ಪುಸ್ತಕ ಪರಿಚಯ ‘ನಿನಾದವೊಂದು’, ಲೇ: ಮಂಜುಳಾ.ಡಿ

Spread the love
Share Button

ಪುಸ್ತಕ :- ನಿನಾದವೊಂದು
ಲೇಖಕರು :- ಮಂಜುಳಾ. ಡಿ
ಪ್ರಕಾಶಕರು:- ತೇಜು ಪಬ್ಲಿಕೇಷನ್ಸ್

ಮಂಜುಳಾ ಅವರ ಪರಿಚಯ ಫೇಸ್ ಬುಕ್ ನಲ್ಲಿ ಸ್ವಲ್ಪ ವಿಭಿನ್ನ ರೀತಿಯಲ್ಲೇ ಆಯಿತು. ಈ fb ಲೋಕದಲ್ಲಿರುವ ಕೆಲವು ಫೇಕ್ ಅಕೌಂಟ್ ಗಳು, ಕೆಟ್ಟ ಮನಸ್ಥಿತಿಯ ಜನಗಳ ಕಾರಣದಿಂದಾಗಿ ಒಂದು ಒಳ್ಳೆಯ ಮನಸ್ಸನ್ನು ಸಂಶಯದ ದೃಷ್ಟಿಯಿಂದ ನೋಡುವ ಹಾಗಾಯಿತು. ಆದರೆ ಇವರ ಬರಹಗಳು ಬಹಳ ಸೆಳೆಯುತ್ತಿದ್ದವು. ಹಾಗಾಗಿ ನಿಧಾನವಾಗಿ ಅವರು ಚಾಚಿದ್ದ ಸ್ನೇಹಹಸ್ತವನ್ನು ಸ್ವೀಕರಿಸಿದೆ.

“ನಿನಾದವೊಂದು” ಅಂಕಣ ಬರಹಗಳ ಸಂಗ್ರಹ. ಬಹಳಷ್ಟು ಬಾರಿ ಅಂಕಣ ಬರಹಗಳು ಯಾಕೆ ಇಷ್ಟವಾಗುತ್ತವೆ ಎಂದರೆ ಇಲ್ಲಿ ಬದುಕಿನ ದಿನನಿತ್ಯದ ಆಗುಹೋಗುಗಳೇ ಅಕ್ಷರ ರೂಪ ಪಡೆದಿರುತ್ತವೆ. ಅಂಕಣ ಬರಹಗಳಿಗೆ ಒಂದು ಚೌಕಟ್ಟು ಇಲ್ಲ. ಇಲ್ಲಿ ಭಾವನೆಗಳು, ಬದುಕಿನ ಘಟನೆಗಳು ಬಹುಪಾಲು ದಾಖಲಾಗಿರುತ್ತವೆ.

ಮೊದಲ ಲೇಖನದಲ್ಲೇ ಆಯಸ್ಕಾಂತದ ಸೆಳೆತ. ಆ ದೇವರಿತ್ತ ಸುಂದರ ಉಡುಗೊರೆ ಬದುಕನ್ನು ಅರ್ಥಪೂರ್ಣವಾಗಿ ಬದುಕುವಲ್ಲಿ ಇನ್ನಷ್ಟು ಪ್ರೋತ್ಸಾಹ ತುಂಬುವ ಬರಹ. ಬದುಕಲ್ಲಿ ಇನ್ನೊಬ್ಬರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹೇಗೆ ಸಾಗುವುದು ಅನ್ನುವ ಪಾಠ. ನೆನಪು, ಕನಸುಗಳ ಕುರಿತಾದ ಸುಂದರ ವ್ಯಾಖ್ಯಾನ.

ಈ ಬದುಕು ಒಂದು ಸಾಗರ, ಇಲ್ಲಿ ಬಹಳಷ್ಟು ಮಂದಿ ಬರುವ ದುಃಖಭರಿತ ತೆರೆಗಳನ್ನಷ್ಟೇ ನೆನೆದು ಕೊರಗುತ್ತಿರುತ್ತಾರೆ. ಅಪ್ಪಳಿಸಿರುವ ಸಂತಸದ ಕ್ಷಣಗಳು ನೆನಪೇ ಇರುವುದಿಲ್ಲ. ಈ ಅಗಾಧ ಬದುಕಿನ ಸಾಗರದಲ್ಲಿ ನೋವು ನಲಿವುಗಳೆರಡೂ ಸಹಜ. ಅವುಗಳನ್ನು ಬಂದಂತೆ ಸ್ವೀಕರಿಸುವ ಧೈರ್ಯ, ಗಟ್ಟಿತನವನ್ನು ಬೆಳೆಸಿಕೊಂಡಾಗಲ್ಲೇ ಈ ಬದುಕು ಸುಂದರವೆನಿಸುವುದು, ಸಹವೆನಿಸುವುದು.

ಈ ಜೀವನ, ಬಾಳಿನ ಉದ್ದೇಶ ಏನು?, ಈ ಬಾಳಿನಲ್ಲಿ ಏನಿದೆ?, ಈ ಎಲ್ಲ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಸಿಗುತ್ತದೆ -“ಬಲವಾದ ಒಂದು ಬೇಕೊಂದೇ ಬದುಕಿಗೆ ಬೇಕಾಗಿರುವುದು” ಅಂಕಣದಲ್ಲಿ. ಈ ಬದುಕನ್ನು ಬದುಕಲು ಸರಿಯಾದ ಒಂದು ಉದ್ದೇಶ, ಗುರಿ ಇರಬೇಕು. ಆ ಗುರಿಯ ಇನ್ನೊಂದು ಮಗ್ಗುಲೇ ಹಂಬಲ, ಆಸೆ. ನಿರ್ದಿಷ್ಟ ಗುರಿಯನ್ನು ಹೊಂದಿದ ಆಸೆ ಕೆಟ್ಟದ್ದಲ್ಲ. ಅದಕ್ಕೊಂದು ಅರ್ಥವಿದೆ, ಬದುಕನ್ನು ರೂಪಿಸುವಲ್ಲಿ ಇದು ಸಹಕಾರಿ ಅನ್ನುವ ಅಂಶ ಈ ಲೇಖನದಲ್ಲಿ ನನ್ನ ಮನಸ್ಸಿಗೆ ಬಂತು. ಹಾಗೆಯೇ ಲೇಖಕಿ ಉಲ್ಲೇಖಿಸಿದಂತೆ ಈಗಿನ ಜನರೇಷನ್ ಹಾಗೂ ನಮ್ಮ ಬಾಲ್ಯದ ತುಲನೆಯಲ್ಲಿ ತೊಡಗಿತು ಮನ.

ಸೋತ ಜೀವಕ್ಕೆ ಭರವಸೆಯ ತುಂಬಿ ಮತ್ತೆ ಹೊಸ ಜೀವನ ಪ್ರಾರಂಭಿಸಲು ಪ್ರೇರೇಪಿಸುವ ಒಂದು ಬರಹ. ಇದು ಯಾರದೋ ಒಬ್ಬರ ಬದುಕಲ್ಲಿ ನಡೆದ ಸನ್ನಿವೇಶ ಇರಬಹುದು, ಆದರೆ ಅವರ ಬದುಕಲ್ಲಿ ಬಂದ ಸ್ಥಿತಿ, ಸನ್ನಿವೇಶ ನಮ್ಮ ಬದುಕಲ್ಲೂ ಬರಬಾರದು ಎಂದೇನಿಲ್ಲ, ಹಾಗೊಂದು ವೇಳೆ ಬಂದಲ್ಲಿ ಇಲ್ಲಿರುವ ಧನಾತ್ಮಕ ಅಂಶಗಳು ನಮಗೂ ದಾರಿದೀಪವಾಗಬಲ್ಲದು.
“ಹಾಂ ! ಹೆ ಕಮಿ
ಪರ್ ಇಸ್ ಕಮಿ ಕೊ ಅಪ್ನಾಕೆ
ಚಲೇ ಹಮ್,
ಜಿಂದಗಿ ಕಿ ಹಿಸ್ಸಾ ಹಿ ಹೆ
ಯೇ…. ದರ್ದ್ ಹೊ ಯ ಗಮ್”.

ಯಾವುದೋ ಒತ್ತಡಕ್ಕೆ ಸಿಲುಕಿ ನಮ್ಮತನ ಸ್ವಾಭಿಮಾನವನ್ನು ಮರೆತು ಇನ್ನೊಬ್ಬರ ವಿಚಾರವನ್ನು ಒಪ್ಪಿಕೊಳ್ಳುವುದಕ್ಕಿಂತ, ಏನೇ ಆದರೂ ಸರಿ, ಇನ್ನೊಬ್ಬರಿಗೆ ವಿರೋಧ ಅನ್ನಿಸಿದರೂ ಸರಿ ನಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸುವುದೇ ಸರಿಯಾದ ಕ್ರಮ, ಇದರಲ್ಲಿ ಒಂದು ನೆಮ್ಮದಿ ಇದೆ ಅನ್ನುವ ಅಂಶವನ್ನು ವ್ಯಕ್ತಪಡಿಸುವ ಒಂದು ಲೇಖನ.

ನಾವು ಸಂಗ್ರಹಿಸಿ ಇಡುವ ಕೆಲವು ವಸ್ತುಗಳು ಕೆಲವರ ದೃಷ್ಟಿಯಲ್ಲಿ ನಿಷ್ಪ್ರಯೋಜಕ ಅನ್ನಿಸಬಹುದು. ಆದರೆ ಆ ನೆನಪುಗಳು ಹೇಗೆ ಬದುಕಿನ ತಿರುವುಗಳಲ್ಲಿ ಮನಸ್ಸಿಗೆ ಆಸರೆಯಾಗುತ್ತವೆ ಎನ್ನುವುದನ್ನು ಸರಳವಾಗಿ, ನವಿರಾಗಿ ವಿವರಿಸಿದ ಲೇಖಕಿಯ ಬರಹದ ಪರಿಗೆ ಸೋತೆ, ಹೌದು ನೆನಪುಗಳು ಸದಾ ಅಮರ. ಕೆಲವು ನೆನಪುಗಳು ಎಷ್ಟು ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ ಅಂದರೆ ಅವುಗಳಿಂದಾಗಿಯೇ ಬದುಕುವ ಉತ್ಸಾಹವನ್ನು ಪಡೆದಿರುತ್ತೇವೆ.

ನಮ್ಮ ದೇಶದ ಕಿರೀಟ ಅನ್ನಿಸಿಕೊಂಡಿರುವ ಒಂದು ಭಾಗ ಕಾಶ್ಮೀರದ ಕುರಿತಾದ ಲೇಖನ. ಅಲ್ಲಿ ಜೀವದ ಹಂಗು ತೊರೆದು ಕಾಯುತ್ತಿರುವ ನಮ್ಮ ಸೈನಿಕರ ಪ್ರತಿ ಗೌರವ ಭಾವ ಹಾಗೂ ಇದೇ ದೇಶದ ಅನ್ನ ತಿಂದು ಕನ್ನವಿಕ್ಕುವವರ ಪ್ರತಿ ನೋವು ಬೇಸರದ ಭಾವಗಳನ್ನು ವ್ಯಕ್ತ ಗೊಳಿಸಿ ಬರೆದ ಬರಹ. ಇಲ್ಲಿ ಪರಿವರ್ತಿತರಾಗುವ ಜನರ ಕುರಿತಾಗಿ ಓದುವಾಗ ರಕ್ತ ಕುದಿಯುತ್ತದೆ. ಹಾಗೆಯೇ ಹೀಗೆ ಅದೆಷ್ಟು ಜನ ಇದ್ದಾರೋ ಅಲ್ಲಿ ಎನ್ನುವ ಆತಂಕವೂ ಮೂಡುತ್ತದೆ ಮನಸ್ಸಲ್ಲಿ .

ಭೂಮಿಯ ಮೇಲಿನ ಸ್ವರ್ಗ ಅನ್ನಿಸಿಕೊಳ್ಳುವ ಕಾಶ್ಮೀರದ ಕುರಿತಾದ ಇನ್ನೊಂದು ಬರಹ. ನಾವು ಸಿನಿಮಾಗಳಲ್ಲಿ ನೋಡುವ ಹೊಡೆದಾಟ ಬಡಿದಾಟ, ಮದ್ದುಗುಂಡು, ಗನ್, ಶೂಟೌಟ್ ನ ಚಿತ್ರಗಳು ಇಲ್ಲಿ ಕಣ್ಣ ಮುಂದೆಯೇ ದಿನನಿತ್ಯ ನಡೆಯುತ್ತವೆ. ಅವೆಷ್ಟೋ ಅಮಾಯಕರು ಇವುಗಳಿಗೆ ಇಲ್ಲಿ ಬಲಿಯಾಗುತ್ತಾರೆ. ಕಾಶ್ಮೀರದಲ್ಲಿ ಒಂದು ಹಂತದ ನಂತರ ಶಿಕ್ಷಣವೂ ಮುಂದುವರಿಯುವುದಿಲ್ಲ ಅನ್ನುವ ಸತ್ಯಗಳನ್ನು ನಮ್ಮ ಮುಂದಿರಿಸಿದ್ದಾರೆ ಲೇಖಕಿ. ಅಲ್ಲಿನ ಪ್ರತಿ ದಿನದ ಬದುಕು ಕೆಂಡದ ಮೇಲಿನ ನಡಿಗೆಯಂತೆ ಅನ್ನುವ ಸತ್ಯ ಅರಿವಾಗುತ್ತದೆ ಇದನ್ನೆಲ್ಲಾ ಓದುವಾಗ.

ಒಂಟಿತನಕ್ಕೂ, ಏಕಾಂತಕ್ಕೂ ಇರುವ ವ್ಯತ್ಯಾಸವನ್ನು ಸ್ಪಷ್ಟಪಡಿಸುವ ಲೇಖನ. ನಮ್ಮನ್ನು ನಾವು ಅರಿಯಲು ಏಕಾಂತ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುವ ಬರಹ. ಧ್ಯಾನ, ಮೌನ ಎಲ್ಲವೂ ಏಕಾಂತದ ವಿವಿಧ ಬಗೆಗಳು ಅನ್ನುವುದು ಅರ್ಥವಾಗುತ್ತದೆ.

ನಿನಾದವೊಂದು ಅಂಕಣ ಬರಹಗಳ ಕೊನೆಯ ಬರಹ – “ಬೇರೆ ಏನೋ ಹೇಳುವಾಗ……… “. ಬದುಕನ್ನು ಜೀವಿಸುವ ಪರಿ, ಇಲ್ಲಿನ ಪ್ರತಿಯೊಂದು ಕ್ಷಣವನ್ನು ಸಾರ್ಥಕ ಪಡಿಸಿಕೊಳ್ಳುವ ಬಗೆ, ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತಾ ಸಾಗುವ ರೀತಿ ಹಾಗೂ ಬದುಕಿನ ಸಾರ್ಥಕತೆ ಅಂದರೆ ಏನು ಅನ್ನುವ ಅಂಶಗಳನ್ನು ನಾವಿಲ್ಲಿ ಕಾಣಬಹುದು.

ಈ ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ನನ್ನ ಮನಸ್ಸಿಗೆ ಬಂದ ವಿಚಾರ ಈ ಬರಹಗಾರ್ತಿ ಎಲೆ ಮರೆಯ ಕಾಯಿಯಂತೆ ಎಲ್ಲಿದ್ದರು?, ಯಾಕೆ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ ಅನ್ನುವುದು. ಒಂದೊಂದು ಬರಹದಲ್ಲೂ ಒಂದು ಘನತೆ ಇದೆ, ಗಂಭೀರತೆ ಇದೆ, ಜೀವನ ಅನ್ನುವ ಟಾಪಿಕ್ ಗೆ ಇಲ್ಲಿ ಸರಿಯಾದ ಅರ್ಥ ಕಾಣಸಿಗುತ್ತದೆ. ಒಟ್ಟಲ್ಲಿ ಮಂಜುಳಾ ಅವರ ಲೇಖನಗಳು ಬಹಳ ಇಷ್ಟವಾದವು. ಇವರ ಉಳಿದ ಎರಡು ಪುಸ್ತಕಗಳು ಸಂಪಿಗೆ ಮರ (ಅಂಕಣ ಬರಹಗಳು) ಹಾಗೂ ಆಸೆಯ ಕಂದೀಲು (ಕವನ ಸಂಕಲನ).

ಮುಂದೆಯೂ ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮಿಂದ ಒಳ್ಳೆಯ ಬರಹಗಳು ಸಮರ್ಪಿತವಾಗಲಿ ಅನ್ನುವ ಹಾರೈಕೆ – All the best ಮಂಜುಳ.

-ನಯನ ಬಜಕೂಡ್ಲು

4 Responses

 1. ನಾಗರತ್ನ ಬಿ. ಆರ್ says:

  ಪುಸ್ತಕ ಪರಿಚಯ ಪರಿಣಾಮಕಾರಿ ಯಾಗಿ ಮೂಡಿಬಂದಿದೆ.. ಧನ್ಯವಾದಗಳು ಮೇಡಂ

 2. Hema says:

  ಪುಸ್ತಕ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.

 3. Padma Anand says:

  ಸುಂದರ ಪುಸ್ತಕ ಪರಿಚಯ. ಆರಿಸಿಕೊಂಡಿರುವ ವಿಷಯಗಳು ವಿಭಿನ್ನವಾಗಿ, ಪುಸ್ತಕ ಓದುವ ಕುತೂಹಲ ಮೂಡಿಸುತ್ತದೆ.

 4. . ಶಂಕರಿ ಶರ್ಮ says:

  ಸೊಗಸಾದ ಪುಸ್ತಕ ಪರಿಚಯ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: