ಶ್ರೇಷ್ಠ ಮಂತ್ರಿವರ್ಯ ಸುಮಂತ್ರ

Spread the love
Share Button

ರಾಜ್ಯಾಡಳಿತವು ಸುಗಮವಾಗಿ ಸಾಗಬೇಕಾದರೆ; ರಾಜನ ಮುಖ್ಯಮಂತ್ರಿಯು ಸರ್ವರೀತಿಯಿಂದಲೂ ಯೋಗ್ಯನಾಗಿರಬೇಕು. ರಾಜಸಭೆಯಲ್ಲಿ ಮಂತ್ರಿಯಾಗುವವನಿಗೆ ಕೆಲವಾರು ಯೋಗ್ಯತಾ ನಿಯಮಗಳಿರುತ್ತವೆ. ಅದು ಅವಶ್ಯವೂ ಹೌದು. ಸುಯೋಗ್ಯ ಮಂತ್ರಿಯು ಇರುವಲ್ಲಿ ರಾಜನು ಒಂದು ವೇಳೆ ಸುಗುಣರಹಿತನಾದರೂ ರಾಜ್ಯವು ಸುಭಿಕ್ಷವಾಗಿ ಪ್ರಜೆಗಳು ನಿಶ್ಚಿಂತೆಯಿಂದ ಬದುಕಬಹುದು. ಯಾಕೆಂದರೆ, ಮಂತ್ರಿ ಚಾಣಾಕ್ಷನಾದರೆ, ರಾಜನನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಚತುರನಾಗಿರುತ್ತಾನೆ. ಆದರೆ….. ಮಂತ್ರಿ, ಸ್ವಾರ್ಥಿಯೋ ದುರ್ವ್ಯಸನಿಯೋ ಕೆಟ್ಟವನೋ ಆಗಿದ್ದಲ್ಲಿ ರಾಜನು

ಒಳ್ಳೆಯವನಾದರೂ ಉಪಯೋಗವಿಲ್ಲ. ರಾಜ್ಯವು ಶೋಭಿಸುವ ಬದಲು ಕ್ಷೋಭದಿಂದ  ಕಂಗೆಡಬಹುದು. ಇಂತಹ ದೃಷ್ಟಾಂತಗಳು ನಮ್ಮ ಇತಿಹಾಸದಲ್ಲಿ ಹೇರಳವಾಗಿ ಸಿಗುತ್ತವೆ. ಅದಕ್ಕಾಗಿಯೇ ಕೌಟಿಲ್ಯನು ತನ್ನ ನೀತಿ ಶಾಸ್ತ್ರದಲ್ಲಿ ಮಂತ್ರಿವರ್ಯರು ಹೇಗಿರಬೇಕೆಂದು ತಿಳಿಸಿದ್ದಾನೆ.

ದುಷ್ಟಮಂತ್ರಿಗೆ ಉದಾಹರಣೆಯಾಗಿ ಚಂದ್ರಹಾಸನ ಕತೆಯನ್ನು ನೆನಪಿಸಬಹುದು. ಇತರ ರಾಜರ ಆಕ್ರಮಣಕ್ಕೊಳಗಾಗಿ ಯುದ್ಧದಲ್ಲಿ ದೊರೆ ಸತ್ತಾಗ ಸೇವಕಿಯೋರ್ವಳು ದೊರೆಯ ಮಗು ಚಂದ್ರಹಾಸನನ್ನು ರಕ್ಷಿಸಿ ಬೇರೆ ರಾಜ್ಯಕ್ಕೊಯ್ದು ಪೋಷಿಸುವುದು ಅಲ್ಲಿಯ ದೊರೆಗೆ ಸಂತಾನವಿಲ್ಲದೆ ಚಂದ್ರಹಾಸನನ್ನು ದತ್ತು ಪುತ್ರನನ್ನಾಗಿ ಸಾಕುವುದು, ಆ ರಾಜನ ಮಂತ್ರಿ ದುಷ್ಟಬುದ್ಧಿಯು ತನ್ನ ಮಗನಿಗೆ ರಾಜ್ಯ ಲಭಿಸಬೇಕೆಂಬ ದುರುದ್ದೇಶದಿಂದ ಚಂದ್ರಹಾಸನನ್ನು ಕೊಲೆ ಮಾಡಲು ಕಟುಕರ ಕೈಗೆ ಒಪ್ಪಿಸುವುದು. ಇದೆಲ್ಲ ಚಂದ್ರಹಾಸನ ಕತೆಯಿಂದ ತಿಳಿದ ವಿಚಾರ. ಹಾಗೆಯೇ ಉತ್ತಮ ಮಂತ್ರಿಯಿಂದ ರಾಜನ ಶ್ರೇಷ್ಠತೆ ಹೆಚ್ಚುವುದೆಂಬುದಕ್ಕೆ ದಕ್ಷ ಮಂತ್ರಿಯೋರ್ವನು ನೆನಪಿಗೆ ಬರುತ್ತಾನೆ. ಅವನೇ ಸುಮಂತ್ರ.

PC : Internet

ಸೂರ್ಯವಂಶದ ಅಜರಾಜನ ಪುತ್ರ ದಶರಥ, ಅರ್ಥಾತ್ ಶ್ರೀರಾಮಚಂದ್ರನ ಪಿತ ದಶರಥನ ಪ್ರೀತಿ ಪಾತ್ರನಾಗಿ, ವಿಶ್ವಾಸಕ್ಕೆ ಯೋಗ್ಯವಾಗಿದ್ದ ಸುಮಂತ್ರ ಮಂತ್ರಿ ಮಾತ್ರವಲ್ಲ ಸಾರಥಿಯೂ ಆಗಿದ್ದ. ಮಂತ್ರ ಅಂದರೆ ಸಲಹೆ ಕೊಡುವವ ಸುಮಂತ್ರ ಅಂದರೆ ಒಳ್ಳೆಯ ಸಲಹೆ ಕೊಡುವವ, ಈತನಿಗೆ ಶ್ರೀರಾಮನಲ್ಲಿ ಅತೀವ ಭಕ್ತಿಯಿತ್ತು.

ಮಗು ಭೂಮಿಗೆ ಬಿದ್ದ ಕ್ಷಣದಿಂದ ಅದರ ಜನನದ ಲೆಕ್ಕಾಚಾರವನ್ನು ಹಾಕಿ ಜಾತಕ ಕುಂಡಲಿಯನ್ನು ಮಾಡಿಸುತ್ತಾರೆ. ಆದರೆ ಅತ್ಯಂತ ಪೂರ್ವದಲ್ಲಿ ಮಗು ಗರ್ಭದಿಂದ ಚಲಿಸಿದ ಹೊತ್ತಿನ ಲೆಕ್ಕ ಹಾಕುತ್ತಿದ್ದರಂತೆ. ಇದು ಸಲ್ಲದು, ಭೂಮಿಗೆ ಬಿದ್ದ ಹೊತ್ತನ್ನೇ ಜನನದ ಹೊತ್ತೆಂದು ತಿಳಿಯಬೇಕೆಂದು ಶ್ರೀರಾಮ ನಿಗದಿಪಡಿಸಿದನಂತೆ. ಸುಮಂತ್ರನು ತಾಯಿಯ ಗರ್ಭದಿಂದ ತಲೆ ಹೊರಗೆ ಹಾಕಿ ಒಂಭತ್ತು ದಿನಗಳ ಪರ್ಯಂತ ಹಾಗೇ ಇದ್ದನಂತೆ…

ತ್ರೇತಾಯುಗದಲ್ಲಿ ಮನುಷ್ಯಾಯುಷ್ಯ ಹತ್ತು ಸಾವಿರ ವರ್ಷಗಳಂತೆ, ಸುಮಂತ್ರನು ಮರಣಿಸುವಾಗ ಆತನಿಗೆ 9999 ವರ್ಷ ಹನ್ನೊಂದು ತಿಂಗಳು, ಇಪ್ಪತ್ತೊಂದು ದಿನ. ಈತನು ಒಂಭತ್ತು ದಿನ ಮೊದಲು ಮರಣಿಸಿದುದರಿಂದ ಶ್ರೀರಾಮನು ಯಮದೂತರಿಂದ ಸುಮಂತ್ರನ ಜೀವವನ್ನು ಎಳೆದು ತಂದು ಬದುಕಿಸಿದನಂತೆ. ಇದರಿಂದ ಯಮನು ಶ್ರೀರಾಮನ ಮೇಲೆ ಸಿಟ್ಟುಗೊಂಡು ರಾಮನ ಮೇಲೆ ದಂಡೆತ್ತಿ ಹೋದನಂತೆ. ಸಹಾಯಕ್ಕಾಗಿ ದೇವತೆಗಳ ಮತ್ತು ನವಗ್ರಹಗಳಲ್ಲಿ ಕೋರಿದಾಗ ಅವರು ಒಪ್ಪಲಿಲ್ಲ. ಕೊನೆಗೆ ಯಮನು ತನ್ನ ಸೇನೆಯೊಂದಿಗೆ ಹೋಗಿ ಅಯೋಧ್ಯೆಯನ್ನು ಮುತ್ತಿದನು. ಆಗ ಯಮನೊಡನೆ ರಾಮ ಪುತ್ರನಾದ ಲವನು ಯುದ್ಧ ಮಾಡಿದನು. ಇದರಲ್ಲಿ ಯಮನೇ ಸೋತನು. ಪರಿಣಾಮ ಸೂರ್ಯನು ಬಂದು ಲವನ ಬ್ರಹ್ಮಾಸ್ತ್ರವನ್ನು ಹಿಂತೆಗೆಯಲು ಹೇಳಿ ಯಮನನ್ನು ಬದುಕಿಸಿದನಂತೆ. ಇನ್ನು ಮುಂದೆ ಮಾನವರು ಸಂಪೂರ್ಣ ಜನನವಾದ ಮೇಲೆಯೇ ಆಯುಷ್ಯ ನಿರ್ಣಯಿಸಬೇಕೆಂದು ಶ್ರೀರಾಮನು ಅಪ್ಪಣೆಯಿತ್ತನು ಎಂಬ ಕತೆಯಿದೆ.

ಸುಮಂತ್ರನ ಮಂತ್ರಾಲೋಚನೆಯಿಂದ ದಶರಥನ ಆಡಳಿತವು ಸುಸೂತ್ರವಾಗಿತ್ತು. ರಾಜ್ಯವು ಸುಭಿಕ್ಷೆಯಿಂದ ಕೂಡಿ ಪ್ರಜೆಗಳೆಲ್ಲ ಸುಖವಾಗಿದ್ದರು. ಆದರೆ ದಶರಥ ಬಹುಕಾಲ ಸಂತತಿ ಹೀನನಾಗಿದ್ದ. ಇದಕ್ಕಾಗಿ ವಸಿಷ್ಠ ಮುಂತಾದವರೆಲ್ಲ ಸೇರಿ ಸಂತತಿಗೋಸ್ಕರ ‘ಪುತ್ರಕಾಮೇಷ್ಟಿ’ ಯಾಗ ಮಾಡಲು ಪ್ರೇರೇಪಿಸಿದರು. ಸುಮಂತ್ರನು ವಸಿಷ್ಠಾದಿಗಳ ಸಲಹೆಯಂತೆ ಮಹಾಮಹಿಮನಾದ ಋಷ್ಯಶೃಂಗ ಮುನಿಯನ್ನು ಪುತ್ರಕಾಮೇಷ್ಠಿಗೆ ಪುರೋಹಿತನನ್ನಾಗಿ ಕರೆಸಿದನು.

ಶ್ರೀರಾಮನು ಪಿತೃವಾಕ್ಯ ಪರಿಪಾಲನೆಗಾಗಿ ಅರಣ್ಯವಾಸಕ್ಕೆ ಹೋದಾಗಲೂ ಸುಮಂತ್ರನೇ ರಥವನ್ನು ನಡೆಸಿ ಅರಣ್ಯಕ್ಕೆ ಕರೆ ತಂದ. ಹಾಗೆಯೇ ಅಣ್ಣ, ವನವಾಸಕ್ಕೆ ತೆರಳಿದನೆಂಬ ಸುದ್ದಿ ತಿಳಿದ ಭರತ; ಅತೀವ ದುಃಖದಿಂದ ಅಣ್ಣನನ್ನು ಅರಸುತ್ತಾ ಅರಣ್ಯಕ್ಕೆ ಹೋದಾಗಲೂ ಭರತನ ಜೊತೆಯಲ್ಲಿ ಸುಮಂತ್ರ ಹೋಗಿದ್ದ. ತನ್ನ ರಾಜ್ಯ, ರಾಜ, ಆತನ ಕುಟುಂಬ ಎಲ್ಲರ ಏಳೆಗೂ ಪಾತ್ರನಾದ ಸುಮಂತ್ರ ಆದರ್ಶ ಮಂತ್ರಿಯಾಗಿ ಆಚಂದ್ರಾರ್ಕ ಬೆಳಗುತ್ತಾನೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

6 Responses

 1. Anonymous says:

  ಸುರಹೊನ್ನೆ ಅಡ್ಮಿನರ್ ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.

 2. ಪೌರಾಣಿಕ ಕಥೆಯಾದರೂ…ಅಪರೂಪದ ಮಾಹಿತಿಯನ್ನು …ತಿಳಿಸಿದಕ್ಕೆ…ಧನ್ಯವಾದಗಳು ಮೇಡಂ.

 3. ನಯನ ಬಜಕೂಡ್ಲು says:

  ಚೆನ್ನಾಗಿದೆ.

 4. Padma Anand says:

  ಚಂದದ ನಿರೂಪಣೆ ಹೊಂದಿದ ಸುಂದರ ಕಥೆ.

 5. Anonymous says:

  ಧನ್ಯವಾದಗಳು.

 6. ಶಂಕರಿ ಶರ್ಮ says:

  ಸುಮಂತನ ಪಾತ್ರ ಪರಿಚಯ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: