ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 8

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ವಿಜ್ಞಾನ ಸಂಶೋಧಕರ ನೆಟ್‌ ವರ್ಕ್:

ಭಾರತೀಯ ಸಂಶೋಧನಾ ಸಂಸ್ಥೆಗಳಲ್ಲಿ ಪರಿಣತರಾದವರು ಬ್ರಿಟನ್ನೇತರ ಯೂರೋಪಿಯನ್‌ ದೇಶಗಳಲ್ಲಿ ವಿಜ್ಞಾನ ಸಂಶೋಧಕರ ನೆಟ್‌ ವರ್ಕನ್ನು ಕಂಡುಕೊಂಡರು, ಅಲ್ಲಿ ಮಾನ್ಯತೆಯನ್ನು ಪಡೆದರು. 1910ರಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರದಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದ ಶ್ಯಾಮದಾಸ ಮುಕೋಪಾಧ್ಯಾಯರು “ಫೋರ್‌ ವರ್ಟೆಕ್ಸ್‌” ಪ್ರಮೇಯವನ್ನು 1909ರಲ್ಲಿಯೇ ನಿರೂಪಿಸಿ ಗಣಿತಶಾಸ್ತ್ರದ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದರು. ಇದು ಮುಕೋಪಾಧ್ಯಾಯ ಪ್ರಮೇಯ ಎಂದೂ ಪರಿಗಣಿತವಾಗಿದೆ. ಇದು ಜಾಗತಿಕ “ಡಿಫರೆನ್ಷಿಯಲ್‌ ಜೊಮಿಟ್ರಿ”ಯಲ್ಲಿ “ಕಾನ್ವೆಕ್ಸ್‌ ಕರ್ವ್‌” ಗಳಿಗೆ ಸಂಬಂಧಿಸಿದಂತೆ ಮೊಟ್ಟಮೊದಲಿಗೆ ಕಂಡುಕೊಂಡ ಸಂಶೋಧನಾತ್ಮಕ ಫಲಿತಾಂಶ.. ಇದನ್ನು ಎಲ್ಲಾ ರೀತಿಯ ವಕ್ರಾಕೃತಿಗಳಿಗೂ ಅನ್ವಯಿಸಬಹುದು ಎಂದು ಈಗ ಸಾಬೀತಾಗಿದೆ. ಪ್ರಸಿದ್ಧ ಫ್ರೆಂಚ್‌ ಗಣಿತಶಾಸ್ತ್ರಜ್ಞ Jacques Hadamard ರೊಂದಿಗೆ ಉತ್ತಮ ಸಂಪರ್ಕದಲ್ಲಿದ್ದ ಇವರ ಗಣಿತಜ್ಞಾನವನ್ನು ಇವರ ಸಮಕಾಲೀನ ಆಸ್ಟ್ರೇಲಿಯನ್‌ ಗಣಿತಶಾಸ್ತ್ರಜ್ಞ Wilhelm Blaschke ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿ ಗೌರವಿಸಿದ್ದಾರೆ.

1924ರಲ್ಲಿ ಅರ್ಥರ್‌ ಕಾಂಪ್ಟನ್‌ನ್ನು ಟೊರೆಂಟೊದಲ್ಲಿ ಸಂಧಿಸಿದ ಸಿ.ವಿ.ರಾಮನ್‌ ಕಾಂಪ್ಟನ್‌ ಅವರೊಂದಿಗೆ ರೂಸ್‌ವೆಲ್ಟನ ಮನಹತ್ತರ್‌ ಪ್ರಾಜೆಕ್ಟಿನಲ್ಲಿ ಸಹಭಾಗಿಯಾದರು. ಬರ್ಲಿನ್ನಿನ ಪ್ರಾಯೋಗಿಕ ಭೌತಶಾಸ್ತ್ರಜ್ಞ Eric Regener ಒಂದಿಗೆ ದೇವೇಂದ್ರ ಮೋಹನ ಬೋಸ್, ಬರ್ಲಿನ್ನಿನ ಸಸ್ಯಶಾಸ್ತ್ರಜ್ಞ ಅಡಾಲ್ಫ್‌ ಏಂಗ್ಲರ್‌ ನೊಂದಿಗೆ ಶಂಕರ್ಅಗರ್ಕರ್, ಪ್ಯಾರಿಸ್ಸಿನ ಕ್ವಾಂಟಂ ಭೌತಶಾಸ್ತ್ರಜ್ಞ ಲೂಯಿ ಡಿ ಬ್ರೊಗ್ಲೆ ಯೊಂದಿಗೆ ಎಸ್.‌ ಎನ್.‌ ಬೋಸ್ ಪೋಸ್ಟ್‌ ಡಾಕ್ಟೊರಲ್‌ ವಿದ್ಯಾರ್ಥಿಯಾದರು. ಶಿಶಿರ ಕುಮಾರ ಮಿತ್ರ ಪ್ಯಾರಿಸ್ಸಿನ ಸ್ಪೆಕ್ಟ್ರೊಸ್ಕೋಪಿಸ್ಟ್‌ ಚಾರ್ಲ್ಸ್‌ ಫೇಬ್ರಿ ಯೊಂದಿಗೆ ಡಾಕ್ಟೊರಲ್‌ ವಿದ್ಯಾರ್ಥಿಯಾಗಿ ಮುಂದೆ ರೇಡಿಯಂ ಸಂಶೋಧಕಿ ಮೇರಿ ಕ್ಯೂರಿ ಮತ್ತು ರಾಡಾರ್‌ ಭೌತಶಾಸ್ತ್ರಜ್ಞ Camile Button ರೊಂದಿಗೆ ಪೋಸ್ಟ್‌ ಡಾಕ್ಟೊರಲ್‌ ವಿದ್ಯಾರ್ಥಿಯಾದರು. ಇದರಿಂದಾಗಿ ಅವರಿಗೆ 1932-33ರ ಇಂಟರ್‌ ನ್ಯಾಷನಲ್‌ ಕಾನ್ಫೆರೆನ್ಸಿನಲ್ಲಿ ಭಾಗಿಯಾಗುವ ಅವಕಾಶ ದೊರೆಯಿತು. 

ಭಾರತೀಯ ವಿಜ್ಞಾನಿಗಳ ಸಂಶೋಧನೆಗಳು ಹೊಸ ಹೊಸ ಅಂಶಗಳನ್ನು ಬೆಳಕಿಗೆ ತರುವುದರ ಜೊತೆಗೆ ವೈಜ್ಞಾನಿಕ ಕ್ಷೇತ್ರವನ್ನು ಅಭಿವೃದ್ಧಿಪಡಿಸಲೂ ಸಹ ಸಹಕಾರಿಯಾದವು.  ಭೌತಶಾಸ್ತ್ರದ ವಿಭಾಗದ ಅಭಿವೃದ್ಧಿಗಾಗಿ ಶ್ರಮಿಸಿದ್ದ ರಮೇಶಚಂದ್ರ ಮಜುಮ್ದಾರ್‌ 1944ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರಜ್ಞರಾಗಿ ನೇಮಕ ಗೊಂಡರು. ಇವರಿಂದಾಗಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಗಮನಾರ್ಹ ಸಂಶೋಧನೆಗಳು ನಡೆದು ಅವು ಫಲಕಾರಿಯಾದವು. ವೈಜ್ಞಾನಿಕ ಕ್ಷೇತ್ರವನ್ನು ವಿಸ್ತರಿಸಿದವು.‌ ಇವರು 1928ರಲ್ಲಿ ಮೇಘನಾದ ಸಹ ರವರೊಂದಿಗೆ ಮಾಡಿದ ಸಂಶೋಧನೆ ಮುಂದೆ ಚಂದ್ರಶೇಖರ್‌ ಮುಂತಾದವರ ಶೇತಕುಬ್ಜ ನಕ್ಷತ್ರಗಳ ಅಧ್ಯಯನಕ್ಕೆ ಪೂರಕವಾದವು. ಕೊಠಾರಿಯವರೊಂದಿಗೆ ಮಾಡಿದ ಸಂಶೋಧನೆಯಿಂದ degenerate gas ನ opacity coefficient ಗೆ ಸಂಬಂಧಿಸಿದ ಥಿಯರಿಯನ್ನು ಕಂಡುಕೊಳ್ಳಲು ಸಾಧ್ಯವಾಯಿತು. 

ಕ್ವಾಟಂ ಸ್ಟಾಟಿಸ್‌ಟಿಕ್ಸ್‌ನ್ನು ಉಪಯೋಗಿಸಿ ಮಾಡಿದ ಸಂಶೋಧನೆಯಿಂದ ಗ್ರಹಗಳ ಆಂತರಿಕ ರಚನೆಯನ್ನು ಶೋಧಿಸಲು ಮತ್ತು ಅವುಗಳ ದ್ರವ್ಯರಾಶಿಗೂ ಹಾಗೂ ಅವುಗಳ ತ್ರಿಜ್ಯಕ್ಕೂ ಇರುವ ಸಂಬಂಧವನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಐಕೊನೊ ಸ್ಪಿಯರ್‌ ನಲ್ಲಿ ರೇಡಿಯೋ ತರಂಗಗಳ ಪ್ರವಹಿಸುವಿಕೆಗೆ ಸಂಬಂಧಿಸಿದಂತೆ ಕಂಡುಹಿಡಿದ Appleton-Hartree Dispersion ಸೂತ್ರವು ಐಕೊನೊ ಸ್ಪಿಯರ್‌ನಲ್ಲಿ ರೇಡಿಯೋ ತರಂಗಗಳ ಪ್ರವಹಿಸುವಿಕೆಗೆ ಇರಬಹುದಾದ ಆನ್ವಯಿಕೆಗಳನ್ನು ಅಧ್ಯಯನ ಮಾಡಲು ಸಹಕಾರಿಯಾಯಿತು. ಎ.ಎಸ್.‌ ಆಪ್ಟೆ, ಎಸ್.‌ ಗುಪ್ತ  ಅವರೊಂದಿಗೆ ಮೆಸಾನ್‌ ಗಳ ಬಗ್ಗೆ ಮಾಡಿದ ಸಂಶೋಧನಾ ಫಲಿತಾಂಶಗಳನ್ನು ಬಳಸಿ 10 eVಗಿಂತಲೂ ಹೆಚ್ಚು energy ಯ ಮೆಸಾನ್‌ ಗಳು ಉಂಟುಮಾಡಿದ bursts of particles ಗಳನ್ನು ವಿಶ್ಲೇಷಣೆ ಮಾಡಲು ಸಾಧ್ಯವಾಯಿತು.    

ಇಂಥ ಹಲವಾರು ಸಂಗತಿಗಳಿಂದಾಗಿ ಭಾರತೀಯರ ಬಗೆಗಿನ ಕೀಳು ದೃಷ್ಟಿ ಅಳಿಸಿಹೋಯಿತು. ಭಾರತೀಯ ವಿಜ್ಞಾನಿಗಳಿಗೆ ತಮ್ಮ ಸಂಸ್ಥೆಗಳಲ್ಲಿ ಅಂತರ್ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳನ್ನು ಪ್ರಾಧ್ಯಾಪಕರಾಗಿರಲು ಮತ್ತು ಸಂಸ್ಮರಣ ಉಪನ್ಯಾಸಗಳನ್ನು ನೀಡಲು ಆಹ್ವಾನಿಸುವ ಆತ್ಮವಿಶ್ವಾಸ ಉಂಟಾಯಿತು. 

ಪುಸ್ತಕ, ಮ್ಯಾಗಝೈನ್ಪ್ರಕಟಣೆ: 

ಏಷ್ಯಾದ ಎಲ್ಲಾ ವಿಭಾಗದ ವಿಜ್ಞಾನಿಗಳನ್ನು ಒಂದು ವೇದಿಕೆಯಡಿ ಒಟ್ಟುಗೂಡಿಸುವ ಉದ್ದೇಶದಿಂದ 1784ರಲ್ಲಿ ಆರಂಭವಾದ ಏಷಿಯಾಟಿಕ್‌ ಸೊಸೈಟಿಯು 1788ರಲ್ಲಿ ಏಷಿಯಾಟಿಕ್‌ ರಿಸರ್ಚ್ಸ್‌ ಎಂಬ ಸಂಶೋಧನಾ ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿತು. 1842ರ ವರೆಗೂ ಇಂಥ ಸಂಕಲನಗಳನ್ನು ಪ್ರಕಟಿಸಿತು. ಈ ಸಂಕಲನಗಳಲ್ಲಿ ಕಲೆ, ಇತಿಹಾಸ, ಸಾಹಿತ್ಯ, ಪರಂಪರೆಗಳನ್ನು ಕುರಿತ ಪ್ರಬಂಧಗಳು ಇದ್ದವು.  ಏಷ್ಯಾದ ಅಭಿವೃದ್ಧಿಗೆ ಸಹಾಯಕವಾಗುವ ಭಾಷೆ, ಪರಂಪರೆ, ಪ್ರವಾಸ, ಪ್ರಾಕೃತಿಕ ಪರಿಸರವೇ ಮುಂತಾದ ವಿಷಯಗಳನ್ನು ಕುರಿತ ಸಂಶೋಧನಾ ಪ್ರಬಂಧಗಳನ್ನು ಪ್ರತ್ಯೇಕವಾಗಿ ಪ್ರಕಟಿಸುವ ಮತ್ತು ಅವುಗಳಿಗೆ ಪ್ರಪಂಚದಾದ್ಯಂತ ಮಾನ್ಯತೆಯನ್ನು ದೊರಕಿಸಿ ಕೊಡುವ ಉದ್ದೇಶದಿಂದ ಏಷಿಯಾಟಿಕ್‌ ಸೊಸೈಟಿಯು “The journal of the Asiatic society of Bengal” ಎಂಬ ಪತ್ರಿಕೆಯನ್ನು 1832ರಲ್ಲಿ ಆರಂಭಿಸಿತು. ಇದು ಈಗಲೂ ಅಂತರ್‌ ಶಾಸ್ತ್ರ-ಅಧ್ಯಯನ ಆಧಾರಿತ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುತ್ತಿದೆ.   

Asiatic society in Kolkatta

ಸಂಶೋಧಕರ ಸಂಶೋಧನಾ ಕಾರ್ಯಕ್ಕೆ ಸಂಬಂಧಿಸಿದ ನಿರೂಪಣಾತ್ಮಕ ಆತ್ಮಕಥನಗಳನ್ನು ಪ್ರಕಟಿಸುವ ಉದ್ದೇಶದಿಂದ ಏಷಿಯಾಟಿಕ್‌ ಸೊಸೈಟಿಯು “Memoirs” ಎಂಬ ಪ್ರತ್ಯೇಕ ಪ್ರಕಟನಾ ವಿಭಾಗವನ್ನು 1905ರಲ್ಲಿ ಆರಂಭಿಸಿತು. ಈ ವಿಭಾಗ 1933ರ ವರೆಗೂ ಕೆಲಸ ಮಾಡಿತು. ಇದು “Tibetology, Tribal life and culture, Zoology, Geography, Oceanography, Santal Medicine, Alchemy” ಮುಂತಾದ ವಿಷಯಗಳಿಗೆ ಸಂಬಂಧಿಸಿದ ಆತ್ಮಕಥನಗಳನ್ನು ಪ್ರಕಟಿಸಿದೆ. ಏಷ್ಯಾದ ಘನ ವಿದ್ವಾಂಸರ ಸಂಶೋಧನಾ ಕೃತಿಗಳನ್ನು ಪ್ರಕಟಿಸುವ ಉದ್ದೇಶದಿಂದ ಏಷಿಯಾಟಿಕ್‌ ಸೊಸೈಟಿಯು 1946ರಲ್ಲಿ “Bibliotheca Indica Series” ಎಂಬ ಪ್ರಕಟನಾ ವಿಭಾಗವನ್ನು ಆರಂಭಿಸಿತು. ಇದು ಈಗಲೂ ವೈಜ್ಞಾನಿಕ, ಸಾಹಿತ್ಯಕ ಕೃತಿಗಳನ್ನು ಪ್ರಕಟಿಸುತ್ತಿದೆ. 

ಈ ಏಷಿಯಾಟಿಕ್‌ ರಿಸರ್ಚ್ಸ್‌ ಸೊಸೈಟಿಗೆ 1828ರ ವರೆಗೂ ಯೂರೋಪಿಯನ್ನರು ಮಾತ್ರ ಸದಸ್ಯರಾಗಬಹುದಾಗಿತ್ತು.  ಆನಂತರ 1832ರಲ್ಲಿ ರಾಮ ಕಮಲ ಸೇನ್‌ ಇದರ ಕಾರ್ಯದರ್ಶಿಯಾದರು. 1885ರಲ್ಲಿ ರಾಜೆಂದ್ರ ಲಾಲ್‌ ಮಿತ್ರ ಇದರ ಅಧ್ಯಕ್ಷರಾದರು. 1836-1895ರ ವರೆಗೆ ಇದರ ಅಡಿಯಲ್ಲಿ ಭಾರತೀಯರ 18 ಸಂಶೋಧನಾ ಪ್ರಬಂಧಗಳು ಮಾತ್ರ ಪ್ರಕಟವಾಗಿದ್ದವು. ಅದೇ ಅವಧಿಯಲ್ಲಿ ಯೂರೋಪಿಯನ್ನರದು 1021 ಪ್ರಬಂಧಗಳು ಪ್ರಕಟವಾಗಿದ್ದವು. ಇದನ್ನು ಗಮನಿಸಿದ ಭಾರತೀಯರು ತಮ್ಮದೇ ಆದ ಸೊಸೈಟಿಗಳನ್ನು ಪ್ರಕಟನೆಯ ಉದ್ದೇಶಕ್ಕಾಗಿಯೇ ಸ್ಥಾಪಿಸಿಕೊಂಡರು.  

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=35755

(ಮುಂದುವರಿಯುವುದು)

-ಪದ್ಮಿನಿ ಹೆಗಡೆ

3 Responses

  1. ಉತ್ತಮ ಮಾಹಿತಿಯ ನ್ನೊಳಗೊಂಡ ಲೇಖನ… ಅದನ್ನು.. ನೀಡುತ್ತಿರುವ ನಿಮಗೆ.. ಧನ್ಯವಾದಗಳು.. ಪದ್ಮಿನಿ ಮೇಡಂ…

  2. . ಶಂಕರಿ ಶರ್ಮ says:

    ಅತ್ಯುತ್ತಮ ಮಾಹಿತಿಗಳನ್ನೊಳಗೊಂಡ, ಸಂಗ್ರಹ ಯೋಗ್ಯ ಬರೆಹ..ಧನ್ಯವಾದಗಳು ಮೇಡಂ.

  3. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: