ಪುಸ್ತಕ ಪರಿಚಯ: “ನುಡಿ ತೋರಣ”

Spread the love
Share Button
ಎನ್.ಶೈಲಜಾ ಹಾಸನ

ಸಾಹಿತ್ಯ ಎನ್ನುವುದು ಒಂದು ಸಮುದಾಯದ ಬೌದ್ಧಿಕತೆಯ, ಸಂಸ್ಕೃತಿಯ ಹಾಗೂ ಮನೋಭಿವೃದ್ಧಿಯ ಪ್ರತಿನಿಧಿ ಹಾಗೂ ಅಭಿವೃದ್ಧಿಯ ಸಂಕೇತವು ಹೌದು. ಸಾಹಿತ್ಯ ಎನ್ನುವುದು ಯಾವುದೇ ಭಾಷೆಯನ್ನಡುವ ಸಮುದಾಯದಲ್ಲಿ ಬರವಣಿಗೆಯ ರೂಪದಲ್ಲೋ ಅಥವಾ ಮಾತಿನ ನೆಲೆಯಲ್ಲೋ ಅಂದರೆ ಜಾನಪದ ರೂಪದಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಿರುತ್ತದೆ. ಹಾಗಾಗಿ ಸಾಹಿತ್ಯ ಎನ್ನುವುದು ಸರ್ವವ್ಯಾಪಿ ಹಾಗೂ ಸಕಲ ಮಾನವ ಸಮುದಾಯದ ಸದಸ್ಯರಿಗೂ ಹತ್ತಿರವಾದಂತಹುದು. ಸಾಹಿತ್ಯ ಹೃದಯಕ್ಕೆ ಪ್ರಿಯವಾದ ಅನುಭೂತಿಯನ್ನು ಕೊಡುವಂತಹದ್ದು. ಅಂತಹ ಸಾಹಿತ್ಯವನ್ನು ಬದುಕಿನ ಒಂದು ಭಾಗವಾಗಿಸಿಕೊಂಡು ಸದಾ ಸಕ್ರಿಯವಾಗಿರುವ ಮಲೆನಾಡಿನ ಶ್ರೀಮತಿ ಕೀರ್ತಿ ಕಿರಣ್ ಕುಮಾರ್ ಅತ್ಯಂತ ಯಶಸ್ವಿ ಗೃಹಿಣಿ ಕೂಡ ಹೌದು. ಕುಟುಂಬ, ಸಂಸಾರ,ಅತ್ತೆ ಮಾವ, ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವ ಜೊತೆ ಜೊತೆಗೆ ಬರವಣಿಗೆಯ ಹವ್ಯಾಸ ಹೊಂದಿರುವ ಕೀರ್ತಿ ಬಹುಮುಖ ಪ್ರತಿಭೆ.

ಕೀರ್ತಿ ಕಿರಣಕುಮಾರ್ ಲೇಖಕಿ, ಸಂದರ್ಶಕಿ, ಕವಯತ್ರಿ. ಚಿತ್ರಕಲೆ , ನೃತ್ಯ, ಸಂಗೀತ ಹಾಡುಗಾರಿಕೆ, ಏಕ ಪಾತ್ರ ಅಭಿನಯ, ಕಿರುನಾಟಕಗಳಲ್ಲಿ ಅಭಿನಯ, ಕವನ ವಾಚನ.,ವಚನ ಗಾಯನ,ಭಾಷಣ, ಹಾಗೂ ಶಾಲೆಗಳಲ್ಲಿ ತೀರ್ಪುಗಾರ್ತಿ ಹೀಗೆ ಎಲ್ಲಾ ರಂಗಗಳಲ್ಲೂ ಕೈಯಾಡಿಸುತ್ತಾ. ಬೆಳೆಗಾರ ಪತ್ರಿಕೆಯಲ್ಲಿ ಸತತವಾಗಿ ಲೇಖನ, ಸಂದರ್ಶನ, ವರದಿ, ವಿಮರ್ಶೆಗಳಲ್ಲಿ ತೊಡಗಿಸಿಕೊಂಡಿರುವ. ಮಲೆನಾಡಿನ ವಿವಿಧ ಅಡುಗೆಗಳನ್ನು ಪತ್ರಿಕೆಗಳಲ್ಲಿ ಬರೆಯುವ , ತಮ್ಮದೇ ಅಡುಗೆ You tube channel ಕೂಡ ಹೊಂದಿರುವ ಕೀರ್ತಿಯ ಜೀವನೋತ್ಸಾಹ ಮೆಚ್ಚುವಂಥದ್ದು. ಇದೀಗ “ನುಡಿ ತೋರಣ” ಎಂಬ ಲೇಖನಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರತರಲು ಕೀರ್ತಿ ಹೊರಟಿದ್ದಾರೆ. ತಮ್ಮ ಲೇಖನ ಕನ್ನಡನುಡಿಯಲ್ಲಿ ಕನ್ನಡಿಗರಾಗಿ ಕನ್ನಡ ಭಾಷೆಯ ಬಗ್ಗೆ ಕನ್ನಡಿಗರ ಅಲಕ್ಷ್ಯ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ . ಅತ್ತೆ ಮಾವ, ಚಿಕ್ಕಮ್ಮ, ದೊಡ್ಡಮ್ಮ , ಚಿಕ್ಕಪ್ಪ, ದೊಡ್ಡಪ್ಪ ಈ ಸಂಭೋದನೆಗಳು ಇಂದು ಮಾಯವಾಗಿ ಆಂಟಿ,ಆಂಕಲ್ ಅನ್ನೋ ಅನುಬಂಧ ಮೂಡಿಸದ ಸಂಬೋಧನೆಯಿಂದ ಇಂದಿನ ಯುವಪೀಳಿಗೆ ಮಾತೃ ಭಾಷೆಯ ಸವಿಯನ್ನು ದೂರಮಾಡಿ ಕೊಂಡಿರುವುದಕ್ಕೆ ನಮ್ಮ ನಿರ್ಲಕ್ಷ್ಯವೇ ಮುಖ್ಯ ಕಾರಣ ಎನ್ನುತ್ತಾರೆ.

ಒತ್ತಡದಿಂದ ಮಾನವನ ಬದುಕಿನಲ್ಲಿ ಏನೆಲ್ಲಾ ಅನಾಹುತಗಳು ಸಂಭವಿಸುತ್ತವೆ,ಅದರ ನಿವಾರಣೆಗೆ ನಾವೇ ಪ್ರಯತ್ನ ಪಡಬೇಕು, ಧ್ಯಾನ,ಯೋಗ, ಸಂಗೀತ ಕೇಳುವುದು, ಓದುವುದು ಹೀಗೆ ಮಾಡುವುದರಿಂದ ಒತ್ತಡದ ನಿವಾರಣೆಗೆ ಪ್ರಯತ್ನಿಸಿ ಒತ್ತಡದಿಂದ ಹೊರಬರಬಹುದು . ಹಾಸ್ಯ ಪ್ರಜ್ಞೆಯಿಂದ ಕೂಡಾ ಒತ್ತಡದಿಂದ ಹೊರಬರಬಹುದು ಅನ್ನೊ ಅತ್ಯುತ್ತಮ ಸಲಹೆ ನೀಡಿದ್ದಾರೆ. ಬೆಳಿಗ್ಗೆ ಎದ್ದೊಡನೆ ಕಾಫಿ ಕುಡಿಯದೆ ಬೇರೇನು ಮಾಡಲು ಸಾಧ್ಯವಿಲ್ಲ ಎನ್ನುವುದು ಕಾಫಿ ಪ್ರಿಯರ ಅನಿಸಿಕೆ. ಬಿಸಿ ಬಿಸಿ ಕಡು ಕಾಫಿ ಕುಡಿದೆವರಿಗಷ್ಟೆ ಗೊತ್ತು ಅದರ ಸವಿ ಅನ್ನುವ ಲೇಖಕಿ , ಕಾಫಿ ಕುಡಿಯುವ ಸವಿಯಾದ ಅನುಭವದ ಜೊತೆ ಜೊತೆಗೆ ಕಾಫಿ ಬೆಳೆಯ ಹಿನ್ನೆಲೆ ,ಕಾಫಿ ಬೆಳೆಗಾರರ ಬವಣೆ, ಅವರ ಸಮಸ್ಯೆಗಳು, ಅದರಿಂದ ಕಂಗೆಟ್ಟಿರುವ ಕಾಫಿ ಬೆಳೆಗಾರರ ಕಷ್ಟ,ಸುಖಗಳು ಬಗ್ಗೆ ಸ್ವತಃ ಕಾಫಿ ಬೆಳೆಗಾರರಾಗಿ ಅನುಭವಿಸಿರುವ ಲೇಖಕಿಯವರು ವಾಸ್ತವಾಂಶವನ್ನು ಮನಮಿಡಿಯುವಂತೆ ಓದುಗರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಂತ್ರಜ್ಞಾನದ ಆವಿಷ್ಕಾರಗಳು ಮನುಷ್ಯನ ಬದುಕಿನಲ್ಲಿ ಪ್ರಯೋಜನಗಳು ಆದಂತೆ ಅನಾಹುತಗಳನ್ನು ಸೃಷ್ಟಿಸಿರುವುದು ಸತ್ಯವಾಗಿದೆ.ಇವತ್ತಿನ ಮೊಬೈಲುಗಳು ಎಷ್ಟು ಅನುಕೂಲಕರವೋ ಅಷ್ಟೇ ಆತಂಕಕಾರಿಯಾಗಿದೆ. ಹೆಣ್ಣು ಮಕ್ಕಳ ಮೇಲೆ ನಡೆಯುವ ಇವತ್ತಿನ ಅತ್ಯಾಚಾರ,ಹಲ್ಲೆ ಮುಂತಾದ ದೌರ್ಜನ್ಯಗಳಿಗೆ ಮೊಬೈಲ್ ಕಾಣಿಕೆಯೂ ದೊಡ್ಡದಾಗಿಯೆ ಇದೆ ಎನ್ನುತ್ತಾರೆ ಕೀರ್ತಿಯವರು ತಮ್ಮ ಲೇಖನದಲ್ಲಿ. ಗೃಹಿಣಿ ಇಡೀ ಮನೆಯ ಆಧಾರಸ್ತಂಭ.ಅವಳಿಲ್ಲದೆ ಮನೆಯ ಯಾವ ಕೆಲಸವೂ ನಡೆಯದು. ಮನೆಯ ನಿರ್ವಹಣೆಗಾಗಿ ತನ್ನ ಇಡೀ ಬದುಕನ್ನು ಮೀಸಲಾಗಿಡುವ ಗೃಹಿಣಿ ತನಗಾಗಿ ಸಮಯ ಹೊಂದಿಸಿಕೊಳ್ಳಲು ಹಿಂದೆಮುಂದೆ ನೋಡುತ್ತಾಳೆ. ಆದರೆ ಗೃಹಿಣಿಯಾದವಳು ಮನೆಗಾಗಿ, ಮನೆಯವರಿಗಾಗಿ ಜೀವ ಮುಡಿಪಿಡುವ ಜೊತೆಗೆ ತನಗಾಗಿ ತನ್ನ ಆರೋಗ್ಯದ ಬಗ್ಗೆಯೂ, ತನ್ನ ಊಟ ತಿಂಡಿ ಬಗ್ಗೆಯೂ ಕಾಳಜಿ ವಹಿಸಬೇಕು. ಹವ್ಯಾಸಗಳು ಇದ್ದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗಬೇಕು.ಒತ್ತಡದಿಂದ ಹೊರಬರಲು ಪ್ರವಾಸ, ಧ್ಯಾನ, ಯೋಗ, ಓದು ,ಬರಹ, ತೋಟಗಾರಿಕೆ ಮುಂತಾದ ಹವ್ಯಾಸ ಬೆಳೆಸಿಕೊಂಡು ಗೃಹಿಣಿ ತನ್ನತನ ಮತ್ತು ಸ್ವಂತಿಕೆ ಉಳಿಸಿಕೊಂಡು ಮನೆ ಬೆಳಗಬೇಕು ಅಂತ ಉಪಯುಕ್ತ ಸಲಹೆ ನೀಡಿದ್ದಾರೆ.

ಅನೇಕ ಸಾಧಕ ಮಹಿಳೆಯರ ಬಗ್ಗೆ,ಸಾಧಕರ ಬಗ್ಗೆ ಓದುಗರಿಗೆ ಪರಿಚಯಿಸುವ ಮೂಲಕ ಉತ್ತಮ ಲೇಖನ ಬರೆದಿದ್ದಾರೆ. ಹಬ್ಬಗಳ ಬಗ್ಗೆ ಬರೆದು ನಮ್ಮ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆಧುನಿಕ ಜಗತ್ತಿನ ತಮ್ಮ ಇಷ್ಟು ದಿನದ ಅನುಭವಗಳನ್ನು ಯಶಸ್ವಿಯಾಗಿ ಬರಹದ ಮೂಲಕ ಓದುಗರ ಮುಂದೆ ಇಟ್ಟಿದ್ದಾರೆ. ಮಾನವೀಯತೆಗೆ ಮಿಡಿಯುವ ಇವರ ಮೃದು ಮನಸ್ಸಿನ ಅನಾವರಣ ಅವರ ಲೇಖನಗಳಲ್ಲಿ ದಟ್ಟವಾಗಿ ಕಾಣಿಸಿಕೊಂಡಿದೆ. ಸಾಮಾಜದ ಆಗೂ ಹೋಗುಗಳಿಗೆ ಸ್ಪಂದಿಸುವ ಸಾಮಾಜಿಕ ಕಳಕಳಿ ಕೀರ್ತಿಯವರ ಲೇಖನಗಳಲ್ಲಿ ಕಾಣಬಹುದು. ಅತ್ಯಂತ ಸೂಕ್ಷ್ಮ ಮನಸ್ಸಿನ ಸಂವೇದನಾಶೀಲ ಲೇಖಕಿಯಾದ ಕೀರ್ತಿ ತಾವು ಕಂಡು,ಕೇಳಿದೆ ಅನೇಕ ವಿಚಾರಗಳನ್ನು ಲೇಖನ ರೂಪದಲ್ಲಿ ಹೊರತಂದು ಓದುಗರ ಮನಸ್ಸಿನಾಳಕ್ಕೆ ಇಳಿಯಲು ನಡೆಸಿರುವ ಪ್ರಯತ್ನ ಶ್ಲಾಘನೀಯ.

ಈಗಾಗಲೇ ಇವರ ಸಾಕಷ್ಟು ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಸಾಹಿತ್ಯ ವಲಯದಲ್ಲಿ ಉತ್ತಮ , ಸೃಜನಶೀಲ ಲೇಖಕಿ ಅನ್ನುವ ಛಾಪು ಮೂಡಿಸಿದ್ದಾರೆ.ಮುಂದೆಯೂ ಕೂಡ ಇವರ ಬರಹ ಮತ್ತಷ್ಟು ಪಕ್ಪತೆಯಿಂದ , ಮತ್ತಷ್ಟು ವೈಚಾರಿಕತೆಯಿಂದ ಕೂಡಿ ಸಾಹಿತ್ಯ ಕ್ಷೇತ್ರಕ್ಕೆತಮ್ಮದೇ ಆದ ಕೊಡುಗೆ ನೀಡಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ.

-ಎನ್.ಶೈಲಜಾ ಹಾಸನ

4 Responses

  1. ಪುಸ್ತಕ ಪರಿಚಯ ಪರಿಣಾಮಕಾರಿ ಯಾಗಿ ಮೂಡಿಬಂದಿದೆ… ಧನ್ಯವಾದಗಳು ಮೇಡಂ

  2. ನಯನ ಬಜಕೂಡ್ಲು says:

    ಸ್ವತಃ ಲೇಖಕಿಯಾಗಿದ್ದುಕೊಂಡು ಬೇರೆಯವರ ಪುಸ್ತಕವನ್ನು ಓದಿ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿ ಪ್ರೋತ್ಸಾಹಿಸುತ್ತಿರುವ ನಿಮ್ಮ ಈ ಕೆಲಸ ಶ್ಲಾಘನೀಯ. ಚಂದದ ಪರಿಚಯ.

  3. Padma Anand says:

    ಒಳ್ಳೆಯ ಪುಸ್ತಕ ಪರಿಚಯ. ಸಾಹಿತ್ಯದ ಕುರಿತಾದ ನಿಮ್ಮ ವಿಶ್ಲೇಷಣೆಯೂ ಮನ ತಟ್ಟಿತು. ಬಹುಮುಖ ಪ್ರತಿಭೆಯ ಶ್ರೀಮತಿ. ಕೀರ್ತಿಯವರ ‘ನುಡಿ ತೋರಣ’ ಕನ್ನಡಿಗರ ಮನಗಳ ಚೌಕಟ್ಟನ್ನು ಬೆಳಗಲಿ.

  4. . ಶಂಕರಿ ಶರ್ಮ says:

    ಸೊಗಸಾದ, ವಿಮರ್ಶಾತ್ಮಕ ಪುಸ್ತಕ ಪರಿಚಯ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: