ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 9

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..

ಜನಸಾಮಾನ್ಯರಿಗೆ ವೈಜ್ಞಾನಿಕ ತಿಳುವಳಿಕೆಯ ಅಗತ್ಯವಿದೆ ಎಂದು ಜಿಯಾಲಜಿಸ್ಟ್‌ ಪ್ರಮಥನಾಥ ಬೋಸ್‌ ತಿಳಿದಿದ್ದರು.  ಅದು ಜನರ ಮಾತೃಭಾಷೆಯಲ್ಲಿಯೇ ದೊರೆಯಲಿ ಎಂದು ಆಶಿಸಿದ್ದರು. ಆ ಆಶಯದ ಪ್ರತಿರೂಪ ಅವರ “ಪ್ರಾಕೃತಿಕ ಇತಿಹಾಸ್”‌ ಎನ್ನುವ ಬಂಗಾಲಿ ಭಾಷೆಯ ಕೃತಿ. ಅವರು ತಮ್ಮ ತಿಳುವಳಿಕೆಯನ್ನು ಎಲ್ಲಾ ಭಾರತೀಯರಿಗೂ ತಲುಪಿಸುವ ಉದ್ದೇಶದಿಂದ ಮೂರು ವಾಲ್ಯೂಮ್‌ ಗಳಲ್ಲಿ “A History of Hindu civilization under British Rule” ಎಂಬ ಕೃತಿಯನ್ನು 1894-96ರ ಅವಧಿಯಲ್ಲಿ ಪ್ರಕಟಿಸಿದರು. ವೈಜ್ಞಾನಿಕ-ತಾಂತ್ರಿಕ ವಿದ್ಯಾಭ್ಯಾಸದ ಬಗೆಗೆ ಆಸಕ್ತಿಯನ್ನು ಜನಸಾಮಾನ್ಯರಲ್ಲಿ ಮೂಡಿಸುವ ಉದ್ದೇಶದಿಂದ ಸಂಶೋಧಕರ ಆತ್ಮಕಥನಗಳನ್ನು 1903ರಲ್ಲಿ ಪ್ರಕಟಿಸಿದರು.  

ಭಾರತೀಯರಿಗೆ ವೈಜ್ಞಾನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಸ್ಥಾನಮಾನವನ್ನು ತಂದುಕೊಡುವ ಪ್ರಯತ್ನ ಮಾಡಿದವರಲ್ಲಿ ಆಚಾರ್ಯ ಪ್ರಫುಲ್ಲ ರೇ ಒಬ್ಬರು. ಇವರು ಪ್ರಾಚೀನ ಭಾರತದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಹೊಂದಿದ್ದ ರಸಾಯನ ಶಾಸ್ತ್ರದ ಇತಿಹಾಸವನ್ನು ಮತ್ತು ಭಾರತೀಯ ರಸಾಯನ ಶಾಸ್ತ್ರ ಆಧುನಿಕ ರಸಾಯನ ಶಾಸ್ತ್ರದ ಮುಂದರಿಕೆಗೆ ಗಮನಾರ್ಹ ಕಾಣಿಕೆ ಕೊಟ್ಟಿದೆ ಎಂಬುದನ್ನು ತಿಳಿಸುವ “History of Hindu Chemistry from the Earliest Times to the Middle of Sixteenth Century” ಎನ್ನುವ ಪುಸ್ತಕವನ್ನು 1902ರಲ್ಲಿ ಪ್ರಕಟಿಸಿದರು.

ಬ್ರಿಟಿಷರ ನಿಲುವು ಭಾರತೀಯರ ಪರವಾಗಿ ಇಲ್ಲದಿದ್ದ ಕಾಲದಲ್ಲಿ ಜಗದೀಶ ಚಂದ್ರಬೋಸರು ಸ್ವತಂತ್ರವಾಗಿ ಸಂಶೋಧನಾ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿದ್ದರು. ಅವರು ದೈಹಿಕ ಚಟುವಟಿಕೆಯನ್ನು ಎಲೆಕ್ಟ್ರಿಕ್‌ ಸ್ಪಂದನೆಗಳಿಂದ ಅಳೆಯಬಹುದು ಎಂದು ಕಂಡುಕೊಂಡಿದ್ದರು. ಅದಕ್ಕಾಗಿ Cresograph ಎಂಬ ಉಪಕರಣವನ್ನು ತಯಾರಿಸಿಕೊಂಡಿದ್ದರು. ಅದರ ಸಹಾಯದಿಂದ ಸಾಮಾನ್ಯವಾಗಿ ಜೀವ ಮತ್ತು ಅಜೀವ ಎಂದು ಪರಿಗಣಿತವಾಗಿರುವವುಗಳು ಹೊರಗಿನ ಪ್ರೇರಣೆಗಳಿಗೆ ತೋರುವ ಸೂಕ್ಷ್ಮ ಪ್ರತಿಕ್ರಿಯೆಗಳನ್ನು ಅಭ್ಯಾಸ ಮಾಡಿ 1902ರಲ್ಲಿ “Responses in the Living and Nonliving” ಎನ್ನುವ ಸೆಮಿನಲ್‌ ಕೃತಿಯನ್ನು ಪ್ರಕಟಿಸಿದರು. ಜನಸಾಮಾನ್ಯರಿಗೆ ಪರಿಚಿತವಾಗಿದ್ದ ಕಲ್ಪನಾಲೋಕದ ನಿರ್ಮಾಣದ ಮಾರ್ಗದಲ್ಲಿ ವಿಜ್ಞಾನವನ್ನು ಅವರಿಗೆ ತಲುಪಿಸಲು ಸೈನ್ಸ್‌ ಫಿಕ್ಷನ್ಸ್‌ ಗಳನ್ನು ಬರೆದರು. ಅವರು ತಮ್ಮ ಸಂಶೋಧನೆಗಳನ್ನು “Living and Non living, Plant Responses, Comparative Electro Physiology, Irretiability of Plants” ಎಂಬ ನಾಲ್ಕು ಪುಸ್ತಕಗಳ ರೂಪದಲ್ಲಿ 1935ರಲ್ಲಿ ಪ್ರಕಟಿಸಿದರು. 

1902ರಲ್ಲಿ ಬಂಗಾಲಿ ಶಿಕ್ಷಣ ತಜ್ಞ ಸತೀಶಚಂದ್ರ ಮುಖರ್ಜಿ ರಾಷ್ಟ್ರೀಯ ಶಿಕ್ಷಣದ ಪರಿಕಲ್ಪನೆಯನ್ನು ವಾಸ್ತವಗೊಳಿದಲು “ಡಾನ್‌” ಎಂಬ ಸೊಸೈಟಿಯನ್ನು ಆರಂಭಿಸಿದರು. ಇದು “ಡಾನ್‌” ಎಂಬ ಪತ್ರಿಕೆಯನ್ನು ಹೊರತಂದಿತು. ಇದು ವಿಜ್ಞಾನ ಸಾಹಿತ್ಯ ಮತ್ತು ಶುದ್ಧ ವಿಜ್ಞಾನವನ್ನು ಜನಪ್ರಿಯಗೊಳಿಸುವವರಿಗೆ ಪ್ರಮುಖ ವೇದಿಕೆಯಾಗಿತ್ತು.  

1908ರಲ್ಲಿ ಆಶುತೋಷ್‌ ಮುಖರ್ಜಿಯವರ ನೇತೃತ್ವದಲ್ಲಿ ಆಸಕ್ತ ಗಣಿತಶಾಸ್ತ್ರಜ್ಞರು ಸ್ಥಾಪಿಸಿದ “ಕಲ್ಕತ್ತ ಮ್ಯಾಥೆಮ್ಯಾಟಿಕಲ್ಸೊಸೈಟಿ ಪ್ರಪಂಚದಲ್ಲಿ 13ನೆಯದಾಗಿದ್ದರೆ ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದಲ್ಲೂ ಪ್ರ ಪ್ರಥಮವಾದದ್ದು ಆಗಿತ್ತು. ಇದು 1909ರಲ್ಲಿಬುಲೆಟಿನ್ಆಫ್ಕಲ್ಕತ್ತ ಮ್ಯಾಥೆಮ್ಯಾಟಿಕಲ್ಸೊಸೈಟಿ” ಎಂಬ ಪತ್ರಿಕೆಯನ್ನು ಪ್ರಕಟಿಸಿತು.ಜರ್ನಲ್ಆಫ್ಕಲ್ಕತ್ತ ಮ್ಯಾಥೆಮ್ಯಾಟಿಕಲ್ಸೊಸೈಟಿಯನ್ನೂ ಹೊರತಂದಿತು. ಈಗಲೂ ಇವು ಪ್ರಪಚದಾದ್ಯಂತದ ಗಮನಾರ್ಹ ಗಣಿತಶಾಸ್ತ್ರೀಯ ಚಟುವಟಿಕೆಗಳನ್ನು ಗಮನಕ್ಕೆ ತರುವ ಪ್ರಖ್ಯಾತ ಪ್ರಕಟಣೆಗಳು ಆಗಿವೆ. 

1916ರಲ್ಲಿ ಸಿ. ರಾಜಗೋಪಾಲಾಚಾರಿಯವರು “ತಮಿಳು ಸೈಂಟಿಫಿಕ್ಟರ್ಮ್ಸ್‌’ ಎಂಬ ಸೊಸೈಟಿಯನ್ನು ಸ್ಥಾಪಿಸಿದರು. ಇದು ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಖಗೋಳಶಾಸ್ತ್ರ, ಗಣಿತಶಾಸ್ತ್ರಗಳ ಪಾರಿಭಾಷಿಕ ಪದಗಳಿಗೆ ತಮಿಳು ಪದಗಳನ್ನು ಹೊಸದಾಗಿ ರೂಪಿಸಿ ಪ್ರಕಟಿಸಿತು.

ಕ್ರಾಂತಿಕಾರಿ ಸ್ವಾತಂತ್ರ್ಯಹೋರಾಟಗಾರರ ಪರವಾಗಿ ಅಪ್ರತ್ಯಕ್ಷವಾಗಿ ಕೆಲಸಮಾಡುತ್ತಿದ್ದ ಪ್ರಪುಲ್ಲ ಚಂದ್ರ ರೇ ಸಹಜವಾಗಿ ವಿಜ್ಞಾನವನ್ನು ಜನಪ್ರಿಯವಾಗಿಸುವ ಆಲೋಚನೆ ಹೊಂದಿದ್ದರು. ಅದಕ್ಕಾಗಿ ಅವರು “ಇಂಡಿಯನ್ಕೆಮಿಕಲ್ಸೊಸೈಟಿಯನ್ನು 1924ರಲ್ಲಿ ಸ್ಥಾಪಿಸಿದರು. ಇದರ ನೇತೃತ್ವದಲ್ಲಿ ಭಾರತೀಯ ರಸಾಯನ ಶಾಸ್ತ್ರಜ್ಞರನ್ನು ಒಂದು ವೇದಿಕೆಯಡಿ ತರುವ ಮತ್ತು ಅವರು ತಮ್ಮ ಸಂಶೋಧನೆಗಳನ್ನು ಭಾರತೀಯ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಉತ್ತೇಜಿಸುವ ಉದ್ದೇಶವೂ ಅವರಿಗೆ ಇತ್ತು. ಅದರ ಅಡಿಯಲ್ಲಿ “ಜರ್ನಲ್ಆಫ್ಇಂಡಿಯನ್ಕೆಮಿಕಲ್ಸೊಸೈಟಿ ಎನ್ನುವ ತ್ರೈಮಾಸಿಕ ಪತ್ರಿಕೆಯನ್ನು ಆರಂಭಿಸಿದರು. ಅದು ಈಗಲೂ ಕೆಲಸ ಮಾಡುತ್ತಿದೆ.  

ಭಾರತದಲ್ಲಿ ಮನಶ್ಶಾಸ್ತ್ರೀಯ ಅಧ್ಯಯನವನ್ನು ಹಿಂದೂ ಮತ್ತು ಫ್ರಾಯ್ಡನ ಮನಶ್ಶಾಸ್ತ್ರೀಯ ಪರಿಕಲ್ಪನೆಗಳನ್ನು ಮೇಳೈಸಿ ಮಾಡಿದವರು ಗಿರಿಧರ ಶೇಖರ ಬೋಸ್. ಪಾಶ್ಚಾತ್ಯ ವಿಧಾನವನ್ನು ಅನುಸರಿಸಿಯೇ ಪಾಶ್ಚಾತ್ಯ ಚಿಂತನೆಗಳ ಪ್ರಸ್ತುತತೆಯನ್ನು ಪ್ರಶ್ನಿಸಿದ ಪಾಶ್ಚಾತ್ಯೇತರ ಚಿಂತಕರಲ್ಲಿ ಇವರು ಮೊದಲಿಗರು. ಇವರು “Concept of Repression” ಎಂಬ ತಮ್ಮ ಡಾಕ್ಟೊರಲ್‌ ಪ್ರಬಂಧವನ್ನು ಫ್ರಾಯ್ಡ್‌ ಅವರಿಗೆ ಕಳುಹಿಸಿ ಅವರೊಂದಿಗೆ ವ್ಯಾಪಕವಾಗಿ ಚರ್ಚೆ ಮಾಡಿದುದರ ಪರಿಣಾಮವಾಗಿ 1922ರಲ್ಲಿ ಕಲ್ಕತ್ತೆಯಲ್ಲಿ “ಇಂಡಿಯನ್ಸೈಕೊಅನಲಿಟಿಕ್ ಸೊಸೈಟಿ ಸ್ಥಾಪಿತವಾಯಿತು ಮತ್ತು ಕೂಡಲೇ “ಇಂಟರ್‌ ನ್ಯಾಷನಲ್‌ ಸೈಕೊ ಅನಲಿಟಿಕ್‌ ಅಸೋಸಿಯೇಷನ್‌” ಇಂದ ಮಾನ್ಯತೆಯನ್ನೂ ಪಡೆಯಿತು ಇದು 1947ರಲ್ಲಿ ಸಮೀಕ್ಷಾ ಎಂಬ ಪತ್ರಿಕೆಯನ್ನು ಹೊರತಂದಿತು. ಇದು “ಇಂಡಿಯನ್‌ ಸೈಕೊ ಅನಲಿಟಿಕ್‌ ಸೊಸೈಟಿ”ಯ “ರಿವ್ಯೂ” ಆಗಿತ್ತು. 

ಗಿರಿಧರ ಶೇಖರ ಬೋಸ್‌ 1921ರಲ್ಲಿ “ಕಾನ್‌ಸೆಪ್ಟ್‌ ಆಫ್‌ ರಿಪ್ರೆಷ್ಷನ್‌” ಎಂಬ ಕೃತಿಯನ್ನು, ಇಂಡಿಯನ್‌ ಜರ್ನಲ್‌ ಆಫ್‌ ಸೈಕಾಲಜಿ ಎಂಬ ಪತ್ರಿಕೆಯಲ್ಲಿ 1930ರಲ್ಲಿದಿ ಸೈಕೊಲಾಜಿಕಲ್‌ ಔಟ್ಲುಕ್‌ ಆಫ್‌ ಹಿಂದು ಫಿಲಾಸಫಿ”, 1933ರಲ್ಲಿನ್ಯೂ ಥಿಯರಿ ಆಫ್‌ ಮೆಂಟಲ್‌ ಲೈಫ್”ಎಂಬ ಪ್ರೌಢ ಪ್ರಬಂಧಗಳನ್ನು ಸ್ವತಂತ್ರವಾಗಿ; 1926ರಲ್ಲಿ ಎರ್ನೆಸ್ಟ್‌ ಜೋನ್ಸ್‌ ಮತ್ತಿತರ ಸಹಯೋಗದಲ್ಲಿ “Glossary for the use of translators of Psycho Analytic Woks” ಎಂಬುದನ್ನು ಪ್ರಕಟಿಸಿದರು.

ಜೆ.ಎನ್.‌ ಮುಖರ್ಜಿ, ಜೆ.ಸಿ.ಘೋಷ್‌, ಎಸ್‌.ಎಸ್. ಭಟ್ನಗರ್ ರವರು ಕೆಮಿಕಲ್‌ ಸೊಸೈಟಿ ಆಫ್‌ ಲಂಡನ್ನಿನ ಮಾದರಿಯಲ್ಲಿ “ಇಂಡಿಯನ್ಕೆಮಿಕಲ್ಸೊಸೈಟಿಯನ್ನು 1924ರಲ್ಲಿ ಆರಂಭಿಸಿದರು. ಇವರೊಂದಿಗೆ ಅನೇಕರು ಕೈ ಜೋಡಿಸಿದರು. ಇದು ಅದೇ ವರ್ಷದಲ್ಲಿ “ಜರ್ನಲ್ಆಪ್ಇಂಡಿಯನ್ಕೆಮಿಕಲ್ಸೊಸೈಟಿ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಹೊರಡಿಸಿತು. ಈಗಲೂ ಇದು ಪ್ರಕಟಗೊಳ್ಳುತ್ತಿದೆ. ಇದು ಸಂಶೋಧನಾ ಲೇಖನಗಳನ್ನು, ರಿವ್ಯೂಗಳನ್ನು, ಟಿಪ್ಪಣಿಗಳನ್ನು ಇನ್‌ ಆರ್ಗಾನಿಕ್‌ ಕೆಮಿಸ್ಟ್ರಿ, ಆರ್ಗಾನಿಕ್‌ ಕೆಮಿಸ್ಟ್ರಿ, ಅನಲಿಟಿಕಲ್‌ ಕೆಮಿಸ್ಟ್ರಿ, ಎನ್ವಿರಾನ್‌ಮೆಂಟಲ್‌ ಕೆಮಿಸ್ಟ್ರಿ, ಮೆಡಿಸಿನಲ್ ಕೆಮಿಸ್ಟ್ರಿ, ಬಯೋಕೆಮಿಸ್ಟ್ರಿ, ಇಂಡಸ್ಟ್ರಿಯಲ್‌ ಕೆಮಿಸ್ಟ್ರಿ ಇಂಜನಿಯರಿಂಗ್‌ ಕೆಮಿಸ್ಟ್ರಿ, ಗ್ರೀನ್‌ ಕೆಮಿಸ್ಟ್ರಿ, ಸಾಯಿಲ್‌ ಕೆಮಿಸ್ಟ್ರಿ, ಅಗ್ರಿಕಲ್ಚರಲ್‌ ಕೆಮಿಸ್ಟ್ರಿ, ಸೆನ್ಸಾರ್‌ ಸೈನ್ಸ್‌, ನ್ಯಾಚುರಲ್‌ ಪ್ರಾಡಕ್ಟ್ಸ್‌ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನಾ ಲೇಖನಗಳನ್ನು, ರಿವ್ಯೂಗಳನ್ನು, ಟಿಪ್ಪಣಿಗಳನ್ನು ಪ್ರಕಟಿಸುತ್ತದೆ. ಇದರ ಮೊದಲ ತ್ರೈಮಾಸಿಕದಲ್ಲಿ 13 ಸಂಶೋಧನಾ ಪ್ರಬಂಧಗಳು ಪ್ರಕಟವಾದವು. ಇದರಲ್ಲಿ ಒಂದು ಪ್ರಬಂಧವು ಮಾತ್ರ ಯೂರೋಪಿಯನ್‌ ಸಂಶೋಧಕರದು, ಉಳಿದವು ಭಾರತೀಯರದೇ ಆಗಿತ್ತು. ಇದು ಆ ಕೂಡಲೇ ವಿದೇಶೀಯರ ಗಮನವನ್ನುಸೆಳೆಯಿತು, ಮೆಚ್ಚಿಗೆಯನ್ನು ಪಡೆಯಿತು,  

1903-1933ರ ವರೆಗೆ ಪ್ರೆಸಿಡೆನ್ಸಿ ಕಾಲೇಜಿನ ಜಿಯಾಲಜಿ ವಿಭಾಗವನ್ನು ಮುನ್ನಡೆಸಿದವರು ಹೇಮಚಂದ್ರ ದಾಸಗುಪ್ತ. ಇವರು ಜಿಯಲಾಜಿಕಲ್ಮೈನಿಂಗ್ಅಂಡ್ಮೆಟಲರ್ಜಿಕಲ್ಸೊಸೈಟಿಯನ್ನು ಸಹಮನಸ್ಕರೊಡನೆ 1924ರಲ್ಲಿ ಆರಂಭಿಸಿದರು. ಇದು ವ್ಯಾಪಾರಿ ಗಿಲ್ಡ್‌ನಂತೆ ತನ್ನ ಸದಸ್ಯರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಅವರ ಸ್ವತಂತ್ರ ಚಿಂತನೆಗಳನ್ನು ಗೌರವಿಸುವ ಉದ್ದೇಶವುಳ್ಳದ್ದು. ದಾಸಗುಪ್ತರವರು “ದಿ ಕ್ವಾರ್ಟರ್ಲಿ ಜರ್ನಲ್ಆಫ್ದಿ ಜಿಯಲಾಜಿಕಲ್ಮೈನಿಂಗ್ಅಂಡ್ಮೆಟಲರ್ಜಿಕಲ್ಸೊಸೈಟಿ ಎಂಬ ತೈಮಾಸಿಕ ಪತ್ರಿಕೆಯನ್ನು 1929ರಲ್ಲಿ ಆರಂಭಿಸಿ ಯುವ ಜಿಯಾಲಜಿಸ್ಟ್‌ ವಿಜ್ಞಾನಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲು ವೇದಿಕೆಯನ್ನು ಒದಗಿಸಿದರು. 

ಭಾರತದಲ್ಲಿ ಪೆಟ್ರೋಲಿಯಂ ಜಿಯಾಲಜಿ, ಆರ್ಕಿಯಾಲಜಿ ಕ್ಷೇತ್ರಗಳಿಗೆ ಪೂರಕವಾದ ಪ್ರಾಚೀನ ಪಳೆಯುಳಿಕೆಗಳ ಮತ್ತು ಬಂಡೆಗಲ್ಲುಗಳ ಪದರಗಳ ಅಧ್ಯಯನಗಳಿಗೆ ಮತ್ತು ಹಿಸ್ಟಾರಿಕಲ್‌ ಜಿಯಾಲಜಿಯನ್ನು ಅಭಿವೃದ್ಧಿಪಡಿಸುವುದಕ್ಕೆ ಪ್ರೋತ್ಸಾಹಕರ ವಾತಾವರಣವನ್ನು ದಾಸಗುಪ್ತರವರು ಕಲ್ಪಿಸಿದರು. ಈ ಜಿಯಲಾಜಿಕಲ್‌ ಮೈನಿಂಗ್‌ ಅಂಡ್‌ ಮೆಟಲರ್ಜಿಕಲ್‌ ಸೊಸೈಟಿ ಮತ್ತು ಪತ್ರಿಕೆ ಈಗಲೂ ಕ್ರಿಯಾಶೀಲವಾಗಿವೆ. ಪತ್ರಿಕೆ ಪ್ರಕಟಿಸಿದ ಡಿ.ಎನ್.‌ ವಾಡಿಯಾರವರ “ಮಿನೆರಲ್ಸ್‌ ಅಂಡ್‌ ನ್ಯಾಷನಲ್‌ ರಿ-ಕನ್ಸ್ಟ್ರಕ್ಷನ್”‌, ಎನ್.ಎನ್. ಚಟರ್ಜಿಯವರ “ಎಕ್ಸ್‌ ರೇ ಸ್ಟಡಿ ಅಂಡ್‌ ಕೋಲ್‌ ಕ್ಲೀನಿಂಗ್”‌ ಗಮನಾರ್ಹ ಲೇಖನಗಳ ಪಟ್ಟಿಗೆ ಸೇರುತ್ತವೆ.

ಪ್ರಬೋಧಚಂದ್ರ ಸೇನಗುಪ್ತ ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿ ಭಾರತೀಯ ಗಣಿತಶಾಸ್ತ್ರ ಮತ್ತು ಖಗೋಳಶಾಸ್ತ್ರವನ್ನು ಬೋಧಿಸುತ್ತಿದ್ದರು. 1931ರಲ್ಲಿGreek and Hindu Methods in Spherical Astronomy” ಎಂಬ ಕೃತಿಯನ್ನು ಪ್ರಕಟಿಸಿದರೆ 1947ರಲ್ಲಿ “Ancient Indian Chronology” ಎಂಬ ಕೃತಿಯನ್ನು ಪ್ರಕಟಿಸಿದರು. ಇವುಗಳ ಜೊತೆಗೆ Khanda khadyaka: an Astronomical treatise of Brahmagupta, Aryabhatiya by Aryabhata 1, Aryabhata 1- the father of Indian Epicyclic Astronomy, Surya Siddhanta: a textbook of Hindu Astronomy ಕೃತಿಗಳನ್ನೂ ಪ್ರಕಟಿಸಿ ಭಾರತೀಯ ಗಣಿತೀಯ ಚಿಂತನೆಗಳ ಮಹತ್ವವನ್ನು ಎತ್ತಿಹಿಡಿದರು.

1935ರಲ್ಲಿ ಮೇಘನಾದ ಸಹ ಮತ್ತು ಪಿ.ಸಿ. ರೇ ಅವರ ಸಹಯೋಗದಲ್ಲಿ ಇಂಡಿಯನ್ಸೈನ್ಸ್ನ್ಯೂಸ್ಅಸೋಸಿಯೇಷನ್ ಸ್ಥಾಪಿತವಾಯಿತು ಇದರ ಪ್ರಮುಖ ಉದ್ದೇಶ ವೈಜ್ಞಾನಿಕ ಮಾಹಿತಿಯನ್ನು ಕೊಡುವುದು ಮತ್ತು ಭಾರತೀಯ ವಿಜ್ಞಾನಿಗಳ ಸಮುದಾಯದ ಚಿಂತನೆಯನ್ನು ಸಾರ್ವಜನಿಕರಿಗೆ ತಲುಪಿಸುವುದು. ಇದಕ್ಕಾಗಿ ಈ ಸಂಸ್ಥೆ ಸೈನ್ಸ್ಅಂಡ್ಕಲ್ಚರ್ ಎಂಬ ಪತ್ರಿಕೆಯನ್ನು ಆರಂಭಿಸಿತು. ಸೆಮಿನಾರ್‌, ಸಿಂಪೋಸಿಯಂ, ಸ್ಮಾರಕ ಉಪನ್ಯಾಸಗಳು ಮತ್ತು ದತ್ತಿ ಉಪನ್ಯಾಸಗಳೇ ಮೊದಲಾದವುಗಳನ್ನು ಏರ್ಪಡಿಸುವುದು ಆಗಿತ್ತು. ಈ ಸಂಸ್ಥೆ ಮತ್ತು ಈ ಜರ್ನಲ್‌ ಈಗಲೂ ಕಾರ್ಯನಿರತವಾಗಿವೆ.

1930 ರ ವೇಳೆಗೆ ಭಾರತೀಯರ ವಿಜ್ಞಾನ ತಂತ್ರಜ್ಞಾನ ಸಂಬಂಧಿತ ಸಂಶೋಧನಾ ಪ್ರಬಂಧಗಳ ಪ್ರಕಟಣೆ ಚುರುಕುಗೊಂಡು ವೇಗವನ್ನು ಪಡೆಯಿತು. 1931ರಲ್ಲಿ ಸ್ಥಾಪಿತವಾದ ಪಾಟ್ನಾ ಸೈನ್ಸ್‌ ಕಾಲೇಜಿನ ಫಿಲೊಸಾಫಿಕಲ್‌ ಸೊಸೈಟಿ”, 1935ರಲ್ಲಿ ಕೆ.ಎಸ್.‌ ವರದಾಚಾರ್‌ ಸ್ಥಾಪಿಸಿದ ಮದ್ರಾಸ್‌ ಸೈನ್ಸ್‌ ಕ್ಲಬ್‌ ಮೊದಲಾದ 244 ಸಂಘಟನೆಗಳು 1807-1947ರ ಅವಧಿಯಲ್ಲಿ ಹೊರತಂದ ಜರ್ನಲ್ ಗಳಲ್ಲಿ 6008 ಭಾರತೀಯ ಪ್ರೌಢ ಪ್ರಬಂಧಗಳು ಪ್ರಕಟಗೊಂಡವು.  1936ನೇ ಇಸವಿಯಲ್ಲಿ ಪ್ರಕಟವಾದ 1432 ಸಂಶೋಧನಾ ಲೇಖನಗಳಲ್ಲಿ 621 “ಪ್ರೊಸೀಡಿಂಗ್ಸ್‌ ಆಫ್‌ ದಿ ಇಂಡಿಯನ್‌ ಅಕಾಡೆಮಿ‌ ಆಫ್‌ ಸೈನ್ಸ್‌” ನಲ್ಲಿ ಪ್ರಕಟಗೊಂಡಿದ್ದವು. ಇವುಗಳಲ್ಲಿ 175 ಟಿ.ಆರ್. ಶೇಷಾದ್ರಿಯವರದು, 143 ಎನ್.‌ ಆರ್.‌ ಧರ್‌ ಅವರದು, 74 ಸಿ.ವಿ. ರಾಮನ್‌ ಅವರದು ಆಗಿದ್ದವು.  

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=35975

(ಮುಂದುವರಿಯುವುದು)

-ಪದ್ಮಿನಿ ಹೆಗಡೆ

3 Responses

  1. ಎಂದಿನಂತೆ… ಮಾಹಿತಿ ಯುಳ್ಳ ಲೇಖನ ಮುಂದುವರೆದಿದೆ…ಧನ್ಯವಾದಗಳು ಮೇಡಂ.

  2. ನಯನ ಬಜಕೂಡ್ಲು says:

    Nice

  3. . ಶಂಕರಿ ಶರ್ಮ says:

    ಮಾಹಿತಿಪೂರ್ಣ, ಸಂಗ್ರಹಯೋಗ್ಯ ಗಂಭೀರ ಲೇಖನ ಬಹಳ ಚೆನ್ನಾಗಿದೆ ಮೇಡಂ.

Leave a Reply to . ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: