ಕಾದಂಬರಿ: ನೆರಳು…ಕಿರಣ 34

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಸ್ವಲ್ಪ ಹೊತ್ತು ಅದೂ ಇದೂ ಮಾತನಾಡುತ್ತಾ ನಾಣಜ್ಜ ಕೊಟ್ಟ ಹಾಲು ಹಣ್ಣುಗಳನ್ನು ಸ್ವೀಕರಿಸಿ ಮಗನೊಡನೆ ಗುರು ರಾಘವೇಂದ್ರರು ಹಿಂತಿರುಗಿದರು.

ಅವರನ್ನು ಬೀಳ್ಕೊಟ್ಟು ಒಳಬಂದ ತಟ್ಟೆಯನ್ನು ಜೋಯಿಸರ ಪಾದದ ಬಳಿಯಲ್ಲಿಟ್ಟು “ಮಾವಯ್ಯಾ ಅವರೇನೇ ಹೇಳಲಿ, ಇದು ನಿಮಗೇ ಸೇರಬೇಕಾದದ್ದು ನನಗಲ್ಲ. ಪಾಠಪ್ರವಚನಗಳಿಂದ ನನಗೆ ಬಂದ ಹಣವನ್ನೇ ನೀವ್ಯಾರೂ ತೆಗೆದುಕೊಳ್ಳದೆ ಹಾಗೇ ಬ್ಯಾಂಕಿನಲ್ಲಿಡಲಾಗಿದೆ. ಜೊತೆಗೆ ಇದನ್ನೇನು ಮಾಡಲಿ?” ಎಂದಳು ಭಾಗ್ಯ.

“ ನೋಡು ಭಾಗ್ಯಮ್ಮ, ಗುರುಗಳು ಹೇಳಿದಂತೆ ಈ ಹಣಕ್ಕೆ ನೀನೇ ವಾರಸುದಾರಳು. ಅವರು ಆಶೀರ್ವದಿಸಿ ಕೊಟ್ಟಿದ್ದಾರೆ. ಇದನ್ನೂ ಬ್ಯಾಂಕಿನಲ್ಲಿಡು. ನಮಗೆ ಆವಶ್ಯಕತೆ ಬಿದ್ದಾಗ ನಾವೇ ಕೇಳಿ ತೆಗೆದುಕೊಳ್ಳುತ್ತೇವೆ. ಇದರ ಬಗ್ಗೆ ಇನ್ನು ಚರ್ಚೆಬೇಡ” ಎಂದು ಮಾತಿಗೆ ಮುಕ್ತಾಯ ಹಾಕಿದರು ಜೋಯಿಸರು. ಸೀತಮ್ಮ ಶ್ರೀನಿವಾಸರೂ ನಮ್ಮ ಅಭಿಮತವೂ ಇದೇ ಎಂದರು. ವಿಧಿಯಲ್ಲದೆ ಕುಂಕುಮಪೊಟ್ಟಣ ತೆಗೆದು ಹಣೆಗಿಟ್ಟುಕೊಂಡು, ಅರಿಶಿಣವನ್ನು ಕೆನ್ನೆಗಳಿಗೆ ಸವರಿಕೊಂಡು ಅತ್ತೆಗೂ ಕೊಟ್ಟಳು. ಹೂವನ್ನು ಎರಡು ತುಂಡು ಮಾಡಿ ಅತ್ತೆಗೊಂದಿತ್ತು ತಾನೊಂದನ್ನು ಮುಡಿದಳು. ಹಣ್ಣುಗಳನ್ನು ಒಳಗಿಟ್ಟು ಲಕೋಟೆ ತೆರೆದಳು. ಅದರಲ್ಲಿ ಮೂರೂ ಪುಸ್ತಕಗಳಿಂದ ಸಲ್ಲಬೇಕಾದ ಗೌರವಧನ ಎಂಬ ಚೀಟಿಯಿದ್ದು ಒಟ್ಟು ಹದಿನೈದು ಸಾವಿರ ಮೊಬಲಗು ಇತ್ತು. ಅದು ಅಮೂಲ್ಯವೆನ್ನಿಸಿತು. ಮನೆಯವರೆಲ್ಲರ ಅಭಿಪ್ರಾಯದ ಬಗ್ಗೆ ಹೆಮ್ಮೆಯೆನಿಸಿತು. ಹೊರಗಡೆಯ ಚಟುವಟಿಕೆಗಳಿಗೆ ಅನುಮತಿ ನೀಡದಿದ್ದರೂ ಮನಯಂಗಳದಲ್ಲಿಯೇ ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ತನ್ನಲ್ಲಿರುವ ಪ್ರತಿಭೆಗೆ ತೋರಣ ಕಟ್ಟಿದ್ದಾರೆ. ಉತ್ತಮವಾದ ಆಸರೆ ನೀಡಿರುವ ಈ ಮನೆಯನ್ನು ಬೆಳಗುವ ದೀಪವೊಂದನ್ನು ಹೊತ್ತಿಸಲು ಕೃಪೆ ತೋರು ಭಗವಂತ  ಎಂದು ಪ್ರಾರ್ಥಿಸಿ ನಾಳೆ ಇದನ್ನು ನಾಣಜ್ಜನ ಮೂಲಕ ಬ್ಯಾಂಕಿಕೆ ಕಟ್ಟಿಸೋಣವೆಂದು ಒಳಗೆತ್ತಿಟ್ಟಳು.

ಇವೆಲ್ಲ ಘಟನೆಗಳು ಪೂರೈಸಿ ಬಂದವರು ನಿರ್ಗಮಿಸುವ ವೇಳೆಗೆ ಎಲ್ಲರ ಕೆಲಸಗಳ ವೇಳೆಯಾದ್ದರಿಂದ  ಎಲ್ಲರೂ ಅವರವರ ಕೆಲಸಗಳನ್ನು ಗಮನಿಸಲು ಸಜ್ಜಾದರು. ಜೋಯಿಸರು ದೇವಸ್ಥಾನದ ಪೂಜೆಗೆ, ಭಾಗ್ಯ ಮಕ್ಕಳ ಸಂಗೀತ ಪಾಠಕ್ಕೆ, ಶ್ರೀನಿವಾಸ ಮುಂದಿನ ತಿಂಗಳಲ್ಲಿ ನಿಗದಿಯಾಗಿದ್ದ ಸಂಗೀತ ಕಚೇರಿಯಲ್ಲಿ ನುಡಿಸಲು ಅಭ್ಯಾಸಕ್ಕಾಗಿ

ಗೌರಿಯಮ್ಮನವರ ಮನೆಗೆ, ಇನ್ನು ಸೀತಮ್ಮನವರು ನಾರಣಪ್ಪನೊಡನೆ ರಾತ್ರಿಯ ಊಟದ ತಯಾರಿ ನಡೆಸಲು ಒಳ ನಡೆದರು. ಪಾಠ ಮುಗಿಸಿ ಕೈಕಾಲು ಮುಖ ತೊಳೆದು ದೇವರಿಗೆ ನಮಿಸಿ ಹೊರಬಂದು ಕಾಂಪೌಂಡಿನೊಳಗೇ ಆವರಣದಲ್ಲಿ ಅಡ್ಡಾಡುತ್ತಿದ್ದ ಭಾಗ್ಯಳಿಗೆ ಮನೆಯ ಮುಂದೆ ಕಾರೊಂದು ನಿಂತಂತಾಯಿತು. ನಂಜುಂಡನು ಆಗಾಗ್ಗೆ ಬರುತ್ತಿದ್ದುದರಿಂದ ಆತನೇ ಇರಬಹುದೆಂದು ದಿಟ್ಟಿಸಿದಳು. ಅವನಲ್ಲ ಎನಿಸಿತು.

ಅರೆ ! ಭಾವನಾ, ಸುಬ್ಬು ಈ ಹೊತ್ತಿನಲ್ಲಿ, ಲಗುಬಗೆಯಿಂದ ಗೇಟು ತೆರೆದು ಅವರು ಒಳಬರಲು ಅನುವು ಮಾಡಿದಳು. ಅವರಿಬ್ಬರೇ ಬಂದದ್ದು ನೋಡಿ ಮಕ್ಕಳೆಲ್ಲಿ? ಎಂದು ಕೇಳಿದಳು.

“ಇಲ್ಲಕ್ಕಾ ಅವರು ಬಂದಿಲ್ಲ. ಸುಹಾಸ, ಸುಧೀರ ಇಬ್ಬರೂ ಅಭ್ಯಾಸ ಮಾಡುತ್ತಿದ್ದರು. ನಾಳೆ ಟೆಸ್ಟ್ ಇದೆ ಬರೋಲ್ಲವೆಂದರು. ಇನ್ನೊಮ್ಮೆ ಶಾಲೆಗೆ ರಜೆಯಿದ್ದಾಗ ಬರುತ್ತಾರಂತೆ.” ಎಂದು ಹೇಳುತ್ತಾ ಅಲ್ಲಿದ್ದ ಕೊಳಗದಲ್ಲಿನ ನೀರಿನಿಂದ ಕೈಕಾಲು ತೊಳೆದುಕೊಂಡು ಒಳ ಹೊರಟರು. ಅಷ್ಟರಲ್ಲಿ ಸದ್ದ್ದು ಕೇಳಿ ಒಳಗಿನಿಂದ ಬಂದ ಸೀತಮ್ಮನವರು ದಂಪತಿಗಳನ್ನು ಮನೆಯೊಳಕ್ಕೆ ಸ್ವಾಗತಿಸಿದರು.

ಹುಂ ಇವಳಿಗೆ ತನ್ನಮ್ಮನಂತೆ ಅವಳಿ ಮಕ್ಕಳು. ಅವರುಗಳಿಗೆ ನಾನೆಂದರೆ ಎಷ್ಟು‌ ಇಷ್ಟ ಎಂಬುದನ್ನು ತಿಳಿದಿದ್ದವಳಿಗೆ  ತಂಗಿ ಕೊಟ್ಟ ಕಾರಣ ಓದಲ್ಲವೆಂಬುದು ಅರ್ಥವಾಯಿತು. ಈಗ್ಗೆ ಎರಡು ವಾರಗಳ ಹಿಂದೆ ಬಂದಿದ್ದ ಅಪ್ಪ “ಭಾವನಾಳ ಮಕ್ಕಳಿಗೆ ಇಷ್ಟರಲ್ಲೇ ಮುಂಜಿ ಮಾಡಿಸುವ ಕಾರ್ಯಕ್ರಮವಿಟ್ಟುಕೊಳ್ಳಬಹುದು ಅವರ ಮನೆಯವರು ಹೇಗೆಂಬುದು ನಿನಗೆ ತಿಳಿದಿದೆ. ಅವರ ಬಂಧುಗಳ ಬಾಯಿಯೂ ಹೇಗೆಂಬುದೂ ನಿನಗೆ ಹಲವಾರು ಸಂದರ್ಭಗಳಲ್ಲಿ ತಿಳಿದಿದೆ. ಆ ದಿನ ಆಹ್ವಾನವಿದ್ದರೂ ನೀನು ಏನಾದರೂ ನೆಪವೊಡ್ಡಿ ಬಾರದಿರುವುದೇ ಒಳ್ಳೆಯದು. ಅಲ್ಲಿಗೆ ಬಂದು ನೊಂದುಕೊಂಡು ಹಿಂದಿರುಗುವುದು ನನಗಿಷ್ಟವಿಲ್ಲ” ಎಂದು ಸೂಚ್ಯವಾಗಿ ತಿಳಿಸಿದ್ದರು. ಅದಕ್ಕೇ ಈಗವರು ಬಂದಿರಬಹುದು. ಅದವರ ಅನಿಸಿಕೆ. ನನ್ನ ಕರ್ಮಕ್ಕೆ ಬೇರೆಯವರನ್ನು ದೂಷಿಸುವುದು ತಪ್ಪು. ಸಂದರ್ಭವನ್ನು ನಾಜೂಕಾಗಿ ನಿಭಾಯಿಸಬೇಕೆಂದುಕೊಂಡು ಒಳ ನಡೆದಳು ಭಾಗ್ಯ.

“ನೋಡು ಭಾಗ್ಯ ನಿನ್ನ ಸೋದರಿ ತನ್ನ ಮಕ್ಕಳಿಬ್ಬರಿಗೂ ಒಮ್ಮೆಲೇ ಮುಂಜಿಮಾಡುತ್ತಿದ್ದಾಳೆ. ಅದಕ್ಕೆ ಆಹ್ವಾನಿಸಲು ಪತಿಯೊಡನೆ ಬಂದಿದ್ದಾಳೆ. ಒಳ್ಳೆಯದಲ್ಲವೇ” ಎಂದರು ಸೀತಮ್ಮ.

“ಹೌದೇನೇ ಭಾವನಾ? ಸುಬ್ಬಣ್ಣಾ ಯಾವಾಗ?” ಎಂದು ತನಗೆ ಇದರ ಬಗ್ಗೆ ಏನೂ ಗೊತ್ತಿಲ್ಲದವಳಂತೆ ಪ್ರಶ್ನಿಸಿದಳು.

“ಮುಂದಿನ ಸೋಮವಾರವೇ ಇಟ್ಟುಕೊಂಡಿದ್ದೇವೆ” ಎಂದಳು ಭಾವನಾ..

“ಆ ದಿನ ನಾವುಗಳು ಇರುವುದಿಲ್ಲ, ನಾವೆಲ್ಲರೂ ವಿದುರಾಶ್ವತ್ಥಕ್ಕೆ ಪೂಜೆಗೆ ಹೋಗುತ್ತಿದ್ದೇವೆ. ಅಲ್ಲಿ ಪೂಜೆಗಾಗಿ ಅಡ್ವಾನ್ಸ್ ಬುಕ್ ಮಾಡಿಸಿದ್ದಾರೆ ನಿಮ್ಮ ಭಾವ. ಹಿಂದಿರುಗುವುದು ಮೂರ್‍ನಾಲ್ಕು ದಿನಗಳಾಗಬಹುದು.” ಎಂದರು ಸೀತಮ್ಮ.

“ಅರೆ ನಾವು ಮೊದಲೇ ತಿಳಿಸಬೇಕಾಗಿತ್ತು. ತಡವಾಗಿ ಕರೆಯಲು ಬಂದದ್ದು ನಮ್ಮದೇ ತಪ್ಪು. ಈಗೇನು ಮಾಡೋದು. ಎಲ್ಲ ಸಿದ್ಧತೆಗಳೂ ಕೊನೆಯ ಹಂತಕ್ಕೆ ಬಂದಿವೆ. ಆಹ್ವಾನ ಪತ್ರಿಕೆ ಮಾಡಿಸೋಣವೆಂದರೆ ಅಪ್ಪ ಏಕೋ ಒಪ್ಪಲೇ ಇಲ್ಲ. ಅಜ್ಜಿಯವರಿಗೆ ಇನ್ನೂ ಪೂರ್ಣವಾಗಿ ಆರೋಗ್ಯ ಸುಧಾರಿಸಿಲ್ಲ. ಅದಕ್ಕಾಗಿ ಕುಟುಂಬವರ್ಗದವರು, ಕೆಲವರು ಆಪ್ತೇಷ್ಟರುಗಳು ಮಾತ್ರ ಸಾಕು. ಹೆಚ್ಚು ಗೌಜು ಗದ್ದಲ ಬೇಡ ಎಂದುಬಿಟ್ಟರು. ಮನೆಯ ಮುಂದೆಯೇ ಚಪ್ಪರ ಹಾಕಿಸಿ ಕಾರ್ಯ ನಡೆಸುತ್ತಿದ್ದೇವೆ. ಛೇ..ಎಂಥಹ ಕೆಲಸವಾಯಿತು. ಅಪ್ಪಯ್ಯನಾದರೂ ದೇವಸ್ಥಾನದಲ್ಲಿ ನಿಮ್ಮ ಮಾವನವರಿಗೆ ಸಿಕ್ಕಾಗ ಒಂದು ಮಾತು ಹೇಳಿದ್ದರೆ ಪೂಜೆಯನ್ನು ಬೇರೆ ದಿವಸ ಏರ್ಪಡಿಸುತ್ತಿದ್ದರೇನೋ” ಎಂದು ಪೇಚಾಡಿಕೊಂಡನು ಸುಬ್ಬಣ್ಣ.

PC : Internet

“ಒಳ್ಳೆಯದೇ ಆಯಿತು ಬಿಡು ಸುಬ್ಬಣ್ಣ, ಅದಕ್ಯಾಕೆ ಅಷ್ಟೊಂದು ಪಶ್ಚಾತ್ತಾಪ. ಮಂಗಳ ಕಾರ್ಯಗಳಲ್ಲಿ ನನ್ನ ಇರುವಿಕೆ ನಿಮ್ಮ ಬಂಧುಗಳಲ್ಲಿ ಬಹುತೇಕರಿಗೆ ಹಿಡಿಸುವುದಿಲ್ಲ. ಅಷ್ಟೇ ಏಕೆ, ವಾಣಿ, ವೀಣಾರ ಅತ್ತೆ ಮಾವನವರ ಹಾಜರಿಯಂತೂ ಅಲ್ಲಿ ಇದ್ದೇ ಇರುತ್ತದೆ. ಅವರುಗಳಂತೂ ಹಿಂದೆಮುಂದೆ ನೋಡದೆ ನೀನು ಇಂಥಹದಕ್ಕೆಲ್ಲ ಬರಬಾರದು ಸುಮ್ಮನೆ ಕುಳಿತುಕೋ ಎಂದು ಅವರ ಮೊಮ್ಮಕ್ಕಳ ನಾಮಕರಣ ಕಾರ್ಯಕ್ರಮದಲ್ಲಿ ಹೇಳೇ ಬಿಟ್ಟಿದ್ದರು. ಅಷ್ಟಕ್ಕೇ ಸುಮ್ಮನಾದರೇ, ಮಗುವನ್ನು ತೊಟ್ಟಿಲಿಗೆ ಹಾಕಲೆಂದು ನಿಂತಿದ್ದ ನನ್ನ ಕೈಯಿಂದ ಪಟಕ್ಕೆಂದು ಕೂಸನ್ನು ಕಸಿದುಕೊಂಡೇ ಬಿಟ್ಟರು. ನನ್ನನ್ನು ಅಸ್ಪೃಶ್ಯರ ರೀತಿಯಲ್ಲಿ ಕಾಣುತ್ತಾರೆ. ಆಗ ನೀವೂ ಅಸಹಾಯಕರಾಗಿರುತ್ತೀರಿ. ತಂಗಿಯ ಸಂದಿಗ್ಧತೆ, ತಲೆಗೊಂದು ಸಲಹೆಯಿಂದ ಅತ್ತೆಯವರಿಗೂ ಮುಜುಗರ. ನನ್ನವರಿಗೆ ಮತ್ತು ಮಾವಯ್ಯನವರಿಗೆ ಕಸಿವಿಸಿ. ಇವೆಲ್ಲವೂ ಈಗ ತಪ್ಪುತ್ತವೆ. ಶುಭವಾಗಲಿ ಕಾರ್ಯ ಸಾಂಗವಾಗಿ ನಡೆಯಲಿ. ನಾವು ಪೂಜೆ ಮಗಿಸಿ ಹಿಂದಕ್ಕೆ ಬಂದಮೇಲೆ ನೆಂಟರಿಷ್ಟರೆಲ್ಲಾ ಹೋದನಂತರ ನಿಮ್ಮ ಮನೆಗೆ ಬರುತ್ತೇವೆ ಮಕ್ಕಳಿಗೆ ಶುಭ ಕೋರುತ್ತೇವೆ. ಇದಕ್ಕೆ ನಿಮ್ಮ ಅಭ್ಯಂತರವಿಲ್ಲವೆಂದು ಭಾವಿಸುತ್ತೇನೆ.” ಎಂದಳು ಭಾಗ್ಯ.

ಸೊಸೆಯಾಡಿದ ಮಾತುಗಳನ್ನು ಕೇಳಿದ ಸೀತಮ್ಮನವರ ಮನಸ್ಸು ಮಮ್ಮಲ ಮರುಗಿತು. ಅವಳ ಮಾತಿನ ಹಿಂದಿನ ನೋವನ್ನು ಅರಿತವರಂತೆ ಮತ್ತೇನನ್ನೂ ಕೆದಕದೆ “ಆಯಿತು ಒಳ್ಳೆಯದು, ಕೇಶವಯ್ಯ ರಾಧಮ್ಮನವರಿಗೆ ನಾವುಗಳು ಕೇಳಿದೆವೆಂದು ಹೇಳಿ. ಅದೆಲ್ಲಾ ಒತ್ತಟ್ಟಿಗಿರಲಿ ಈಗ ಏನು ತೊಗೋತೀರಾ?” ಎಂದು ಕೇಳಿದರು.

“ನಾವೇನು ಈ ಮನೆಗೆ ಹೊಸಬರೇ, ಈಗ ಮಾತ್ರ ಏನೂ ಬೇಡಿ. ಕರೆಯಲು ಹೋದವರ ಮನೆಯಲ್ಲಿ ಬೇಡವೆಂದರೂ ಕೇಳದೆ ಕಾಫಿ, ಟೀ, ಜ್ಯೂಸ್ ಎಂದು ಕೊಟ್ಟೇ ಬಿಡುತ್ತಾರೆ. ಬೇಡವೆಂದರೆ ಬೇಸರ ಮಾಡಿಕೊಳ್ಳುತ್ತಾರೆಂದು ಕುಡಿದು ಹೊಟ್ಟೆಯು ಕಲಗಚ್ಚಿನಂತಾಗಿದೆ ಸೀತತ್ತೆ. ಏನೂ ಬೇಡಿ. ಭಾವ ಮತ್ತು ಜೋಯಿಸಮಾವನವರು ಬರುವುದು ತಡವಾಗುತ್ತೆ. ಅವರುಗಳಿಗೆ ತಿಳಿಸಿಬಿಡಿ. ಇನ್ನೂ ಒಂದೆರಡು ಮನೆಗಳಿವೆ. ಹೋಗಬೇಕು ತಪ್ಪು ತಿಳಿಯಬೇಡಿ.” ಎಂದಳು ಭಾವನಾ.

ಅಷ್ಟರಲ್ಲಿ ಕುಂಕುಮ, ತಾಂಬೂಲವನ್ನು ತಟ್ಟೆಯಲ್ಲಿ ಅಣಿಮಾಡಿಟ್ಟುಕೊಂಡು ಬಂದ ಭಾಗ್ಯ ಹೆಚ್ಚು ಮಾತನಾಡದೆ ಸೋದರಿಗಿತ್ತು ಶುಭ ಹಾರೈಸಿ ಗೇಟಿನವರೆಗೂ ಹೋಗಿ ಕಳುಹಿಸಿಕೊಟ್ಟಳು.

“ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯರು ಹೇಳಿದ್ದೂ ಹಾಲು ಅನ್ನ” ದೇವಾ ನಿನಗೆಷ್ಟು ಕೃತಜ್ಞತೆ ಹೇಳಿದರೂ ಸಾಲದೆಂದು ನೆಮ್ಮದಿಯ ಉಸಿರುಬಿಟ್ಟು ನಿರಾಳವಾಗಿ ಮನೆಯೊಳಗೆ ಬಂದಳು ಭಾಗ್ಯ.

ಇದೆಲ್ಲವನ್ನೂ ಗಮನಿಸಿದ ನಾರಣಪ್ಪ “ಪಾಪ ಈ ಹುಡುಗಿಯದೇನು ತಪ್ಪು? ಜನರೇಕೆ ಅರ್ಥಮಾಡಿಕೊಳ್ಳುತ್ತಿಲ್ಲ. ನೊಂದ ಹೃದಯಕ್ಕೆ ಸಾಂತ್ವನ ಹೇಳುವುದನ್ನು ಬಿಟ್ಟು ಉರಿಯುತ್ತಿರುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುತ್ತಾರೆ.. ಛೇ ಅದೇನು ಮೂಢನಂಬಿಕೆಗಳಿಗೆ ಜೋತುಬಿದ್ದಿದ್ದಾರೋ..ಭಗವಂತಾ ಪೂಜೆಗೆ ಹೋಗಿಬಂದ ಮೇಲಾದರೂ ಈಕೆಗೆ ಒಳಿತು ಮಾಡಪ್ಪಾ” ಎಂದು ಬೇಡಿಕೊಳ್ಳುತ್ತಾ ತಮ್ಮ ಕೆಲಸವನ್ನು ಗಮನಿಸಲು ಅಡುಗೆಮನೆ ಹೊಕ್ಕರು.

ಅಪ್ಪ, ಮಗ ತಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಬಂದವರಿಗೆ ಸೀತಮ್ಮನಿಂದ ವಿಷಯ ತಿಳಿಯಿತು. ಜೋಯಿಸರು “ಹೇ..ಸೀತೂ ಕೇಶವಯ್ಯ ದೇವಸ್ಥಾನಕ್ಕೆ ಬಂದಿದ್ದರು. ಆಗಲೇ ವಿಷಯವನ್ನು ಹೇಳಿದ್ದರು. ಅವರಿಗೆ ನಾನು ನಾವು ವಿದುರಾಶ್ವತ್ಥಕ್ಕೆ ಹೊರಟಿರುವ ವಿಷಯ ತಿಳಿಸಿದಾಗ ಯಾವ ಚಡಪಡಿಕೆಯೂ ಇಲ್ಲದೆ ‘ಓ ಪೂಜೆಗೆ ಹೊರಟಿದ್ದೀರಾ, ಹೋಗಿ ಬನ್ನಿ ಒಳ್ಳೆಯದಾಗಲಿ’ ಎಂದಿದ್ದರು. ನಾವು ನಮ್ಮ ಶೀನ ಹುಟ್ಟುವವರೆಗೆ ಬೇರೆಬೇರೆ ರೀತಿಯಲ್ಲಿ ಬವಣೆಪಟ್ಟಂತೆ ಈಗ ನಮ್ಮ ಮಕ್ಕಳ ಸರದಿ. ಬಿಡು ಶೀನ ಕೇಳಿಸಿಕೊಂಡಾನು. ಪೂಜೆ ಮುಗಿಸಿ ಹಿಂದಿರುಗಿದಮೇಲೆ ಅಲ್ಲಿಗೆ ಹೋಗಿ ಮಕ್ಕಳನ್ನು ಆಶೀರ್ವದಿಸಿ ಉಡುಗೊರೆ ಕೊಟ್ಟು ಬಂದರಾಯಿತು.” ಎಂದರು. ಶ್ರೀನಿವಾಸನಿಗೆ ವಿಷಯ ತಿಳಿದಾಗ “ಆದದ್ದೆಲ್ಲ ಒಳ್ಳಿತೇ ಆಯಿತು ಬಿಡಮ್ಮ. ಸುಮ್ಮನೆ ಕೆಲಸಕ್ಕೆ ಬಾರದ ಮಾತುಗಳನ್ನು ಕೇಳುವುದು ತಪ್ಪಿತು. ಅಪ್ಪ ಹೇಳಿದಂತೆ ಮಾಡಿದರಾಯಿತು. ಬನ್ನಿ ಬೆಳಗ್ಗೆ ಪೂಜೆಯೂ ಬೇಗನೇ ಆಗಿತ್ತು. ಊಟವೂ ಬೇಗ ಆಯಿತು. ಸ್ವಲ್ಪ ಹೊತ್ತು ಸಂಗೀತಾಭ್ಯಾಸ ಮಾಡಿಬರೋಣವೆಂದು ಹೋದ ನಾನು ಮತ್ತೆ ಮಧ್ಯದಲ್ಲಿ ಬರಲಾಗಲಿಲ್ಲ. ಈಗ ಹೊಟ್ಟೆ ಚುರುಗುಟ್ಟುತ್ತಿದೆ. ಊಟಕ್ಕೆ ಬಡಿಸಬನ್ನಿ” ಎಂದು ಬಟ್ಟೆ ಬದಲಾಯಿಸಲು ತನ್ನ ರೂಮಿಗೆ ಹೋದ.

ಭಾಗ್ಯಳಂತೂ ಯಾರ ಮಾತಿಗೂ ಪ್ರತಿಕ್ರಿಯೆ ನೀಡದೆ ಒಳಗೆ ನಾರಣಪ್ಪನೊಡನೆ ಊಟಕ್ಕೆ ಸಿದ್ಧತೆ ನಡೆಸಿದ್ದಳು. ಸಾಮಾನ್ಯವಾಗಿ ಊಟ ಮಾಡುವಾಗ ಒಬ್ಬರಿಗೊಬ್ಬರು ಅಂದಿನ ತಮ್ಮ ಕೆಲಸ, ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವ ಪರಿಪಾಠವಿತ್ತು. ಆದರೆ ಈದಿನ ಯಾರಿಗೂ ಮಾತನಾಡುವ ಮನಸ್ಥಿತಿಯಿರದೆ ತಮ್ಮಲ್ಲಿನ ಆಲೋಚನೆಗಳಲ್ಲೇ ಮುಳುಗಿದ್ದು ಊಟ ಮುಗಿಸಿದ್ದರು.

ಊಟ ಮುಗಿಸಿ ಹೊರಗಿನ ವೆರಾಂಡಾದಲ್ಲಿ ಸ್ವಲ್ಪ ಅಡ್ಡಾಡಿ ಬರುವ ರೂಢಿ ಇಟ್ಟುಕೊಂಡಿದ್ದ ಜೋಯಿಸರು ಎಂದಿಗಿಂತಲೂ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡು ಅಲ್ಲೇ ಕುಳಿತಿದ್ದರು. ಮಾವಯ್ಯನವರನ್ನು ಗಮನಿಸಿದ ಭಾಗ್ಯ ಏನನ್ನೋ ನಿರ್ದರಿಸಿದವಳಂತೆ ಶೃತಿ ಪೆಟ್ಟಿಗೆಯನ್ನು ಹಿಡಿದು ಬಂದಳು. ಈರಣ್ಣನ ಮುಂದೆ ಕುಳಿತ ಬಸವಣ್ಣನಂತೆ ಕುಳಿತಿದ್ದ ಅತ್ತೆಯವರ ಕಡೆ ನೋಡಿದಳು. ಅವರು ಸೊಸೆಯ ಇಂಗಿತವನ್ನರಿತವರಂತೆ ಹಾಡು ಎಂದು ಸನ್ನೆ ಮಾಡಿದರು. “ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ.., ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ.., ತಲ್ಲಣಿಸದಿರು ಕಂಡ್ಯಾ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯಬೇಡ ಮುಂತಾದ ಕೀರ್ತನೆಗಳನ್ನು ಹಾಡಿ ಮುಗಿಸುತ್ತಿದ್ದಂತೆ “ಹೂಂ ಹೌದು ತಾಯೀ, ರಕ್ಷಕ ಅವನಿರುವಾಗ ನಮಗೇಕೆ ಚಿಂತೆ, ನಡೆಯಿರಿ ಮಲಗೋಣ. ಹೊತ್ತು ಬಹಳವಾಗಿದೆ. ಮುಂಜಾನೆ ತಡವಾಗಿ ಎದ್ದರೆ ನಾಳೆಯ ಕೆಲಸಗಳಿಗೆ ತೊಂದರೆಯಾದೀತು.” ಎಂದು ಕುಳಿತಲ್ಲಿಂದ ಎದ್ದು “ಶೀನೂ” ಎಂದು ಕರೆದರು.

“ಅವನಾಗಲೇ ಮಹಡಿಯ ಮೇಲಿನ ರೂಮಿಗೆ ಹೋಗಿದ್ದಾಯಿತು. ಅವನಿಗೆ ಸಾಕಾಗಿರಬಹುದು.” ಎಂದು ಹೇಳಿ ಜೋಯಿಸರನ್ನು ಹಿಂಬಾಲಿಸಿದರು ಸೀತಮ್ಮ. ಹಾಗೇ ಭಾಗ್ಯಳ ತಲೆಯನ್ನು ಪ್ರೀತಿಯಿಂದ ನೇವರಿಸಿದ್ದನ್ನು ಕಂಡ ನಾರಣಪ್ಪ “ಅಮ್ಮ ಈ ನಮ್ಮ ಹುಡುಗಿ ಎಂಥಹ ಸದ್ಗುಣ ಸಂಪನ್ನೆ ತಾಯಿ. ಬಾಯಿಯಿಂದ ಹೇಳುವುದೇ ಬೇಡ, ಭರವಸೆಯ ಬೆಳಕನ್ನು ನೀಡುವ ಪುಣ್ಯವಂತೆ” ಎಂದರು.

“ಹೌದು ನಾರಣಪ್ಪ, ಈ ಪುಣ್ಯವತಿಗೆ ಆ ದೇವರ ಕೃಪಾಕಟಾಕ್ಷ ಸಿಕ್ಕರೆ ಸಾಕು” ಎಂದು ಮಲಗಲು ಹೋದರು ಸೀತಮ್ಮ.

ಹ್ಹ..ಹ್ಹ ಈ ಮನೆಯ ಚಿಂತೆಗೆ ಮೂಲಕಾರಣ ನಾನೇ ಆಗಿದ್ದರೂ ಈ ಮನೆಯ ಜನರು ನನ್ನನ್ನೇ ಹೊಗಳುತ್ತಿದ್ದಾರೆ ಎಂದು ಮನಸ್ಸಿನಲ್ಲೇ ಅಂದುಕೊಂಡಳಾದರೂ, ಮರುಕ್ಷಣ ಇದಕ್ಕೆ ಕಾರಣ ನಾನೊಬ್ಬಳೇ ಹೇಗಾದೇನು? ದೇವರೇ ನಿನಗೆ ಗೊತ್ತಿಲ್ಲದ್ದು ಏನಿದೆ ದಯಮಾಡಿ ಕೃಪೆತೋರು ಎಂದು ಅವರುಗಳ ಹೇಳಿಕೆಗೆ ಪ್ರತಿಕ್ರಯಿಸದೆ ಶೃತಿಪೆಟ್ಟಿಗೆಯನ್ನು ಅದರ ಸ್ವಸ್ಥಾನದಲ್ಲಿರಿಸಿ ತನ್ನ ರೂಮಿನ ಕಡೆ ನಡೆದಳು ಭಾಗ್ಯ.

ರೂಮೊಳಗೆ ಬಂದ ಭಾಗ್ಯ ಮಂಚದ ಕಡೆಗೆ ಕಣ್ಣಾಡಿಸಿದಳು. ಶ್ರೀನಿವಾಸ ಆಗಲೇ ನಿದ್ರೆಗೆ ಶರಣಾಗಿದ್ದು ಕಾಣಿಸಿತು. ಈ ಮನುಷ್ಯನನ್ನು ಅರ್ಥಮಾಡಿಕೊಳ್ಳುವುದಕ್ಕೇ ಆಗದು. ಹಿರಿಯರೆಲ್ಲರ ಚಿಂತೆಗೆ ಕಾರಣವೇನೆಂದು ತಿಳಿದಿದ್ದರೂ ತಿಳಿಯದ ಹಾಗಿರುತ್ತಾರೆ ಎಂದುಕೊಂಡು ಸ್ವಲ್ಪ ಹೊತ್ತು ದೇವರಧ್ಯಾನ ಮಾಡಿ ಮಲಗಿದಳು. ಸಂಗೀತದ ಪ್ರಭಾವವೋ, ಏನಾದರೂ ಆಗಲಿ ಎಂಬ ತೀರ್ಮಾನವೋ, ಅಂತೂ ಮಲಗಿದ ಕೂಡಲೇ ನಿದ್ರಾದೇವಿಯ ಮಡಿಲನ್ನು ಸೇರಿದಳು.

‘ಎಂಟು ವರ್ಷಕ್ಕೆ ಮಗ ದಂಟೆಂದ’ ಎನ್ನುವ ಹಾಗೆ ಮಗನ ಮದುವೆಯಾಗಿ ಹತ್ತು ವರ್ಷಗಳಾದಮೇಲೆ ವಿದುರಾಶ್ವತ್ಥಕ್ಕೆ ಹೋಗಲು ಮನಸ್ಸು ಮಾಡಿದ್ದು, ಅದಕ್ಕೆ ಪ್ರೇರಕರಾದ ಜೋಯಿಸರ ಸ್ನೇಹಿತರಿಗೂ ಮನದಲ್ಲೇ ವಂದಿಸುತ್ತಾ ಸೀತಮ್ಮನವರು ನೆಮ್ಮದಿಯಿಂದ ಮಲಗಿ ನಿದ್ರೆಹೋದರು.

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=36101

ಬಿ.ಆರ್.ನಾಗರತ್ನ, ಮೈಸೂರು

5 Responses

  1. ನಯನ ಬಜಕೂಡ್ಲು says:

    ಸುಂದರವಾದ ಕಥೆ

  2. ಧನ್ಯವಾದಗಳು.. ನಯನ ಮೇಡಂ

  3. ಶಂಕರಿ ಶರ್ಮ says:

    ಅತ್ಮೀಯವಾಗಿ ಓದಿಸಿಕೊಂಡು ಹೋಗುತ್ತಿರುವ ಸುಂದರ ಕಥಾಹಂದರ.

  4. Padma Anand says:

    ಕಥಾನಾಯಕಿ ಮನೋನಿಗ್ರಹದೊಂದಿಗೆ ಪರಿಸ್ಥಿತಿಗಳನ್ನು ನಿಭಾಯಿಸುವ ಪರಿ ಸೊಗಸಾಗಿ ಮೂಡಿಬರುತ್ತಿವೆ.

  5. ಧನ್ಯವಾದಗಳು ಶಂಕರಿ… ಮೇಡಂ… ಮತ್ತು ಪದ್ಮಾ ಮೇಡಂ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: