ಸಂತನೊಳಗೆ ಸಂಕೀರ್ತನೆ ಸುಳಿಯುವ ಮುನ್ನ.

Share Button

ನಮ್ಮ ದೇಶವು ಪ್ರಪಂಚದಲ್ಲಿಯೇ ಧರ್ಮವನ್ನು ವಿಶ್ವಕ್ಕೆ ಸಾರಿದ ದೇಶಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ವೇದ, ಉಪನಿಷತ್, ಭಗವದ್ಗೀತೆ, ರಾಮಾಯಣ,ಮಹಾಭಾರತದ ಮೂಲಕ ಭಕ್ತಿಪಂಥವನ್ನು ಮುನ್ನೆಡೆಸಿ, ಅವುಗಳ ಮೂಲಕ ಅನೇಕ ನೀತಿಕಥೆಗಳನ್ನು, ಧಾರ್ಮಿಕ ಸಂಗತಿಗಳನ್ನು, ಸಂಸ್ಕೃತಿಯನ್ನು ಸಾರಿದಂತಹ ನಮ್ಮ ದೇಶವೆಂದರೆ ನಮಗೆ ಹೆಮ್ಮೆ.

ಅನೇಕ ಧರ್ಮಗುರುಗಳನ್ನು ,ಸಾಧು ಸಂತರನ್ನು, ಯೋಗಿಗಳನ್ನು,ವಿವೇಕಿಗಳನ್ನು, ಜ್ಯೋತಿಷಿಗಳನ್ನು,ಮುಖಂಡರನ್ನು, ಸ್ವಾತಂತ್ರ ಹೋರಾಟಗಾರರನ್ನು, ಪ್ರಭಾವಶಾಲಿ ವ್ಯಕ್ತಿಗಳನ್ನು, ಚತುರರನ್ನು, ವಿಜ್ಞಾನಿಗಳನ್ನು, ಉದ್ಯಮಿಗಳನ್ನು, ಸಂಶೋಧಕರನ್ನು, ಸಂಗೀತಗಾರರನ್ನು, ನೃತ್ಯಗಾರರನ್ನು, ಆಟಗಾರರನ್ನು ಹೀಗೆ ಅನೇಕಾನೇಕ ಕ್ಷೇತ್ರದಲ್ಲಿ ಸಾಧಕರನ್ನು ಜಗತ್ತಿಗೆ ಪರಿಚಯಿಸಿದ ಭಾರತದಲ್ಲಿ , ವೈಯಕ್ತಿಕವಾಗಿ ಹೆಸರು ಗಳಿಸಿ, ದೇಶದ ಘನತೆಯನ್ನು ಎತ್ತಿ ಹಿಡಿಯುವುದೆಂದರೆ ಸಾಧಾರಣ ಕೆಲಸವಲ್ಲ.

ಅನೇಕ ಚೌಕಟ್ಟುಗಳನ್ನು ದಾಟಿ ಆಧ್ಯಾತ್ಮಿಕ ಧಾರ್ಮಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆದು ನಿಲ್ಲುವುದೆಂದರೆ ಅದು ನಿಸ್ಸಂಶಯವಾಗಿ ನಿಸ್ವಾರ್ಥಿಗಳಿಗೆ ಮಾತ್ರ ಸಾಧ್ಯ. ತತ್ವದರ್ಶಿಯಾಗಿ, ಶಾಸ್ತ್ರಗಳ ತಿಳಿಯದೆ ಪ್ರಾಮಾಣಿಕ ತತ್ವಜ್ಞಾನವನ್ನು ಸಂಪಾದಿಸುವುದು ಅಷ್ಟು ಸುಲಭದ ಕೆಲಸವಲ್ಲ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜವನ್ನು ತಿದ್ದುವ ಕೆಲಸವು ಎಲ್ಲರಿಗೂ ಸಾಧ್ಯವಿಲ್ಲ.

ವಯಸ್ಸು ಮಾಗಿದಷ್ಟು ಅನುಭವಗಳು ಪಕ್ವವಾಗುತ್ತದೆ. ಆ ಪಕ್ವತೆಯನ್ನು ಇತರರಿಗೆ ಬೇಸರವಾಗದಂತೆ,ನೋವಾಗದಂತೆ ಹಂಚಲು ಮನಸುಮಾಡಿದರೆ ಜನ ಹುಚ್ಚರೆಂದು ಟೀಕಿಸುತ್ತಾರೆ. ಹುಚ್ಚರೆಂದು ಟೀಕಿಸಿದರೂ ತಮ್ಮ ಧರ್ಮಬಿಡದ ಸಂತರು ಅನೇಕರು ನಮ್ಮೊಳಗೆ ಅನೇಕ ಬೋಧನೆಗಳನ್ನು ಬಿತ್ತಿಹೋಗಿದ್ದಾರೆ.

ದೇಶವೀದೇಶಗಳಲ್ಲಿ ನಮ್ಮ ನೆಲೆವೀಡಿನ ಗಂಧವನ್ನು ಪಸರಿಸಿದ್ದಾರೆ. ನಮ್ಮ ದೇಶದಲ್ಲಿ ರಾಮನಂತಹ ಸೂರ್ಯ ಉದಯಿಸುತ್ತಾರೆ, ದಿವ್ಯ ಪ್ರಭೆಯನ್ನು ನೀಡುತ್ತಾರೆ ಎಂದು ಹಾರೈಸಿಹೋಗಿದ್ದಾರೆ. ಶಾಂತಿ ಪಾಠವನ್ನು ಕಲಿಸುತ್ತಲೇ ಮನದೊಳಗೆ ದೇಶಾಭಿಮಾನದ ಕ್ರಾಂತಿ ಕಿಡಿಯನ್ನು ಪ್ರಜ್ವಲಿಸುವಂತೆ ಮಾಡಿದವರಿದ್ದಾರೆ. ಯಾವುದೇ ಜಾತಿ, ಧರ್ಮ, ಬಡವ, ಶ್ರೀಮಂತ, ಗಂಡು, ಹೆಣ್ಣು ಎಂಬ ಭೇದವಿಲ್ಲದೆ ಅನೇಕ ಸಿದ್ಧಾಂತಗಳನ್ನು ಸಾರಿಹೋದ ಮಹಾನ್ ಪುರುಷರಿದ್ದಾರೆ.

ಸಂತ ತುಕಾರಾಮರು (ಚಿತ್ರಋಣ :ಅಂತರ್ಜಾಲ)

ನಮ್ಮ ದೇಶಕಂಡ ಮಹಾನ್ ಚೇತನರಲ್ಲಿ, ಸಂತರಲ್ಲಿ ಕಬೀರರು, ತುಕಾರಾಮರು, ಶಿಶುನಾಳ ಶರೀಫರು ಇಂತಹ ಅನೇಕ ಮಹನೀಯರು ಉನ್ನತಸ್ಥಾನದಲ್ಲಿ ನಿಲ್ಲುತ್ತಾರೆ. ಇಂತಹ ಮಹನೀಯರು ತಮ್ಮೆಲ್ಲಾ ಅನುಭವಗಳನ್ನು ಒಟ್ಟುಗೂಡಿಸಿ ತಮ್ಮ ದೋಹೆಗಳಲ್ಲಿ, ತತ್ವಪದಗಳಲ್ಲಿ, ಕೀರ್ತನೆಗಳಲ್ಲಿ ತುಂಬಿ  ಸಮಾಜವನ್ನು ತಿದ್ದುವ ಕೆಲಸವನ್ನು ಸದ್ದಿಲ್ಲದೇ ಮಾಡಿಹೋದವರು. ಅವರ ತಿರುಳನ್ನು ಅರ್ಥಮಾಡಿಕೊಂಡ ಮಹನೀಯರು ಅವರ ಹೆಸರನ್ನು, ಅವರ ನೀತಿಯನ್ನು, ವಿವೇಕವನ್ನು, ತತ್ವವನ್ನು ಎತ್ತಿ ಹಿಡಿದು ಸುದ್ದಿ ಮಾಡಿದರು.  ಇವರನ್ನು ಸದ್ದುಮಾಡಿ ಸುದ್ದಿಮಾಡದಿದ್ದರೆ ಸದ್ದಿಲ್ಲದೇ ಅವರ ವಿಚಾರಧಾರೆಗಳೆಲ್ಲಾ ಸತ್ತು ಸುಣ್ಣವಾಗುತ್ತಿತ್ತು.  ಮೊದಲು ಇಂತಹ ಸಂತರ ವಿಚಾರಧಾರೆಗಳನ್ನು ಸಮಾಜಮುಖಿಯತ್ತ ಹರಿಸಿದವರಿಗೆ ನಮನ ಸಲ್ಲಿಸಬೇಕು.

ಈ ಸಂತ ಶಿರೋಮಣಿಗಳೆಲ್ಲಾ ದೇವರಿಗೆ ಅತ್ಯಂತ ಪ್ರಿಯರಾದವರು.  ಹಾಗಾಗಿಯೇ ಅವರಿಗೆಲ್ಲಾ ಧರೆಯಲ್ಲಿ ಧೀರ್ಘಕಾಲದ ಹೆಸರುಳಿಯಿತು.  ಆಕಾರವಿಲ್ಲದ ಆತ್ಮದೊಳಗೆ ಪರಮಾತ್ಮನನ್ನು ತೂರಿಸುವುದೆಂದರೆ ಸುಲಭದ ಮಾತಲ್ಲ. ದೇಹವೆಂಬ ಭೂಮಿಯ ಮಾಲಿಕ ನಾವಾದರೂ ಜ್ಞಾನವೆಂಬ ಬೆಳೆ ಸುಮ್ಮನೆ ಬೆಳೆಯುವುದಿಲ್ಲ. ಅದಕ್ಕೆ ಪರಿಶ್ರಮಬೇಕು. ಅಂತಹ ಪರಿಶ್ರಮವನ್ನು ಸಂಪಾದಿಸಿಕೊಂಡವರು ನಮ್ಮ ಸಂತರು.

ಸಂತನೊಳಗೊಂದು ಸಂಕೀರ್ತನೆ ಸುಳಿಯುವ ಮುನ್ನ ಹೊಯ್ದಾಡುವ ಮನಸ್ಸನ್ನು ಸಂಕುಲಿತಗೊಳಿಸದೆ, ಸಮಾಜಮುಖಿಯತ್ತ, ಬೊಬ್ಬಿಡುವ ಜನರೊಳಗೆ ಸಾಗಿಸುವುದೆಂದರೆ ಅದು ಘೋರವೇ ಸರಿ.  ಕ್ಷಣ ಕ್ಷಣಕ್ಕೂ ತಳಮಳ ಗೊಳುವ, ಹೆಜ್ಜೆ ಹೆಜ್ಜೆಗೂ ಕಾಲೆಳೆಯುವ, ಜುಟ್ಟು ಹಿಡಿದು ಬಗ್ಗಿಸುವ ಮೂರ್ಖರೆದುರು, ಯಾವುದೋ ಜನ್ಮದ ಸುಕೃತದ ಫಲವಾಗಿ ಬಂದ ನೀತಿಧರ್ಮದ ನುಡಿ, ಆಚಾರಗಳನ್ನು ತುರುಕುವುದೆಂದರೆ ಅಷ್ಟು ಸುಲಭದ ಕೆಲಸವಲ್ಲ.

ಮೊದಲು ಸಂತನು ಎಲ್ಲಾ ದುರಾಸೆಗಳನ್ನು ಬದಿಗೊತ್ತಿ ನಿಸ್ವಾರ್ಥವನ್ನು ತನ್ನೊಳಗೆ ಅಡಗಿಸಿಕೊಂಡು ನಂತರ ಸಮಾಜತಿದ್ದುವ ಕಾಯಕ ಮಾಡುವನು…ಅದೂ ತನಗರಿವಿಲ್ಲದಂತೆ. ಸಂತತ ಭಗವಂತನ ನೆನಪುಗಳೊಳಗೆ ಮುಳುಗಿ, ತನ್ನ ಪಾಡಿಗೆ ತಾನು ಇರುವವ, ಪರರ ಸೇವೆಯೇ ಪರಮಾತ್ಮಸೇವೆ ಎಂದು ಬಗೆದವ, ಮೂಕಜೀವಿಯೊಳಗೂ ಜೀವವದ ಬೆಲೆ ಕಂಡವ, ಇನ್ನೊಬ್ಬರ ನೆಮ್ಮದಿಯೊಳಗೆ ಹುಳಿಹಿಂಡದವ, ಸಂತನೆದೆಯೊಳಗೆ ಕೋಲಾಹಲವೆದ್ದರೂ ಹಾಲಂತ ಮನಹೊಂದಿದವ ಸಂತನಾದಾನು.

ಸಂತನಿಗ್ಯಾರೂ ಧರ್ಮೋಪದೇಶ ಬೋಧಿಸಿದವರಿಲ್ಲ. ಹೆಸರುಗಳಿಸುವ ಮನೋಭಿಲಾಶೆಯೂ ತಿಳಿಯದವರು. ಸ್ವತಃ ಅನುಭವಗಳು ಮತ್ತು ಹಿರಿಯರ ಧರ್ಮಮಾರ್ಗಗಳಲ್ಲಿ ಮುನ್ನಡೆದವರು. ಸಮಾಜದ ಓರೆಕೋರೆಗಳು, ನೋವುನಲಿವುಗಳ ಕಂಡುಂಡವರು.  ಅನೇಕ ಗುರುಪರಂಪರ್ಯರ ಒಡನಾಟ,  ಹಿತೋಪದೇಶಗಳಿಂದ ಬದುಕುಕಟ್ಟಿಕೊಂಡು ಬದಲಾದವರು.  ಭೂಮಿಯ ಮೇಲಿನ ಜೀವವರ್ಗದ ಅಹಿಂಸೆಗಳನ್ನು ಸಹಿಸಿಕೊಂಡವರು. ಎಲ್ಲಾ ನೋವುಗಳಿಗೆ ತಮಗೆ ತಾವೇ ಶಮನವನ್ನು ಕಂಡುಕೊಂಡು ಸನ್ಮಾರ್ಗದಲ್ಲಿ ನಡೆದವರು. ಉತ್ತಮ ಜೀವನಶೈಲಿಯನ್ನು ರೂಢಿಸಿಕೊಂಡವರು. ಸದಾ ಧ್ಯಾನಾಸಕ್ತರಾಗಿ, ತಾನು ಲೋಕದಲ್ಲಿಯೇ ಪರಮಸುಖಿ ಎಂದು ಬೀಗಿದವರು. ಎಲ್ಲಾ ದುಃಖಗಳನ್ನು ದೂರಮಾಡಿ ಉತ್ತಮ ಆರೋಗ್ಯವನ್ನು ಸಂಪಾದನೆ ಮಾಡಿಕೊಂಡವರು. ತಮ್ಮೊಳಗಿನ ಅರಿಷಡ್ವರ್ಗಗಳ ಕೊಂದವರು. ಧರ್ಮವಾಣಿಯನ್ನು ದೀಪದ ಬೆಳಕಾಗಿಸಿಕೊಂಡವರು. ಯಾವ ಸಮಯದಲ್ಲಿ ಜನರು ಮಾನವೀಯತೆಯನ್ನು ಮರೆಯುವರೋ ಆ ಸಮಯದಲ್ಲಿ ಎಚ್ಚರದಿಂದ, ಪ್ರೀತಿಯಿಂದ ತಿದ್ದಿದವರು. ಸಂತನೊಳಗಿನ ಅಂತರಂಗದ ಆಸೆಯನ್ನು ಹಂತಹಂತವಾಗಿ ಕೊನೆಗೊಳಿಸಿದವರು.

ಸಂತ ಶಿಶುನಾಳ ಶರೀಫರು (ಚಿತ್ರಋಣ :ಅಂತರ್ಜಾಲ)

ದೇಶ ಕಂಡ ಅನೇಕ ಸಂತರೆಲ್ಲಾ ಇಂತಹುದೇ ಮಾರ್ಗಗಳ ತುಳಿದವರಲ್ಲವೇ. ಹೊಸ ಜ್ಞಾನದ ಆಲೋಚನೆಯ ಹುಡುಕಾಟದಲ್ಲಿ, ಸತ್ಯವನ್ನು ಜಗತ್ತಿಗೆ ಸಾರುತ್ತಾ, ಅಜ್ಞಾನದ ನಿದ್ರೆಯಲ್ಲಿ ಮುಳುಗಿರುವವರನ್ನು ಎಚ್ಚರಿಸುತ್ತಾ, ತತ್ವಬೋಧನೆಯನ್ನು ಉಚಿತವಾಗಿ ನೀಡುತ್ತಾ, ಪಾರಮಾರ್ಥ ತೋರಿಸುತ್ತಾ, ಎಲ್ಲರನ್ನೂ ಪ್ರೀತಿಸುವ ನಿಸ್ವಾರ್ಥಿ ಸಂತ ತನಗರಿವಿಲ್ಲದಂತೆಯೇ ತನ್ನೊಳಗೇ ಬೆಳೆಸಿಕೊಂಡ ಉದಾತ್ತ ಚಿಂತನೆಗಳೊಂದಿಗೆ ಎಂದೋ ಸಂತನಾಗಿರುತ್ತಾನೆ.

ನಮ್ಮ ದೇಶದಂತಹ ಅನೇಕ ಪುಣ್ಯಭೂಮಿಯಲ್ಲಿ ಸಂತರು ಜನಿಸಿರುವರು.  ಆದರೆ ಸಂತರ ಹುಟ್ಟು ಸುಮ್ಮನೆ ಆದುದಲ್ಲ.  ಅನೇಕ ಪೂರ್ವಜನ್ಮದ ಸುಕೃತ. ನೈತಿಕತೆಯ ಅರಿವು ಎಲ್ಲಿ ಕೊರತೆಯಿದೆಯೋ ಭಗವಂತ ಅಲ್ಲೆಲ್ಲಾ ಸಂತರ ಜನನವಾಗಿಸುತ್ತಾನೆ.  ಧರ್ಮದ ಅರ್ಥವನ್ನು ಅವನ ಕಾರ್ಯದಲ್ಲಿ ತಿಳಿಸುತ್ತಾನೆ.  ಆರ್ಥಿಕ ಬಲಕೊಡದೆ ನೈತಿಕ ಬಲ ಕೊಟ್ಟು ಕಾಪಿಡುತ್ತಾನೆ. ಗುರುವಾಗುವಂತೆ ಕರುಣಿಸುತ್ತಾನೆ.  ಸಾವಿರಾರು ಕಷ್ಟಗಳನ್ನು ಸಹಿಸಿಕೊಂಡ ಇಂತಹ ಸತ್ಪುರುಷರು ವಿಚಾರವಾದಿಯಾಗಿ, ಜ್ಞಾನಿಯಾಗಿ, ಸಂತನಾಗಿ ಅಜ್ಞಾನದಲ್ಲಿ ಮುಳುಗಿದವರನ್ನು ದಡಸೇರಿಸುವ ನೌಕೆಯಾಗುತ್ತಾನೆ.

ಇಂತಹ ಶ್ರೇಷ್ಠ ಸಂತರ ದೋಹೆಗಳು, ತತ್ವಪದಗಳು, ಅನೇಕಾನೇಕ ಹೊರಬಂದಿವೆ.  ಅವುಗಳನ್ನು ಓದುತ್ತಾ ಸ್ವಲ್ಪವಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂತರದಾರಿಯಲ್ಲಿ ನಡೆಯುವುದರಿಂದ ನಮ್ಮ ಸಮಾಜದ ಉಚಿತ ಅನುಚಿತಗಳನ್ನು ನಾವೇ ಸರಿಪಡಿಸಬಹುದು.ಆಳವಾಗಿ ಬೇರೂರಿರುವ ಮೂಢನಂಬಿಕೆಗಳ ವಿರುದ್ಧ ನಿಲ್ಲಬಹುದು. ನಮ್ಮ ಕ್ರೂರ ಮನವಿಂದು ಇಂತಹವರ ಸಾಧುಗಳ ತತ್ವದ ಹಿಂದೆ ಅಲೆಯಬೇಕಿದೆ.

ನನಗೆ ಕಬೀರ ದಾಸರ ಒಂದು ದೋಹೆ ಈ ಸಮಯದಲ್ಲಿ ನೆನಪಾಗುತ್ತಿದೆ…” ಕೆಡುಕರ ನಾನು ಹುಡುಕುತ ಹೊರಟೆ ಕೆಡುಕರೇ ಸಿಗಲಿಲ್ಲ; ನನ್ನಯ ಮನವನು ನಾನೇ ನೋಡೆ ಎನಗಿಂತ ಕೆಡುಕರಿಲ್ಲ ” ಎಂಬ ದ್ವಿಪದಿಯಲ್ಲಿ (ಎರಡನೇ ಸಾಲಿನ ನೆನಪು ಸರಿಯಾಗಿ ಆಗುತ್ತಿಲ್ಲ…ಕ್ಷಮೆಯೊಂದಿಗೆ) ಎಂತಹ ಅರ್ಥವನ್ನು ಕಟ್ಟಿಕೊಟ್ಟಿದ್ದಾರೆ. ಮೊದಲು ನಮ್ಮನ್ನು ನಾವೇ ತಿದ್ದಿಕೊಳ್ಳಬೇಕು, ಬೇರೆಯವರಲ್ಲಿ ಕೆಡುಕನ್ನು ಹುಡುಕುವುದಲ್ಲ ಎಂಬ ವಿವೇಚನೆಯಂತಹ ಸಿದ್ಧಾಂತಗಳು ಸಂತರನ್ನು ಹುಟ್ಟುಹಾಕಬಲ್ಲವು.

ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ.

6 Responses

  1. ಉತ್ತಮ.. ಲೇಖನ.. ಅಭಿನಂದನೆಗಳು.. ಗೆಳತಿ.. ಭಾಗ್ಯಲಕ್ಷ್ಮಿ…

  2. ಶಂಕರಿ ಶರ್ಮ says:

    ನಮ್ಮ ದೇಶದಲ್ಲಿ ಜನಿಸಿ, ಜನರ ಉದ್ಧಾರಕ್ಕೆ ಕಾರಣರಾದ ಸಂತರ ಬಗೆಗಿನ ಸೊಗಸಾದ ಚಿಂತನಾತ್ಮಕ ಲೇಖನ.

  3. Padma Anand says:

    ಸಂತರು ಜನಮಾನಸಕ್ಕೆ ನೀಡಿದ ಕೊಡುಗೆಯ ಸ್ಮರಿಸುವ ಉತ್ತಮ ಲೇಖನ, ಅಭಿನಂದನೆಗಳು.

  4. ನಯನ ಬಜಕೂಡ್ಲು says:

    ಬಹಳ ಚಂದದ ಬರಹ

  5. ಡಾ. ಸುಧಾ ಜೋಶಿ. says:

    ಸುಂದರ ಬರಹ, ಅಭಿನಂದನೆಗಳು

  6. Padmini Hegade says:

    ವಿವೇಚನಾತ್ಮಕ ಬರೆಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: