ಭರತನಿಂದ ಭಾರತ

Share Button

ನಮ್ಮ ಧರ್ಮಸಂಸ್ಕೃತಿಯನ್ನು ಎತ್ತಿಹಿಡಿದು ಒಳ್ಳೆಯ ಆಳ್ವಿಕೆಯಿಂದ ಜನಮನ್ನಣೆ ಪಡೆದು, ಭಾರತೀಯ ಸಂಸ್ಕೃತಿಯು ವಿಶ್ವದಾದ್ಯಂತ ಪಸರಿಸುವಂತೆ ಮಾಡಿದ ಮಹಾ ಮಹಾ ಪುರುಷರನ್ನು ನಮ್ಮ ಪುರಾಣೇತಿಹಾಸದ ಪುಟಗಳಿಂದ ನಾವು ನೋಡುತ್ತೇವೆ. ಈ ನಿಟ್ಟಿನಲ್ಲಿ ಹಲವಾರು ಮಂದಿ ಆಗಿ ಹೋಗಿದ್ದಾರೆ ನಿಜ. ಆದರೆ ಇಬ್ಬರನ್ನು ಮನವು ಅನುಕ್ಷಣವು ನೆನೆಯುತ್ತಿದ್ದು, ಅವರ ಹೆಸರು ನಮ್ಮ ದೇಶದ ಹೆಸರಿನೊಂದಿಗೆ ಹಾಸು ಹೊಕ್ಕಾಗಿದೆ. ಅವರೇ ಪುರಾಣದಿಂದ ಭರತ ಚಕ್ರವರ್ತಿಯಾದರೆ ಇತಿಹಾಸದಿಂದ ಅಶೋಕ ಚಕ್ರವರ್ತಿ.

ಆಶೋಕ ಮೌರ್ಯವಂಶದ ರಾಜ ಪಾಟಲೀಪುತ್ರದಲ್ಲಿ ರಾಜ ಬಿಂದುಸಾರ ಹಾಗೂ ರಾಣಿ `ಧರ್ಮ’ ಎಂಬವರ ಪುತ್ರನಾಗಿ ಜನಿಸಿದವ. ‘ದೇವಾನಾಂಪ್ರಿಯ’ ಎಂದು ಇವನನ್ನು ಕರೆಯುತ್ತಿದ್ದರು. ಈತನು ಭಾರತದ ಇತಿಹಾಸದಲ್ಲಿ ಪ್ರಜ್ವಲಿಸಲು ಎರಡು ಮುಖ್ಯ ಕಾರಣಗಳು. ಒಂದು ಕಲಿಂಗ ಯುದ್ಧದಲ್ಲಿ ವಿಜಯಿಯಾದ, ಎರಡನೆಯದಾಗಿ ಬೌದ್ಧ ಧರ್ಮವನ್ನು ಪ್ರಚಾರ ಮಾಡಿದವ, ‘ಸಾರಾನಾಥ’ ಎಂಬಲ್ಲಿ ಬೌದ್ಧ ವಿಹಾರ ಮತ್ತು ಸ್ತೂಪಗಳನ್ನು ಕಟ್ಟಿಸಿದವ. ಸದ್ಗುಣಿ, ಪ್ರಜಾನುರಾಗಿ ಮೊದಲಾದ ರಾಜನಿಗಿರಬೇಕಾದ ಎಲ್ಲಾ ಅರ್ಹತೆಯೂ ‘ಅಶೋಕ’ನಲ್ಲಿದ್ದುದರಿಂದ ಅಶೋಕ ಚಕ್ರವನ್ನು ಸ್ವತಂತ್ರ ಭಾರತದ ರಾಷ್ಟ್ರಧ್ವಜದ ಲಾಂಛನಕ್ಕಾಗಿ ಅಳವಡಿಸಲಾಗಿದೆ.

ಇನ್ನೊಬ್ಬ ಚಕ್ರವರ್ತಿ ‘ಭರತ’. ಈತನಿಂದಾಗಿ ಜಂಬೂದ್ವೀಪ ಎಂಬ ನಮ್ಮ ದೇಶಕ್ಕೆ ‘ಭರತ ಖಂಡ’ ಎಂಬ ಹೆಸರು ಬಂತು ಎಂದು ಪುರಾಣ ತಿಳಿಸುತ್ತದೆ. ಈ ಭರತನೆಂದರೆ ಯಾರು? ಎಂಬುದನ್ನರಿಯೋಣ.

ವಿಶ್ವಾಮಿತ್ರನು ಕಠಿಣ ತಪಸ್ಸನ್ನಾಚರಿಸುತ್ತಿದ್ದುದನ್ನು ಕಂಡು ದೇವತೆಗಳು ಹೆದರಿ ಅವನ ತಪೋಭಂಗ ಮಾಡುವುದಕ್ಕಾಗಿ ಮೇನಕೆಯನ್ನು ಕಳಿಸುತ್ತಾರೆ. ಮೇನಕೆಗೆ ಒಲಿದ ವಿಶ್ವಾಮಿತ್ರ. ಪರಿಣಾಮವಾಗಿ ಶಕುಂತಳೆಯ ಜನನವಾಗುತ್ತದೆ. ಇವರಿಬ್ಬರೂ ಹೆಣ್ಣು ಮಗು ಶಕುಂತಳೆಯನ್ನು ಕಾಡಿನಲ್ಲಿ ಬಿಟ್ಟು ಅವರವರ ಹಾದಿ ಹಿಡಿಯುತ್ತಾರೆ. ಈ ಹಸುಗೂಸನ್ನು ಶಕುಂತ ಪಕ್ಷಿಗಳು ರಕ್ಷಣೆ ಮಾಡುತ್ತವೆ. ಶಕುಂತಳೆಯು ಕಣ್ಣ ಮಹರ್ಷಿಗಳಿಗೆ ದೊರೆತು ಅವರು ಸಾಕುತ್ತಾರೆ. ಶಕುಂತಳೆ, ವಿಶ್ವಾಮಿತ್ರ-ಮೇನಕೆಯರ ಮಗಳೆಂದು ತಮ್ಮ ದಿವ್ಯಜ್ಞಾನದಿಂದ ಕಣ್ವರಿಗೆ ತಿಳಿಯುತ್ತದೆ. ಶಕುಂತಳೆಗೆ ಪ್ರಾಪ್ತ ವಯಸ್ಸಾದಾಗ ಒಂದು ದಿನ ದುಷ್ಯಂತ ಮಹಾರಾಜನು ಬೇಟೆಯಾಡುತ್ತಾ ಆ ದಾರಿಯಾಗಿ ಬಂದಾಗ ಶಕುಂತಳೆಯನ್ನು ಕಂಡು ಮೋಹಿಸಿ ಗಾಂಧರ್ವ ರೀತಿಯಿಂದ ವಿವಾಹವಾಗಿ ತನ್ನ ರಾಜ್ಯಕ್ಕೆ ಹಿಂತಿರುಗುತ್ತಾನೆ. ಸದ್ಯದಲ್ಲೇ ಶಕುಂತಳೆಯನ್ನು ಕರೆಸಿಕೊಳ್ಳುವೆನೆಂದು ಆಕೆಗೆ ಮಾತು ಕೊಟ್ಟರೂ ಆ ವಿಷಯವನ್ನೇ ಮರೆಯುತ್ತಾನೆ. ಇತ್ತ ಶಕುಂತಳ ಗರ್ಭಿಣಿಯಾಗಿ ಒಂದು ಗಂಡು ಶಿಶುವಿಗೆ ಜನ್ಮ ನೀಡುತ್ತಾಳೆ. ಈ ಮಗುವಿಗೆ ‘ಸರ್ವದಮನ’ ಎಂದು ಹೆಸರಿಟ್ಟು ಕಣ್ವರ ಆಶ್ರಮದಲ್ಲಿದ್ದು ಶಕುಂತಳೆ ಪೋಷಿಸುತ್ತಾಳೆ.

ಹೀಗಿರಲು ಒಂದು ದಿನ ದೇವತೆಗಳ ಸೂಚನೆಯಂತೆ ರಾಕ್ಷಸರನ್ನು ಸದೆಬಡಿದು ಆಕಾಶಮಾರ್ಗವಾಗಿ ಬರುತಿದ್ದ ದುಷ್ಯಂತ, ಪುಟ್ಟ ಬಾಲಕ ಹುಲಿ, ಸಿಂಹಗಳೊಡನೆ ಆಡುವುದನ್ನು ನೋಡಿದ! ಯಾರಿವನು…? ಎಂಬ ಕುತೂಹಲದಿಂದ ಬಾಲಕನ ಬಳಿಗೆ ಬಂದು ಮಾತನಾಡಿಸಿದ, ಬಾಲಕ, ತಾನು ದುಷ್ಯಂತ-ಶಕುಂತಳೆಯರ ಪುತ್ರನೆಂದು ಹೇಳಿದ್ದಲ್ಲದೇ ಆಶ್ರಮದಲ್ಲಿದ್ದ ತಾಯಿಯನ್ನೂ ತೋರಿಸುತ್ತಾನೆ. ದುಷ್ಯಂತನಿಗೆ ತನ್ನ ತಪ್ಪಿನ ಅರಿವಾಗಿ ಪತ್ನಿಯನ್ನೂ ಪುತ್ರನನ್ನೂ ಸ್ವೀಕರಿಸಿ ರಾಜ್ಯಕ್ಕೆ ತೆರಳುತ್ತಾನೆ.

ಸರ್ವದಮನನು ತನ್ನ ತಂದೆಯ ಆಶ್ರಯದಲ್ಲಿ ಅರಮನೆಯಲ್ಲಿ ಬೆಳೆಯುತ್ತಾ ಸಕಲ ವಿದ್ಯೆಗಳನ್ನು ಅಭ್ಯಾಸ ಮಾಡುತ್ತಾ ಅತ್ಯುತ್ತಮ ವೀರನಾಗಿ ಬೆಳೆಯುತ್ತಾನೆ. ಮುಂದೆ ಪಟ್ಟಾಭಿಷೇಕ ಕಾಲದಲ್ಲಿ ದುಷ್ಯಂತ ಇವನಿಗೆ ಭರತನೆಂಬ ಹೆಸರನ್ನಿಡುತ್ತಾನೆ. ‘ದೀರ್ಘತಮ’ ಮುನಿಯು ಭರತನ ಪುರೋಹಿತನಾಗಿದ್ದು, ಹಲವಾರು ಅಶ್ವಮೇಧ ಯಾಗಗಳನ್ನು ಮಾಡಿಸುತ್ತಾನೆ. ವಿದರ್ಭ ರಾಜಪುತ್ರಿಯರಾದ ತಾಸು, ಸುಂದೆ ಹಾಗು ಮುಖ್ಯೆ ಎಂಬ ಮೂವರು ರಾಜಕನ್ಯೆಯರನ್ನು ವಿವಾಹವಾಗುತ್ತಾನೆ.

ಭರತನು ಚಕ್ರವರ್ತಿಯಾಗಿ ಚಂದ್ರವಂಶಕ್ಕೆ ಆ ಚಂದ್ರಾರ್ಕವಾದ ಕೀರ್ತಿಯನ್ನು ತಂದನು, ವಿಶ್ವವಿಖ್ಯಾತನಾದ ಇವನಿಂದಲೇ ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂತು ಎಂಬುದನ್ನು ಚರಿತ್ರೆಯಿಂದ ತಿಳಿಯುತ್ತೇವೆ.

ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

  1. Vijayasubrahmanya says:

    ಧನ್ಯವಾದಗಳು ಹೇಮಮಾಲಾ ಸುರಹೊನ್ನೆ ಹಾಗೂ ಓದುಗರಿಗೆ.

  2. ಪೌರಾಣಿಕ ಕಥಾಹಂದರದಲ್ಲಿ…ಈ ಸಾರಿ…ಭರತನ..ಕಥೆ..
    ಅವನಿಂದ…ಭಾರತ..ಚೆನ್ನಾಗಿದೆ.
    ಮತ್ತೊಮ್ಮೆ..ಕಥೆ ಯನ್ನು ನೆನಪಿಸಿದಕ್ಕೆ…ಧನ್ಯವಾದಗಳು…ವಿಜಯಾ…ಮೇಡಂ

  3. Anonymous says:

    ಧನ್ಯವಾದಗಳು ನಾಗರತ್ನ ಮೇಡಂ.

  4. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿದೆ

  5. ಶಂಕರಿ ಶರ್ಮ says:

    ಚಂದದ ನಿರೂಪಣೆಯೊಂದಿಗೆ ಹರಿದು ಬರುತ್ತಿರುವ ಪೌರಾಣಿಕ ಕಥೆ ನಿಜಕ್ಕೂ ಅಮೂಲ್ಯ! ಧನ್ಯವಾದಗಳು ವಿಜಯಕ್ಕ.

Leave a Reply to Vijayasubrahmanya Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: