ಕಾದಂಬರಿ: ನೆರಳು…ಕಿರಣ 31

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..

ಮಾರನೆಯ ದಿನ ಅತ್ತೆಯೊಡಗೂಡಿ ತನ್ನ ತವರುಮನೆ ತಲುಪಿದಳು ಭಾಗ್ಯ. ಮಗಳ ಆಗಮನ ದಂಪತಿಗಳಿಗೆ ಖುಷಿ ತಂದರೂ ಜೊತೆಗೆ ಅವಳ ಅತ್ತೆಯವರೂ ಬಂದದ್ದು ಸ್ವಲ್ಪ ನಿರಾಸೆ ಮೂಡಿಸಿತು. ಅದನ್ನು ಬಹಿರಂಗವಾಗಿ ತೊರ್ಪಡಿಸಿಕೊಳ್ಳದೆ “ಅಂತೂ ನಾವು ಮಾಡಲಾಗದ್ದನ್ನು ನೀವು ಸಾಧಿಸಿದ್ದೀರಿ. ನಮ್ಮ ಮಗಳ ಆಕಾಂಕ್ಷೆಯನ್ನು ಪೂರೈಸಲು ಮನೆಯವರೆಲ್ಲ ಟೊಂಕಕಟ್ಟಿ ನಿಂತಿದ್ದೀರಿ” ಎಂದು ಹರ್ಷ ವ್ಯಕ್ತಪಡಿಸಿದಳು ಲಕ್ಷ್ಮಿ.

ಅದಕ್ಕೆ ಸೀತಮ್ಮನವರು “ಹಣವಿದ್ದರೇನು ಮಗಳೇ ಋಣವಿದ್ದಷ್ಟೇ ಮುಟ್ಟುವುದು, ಎಂಬಂತೆ ನಮ್ಮದೇನಿದ್ದರೂ ನಮ್ಮ ಮನೆಯಂಗಳಕ್ಕೇ ಸೀಮಿತವಾಯ್ತು. ಅವಳಿಗೆ ಹೆಚ್ಚಿನ ಸಾಮರ್ಥ್ಯವಿದ್ದರೂ ಅಷ್ಟೇ ಲಭ್ಯ” ಎಂದರು.

ಅವರ ಮಾತಿನ ಅರ್ಥ ಭಾಗ್ಯಾಳಿಗಾದರೂ ಉತ್ತರಿಸುವ ಗೋಜಿಗೆ ಹೋಗದೆ ಮೌನಕ್ಕೆ ಶರಣಾದಳು. ಇವರಿಗೆಲ್ಲ ಏನಾಗಿದೆ. ಮದುವೆಗೆ ಮೊದಲು ಹೆಣ್ಣು ಮಕ್ಕಳಾದರೇನಂತೆ, ಎಲ್ಲದರಲ್ಲೂ ಮುಂದಿರಬೇಕು, ಹಾಗೆ ಹೀಗೆಂದು ಹೇಳುತ್ತಾ ಪ್ರತಿಯೊಂದರಲ್ಲೂ ತಿಳಿವಳಿಕೆ ಮೂಡಿಸುತ್ತಾ ಮನೆಯನ್ನು, ವ್ಯವಹಾರವನ್ನೂ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದವರು. ಹೂಂ ಇವರಿಗೂ ಬೇರೆಯವರ ಮಾತುಗಳನ್ನು ಕೇಳಿ ಭಯವಾಗಿರಬೇಕು. ಹೋದ ಸಾರಿ ಬಂದಾಗ ಡಾಕ್ಟರ್ ಹತ್ತಿರ ಹೋಗಿ ಬರೊಣವೆಂದು ಹಿಂದೆ ಬಿದ್ದಿದ್ದರು. ನಾನೂ ಅಲ್ಲಿಗೆ ಹೋಗಿ ಬಂದ ವಿಷಯ ಹೇಳದೆ ಮುಚ್ಚಿಟ್ಟಿದ್ದೆ.

ಅದನ್ನು ತಿಳಿದು ಇನ್ನೇನೋ ಹೇಳಿ ನನ್ನವರನ್ನು ಒತ್ತಾಯಿಸಿ ಅದರಿಂದಾಗುವ ಪರಿಣಾಮ… ಬೇಡಪ್ಪಾ..ಬೇಡವೆಂದು ಸುಮ್ಮನಿದ್ದೆ. ಹೂಂ ಏನಾದರಾಗಲೀ ‘ಸಂಸಾರದ ಗುಟ್ಟು ವ್ಯಾಧಿರಟ್ಟು.’ ಎನ್ನುವಂತೆ ಈ ವಿಷಯವನ್ನು ಗುಪ್ತವಾಗಿಟ್ಟುಕೊಳ್ಳುವುದೇ ಉತ್ತಮ. ಪಾಪ ಹಿರಿಯರಾದ ಅತ್ತೆ, ಮಾವ ನಿಸ್ಸಹಾಯಕರಾಗಿದ್ದಾರೆ. ನನ್ನ ಗಂಡನು ಕೆಟ್ಟವರಲ್ಲ. ಅದ್ಯಾವ ಲೆಕ್ಕಾಚಾರದ ಭೂತ ಹೊಕ್ಕಿದೆಯೋ ಕಾಣೆ ಎಂದುಕೊಳ್ಳುತ್ತಾ “ಅತ್ತೆ, ಭಾವನಾಳ ಮನೆಗೆ ಹೋಗೋಣವೇ? ಅವರನ್ನು ಕರೆದು ಅಲ್ಲಿಂದಲೇ ಹಿಂದಿರುಗೋಣ. ಪೂಜೆಗೆ ತಯಾರಿ ಮಾಡಿಕೊಳ್ಳುವುದಿದೆ.” ಎಂದಳು ಭಾಗ್ಯ.

ಮಗಳ ಮಾತಿನಿಂದ ಎಚ್ಚೆತ್ತ ಲಕ್ಷ್ಮಿ ಅವರಿಬ್ಬರಿಗೂ ಕುಂಕುಮವಿಟ್ಟು ತಾಂಬೂಲ ನೀಡಿ ಬೀಳ್ಕೊಟ್ಟರು.

ಕೇಶವಯ್ಯನವರ ಮನೆಗೆ ಹೋಗುವಾಗ ದಾರಿಯಲ್ಲಿ ಸೀತಮ್ಮನವರು “ಇನ್ನೂ ಸ್ವಲ್ಪ ಹೊತ್ತು ಇರಬಹುದಿತ್ತಲ್ಲ ಭಾಗ್ಯ. ಪಾಪ ನಿನ್ನ ತಂದೆ ತಾಯಿಗಳು ಮುಖ ಚಿಕ್ಕದು ಮಾಡಿಕೊಂಡರು” ಎಂದರು.

“ಇಲ್ಲ ಅತ್ತೆ, ಹೆಚ್ಚು ಹೊತ್ತಿದ್ದರೆ ಭಾವನಾಳ ಮನೆಯಲ್ಲಿ ಮಕ್ಕಳ ಜೊತೆ ಸ್ವಲ್ಪ ಹೊತ್ತು ಕಾಲ ಕಳೆಯಲಾಗುವುದಿಲ್ಲ. ಅವು ಮಲಗಿಬಿಡುತ್ತವೆ ಎಂದು ಅವಸರ ಮಾಡಿದೆ. ಅದರಲ್ಲೇನು ತಪ್ಪು” ಎಂದಳು ಭಾಗ್ಯ.

ಕೇಶವಯ್ಯ, ರಾಧಮ್ಮನವರು ಸಡಗರದಿಂದ ಇಬ್ಬರನ್ನೂ ಬರಮಾಡಿಕೊಂಡರು. ಭಾಗ್ಯಳ ಸಾಧನೆಯನ್ನು ಬಾಯ್ತುಂಬ ಹೊಗಳಿದರು. ಅವರ ಮನೆಗೆ ಬಂದಿದ್ದ ನೆಂಟರಿಗೆ ಭಾಗ್ಯಳನ್ನು ಅಭಿಮಾನದಿಂದ ಪರಿಚಯಿಸಿದರು. ಆ ಮಹಾತಾಯಿ ಇವಳು ಭಾವನಾಳ ಅಕ್ಕ ಎಂದಕೂಡಲೇ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. “ನಿಮಗೆ ಮಕ್ಕಳಿಲ್ಲವೇ? ಮದುವೆಯಾಗಿ ಎಷ್ಟು ವರ್ಷಗಳಾದವು?” ಎಂದು. ಅಲ್ಲಿಗೆ ಬಂದದ್ದು ಭಾವನಾಳ ಮಕ್ಕಳ ಮುದ್ದುಮುಖಗಳನ್ನು ನೋಡಿ ಸ್ವಲ್ಪಹೊತ್ತು ಅವರೊಡನೆ ಆಟವಾಡಿ ಹೋಗಲೆಂದು. ಇಲ್ಲಿವರ ಮಾತುಗಳ ನಡುವೆಯೇ ಭಾವನಾ, ಮಕ್ಕಳು ಎಂದು ಕೇಳಿದಳು.

“ಸುಬ್ಬುವಿನ ಗೆಳೆಯನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟಿದ್ದಾರೆ. ಅವರೆಲ್ಲ ಅಲ್ಲಿಗೆ ಹೋಗಿದ್ದಾರೆ. ನಾವೂ ಹೋಗಬೇಕಾಗಿತ್ತು. ಅಮ್ಮನಿಗೆ ಇನ್ನೂ ಅಷ್ಟೊಂದು ಆರಾಮಾಗಿಲ್ಲ. ಆದ್ದರಿಂದ ಹೋಗಲಿಲ್ಲ” ಎಂದರು ರಾಧಮ್ಮ.

ಸದ್ಯ ಬಚಾವಾಗಲು ಸರಿಯಾದ ಕಾರಣ ಸಿಕ್ಕಿತೆಂದು ಗೋದೂ ಅಜ್ಜಿಯವರನ್ನು ಮಾತನಾಡಿಸಿಕೊಂಡು ಬರುತ್ತೇನೆಂದು ಅವರ ಕೋಣೆಗೆ ಹೋದಳು ಭಾಗ್ಯ. ಅವಳನ್ನೇ ಹಿಂಬಾಲಿಸಿ ಬಂದರು ರಾಧಮ್ಮ. ಔಪಚಾರಿಕವಾಗಿ ಅವರಿಬ್ಬರೊಡನೆ ಮಾತನಾಡಿ ಮತ್ತೆಲ್ಲಿಗೋ ಕರೆಯಲು ಹೋಗಬೇಕಾಗಿದೆ ಎಂದು ಅವರೆಲ್ಲರನ್ನೂ ಪೂಜೆಗೆ ಬರಬೇಕೆಂದು ಆಹ್ವಾನಿಸಿ ಹೊರಟವಳನ್ನು ಕೇಶವಯ್ಯ ದಂಪತಿಗಳು ಹೆಚ್ಚು ಒತ್ತಾಯ ಮಾಡದೆ ಕುಂಕುಮವಿತ್ತು ತಾಂಬೂಲ ನೀಡಿ ಕಳುಹಿಸಿಕೊಟ್ಟರು.

ಆ ದಂಪತಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದುದನ್ನು ನೋಡಿ ಅವರಿಗೆ ಮನದಲ್ಲೇ ನಮಿಸಿ ಅತ್ತೆಯವರೊಡನೆ ನಂಜುಂಡನ ರಥವನ್ನೇರಿ ತಮ್ಮ ಮನೆಯ ಕಡೆಗೆ ಹೊರಟರು ಸೀತಮ್ಮ ಮತ್ತು ಭಾಗ್ಯ. ಉತ್ಸಾಹದಿಂದ ಹೊರಟಿದ್ದ ಸೊಸೆಗೆ ತಂಗಿಯ ಮಕ್ಕಳ ಮುಖದರ್ಶನವಾಗಲೀ, ತಂಗಿಯ ದರ್ಶನವಾಗಲೀ ಆಗದೇ ಯಾರೋ ಮೂರನೆಯವರಿಂದ ಮನಸ್ಸಿಗೆ ನೋವಾಗುವಂತಹ ಪ್ರಶ್ನೆಗಳನ್ನು ಎದುರಿಸಬೇಕಾದ ಸಂದರ್ಭ ಬಂತು. ಏಕೋ ಹೊರಟುಬಂದ ಘಳಿಗೆಯೇ ಚೆನ್ನಾಗಿಲ್ಲ ಎಂದುಕೊಂಡರು ಸೀತಮ್ಮ. ಭಗವಂತಾ ಈ ಹೆಣ್ಣುಮಕ್ಕಳ ಬವಣೆಯನ್ನು ಯಾವಾಗ ಕೊನೆಗಾಣಿಸುತ್ತೀಯೆ. ಎಲ್ಲವನ್ನೂ ಕೊಟ್ಟ ನೀನು ನಮ್ಮ ಮನೆಗೊಂದು ಕಂದನನ್ನು ಕರುಣಿಸಲು ಏಕಿಷ್ಟು ಸತಾಯಿಸುತ್ತಿದ್ದೀಯೆ ಎಂದು ಭಗವಂತನನ್ನು ಮನಸ್ಸಿನಲ್ಲಿಯೇ ಬೇಡಿದರು.

ಎಲ್ಲ ಕೆಲಸ ಮುಗಿಸಿ ಹೊರಾಂಗಣದಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ ನಾರಣಪ್ಪನಿಗೆ ನಂಜುಂಡನ ಗಾಡಿ ಬಂದು ನಿಂತದ್ದನ್ನು, ಅದರಿಂದ ಸೀತಮ್ಮ, ಭಾಗ್ಯ ಇಳಿದಿದ್ದು ನೋಡಿ ಹೊರಗಿನ ಗೇಟನ್ನು ತೆರೆದು ನಿಂತರು.

ಒಳಗೆ ಬಂದ ಅವರಿಬ್ಬರೂ ಅಲ್ಲಿಯೇ ಹೊರಗಡೆ ಕೊಳಗದಲ್ಲಿದ್ದ ನೀರಿನಿಂದ ಕೈಕಾಲುಗಳನ್ನು ತೊಳೆದುಕೊಂಡು ಒಳನಡೆದರು. ಮುಂಭಾಗಿಲನ್ನು ಭದ್ರಪಡಿಸಿ ಬಂದ ನಾರಣಪ್ಪ “ಇದೇನು ಅಮ್ಮಾ, ಭಾಗ್ಯಮ್ಮಾ ಹೀಗೆ ಹೋಗಿ ಹಾಗೆ ಬಂದುಬಿಟ್ಟಿರಿ. ಏಕೆ ಯಾರೂ ಭೇಟಿಯಾಗಲಿಲ್ಲವೇನು?” ಎಂದು ಕೇಳಿದರು.

“ಎಲ್ಲರೂ ಸಿಕ್ಕಿದ್ದರು ನಾಣಜ್ಜ, ಆದರೆ ಭಾವನಾ ಅವಳ ಮಕ್ಕಳು ಮನೆಯಲ್ಲಿರಲಿಲ್ಲ. ಅದಕ್ಕೇ ಬೇಗ ಬಂದೆವು” ಅವರಿಂದ ಉತ್ತರಕ್ಕೂ ಕಾಯದೇ ತನ್ನ ರೂಮಿಗೆ ಹೊರಟುಹೋದಳು ಭಾಗ್ಯ.

ಆ ನಂತರ ಅಲ್ಲಿ ನಡೆದ ಸಂಗತಿಗಳನ್ನು ಮೆಲುದನಿಯಲ್ಲಿ ಸೀತಮ್ಮ ತಿಳಿಸಿ ಪೇಚಾಡಿಕೊಂಡರು.

ಅದನ್ನೆಲ್ಲ ಕೇಳಿದ ನಾರಣಪ್ಪ ಈ ಮನೆಯಲ್ಲಿ ಪೂಜೆ ಪುನಸ್ಕಾರಗಳಿಗೇನು ಬರವಿಲ್ಲ. ಆದರೆ ಈ ಮಕ್ಕಳಿಬ್ಬರೂ ಒಂದಲ್ಲ ಒಂದು ಕೆಲಸಗಳನ್ನು ಹಚ್ಚಿಕೊಂಡು ಯಾವಾಗ ನೋಡಿದರೂ ಪುರುಸೊತ್ತಿಲ್ಲದಂತೆ ಇರುತ್ತಾರೆ. ಸ್ವಲ್ಪ ಕಾಲ ಇವುಗಳಿಗೆಲ್ಲ ವಿರಾಮ ಹಾಕಿ ಎಲ್ಲಿಯಾದರೂ ವಿಹಾರಕ್ಕೆಂದು ಹೋಗಿಬಂದರೆ ಈ ಜಂಝಾಟದಿಂದ ದೂರ ಮನಸ್ಸು ಪ್ರಶಾಂತವಾಗಿರುತ್ತದೆ. ಅದರಿಂದ ಒಳ್ಳೆಯದಾದೀತು. ಈಗಿನ ಕಾಲದಲ್ಲಿ ಅನೇಕ ಅನುಕೂಲಗಳೂ ಬಂದಿವೆ. ಒಮ್ಮೆ ಇಬ್ಬರೂ ವೈದ್ಯರಲ್ಲಿ ಪರೀಕ್ಷೆ ಕೂಡ ಮಾಡಿಸಿಕೊಳ್ಳಬಹುದು. ಇಂತಹವನ್ನೆಲ್ಲ ಬುದ್ಧಿವಂತರಿಗೆ ನಾನು ಹೇಳಲು ಸಾಧ್ಯವೇ..ಅದರಲ್ಲೂ ಆ ಚಿಕ್ಕ ಯಜಮಾನ ಜಾತಕ, ಲೆಕ್ಕಾಚಾರವೆಂದು ಬಿಟ್ಟು ಬೇರೆ ಹೋಗದಂತಹವನು. ಏನಾದರೂ ಕೆರಳಿಬಿಟ್ಟರೆ..

“ಏಕೆ ನಾರಾಣಪ್ಪ ಸುಮ್ಮನಾಗಿಬಿಟ್ಟಿರಿ, ಈ ಮಕ್ಕಳಿಗೂ ನಮ್ಮಂತೆಯೇ ಸಂತಾನಫಲ ದೂರವಿರಬೇಕು. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಲೇಬೇಕು. ನಾವು ಆತಂಕ ಅನುಭವಿಸುವುದು ಇದ್ದೇ ಇದೆ.” ಎಂದು ತಮ್ಮ ರೂಮಿನ ಕಡೆಗೆ ಹೋದರು ಸೀತಮ್ಮ.

ರೂಮಿಗೆ ಬಂದ ಭಾಗ್ಯ ಬಟ್ಟೆ ಬದಲಾಯಿಸಲೂ ಮನಸ್ಸು ಬಾರದೆ ಹಾಗೇ ಹಾಸಿಗೆಯ ಮೇಲೆ ಉರುಳಿಕೊಂಡಳು. ಛೇ ಎಲ್ಲಿಗೇ ಹೋಗಲಿ ಮದುವೆಯಾಗಿ ಎಷ್ಟು ವರ್ಷಗಳಾಯಿತು? ಮಕ್ಕಳೆಷ್ಟು? ಎಂಬ ಪ್ರಶ್ನೆಗಳನ್ನೇ ಕೇಳಿ ಕೇಳಿ ಕಿವಿ ತೂತು ಬಿದ್ದಿದೆ. ಮನಸ್ಸು ವ್ಯಾಕುಲಗೊಂಡು ಆಲೋಚನೆಗೆ ಪಕ್ಕಾಗಿ ಅದೇ ಗುಂಗಿನಲ್ಲಿದ್ದ ಅವಳಿಗೆ ತನ್ನ ಗಂಡ ಶ್ರೀನಿವಾಸ ರೂಮಿನೊಳಕ್ಕೆ ಬಂದಿದ್ದರ ಅರಿವಾಗಿ ಎದ್ದು ಕುಳಿತಳು.

“ಅರೆ ಭಾಗ್ಯಾ, ಹುಷಾರಾಗಿದ್ದೀ ತಾನೆ,” ಎಂದು ಕಕ್ಕುಲತೆಯಿಂದ ಹಣೆಮುಟ್ಟಿನೋಡಿದನು ಶ್ರೀನಿವಾಸ. ಅದುವರೆಗೂ ತಡೆದಿದ್ದ ದುಗುಡ ಕಣ್ಣೀರಾಗಿ ಹರಿಯಿತು. ಅವನೆದೆಯಲ್ಲಿ ಮುಖವಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಕೆಳಗಡೆ ತಾಯಿಯಿಂದ ವಿಷಯವೇನೆಂದು ತಿಳಿದಿದ್ದ ಅವನು “ನೋಡು ಭಾಗ್ಯ, ಈ ವಿಷಯದಲ್ಲಿ ನೀನು ಪದೆಪದೇ ಯೋಚಿಸಿ ತಲೆಕೆಡಿಸಿಕೊಳ್ಳಬೇಡ. ಜಾತಕಫಲ ಎಂದಿಗೂ ಸುಳ್ಳಾಗುವುದಿಲ್ಲ. ಯಾರ್‍ಯಾರದ್ದೋ ಮಾತುಗಳಿಂದ ತಲೆಕೆಡಿಸಿಕೊಂಡು ಮನೆಯಲ್ಲಿನ ವಾತಾವರಣ ಹದಗೆಡಿಸಬೇಡ. ಹೇಗಿದ್ದರೂ ಸಿದ್ಧವಾಗಿದ್ದೀಯೆ, ಮುಖ ತೊಳೆದುಕೋ, ಅಂಗಡಿಗೆ ಹೋಗಿ ಗೌರಿಯಮ್ಮನವರಿಗೆ ಒಂದು ಸೀರೆ ಕೊಂಡು ತರೋಣ. ಪೂಜೆಯ ದಿನ ಅವರಿಗೆ ಕೊಟ್ಟು ಆಶೀರ್ವಾದ ಪಡೆದುಕೊಳ್ಳುವಿಯಂತೆ.” ಎಂದು ಹೇಳಿ ರೂಮಿನಿಂದ ಹೊರನಡೆದ ಶ್ರೀನಿವಾಸ.

ಹೂಂ ಬರಿಯ ಜಾತಕದ ಕೊನೆ ಹಿಡಿದು ಜಗ್ಗುತ್ತಿದ್ದಾರೆ ಪುಣ್ಯಾತ್ಮ. ಒಂದೇ ಒಂದು ಸಾರಿ ನಡಿ ವೈದ್ಯರ ಹತ್ತಿರ ಹೋಗಿ ಬರೋಣವೆಂಬ ಮಾತೇ ನಾಲಿಗೆಯಲ್ಲಿಲ್ಲ. ಮತ್ತೆ ನಾನೇನಾದರೂ ಈ ಬಗ್ಗೆ ಕೆದಕಿದರೆ..ಏನೂ ಪ್ರಯೋಜನವಿಲ್ಲ ಪರಿಣಾಮ ಏನಾಗುತ್ತೆದೆಯೋ ಎಂದು ಭಯವಾಗುತ್ತೆ ಎಂದುಕೊಂಡು ರೂಮಿನಿಂದ ಗಂಡನನ್ನು ಹಿಂಬಾಲಿಸಿ ಕೆಳಗಿಳಿದು ಬಂದಳು ಭಾಗ್ಯ.

ಮೊದಲೇ ನಿಗದಿಪಡಿಸಿದ ದಿನ ಪೂಜೆಯೆಲ್ಲಾ ಸಾಂಗವಾಗಿ ನಡೆಯಿತು. ಆಹ್ವಾನ ಕೊಟ್ಟಿದ್ದ ಕುಟುಂಬ ಸದಸ್ಯರು, ಆತ್ಮೀಯರೆಲ್ಲರೂ ಆಗಮಿಸಿದ್ದರು. ಅಪ್ಪ ಮಗ ಜೋಡಿಯಾಗಿ ಕುಳಿತು ಪೂಜೆ ಮಾಡಿದ ರೀತಿಯನ್ನು ಬಂದವರೆಲ್ಲಾ ಹೊಗಳಿದ್ದೇ ಹೊಗಳಿದ್ದು. ತನಗೆ ತೋರಿಸಿದ ಗೌರವಾದರಗಳಿಂದ ಗೌರಿಯಮ್ಮನವರ ಮನಸ್ಸು ತುಂಬಿಬಂದಿತ್ತು. “ಸ್ವರ ಸಂಗೀತ ಶಾಲೆ” ಎಂಬ ಆಭಿದಾನವಿತ್ತು ಆ ಶಾಲೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಭಾಗ್ಯಳಿಗೆ ವಹಿಸಿ ಆಶೀರ್ವದಿಸಿದರು. ಬಂದವರೆಲ್ಲರೂ ಆ ಮನೆಯವರನ್ನೆಲ್ಲಾ ಅಭಿನಂದಿಸುತ್ತಾ ಶುಭ ಹಾರೈಸಿದರು. ಅವರು ನೀಡಿದ ಸತ್ಕಾರವನ್ನು ಸ್ವೀಕರಿಸಿ ತೆರಳಿದರು.

ಭಾಗ್ಯಳು ಸಂಗೀತ ಪಾಠಶಾಲೆ ಪ್ರಾರಂಭಿಸಿದ ಮೇಲೆ ಅವಳ ದಿನಚರಿಯನ್ನು ಬದಲಾಯಿಸಿಕೊಳ್ಳಬೇಕಾಯಿತು. ಬೆಳಗ್ಗೆ ನಾಲ್ಕು ಘಂಟೆಗೆ ಎಚ್ಚರ, ನಂತರ ಪ್ರಾತಃವಿಧಿಗಳನ್ನು ಮುಗಿಸಿ ಗೌರಿಯಮ್ಮ ಹೇಳಿಕೊಟ್ಟ ಕೆಲವೊಂದು ಯೋಗಾಸನ ಪ್ರಾಣಾಯಾಮಗಳನ್ನು ಮಾಡಿ ಮನೆಯ ಹೊರಾಂಗಣದಲ್ಲಿ ನಾಲ್ಕಾರು ಸುತ್ತು ಹಾಕಿ, ಸ್ನಾನಮಾಡಿ ಶುಚಿರ್ಭೂತಳಾಗಿ ಪೂಜಾ ಕೋಣೆಯನ್ನು ಸ್ವಚ್ಛಮಾಡಿ, ಪೂಜೆಗೆ ಅಣಿಗೊಳಿಸುತ್ತಿದ್ದಳು. ನಂತರ ತನ್ನ ಬೆಳಗಿನ ಕಷಾಯ ಸೇವನೆ. ಆನಂತರ ಸಂಗೀತಾಭ್ಯಾಸಕ್ಕೆ ಕುಳಿತುಕೊಳ್ಳುತ್ತಿದ್ದಳು. ಆರು ಗಂಟೆಯಿಂದ ಒಂಭತ್ತು ಗಂಟೆಯವರೆಗೆ ಬೆಳಗಿನ ವಿದ್ಯಾರ್ಥಿಗಳ ಬ್ಯಾಚ್. ಮಧ್ಯಾನ್ಹ ಕೆಲವು ಮಹಿಳೆಯರು ಬರುತ್ತಿದ್ದರು. ದೇವರನಾಮ, ಸಂಪ್ರದಾಯದ ಹಾಡುಗಳು, ಜನಪದ ಗೀತೆಗಳು, ವಿಭಾಗದಲ್ಲಿ ಅವರ ಆಸಕ್ತಿ. ಅದನ್ನು ಉದಾಸೀನ ಮಾಡದೆ ಕಲಿಸುತ್ತಿದ್ದಳು. ಸಂಜೆ ಐದರಿಂದ ಏಳೂವರೆ ವರೆಗೆ ಮತ್ತೊಂದು ಬ್ಯಾಚ್. ಸೋಮವಾರದಿಂದ ಶನಿವಾರದವರೆಗೆ ಯಾರಿಂದ ಯಾರಿಗೂ ತೊಂದರೆಯಾಗದಂತೆ ವಯೋಮತಿಯನ್ನು  ಆಧರಿಸಿ ಗುಂಪುಗಳನ್ನು ಮಾಡಿದ್ದಳು.

ಗೌರಿಯಮ್ಮನವರು ಇಟ್ಟಿದ್ದ ನಂಬಿಕೆ ಹುಸಿಯಾಗದಂತೆ ಭಾಗ್ಯ ಶ್ರದ್ಧಾಭಕ್ತಿಗಳಿಂದ ತರಗತಿಗಳನ್ನು ನಡೆಸತೊಡಗಿದಳು. ದಿನಕಳೆದಂತೆ ಅವಳು ಹೇಳಿಕೊಡುವ ರೀತಿ, ಸಹನೆ, ಶಿಸ್ತು, ಇವುಗಳೆಲ್ಲ ಸುತ್ತಲಿನವರನ್ನು ಆಕರ್ಷಿಸಿದವು. ಪೋಷಕರು ತಮ್ಮ ಮಕ್ಕಳನ್ನು ಸಂಗೀತ ಪಾಠಕ್ಕೆ ಸೇರಿಸಲು ಮುಗಿಬೀಳತೊಡಗಿದರು. 

ಸುಮ್ಮನೇ ಸೇರಿಸಿಕೊಂಡು ಬಿಟ್ಟರಾಯಿತೇ? ನ್ಯಾಯ ಒದಗಿಸಲು ಕಷ್ಟವಾಗುತ್ತದೆ ಎದುಕೊಂಡಿದ್ದ ಭಾಗ್ಯ ಗೌರಿಯಮ್ಮನವರು ಅಲ್ಲಿಗೆ ಬಂದಾಗ ತನ್ನಲ್ಲಿರುವ ಶಿಷ್ಯರ ಸಂಖ್ಯೆ, ಕಲಿಕೆಗೆ ತಯಾರಿಸಿದ್ದ ವೇಳಾಪಟ್ಟಿ ಎಲ್ಲವನ್ನೂ ಅವರಿಗೆ ವಿವರಿಸಿದಳು. ಅದನ್ನು ಆಲಿಸಿದ ಗೌರಿಯಮ್ಮನವರು “ನೀನು ಹೇಳುವುದೆಲ್ಲಾ ಸರಿ ಭಾಗ್ಯ, ಆದರೆ ನೀನು ಕಲಿಸುವ ವಿಧಾನವು ಬಹಳ ಜನರಿಗೆ ಆಪ್ತವಾಗಿದೆ. ಅದಕ್ಕೇ ಅವರುಗಳು ವಿದ್ಯಾರ್ಥಿಗಳನ್ನು ಕಳುಹಿಸಲು ಉತ್ಸುಕರಾಗಿದ್ದಾರೆ. ಇನ್ನೊಂದೆರಡು ಬ್ಯಾಚ್ ಮಾಡಿ ಹೇಳಿಕೊಡು.” ಎಂದರು.

ಅದಕ್ಕೆ ಭಾಗ್ಯ “ಇಲ್ಲ ಆ ಮೇಡಂ, ನಾನು ದಿನ ಪೂರ್ತೀ ಇದರಲ್ಲೇ ಮುಳುಗಿದರೆ ಮನೆಯ ಜನ, ಗಂಡನ ಕಡೆಗೆ ಗಮನ ಹರಿಸಲಾಗುವುದಿಲ್ಲ. ನನಗೆ ಹಾಗಾಗುವುದು ಇಷ್ಟವಿಲ್ಲ. ಮೊದಲು ಬದುಕು, ನಂತರ ನನ್ನ ಪ್ರವೃತ್ತಿ. ಇದಕ್ಕೆ ನಾನೊಂದು ಯೋಚನೆ ಮಾಡಿದ್ದೇನೆ. ಅದನ್ನು ಹೇಳಲೇ ತಪ್ಪು ತಿಳಿಯಬೇಡಿ” ಎಂದಳು.

“ಅದೇನದು ಹೇಳು? ತಪ್ಪಾಗಿ ಭಾವಿಸುವಂಥದ್ದೇನಿದೆ. ನಿನಗೆ ಸಹಾಯ ಮಾಡುವಂತಹದ್ದೇನಾದರೂ ಇದ್ದರೆ ಹೇಳು. ನನ್ನ ಕೈಲಾದುದ್ದನ್ನು ನಾನು ಮಾಡುತ್ತೇನೆ.” ಎಂದರು ಗೌರಿಯಮ್ಮ.

“ಏನಿಲ್ಲ, ಎದುರು ಬೀದಿಯಲ್ಲಿರುವ ಹುಡುಗಿ ತಾರಾ ನಿಮ್ಮ ಬಳಿಯಲ್ಲಿಯೇ ಸಂಗೀತ ಕಲಿತಿದ್ದಾಳೆ. ಅವಳ ಬಳಿಗೆ ಪ್ರಾರಂಭದ ಪಾಠಗಳನ್ನು ಹೇಳಿಸಿಕೊಳ್ಳುವ ಮಕ್ಕಳನ್ನು ವಹಿಸಿಕೊಡಲು ಏರ್ಪಾಡು ಮಾಡಬಹುದು. ಇದರಿಂದ ಅವಳಿಗೂ ಕೊಂಚ ಸಹಾಯವಾಗುತ್ತದೆ. ನನಗೂ ನೆರವಾಗುತ್ತದೆ. ಆದರೆ ನೀವು ನಮ್ಮಲ್ಲಿಗೆ ಪಾಠಕ್ಕೆ ಕಳುಹಿಸುವವರನ್ನು ಒಪ್ಪಿಸಬೇಕು.”ಎಂದಳು ಭಾಗ್ಯ.

“ಅಲ್ಲ ಆ ಹುಡುಗಿ ಪಾಠ ಹೇಳಿಕೊಡಲು ಒಪ್ಪುತ್ತಾಳೆಂದರೆ ನಾನು ರೆಡಿ” ಎಂದರು ಗೌರಿಯಮ್ಮ.

“ಈಗಾಗಲೇ ನಾನು ಅವಳನ್ನು ವಿಚಾರಿಸಿದ್ದೇನೆ, ಅವಳೂ, ಅವರ ಮನೆಯವರೂ ಸಮ್ಮತಿಸಿದ್ದಾರೆ. ಅವರ ಮನೆ ಇರುವುದು ಡೆಡ್ ಎಂಡ್‌ನಲ್ಲಿ. ಪಕ್ಕದಲ್ಲಿ ಇರುವವರು ಅವಳ ಅಣ್ಣ ಅತ್ತಿಗೆ. ಅವರುಗಳಿಂದ ಏನೂ ಆಕ್ಷೇಪಣೆಯಿಲ್ಲ.” ಎಂದಳು ಭಾಗ್ಯ.

ಭಾಗ್ಯಳ ಯೋಚನೆ ಹಾಗೂ ಅವಳ ಉದಾರ ಗುಣ ಗೌರಿಯಮ್ಮನಿಗೆ ಮೆಚ್ಚುಗೆಯಾಯಿತು. “ಆಯಿತು, ನಾನು ಹೇಳಿ ಒಪ್ಪಿಸುತ್ತೇನೆ. ನೀನು ನಾನು ಮುಂದಿನ ತಿಂಗಳಿನಿಂದ ಕಳುಹಿಸುವ ವಿದ್ವತ್ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಪ್ರಾರಂಭಿಸಬೇಕು. ನನಗೆ ಆಗುತ್ತಿಲ್ಲ. ಸರೀನಾ” ಎಂದು ಕೇಳಿದರು ಗೌರಿಯಮ್ಮ.

ಅದೆಲ್ಲವನ್ನೂ ತಿಳಿದೇ ನಾನೀ ವ್ಯವಸ್ಥೆಗೆ ಮುಂದಾಗಿದ್ದು ಮೇಡಂ” ಎಂದಳು ಭಾಗ್ಯ.

“ನಿನಗೇನೇ ಆಲೋಚನೆಗಳು ಬರಲಿ ಅಥವಾ ಅಡಚಣೆಗಳು ಬರಲಿ ಸಂಕೋಚವಿಲ್ಲದೆ ನನಗೆ ಹೇಳಮ್ಮ. ನಿವಾರಿಸುತ್ತೇನೆ. ಯಾವುದೇ ಕಾರಣಕ್ಕೂ ಸಂಗೀತಶಾಲೆ ನಿಲ್ಲಬಾರದೆಂಬುದು ನನ್ನ ಕಳಕಳಿ ಭಾಗ್ಯ” ಎಂದರು.

“ಇಲ್ಲ ಗೌರಿಯಮ್ಮ, ನನಗೆ ಎಷ್ಟೇ ತೊಂದರೆ ಬಂದರೂ ನಿಲ್ಲಿಸದಂತೆ ನಡೆಸಿಕೊಂಡು ಬರುತ್ತೇನೆ. ಚಿಂತಿಸಬೇಡಿ.” ಎಂದು ಹೇಳುತ್ತಾ ಬಾವುಕಳಾದಳು ಭಾಗ್ಯ.

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=36017

ಬಿ.ಆರ್.ನಾಗರತ್ನ, ಮೈಸೂರು

9 Responses

  1. Vijayasubrahmanya says:

    ಮೈಸೂರಿನ ನಾಗರತ್ನ , ನಿಮ್ಮ ಕಾದಂಬರಿ ಚೆನ್ನಾಗಿ ಮೂಡಿ ಬರುತ್ತಾ ಇದೆ.

  2. ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ says:

    ತುಂಬಾ ಚೆನ್ನಾಗಿ ಬರುತಿದೆ….ಕಾದಂಬರಿ ನನಗೆ ಹಿಡಿಸಿತು ಗೆಳತಿ

  3. ಧನ್ಯವಾದಗಳು ಮೇಡಂ

  4. ನಯನ ಬಜಕೂಡ್ಲು says:

    ಬಹಳ ಸುಂದರ ಕಥೆ.

  5. ಧನ್ಯವಾದಗಳು ನಯನ ಮೇಡಂ

  6. ಧನ್ಯವಾದಗಳು ವಿಜಯ ಮೇಡಂ

  7. ಶಂಕರಿ ಶರ್ಮ says:

    ಸೊಗಸಾದ ಕಥಾಹಂದರ…ಧನ್ಯವಾದಗಳು ಮೇಡಂ.

  8. ಧನ್ಯವಾದಗಳು ಶಂಕರಿ ಮೇಡಂ

  9. Padma Anand says:

    ಭಾಗ್ಯಳಿಗೆ ಮನಸ್ಸಿನಲ್ಲಿ ಮಕ್ಕಳ ಇಂತೆ ಇದ್ದಾಗ್ಯೂ ಯಾರಿಗೂ ಸುಳಿವು ಬಿಟ್ಟುಕೊಡದ ಗುಣ ಹಾಗೆಯೇ ತನ್ನೊಂದಿಗೆ ಬೇರೆಯವರೂ ಮುಂದುವರಿಯಲಿ ಎಂಬ ಗುಣ, ಅತ್ಯಂತ ಮೆಚ್ಚುಗೆಯಾಯಿತು.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: