಳೆ. ಓದಿನಲ್ಲೂ ಜಾಣೆ. ಅವಳ ತಾಯಿ ಮಾತ್ರ ಯಾವುದಕ್ಕೂ ಕಾಣಿಸಿಕೊಂಡದ್ದನ್ನು ನಾನು ಕಾಣೆ. ಅವಳಾಯ್ತು, ಅವಳ ಮನೆಗೆಲಸವಾಯ್ತು. ಇದ್ದಕ್ಕಿದ್ದಂತೆ ಹೀಗೇಕಾಯಿತು ಅರ್ಥವಾಗುತ್ತಿಲ್ಲ. ನನಗೇ ಮರುಕ ಹುಟ್ಟಿ ನಿಮ್ಮಲ್ಲಿಗೆ ಕರೆತಂದೆ. ಮೊದಲು ಅವರ್‍ಯಾರೂ ಬರಲು ಒಪ್ಪಿರಲಿಲ್ಲ. ನಾನೇ ಒತ್ತಾಯಿಸಿ ಕರೆತಂದೆ. ಹೇಗೋ ಬಂದಿರುವ ಸಂಕಟಕ್ಕೊಂದು ಪರಿಹಾರ ತೋರಿಸಿ ಪುಣ್ಯ ಕಟ್ಟಿಕೊಳ್ಳಿ” ಎಂದು ”ಆ ಹುಡುಗಿಯನ್ನು ಮತ್ತೆ ನಾನೇ ಕರೆತರಲೇ?” ಎಂದು ಕೇಳಿದರು ಶಾರದಾ.

”ನೀನು ಕರೆತರುವುದು ಬೇಡ. ಅವರ ಹಿನ್ನೆಲೆ ಬಗ್ಗೆ ನನಗೆ ತಿಳಿದಿದೆಯೆಂದು ಅವರಿಗೆ ಗೊತ್ತಾಗುವುದು ಬೇಡ. ಆಕೆ ಲೆಟರ್‌ಪ್ಯಾಡ್ ಮೇಲೆ ಹೀಗೆ ಬರೆದಿದ್ದಾಳೆಂದು ತಿಳಿಸಬಾರದು. ನಾನೇ ಕರೆಸಿ ಅವಳಿಗೆ ಕೆಲವು ರೀತಿಯ ಟೆಸ್ಟ್ ಮಾಡಬೇಕೆಂದು ಒಳಕ್ಕೆ ಕರೆದುಕೊಂಡು ಹೋಗುತ್ತೇನೆ. ಅವರಿಗೆ ನೀವು ಹೊರಗಿರಿ ಎಂದು ಹೇಳುತ್ತೇನೆ. ನಾಳೆಯೇ ಅವರಿಗೆ ಮತ್ತೆ ಇಲ್ಲಿಗೆ ಬರಲು ಫೋನ್‌ಮಾಡಿ ತಿಳಿಸುತ್ತೇನೆ” ಎಂದರು ಡಾ. ಅಪರ್ಣಾ.

”ಹೇಗೋ ಅವಳ ಅಂತರಂಗವನ್ನು ತಿಳಿದು ಅವಳಿಗೆ ಧೈರ್ಯತುಂಬಿ. ನಾನು ಒತ್ತಾಸೆಯಾಗಿ ನಿಲ್ಲುತ್ತೇನೆ. ಮತ್ತೇನಾದರೂ ಮಾಹಿತಿ ಬೇಕಾದರೆ ಕೇಳಿ. ಸುತ್ತಮುತ್ತಲಿರುವವರನ್ನು ವಿಚಾರಿಸಿ ತಿಳಿದುಕೊಂಡು ಬರುತ್ತೇನೆ” ಎಂದು ಗೆಳತಿಯಿತ್ತ ಆತಿಥ್ಯವನ್ನು ಸ್ವೀಕರಿಸಿ ಶಾರದಾಮೇಡಂ ಹಿಂತಿರುಗಿದರು.

ಅದೇ ದಿನ ಡಾಕ್ಟರರು ಮಾಧವನಿಗೆ ಫೋನ್ ಮಾಡಿದರು. ಉತ್ತರಿಸಿದ ಮಾಧವ ‘ನೀವು ಯೋಚಿಸಿ ನಂತರ ಕರೆಯುತ್ತೇನೆಂದಿದ್ರಿ’ ಎಂದ. ”ಒಂದೆರಡು ಸಾರಿ ಬಂದು ಹೋಗಬೇಕಾದೀತು. ಅದಕ್ಕೇ ಈಗ ಕಾಲ್ ಮಾಡಿದೆ. ಇದು ಮಗುವಿನ ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿದೆ. ನೋಡಿ ತಡವಾದರೆ ಅವಳ ಓದಿಗೆ ತೊಂದರೆಯಾಗಬಹುದು. ಬಹಳ ದಿನ ಎಳೆಯುವಂತಿಲ್ಲ. ಇದರಿಂದ ಬೇರೆಯವರಿಗೆ ಅನುಮಾನಕ್ಕೆ ಆಸ್ಪದವಾಗಬಹುದು. ಅದನ್ನೆಲ್ಲ ಆಲೋಚಿಸಿ ನೀವುಗಳು ಸಹಕರಿಸಿದರೆ ಸಮಸ್ಯೆಯನ್ನು ಬೇಗನೆ ಬಗೆಹರಿಸಲು ಸಹಾಯವಾಗುತ್ತೆ. ಆದ್ದರಿಂದ ನಾಳೆ ಬೆಳಗ್ಗೆ ಹನ್ನೊಂದುಗಂಟೆಗೆ ನಿಮ್ಮ ಪತ್ನಿಯವರನ್ನೂ ಕರೆದುಕೊಂಡು ಬಂದುಬಿಡಿ” ಎಂದು ಉತ್ತರಕ್ಕೆ ಕಾಯದೆ ಕಾಲ್ ಕಟ್ ಮಾಡಿದರು.

ಅಲ್ಲಿಯೇ ಇದ್ದ ತನ್ನ ತಾಯಿಗೆ ವಿಚಾರವನ್ನು ತಿಳಿಸಿ, ನಾನೇ ಶಾರದಾಮೇಡಂ ಕಡೆಯಿಂದ ಬೇಗನೆ ಮುಗಿಸಿಕೊಡಲು ಹೇಳಿಕಳುಹಿಸಬೇಕು ಅಂದುಕೊಂಡಿದ್ದೆ ಅಮ್ಮಾ. ಅವರ ತಲೆಗೇ ಈ ವಿಚಾರ ಹೊಳೆದದ್ದು ನಮ್ಮ ಪುಣ್ಯ. ನಾಳೆ ಬೆಳಗ್ಗೆ ಹೋಗಿ ಬರೋಣ ಎಂದ ಮಾಧವ. ಅವನ ಮಾತನ್ನು ತೆರೆಯ ಮರೆಯಲ್ಲಿಯೇ ಕೇಳಿಸಿಕೊಂಡ ರುಕ್ಮಿಣಿ ಕಾಣದ ಭಗವಂತನಿಗೆ ಅಲ್ಲಿಂದಲೇ ಕೈಮುಗಿದಳು.

ಮಾರನೆಯ ದಿನ ಬಂದವರನ್ನು ಡಾಕ್ಟರ್ ಅಪರ್ಣಾರವರು ಮಾತನಾಡಿಸಿ ”ನೀವಿಬ್ಬರೂ ಹೊರಗಡೆ ಕುಳಿತಿರಿ. ನಾನು ನಿಮ್ಮ ಮಗಳನ್ನು ಒಳಕೋಣೆಗೆ ಕರೆದುಕೊಂಡು ಹೋಗುತ್ತೇನೆ. ಕೆಲವು ಟೆಸ್ಟ್‌ಗಳನ್ನು ಮಾಡಬೇಕಾಗಿದೆ” ಎಂದು ನಂದಿನಿಯ ಕೈ ಹಿಡಿದುಕೊಂಡೇ ಒಳಕೋಣೆಗೆ ಕರೆದುಕೊಂಡು ಹೋದರು.

ಒಳಕ್ಕೆ ಹೋದ ನಂದಿನಿ ಸುತ್ತಲೂ ಕಣ್ಣಾಡಿಸಿದಳು. ಮಾಮೂಲಿ ರೂಮಿಗಿಂತಲೂ ಇದು ಹೆಚ್ಚು ವಿಶಾಲವಾಗಿತ್ತು. ಮಧ್ಯೆ ಮಧ್ಯೆ ಸ್ಕ್ರೀನ್‌ಗಳನ್ನು ಇರಿಸಲಾಗಿತ್ತು. ಒಂದು ಟೇಬಲ್‌ಮೇಲೆ ರೆಕಾರ್ಡಿಂಗ್ ಮೆಷಿನ್, ಇನ್ನೊಂದು ಗೋಡೆಯ ಕಡೆಗೆ ಟ.ವಿ.ಯಂತಹ ಪರದೆಯಿತ್ತು. ಪಕ್ಕದಲ್ಲೇ ದೊಡ್ಡ ಟೇಬಲ್ ಇತ್ತು. ಅದರ ಮೇಲೆ ಕೆಲವು ನೀಟಾಗಿ ಜೊಡಿಸಿದ್ದ ಪುಸ್ತಕಗಳಿದ್ದವು. ಪ್ಯಾಡ್, ಪೆನ್ನುಗಳು, ಬಣ್ಣದ ಪೆನ್ಸಿಲ್‌ಗಳಿದ್ದ ಡಬ್ಬಿ , ಅಲ್ಲಲ್ಲಿ ಗೋಡೆಯಮೇಲೆ ಪರಸರದ ಚಿತ್ರಗಳಿದ್ದವು. ನಗುತ್ತಿರುವ ಮಕ್ಕಳ ಚಿತ್ರಗಳೂ ಕೆಲವಿದ್ದವು. ಅಬ್ಬಾ ! ಎಷ್ಟೊಂದು ಪರಿಕರಗಳನ್ನಿಟ್ಟಿದ್ದಾರೆ. ಎಂದುಕೊಂಡಳು. ತೆರೆದ ಕಿಟಕಿಗಳಿಂದ ಧಾರಾಳವಾಗಿ ಗಾಳಿ ಬೆಳಕು ಬರುತ್ತಿತ್ತು. ಒಳಗಡೆ ಮೃದು ಮಧುರವಾದ ಕೊಳಲಿನ ನಾದ ಹರಡಿತ್ತು.

ನಂದಿನಿಯನ್ನೇ ಸೂಕ್ಷ್ಮವಾಗಿ ಗಮನಿಸುತ್ತಾ ಡಾ. ಅಪರ್ಣಾ ”ನಂದಿನಿ, ಹೇಗಿದೆ ರೂಮು ನಿನಗೆ ಹಿಡಿಸಿತೇ? ಬಾ.. ಇಲ್ಲಿ” ಆತ್ಮೀಯತೆಯಿಂದ ಕರೆದರು.

ಕಾಲಿನಲ್ಲಿ ಬಲವೇ ಇಲ್ಲವೆಂಬಂತೆ ನಿಧಾನವಾಗಿ ಮಂಕಾದ ಮುಖ ಹೊತ್ತು ಬಂದವಳ ಮುಖದಲ್ಲಿ ಈಗ ಸ್ವಲ್ಪ ಮಟ್ಟಿಗೆ ಉಲ್ಲಾಸದ ಛಾಯೆ ಕಂಡಿತು. ಎದುರಿಗಿದ್ದ ಕುರ್ಚಿಯ ಮೇಲೆ ಕುಳಿತಳು. ನಿಧಾನವಾಗಿ ಮಾತನಾಡಿಸುತ್ತಾ ಹಿಂದಿನ ದಿನ ಅವಳು ಹಾಳೆಯಮೇಲೆ ಗೀಚಿದ್ದ ಬರಹವನ್ನು ಅವಳ ಮುಂದೆ ಹಿಡಿದರು ”ನಿನಗೆ ಯಾರನ್ನಾದರೂ ಕಂಡರೆ ಮಾತನಾಡಲು ಭಯವೇ?” ಎಂದು ಕೇಳಿದರು.

ನಂದಿನಿ ತನ್ನ ಎರಡು ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಅಳುತ್ತಾ ”ನಾನು ಸ್ಕೂಲಿಗೆ ಹೋದರೆ ಮನೆಯಲ್ಲಿ ನಾನಿಲ್ಲದಿರುವಾಗ ನನ್ನಪ್ಪ ಮತ್ತು ನನ್ನಜ್ಜಿ ಸೇರಿ ನಮ್ಮಮ್ಮನನ್ನು ಸಾಯಿಸಿಬಿಡುತ್ತಾರೆ. ಅದಕ್ಕೇ ನಾನು ಸ್ಕೂಲಿಗೆ ಹೋಗುವುದಿಲ್ಲ” ಎಂದು ಬಿಕ್ಕಳಿಸಿದಳು.

”ನೋಡು ಮಗೂ ತಲೆಯೆತ್ತಿ ನನ್ನಕಡೆ ನೊಡು. ನನ್ನ ಹತ್ತಿರ ಎಲ್ಲವನ್ನು ಹೇಳುತ್ತೇನೆಂದು ಪ್ರಾಮಿಸ್ ಮಾಡಿದ್ದೀ ಅಲ್ಲವಾ? ನಾನಿದನ್ನು ಯಾರಿಗೂ ಹೇಳುವುದಿಲ್ಲ. ಅಮ್ಮನನ್ನು ಅವರೇಕೆ ಸಾಯಿಸುತ್ತಾರೆ? ಅಂತಹ ಯೋಚನೆ ನಿನಗೇಕೆ ಬಂತು? ಭಯಪಡಬೇಡ ನನ್ನಲ್ಲಿ ಹೇಳು ” ಎಂದು ಅವಳ ಭುಜದ ಮೇಲೆ ಭರವಸೆ ನೀಡುವಂತೆ ಕೈಯಿರಿಸಿ ಕೇಳಿದರು.

”ನಾನವತ್ತು ಸ್ಕೂಲಿಗೆ ಹೊರಟಾಗ ಅಪ್ಪ ಯಾರೋ ವ್ಯವಹಾರಕ್ಕೆ ಸಂಬಂಧಿಸಿದ ಮುಖ್ಯವ್ಯಕ್ತಿ ಬರುತ್ತಾರೆ. ನಿಮ್ಮಮ್ಮನಿಗೆ ವ್ಯವಹಾರದ ಬಗ್ಗೆ ಏನೂ ಗೊತ್ತಾಗಲ್ವಲ್ಲಾ ಅದಕ್ಕೇ ನಾನು ಮನೆಯಲ್ಲಿರಬೇಕಾಗುತ್ತದೆ. ಇವತ್ತೊಂದು ದಿನ ನೀನೇ ಆಟೋದಲ್ಲಿ ಹೋಗು ಎಂದರು. ನಾನು ಆಟೋ ಬೇಡ ನಡೆದೇ ಹೋಗುತ್ತೇನೆಂದು ಮನೆ ಬಿಟ್ಟು ಹೊರಟೆ. ಸಂಜೆಗೆ ಕರೆದುಕೊಂಡು ಬರುತ್ತೇನೆಂದಿದ್ದರು. ಇನ್ನೇನು ಸ್ಕೂಲಿಗೆ ಹತ್ತಿರ ಬಂದಿದ್ದೆ ಆಗ ಮ್ಯಾತ್ಸ್ ಹೋಮ್‌ವರ್ಕ್ ಪುಸ್ತಕ ಮತ್ತು ಜಾಮಿಟ್ರಿ ಬಾಕ್ಸ್ ಮನೆಯಲ್ಲಿ ಟೇಬಲ್ ಮೇಲಿಟ್ಟಿದ್ದೆ ಮರೆತಿದ್ದು ನೆನಪಾಯಿತು. ಆ ಟೀಚರ್ ತುಂಬ ಸ್ಟ್ರಿಕ್ಟ್. ಸ್ಕೂಲು ಬೆಲ್ ಹೊಡೆಯಲು ಇನ್ನೂ ಸಮಯವಿತ್ತು. ಆದ್ದರಿಂದ ಬೇಗನೇ ಮನೆಯಿಂದ ಅವೆರಡನ್ನೂ ತರಬಹುದೆಂದು ಅವಸರವಾಗಿ ಮನೆಗೆ ಹಿಂದಿರುಗಿದೆ. ಅಂಗಡಿಯ ಬಾಗಿಲು ಹಾಕಿತ್ತು. ಅಪ್ಪ ಯಾರೋ ಬರುತ್ತಾರೆಂದಿದ್ದರು ಎಲ್ಲೋ ಹೋಗಿರಬೇಕು ಅಂದುಕೊಂಡು ಮನೆಯ ಬಾಗಿಲ ಬಳಿ ಕಾಲಿಂಗ್‌ಬೆಲ್ ಒತ್ತುವುದರಲ್ಲಿದ್ದೆ, ಅಷ್ಟರಲ್ಲಿ ಮನೆಯೊಳಗಿನಿಂದ ಜೋರಾದ ಮಾತುಕತೆ, ಅಳು, ಚೀರಾಟ, ಯಾರನ್ನೋ ಹೊಡೆಯುತ್ತಿರುವ ದಬ್ ಎಂಬ ಶಬ್ಧ ಕೇಳಿಸಿತು. ಇದೇನಾದರೂ ಟಿ.ವಿ.ಯಿಂದ ಬರುತ್ತಿರಬಹುದೇ ಎಂದುಕೊಂಡು ಕಿಟಕಿಯ ಬಾಗಿಲನ್ನು ಮೆಲ್ಲಗೆ ನೂಕಿದೆ. ಬೋಲ್ಟ್ ಹಾಕಿಲ್ಲದ್ದರಿಂದ ಅದು ತೆರೆದುಕೊಂಡಿತು. ನಾನು ಕಂಡ ಒಳಗಿನ ದೃಶ್ಯ ನನ್ನೆದೆಯನ್ನು ನಡುಗಿಸಿತು. ಎನ್ನುತ್ತಾ ನಂದಿನಿ ಬಿಕ್ಕಿಬಿಕ್ಕಿ ಅಳಲು ಪ್ರಾರಂಭಿಸಿದಳು. ಡಾ. ಅಪರ್ಣಾ ತಾವು ಕುಳಿತಿದ್ದ ಕುರ್ಚಿಯಿಂದ ಮೇಲೆದ್ದು ಜಗ್ಗಿನಿಂದ ನೀರನ್ನು ಗ್ಲಾಸಿಗೆ ಸುರಿದು ನಂದಿನಿಗೆ ಕುಡಿಯಲು ಕೊಟ್ಟರು. ಅವಳ ಸಮೀಪಕ್ಕೆ ಬಂದು ಹೆಗಲಮೇಲೆ ಕೈ ಇರಿಸಿ ಮಗೂ, ಸುಧಾರಿಸಿಕೋ. ನೀನು ನೋಡಿದ ದೃಶ್ಯದಿಂದ ಏಕೆ ಭಯವಾಯ್ತು? ಅಲ್ಲಿ ಯಾರನ್ನು ನೋಡಿದೆ?” ಎಂದವಳ ಬೆನ್ನನ್ನು ಸವರುತ್ತಾ ಅಲ್ಲಿಯೇ ನಿಂತರು.

”ಒಳಗೆ ಅಮ್ಮನ ತಲೆಕೂದಲನ್ನು ಅಜ್ಜಿಯು ಒರಟಾಗಿ ಹಿಡಿದುಕೊಂಡಿದ್ದರು. ಅಪ್ಪ ಯಾವುದೋ ಕಾಗದ ಹಿಡಿದು ಅದರ ಮೇಲೆ ಅಮ್ಮನಿಗೆ ರುಜು ಹಾಕಲು ಒತ್ತಾಯಿಸುತ್ತಿದ್ದರು. ಅಮ್ಮ ತಲೆ ಅಲ್ಲಾಡಿಸಿದ್ದಕ್ಕೆ ಅವಳ ಬೆನ್ನಮೇಲೆ ಶಬ್ಧಬರುವಂತೆ ಅಪ್ಪ ಗುದ್ಧಿದರು. ಅಮ್ಮ ನೋವು ತಡೆಯಲಾರದೆ ನೆಲದ ಮೇಲೆ ಬಿದ್ದು ಗೋಳಾಡುತ್ತಿದ್ದಳು. ಅಮ್ಮನಿಗೆ ಅವಳ ತಂದೆಯ ಎಲ್ಲ ಆಸ್ತಿಯೂ ನನ್ನ ಅಜ್ಜನಿಂದ ಬಂದಿದ್ದೆಂದು ನನಗೆ ತಿಳಿದಿತ್ತು. ಎಲ್ಲವನ್ನೂ ಮನೆವಾಳ್ತನಕ್ಕೆ ಬಂದ ಅಳಿಯನ ಬದಲು ತಮ್ಮ ಮಗಳು ಅಂದರೆ ನಮ್ಮ ಅಮ್ಮನ ಹೆಸರಿಗೆ ಬರೆದಿದ್ದರು. ನನಗಾಗ ಸಮಸ್ಯೆಯ ಮೂಲ ಅರ್ಥವಾಗಿತ್ತು. ಅಜ್ಜಿ ಮತ್ತು ಅಪ್ಪ ಮಾತುಮಾತಿಗೆ ಅಮ್ಮನನ್ನು ದಡ್ಡಿಯೆಂದು ಮೂದಲಿಸುತ್ತಿದ್ದರು. ಕೆಲವು ಸಾರಿ ಅಮ್ಮನು ಹಾಸಿಗೆಯಿಂದ ದಿನಗಟ್ಟಳೆ ಏಳಲಾಗದಂತೆ ಮಲಗಿರುತ್ತಿದ್ದಳು. ನಾನು ಏನೋ ಅನಾರೋಗ್ಯವೆಂದುಕೊಳ್ಳುತ್ತಿದ್ದೆ. ಈಗ ಗೊತ್ತಾಯ್ತು ಈ ರೀತಿ ಆಸ್ತಿಗಾಗಿ ಅಪ್ಪ ಮತ್ತು ಅಜ್ಜಿ ಅವಳಿಗೆ ಚಿತ್ರಹಿಂಸೆ ಕೊಡುತ್ತಿದ್ದರು, ಅವಳು ಏಟುಗಳನ್ನು ತಿಂದು ಏಳಲಾರದೆ ಮಲಗಿರುತ್ತಿದ್ದಳೆಂದು. ನಾನು ಏನಾದರೂ ಕೇಳಿದರೆ ಅಜ್ಜಿ ”ನಿಮ್ಮಮ್ಮನಿಗೆ ಆರೋಗ್ಯ ಸರಿಯಿಲ್ಲ”, ಅವಳ ಬಳಿ ಹೋಗಬೇಡವೆಂದು ಹೇಳುತ್ತಿದ್ದರು. ಯಾವಾಗಲೂ ನನ್ನ ಬೇಕುಬೇಡಗಳನ್ನು ಅಜ್ಜಿಯೇ ನೋಡಿಕೊಳ್ಳುತ್ತಿದ್ದರಿಂದ ನಾನು ಸುಮ್ಮನಿರುತ್ತಿದ್ದೆ. ಅಮ್ಮನ ಹತ್ತಿರ ನಾನು ಹೆಚ್ಚು ಮಾತನಾಡಲೂ ಅವಕಾಶ ಕೊಡುತ್ತಿರಲಿಲ್ಲ. ಅವಳೊಬ್ಬಳೇ ಎಲ್ಲಿಯೂ ಹೊರಗಡೆ ಹೋಗುತ್ತಿರಲಿಲ್ಲ. ಹೋಗುವುದಾದರೆ ಅಪ್ಪನೊಡನೆ ಮಾತ್ರ. ಅಜ್ಜ, ಅಜ್ಜಿ ತೀರಿಕೊಂಡದ್ದರಿಂದ, ಅವರಿಗೆ ಇವಳೊಬ್ಬಳೇ ಮಗಳಾದ್ದರಿಂದ ತವರಿನವರೂ ಯಾರೂ ಇರಲಿಲ್ಲ. ಇಂತಹ ಘಟನೆಗಳು ಹಿಂದೆ ಎಷ್ಟೋ ಸಾರಿ ಮನೆಯೊಳಗೆ ನಡೆದಿದ್ದರೂ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.

ಅಮ್ಮನನ್ನು ನೆಲಕ್ಕೆ ಬಿಳುವಂತೆ ಹೊಡೆದು ಸಾಕಾಗಿ ಅಪ್ಪ ಅಜ್ಜಿಗೆ ”ಅಮ್ಮಾ ಎಷ್ಟು ಹಿಂಸೆ ಕೊಟ್ಟರೂ ಇವಳು ಬಗ್ಗುತ್ತಿಲ್ಲ. ಇನ್ನು ಉಳಿದದ್ದು ಒಂದೇ ದಾರಿ. ಹೇಗಾದರೂ ಮಾಡಿ ಉಪಾಯದಿಂದ ಯಾರಿಗೂ ತಿಳಿಯದಂತೆ ಇವಳನ್ನು ಮುಗಿಸಿಬಿಡುವುದು” ಎಂದು ಅಬ್ಬರಿಸಿದರು. ಅವರ ಮಾತುಗಳನ್ನು ಕೇಳಿಸಿಕೊಂಡು ಮೆಲ್ಲಗೆ ನಾನು ಕಿಟಕಿಯ ಬಳಿಯಿಂದ ಹಿಂದಕ್ಕೆ ಸರಿದೆ. ಸ್ಕೂಲಿಗೆ ಹೋಗಲು ಮನಸ್ಸಾಗದೆ ಪಾರ್ಕಿನಲ್ಲಿ ಸಂಜೆಯವರೆಗೆ ಕುಳಿತಿದ್ದೆ. ಸ್ಕೂಲು ಬಿಡುವ ಸಮಯಕ್ಕೆ ಸರಿಯಾಗಿ ಅಪ್ಪನಿನ್ನೂ ನನ್ನನ್ನು ಕರೆದುಕೊಂಡು ಹೋಗಲು ಬರುವುದರೊಳಗೆ ನಾನೇ ಮನೆಗೆ ಬಂದುಬಿಟ್ಟೆ. ಮನೆಯಲ್ಲಿ ಎಂದಿನಂತೆ ಅಮ್ಮ ಎಂದಿನಂತೆ ಮೌನವಾಗಿದ್ದಳು. ಅತ್ತತ್ತು ಅವರ ಕಣ್ಣುಗಳು ಊದಿದ್ದು, ಪೂರ್ತಿ ಸೆರಗನ್ನು ಹೊದ್ದಿದ್ದರೂ ಅವಳ ಮೈಮೇಲಿನ ಬಾಸುಂಡೆಗಳು ನನಗೆ ಕಾಣಿಸಿದವು. ನನಗೆ ನನ್ನ ಮೇಲೇ ಜಿಗುಪ್ಸೆಯಾಯಿತು. ಹೆತ್ತಮ್ಮನನ್ನು ನಾನು ಇದುವೆರಗೂ ಒಂದು ಸಾರಿಯಾದರೂ ಪ್ರೀತಿಯಿಂದ ತಬ್ಬಿಕೊಂಡು ಅವಳ ಮಡಿಲಿನಲ್ಲಿ ಮಲಗಿದ್ದೇ ಇಲ್ಲ. ಯಾವಾಗಲೂ ಅಜ್ಜಿಯ ಬಳಿಯಲ್ಲಿಯೇ ನಾನಿರುತ್ತಿದ್ದೆ. ಅಮ್ಮನೊಡನೆ ಯಾವುದೇ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿಲ್ಲ. ಅನಿವಾರ್ಯವಾಗಿ ಊಟ ಬಡಿಸುವಾಗಲೋ ಇನ್ನಾವಾಗಲೋ ಒಂದೆರಡು ಮಾತನಾಡುತ್ತಿದ್ದೆ. ಅವರೇನಾದರೂ ಕೇಳಿದರೂ ಒಂದೆರಡು ಮಾತಿನಲ್ಲಿ ಉತ್ತರ ಅಷ್ಟೇ ನನ್ನ ಅಮ್ಮನ ಸಂಬಂಧ. ಆದರೆ ಈಗ ನನ್ನ ತಪ್ಪು ಅರಿವಾಗಿದೆ. ನಾನು ದೊಡ್ಡವಳಾಗಿದ್ದೇನೆ. ನಾವು ದೊಡ್ಡಮನೆ, ಇಷ್ಟೆಲ್ಲ ಸುಖಸೌಲಭ್ಯಗಳನ್ನು ಅನುಭವಿಸಲು ಅಮ್ಮನ ಅಪ್ಪ ಕೊಟ್ಟಿದ್ದ ಆಸ್ತಿಯೇ ಕಾರಣ. ಈಗ ಇನ್ನೇನೋ ಬೇಕೆಂದು ಅವಳನ್ನು ಹೀಗೆ ಪ್ರಾಣ ತೆಗೆಯಲು ಸಿದ್ಧರಾಗಿದ್ದಾರೆ, ಅರ್ಥವಾಗುತ್ತಿಲ್ಲ. ಆದರೆ ಈಗ ನನಗೆ ನನ್ನ ಅಮ್ಮ ಬೇಕು. ಯಾವುದೇ ಕಾರಣಕ್ಕೆ ಅಪ್ಪ, ಅಜ್ಜಿ ಅವಳನ್ನು ಕೊಲ್ಲಲು ಬಿಡುವುದಿಲ್ಲ. ಅದಕ್ಕಾಗಿ ನಾನು ಸದಾ ಅಮ್ಮನಿಗೆ ಕಾವಲಾಗಿ ಮನೆಯಲ್ಲಿರಬೇಕು. ನಾನೆದುರಿಗಿದ್ದರೆ ಅವರು ಹಾಗೆ ಮಾಡುವುದಿಲ್ಲ. ಅದಕ್ಕೇ ನಾನು ಸ್ಕೂಲಿಗೇ ಹೋಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ಅಳುತ್ತಾ ಅಪರ್ಣಾರನ್ನು ತಬ್ಬಿಕೊಂಡು ಬಿಕ್ಕಳಿಸತೊಡಗಿದಳು.

ಡಾ. ಅಪರ್ಣಾ ಅಳುತ್ತಿದ್ದ ನಂದಿನಿಯ ಮುಖವನ್ನೆತ್ತಿ ಅವಳ ಕಣ್ಣೀರನ್ನು ಒರೆಸುತ್ತಾ ”ಅಳಬೇಡ, ಭಯಪಡಬೇಡ. ನಾನು ನಿನ್ನಮ್ಮನಿಗೆ ಯಾವ ಅಪಾಯವೂ ಆಗದಂತೆ ನೋಡಿಕೊಳ್ಳುತ್ತೇನೆ. ನಿನ್ನ ಅಪ್ಪ ಮತ್ತು ಅಜ್ಜಿಗೆ ಸರಿಯಾಗಿ ಬುದ್ಧಿಹೇಳಿ ಸರಿದಾರಿಗೆ ತರುತ್ತೇನೆ. ಚಿಂತಿಸಬೇಡ. ನನ್ನ ಮೇಲೆ ಭರವಸೆಯಿಡು ಮಗೂ ಎಂದು ಹೇಳಿ ಸಮೀಪದಲ್ಲಿದ್ದ ಸಿಂಕಿನಲ್ಲಿ ಮುಖ ತೊಳೆದುಕೋ” ಎಂದು ಪುಟ್ಟದೊಂದು ಟವೆಲ್ ಕೊಟ್ಟು ಸಂತೈಸಿದರು.

ನಂದಿನಿಗೆ ಡಾಕ್ಟರರ ಮಾತುಗಳನ್ನು ಕೇಳಿ ಅವಳ ಅಂತರಂಗದಲ್ಲಿ ಮಡುಗಟ್ಟಿದ್ದ ಭಯ, ಆತಂಕ, ಕಳವಳವೆಲ್ಲವೂ ದೂರವಾಗಿ ಪ್ರಕ್ಷುಬ್ಧ ಮನಸ್ಸು ಈಗ ಶಾಂತ ಸ್ಥಿತಿಗೆ ಮರಳಿತ್ತು. ಅವರು ಹೇಳಿದಂತೆ ಮಾಡುತ್ತಾರೆಂಬ ಭರವಸೆಯಿಂದ ಸಮಾಧಾನವಾಗಿ ಡಾಕ್ಟರರ ಜೊತೆಯಲ್ಲಿ ಹೊರಕ್ಕೆ ಬಂದಳು.

ಅವರಿಬ್ಬರೂ ಒಳಕೋಣೆಗೆ ಹೋಗಿ ಎಷ್ಟುಹೊತ್ತಾದರೂ ಬರಲಿಲ್ಲವೆಂದು ಮಾಧವ ಮತ್ತವನ ಹೆಂಡತಿ ಗಳಿಗೆಗೊಮ್ಮೆ ಆ ರೂಮಿನ ಬಾಗಿಲಿನತ್ತ ನೋಡುತ್ತಾ ಚಡಪಡಿಸುತ್ತಿದ್ದರು. ಈಗ ಅವರಿಬ್ಬರೂ ಹೊರಗಡೆ ಬಂದದ್ದರಿಂದ ಸಮಾಧಾನವಾಯಿತು. ಭಯಮಿಶ್ರಿತ ಆತಂಕದಿಂದ ”ನನ್ನ ಮಗಳು ಏನಾದರೂ ಹೇಳಿದಳೇ ಡಾಕ್ಟರ್?” ಎಂದು ಕೇಳಿದರು.

”ಹೇಳುತ್ತೇನೆ ಆತುರಪಡಬೇಡಿ” ಎನ್ನುತ್ತಾ ನಂದಿನಿಗೆ ”ನೋಡು ನಂದಿನಿ ನಿಮ್ಮ ಅಮ್ಮನಿಗೆ ನಮ್ಮ ಕೈತೋಟವನ್ನೆಲ್ಲ ತೋರಿಸಿಕೊಂಡು ಬಾ” ಎಂದು ಇಬ್ಬರನ್ನೂ ಹೊರಕ್ಕೆ ಕಳುಹಿಸಿದರು ಡಾ. ಅಪರ್ಣಾ. ನಂತರ ಮಾಧವನ ಕಡೆ ತಿರುಗಿ ”ಸಾಧ್ಯವಾದರೆ ಈದಿನ ಸಂಜೆ ಅಥವಾ ನಾಳೆ ಇದೇ ಹೊತ್ತಿಗೆ ನಿಮ್ಮ ತಾಯಿಯನ್ನು ನಿಮ್ಮೊಡನೆ ಕರೆದುಕೊಂಡು ಬನ್ನಿ” ಎಂದರು.

ಅವರ ಮಾತನ್ನು ಕೇಳಿದ ಮಾಧವ ”ಡಾಕ್ಟರೇ, ನಮ್ಮ ತಾಯಿಯೇ ಏಕೆ?” ಎಂದು ಪ್ರಶ್ನಿಸಿದ.

”ಕಾರಣವನ್ನು ಅವರು ಬಂದಾಗ ಹೇಳುತ್ತೇನೆ. ನಿಮ್ಮ ಮಗಳನ್ನು ಏನೂ ಪ್ರಶ್ನಿಸಬೇಡಿ. ನೀವಿನ್ನು ಹೊರಡಬಹುದು” ಎಂದರು.
ಮಾಧವನಿಗೆ ಎಲ್ಲವೂ ಗೋಜಲು ಗೋಜಲಾದಂತೆನಿಸಿತು. ಹೇಗೋ ನನ್ನ ಮಗಳು ಮೊದಲಿನಂತಾದರೆ ಸಾಕು ಎಂದುಕೊಂಡು ”ನಾನು ನಮ್ಮ ತಾಯಿಯವರನ್ನು ಈದಿನ ಸಂಜೆಯೇ ಕರೆದುಕೊಂಡು ಬರುತ್ತೇನೆ” ಎಂದು ಹೇಳಿ ಡಾಕ್ಟರರಿಗೆ ವಂದನೆಗಳನ್ನು ಸಲ್ಲಿಸಿ ಹೆಂಡತಿ ಮಗಳೊಂದಿಗೆ ಮನೆಗೆ ನಡೆದ.

ಸಂಜೆಯಾಗುವುದನ್ನೇ ಕಾಯುತ್ತಿದ್ದನೇನೋ ಎಂಬಂತೆ ಮಾಧವ ತನ್ನ ತಾಯಿ ಲಲಿತಮ್ಮನೊಡನೆ ಡಾಕ್ಟರರ ಮನೆಗೆ ಹಾಜರಾದ. ಅಪರ್ಣಾರವರು ಅವನಿಗೆ ತಾಯಿಯನ್ನು ಕರೆದುಕೊಂಡು ಬರಲು ಹೇಳಿದಾಗ ಅವನ್ಹೇಗೆ ಅಚ್ಚರಿಪಟ್ಟನೋ ಹಾಗೇ ಲಲಿತಮ್ಮನೂ ”ನಾನೇ..ನಾನೇಕೆ ಬರಬೇಕಂತೆ. ನಂದೂ ಏನಾದರೂ ಹೇಳಿದಳೇ? ”ಎಂದು ಮಗನನ್ನು ಪ್ರಶ್ನಿಸಿದಳು.

ಮಾಧವ ” ನನಗೆ ತಿಳಿಯದಮ್ಮ, ಕಾರಣವನ್ನು ಅವರೇ ಹೇಳುತ್ತಾರಂತೆ. ಈ ವಿಷಯದಲ್ಲಿ ಹೆಚ್ಚು ವಾದಮಾಡುವುದು ಬೇಡ. ಮುಖ್ಯ ನಮ್ಮ ನಂದೂಪುಟ್ಟಿಯ ಸಮಸ್ಯೆ ಬಗೆಹರಿಸಿದರೆ ಸಾಕು” ಎಂದ.

ತಾಯಿಯೊಡನೆ ಆಗಮಿಸಿದ ಮಾಧವನನ್ನು ಡಾಕ್ಟರ್ ಸ್ವಾಗತಿಸಿದರು. ತಮಗೆ ಶಾರದಾ ಹೇಳಿದಂತೆ ಇವರಿಬ್ಬರೂ ನಂದಿನಿಯನ್ನು ಹೆಚ್ಚು ಪ್ರೀತಿಸುತ್ತಾರೆಂದು ತಿಳಿದಿತ್ತು. ಅವಳ ಸಮಸ್ಯೆ ಉದ್ಭವಿಸಿರುವುದೂ ಇವರಿಬ್ಬರಿಂದಲೇ ಎಂದು ಮನವರಿಕೆಯಾದರೆ ಖಂಡಿತ ಸಮಸ್ಯೆಗೆ ಪರಿಹಾರ ಸಿಗಬಹುದೆಂದು ಮನದಲ್ಲೇ ಆಲೋಚಿಸುತ್ತಾ ಅವರನ್ನು ಒಳಕ್ಕೆ ಕರೆದರು. ಅವರಿಬ್ಬರನ್ನೂ ಅನೇಕ ರೀತಿಯ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಮೊದಲೇ ತಮಗೆ ತಿಳಿದಂತೆ ಸಮಸ್ತ ಆಸ್ತಿಯೂ ನಂದಿನಿಯ ತಾಯಿಯದೇ. ಅವರ ತಂದೆ ಅಂದರೆ ನಂದಿನಿಯ ಅಜ್ಜ ಅದನ್ನು ಮಗಳ ಹೆಸರಿಗೆ ಮಾಡಿಬಿಟ್ಟಿದ್ದಾರೆ. ಅದನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕೆಂಬ ಹುಚ್ಚು ಆಸೆ ತಾಯಿ ಮಗನದ್ದು. ಮೊದಲಿನಿಂದಲೂ ಬಡತನದಲ್ಲೇ ಬಾಳಿದ್ದ ಅವರಿಗೆ ಧನಪಿಶಾಚಿ ಆವರಿಸಿಕೊಂಡಿತ್ತು. ತನಗೆ ರೂಪ, ಓದು, ತಿಳುವಳಿಕೆ ಯಾವರೀತಿಯಲ್ಲೂ ಸರಿಸಾಟಿಯಲ್ಲದ ಹುಡುಗಿಯನ್ನು ಮದುವೆ ಮಾಡಿಕೊಂಡದ್ದೇ ಆಸ್ತಿ ಸಿಗುತ್ತದೆಂದು. ಆದರೆ ಅದು ಪೂರ್ತಿ ನನ್ನ ಹೆಸರಿನಲ್ಲಿವಲ್ಲ ಎಂಬ ಕೊರಗು. ಆದರೆ ಪತ್ನಿ ರುಕ್ಮಿಣಿಗೆ ಅವರಿಬ್ಬರೂ ಆಸ್ತಿಯನ್ನು ತನ್ನಿಂದ ಬರೆಸಿಕೊಂಡಮೇಲೆ ನನ್ನನ್ನೇನು ಮಾಡುತ್ತಾರೊ ಎಂಬ ಆತಂಕ. ಅದಕ್ಕಾಗಿ ಅವಳು ಒಪ್ಪುತ್ತಿರಲಿಲ್ಲ. ಅದನ್ನು ಹೇಗಾದರೂ ಪಡೆದುಕೊಳ್ಳಲೇಬೇಕೆಂಬ ದುರ್ಯೋಚನೆಯಿಂದ ರುಕ್ಮಿಣಿಗೆ ಗಂಡನಿಂದ ಚಿತ್ರಹಿಂಸೆ. ಅದಕ್ಕೆ ಆತನ ತಾಯಿಯ ಕುಮ್ಮಕ್ಕು. ಮಗಳು ಮನೆಯಲ್ಲಿಲ್ಲದ ಸಮಯದಲ್ಲಿ ಇಬ್ಬರೂ ಸತತ ಅದಕ್ಕಾಗಿ ಪ್ರಯತ್ನಿಸುತ್ತಿದ್ದರು. ರುಕ್ಮಿಣಿಯನ್ನು ಶತದಡ್ಡಿಯೆಂದು ಲೇಬಲ್ ಹಚ್ಚಿ ಬಂಧು ಬಳಗದವರಿಂದ ಮೊದಲೇ ದೂರ ಮಾಡಿದ್ದರು. ಅಕ್ಕಪಕ್ಕದವರಿಂದಲೂ ದೂರವೇ. ಮಗಳು ನಂದಿನಿಗೂ ತನ್ನ ತಾಯಿಯೊಡನೆ ಹೆಚ್ಚು ಸಂಪರ್ಕ ಏರ್ಪಡದಂತೆ ಎಲ್ಲಕ್ಕೂ ತನ್ನನ್ನೇ ಆಶ್ರಯಿಸುವಂತೆ ಅಜ್ಜಿಯೇ ನೋಡಿಕೊಳ್ಳುತ್ತಿದ್ದಳು. ಹೊರಗಿನವರ ದೃಷ್ಟಿಯಲ್ಲಿ ಅನುಕೂಲ ದಾಂಪತ್ಯವೆಂಬಂತೆ ಬಿಂಬಿಸಲು ಎಲ್ಲಿಗಾದರೂ ಹೋಗಬೇಕಾದಾಗ ಗಂಡ ಹೆಂಡತಿ ಜೊತೆಯಾಗಿಯೇ ಹೊರಡುತಿದ್ದರು. ಇದೆಲ್ಲವೂ ಡಾ,ಅಪರ್ಣಾರವರಿಗೆ ಗೊತ್ತಾಗಿತ್ತು.

”ನೋಡಿ ನಾನು ಹೇಳುವುದನ್ನು ಗಮನವಿಟ್ಟು ಕೇಳಿ. ಇದುವರೆಗೆ ನಿಮ್ಮ ಮನೆಯಲ್ಲಿ ಏನಾಗಿತ್ತು ಅದರ ಚರ್ಚೆಬೇಡ. ಈಗ ನಿಮ್ಮ ಮಗಳು ತನ್ನ ತಾಯಿಯನ್ನು ಕಳೆದುಕೊಳ್ಳಲು ಸಿದ್ಧಳಿಲ್ಲ. ಅವಳಿಗೆ ಈಗ ಪ್ರೌಢಾವಸ್ಥೆಗೆ ಹೆಜ್ಜೆ ಇಡುವ ವಯಸ್ಸು. ಅವಳು ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ಜಾಣೆ, ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದೆ. ಅವಳ ಮನಸ್ಸಿನಲ್ಲಿ ತಾಯಿಗೆ ಮನೆಯಲ್ಲಿ ಅಪಾಯವುಂಟಾಗುತ್ತದೆ ಎಂಬ ಭೀತಿ ಹುಟ್ಟಿದೆ. ತಾಯಿಗೆ ರಕ್ಷಕಳಾಗಿ ತಾನು ಮನೆಯಲ್ಲಿಯೇ ಇದ್ದು ಅವಳನ್ನು ಕಾಪಾಡಲು ನಿರ್ಧರಿಸಿದ್ದಾಳೆ. ನಿಮ್ಮ ವರ್ತನೆ ಹೀಗೇ ಮುಂದುವರೆದರೆ ಅವಳಿಗೆ ಮಾನಸಿಕ ಒತ್ತಡ ಹೆಚ್ಚಾಗಿ ಭೀಕರ ಪರಿಣಾಮ ಉಂಟಾಗಬಹುದು. ನಿಮಗೆ ನಿಮ್ಮ ಮಗಳು, ನಿಮ್ಮ ತಾಯಿಗೆ ತಮ್ಮ ಮೊಮ್ಮಗಳು ಬೇಕು ಎನ್ನಿಸಿದರೆ ಇಂದಿನಿಂದಲೇ ನೀವಿಬ್ಬರೂ ನಿಮ್ಮ ಆಲೋಚನೆ, ವರ್ತನೆಗಳನ್ನು ಬದಲಾಯಿಸಿಕೊಂಡು ನಂದಿನಿಗೆ ನೆಮ್ಮದಿಯ ವಾತಾವರಣವಿದೆ ಎಂಬ ನಂಬಿಕೆ ಬರುವಂತೆ ನಡೆದುಕೊಳ್ಳಬೇಕು. ಅವಳಿಗೆ ನಂಬಿಕೆ ಬರುವಂತೆ ನೀವು ಧೈರ್ಯ ಭರವಸೆ ತುಂಬೇಕು. ಅವಳ ತಾಯಿಯ ಬಗ್ಗೆ ನೀವು ಪ್ರೀತಿಯಿಂದ ನಡೆದುಕೊಳ್ಳುತ್ತಾ ಅವಳಲ್ಲಿ ಇದುವರೆಗೆ ನಡೆದ ಕೃತ್ಯಗಳಿಗೆ ನಂದಿನಿಯ ಎದುರಿನಲ್ಲಿಯೇ ಕ್ಷಮಾಯಾಚನೆ ಮಾಡಬೇಕು. ಹೀಗಾದರೆ ಮಾತ್ರ ನಂದಿನಿ ತಾನು ಯಾರ ಮುಂದೆಯೂ ವ್ಯಕ್ತಪಡಿಸಲಾಗದ ತನ್ನ ಮನದಾಳದಲ್ಲಿ ಹೊಕ್ಕಿರುವ ‘ಮೂಕಶಂಕೆ’ ಯಿಂದ ಪೂರ್ಣವಾಗಿ ಹೊರಬರುವಳು ಮತ್ತು ಮೊದಲಿನಂತೆ ಲವಲವಿಕೆಯಿಂದ ಸ್ಕೂಲಿಗೂ ಹೋಗುವಳು. ಅವಳಿಗೆ ಆಗಿರುವ ಮಾನಸಿಕ ಧಕ್ಕೆಗೆ ನೀವಿಬ್ಬರೇ ಕಾರಣವಾದುದರಿಂದ ನೀವೇ ಪರಿಹಾರ ಕಂಡುಕೊಳ್ಳಬೇಕು. ಏನು ಮಾಡುತ್ತೀರೆಂಬುದನ್ನು ನೀವೇ ಆಲೋಚಿಸಿ ತೀರ್ಮಾನಿಸಿ ಎಂದರು” ಡಾ. ಅಪರ್ಣಾ.

ಸ್ವಲ್ಪ ಹೊತ್ತು ಇಬ್ಬರೂ ಮಾತನಾಡದೆ ಮೌನವಾಗಿದ್ದರು. ಒಬ್ಬರಿನ್ನೊಬ್ಬರ ಮುಖ ನೋಡಿಕೊಂಡರು. ಎದ್ದುನಿಂತು ಕೈಮುಗಿದು ತಾವು ಬರುತ್ತೇವೆಂದು ಹೊರಟುಬಿಟ್ಟರು. ಅವರತ್ತ ಹೋದನಂತರ ಡಾ. ಅಪರ್ಣಾ ಫೋನ್ ಮಾಡಿ ಶಾರದಾರವರಿಗೆ ಇವರಿಬ್ಬರನ್ನೂ, ಹಾಗೂ ಹುಡುಗಿಯನ್ನೂ ಗಮನಿಸುತ್ತಿರಲು ಹೇಳಿದರು. ನಡೆದುದನ್ನು ಆಗಾಗ ತಮಗೆ ತಿಳಿಸಲು ತಿಳಿಸಿದರು.
ಒಂದು ವಾರದ ನಂತರ ತನ್ನ ಕುಟುಂಬ ಸಹಿತ ಡಾಕ್ಟರರ ಮನೆಗೆ ಬಂದ ಮಾಧವ ಅವರಿಗೆ ನಮಸ್ಕರಿಸಿ ಅವರಿಗೆ ತನ್ನ ಮಗಳ ಕೈಯಿಂದ ಫಲತಾಂಬೂಲ ಕೊಡಿಸಿ ಅವರ ಅವರಿಂದ ಆಶೀರ್ವಾದ ಬೇಡಿದ. ಅವರಿಂದಾದ ಉಪಕಾರಕ್ಕೆ ಜೀವನಪೂರ್ತಿ ತಾವು ಋಣಿಯಾಗಿದ್ದೇವೆ ಎಂದು ಕೈಮುಗಿದ.

ಡಾ,ಅಪರ್ಣಾ ನಂದಿನಿಗೆ ”ನೀನು ಈಗ ಸ್ಕೂಲಿಗೆ ಹೋಗುತ್ತೀಯಾ ಮಗು?” ಎಂದು ಕೇಳಿದರು.

”ಹೂ ಡಾಕ್ಟರ್, ಹೋಗುತ್ತೇನೆ. ಚೆನ್ನಾಗಿ ಓದುತ್ತೇನೆ. ಮುಂದೆ ನಿಮ್ಮ ಹಾಗೆ ಡಾಕ್ಟರ್ ಆಗಬೇಕೆಂಬ ಆಸೆಯಿದೆ. ಈಗ ನನ್ನನ್ನು ಡ್ರಾಪ್ ಮಾಡಲು ಅಪ್ಪ ಬರುವುದಿಲ್ಲ. ನಾನೊಬ್ಬಳೇ ಹೋಗುತ್ತೇನೆ. ನಾನೀಗ ದೊಡ್ಡ ಹುಡುಗಿಯಲ್ಲವೇ” ಎಂದಳು. ಅವಳ ಮಾತಿಗೆ ಕುಟುಂಬದವರೆಲ್ಲರೂ ಮನದುಂಬಿ ನಕ್ಕರು. ಭೂತದಂತೆ ಹೊಕ್ಕಿದ್ದ ಮೂಕಶಂಕೆ ನಂದಿನಿಯ ಮನದಿಂದ ದೂರಾಗಿತ್ತು.

ಬಿ.ಆರ್.ನಾಗರತ್ನ, ಮೈಸೂರು

12 Responses

  1. ನಯನ ಬಜಕೂಡ್ಲು says:

    ಬಹಳ ಸೊಗಸಾಗಿದೆ ಕಥೆ

  2. ನಾನು..ಬರೆದು..ಬಹುಮಾನ ತೆಗೆದುಕೊಂಡ…ಕಥೆ ಯನ್ನು.. ತಮ್ಮ.. ಪತ್ರಿಕೆಯ ಲ್ಲಿ..ಪ್ರಕಟಿಸಿ…ಪ್ರೋತ್ಸಾಹಿಸಿದ…ಗೆಳತಿ… ಹೇಮಮಾಲಾ..ಅವರಿಗೆ.. ಹೃತ್ಪರ್ವಕ ಧನ್ಯವಾದಗಳು.

  3. ಧನ್ಯವಾದಗಳು ನಯನ..ಮೇಡಂ

  4. ಶಂಕರಿ ಶರ್ಮ says:

    ಮನೋವೈಜ್ಞಾನಿಕ ಕಥೆ ಮೂಕಶಂಕೆ ಬಹಳ ಚೆನ್ನಾಗಿದೆ.

  5. ನಾನು.. ಬರೆದು…ಬಹುಮಾನ.. ತೆಗೆದುಕೊಂಡ..ಕಥೆ ಯನ್ನು.. ಸುರಹೊನ್ನೆಯಲ್ಲಿ..ಪ್ರಕಟಿಸಿದ..ಹೇಮಮಾಲಾರವರಿಗೂ…ಅದನ್ನು.. ಓದಿ.. ಪ್ರತಿಕ್ರಿಯೆ.. ನೀಡಿರುವ..
    ಸಹೃದಯಿ…ಶಂಕರಿ.. ಮೇಡಂ.. ಅವರಿಗೂ..ಧನ್ಯವಾದಗಳು… ನಯನ..ಮೇಡಂ.. ಅವರಿಗೂ…ಧನ್ಯವಾದಗಳು.

  6. Padmini Hegade says:

    ಕಥೆ ಸೊಗಸಾಗಿದೆ. ಬಹುಮಾನ ತೆಗೆದುಕೊಂಡದ್ದಕ್ಕೆ ಅಭಿನಂದನೆಗಳು.

  7. ಧನ್ಯವಾದಗಳು ಪದ್ಮಾ ಮೇಡಂ

  8. Padma Anand says:

    ಮನವನ್ನು ಚಿಂತನೆಗೆ ಹಚ್ಚುವ ಸುಂದರ ಮನೋವೈಜ್ಞಾನಿಕ ಕಥೆಯನ್ನು ರಚಿಸಿ ಬಹುಮಾನ ಪಡೆದುದಕ್ಕಾಗಿ ಅಭಿನಂದನೆಗಳು.

  9. ಧನ್ಯವಾದಗಳು… ಪದ್ಮಿನಿ..
    ಮೇಡಂ

  10. ಪ್ರೇಮ ಸ್ವಾಮಿ says:

    ಓದಿದ ಮೇಲು ಕಾಡುವ ಪಾತ್ರಗಳು ಚಂದದ ನಿರೂಪಣೆ ಒಳ್ಳೆಯ ಕಥೆ….. ಕಣ್ಣಿಗೆ ಕತ್ತಂತೆ ಬರ್ದಿದ್ದೀರಾ ತುಂಬಾ ಚೆನ್ನಾಗಿದೆ ರಥ

  11. ಕಲ್ಲೂರು ಜಾನಕಿ ರಾಮರಾವ್ says:

    ಸುನ್ನಿತವಾದ,ಪ್ರಾಯಕ್ಕೆ ಬಂದಿರುವ ಹೆಣ್ಣುಮಕ್ಕಳ ಮನಃಸ್ಥಿತಿ ಎಸ್ಟು ಸುನ್ನಿತ ವಾಗಿರುತ್ತೆ ಎಂಬುವ ವಿಷಯವನ್ನು ಕುರಿತು ಬರೆದ ಕಥೆ ಅದ್ಬುತವಾಗಿದೆ. ಎಷ್ಟಾದರೂ ಕಥೆಗಾರರು ತಾನು ಹೆಂಗಸಲ್ಲವೇ. ಅಂತಹ ಸುನ್ನಿತವಾದ ಕಥಾ ವಸ್ತುವನ್ನು ಆರಿಸಿಕೊಂಡು ಪಾಠಕರ ಹೃದಯವನ್ನು ದೋಚಿದ ಕಥೆಗಾರರಾದ ಶ್ರೀಮತಿ ನಾಗರತ್ನಮ್ಮ ಅವರಿಗೆ ಅಭಿನಂದನೆಗಳು ಮತ್ತು ನನ್ನ ಆಶೀರ್ವಾದಗಳು

  12. ಧನ್ಯವಾದಗಳು ಪ್ರೇಮಾ ಮೇಡಂಮತ್ತು ಜಾನಕಿ ರಾಮರಾವ್ ಸರ್

Leave a Reply to ಪ್ರೇಮ ಸ್ವಾಮಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: