ಕೊರೋನಾ ಕನಸಿನ ಸುತ್ತ.

Spread the love
Share Button


ದೇಶದ 40 ದಿನಗಳ ಲಾಕ್‌ಡೌನ್ ಎಂಬ ಗೃಹಬಂಧನದಲ್ಲಿ ನಾನು ಹೈರಾಣವಾಗಿದ್ದೆ. ಸದಾ ಹೊರಗಡೆ ಕನಿಷ್ಟ ನಾಕ್ಕೈದು ಗಂಟೆಗಳ ಕಾಲ ತಿರುಗುತ್ತಿದ್ದ ನನಗೆ ಹುಚ್ಚು ಹಿಡಿದಂತಾಗಿತ್ತು. ಕೊನೆಗೂ ಕೊರೋನಾ ಎಂಬ ಮಹಾಮಾರಿಯ ಪ್ರತಾಪ ಕಡಿಮೆಯಾಗಿ ಹಾಯೆನಿಸಿತು. ಹಾಗೆ ರಾತ್ರಿ ಮಲಗಿದಾಗ ಯಾವುದಾದರೂ ದೂರದ ತಣ್ಣನೆಯ ಜಾಗಕ್ಕೆ ಹೋಗುವ ಮನಸ್ಸಾಗಿ ನಿದ್ರೆಗೆ ಜಾರಿದೆ. ನನ್ನ ಪತ್ನಿ ತಾನು ಬರೆಯುತ್ತಿರುವ ಪುಸ್ತಕ ಕೊನೆಯ ಹಂತದಲ್ಲಿರುವುದರಿಂದ ತಾನೆಲ್ಲಿಗೂ ಬರುವುದಿಲ್ಲವೆಂದು ಸ್ಪಷ್ಟ ಪಡಿಸಿದ್ದಳು. ಸರಿ ನಾನೇ ಒಬ್ಬನೇ ನನ್ನ ಬಟ್ಟೆಬರೆ ತೆಗೆದುಕೊಂಡು ಹೊರಟೆ. ಎಲ್ಲಿಗೆ?

ಡಾರ್ಜಲಿಂಗ್‌ಗೆ ವಿಮಾನನಿಲ್ದಾಣದಲ್ಲಿ ನನಗಾಗಿ ಕಾದ ಕಾರಿನಲ್ಲಿ ನನ್ನ ಹೋಟೆಲಿಗೆ ಹೊರಟೆ. ನನ್ನ ಏಳುದಿನದ ವಾಸ್ತವ್ಯದಲ್ಲೂ ಅದೇ ಕಾರು, ಡ್ರೈವರು ಬರುವುದಾಗಿ ತಿಳಿಸಿದ. ಭಾನುವಾರ ಮಾತ್ರ ತನಗೆ ರಜಾ ಬೇಕೆಂದು, ಆದರೆ ಕಾರನ್ನು ನನ್ನ ಬಳಕೆಗೆ ಹೋಟೆಲಿನಲ್ಲೇ ಇಡುವುದಾಗಿ ತಿಳಿಸಿದ. ಏರ್‌ಪೋರ್ಟ್‌ನಿಂದ ಹೋಟೆಲ್ಲಿಗೆ ದಾರಿ ಅತ್ಯಂತ ಆಹ್ಲಾದಕರವಾಗಿತ್ತು. ತಣ್ಣಗಿನ ಗಾಳಿ, ಪ್ರಕೃತಿ ಸೌಂದರ್ಯ ಮನಸ್ಸನ್ನು ಆಹ್ಲಾದಕರವಾಗಿಸಿತ್ತು. ಹೊರವಲಯದ ದಾರಿಯಲ್ಲಿ ಇಬ್ಬರು ಸಣ್ಣ ಹುಡುಗರು, ಕೆಲವು ಹಣ್ಣನ್ನು ಬುಟ್ಟಿಯಲ್ಲಿಟ್ಟು ಮಾರುತ್ತಿದ್ದರು. ಒಬ್ಬ 8 ವಯಸ್ಸಿನಿರಬಹುದು. ಇನ್ನೊಬ್ಬ 12 ವರ್ಷ ವಯಸ್ಸಿನ ಹುಡುಗ. ಬಹಳ ಚೂಟಿಯಾಗಿದ್ದರು. ನಾನು ಚಾಲಕನಿಗೆ ಕಾರು ನಿಲ್ಲಿಸಲು ಹೇಳಿದೆ. ಅವನಿಗೆ ಅರ್ಧ ಮನಸ್ಸು. ಸಾರ್ ನಿಮಗೆ ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಒಳ್ಳೆಯ ಹಣ್ಣು ಡಾರ್ಜಲಿಂಗ್‌ನಲ್ಲಿ ಸಿಗುತ್ತದೆ ಎಂದರೂ ನಾನು ಕಾರು ನಿಲ್ಲಿಸಿ ಆ ಬಾಲಕರಿಂದ ಹಣ್ಣಿನ ಬುಟ್ಟಿ ಖರೀದಿಸಿ ನನ್ನ ಹೋಟೆಲ್‌ಗೆ ಬಂದಿಳಿದೆ. ಆ ದಿನ ಪೂರ ವಿಶ್ರಾಂತಿ ಪಡೆದು ಬೆಳಿಗ್ಗೆ ಎದ್ದು ಹೊರಗೆ ಬಂದೊಡನೆ ಈ ಎರಡು ಪುಟ್ಟ ಬಾಲಕರು ಹೋಟೆಲಿನ ಬಳಿಯಲ್ಲಿ ಶೂ ಪಾಲಿಷ್‌ಗೆ ನಿಂತಿದ್ದಾರೆ. ಶೂ ಪಾಲಿಷ್ ಮಾಡಿಸಿಕೊಂಡು ಅಲ್ಲೇ ನಿಂತಿದ್ದೆ. ಆ ಬಾಲಕರು ಸಾರ್ ನೀವು ಡಾರ್ಜಲಿಂಗ್‌ನಲ್ಲಿ ಸುತ್ತಾಡಲು ನಾವು ಮಾರ್ಗದರ್ಶಕರಾಗಿ ಬರಬಹುದಾ? ನಮಗೆ ಎಲ್ಲಾ ತಾಣಗಳ ಪರಿಚಯವಿದೆ. ನೀವೆಷ್ಟು ಕೊಟ್ಟರೂ ನಾವು ತೃಪ್ತರು ಎಂದರು. ನಾನು ಸರಿ ಬನ್ನಿ ಎಂದು ಅವರನ್ನು ಕೂರಿಸಿಕೊಂಡು ಎಲ್ಲಾ ತಾಣಗಳನ್ನು ಸಂಜೆಯವರೆಗೆ ಅವರ ಮಾರ್ಗದರ್ಶನದಲ್ಲೇ ಸುತ್ತಾಡಿದೆ.

ಆ ದಿನ ಸಂಜೆ ಸುಮಾರು 7 ಗಂಟೆಗೆ ಹೋಟೆಲಿನ ಪಕ್ಕದ ಪಾರ್ಕಿನಲ್ಲಿ ಸುತ್ತಾಡುತ್ತಿದ್ದಾಗ ಈ ಇಬ್ಬರು ಬಾಲಕರು ಒಂದು ಕಲ್ಲು ಬೆಂಚಿನ ಮೇಲಿದ್ದರು. ತಮ್ಮ ಅಣ್ಣ ತೊಡೆಯಲ್ಲಿ ಮಲಗಿದ್ದ. ಅಣ್ಣನ ಹಿಂದೆ ಒಂದು ದಿನಪತ್ರಿಕೆ ಪೇಪರಿನ ಕಟ್ಟಿತ್ತು. ನಾನು ಕುತೂಹಲದಿಂದ ಅವರನ್ನು ಅಲ್ಲೇಕೆ ಇದ್ದೀರ ಎಂದೆ. ಅದಕ್ಕೆ ಅವರು ಈಗ ಎಂಟುಗಂಟೆಗೆ ಕೊನೆ ಬಸ್ ಬರುತ್ತದೆ. ಅದರಲ್ಲಿ ಈ ಪತ್ರಿಕೆಗಳನ್ನು ಮಾರಿ ನಂತರ ಮನೆಗೆ ಹೋಗುತ್ತೇವೆ ಎಂದರು. ನನಗಂತೂ ಬಹಳ ವಿಚಿತ್ರ ಎನಿಸಿತು. ಹೀಗೆ ಎರಡು ದಿನ ಕಳೆಯಿತು. ಈ ಬಾಲಕರು ನನಗೆ ಬಹಳಷ್ಟು ಸಹಾಯ ಮಾಡಿದ್ದರು. ನನಗಿಷ್ಟವಾದ ರೆಸ್ಟೋರೆಂಟ್, ಸಿನಿಮಾಗೆ ಟಿಕೆಟ್, ಓಪೆರಾನ ಶೋಗೆ ಟಿಕೆಟ್ ಹೀಗೆ ಏನು ಕೇಳಿದರೂ ಸ್ವಲ್ಪವೂ ಬೇಸರಿಸದೆ ನಗುಮುಖದಿಂದ ಅವರು ಮಾಡುತ್ತಿದ್ದಾರೆ. ಬೆಳಗಾಗುವುದಕ್ಕೂ ಮುಂಚಿನಿಂದ ತಡರಾತ್ರಿಯವರೆಗೂ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಿದ್ದರು.

ಶನಿವಾರ ಬೆಳಿಗ್ಗೆ ನಾನು ಎದ್ದು ಹೊರಗೆ ಹೋದಾಗ ಅಭ್ಯಾಸದಂತೆ ಅವರಿಂದ ಶೂ ಪಾಲಿಷ್ ಮಾಡಿಸಿಕೊಂಡು ಕುತೂಹಲದಿಂದ ಕೇಳಿದೆ. ಮಕ್ಕಳಾ, ನೀವು ಇಷ್ಟು ಕಷ್ಟಪಟ್ಟು ದುಡಿಯುತ್ತಿದ್ದೀರಾ. ಊಟಕ್ಕೆ ಕೇವಲ ಒಣಕಲು ಬ್ರೆಡ್ಡು, ಚಹಾ ಕುಡಿದು ಮಾಡಿದ ಸಂಪಾದನೆಗಳನ್ನು ಏನು ಮಾಡುತ್ತಿದ್ದೀರಾ? ಮುಂದೆ ಬೇರೆಲ್ಲಾದರೂ ಏನಾದರೂ ಮಾಡುವ ಒಂದು ನೀಲಿನಕ್ಷೆ ಇದೆಯಾ ಎಂದೆ. ಇಬ್ಬರೂ ನಸುನಕ್ಕು ಯೋಜನೆಗಳಿವೆ ಎಂದು ಮಾತ್ರ ನುಡಿದರು. ಹಾಗೆ ಭಾನುವಾರ ತಾವಿಬ್ಬರೂ ಪಕ್ಕದ ಗ್ರಾಮಕ್ಕೆ ಹೋಗಿಬರುವುದಾಗಿ ತಿಳಿಸಿದರು. ನೀವೇನಾದರೂ ಆ ಕಡೆ ಬರುತ್ತಿದ್ದರೆ ನಮ್ಮನ್ನು ಇಳಿಸಿ ಹೋಗಬಹುದು ಎಂದರು. ನಮಗೆ ಬಸ್ ಚಾರ್ಜ್‌ನ ಉಳಿತಾಯವಾಗಲಿದೆ ಎಂದೂ ಸೇರಿಸಿದರು. ನಾನು ನನ್ನ ಡ್ರೈವರ್ ಬರದಿದ್ದರೂ ಆಗಲಿ ನಾನೂ ನಿಮ್ಮನ್ನು ಅಲ್ಲಿಗೆ ಕರೆದೊಯ್ಯುವೆ ಎಂದು ತಿಳಿಸಿದೆ. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಇಬ್ಬರೂ ಹೋಟೆಲಿನ ಮುಂಭಾಗದಲ್ಲಿ ತಯಾರಾಗಿ ನಿಂತಿದ್ದರು. ನಾನು ಅವರನ್ನು ಕೂರಿಸಿಕೊಂಡು ಅವರ ಗ್ರಾಮದೆಡೆಗೆ ಹೊರಟೆ. ದಾರಿಯಂತು ಬಲು ಸುಂದರವಾಗಿತ್ತು. ಬರೆ ಬೆಟ್ಟ ಗುಡ್ಡಗಳು, ಹಸಿರು ಹಾಸು, ನೀರಿನ ಝರಿಗಳು, ತಂಪಾದ ಗಾಳಿ ದಾರಿ ಸವೆದಿದ್ದೇ ಗೊತ್ತಾಗಲಿಲ್ಲ.

ಒಂದು ದೊಡ್ಡ ಬಂಗಲೆ ಮುಂದೆ ಈ ಬಾಲಕರು ಕಾರು ನಿಲ್ಲಿಸಲು ವಿನಂತಿಸಿ ಕೆಳಗಿಳಿದರು. ನನಗೆ ನೀವು ಒಂದೆರಡು ಗಂಟೆ ಸುತ್ತಾಡಿ, ಊಟ ಮುಗಿಸಿ ಬಂದರೆ ನಾವು ವಾಪಸ್ ಬರುವುದಾಗಿ ತಿಳಿಸಿದರು. ನಾನು ಆಯಿತೆಂದು ಹೇಳಿದೆ. ಅವರು ಇಳಿದು ಒಳಗೆ ಹೋದರು. ಈ ಬಾಲಕರು ಇಷ್ಟು ದೊಡ್ಡ ಬಂಗಲೆಯಲ್ಲಿ ಏನು ಮಾಡುತ್ತಾರೆ ಎಂಬ ಕುತೂಹಲ ಹೆಚ್ಚಾಯಿತು. ಅವರ ಹೋದ ಕೂಡಲೇ ಅವರ ಹಿಂದೆಯೇ ಕಾಣದಂತೆ ಹೋಗಿ ಹಜಾರಕ್ಕೆ ಬಂದೆ. ಅಲ್ಲಿ ಕರೆಗಂಟೆ ಬಾರಿಸಿದಾಗ ಓರ್ವ ವಯಸ್ಸಾದ ಮಹಿಳೆ ಬಾಗಿಲು ತೆರೆದು ಸ್ವಾಗತಿಸಿದರು. ನಾನು ಈಗತಾನೇ ಇಬ್ಬರು ಬಾಲಕರು ಬಂದರಲ್ಲ ಅವರೆಲ್ಲಿ ಎಂದೆ. ಆಕೆ ಹೌದು ಎಂದು ನನ್ನನ್ನು ಒಳಗೆ ಕರೆದು, ವಿಲ್ಲವನ್ನು ಆಸ್ಪತ್ರೆಯಾಗಿ ಬದಲಿಸಿದ ಕಡೆಗೆ ಕರೆದೊಯ್ದರು. ಹಾಗೇ ಬಾಗಿಲಿನಿಂದ ಮೆಲ್ಲಗೆ ಒಂದು ಕೋಣೆಯ ಒಳಗೆ ತೋರಿಸಿದರು. ಅಲ್ಲಿ ಸುಮಾರು 16 ವಯಸ್ಸಿನ ಓರ್ವ ಯುವತಿ ಮಲಗಿದ್ದಳು. ಈ ಬಾಲಕರು ನಗುನಗುತ್ತಾ ಅವಳಿಗೆ ಏನನ್ನೋ ತಿನ್ನಿಸುತ್ತಿದ್ದರು. ಆ ದೃಶ್ಯವನ್ನು ನೋಡಿ ನಾನು ದಂಗು ಬಡಿದೆ. ವಾಪಸ್ಸು ಬಂದು ಆ ಮಹಿಳೆಯಲ್ಲಿ ಇವರ ಬಗ್ಗೆ ವಿಚಾರಿಸಿದೆ. ಅವರು ಹೇಳಿದ್ದಿಷ್ಟು.

ಕೆಲವು ವರ್ಷಗಳ ಇವರ ತಂದೆ ತಾಯಿ ಇಬ್ಬರೂ ಪ್ರಾಣ ಕಳೆದುಕೊಂಡರು. ಈ ಮೂವರೂ ಒಂದು ಜೋಪಡಿಯಲ್ಲಿ ವಾಸವಿದ್ದರು. ಕರೋನಾ ವೈರಸ್ಸಿನಿಂದ ಪ್ರಪಂಚದೆಲ್ಲೆಡೆ ಹರಡಿ ಕೊನೆಗೆ ಭಾರತಕ್ಕೆ ಕಾಲಿಟ್ಟಿತು. ಹೇಗೋ ಇವರ ಅಕ್ಕನಿಗೆ ಅದು ತಗುಲಿ ಆಕೆ ಬದುಕಿದ್ದೇ ಹೆಚ್ಚು. ಈಗ ಈ ಆಸ್ಪತ್ರೆಯಲ್ಲಿ ಅವಳು ಸುಧಾರಿಸಿ ಈ ಸ್ಥಿತಿಗೆ ಬಂದಿದ್ದಾಳೆ. ನನ್ನ ಬಳಿ ಬಂದು ಎಷ್ಟು ಖರ್ಚಾದರೂ ಪರವಾಗಿಲ್ಲ. ನಮ್ಮ ಅಕ್ಕನನ್ನು ಉಳಿಸಿ ಎಂದು ಕೈಮುಗಿದರು. ವಾರವಾರವೂ ನಾವು ನಿಮ್ಮ ಆಸ್ಪತ್ರೆಯ ಹಣವನ್ನು ತಪ್ಪದೆ ಪಾವತಿಸುತ್ತೇವೆ ಎಂದು ಆಶ್ವಾಸನೆ ನೀಡಿ ಇದುವರೆಗೂ ತಪ್ಪದೆ ನೀಡುತ್ತಿದ್ದಾರೆ ಎಂದರು. ನನಗಂತೂ ನನಗರಿವಿಲ್ಲದೇ ಕಣ್ಣಿನಿಂದ ಹನಿ ಬರಲಾರಂಭಿಸಿತು. ಅಕ್ಕನ ಬಗ್ಗೆ ಇವರ ಪ್ರೀತಿ, ಅದಕ್ಕಾಗಿ ಅವರು ಮಾಡುತ್ತಿರುವ ನಿರಂತರ ಸೇವೆ ನಿಜಕ್ಕೂ ಗರಬಡಿದಂತಿತ್ತು. ಆಟವಾಡುವ ಶಾಲೆಗೆ ಹೋಗುವ ಈ ವಯಸ್ಸಿನಲ್ಲಿ ಅವರ ಈ ತ್ಯಾಗ ನಿಜಕ್ಕೂ ಅವರ್ಣನೀಯವೆನಿಸಿತು.

PC: Internet

ಮಕ್ಕಳು ಬಹಳ ಸ್ವಾಭಿಮಾನಿಯಂತೆ ಕಂಡುಬಂದದ್ದರಿಂದ ನಾನು ಆ ಮಹಿಳೆಗೆ ಹತ್ತು ಸಾವಿರ ನಗದನ್ನು ನೀಡಿ ಆ ಯುವತಿ ಆಸ್ಪತ್ರೆಯಿಂದ ಬಿಡುಗಡೆಯಾದ ಸಮಯದಲ್ಲಿ ಆ ಬಾಲಕರಿಗೆ ಆ ಹಣವನ್ನು ನಿಯತ್ತಿನ ಪಾವತಿಗೆ ಪ್ರತಿಫಲವಾಗಿ ಆಸ್ಪತ್ರೆಯ ವತಿಯಿಂದ ನೀಡುತ್ತಿರುವಾಗಿ ಹೇಳಿ ಕೊಡಲು ವಿನಂತಿಸಿದೆ. ವಾಪಸು ಬಂದು ಕಾರಿನಲ್ಲಿ ಬಾಲಕರಿಗಾಗಿ ಕಾದೆ. ಎರಡು ಗಂಟೆ ಸಮಯವಾದ ಕೂಡಲೇ ಅವರು ಬಂದು ವಾಪಾಸು ಡಾರ್ಜಲಿಂಗ್‌ಗೆ ಬಂದಿಳಿದರು. ನಾನು ಅವರ ಬಳಿ ಏನೂ ಮಾತನಾಡಲಿಲ್ಲ. ಹಾಗೂ ಏನೂ ಗೊತ್ತಿಲ್ಲದಂತೇ ಇದ್ದೆ. ನನ್ನ ಪ್ರವಾಸ ಮುಗಿಸಿ ನಾನು ವಾಪಾಸು ಮೈಸೂರಿಗೆ ತೆರಳಿದೆ. ಕೊರೋನಾ ಕೊರೋನಾ ಎಂದು ನಾನು ಕನವರಿಸಿದಾಗ ನನ್ನ ಮಡದಿ ಅಲುಗಾಡಿಸಿ ಬೆಳಗಾಯಿತು 7 ಗಂಟೆ ಎಂದಾಗ ನಾನು ಪಿಳಿಪಿಳಿ ಕಣ್ಣುಬಿಟ್ಟು ಅವಳನ್ನು ನೋಡಿದೆ. ಮನಸ್ಸು ನೆಮ್ಮದಿಯ ತಾಣವಾಗಿತ್ತು, ಉಲ್ಲಾಸದಿಂದಿತ್ತು.

-ಕೆ. ರಮೇಶ್

8 Responses

  1. ಮನಸ್ಸಿನಂತೆ ಮಹದೇವ ಸುಂದರ ಕನಸಿನ ಅನಾವರಣ ಧನ್ಯವಾದಗಳು ಸಾರ್..

  2. ನಯನ ಬಜಕೂಡ್ಲು says:

    ಬಹಳ ಸೊಗಸಾಗಿದೆ ಬರಹ

  3. . ಶಂಕರಿ ಶರ್ಮ says:

    ಕಟ್ಟಿದ ಕನಸನ್ನು ನಿಜವೇನೋ ಎನ್ನುವಂತೆ ಹೆಣೆದ ಪರಿ ನಿಜಕ್ಕೂ ಸೊಗಸು ಸರ್. ಕನಸಲ್ಲೇ ಒಂದು ಪಾಠ ಕಲಿತಂತಾಯ್ತು… !

  4. Padma Anand says:

    ಸಾತ್ವಿಕ ಕನಸನ್ನು ಕಂಡು ಅದನ್ನು ಸುಂದರ ಲೇಖನವನ್ನಾಗಿಸಿ ಓದುಗರಿಗೆ ತಲುಪಿಸಿದ್ದಕ್ಕಾಗಿ ಅಭಿನಂದನೆಗಳು ನಿಮಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: