ಬಣ್ಣ ಒಂದು ಅವಲೋಕನ

Share Button

ಬಣ್ಣ ಭಗವಂತನ ಒಂದು ಅಪೂರ್ವ ಸೃಷ್ಟಿ ಎಂದೇ ಹೇಳಬೇಕು. ಪ್ರತಿ ಮಾನವನು ಕೂಡ ಒಂದು ವಿಶಿಷ್ಟವಾದ ಬಣ್ಣವನ್ನು ಹೆಚ್ಚು ಪ್ರೀತಿಸುತ್ತಾನೆ. ಬಣ್ಣಗಳ ಪ್ರಪಂಚವೇ ಒಂದು ವಿಭಿನ್ನ ಅನುಭವ. ಬಣ್ಣಗಳ ಕನಸನ್ನು ಕಾಣಿ ಹಾಗೂ ಸೃಜನಶೀಲರಾಗಿ ಎಂಬ ಮಾತಿದೆ. ಬಣ್ಣ ಪ್ರಕೃತಿಯ ನಗು, ಆತ್ಮದ ಮೇಲೆ ನೇರ ಪ್ರಭಾವ ಬೀರುವ ಶಕ್ತಿ ಅದಕ್ಕಿದೆ. ಬಣ್ಣವಿಲ್ಲದ ಬದುಕನ್ನು ಊಹಿಸಲು ಅಸಾಧ್ಯ. ಭಾವನೆಗಳ ಮೇಲೆ ಅಗಾಧ ಪರಿಣಾಮ ಬೀರುವ ಶಕ್ತಿ ಬಣ್ಣಕ್ಕಿದೆ.

ಹಲವಾರು ವಾಕ್ಯಗಳಲ್ಲಿ ಹೇಳ ಬೇಕಾದ್ದನ್ನು ಬಣ್ಣ ಹೇಳುವ ಸಾಮರ್ಥ್ಯವಿದೆ. ಉದಾಹರಣೆಗೆ ವಾಹನ ಸವಾರರಿಗೆ ಸಂಕೇತದೀಪಗಳು. ಕೆಂಪೆಂದರೆ ನಿಲ್ಲಿ, ಹಳದಿ ತಯಾರಾಗಿ, ಹಸಿರು ಹೊರಡಿ ಎಂದು. ಒಂದು ಕಾರ್ಯ ನಿಷಿದ್ಧ ಎಂದು ತೋರಿಸಲು ಕೆಂಪು. ವೃತ್ತ ನಡುವೆ ಗೀಟುಗಳಿರುತ್ತದೆ, ಇವು ಉಗುಳಬಾರದು, ಕಸ ಹಾಕಬಾರದು, ವಾಹನ ನಿಲುಗಡೆ ನಿಷಿದ್ಧ, ಇತ್ಯಾದಿ ಮಾಡಬಾರದ ಕೃತ್ಯಗಳನ್ನು ಸಾಂಕೇತಿಕವಾಗಿ ನಿರೂಪಿಸುತ್ತದೆ.

ಪ್ರಾಯಶಃ ಮಾನವ ಹುಟ್ಟುವ ಮೊದಲೇ ಈ ಬಣ್ಣಗಳು ಇದ್ದುವು ಎನಿಸುತ್ತದೆ. ಉದಾಹರಣೆಗೆ ಕಾಮನಬಿಲ್ಲು, ಫಲಪುಷ್ಪ, ಎಲೆಗಳು, ನೀಲಾಕಾಶ, ಬೆಳಗಿನ ಸೂರ್ಯೋದಯ, ಸೂರ್ಯಾಸ್ತಮ, ಬೆಳದಿಂಗಳು, ಇತ್ಯಾದಿ ಎಲ್ಲವೂ ವಿವಿಧ ಬಣ್ಣಗಳಿಂದ ಕೂಡಿದೆ ಅಲ್ಲವೇ?

ಇನ್ನು ಒಟ್ಟು ಬಣ್ಣಗಳ ಸಂಖ್ಯೆ ಒಂದು ಕೋಟಿಗೂ ಅಧಿಕ ಎಂದರೆ ಆಶ್ಚರ್ಯವಲ್ಲವೇ? ಇವುಗಳನ್ನು ಪ್ರಮುಖವಾಗಿ ಪ್ರಾಥಮಿಕ, ದ್ವಿತೀಯ, ತೃತೀಯ, ಚತುಷ್ಕ ಎಂಬ ನಾಲ್ಕು ವರ್ಗಗಳಲ್ಲಿ ವಿಂಗಡಿಸಿದ್ದಾರೆ. ಪ್ರಾಥಮಿಕದಲ್ಲಿ ಕೆಂಪು ಹಳದಿ ಮತ್ತು ನೀಲಿ ಬಣ್ಣಗಳಿಗೆ ಪ್ರಾತಿನಿಧ್ಯ, ಭೌತಶಾಸ್ತ್ರದಲ್ಲಿ ಇದು ಕೆಂಪು, ಹಸಿರು, ನೀಲಿಯಾಗಿದೆ. ದ್ವಿತೀಯದಲ್ಲಿ ಹನ್ನೊಂದು ಹಾಗೂ ತೃತೀಯದಲ್ಲಿ ಹದಿನೆಂಟು ಮತ್ತು ಚತುಷ್ಕದಲ್ಲಿ ಮೂವತೈರಡು ಬಣ್ಣಗಳನ್ನು ಗುರುತಿಸಿದ್ದಾರೆ. ಇವುಗಳ ಪ್ರವೃತ್ತಿ ಹಾಗೂ ಸಂಯುಕ್ತದಿಂದ (Permutation and combination) ಕೋಟ್ಯಾಂತರ ಬಣ್ಣಗಳನ್ನು ತಯಾರಿಸಬಹುದು. ಇದು ನಿಜಕ್ಕೂ ಒಂದು ಸಂಕೀರ್ಣವಾದ ಒಂದು ವಿಭಾಗವೆಂದರೆ ಆಶ್ಚರ್ಯವೆನಿಸದು. ಬಣ್ಣಗಳ ವೈವಿದ್ಯತೆ ನಿಜಕ್ಕೂ ಆಶ್ಚರ್ಯಕರ. ಏಳು ಬಣ್ಣಗಳು ಸೇರಿ ಬಿಳಿ ಬಣ್ಣವಾಗುತ್ತದೆ ಎಂಬುದು ಭೌತಶಾಸ್ತ್ರದ ಒಂದು ಪ್ರಯೋಗ. ಇದನ್ನೇ ವಿಬ್‌ಗಯಾರ್ (VIBGYOR) ಎನ್ನುತ್ತಾರೆ. ಒಂದೊಂದು ಬಣ್ಣಕ್ಕೆ ತನ್ನದೇ ಆದ ಒಂದು ವಿಶಿಷ್ಟವಾದ ಗುಣ ಹೊಂದಿದೆ. ಬಿಳಿಯ ಬಣ್ಣ ಗೌರವ, ಸ್ವಚ್ಛತೆ, ಪರಿಶುದ್ಧತೆ, ನಮ್ರತೆ ಸರಳತೆ ಇವುಗಳ ಸಂಕೇತ. ಆರೋಗ್ಯ ಇಲಾಖೆಯ ನೆಚ್ಚಿನ ಬಣ್ಣ ಬಿಳಿ. ಕೆಲ ಜೈನ ಸನ್ಯಾಸಿಗಳು ಬಿಳಿ ಬಟ್ಟೆ ಬಿಟ್ಟು ಬೇರೆ ಧರಿಸಲಾರರು.

ಇನ್ನೂ ಕಪ್ಪು ಬಣ್ಣ ಭಯ, ಆತಂಕ, ದುಃಖ, ಸಾವು, ಅಗಲಿಕೆ, ಶೋಕ, ಕತ್ತಲೆ ಇವುಗಳ ಒಂದು ಪ್ರತೀಕ. ಸಾಮಾನ್ಯವಾಗಿ ಬಹಳ ಜನ ಕಪ್ಪುಬಣ್ಣವನ್ನು ಇಷ್ಟಪಡಲಾರರು. ಇದು ಸಾಮಾನ್ಯವಾಗಿ ಒಂದು ಋಣಾತ್ಮಕವಾದ ಅಂಶಗಳನ್ನು ಪ್ರತಿನಿಧಿಸುತ್ತದೆ ಎಂಬ ಭಾವನೆ ಎಲ್ಲರಲ್ಲೂ ಇದೆ.

ಕೆಂಪು ಬಣ್ಣ ಒಂದು ಗುಣಾತ್ಮಕ ಸಂಕೇತ. ಇದು ಪ್ರೀತಿ, ಉತ್ಸಾಹ, ಬೆಂಕಿ, ಶಾಖ, ಆಕ್ರಮಣಕಾರಿ, ಆಧುನಿಕತೆ, ಅಪಾಯ, ಹಿಂಸೆ ಇವುಗಳನ್ನು ಪ್ರತಿನಿಧಿಸುತ್ತವೆ. ಬಹಳ ಜನ ಪ್ರೀತಿಸುವ ಬಣ್ಣ ಇದು. ಇದು ಬಹಳ ಆಕರ್ಷಕ ಬಣ್ಣವಾದ್ದರಿಂದ ಹಲವಾರು ಜಾಹೀರಾತು ಘಟಕಗಳಲ್ಲಿ ಹಾಗೂ ಲಾಂಛನಗಳಲ್ಲಿ ಈ ಬಣ್ಣ ಪ್ರಾಮುಖ್ಯ ಪಡೆದಿದೆ.

ಹಳದಿಬಣ್ಣ ಸ್ನೇಹ, ಸಂತೋಷ, ಆದರ್ಶ, ಭರವಸೆ ಇತ್ಯಾದಿ ಗುಣಾತ್ಮಕ ಸಂದೇಶವನ್ನು ಸಾರಿ ಹೇಳುತ್ತದೆ. ಬಂಗಾರದ ಬಣ್ಣ ಹಳದಿಯಾದ್ದರಿಂದ ಶ್ರೀಮಂತಿಕೆಯ ಪ್ರತೀಕವು ಹೌದು. ಸೂರ್ಯೋದಯದ ಸಮಯ ಬಾನು ಹಳದಿ ಬಣ್ಣವಾದ್ದರಿಂದ ಇದು ಭರವಸೆ ಹಾಗೂ ಏಳಿಗೆಯ ಪ್ರತೀಕವೂ ಹೌದು.

ನೀಲಿ ಬಣ್ಣ ಸ್ಥಿರತೆ, ಏಕತೆ, ಸಾಮರಸ್ಯ, ನಂಬಿಕೆ, ಸತ್ಯ, ವಿಶ್ವಾಸ, ಭದ್ರತೆ, ನಿಷ್ಟ, ಸೂಚಕ, ಆಕಾಶ ಸಮುದ್ರದ ನೀರು ಈ ಬಣ್ಣ ಇರುವುದರಿಂದ ಇವು ವಿಶಾಲತೆ, ಆಳ ಹಾಗೂ ಅಗಾಧತೆಯ ಸೂಚಕವು ಹೌದು.

ನೇರಳೆ ಬಣ್ಣ ಅಧ್ಯಾತ್ಮ, ಗೌರವಸೂಚಕ, ಅಧ್ಯಾತ್ಮ ಮನೋಭಾವ, ದುರಹಂಕಾರ, ಕ್ರೌರ್‍ಯ, ಶೋಕದ ಸಂಕೇತವೂ ಕೆಲವು ಬಾರಿ ಆಗುವುದುಂಟು. ಕೇಸರಿ ಬಣ್ಣ ಬಹಳ ಜನಪ್ರಿಯತೆ ಗಳಿಸಿರುವ ಬಣ್ಣ ಇದು ತ್ಯಾಗ, ಉತ್ಸಾಹ, ಶಕ್ತಿ, ರೋಮಾಂಚನ, ಸಮತೋಲನ ಇತ್ಯಾದಿ ಗುಣಧರ್ಮಗಳುಳ್ಳ ಬಣ್ಣ.

ಒಂದಂತೂ ಸ್ಪಷ್ಟ ಎಲ್ಲರಿಗೂ ಎಲ್ಲಾ ಬಣ್ಣ ಇಷ್ಟವಾಗಬೇಕೆಂದಿಲ್ಲ. ಒಬ್ಬೊಬ್ಬರದು ಒಂದೊಂದು ಬಣ್ಣದ ಬಗ್ಗೆ ಹೆಚ್ಚಿನ ಆಕರ್ಷಣೆ ಇರಬಹುದು. ಇದಕ್ಕೆ ಸನ್ಯಾಸಿಗಳೂ ಹೊರತುಪಡಿಸಿಲ್ಲ. ಅವರು ಕೇಸರಿ ಅಥವಾ ಬಿಳಿ ಬಣ್ಣದ ವಸ್ತ್ರಗಳನ್ನು ಮಾತ್ರ ಬಳಸುತ್ತಾರೆ. ಬಣ್ಣಗಳು ಮಾನವನ ಮನಸ್ಸಿನ ಮೇಲೆ ಪರಿಣಾಮ ಬೀರುವ ಬಗ್ಗೆ ಸಾಕಷ್ಟು ಸಂಶೋಧನೆಗಳಾಗಿವೆ. ವೈದ್ಯಕೀಯ ವಿಭಾಗಗಳಲ್ಲೂ ಸಾಕಷ್ಟು ಸಂಶೋಧನೆಗಳಾಗಿವೆ. ಬಣ್ಣ ಮನಸ್ಸಿನ ಮೇಲೆ ಬೀರುವ ಪರಿಣಾಮಗಳನ್ನು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಮಾನಸಿಕ ಅಸ್ವಸ್ಥರು, ರಕ್ತದ ಒತ್ತಡ ಕಡಿಮೆ ಮಾಡಲು, ಮನಸ್ಸು ಶಾಂತವಾಗಿರಲು ಖಿನ್ನತೆಗೊಳಗಾದವರು ಇವರಿಗೆ ಬಣ್ಣದ ಚಿಕಿತ್ಸೆ ನೀಡಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡುಬಂದಿದೆ ಎಂದು ವರದಿಯಾಗಿದೆ.

ಇನ್ನು ಧರ್ಮ ಹಾಗೂ ಸಂಸ್ಕೃತಿಯಲ್ಲಿ ಬಣ್ಣಗಳ ಒಂದು ಆಡಂಬರ ಹೇಳತೀರದು. ಹಿಂದೂ ಧರ್ಮದಲ್ಲಿ ಕೇಸರಿ ಬಣ್ಣ ಒಂದು ಉತ್ಕೃಷ್ಟವಾದ ಸ್ಥಾನಹೊಂದಿದೆ. ಹಸಿರು ಇಸ್ಲಾಂ ಧರ್ಮದ ಸಾಂಪ್ರದಾಯಕ ಬಣ್ಣ. ಹಾಸುಗಂಬಳಿಯಿಂದ ತೊಡುವ ಉಡುಪಿನವರೆಗೆ ಹಸಿರು ಬಣ್ಣ. ಇದು ಶ್ರೇಷ್ಠ ಎಂಬ ನಂಬುಗೆ ಇಸ್ಲಾಂ ಧರ್ಮೀಯರದ್ದು. ಕ್ರೈಸ್ಟಧರ್ಮದಲ್ಲಿ ಕೆಂಪುಬಣ್ಣ ಏಸುವಿನ ರಕ್ತದ ತ್ಯಾಗದ ಪ್ರತೀಕ, ಬಿಳಿಯ ಬಣ್ಣ ಏಸುವಿನ ದೇಹದ ಸಂಕೇತ. ಕಪ್ಪು ಬಣ್ಣ ಪಾಪದ ಸಂಕೇತ. ಹಿಂದುಗಳ ಹೋಳಿಹಬ್ಬದ ಸಂದರ್ಭದಲ್ಲಿ ಎಲ್ಲಾ ಬಣ್ಣಗಳ ಮಿಶ್ರಣ ಇರುವುದು ವಿಶೇಷ.

ಪ್ರಪಂಚದ ಎಲ್ಲಾ ದೇಶಗಳಲ್ಲು ಧ್ವಜಗಳಿವೆ. ಇವುಗಳ ಬಣ್ಣಗಳು ಬಹಳ ವಿಶಿಷ್ಟವಾಗಿದೆ. ಒಂದು ರಾಷ್ಟ್ರಧ್ವಜಕ್ಕೆ ಘನತೆ ತಂದು ಕೊಡುವುದು. ಅದರ ಬಣ್ಣದಿಂದಲೇ ಪ್ರತಿ ಬಣ್ಣಕ್ಕೆ ಅದರದೇ ಆದ ಅರ್ಥ ಹಾಗೂ ವ್ಯಾಖ್ಯಾನಗಳಿವೆ. ಅದು ಇಡಿ ವಿಶ್ವಕ್ಕೆ ತನ್ನ ಸಂದೇಶವನ್ನು ಸಾರಬಲ್ಲದು. ಭಾರತದ ಧ್ವಜ ಕೇಸರಿ, ಹಸಿರು, ಬಿಳಿ, ಅದರದೇ ಆದ ಒಂದು ಸಂದೇಶ ಸಾರಿದೆ.

ಮನುಷ್ಯ ತನ್ನ ಮನೆಯ ಹೊರಗಿನ ಬಣ್ಣದಿಂದ ಹಿಡಿದು ಒಳಗಿನ ಎಲ್ಲಾ ಕೋಣೆಗಳಿಗೂ ಬಣ್ಣಗಳನ್ನು ಬಹಳ ಅಸ್ಥೆಯಿಂದ ಆರಿಸುತ್ತಾನೆ. ಅಲ್ಲದೆ ತನ್ನ ಸಂಸಾರದ ಎಲ್ಲರ ಉಡುಗೆ ತೊಡುಗೆಗಳ ಬಣ್ಣಗಳ ಬಗ್ಗೆಯೂ ಅತಿಯಾದ ಅಸ್ಥೆ ವಹಿಸುವುದನ್ನು ಕಾಣುತ್ತೇವೆ. ಇನ್ನು ಬಣ್ಣಗಳ ಆಯ್ಕೆ ನಿಜಕ್ಕೂ ವಿಸ್ಮಯಕರ. ಬಣ್ಣದ ವಾಹನ ನೋಡಿದ ಕೂಡಲೇ ನಮಗೆ ಅದು ಯಾರಿಗೆ, ಯಾವುದಕ್ಕೆ ಸಂಬಂಧಿಸಿದ್ದು ಎಂಬ ಒಂದು ಊಹೆ ಮನಸ್ಸಿಗೆ ಬರುತ್ತದೆ. ಉದಾಹರಣೆಗೆ ಅಗ್ನಿ ಶಾಮಕದಳದ ವಾಹನಗಳು ಕೆಂಪು, ಪೊಲೀಸ್ ವಾಹನಗಳು ಕಡುನೀಲಿ, ಮಿಲಿಟರಿ ವಾಹನಗಳು ಅಲೀವ್ ಹಸಿರು ಇತ್ಯಾದಿ. ಹಾಗೆಯೇ ಪೊಲೀಸ್ ರವರ ಪೋಷಾಕು ಸಂಚಾರಿಯಾದರೆ ಬಿಳಿ, ಅಪರಾಧ ವಿಭಾಗವಾದರೆ ಖಾಕಿ ಇತ್ಯಾದಿ. ಸೈನಿಕರಿಗೆ ಅಲೀವ್ ಹಸಿರು. ಎನ್.ಸಿ.ಸಿ. ದಳದವರಿಗೆ ಖಾಕಿ ಹೀಗೆ ಪ್ರತಿಯೊಂದು ವಿಭಾಗಕ್ಕೆ ಒಂದು ಬಣ್ಣದ ಆಯ್ಕೆ ಇರುತ್ತದೆ. ಶಾಲೆಗಳ ಸಮವಸ್ತ್ರಗಳನ್ನೂ ಒಂದು ನಿರ್ಧಿಷ್ಟವಾದ ಬಣ್ಣ ಹಾಗೂ ವಿನ್ಯಾಸವಿರುತ್ತದೆ. ಯಕ್ಷಗಾನ, ಬಯಲಾಟಗಳಲ್ಲಿ ಬಣ್ಣಗಳದ್ದೇ ಸಾಮ್ರಾಜ್ಯ. ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಬಣ್ಣಗಳ ಪಾತ್ರ ಹಿರಿದು. ರಸ್ತೆ ದಾಟಲು, ಕವಲುದಾರಿ, ವಾಹನ ನಿಲುಗಡೆ, ನಿಷೇಧ, ರಸ್ತೆ ಉಬ್ಬು, ಕಡಿದಾದ ಸೇತುವೆ, ತೀವ್ರಗತಿಯಾದ ತಿರುವು ಎಲ್ಲದ್ದಕ್ಕು ಬಣ್ಣದ ಒಂದು ಚಿನ್ಹೆಯ ಫಲಕ ಕಾಣಿಸುವುದು. ಓದು ಬರಹ ಬರದ ಚಾಲಕನೂ ಕೂಡ ಇದನ್ನೂ ನೋಡಿ ತನ್ನ ವಾಹನವನ್ನು ಸಲೀಸಾಗಿ ಚಲಾಯಿಸಬಲ್ಲ. ಬಿಳಿ, ಹಸಿರು, ಕಪ್ಪು, ಹಳದಿ, ಕೆಂಪು ಬಣ್ಣಗಳು ಸಾಮಾನ್ಯವಾಗಿ ಇಲ್ಲಿ ಉಪಯೋಗಿಸಲ್ಪಡುತ್ತದೆ. ಹೀಗೆ ಬಣ್ಣ ಎಲ್ಲ ಕಡೆ ತನ್ನ ಸಾಮ್ರಾಜ್ಯ ಹೊಂದಿದೆ. ಬಣ್ಣವಿಲ್ಲದ ಬದುಕು ಕಠಿಣ ಹಾಗೂ ನಿಸ್ಸಾರ.

ಬಣ್ಣಗಳ ಬಗ್ಗೆ ಇರುವ ಮೋಹ ಇಂದು, ನೆನ್ನೆಯದಲ್ಲ, ಸಾವಿರಾರು ವರ್ಷಗಳಿಂದ ಈ ಬಣ್ಣಗಳು ಜನಪ್ರಿಯವಾಗಿದೆ. ಅಜಂತ, ಎಲ್ಲೋರ, ಹಂಪಿ, ಭೀಮ್‌ಬೆಟ್ಕ ಗುಹೆಗಳ ಚಿತ್ರಗಳಲ್ಲಿ ಮೂಡಿ ಬಂದಿರುವ ಬಣ್ಣದ ಚಿತ್ರಗಳು ನಿಜಕ್ಕೂ ವಿಸ್ಮಯಕರ. ಈಗಿನ ಕೆಲವು ನೀರಿನ ಕಾರಂಜಿಗಳಲ್ಲಿ ಬಣ್ಣಗಳ ವಿನ್ಯಾಸ ನಿಜಕ್ಕೂ ಮನಮೋಹಕ. ಈ ಬಣ್ಣಗಳ ಓಕುಳಿಯಾಟ ನಮ್ಮ ಮನದಲ್ಲಿ ಮುದ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ. ನೀವೆನಂತೀರಿ?

-ಕೆ.ರಮೇಶ್

9 Responses

  1. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಬರಹ. ಯಾವುದೇ ವಿಷಯ ಇರಲಿ ಅದರ ಬಗ್ಗೆ ವಿವರವಾಗಿ, ಪ್ರತಿಯೊಂದು ಮಾಹಿತಿಯನ್ನು ನೀಡುವ (ಅದೂ ಆಕರ್ಷಕವಾಗಿ) ನಿಮ್ಮ ಬರಹದ ಶೈಲಿ ತುಂಬಾ ಚಂದ ಸರ್.

  2. ಬಣ್ಣದ ಬಗ್ಗೆ ನೀವು ಬರದಿರುವ ಲೇಖನ..
    ಮಾಹಿತಿ ಪೂರ್ಣ ಬರಹ..ಅದಕ್ಕಾಗಿ ಧನ್ಯವಾದಗಳು ಸಾರ್

  3. ಶಂಕರಿ ಶರ್ಮ says:

    ಬಣ್ಣಗಳ ಬಗೆಗೆ ಬಹು ಅಮೂಲ್ಯ ಮಾಹಿತಿಗಳನ್ನು ಆಕರ್ಷಕ ಬರೆಹದ ಮೂಲಕ ಪ್ರಸ್ತುತ ಪಡಿಸಿದ ರೀತಿ ಬಹಳ ಇಷ್ಟವಾಯ್ತು ಸರ್.

  4. padmini Hegade says:

    ನಿಜ, ಬಣ್ಣಗಳ ಬಗ್ಗೆ ಇರುವ ಮೋಹ ಇಂದು, ನೆನ್ನೆಯದಲ್ಲ!

  5. Padma Anand says:

    ಬಣ್ಣಗಳ ಕುರಿತಾದ ನಿಮ್ಮ ಆಕರ್ಷಕ ಲೇಖನ ವರ್ಣರಂಜಿತವಾಗಿ ಮನಸ್ಸಿಗೆ ಮುದ ನೀಡಿತು.

Leave a Reply to ಕೆ. ರಮೇಶ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: