ಅವಿಸ್ಮರಣೀಯ ಅಮೆರಿಕ-ಎಳೆ 26

Share Button

ಕಾಡಿನೊಳಗೊಂದು ಉಗಿಬಂಡಿ..!

ಜುಲೈ 4 ನೇ ತಾರೀಕು ಆದಿತ್ಯವಾರ, ಹೇಗೂ ರಜಾದಿನ; ಜೊತೆಗೇ ಅಮೆರಿಕದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಡಗರ! ಹಾಗೆಯೇ, ವಿಶೇಷವಾದ  ಪ್ರದೇಶವೊಂದಕ್ಕೆ  ಭೇಟಿ ನೀಡುವ ಯೋಜನೆಯನ್ನು ಮನೆಯಲ್ಲಿ ರೂಪಿಸಲಾಗಿತ್ತು… ಅದುವೇ ರೋರಿಂಗ್ ಕ್ಯಾಂಪ್  (Roaring camp and Big Trees Narrow Gauage Railroad). ಸಾಂತಾಕ್ರೂಝ್ ಪ್ರಾಂತ್ಯದಲ್ಲಿರುವ ಇದು, ಹಲವು ತರಹದ ವಿಶೇಷತೆಗಳಿಗಾಗಿ ಪ್ರಸಿದ್ಧಿ ಪಡೆದಿದೆ.

ದಟ್ಟಕಾನನದ ನಡುವೆ ನಮ್ಮ ವಾಹನವು ಚಲಿಸಿದಾಗ ನಿಜಕ್ಕೂ ಅನಂದವಾಯಿತು. ನಮ್ಮಲ್ಲಿ ಒಂದು ರಸ್ತೆ ಮಾಡುವುದಿದ್ದರೆ, ರಸ್ತೆಯಿಂದ ಮಾರು ದೂರದ ವರೆಗೂ ನೂರಾರು ವೃಕ್ಷಗಳ ಮಾರಣಹೋಮವಾಗುವುದನ್ನು ನೋಡುವಾಗ ಹೊಟ್ಟೆಯುರಿಯುತ್ತದೆ ಅಲ್ಲವೇ? ಆದರೆ, ರಸ್ತೆ ಪಕ್ಕದ ಮರಗಳು ರಸ್ತೆಗೆ ತಾಗಿಕೊಂಡೆ ಇದ್ದು, ಅವುಗಳಿಂದ ಇಲ್ಲಿ ಯಾರಿಗೂ ತೊಂದರೆಯಾದಂತೆ ಕಾಣಲಿಲ್ಲ. ನಾವು ಈ ನಿಲ್ದಾಣಕ್ಕೆ ತಲಪಿದಾಗ ಮಧ್ಯಾಹ್ನವಾಗಿತ್ತು. ಹಳೆಯ ಸಾಂಪ್ರದಾಯಿಕ ರೀತಿಯಲ್ಲಿದ್ದ  ಫೆಲ್ಟನ್ ಹೆಸರಿನ ಪುಟ್ಟ ನಿಲ್ದಾಣದಲ್ಲಿ ಹತ್ತಾರು ಪ್ರವಾಸಿಗರು ತಮ್ಮ ಸರದಿಗಾಗಿ ಕಾಯುತ್ತಿದ್ದರು.  

ರೆಡ್ ಉಡ್(Redwood) ಮರಗಳ ದಟ್ಟ ಕಾಡಿನ ನಡುವೆ ಸುಮಾರು 5ಕಿ.ಮೀಗಳಷ್ಟು ದೂರ, ಕಡಿದಾದ ಬೆಟ್ಟ ಗುಡ್ಡಗಳ ಮೂಲಕ ಸಾಗುವ ಇಲ್ಲಿಯ ಉಗಿಬಂಡಿಯು ಕೇವಲ 3ಅಡಿಗಳಷ್ಟು ಅಗಲದ ನ್ಯಾರೋ ಗೇಜ್ ಹಳಿ ಮೇಲೆ ಕೇವಲ ಪ್ರವಾಸಿಗರಿಗಾಗಿ ಮಾತ್ರ ಚಲಿಸುತ್ತದೆ. ಸ್ಥಳೀಯ ಫೆಲ್ಟನ್  ರೈಲ್ವೆ ಡಿಪೋದಿಂದ ಹೊರಟು, ಚುಕುಪುಕು ಸದ್ದು ಮಾಡುತ್ತಾ, ಗಟ್ಟಿಯಾಗಿ ಕೂಗು ಹಾಕುತ್ತಾ, ಎತ್ತರೆತ್ತರ ಬೆಳೆದ ಮರಗಳ ನಡುವೆ  ಸಾಗುವುದನ್ನು ನೋಡುವಾಗ, ನಾವು ಹತ್ತಾರು ದಶಕಗಳ ಹಿಂದೆ ಹೋಗಿರುವಂತೆ ಭಾಸವಾಗುತ್ತದೆ.

1890ರಿಂದಲೇ ಕಾರ್ಯನಿರ್ವಹಿಸುತ್ತಿದ್ದ ಈ ಉಗಿಬಂಡಿಯು, ಇಲ್ಲಿ ಇಂದಿಗೂ ಸುಸ್ಥಿತಿಯಲ್ಲಿದ್ದು ಸಂಚರಿಸುತ್ತಿರುವುದು ಅತ್ಯಂತ ಸೋಜಿಗವನ್ನುಂಟು ಮಾಡುತ್ತದೆ ಮತ್ತು ಅಷ್ಟು ಚೆನ್ನಾಗಿ ಅದನ್ನು ಇನ್ನೂ ಕಾಪಿಡಲಾಗಿರುವುದು ಮೆಚ್ಚುಗೆಯನ್ನುಂಟು ಮಾಡುವುದು ಸುಳ್ಳಲ್ಲ. ಉಗಿಬಂಡಿಯನ್ನು ಪುನಃಶ್ಚೇತನಗೊಳಿಸಿ, 1963ರಲ್ಲಿ ಅದರ ಸಂಚಾರವನ್ನು ಪುನ: ಆರಂಭಿಸಲಾಯಿತು. ಎತ್ತರ ಪ್ರದೇಶದಲ್ಲಿ ಸಂಚರಿಸಲು ಬೇಕಾದ  ಎಳೆಯುವ ಹೆಚ್ಚಿನ ಶಕ್ತಿಗಾಗಿ, ಮೂರು ಎಂಜಿನ್ ಗಳನ್ನು ಜೋಡಿಸಲಾಗಿದೆ. 1988ರಲ್ಲಿ ಇದಕ್ಕೆ, ಅಲ್ಲಿಯ ಹೆಗ್ಗುರುತೆಂಬ ಸ್ಥಾನವನ್ನೂ ನೀಡಲಾಯಿತು.

ಬಹು ದೂರದಿಂದ ಎಂಬಂತೆ, ಉಗಿಬಂಡಿಯ ಕೂ ಸದ್ದು ಎಲ್ಲೆಡೆ ಪ್ರತಿಧ್ವನಿಸಿ, ಆಗಸದೆತ್ತರ ಬೆಳೆದ ದಟ್ಟ ಕಾನನದ ಮರಗಳೆಡೆಯಿಂದ ಕೇಳಿಸಿತು. ಈ ಉಗಿಬಂಡಿಯ ಪಯಣವು  ಸುಮಾರು ಒಂದೂವರೆ ತಾಸು ಇರುವುದರಿಂದ, ಬೆಳಗ್ಗೆ ಎರಡು ಗುಂಪು ಮತ್ತು ಮಧ್ಯಾಹ್ನದ ಬಳಿಕ ಎರಡು ಗುಂಪುಗಳನ್ನಾಗಿ ಪ್ರವಾಸಿಗರನ್ನು ವಿಂಗಡಿಸಿ ಕರೆದೊಯ್ಯುವರು. ನಮಗೆ ಮಧ್ಯಾಹ್ನದ 3:30ರ  ಗುಂಪಿನಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿತು.  ಅದಕ್ಕಾಗಿ ಕಾಯುವ ಸಮಯದಲ್ಲಿಯೇ ಅಕ್ಕಪಕ್ಕ ಸುತ್ತಾಡಿದಾಗ, ಅಲ್ಲೇ ಪಕ್ಕದಲ್ಲಿ ಮಕ್ಕಳಿಗೆ ಆಟವಾಡಲು ಸಣ್ಣ ಪಾರ್ಕ್,  ಕಾರ್ಯಕ್ರಮಗಳಿಗಾಗಿ ಬಯಲು ವೇದಿಕೆ, ಅದರ ಸುತ್ತಲೂ ಅರ್ಧ ವೃತ್ತಾಕಾರದಲ್ಲಿ ವೀಕ್ಷಕರಿಗೆ ಕುಳಿತುಕೊಳ್ಳಲು ಮರದ ಗ್ಯಾಲರಿ, ನಿಲ್ದಾಣದ ಹಿಂಭಾಗದಲ್ಲಿ ವಿಶಾಲವಾದ ಬಯಲು ಜೊತೆಗೆ ಎಲ್ಲೆಲ್ಲಿಯೂ ಕಂಡುಬರುವ ಸಹಜ ಶುಚಿತ್ವವು ಮನಸ್ಸಿಗೆ ಮುದ ನೀಡಿತು.

ಒಂದರ್ಧ ತಾಸಿನಲ್ಲಿ ನಿಧಾನವಾಗಿ ಬಂದ ಪುಟ್ಟ ರೈಲನ್ನು ಕಂಡು ನಿಜಕ್ಕೂ ಆಶ್ಚರ್ಯವಾಯ್ತು. ಅದು ತನ್ನ ಮುಂಭಾಗದಲ್ಲಿದ್ದ  ಉಗಿಯಂತ್ರದಿಂದ ದಟ್ಟ ಉಗಿಯನ್ನು  ಹೊರಹೊಮ್ಮಿಸಿ, ಗಟ್ಟಿಯಾಗಿ ನಿಡುಸುಯ್ದು ನಮ್ಮೆದುರು ಬಂದು ನಿಂತಿತು. ಸಣ್ಣದಾದ ಮೂರು ಬೋಗಿಗಳನ್ನೊಳಗೊಂಡ ಆ ಬಂಡಿಯಿಂದ ಪ್ರವಾಸಿಗರು ಕೆಳಗಿಳಿದಂತೆಯೇ, ನಮ್ಮನ್ನು ಮೇಲಕ್ಕೆ ಹತ್ತಿಸಿಕೊಳ್ಳಲಾಯಿತು. ಛಾವಣಿ ಇಲ್ಲದ, ತೆರೆದ ಉಗಿಬಂಡಿಯ ಮೇಲ್ಗಡೆ ಕುಳಿತುಕೊಳ್ಳಲು ಉದ್ದಕ್ಕಿದ್ದವು… ಬಲವಾದ ಕಬ್ಬಿಣದ ಆಸನಗಳು. ಅದರಲ್ಲಿ ಕುಳಿತಾಗ, ಚಿಕ್ಕಂದಿನಲ್ಲಿ  ಲಾರಿಯಲ್ಲಿ ಹೋದ ನೆನಪಾಯಿತು! ಸುಮಾರು ನೂರು ಪ್ರವಾಸಿಗರನ್ನು ತುಂಬಿಸಿಕೊಂಡು ನಮ್ಮ ಚುಕುಪುಕು ರೈಲು ಹೊರಟಾಗ ವಯಸ್ಸು ಭೇದವಿಲ್ಲದೆ ಎಲ್ಲರೂ ಮಕ್ಕಳಂತೆ ಸಂಭ್ರಮಿಸಿದುದನ್ನು ಮರೆಯುವಂತಿಲ್ಲ. ಕೆಲವು ಕಡೆಗಳಲ್ಲಿ, ಇದರ ಅಗಲ ಕಿರಿದಾದ ಹಳಿಗಳನ್ನು ಎತ್ತರಿಸಲು ಮರದ ದಿಮ್ಮಿಗಳಿಂದಲೇ ಆಧಾರವನ್ನು ನೀಡಿದ್ದರು. ಅದರ ಮೇಲೆ ಬಂಡಿ ಚಲಿಸುವಾಗ ನಿಜಕ್ಕೂ ಭಯವಾಗುತ್ತದೆ. ಕಾಡಿನೊಳಗಿನ ನಮ್ಮ ಪಯಣದಲ್ಲಿ ಕಾಣಸಿಕ್ಕಿದ ಬೃಹದ್ಗಾತ್ರದ ಮರಗಳು, ಅಲ್ಲಲ್ಲಿ  ಅರ್ಧಂಬರ್ಧ ಸುಟ್ಟು ಕರಕಲಾಗಿ ಬಿದ್ದಿದ್ದ ಮರಗಳ ನೂರಾರು ವರ್ಷಗಳ ಚರಿತ್ರೆಯನ್ನು, ನಮ್ಮೊಡನಿದ್ದ ನುರಿತ ಗೈಡ್ ವಿವರಿಸುತ್ತಿದ್ದ. ಅದನ್ನು ನಾವು  ಕೇಳುತ್ತಾ ಸಾಗುತ್ತಿದ್ದಂತೆಯೇ… ಕಾಡ ಮಧ್ಯದಲ್ಲಿ ಇದ್ದಕ್ಕಿದ್ದಂತೆಯೇ ನಮ್ಮ ಬಂಡಿ ನಿಧಾನವಾಗಿ ನಿಂತುಬಿಟ್ಟಿತು…ಏನಾಯ್ತೆಂದು ನೋಡು ನೋಡುತ್ತಿದ್ದಂತೆಯೇ…

ನಮ್ಮ  ಹಳಿಯ ಬಲಪಕ್ಕದಲ್ಲಿರುವ ಕಾಡಿನ ಮರಗಳ ಮಧ್ಯದಿಂದ, ಗಂಡ ಹೆಂಡಿರಂತೆ ತೋರುವ ಹಿರಿಯರಿಬ್ಬರು ಕೈಯಲ್ಲಿ ಚೀಲ ಹಿಡಿದು, ಬೊಬ್ಬಿಡುತ್ತಾ  ರೈಲಿನೆಡೆಗೆ ಓಡಿ ಬಂದು ರೈಲನ್ನು ಏರಿ ಬಿಟ್ಟರು. ಅವರ ಜೊತೆಗೆ ಒಬ್ಬಳು ಪುಟ್ಟ ಹುಡುಗಿ, ಇನ್ನಿಬ್ಬರು ಹೆಂಗೆಳೆಯರಿದ್ದರು. ಅವರ ಬೆನ್ನಟ್ಟಿಸಿಕೊಂಡು ಬರುತ್ತಿದ್ದರು.. ಇಬ್ಬರು ದಾಂಡಿಗ ಕಳ್ಳರು, ಕೈಯಲ್ಲಿ ಬಂದೂಕು ಹಿಡಿದು ಗುಂಡು ಹಾರಿಸುತ್ತಾ! ಇಡೀ ಅರಣ್ಯದಲ್ಲಿ ಗುಂಡಿನ ಸದ್ದು ಮೊಳಗಿತು! ಆ ಕಳ್ಳರು ಕೂಡಾ ಆ ಹಿರಿಯರ ಹಿಂಬದಿಯಿಂದ ರೈಲಿನೊಳಗೆ ನುಗ್ಗಿಯೇ ಬಿಟ್ಟರು! ಅವರು ಆ ಹಿರಿಯರ ಕೈಯಿಂದ ಚೀಲವನ್ನು ಕಿತ್ತು ಆರ್ಭಟಿಸುತ್ತಾ, ಪ್ರವಾಸಿಗರ ಬಳಿ ಬಂದು ಬೆದರಿಸತೊಡಗಿದರು!  “ಅಯ್ಯೋ ದೇವರೇ…ಇದೆಂತಹ ಸಂಕಷ್ಟವಪ್ಪಾ!” ಎಂದು ಗಾಬರಿಯಿಂದ ಎಲ್ಲರೂ ಕೂಗಾಡತೊಡಗಿದರು. ಕೆಲವು ಪ್ರವಾಸಿಗರ ಕೈಯಿಂದ ಅವರು ಬ್ಯಾಗ್ ಎಳೆಯತೊಡಗಿದಾಗಲೇ ಬಂದರು ನೋಡಿ  ಪೋಲೀಸರು! ಅವರ ನಡುವೆ ಮತ್ತು ಕಳ್ಳರ ನಡುವೆ ಜೋರಾದ ಗುಂಡಿನ ಕಾಳಗ ನಡೆಯಿತು! ಕಾನನವಿಡೀ ಗುಂಡಿನ ಸದ್ದಿನಿಂದ ಪ್ರತಿಧ್ವನಿಸತೊಡಗಿತು! ಒಂದೈದು ನಿಮಿಷದಲ್ಲಿ ಕಳ್ಳರು ಶರಣಾದರು… ಪ್ರವಾಸಿಗರೂ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಂತೆಯೇ, ಅಲ್ಲಿದ್ದ ಗೈಡ್ ಜೋರಾಗಿ ನಗತೊಡಗಿದ! ಜೊತೆಗೇ  ನಮ್ಮ ರೈಲನ್ನು ಏರಿದ್ದ  ಅಷ್ಟೂ ಜನರು ಜೋರಾಗಿ ನಗಲಾರಂಭಿಸಿದಾಗ ನಮಗೆ ಅರ್ಥವಾಗಲೇ ಇಲ್ಲ. ಆಗ ಅಳಿಯ ಹೇಳಿದ…ಇದಿಷ್ಟು ಹೊತ್ತು ನಡೆದದ್ದು ಎಲ್ಲಾ ನಾಟಕವೆಂದು! ಅಯ್ಯಪ್ಪಾ..  ಇದನ್ನು ಮಾತ್ರ ನಂಬಲಾಗಲೇ ಇಲ್ಲ ನೋಡಿ! ಆ ಪಾತ್ರಧಾರಿಗಳ ನೈಜ ನಟನೆಯು ನಮ್ಮನ್ನು ಮೂರ್ಖರನ್ನಾಗಿಸಿದ್ದಂತೂ ನಿಜ! ಕಳ್ಳರು ನಗು ನಗುತ್ತಾ ನಮ್ಮ ಬಳಿ ಬಂದು ಅವರ ಬಳಿ ಇದ್ದ ನಕಲಿ ಗುಂಡು ಮತ್ತು ನಕಲಿ ರಬ್ಬರ್ ನಾಣ್ಯಗಳನ್ನು ನೀಡಿ ಖುಶಿಪಡಿಸಿದರು. ಆಗಲೇ ನಮ್ಮ ಬಂಡಿ ಚಲಿಸತೊಡಗಿತು…ಅವರೆಲ್ಲರೂ ಕೆಳಗಿಳಿದು ನಮಗೆಲ್ಲರಿಗೂ ಶುಭವಿದಾಯ ಕೋರಿದರು. ನಿಜವಾಗಿಯೂ ಈ ಅನುಭವವು ಬಹಳ ವಿಶೇಷವಾದುದು ಮಾತ್ರವಲ್ಲದೆ, ಈ ಅದ್ಭುತ ನಟರೊಡನೆ ನಮ್ಮ ಭೇಟಿಯಾದುದು ನಮ್ಮ ಸಿಹಿ ನೆನಪುಗಳ ಸಂದೂಕಲ್ಲಿ ಭದ್ರವಾಗಿ ಕುಳಿತಿದೆ. ಪ್ರವಾಸಿಗರ ಮನೋರಂಜನೆಗಾಗಿ ಇಲಾಖೆಯು ಏರ್ಪಡಿಸಿದ ಈ ವಿಶೇಷ ಕಾರ್ಯಕ್ರಮವು ನಿಜಕ್ಕೂ ಶ್ಲಾಘನೀಯ!

ಸುಮಾರು ಅರ್ಧ ಗಂಟೆಯ, ಮೈ ನವಿರೇಳಿಸುವ ಈ ನೈಜ ಅಭಿನಯದೊಂದಿಗಿನ ನಾಟಕದ ಬಳಿಕ ಅದರ ಪ್ರಭಾವದಿಂದ ಹೊರಬರಲು ಸ್ವಲ್ಪ ಸಮಯವೇ ಬೇಕಾಯ್ತು! ನಮ್ಮ ಉಗಿಬಂಡಿಯು ದಟ್ಟವಾದ ಉಗಿ ಹೊಗೆಯನ್ನು ಉಗುಳುತ್ತಾ ಮರಗಳ ನಡುವೆ ಸಾಗಿ, ಪುಟ್ಟ ಸುರಂಗದೊಳಗೆ ನುಗ್ಗಿ, ಮುಂದಕ್ಕೆ ಸ್ವಲ್ಪ ಬಯಲು ಪ್ರದೇಶದಲ್ಲಿ ಓಡಿ,  ಪುನ: ನಿಲ್ದಾಣದಲ್ಲಿ  ನಮ್ಮನ್ನು ಇಳಿಸಿದಾಗ, ನಾವೆಲ್ಲರೂ ವಿಶೇಷ ಅನುಭವಗಳಿಂದ ಮಿಂದೆದ್ದುದು ಸುಳ್ಳಲ್ಲ. ಅದರ ಚಾಲಕನು ನಮ್ಮನ್ನು ಅದರ ಎಂಜಿನ್ ಸುತ್ತ ಸುತ್ತಿಸಿ, ಅದರಲ್ಲಿ ನೀರು ತುಂಬಿಸುವ ಟ್ಯಾಂಕ್ ಸಹಿತ ಎಲ್ಲಾ ಭಾಗಗಳನ್ನೂ ತೋರಿಸಿ ಚೆನ್ನಾಗಿ ವಿವರಿಸಿದನು. ಅಲ್ಲೇ ಒಂದು ಕಡೆಗೆ, ಬಹಳ ಎತ್ತರಕ್ಕೆ, ನೀರಿನ ಸಂಗ್ರಹಣೆಗಾಗಿರುವ ದೊಡ್ಡದಾದ ಟ್ಯಾಂಕ್ ಒಂದು ಹೆಮ್ಮೆಯಿಂದ ನಿಂತಿತ್ತು.

ಹೊಸ ಅನುಭವದಲ್ಲಿ ಮಿಂದೆದ್ದ ಖುಷಿಯಲ್ಲಿಯೇ ಪಟ್ಟಣಕ್ಕೆ ಹಿಂತಿರುಗಿ, ಆ ದಿನದ ರಾತ್ರಿಯೂಟವನ್ನು ದಕ್ಷಿಣ ಭಾರತದ ಹೋಟೇಲೊಂದರಲ್ಲಿ ಸವಿದೆವು. ದಕ್ಷಿಣ ಭಾರತೀಯರು ಹೆಚ್ಚು ವಾಸಿಸುವ ಪ್ರದೇಶ ಇದಾದ್ದರಿಂದ, ಪಕ್ಕಾ ಸಸ್ಯಾಹಾರದ ಹೋಟೆಲುಗಳು ಸಾಕಷ್ಟಿವೆ. ಹೋಟೇಲ್ ಕಾಮಾಕ್ಷಿ,  ಹೋಟೇಲ್ ಸಂಗೀತ, ಉಡುಪಿ ಪ್ಯಾಲೇಸ್ ಇತ್ಯಾದಿಗಳು; ಇಡ್ಲಿ, ಮಸಾಲೆದೋಸೆ, ಪೂರಿ, ಚಪಾತಿ, ಜಿಲೇಬಿ, ಅನ್ನ, ಸಾಂಬಾರು, ಸಾರು, ಹಪ್ಪಳಗಳಿಂದ ನಮ್ಮ ನಾಲಗೆಯನ್ನು ತಣಿಸಬಲ್ಲವು.. ಆದರೆ ಊಟದ ರೇಟು ಮಾತ್ರ ಕೇಳಬೇಡಿ!

ಆ ದಿನ ಅಮೆರಿಕದಲ್ಲಿ ಸ್ವಾತಂತ್ರ್ಯ ದಿನದ ಆಚರಣೆಯಾದ್ದರಿಂದ, ಊಟದ ಬಳಿಕ ಸುಡುಮದ್ದು, ಪಟಾಕಿಗಳ ಸಂಭ್ರಮವನ್ನು ಸವಿಯಲು ಹೊರಟೆವು. ನೂರಾರು ವರುಷಗಳ ಹಿಂದೆ, ಭೌಗೋಳಿಕ ಅನ್ವೇಷಣೆಗಾಗಿ ಯುರೋಪಿಯನ್ನರು ಬಹಳಷ್ಟು ಭೂಖಂಡಗಳನ್ನು ಪ್ರವೇಶಿಸಿರುವುದು ತಿಳಿದೇ ಇದೆ. ಅಂತೆಯೇ ಅಮೇರಿಕ ಭೂಖಂಡ ಪ್ರವೇಶಿಸಿದ ಬಳಿಕ, ಅಸಂಖ್ಯ  ಯುರೋಪಿಯನ್ನರು ವಲಸೆ ಬರಲಾರಂಭಿಸಿದರು. ಆದರೆ ಅದಾಗಲೇ ಅಮೆರಿಕದಲ್ಲಿ ಇತರ ಹದಿಮೂರು ವಸಾಹತುಗಳು ಬೇರೆ ಬೇರೆಯಾಗಿ ತಮ್ಮ ಆಡಳಿತ ನಡೆಸುತ್ತಿದ್ದವು… ನಮ್ಮಲ್ಲಿ ಮೊದಲಿದ್ದ ಸಾಮಂತರಂತೆ. ಇಲ್ಲಿ ವಸಾಹತುಗಾರರೆಂದರೆ, ಅವರೂ ಕೂಡಾ ಅಮೆರಿಕಕ್ಕೆ ಬೇರೆ ಕಡೆಯಿಂದ ಬಂದು ಬೀಡುಬಿಟ್ಟವರು ತಾನೇ? ಹೌದು… ಬಂದ ವಲಸೆಗಾರರು ಈಗಾಗಲೇ  ಅಲ್ಪಸಂಖ್ಯಾತರಾಗಿದ್ದ ಅಮೆರಿಕದ ಮೂಲನಿವಾಸಿಗಳನ್ನು ಮೂಲೆಗೆ ತಳ್ಳಿ, ಅವರಿಗೆ ರೆಡ್ ಇಂಡಿಯನ್ ಎಂಬ ನಾಮಕರಣವನ್ನೂ ಮಾಡಿ, ಊಳಿಗಕ್ಕೆ  ಹಚ್ಚಿದ್ದರು! ಇಂದಿನ ಅಮೆರಿಕನ್ನರ ಇಂತಹ ಘೋರ ಕೃತ್ಯವು ಇತಿಹಾಸ ಪುಟಗಳಲ್ಲಿ ಹೆಚ್ಚು ಸದ್ದಿಲ್ಲದೆ ಅಡಗಿರುವುದು ಮಾತ್ರ ವಿಪರ್ಯಾಸ! ಆದರೂ, ಜಗತ್ತಿನಲ್ಲಿ ಬಲಾಢ್ಯ ಜೀವಿಗಳು  ದುರ್ಬಲರನ್ನು ಮೆಟ್ಟಿ ಮೇಲೇರುವ ಪ್ರಕ್ರಿಯೆಯು ಪ್ರಾಕೃತಿಕವಾಗಿ ನಡೆದುಕೊಂಡು ಬಂದಿರುವುದನ್ನು ಕೂಡಾ ಒಪ್ಪಿಕೊಳ್ಳಲೇ ಬೇಕು..ಅಲ್ಲವೇ? ಇದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ಮುಂಬರುವ ಎಳೆಯಲ್ಲಿ ಬಿಚ್ಚಿಡಲು ಪ್ರಯತ್ನಿಸುವೆ.

ಈಗಾಗಲೇ ವಲಸೆಗಾರರಾಗಿ ಬಂದ ಯುರೋಪಿಯನ್ನರು, ಕ್ರಮೇಣವಾಗಿ ಆಡಳಿತವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟು ಬಲಪಡಿಸತೊಡಗಿದರು. ಸುಮಾರು 1765ರಲ್ಲಿಯೇ ವಸಾಹತುಗಾರರಿಂದ ಕ್ರಾಂತಿಯ ಕಿಡಿ ಸಿಡಿಯಲು ಪ್ರಾರಂಭವಾಗಿದ್ದರೂ, 1775ರಿಂದ 1785ರ ವರೆಗೆ ನಡೆದ ಶಸ್ತ್ರಸಜ್ಜಿತ ಸ್ವಾತಂತ್ರ್ಯ ಹೋರಾಟವು ಬಹಳ ಮಹತ್ವವನ್ನು ಪಡೆದಿದೆ. ಈ ಹೋರಾಟದ ಫಲವಾಗಿ, 1785ರ ಜುಲೈ 4ರಂದು ಪಡೆದ ಸ್ವಾತಂತ್ರ್ಯವು ಇತಿಹಾಸದಲ್ಲಿ ದಾಖಲಿಸಲ್ಪಟ್ಟಿತು.

ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿ ಪಟಾಕಿಯನ್ನು ನಮ್ಮಲ್ಲಿಯ ಹಬ್ಬಗಳಂತೆ, ಮನೆಯಂಗಳ, ರಸ್ತೆ ನಡುವೆ  ಎಲ್ಲಿ ಬೇಕೆಂದರಲ್ಲಿ ಹಚ್ಚುವಂತಿಲ್ಲ. ಯಾವುದೇ ತೆರನಾದ ಬೆಂಕಿ ಅವಘಡಗಳಿಗೆ ಅವಕಾಶವಿಲ್ಲದಂತೆ, ವಿಶಾಲವಾದ ಬಯಲು ಪ್ರದೇಶದಲ್ಲಿ ಎಕರೆಗಟ್ಟಲೆ ಜಾಗದ ಸುತ್ತಲೂ ಇರುವ ಬಲವಾದ ಬೇಲಿಯ ಒಳಗಡೆಗೆ ಮಾತ್ರ ಸಾರ್ವಜನಿಕವಾಗಿ ಸುಡುಮದ್ದು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವರು. ಅದನ್ನೇ ನಾವು ದೂರದಿಂದಲೇ ಒಂದರ್ಧ ತಾಸು ನೋಡಿ ಖುಶಿಪಟ್ಟೆವು.                                

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ  : http://surahonne.com/?p=35555

–ಶಂಕರಿ ಶರ್ಮ, ಪುತ್ತೂರು. 

(ಮುಂದುವರಿಯುವುದು….)

6 Responses

  1. ನಯನ ಬಜಕೂಡ್ಲು says:

    Nice

  2. ಗಿಡ ಮರಗಳ ಮದ್ಯೆ ರೈಲು ಪ್ರಯಾಣ..
    ಅದರ ಮದ್ಯದಲ್ಲಿ.. ಚಿಕ್ಕ ಪ್ರಹಸನ..ನಂತರ ಅಮೆರಿಕ ಸ್ವತಂತ್ರದ ಕೊಂಚ ಇಣುಕುನೋಟ. ಅಮೆರಿಕ ಪ್ರವಾಸ ಕಥನ ದಲ್ಲಿ ಸೊಗಸಾದ ನಿರೂಪಣೆ ಯೊಂದಿಗೆ ಬಂದು..ಮುಂದಿನ ಕಂತಿಗೆ ಕಾಯುವಂತಾಗಿದೆ…ಧನ್ಯವಾದಗಳು ಮೇಡಂ

    • . ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು ನಾಗರತ್ನ ಮೇಡಂ.

  3. ಸುಂದರವಾದ ಅನುಭವ ಕಥನ

  4. Padma Anand says:

    ಮುದದಿಂದ ಕೂಡಿದ ವಿಹಾರದಿಂದ ಪ್ರಾರಂಭವಾಗಿ, ಭಯದಲ್ಲಿ ಮುಂದೆವರೆದು, ನಂತರ ಹಾಸ್ಯದ ಹೊನಲು ಹರಿದು ನಂತರ ಗಂಭೀರ ವಿಚಾರಗಳನ್ನು ತಿಳಿಸುತ್ತಾ ಹೋದ ಈ ಕಂತಿನ ಲೇಖನ ವಿಶಿಷ್ಟವಾಗಿ ಮೂಡಿ ಬಂದಿದೆ. ಅಭಿನಂದನೆಗಳು.

Leave a Reply to . ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: