ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 2

Share Button

ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಭಾರತದಲ್ಲಿ ವಿಜ್ಞಾನ ಶಿಕ್ಷಣ

ಬ್ರಿಟನ್‌ 1851ರಲ್ಲಿ ಲಂಡನ್ನಿನ ಹೈಡ್‌ ಪಾರ್ಕಿನಲ್ಲಿ ಕೈಗಾರಿಕಾ ಪ್ರದರ್ಶನವನ್ನು ಏರ್ಪಡಿಸಿತು. ಇದರಲ್ಲಿ ಇಡೀ ಪ್ರಪಂಚದ 14000 ಪ್ರದರ್ಶಕರು ಭಾಗವಹಿಸಿದ್ದರು. ಇದು 19ನೇ ಶತಮಾನದಲ್ಲಿ ಜನಪ್ರಿಯವಾದ ಸಂಸ್ಕೃತಿ ಮತ್ತು ಕೈಗಾರಿಕೆಗಳ ಪ್ರಪ್ರಥಮ ಜಾಗತಿಕ ಕೈಗಾರಿಕಾ ಮೇಳ ಆಗಿತ್ತು. ಇದರ ತೋರಿಕೆಯ ಉದ್ದೇಶ ನಿತ್ಯೋಪಯೋಗಿ ಕಲಾತ್ಮಕತೆ, ಉತ್ಪಾದನೆ ಮತ್ತು ವಾಣಿಜ್ಯ ವ್ಯಾಪಾರ ವಹಿವಾಟುಗಳನ್ನು ಉತ್ತೇಜಿಸುವುದಾಗಿದ್ದರೂ ಮೂಲ ಉದ್ದೇಶ ಬ್ರಿಟನ್‌ ಇಡೀ ಪ್ರಪಂಚದ ಕೈಗಾರಿಕಾ ನಾಯಕ ಎಂದು ಇಡೀ ಜಗತ್ತಿಗೆ ಸಾಬೀತುಪಡಿಸುವುದಾಗಿತ್ತು. ಆ ಮೇಳದಲ್ಲಿ ಬ್ರಿಟಿಷರು ಗಟ್ಟಿತನ, ತಾಳಿಕೆ-ಬಾಳಿಕೆ ಮತ್ತು ಉತ್ಕೃಷ್ಟ ಗುಣಮಟ್ಟಗಳನ್ನು ಯಾವ ಯಾವ ಕ್ಷೇತ್ರಗಳಲ್ಲಿ ಕಂಡುಕೊಳ್ಳಬೇಕಾಗಿತ್ತೋ ಆ ಎಲ್ಲಾ ಕ್ಷೇತ್ರಗಳಲ್ಲಿ – ಕಬ್ಬಿಣ ಮತ್ತು ಉಕ್ಕು, ಮಷಿನರಿ, ಟೆಕ್ಸ್ಟೈಲ್‌ ಮುಂತಾದ ಕ್ಷೇತ್ರಗಳಲ್ಲಿ – ಎಲ್ಲರನ್ನೂ ನಿಶ್ಚಿತವಾಗಿ ಮೀರಿಸಿರುವುದನ್ನು ಜಾಹೀರುಪಡಿಸಿದ್ದರು. ತಮ್ಮಿಂದಲೇ ಜಗತ್ತಿನ ಭದ್ರಭವಿಷ್ಯ ಸಾಧ್ಯ ಎಂಬುದನ್ನು ಸಮರ್ಥವಾಗಿ ಬಿಂಬಿಸಿದ್ದರು. ಈ ಮೇಳದಲ್ಲಿ ವ್ಯವಸ್ಥಾಪಕರ ಆದ್ಯತೆಯು ವಸಾಹತುಗಳ ಅದರಲ್ಲೂ ಭಾರತದ ಕಚ್ಚಾವಸ್ತುಗಳನ್ನು ಪ್ರತಿಷ್ಠಿತ ಸ್ಥಾನದಲ್ಲಿರಿಸುವುದು ಆಗಿತ್ತು.  

ಮೇಳದಲ್ಲಿ ತಾಂತ್ರಿಕತೆ (ಟೆಕ್ನಾಲಜಿ) ಮತ್ತು ಚಾಲ್ತಿಯಲ್ಲುಳಿಯುವ ಯಂತ್ರೋಪಕರಣಗಳು (ಮಷಿನರಿಗಳು) ವೀಕ್ಷಕರ ಗಮನವನ್ನು ಅತಿ ಹೆಚ್ಚಾಗಿ ಸೆಳೆದಿತ್ತು. ನೂಲು ತೆಗೆಯುವ ತಾಂತ್ರಿಕತೆಯಿಂದ ಹಿಡಿದು ಕಚ್ಚಾ ನೂಲು ಅಂತಿಮವಾಗಿ ಬಳಕೆಯ ವಸ್ತ್ರ ಆಗುವ ತಾಂತ್ರಿಕತೆಯ ವರೆಗೆ ವೀಕ್ಷಕರು ವಸ್ತ್ರೋದ್ಯಮವನ್ನು; ಡಾಗರ್‌ ವಿಧಾನ ಆಧಾರಿತ ಫೋಟೋಗ್ರಾಫಿಕ್‌ ಪ್ರಕ್ರಿಯೆಯನ್ನು, ಬಣ್ಣಹಚ್ಚಿದ ಚಿತ್ರ ಬಿಡಿಸಿದ ಹಾಗೂ ಲೋಹದ ಆಕ್ಸೈಡಿನಿಂದ ಹೊಳಪುಗಟ್ಟಿದ ಮಡಿಕೆಗಳ ತಯಾರಿಕೆಯನ್ನು ಪರಿಶೀಲಿಸಬಹುದಾಗಿತ್ತು. ಆತ್ಮ ರಕ್ಕ್ಷಕ ರಿವಾಲ್ವರ್, ಎಲೆಕ್ಟ್ರಿಕ್‌ ಟೆಲೆಗ್ರಾಫ್‌, ಸೂಕ್ಷ್ಮದರ್ಶಕ, ಗಾಳಿ ಪಂಪ್‌, ಬಾರೋ ಮೀಟರ್‌, ದೂರದರ್ಶಕ, ಫ್ಯಾಕ್ಸ್‌ ಮಷಿನನ್ನು ಹೋಲುವ ಯಂತ್ರ, ವೋಟಿಂಗ್‌ ಮಷಿನ್, ಸ್ಟೀರಿಯೊಸ್ಕೋಪ್ ಮುಂತಾದ ವೈಜ್ಞಾನಿಕ ಉಪಕರಣಗಳನ್ನು; ಸಂಗೀತ, ಶಸ್ತ್ರಚಿಕಿತ್ಸೆ ಮತ್ತು ಗಡಿಯಾರ ಸಂಬಂಧಿತ ಉಪಕರಣಗಳನ್ನು ನೋಡಬಹುದಿತ್ತು. 

ಈ ಮೇಳಕ್ಕಾಗಿ ಕಟ್ಟಿದ ಕಟ್ಟಡವು ಸಂಪೂರ್ಣ ಗಟ್ಟಿಮುಟ್ಟಾದ ಗಾಜಿನದಾಗಿದ್ದು ಬೆಳಕು ಮತ್ತು ವಿನ್ಯಾಸದಿಂದಲೂ ಆಕರ್ಷಕವಾಗಿತ್ತು. ಈ ಕಟ್ಟಡ ಇಂಜನಿಯರಿಂಗ್‌ ಮತ್ತು ವಾಸ್ತುಶಿಲ್ಪದ ಅದ್ಭುತ ಸಾಹಸಪ್ರದರ್ಶನವೂ ಆಗಿತ್ತು. ಇದರ ಹೊರ ಆವರಣದ ಸುತ್ತ ಪ್ರವೇಶ ದ್ವಾರದಲ್ಲಿದ್ದ ಮರಗಿಡಗಳು ಮತ್ತು ಪ್ರತಿಮೆಗಳು ಪ್ರಕೃತಿಯ ಮೇಲಿನ ಮನುಷ್ಯನ ಗೆಲುವನ್ನು ಸಾರುತ್ತಿದ್ದವು. ಈ ಕಟ್ಟಡವನ್ನು ಹಾಗೆಯೇ ಅಲ್ಲಿಂದ ತೆಗೆದು 1854ರಲ್ಲಿ ಸಿಡೆನ್‌ ಹಾಮ್‌ ಗುಡ್ಡದ ಮೇಲೆ ಪುನರ್ ಪ್ರತಿಷ್ಠಾಪಿಸಿದರು (erect)! 

6 ತಿಂಗಳ ಕಾಲ ನಡೆದ ಈ ಮೇಳವನ್ನು 6 ಮಿಲಿಯನ್‌ ಸಾರ್ವಜನಿಕರು ವೀಕ್ಷಿಸಿದರು. ಇದನ್ನು ವೀಕ್ಷಿಸಲು ಚಾರ್ಲ್ಸ್‌ ಡಾರ್ವಿನ್‌, ಮೈಕೇಲ್‌ ಫ್ಯಾರಡೆ, ವಿಲಿಯಂ ಚೇಂಬರ್‌ ಲೇನ್‌, ಸ್ಯಾಮ್ಯುಯಲ್‌ ಕೋಲ್ಟ್‌‌, ಫ್ರೆಡೆರಿಕ್‌ ಕಾಲಿಯರ್‌, ಬೇಕ್‌ ವೆಲ್ ಮುಂತಾದ ವಿಜ್ಞಾನಿಗಳೂ ಬಂದಿದ್ದರು.  ಸಂಗ್ರಹವಾದ ಪ್ರವೇಶ ಧನದಲ್ಲಿ ಒಂದು ಭಾಗವನ್ನು ಕೈಗಾರಿಕಾ ಸಂಶೋಧನಾ ಸಹಾಯಧನದಂತೆ ವಿದ್ಯಾರ್ಥಿ ವೇತನ ನೀಡಲು ಶೈಕ್ಷಣಿಕ ಟ್ರಸ್ಟ್‌ ಆಗಿ ಮಾಢಿದರು.‌ 

ಇವೆಲ್ಲವನ್ನೂ ಗಮನಿಸಿದ ಭಾರತದ ಪ್ರದರ್ಶಕರು ವಸಾಹತುಶಾಹಿ ಆಡಳಿತಗಾರರ ಮನಸ್ಥಿತಿಯನ್ನು ಬಹಳ ಬೇಗ ಅರ್ಥಮಾಡಿಕೊಂಡರು. ತಾವು ಬ್ರಿಟಿಷರು ಪರಿಚಯಿಸುತ್ತಿರುವ ವೈಜ್ಞಾನಿಕ ಪ್ರಗತಿಯ ಲಾಭಗಳನ್ನು ಸ್ವೀಕರಿಸಬೇಕು ಮತ್ತು ಅದನ್ನು ರಾಷ್ಟ್ರೀಯ ಅಭಿವೃದ್ಧಿಯ ಸಾಧನವನ್ನಾಗಿಸಿಕೊಳ್ಳಬೇಕು ಎಂದು ನಿಶ್ಚಯಿಸಿದರು. 1851ರಲ್ಲಿಯೇ ತಮ್ಮವರಿಗೆ ಸಂಶೋಧನಾ ವಿದ್ಯಾರ್ಥಿವೇತನವನ್ನು ಕೊಡುವ ನಿಕಾಯವನ್ನು ರಚಿಸಿದರು. ಪ್ರಾಕೃತಿಕ ವಿಜ್ಞಾನಗಳನ್ನು (Natural Sciences) ಬ್ರಿಟನ್ನಿನಲ್ಲಿ ಅಧ್ಯಯನ ಮಾಡುವವರಿಗೆ ಹಣ ಸಹಾಯ ಮಾಡಿದರು. ಇದನ್ನು ಅಲ್ಪಕಾಲದಲ್ಲಿಯೇ ಗಮನಿಸಿದ ಬ್ರಿಟನ್‌ ಅದನ್ನು ನಿರ್ಬಂಧಿಸಿತು. 

ಬ್ರಿಟಿಷರಿಗೆ ಭಾರತದಲ್ಲಿ ಯಾವುದೇ ವೈಜ್ಞಾನಿಕ ಉದ್ಯಮವನ್ನು ಕೈಗೊಳ್ಳಬೇಕಾದರೂ ಭಾರತೀಯ ಸಹಾಯಕರ ಅಗತ್ಯ ಇತ್ತು. ಇದನ್ನು ಮನಗಂಡ ತಾರಾನಾಥ ಪಂಡಿತ, ಆನಂದ ಮೋಹನ ಕಾಮೋಸ್‌, ದಯಾಲ್‌ ಸಿಂಗ್‌ ಮಜಿಥಿಯ, ವಿಷ್ಣು ಶಾಸ್ತ್ರಿ ಚಿಪ್ಲುಕರ್‌, ಮಹಾರಾಜ ಕೃಷ್ಣರಾಜ ಒಡೆಯರ್‌, ಮಹಾರಾಜ ಪ್ರಭು ನಾರಾಯಣ ಸಿಂಗ್‌ ಮೊದಲಾದವರು ಭಾರತೀಯರಿಗಾಗಿ ಸಂಶೋಧನಾ ಸಂಸ್ಥೆಗಳನ್ನು ಆರಂಭಿಸಲು ಸಹಾಯ ಹಸ್ತ ಚಾಚಿದರು. ಬ್ರಿಟನ್‌ ಇದಕ್ಕೂ ತಡೆಯನ್ನೊಡ್ಡಿತು.  

1857ರ ಸೈನಿಕ ಕ್ರಾಂತಿಯ ನಂತರ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡ ಬ್ರಿಟಿಷ್‌ ರಾಜಶಾಹಿ 1857ರಲ್ಲಿಯೇ ಕಲ್ಕತ್ತ, ಬಾಂಬೆ, ಮದ್ರಾಸುಗಳಲ್ಲಿ; 1882ರಲ್ಲಿ ಲಾಹೋರಿನಲ್ಲಿ; 1887ರಲ್ಲಿ ಅಲಹಾಬಾದಿನಲ್ಲಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪನೆ ಮಾಡಿತು. ಇವುಗಳೊಂದಿಗೆ ಸಂಯೋಜನೆಗೊಂಡ ಕಾಲೇಜುಗಳಲ್ಲಿ ಕಲಿಸುತ್ತಿದ್ದ ವಿಷಯಗಳು ಇತಿಹಾಸ, ತತ್ತ್ವಶಾಸ್ತ್ರ, ಗಣಿತಶಾಸ್ತ್ರ, ಭೌತ ವಿಜ್ಞಾನಗಳು, ತರ್ಕಶಾಸ್ತ್ರ, ರಸಾಯನಶಾಸ್ತ್ರ, ಭೂಗೋಳಶಾಸ್ತ್ರ, ಪ್ರಾಕೃತಿಕ ವಿಜ್ಞಾನಗಳು, ಶರೀರಶಾಸ್ತ್ರ (ಫಿಸಿಯಾಲಜಿ) ಗಳಾಗಿದ್ದವು. 1882ರಲ್ಲಿ ಬಾಂಬೆ ವಿಶ್ವವಿದ್ಯಾನಿಲಯವು ಈ ವಿಷಯಗಳ ಜೊತೆಗೆ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂಗರ್ಭಶಾಸ್ತ್ರಗಳನ್ನೂ ಬೋಧನಾ ವಿಷಯಗಳನ್ನಾಗಿ ಅಳವಡಿಸಿಕೊಂಡಿತು. ಆದರೆ ಇವುಗಳ ಉದ್ದೇಶ ಯೂರೋಪಿಯನ್‌ ವಿಶ್ವವಿದ್ಯಾನಿಲಯಗಳಂತೆ ವೈಜ್ಞಾನಿಕ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದು ಆಗಿರಲಿಲ್ಲ. ಇವು ಕೇವಲ ತಮ್ಮ ಸಂಯೋಜಿತ ಕಾಲೇಜುಗಳಲ್ಲಿ ಪರೀಕ್ಷೆಯನ್ನು ನಡೆಸುವ ಮತ್ತು ಉತ್ತೀರ್ಣರಾದವರಿಗೆ ಪದವಿ ಪ್ರದಾನಮಾಡುವ ಜವಾಬ್ದಾರಿಯನ್ನು ಮಾತ್ರ ನಿರ್ವಹಿಸುತ್ತಿದ್ದವು. ಭಾರತೀಯರನ್ನು ಅಭಿವೃದ್ಧಿಯ ಮಾರ್ಗದಲ್ಲಿ ಕರೆದೊಯ್ಯುತ್ತಿದ್ದೇವೆ ಎಂಬುದನ್ನು ಬಿಂಬಿಸುವ ಕಣ್ಣೊರೆಸುವ ತಂತ್ರ ಇದಾಗಿತ್ತು! 

ಈ ವಿಶ್ವವಿದ್ಯಾನಿಲಯಗಳು ಭಾರತೀಯರಿಗೆ ವಿಜ್ಞಾನವನ್ನು ಪರಿಚಯಿಸಿದುದು ಭಾರತೀಯರನ್ನು ಸರ್ಕಾರಿ  ಮತ್ತು ಸರ್ಕಾರ ಪೋಷಿತ ಸೇವಾ ವಿಭಾಗಗಳಲ್ಲಿ (ಸರ್ವಿಸ್‌ ಸೆಕ್ಟರ್)‌ ವಿಷಯ ಸಂಗ್ರಹಣಾಕಾರರನ್ನಾಗಿ, ಸರ್ವೇಕ್ಷಣಾ ಸಹಾಯಕರನ್ನಾಗಿ, ನಿಯೋಜಕರನ್ನಾಗಿ, ಗುಮಾಸ್ತರನ್ನಾಗಿ ನೇಮಕ ಮಾಡಿಕೊಳ್ಳುವುದಕ್ಕಾಗಿ ಮಾತ್ರ ಆಗಿತ್ತು. 1902ರ ನಂತರ ಸ್ಥಳೀಯ ಭಾರತೀಯ ಚಿಂತಕರ ಒತ್ತಡದಿಂದಾಗಿ ವಿಶ್ವವಿದ್ಯಾನಿಲಯಗಳು ಬೋಧನೆಯನ್ನೂ ಮತ್ತು ಸಂಶೋಧನೆಯನ್ನೂ ನಿರ್ವಹಿಸುವ ವಿಶ್ವವಿದ್ಯಾನಿಲಯಗಳಾಗಿ ರೂಪಾಂತರಗೊಂಡವು. ಅದಕ್ಕಾಗಿ ಪ್ರಯೋಗಾಲಯಗಳು ರೂಪುಗೊಂಡವು, ಬಿ.ಎಸ್.ಸಿ, ಎಂಎಸ್‌,ಸಿ, ಡಿ.ಎಸ್.ಸಿ  ಪದವಿಗಳನ್ನು ಪ್ರದಾನ ಮಾಡುವುದಕ್ಕೆ ಪೂರಕವಾಗಿ ಅವುಗಳ ಪಠ್ಯ ಮತ್ತು ಶೈಕ್ಷಣಿಕ ಕ್ರಮ ಪುನರ್ರೂಪಿತಗೊಂಡಿತು.  

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=35618

(ಮುಂದುವರಿಯುವುದು)

-ಪದ್ಮಿನಿ ಹೆಗಡೆ

5 Responses

  1. ಉತ್ತಮ ಗುಣಮಟ್ಟದ ಮಾಹಿತಿ ಯುಳ್ಳ ಲೇಖನ ಧನ್ಯವಾದಗಳು ಮೇಡಂ.ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿ ದೆ.

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  3. Padma Anand says:

    ವಿವರಣಾತ್ಮಕ ಲೇಖನ ಸೊಗಸಾಗಿ ಮೂಡಿ ಬಂದಿದೆ.

  4. . ಶಂಕರಿ ಶರ್ಮ says:

    ಬಹಳಷ್ಟು ಮಾಹಿತಿಗಳನ್ನು ಒಳಗೊಂಡಿರುವ ಸಂಗ್ರಹಯೋಗ್ಯ ಲೇಖನ. ಧನ್ಯವಾದಗಳು ಮೇಡಂ.

    • Padmini Hegde says:

      ಆತ್ಮೀಯ ನಾಗರತ್ನ, ನಯನ ಬಜಕೂಡ್ಲು, ಪದ್ಮ ಆನಂದ್‌, ಶಂಕರಿ ಶರ್ಮ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ವಿಜ್ಞಾನಿಗಳ ಗಾಥೆ ನನಗೆ ಒಂದು ರೀತಿಯಲ್ಲಿ ರೋಮಾಂಚನವನ್ನುಂಟು ಮಾಡಿತು. ಅದನ್ನು ನಿಮ್ಮಂಥ ಸಹೃದಯರೊಂದಿಗೆ ಹಂಚಿಕೊಳ್ಳಬೇಕು ಎನ್ನುವ ಆಶಯಕ್ಕೆ ನೀವೆಲ್ಲಾ ಸ್ಪಂದಿಸಿದ್ದೀರಿ.ಹೃತ್ಪೂರ್ವಕ ವಂದನೆಗಳು. ಲೇಖನ ಮಾಲೆಯನ್ನು ಪ್ರಕಟಿಸುತ್ತಿರುವ ಗಣಗ್ರಾಹಿ ಹೇಮಮಾಲಾ ಮೇಡಂಗೆ ಹೃತ್ಪೂರ್ವಕ ಕೃತಜ್ಞತೆಗಳು

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: