ಅವಿಸ್ಮರಣೀಯ ಅಮೆರಿಕ-ಎಳೆ 39

Share Button

ಪ್ರಪಾತದತ್ತ ದೃಷ್ಟಿ ನೆಟ್ಟು….!!

ಹೌದು…ಈ ಅತ್ಯಂತ ಕುತೂಹಲಕಾರಿಯಾದ ಕಣಿವೆಯೇ Grand Canyon. ಅಮೆರಿಕದ ಸಂಯುಕ್ತ ಸಂಸ್ಥಾನಗಳ ಅರಿಜೊನಾ ರಾಜ್ಯದ ಉತ್ತರ ಭಾಗದಲ್ಲಿ ಹರಿಯುವ ವಿಶ್ವವಿಖ್ಯಾತ ಕೊಲೊರಾಡೊ ನದಿಯ ಪ್ರಸ್ಥಭೂಮಿಯಲ್ಲಿ ನದಿ ನೀರಿನ ಕೊರೆತದಿಂದ ಉಂಟಾದ ಆಳವಾದ ಕಂದರಗಳಿಂದ ರೂಪುಗೊಂಡ ಈ ಕಣಿವೆಯು ಪ್ರಪಂಚದ ಏಳು ಪ್ರಾಕೃತಿಕ ಅದ್ಭುತಗಳಲ್ಲಿ ಒಂದಾಗಿದೆ!  ಇದನ್ನು 1554ರಲ್ಲಿ ಪರಿಶೋಧನಾ ತಂಡವೊಂದು ಗುರುತಿಸಿತು. ಆದರೆ ಅದು ಹೊರಜಗತ್ತಿಗೆ ತಿಳಿದುದು 1776ರ ಸುಮಾರಿಗೆ; ಇಬ್ಬರು ಸ್ಪ್ಯಾನಿಷ್ ಪಾದ್ರಿಗಳಿಂದಾಗಿ.

ಇದು ಸುಮಾರು 446 ಕಿ.ಮೀ ಉದ್ದವಿದ್ದು, 29 ಕಿ.ಮೀಗಳಷ್ಟು ಅಗಲವಿದೆ! ಇದರ ನೇರ ಆಳವು ಕೆಲವು ಕಡೆಗಳಲ್ಲಿ 1.8ಕಿ.ಮೀನಷ್ಟಿದೆ!

ಇದರ ಹೊರಗೋಡೆಗಳ ನಡುವೆ ಹಲವು ವರ್ಣರಂಜಿತ ಶಿಖರಗಳಿವೆ. ಈ ಕಮರಿಯೊಳಗಿನ ಕಮರಿಗಳು ಕವಲು ಕವಲಾಗಿ, ಸಾಲು ಸಾಲಾಗಿ, ಗುಂಪು ಗುಂಪಾಗಿ ವಿಚಿತ್ರ ವಿನ್ಯಾಸಗಳಿಂದ ಮೆರೆದಿದೆ. ಕೊಲೊರಾಡೊ ನದಿಯು ಈ ಕಂದರದಲ್ಲಿ ಸುಮಾರು 168ಕಿ.ಮೀ. ದೂರ ಸುತ್ತಿ ಬಳಸಿ ಹರಿಯುತ್ತದೆ. ಕಮರಿಯ ಗುಡ್ಡಗಳ ಬಣ್ಣವು ಮಾಸಲು ಕೆಂಪಾದರೂ; ಇದರಲ್ಲಿರುವ ಒಂದೊಂದು ಪದರಕ್ಕೂ, ಪದರಗಳ ಸಮೂಹಕ್ಕೂ ವಿಶಿಷ್ಟ ಬಣ್ಣಗಳಿದ್ದು; ಮಾಸಲು ಹಳದಿ, ಸಾದಾ ಹಸುರು, ಎಳೆಗೆಂಪು ಇತ್ಯಾದಿ ಬಣ್ಣಗಳಿಂದ ಮನಮೋಹಕವಾಗಿದೆ. ಈ ಕಣಿವೆಗೆ ಸಾಟಿಯಾದ ಕಣಿವೆ ಜಗತ್ತಿನಲ್ಲಿ ಮತ್ತೊಂದಿಲ್ಲ!

ಇದರ ಗೋಡೆಗಳು, ಸಮುದ್ರ ಸುಣ್ಣಗಲ್ಲು, ನದಿಯ ಜೇಡಿ ಪದರಗಲ್ಲು, ಆದಿ ಭೂಯುಗದ ಮರಳುಗಲ್ಲು, ಸುಣ್ಣದ ಮಣ್ಣು ಹಾಗೂ ಮರಳುಗಳ ಮಿಶ್ರಣದಿಂದ ಸಹಸ್ರಾರು ವರ್ಷಗಳಿಂದ ರೂಪುಗೊಂಡ ಬಂಡೆಗಳಿಂದ ಕೂಡಿವೆ. ಕಮರಿಯ ಒಳಭಾಗದಲ್ಲಿ ತಿರುಚಿಕೊಂಡಿರುವ ಸ್ಫಟಿಕ ಶಿಲೆಗಳು; ಪುರಾತನ ಯುಗದ ಶಿಲೆಗಳು, ಬೆಣಚುಕಲ್ಲು ಮತ್ತು ಪದರಗಲ್ಲುಗಳಿಂದ ಉಂಟಾಗಿವೆ. ಕಣಿವೆಯಲ್ಲಿ, ಎರಡನೆಯ ಭೂಯುಗದ ಚಪ್ಪಟೆಯ ಗುಡ್ಡಗಳು, ಕುಂಕುಮ, ಎಳೆಗೆಂಪು ಹಾಗೂ ಬಿಳಿಯ ಬಣ್ಣಗಳಿಂದ ಕೂಡಿದ ಪ್ರಪಾತಗಳೂ ಇವೆ! ಕಣಿವೆಯ ಕೆಲವು ಬಯಲು ಭೂಭಾಗಗಳಲ್ಲಿ ಅಗ್ನಿಪರ್ವತಗಳಿಂದ ಹೊರಬಿದ್ದ ಕರಿಯ ಲಾವಾರಸವು ಹರಡಿದೆ. ಈ ಅಗ್ನಿಪರ್ವತಗಳು ಸುಮಾರು 1000 ವರ್ಷಗಳಿಂದ ಜೀವಂತವಾಗಿವೆ.  

ಕೊಲೊರಾಡೊ ನದಿಯು ತನ್ನ ಈ ಕಂದರದಲ್ಲಿ ಪ್ರತಿದಿನವೂ ಸರಾಸರಿ ಸುಮಾರು 5ಲಕ್ಷ ಟನ್ನುಗಳಷ್ಟು ಮಣ್ಣು, ಮರಳು ಇತ್ಯಾದಿಗಳನ್ನು ಸಾಗಿಸುತ್ತದೆ. ರಭಸವಾಗಿ ಹರಿಯುವ ನೀರಿನ ಕೊರೆತ, ಪ್ರವಾಹ, ಗಾಳಿ,ಉಷ್ಣತೆ, ರಾಸಾಯನಿಕ ಕ್ರಿಯೆ ಇವೆಲ್ಲವುಗಳಿಂದ ಮೆದುಬಂಡೆಗಳು ಕರಗಿ ನದಿಯ ಆಳ, ಅಗಲಗಳು ಇನ್ನೂ ಹೆಚ್ಚಾಗುತ್ತಿವೆ. ಅಲ್ಲದೆ, ಕಂದಕದ ಕೆಳಗಿನ ಸ್ತರಗಳಲ್ಲಿ, ಡೈನೋಸಾರ್ ಸಹಿತ ವಿವಿಧ ಪ್ರಾಣಿಗಳ ಪಳೆಯುಳಿಕೆಗಳು, ಸಮುದ್ರ ಚಿಪ್ಪು, ಸಮುದ್ರ ಜೀವಿಗಳ ಗುರುತುಗಳೂ ಲಭ್ಯವಾಗಿವೆ.

1919ರಲ್ಲಿ ಇಲ್ಲಿಯ ಸುಮಾರು ಆರು ಲಕ್ಷ ಎಕರೆಗಿಂತಲೂ ಹೆಚ್ಚು ವಿಸ್ತೀರ್ಣದ ಜಾಗವನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲಾಯಿತು. ಇಲ್ಲಿ ಕಣಿವೆಯ ಉತ್ತರ ಮತ್ತು ದಕ್ಷಿಣದ ಭಾಗಗಳು ಪ್ರವಾಸೀ ತಾಣಗಳಾಗಿದ್ದು ಎರಡೂ ಕಡೆಗಳಲ್ಲಿ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದಕ್ಷಿಣದ ಅಂಚು ಇಡೀ ವರ್ಷ ಪ್ರವಾಸಿಗರಿಗೆ ತೆರೆದಿದ್ದು; ಉತ್ತರದ ಅಂಚು ಚಳಿಗಾಲದಲ್ಲಿ ಮುಚ್ಚಿರುತ್ತದೆ.

ಇಂತಹ, ಅತ್ಯಂತ ಕುತೂಹಲಕಾರಿಯಾದ ಕಣಿವೆಯ ಸಮೀಪಕ್ಕೆ ಇನ್ನೇನು ತಲಪಿದೆವು ಎಂದುಕೊಂಡಾಗ, ಅಳಿಯ ನಮ್ಮ ವಾಹನವನ್ನು ಅಲ್ಲಿಯೇ ಪಕ್ಕದಲ್ಲಿ ನಿಲ್ಲಿಸಿಬಿಟ್ಟ. ಯಾಕೆ ಗೊತ್ತೇ?… ಹತ್ತಿರದಲ್ಲಿಯೇ ಇರುವ ವೀಕ್ಷಣಾಸ್ಥಳದಿಂದ ಕಣಿವೆಯ ಬಹು ಚಂದದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲೋಸುಗ!  ವಾಹನದಿಂದಿಳಿದಾಗ ವಿಪರೀತ ವೇಗದಲ್ಲಿ ಚಳಿಗಾಳಿ ಬೀಸುತ್ತಿತ್ತು. ವೀಕ್ಷಣೆಯ ಸ್ಥಳದಲ್ಲಿ ಅದಾಗಲೇ ಬಹಳಷ್ಟು ಪ್ರವಾಸಿಗರು ನೆರೆದಿದ್ದರು. ಕಣಿವೆಯೊಳಕ್ಕೆ ಚಾಚಿದಂತಿದ್ದ ವೀಕ್ಷಣಾಸ್ಥಳದಲ್ಲಿ ನಿಂತು ಕೆಳಗಡೆಗೆ ದಿಟ್ಟಿಸಿದಾಗ… ಆಹಾ.. ದಿವ್ಯ ಸುಂದರ ನೋಟವು, ಅಗಾಧ ಆಳದಲ್ಲಿ ವಿಶಾಲವಾಗಿ ಹರಡಿ ನಿಂತಿತ್ತು! ಆತ್ಯಂತ ಆಶ್ಚರ್ಯ ಕೌತುಕದಿಂದ ನೋಡಿದ್ದೇ ನೋಡಿದ್ದು! ಮೈಲುಗಟ್ಟಲೆ ಆಳದ ಕಂದಕದೊಳಗೆ ಅಷ್ಟೇ ಎತ್ತರದ ಪರ್ವತದ ಶಿಖರಗಳು ಗೋಚರಿಸುತ್ತಿದ್ದವು. ಈ ಮೊದಲೇ ನೋಡಿದ್ದ ಕಮಾನುಗಳ ಪಾರ್ಕಿನಲ್ಲಿ ಎಲ್ಲಾ ಆಕಾರಗಳೂ ನೆಲದಿಂದ ಮೇಲೆದ್ದು ಬಂದಂತಿದ್ದರೆ, ಇಲ್ಲಿ ಅದಕ್ಕೆ ವಿರುದ್ಧವಾಗಿ ಎಲ್ಲಾ ರಚನೆಗಳೂ ಭೂಮಿಯೊಳಕ್ಕೆ ಹುದುಗಿಹೋದಂತೆ ಕಾಣಿಸುತ್ತವೆ! ನದೀ ಪಾತ್ರವು ಪುಟ್ಟ ನೂಲಿನೆಳೆಯಂತೆ, ಆಳ ಪ್ರಪಾತದಲ್ಲಿ ಬೆಳ್ಳಗೆ ಹೊಳೆಯುತ್ತಿತ್ತು. ನಮಗೆ ಗೋಚರವಾಗುವಷ್ಟು ದೂರಕ್ಕೂ ಆಳದಲ್ಲಿ ನೂರಾರು ಬೆಟ್ಟಗಳು ತಲೆ ಎತ್ತಿ ನಿಂತಿದ್ದವು. ನಾವು ನಿಂತಿದ್ದ ಜಾಗದಿಂದ ಅನತಿದೂರದಲ್ಲಿಯೇ ಒಂದಂತಸ್ತಿನಷ್ಟು ಎತ್ತರದ ವೀಕ್ಷಣಾಗೋಪುರವೊಂದು ಪ್ರಕೃತಿ ವೀಕ್ಷಣೆಗಾಗಿ ಲಭ್ಯವಿದ್ದರೂ; ಅದಾಗಲೇ ಸಂಜೆ ಆರು ಗಂಟೆಯಾಗಿದ್ದುದರಿಂದ ಅದು ಮುಚ್ಚಲಾಗಿತ್ತು. ಇದರಿಂದಾಗಿ ನನಗೆ ಸ್ವಲ್ಪ ನಿರಾಸೆಯಾಗಿದ್ದಂತೂ ನಿಜ. ಅಲ್ಲಿಯ ಆವರಣದೊಳಗೆ ಇದ್ದ ಫ್ರೆಶ್ ರೂಂ ಉಪಯೋಗಿಸಿ ಹೋಟೇಲಿಗೆ ಹಿಂತಿರುಗುವುದೆಂದು ನಿರ್ಧರಿಸುತ್ತಿದ್ದಾಗಲೇ; ಅಲ್ಲಿಯ ಸೂರ್ಯಾಸ್ತ ಬಹಳ ಚೆನ್ನಾಗಿರುತ್ತದೆಯೆಂದು ಅಳಿಯ ಹೇಳಿದ್ದೇ ತಡ, ನಾನು ಹೋಗಲು ಸಿದ್ಧಳಾದೆ. ಆದರೆ ಸೂರ್ಯಾಸ್ತಕ್ಕೆ ಇನ್ನೂ ಸ್ವಲ್ಪ ಸಮಯವಿತ್ತು. ಆದರೆ ವಾಹನದಿಂದ ಕೆಳಗಿಳಿದು ನಿಲ್ಲಲಾರದಷ್ಟು ರಭಸದಿಂದ ಚಳಿಗಾಳಿ ಬೀಸುತ್ತಿತ್ತು. ರಸ್ತೆಗಿಳಿದ ನಾನು ಚಳಿಯಿಂದ ಗಡಗಡ ನಡುಗುತ್ತಿದ್ದೆ! ಮಗಳು ಮತ್ತು ಅವಳ ತಂದೆ ಕೆಳಗಿಳಿಯಲು ಒಪ್ಪಲಿಲ್ಲವಾದ್ದರಿಂದ, ನಾನು ಮತ್ತು ಅಳಿಯ ಸೂರ್ಯಾಸ್ತ ನೋಡಲು ತಯಾರಾದೆವು. ನನ್ನ (ಕೆಟ್ಟ?)ಧೈರ್ಯಕ್ಕೇ ನನಗೇ ಗಾಬರಿಯಾಗಿದ್ದಂತೂ ನಿಜ! ಅಳಿಯನಂತೂ ಕ್ಯಾಮರಾ ಹಿಡಿದು ಮುಂದಕ್ಕೆ ಓಡುತ್ತಾ ಸಾಗುತ್ತಿದ್ದರೆ; ಅತ್ಯಂತ ವೇಗದಿಂದ ಬೀಸುತ್ತಿದ್ದ ಚಳಿಗಾಳಿಗೆ ಕಾಲು ಮುಂದಿಡಲೇ ಸಾಧ್ಯವಾಗುತ್ತಿರಲಿಲ್ಲ… ಹಾಕಿದ ಶೂ ಕೂಡಾ ನಿಷ್ಪ್ರಯೋಜಕವೆನಿಸುತ್ತಿತ್ತು! ಒಂದು ಹಂತದಲ್ಲಿ ನಾನು ನಡೆಯಲೂ ಸಾಧ್ಯವಾಗದೆ, ಹಿಂತಿರುಗಲೂ ಆಗದೆ  ಸ್ತಬ್ದ ಸ್ಥಿತಿಗೆ ತಲಪಿದ್ದೆ ಎನ್ನಬಹುದು. ಆದರೂ, ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಅವನ ಹಿಂದೆಯೇ ಓಡಿದಂತೆ ನಡೆದೆ… ಸ್ವಲ್ಪ ದೂರ ತಲಪಿದಾಗ ಅವನ ಸುಳಿವೇ ಇಲ್ಲ!

ಮೊದಲಿಗೆ ನೋಡಿದ ವೀಕ್ಷಣಾಸ್ಥಳದಂತೆ ಇನ್ನೂ ಹಲವು ಕಡೆಗಳಲ್ಲಿ ಅಂತಹುಗಳಿದ್ದವು. ಎಲ್ಲಾ ಕಡೆಗಳಲ್ಲಿಯೂ ಜನರ ಸುರಕ್ಷತೆಗಾಗಿ ದಪ್ಪಗಿನ ಕಬ್ಬಿಣದ ಸಲಾಕೆಯ ಬೇಲಿಗಳನ್ನು ಅಳವಡಿಸಲಾಗಿತ್ತು. ಈ ವೀಕ್ಷಣಾ ಜಾಗಗಳಲ್ಲಿ; ಬಲವಾದ ಉಕ್ಕಿನ ಅರ್ಧಸೇತುವೆಯು ಕಣಿವೆಯ ತೀರಾ ಒಳಪ್ರದೇಶಕ್ಕೆ ಚಾಚಿಕೊಂಡಿರುವುದರಿಂದ, ಅದರ ತುತ್ತ ತುದಿಯಲ್ಲಿ ನಿಂತರೆ, ಕಮರಿಯ ಬಹು ವಿಸ್ತಾರ ಪ್ರದೇಶವನ್ನು  ವೀಕ್ಷಿಸಬಹುದಾಗಿದೆ. ಇಲ್ಲಿ ಜನದಟ್ಟಣೆಯೂ ಬಹಳಷ್ಟಿತ್ತು. ಹೆಚ್ಚು ಚೆನ್ನಾಗಿ ಕಾಣಬಹುದಾದಂತಹ ಸ್ಥಳಕ್ಕೆ ಓಡುತ್ತಾ ತಲಪುವಷ್ಟರಲ್ಲಿ ಅಳಿಯನ ದರ್ಶನ ಭಾಗ್ಯವೂ ಲಭಿಸಿದ್ದು ನನ್ನ ಪುಣ್ಯ!

ದಿಗಂತದಂಚಿಗೆ ಭಾಸ್ಕರ ಒಂದು ಕಾಲನ್ನಿರಿಸಿದ್ದ. ನಿಂತಲ್ಲೇ ನಿಂತು ಆಳವಾದ ಪ್ರಪಾತದೆಡೆಗೆ ನೋಡಿದಾಗ…ಆಹಾ..! ಏನು ಹೇಳಲಿ?…ಹೇಗೆ ಹೇಳಲಿ?..ಆ ಸೊಬಗನ್ನು!! ಅಷ್ಟು ಚಳಿಯಲ್ಲಿ ಕಷ್ಟಪಟ್ಟು ಓಡಿ ಬಂದುದು ಸಾರ್ಥಕವಾಗಿತ್ತು! ಸಂಜೆಯ ಹೊಂಬಣ್ಣದ ಕಿರಣಗಳು, ಕಮರಿಯಲ್ಲಿರುವ ಬೆಟ್ಟಗಳ ಮೇಲೆ ಬಿದ್ದು, ಪ್ರತಿಫಲಿಸಿ, ಬೇರೆಯೇ ಲೋಕವೊಂದು ಸೃಷ್ಟಿಯಾಗಿತ್ತು!! ಎಲ್ಲಾ ಶಿಖರಗಳೂ, ಅತ್ಯುತ್ತಮ ಶಿಲ್ಪಿಯೊಬ್ಬ ನಾಜೂಕಾಗಿ ಕಡೆದಿಟ್ಟ ದೇವಾಲಯಗಳ ಗೋಪುರಗಳಂತೆ ಕಂಗೊಳಿಸುತ್ತಿದ್ದವು! ಹಾಗೆಯೇ..ಬಹುದೂರದಲ್ಲಿ, ಬಾನಂಚಿನಲ್ಲಿರುವಂತೆ ಗೋಚರಿಸುತ್ತಿದ್ದ ಸುಂದರವಾದ ಬೆಟ್ಟವೊಂದು ಎಲ್ಲದಕ್ಕಿಂತಲೂ ಪ್ರತ್ಯೇಕವಾದ ಚೆಲುವಿಕೆಯನ್ನು ಹೊಂದಿತ್ತು! ಅಳಿಯ ಅದರ ಬಗ್ಗೆ ಹೇಳಿದ ವಿಷಯವು ಇನ್ನೂ ಅಶ್ಚರ್ಯಕರವಾಗಿತ್ತು!…ಆ ದಿವ್ಯ ಸೊಬಗಿನ ಅತ್ಯಂತ ಹಿರಿದಾದ ಬೆಟ್ಟದ ಹೆಸರು  ‘ವಿಷ್ಣು ಪರ್ವತ’ ಎಂದಾಗಿತ್ತಂತೆ!..ನಿಜಕ್ಕೂ ಸಾರ್ಥಕನಾಮ!..ವೈಕುಂಠಪತಿ ನಿವಾಸದಂತೆ ಹೊನ್ನಬಣ್ಣದಿಂದ ಝಗಝಗಿಸುತ್ತಿತ್ತು ಆ ಪರ್ವತ!  ಕಾಣುತ್ತಿದ್ದ ನೂರಾರು ಬೆಟ್ಟಗಳ ಶಿಖರಗಳೂ ಬಂಗಾರದ ಬಣ್ಣದಿಂದ ಹೊಳೆಯುತ್ತಾ; ಅವರ್ಣನೀಯ ಚೆಲುವಿನ ಲೋಕವೊಂದನ್ನು ತೆರೆದಿದ್ದವು.  ಈ ಸುಂದರ ಸುವರ್ಣನಗರವನ್ನು ಬಾಹ್ಯಚಕ್ಷುಗಳಲ್ಲಿ ತುಂಬಿಕೊಂಡು, ಅಂತ:ಚಕ್ಷುಗಳಿಗೆ ಇಳಿಸಿಕೊಳ್ಳುತ್ತಿರುವಾಗಲೇ  ರವಿತೇಜ ತನ್ನರಮನೆಗೆ  ನುಗ್ಗಿಯಾಗಿತ್ತು… ವಸುಮತಿಯು ತನ್ನ ಮೈತುಂಬ ಮಬ್ಬು ಬಿಳಿತೆರೆಯನ್ನು ಹೊದ್ದುಕೊಂಡಾಗಿತ್ತು! ಮಬ್ಬುಗತ್ತಲು ಆವರಿಸುತ್ತಿದ್ದಂತೆ ಹಿಂತಿರುಗಲು ಮನಸ್ಸಿಲ್ಲದಿದ್ದರೂ, ಭಾರವಾದ ಮನ ಹೊತ್ತು ಅಳಿಯನ ಹಿಂದೆ ಹೆಜ್ಜೆ ಹಾಕಿದೆ…ಜೊತೆಗೆ, “ಛೇ…ಕಾರಲ್ಲಿಯೇ ಕೂತುಬಿಟ್ಟಿದ್ದ ಅಪ್ಪ ಮತ್ತು ಮಗಳಿಗೆ ಈ ಸುವರ್ಣವಕಾಶ ತಪ್ಪಿತಲ್ಲಾ!” ಎಂದು ಖೇದವೆನಿಸಿತಾದರೂ, ನಮ್ಮ ಜೊತೆಗಿದ್ದ ಪುಟ್ಟ ಮಕ್ಕಳಿಗೆ ಈ ತೀವ್ರ ಚಳಿಯಲ್ಲಿ ತೊಂದರೆಯಾಗುತ್ತಿದ್ದುದಂತೂ ನಿಜವೆನಿಸಿತು.

ನಮಗಾಗಿ ಕಾದಿರಿಸಿದ್ದ; ಎಲ್ಲಾ ತರಹದ ಸೌಲಭ್ಯಗಳನ್ನು ಒಳಗೊಂಡ, ಮರ ನಿರ್ಮಿತ ಸುಸಜ್ಜಿತ ವಸತಿಗೃಹ ತಲಪಿದಾಗ ಅದಾಗಲೇ ರಾತ್ರಿ ಕತ್ತಲು ಕವಿದಿತ್ತು. ರಾತ್ರಿಯೂಟಕ್ಕೆ ಅಲ್ಲೇ ಹತ್ತಿರದಲ್ಲಿದ್ದ Angel’s ಎನ್ನುವ ದೊಡ್ಡದಾದ ಹೋಟೇಲಿಗೆ ಹೋದೆವೇನೋ ನಿಜ… ಆದರೆ ಅದಾಗಲೇ ಅಲ್ಲಿ ಜನರು ಕಿಕ್ಕಿರಿದು ನೆರೆದಿದ್ದುದರಿಂದ  ಸ್ವಲ್ಪ ಹೊತ್ತು ಕಾಯಬೇಕಾಗಿ ಬಂತು…..

(ಮುಂದುವರಿಯುವುದು……)

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  http://surahonne.com/?p=36185

–ಶಂಕರಿ ಶರ್ಮ, ಪುತ್ತೂರು.

4 Responses

  1. ಅಮೆರಿಕ ಪ್ರವಾಸ ಕಥನ ದಲ್ಲಿನ ….ಅನುಭವದ ಅಭಿವ್ಯಕ್ತಿ… ಸೊಗಸಾಗಿ ಸಾಗುತ್ತಿದೆ..
    ಧನ್ಯವಾದಗಳು ಶಂಕರಿ ಮೇಡಂ.

    • ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು ನಾಗರತ್ನ ಮೇಡಂ.

  2. ನಯನ ಬಜಕೂಡ್ಲು says:

    ಬಹಳ ಚಂದ

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: