ನಾ ಕಂಡ ಆದಿ ಯೋಗಿ: ಹೆಜ್ಜೆ 4

Share Button

-ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…

ಮನಸ್ಸು ಇಂದ್ರಿಯಗಳ ಒಡೆಯ
ಪ್ರಾಣವು ಮನಸ್ಸಿನ ಒಡೆಯ
ಲಯವು ಪ್ರಾಣದ ಒಡೆಯ
ನಾದವು ಲಯದ ಒಡೆಯ
ಈ ನಾದವೇ ಮೋಕ್ಷ ಸಾಧನೆಯ ಪಥ

ಧ್ಯಾನಲಿಂಗದ ನಾದಾರಾಧನೆಯ ಸಮಯ. ಸಾಧಕರು ಭಕ್ತಿಭಾವದಿಂದ ದೇಗುಲವನ್ನು ಪ್ರವೇಶಿಸುತ್ತಿರುವರು. ದೇಗುಲದ ಶಿಖರ ಅಂಡಾಕಾರದ ಗುಮ್ಮಟದ ಆಕಾರದಲ್ಲಿದ್ದು, ಸುಮಾರು 72′ x 4′ ಸುತ್ತಳತೆ ಹೊಂದಿದೆ. ಇದನ್ನು ನಿರ್ಮಿಸಲು, ಕಬ್ಬಿಣ, ಸಿಮೆಂಟ್, ಕಾಂಕ್ರೀಟನ್ನಾಗಲೀ ಬಳಸಿಲ್ಲ. ಬದಲಿಗೆ ಇಟ್ಟಿಗೆ, ಮಣ್ಣು ಹಾಗೂ ಸುಣ್ಣ, ಮರಳು, ಆಲಂ ಮತ್ತು ಗಿಡ ಮೂಲಿಕೆಗಳ ಸಾರದಿಂದ ತಯಾರಿಸಿದ ಗಾರೆಯಿಂದ ನಿರ್ಮಿಸಲಾಗಿದೆ. ಪಂಚಪಾತ್ರೆಯನ್ನು ಶಿವಲಿಂಗದ ನೆತ್ತಿಯ ಮೇಲೆ ತೂಗು ಹಾಕಲಾಗಿದೆ. ಸುರುಳಿ ಸುತ್ತಿ ಮಲಗಿರುವ ಸರ್ಪದ ಮೇಲೆ ಆಸೀನನಾಗಿರುವ ಧ್ಯಾನಲಿಂಗ ಸುಮಾರು ಹದಿಮೂರು ಅಡಿ ಒಂಬತ್ತು ಇಂಚು ಇದ್ದು, ಇಡೀ ವಿಶ್ವದಲ್ಲಿಯೇ ದೊಡ್ಡದಾದ ರಸಲಿಂಗವೆಂದು ಪ್ರಖ್ಯಾತವಾಗಿದೆ. ಧ್ಯಾನಲಿಂಗದ ಮೇಲೆ ಏಳು ಚಕ್ರಗಳನ್ನು ರಚಿಸಲಾಗಿದೆ. ಎಲ್ಲಾ ಚಕ್ರಗಳಲ್ಲಿ ಕಮಲಗಳು ಮೇಲ್ಮುಖವಾಗಿ ಅರಳಿ ನಿಂತು ಚೈತನ್ಯಪೂರ್ಣವಾಗಿವೆ. ಈ ಚೇತನವನ್ನು, ಸದ್ಗುರುಗಳು, ಪ್ರಾಣಪ್ರತಿಷ್ಟೆಯ ಮೂಲಕ ದಿಗ್ಭಂದನಕ್ಕೊಳಪಡಿಸಿದ್ದಾರೆ. ಹಾಗಾಗಿ ಧ್ಯಾನಲಿಂಗವು ಪರಿಪೂರ್ಣತೆಯ ಸಂಕೇತವಾಗಿ ನಿಲ್ಲುವುದು. ಶಿವಲಿಂಗದ ನಡುವಿನಲ್ಲಿ ಒಂದು ವಸ್ತ್ರವನ್ನು ಕಟ್ಟಲಾಗಿದೆ, ಮುಂದೆ ದೀಪಗಳನ್ನು ಹಚ್ಚಿಡಲಾಗಿದೆ. ಈ ಧ್ಯಾನಲಿಂಗವನ್ನು ಜೂನ್ 23, 1999 ರಂದು ಲೋಕಾರ್ಪಣೆ ಮಾಡಲಾಯಿತು.

ಧ್ಯಾನಲಿಂಗದ ಚೈತನ್ಯದ ಅನುಭವ ಪಡೆಯುವುದಾದರೂ ಹೇಗೆ? ಇಲ್ಲಿ ಅಭಿಷೇಕ, ಜಾಗಟೆ, ಪೂಜಾ ವಿಧಿ ವಿಧಾನಗಳು ಇಲ್ಲ. ಎಲ್ಲ ಧರ್ಮದವರೂ ಧ್ಯಾನ ಮಾಡಬಹುದಾದ ಧ್ಯಾನಲಿಂಗ. ತಾವರೆ ಹೂ, ಆಧ್ಯಾತ್ಮದ ಅರಿವಿನ ಪ್ರತೀಕವಾಗಿರುವುದರಿಂದ ಧ್ಯಾನಲಿಂಗಕ್ಕೆ ಅರ್ಪಿಸಬಹುದು. ಪದ್ಮಾಸನದಲ್ಲಿ ಕುಳಿತು, ತೊಡೆಯ ಮೇಲೆ ಹಸ್ತಗಳನ್ನು ಚಿನ್ಮುದ್ರೆಯಲ್ಲಿರಿಸಿ, ಧ್ಯಾನಲಿಂಗವನ್ನು ತನ್ಮತೆಯಿಂದ ನೋಡಿ. ನಸುಗತ್ತಲು, ಎಲ್ಲೆಲ್ಲಿಯೂ ಮೌನ, ಕಣ್ಣು ಮುಚ್ಚಿ ಕುಳಿತ ಸಾಧಕರು, ಇಡೀ ದೇಗುಲದ ತುಂಬಾ ಪಸರಿಸುತ್ತಿರುವ ನಾದಲೀಲೆ. ಧ್ಯಾನಲಿಂಗದ ಮುಂದಿರುವ ದೀಪಗಳ ಬೆಳಕು ನಿಧಾನವಾಗಿ ಧ್ಯಾನಲಿಂಗದ ಮೂಲಾಧಾರ ಚಕ್ರದಿಂದ ಮೇಲೇರುತ್ತಾ ಸಹಸ್ರಾರದಲ್ಲಿ ಐಕ್ಯವಾಗಿ ಪ್ರಜ್ವಲಿಸತೊಡಗಿತು. ಬಾಹ್ಯ ಕಿವಿಗೆ ಕೇಳುತ್ತಿರುವ ನಾದದ ತರಂಗಗಳು, ನಿಧಾನವಾಗಿ ಅಂತರ್ನಾದವಾಗುವುದು. ನಮ್ಮೊಳಗೇ ನಾದದ ತರಂಗಗಳು ಪುಟಿದೇಳುವುವು. ಕುಳಿತಲ್ಲೇ ತಲೆದೂಗುತ್ತಾ, ಕಣ್ಣಲ್ಲಿ ಆನಂದ ಭಾಷ್ಪಗಳನ್ನು ಸುರಿಸುವ ಭಕ್ತ ಸಮೂಹ. ಭಕ್ತರು ಶಿವನಿಗೆ ತಲೆಬಾಗಿ, ಸಂಪೂರ್ಣ ಶರಣಾಗುವರು. ಕಣ್ತುಂಬಿ, ಮನ ತುಂಬಿ, ಎದೆ ತುಂಬಿ ಹರಿಯುವುದು ಹರುಷದ ಹೊನಲು. ಒಂದು ಕ್ಷಣ ನಾನೇ ಬೆಳಕಾದ ಹಾಗೆ, ನಾದವಾದ ಹಾಗೆ ದಿವ್ಯ ಅನುಭೂತಿ ಮೂಡಿತ್ತು. ಠಣ್ ಎಂದು ಗಂಟೆಯ ಸದ್ದು ಕೇಳಿ ಬಂತು. ಎಲ್ಲರೂ ಎದ್ದು ಹೊರನಡೆದರು. ನಮಗೆ ಎಲ್ಲೆಲ್ಲಿಯೂ ಧ್ಯಾನಲಿಂಗವೇ ಗೋಚರಿಸುತ್ತಿತ್ತು. ಬೇರೆ ಏನೂ ಕಾಣಲಿಲ್ಲ, ಕೇಳಲಿಲ್ಲ. ಓಂಕಾರದ ತರಂಗಗಳು ಪಾದದಿಂದ ಹಿಡಿದು ನೆತ್ತಿಯವರೆಗೂ ಹರಡಿದ್ದವು.

ಧ್ಯಾನಲಿಂಗವು ಗುರುವಿನಂತೆ – ನಮ್ಮ ಕೈ ಹಿಡಿದು ನಡೆಸುವುದು. ಪ್ರಾಪಂಚಿಕ ವ್ಯಾಮೋಹದ ಸಂಕೋಲೆಗಳಿಂದ ಮುಕ್ತಿಯನ್ನು ನೀಡುವುದು. ಧ್ಯಾನಲಿಂಗದ ಏಳು ಚಕ್ರಗಳಲ್ಲಿ, ವಾರದ ಒಂದೊಂದು ದಿನದಲ್ಲಿ, ಒಂದೊಂದು ಚಕ್ರವು ಸಕ್ರಿಯವಾಗಿ, ಸಾಧಕರಿಗೆ ಮೋಕ್ಷದ ದಾರಿಯನ್ನು ತೋರುವುದು. ಸೋಮವಾರದಂದು, ಭೂಮಿ ತತ್ವವು ಸಕ್ರಿಯವಾಗಿ ನಿದ್ರಾಹಾರದ ಬಾಧೆಯನ್ನು ನೀಗಿಸುವುದು. ಮಂಗಳವಾರದಂದು ಜಲತತ್ವವು ಸಕ್ರಿಯವಾಗಿ ಸಾಧಕರು ರಚನಾತ್ಮಕ ಕ್ರಿಯೆಗಳಲ್ಲಿ ಯಶಸ್ವಿಯಾಗುವರು. ಬುಧವಾರ ಅಗ್ನಿ ತತ್ವವು ಸಕ್ರಿಯವಾಗಿ, ಸಾದಕರಲ್ಲಿ ಜೀವನೋತ್ಸಾಹ, ಉತ್ಸಾಹ, ಲವಲವಿಕೆ ಮೂಡುವುದು. ಗುರುವಾರ ವಾಯುತತ್ವವು ಸಕ್ರಿಯವಾಗಿ ಸಾಧಕರಲ್ಲಿ ಪ್ರೀತಿ, ವಾತ್ಸಲ್ಯ ಮೂಡುವುದು. ಶುಕ್ರವಾರ ಆಕಾಶ ತತ್ವವು ಸಕ್ರಿಯವಾಗಿ ಸಾಧಕರು, ತಮ್ಮ ಭವಬಂಧನಕ್ಕೆ ಕಾರಣವಾದ ಎಲ್ಲಾ ಸಂಕೋಲೆಗಳನ್ನು ಕಿತ್ತೊಗೆದು ಮುಕ್ತಿ ಪಡೆಯುವರು. ಶನಿವಾರ ಮಹಾ ತತ್ವವು ಜಾಗೃತವಾಗಿ, ಸಾಧಕರಿಗೆ ಜ್ಞಾನೋದಯವಾಗುವುದು. ಭಾನುವಾರ – ನಾನು ಎನ್ನುವ ಭ್ರಮಾಲೋಕವನ್ನು ದಾಟಿ, ವಾಸ್ತವ ಜಗತ್ತಿನ ಅರಿವನ್ನು ಮೂಡಿಸುವ ಗುರುಗಳ ಅಮೃತವಾಣಿ ಕೇಳಿಬರುವುದು.

ಸನಾತನ ಧರ್ಮವು ಕೇವಲ ಸಿದ್ಧಾಂತವಲ್ಲ, ಒಂದು ಜೀವನ ಶೈಲಿಯಾಗಿದೆ. ನಿತ್ಯಜೀವನದಲ್ಲಿ ಇದನ್ನು ಅಳವಡಿಸಿಕೊಂಡಾಗ ಬದುಕು ಸುಲಲಿತವಾಗುವುದು. ಜನ ಸಾಮಾನ್ಯರು ವಾಸಿಸುವ ಮನೆ ಗುಡಿಸಲೇ ಇದ್ದರೂ, ದೇಗುಲಗಳನ್ನು ಭವ್ಯವಾಗಿ ಕಟ್ಟುವ ಸಂಸ್ಕೃತಿ ನಮ್ಮದಾಗಿತ್ತು. ಎಲ್ಲಾ ದೇಗುಲಗಳೂ ಜನರಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ ಶಕ್ತಿ ಕೇಂದ್ರಗಳಾಗಿದ್ದವು. ಜನರು, ಪ್ರತಿ ನಿತ್ಯ ಸ್ನಾನ ಮಾಡಿ ದೇಗುಲಕ್ಕೆ ಹೋಗಿ ದೇವರ ದರ್ಶನ ಪಡೆದೇ ತಮ್ಮ ದಿನಚರಿಯನ್ನು ಆರಂಭಿಸುತ್ತಿದ್ದರು. ಕಾಲಾನುಕ್ರಮೇಣ, ಪರಕೀಯರ ಧಾಳಿಗಳಿಗೆ ತುತ್ತಾದ ಭಾರತದಲ್ಲಿ, ಪಾಶ್ಚಿಮಾತ್ಯ ಸಂಸ್ಕೃತಿಯೇ ಶ್ರೇಷ್ಟವೆಂಬ ಮನೋಭಾವ ಯುವಜನರಲ್ಲಿ ಮೂಡುತ್ತಿದೆ. ಹಾಗಾಗಿ ನಮ್ಮ ಯೋಗಶಾಸ್ತ್ರದ ಮೂಲಕ, ಭಾರತೀಯ ಸಂಸ್ಕೃತಿಯನ್ನು ಪುನಃಶ್ಚೇತನಗೊಳಿಸಲು ಟೊಂಕ ಕಟ್ಟಿ ನಿಂತಿದೆ ಈಶ ಯೋಗಕೇಂದ್ರ’. ‘ಒಂದು ಹನಿ ಆಧ್ಯಾತ್ಮ‘ ಎನ್ನುವ ಘೋಷಣೆಯೊಂದಿಗೆ, ಇಂದಿನ ಸಮಾಜದಲ್ಲಿ, ನೈತಿಕ ಮೌಲ್ಯಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಬಿತ್ತುವ ಪ್ರಯತ್ನವನ್ನು ಮಾಡುತ್ತಿದೆ. ಒಂದು ಹನಿಯಲ್ಲೂ, ಸಾಗರದ ಎಲ್ಲ ಅಂಶಗಳೂ ಸೇರಿಯೇ ಇವೆ ಅಲ್ಲವೇ?

ಇನ್ನೇನಿದೆ ಈ ವಿಶಿಷ್ಟವಾದ ಯೋಗಕೇಂದ್ರದಲ್ಲಿ? ಬನ್ನಿ ನೋಡೋಣ. ಮಕ್ಕಳಿಗೆ ವಿದ್ಯಾ ದಾನ ಮಾಡಲು ಶಾಲೆಗಳಿವೆ, ನಾದವನಮ್ ಎಂಬ ಹೂದೋಟದಲ್ಲಿ ಕಂಪನ್ನು ಸೂಸುವ ಹೂವಿನ ಗಿಡಗಳಿವೆ. ಸಾಧನ ಹಾಲ್‌ನಲ್ಲಿ, ಆಧ್ಯಾತ್ಮಿಕ ಆಚರಣೆಗಳನ್ನು ಅಭ್ಯಸಿಸಲು ಎಲ್ಲಾ ಬಗೆಯ ಸೌಕರ್ಯಗಳಿವೆ. ವಾಕ್ ಶ್ರವಣ ಗ್ಯಾಲರಿಯಲ್ಲಿ, ಈಶ ಕೇಂದ್ರದ ಹತ್ತು ಹಲವು ಯೋಜನೆಗಳ ನಿರೂಪಣೆಯಿದೆ. ಈಶ ಸ್ಟೋರ್‌ನಲ್ಲಿ ರುದ್ರಾಕ್ಷಿ, ಸ್ಪಟಿಕ ಮಾಲೆ, ಯಂತ್ರಗಳು ಹಾಗೂ ಇನ್ನಿತರ ನೆನಪಿನ ಕಾಣಿಕೆಗಳೂ ಮಾರಾಟಕ್ಕಿವೆ.

ಈಶ ಯೋಗ ಕೇಂದ್ರದಲ್ಲಿ ಭಾರತೀಯ ಪುರಾತನ ಸಂಸ್ಕೃತಿಯ ಪುನರುತ್ಥಾನದ ಜೊತೆಜೊತೆಗೇ ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡು ಬರುವ ಸ್ವಚ್ಛತೆ, ಶಿಸ್ತಿನ ಅದ್ಭುತ ಮಿಲನವನ್ನು ಕಂಡು ಅಚ್ಚರಿಯಾಯಿತು. ಪ್ರವಾಸಿಗರನ್ನು ಅಣ್ಣ, ಅಕ್ಕ ಎಂದೇ ಮೆಲು ಧ್ವನಿಯಲ್ಲಿ ಸಂಭೋಧಿಸುವ ಸ್ವಯಂಸೇವಕರು, ಸುತ್ತಮುತ್ತಲೂ ಕಂಡು ಬರುವ ಸ್ವಚ್ಛತೆ, ಶಿಸ್ತು, ಆಶ್ರಮದೆಲ್ಲೆಡೆ ಪ್ರತಿಧ್ವನಿಸುವ ಸದ್ಗುರುಗಳ ಬೋಧನೆಗಳು ಮನಸ್ಸಿಗೆ ಮುದ ನೀಡಿದ್ದವು. ಮುಂಜಾನೆ ಐದೂವರೆಗೇ ಗುರುಪೂಜೆ, ತೀರ್ಥಕುಂಡದಲ್ಲಿ ಸ್ನಾನ, ಲಿಂಗಬೈರವಿಯ ಆರತಿ, ಧ್ಯಾನಲಿಂದದಲ್ಲಿ ನಾದಾರಾಧನೆ ಹಾಗು ಆದಿ ಯೋಗಿ ಶಿವನ ವಿರಾಟ ರೂಪ ದರ್ಶನ ಮನದಾಳದಲ್ಲಿ ನಿಂತಿವೆ. ಬನ್ನಿ, ನಾವೂ ಶಿವನ ಅನುಯಾಯಿಯಾದ ನಂದಿಯ ಹಾಗೆ ಎಚ್ಚರದಿಂದ ಬಾಳೋಣ.

ಈ ಲೇಖನದ ಹಿಂದಿನ ಭಾಗ ಇಲ್ಲಿದೆ :  http://surahonne.com/?p=35513

(ಮುಗಿಯಿತು)

-ಡಾ.ಗಾಯತ್ರಿದೇವಿ ಸಜ್ಜನ್

5 Responses

  1. ನಯನ ಬಜಕೂಡ್ಲು says:

    ಎಲ್ಲ ಕಂತುಗಳು ಚೆನ್ನಾಗಿದ್ದವು.

  2. ವಾವ್.. ನಾನು ಕಂಡ ಆದಿಯೋಗಿ ..ಪ್ರತೀಕಂತು ಸೊಗಸಾದ ನಿರೂಪಣೆ ಯೊಂದಿಗೆ ಮೂಡಿಬಂತು..ಸಂಗ್ರಹಯೋಗ್ಯವಾದ ಲೇಖನಕೊಟ್ಟಿದಕ್ಕೆ ಹೃತ್ಪರ್ವಕ ಧನ್ಯವಾದಗಳು ಮೇಡಂ.

  3. Padma Anand says:

    ಪರಿಪೂರ್ಣತೆಯ ಸಂಕೇತವಾಗಿ ನಿಲ್ಲುವ ಧ್ಯಾನಲಿಂಗದ ಭಕ್ತಿಪೂರ್ಣ ಲೇಖನ ಮಾಲಿಕೆಗಾಗಿ ತಮಗೆ ಅಭಿನಂದನೆಗಳು.

  4. ತಮ್ಮೆಲ್ಲರ ಹಿತನುಡಿಗಳಿಗೆ ವಂದನೆಗಳು

  5. . ಶಂಕರಿ ಶರ್ಮ says:

    ಸಕಲ ತತ್ವಗಳನ್ನೊಳಗೊಂಡು ಪರಿಪೂರ್ಣತೆಯೆಡೆಗೆ ನಮ್ಮನ್ನು ಕೊಂಡೊಯ್ಯುವ ಧ್ಯಾನ ಲಿಂಗದ ಬಗ್ಗೆ ಅರಿವು ಮೂಡಿಸಿದ ಲೇಖನ ಮಾಲೆಯು ಅತ್ಯಂತ ಭಕ್ತಿಪೂರ್ಣವಾಗಿ ಮೂಡಿಬಂದಿದೆ. ಧನ್ಯವಾದಗಳು ಗಾಯತ್ರಿ ಮೇಡಂ ಅವರಿಗೆ.

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: