ಮಾರ್ಜಾಲ – ಒಂದು ಸ್ವಗತ

Share Button

ನನ್ನ ಬೆಳಗಿನ ವಾಯುವಿಹಾರಕ್ಕೆ ಹೊರಟಾಗ ಒಂದು ಬೆಕ್ಕು ಅಡ್ಡಬಂತು. ನಾನು ನನ್ನ ಹಿರಿಯರ ಸಂಪ್ರದಾಯದಂತೆ ಹಿಂತಿರುಗಿ ಐದಾರು ಹೆಜ್ಜೆ ಇಟ್ಟು ಮತ್ತೆ ತಿರುಗಿ ನನ್ನ ನಡಿಗೆ ಪ್ರಾರಂಭಿಸಿದೆ. ಬೆಕ್ಕು ನನ್ನನ್ನು ತಿರಸ್ಕಾರದಿಂದ ನೋಡಿ ರಸ್ತೆ ದಾಟಿತು. ಅದರ ಮನಸ್ಸಿನಲ್ಲಾದ ಹಲವು ಆಕ್ರೋಶ, ಜಿಗುಪ್ಸೆ ಹಾಗೂ ಇತರ ಭಾವನೆಗಳನ್ನು ಅದರ ಬಾಯಿಂದಲೇ ಕೇಳಲು ಸೂಕ್ತ.

ಈ ಮನುಷ್ಯರಿಗೆ ನಮ್ಮನ್ನು ಕಂಡರೆ ಏಕೋ ತಿರಸ್ಕಾರ. ರಸ್ತೆಯಲ್ಲಿ ನಾವು ಎಡದಿಂದ ಬಲಕ್ಕೆ ಹೋದರೆ ಶುಭ, ಅದೇ ಬಲದಿಂದ ಎಡಕ್ಕೆ ಹೋದರೆ ಅಶುಭ. ಇದಾವ ನ್ಯಾಯ? ನಿಮ್ಮ ಯೋಗ್ಯತೆ ನಮಗೆ ತಿಳಿದಿಲ್ಲವೇ? ಒಂದು ಸಣ್ಣ ಉದಾಹರಣೆ ಕೇಳಿ. ನಾನು ಮರಿಯಾಗಿದ್ದಾಗ ಒಂದು ಹಳ್ಳಿಯಲ್ಲಿ ಓರ್ವ ಸಂಪ್ರದಾಯಸ್ಥರ ಮನೆಯಲ್ಲಿದ್ದೆ. ಅವರೇನೋ ನನ್ನನ್ನು ಸಾಕುವ ನಾಟಕ ಮಾಡುತ್ತಿದ್ದರು. ಅವರ ಮನೆಯಲ್ಲಿದ್ದ ಇಲಿಗಳ ಸಾಮ್ರಾಜ್ಯವನ್ನು ಹತ್ತಿಕ್ಕಲು ನನ್ನನ್ನು ಇಟ್ಟಿದ್ದರಷ್ಟೆ. ವರ್ಷದ ಒಂದು ಶ್ರಾದ್ಧದ ದಿನ ನಾನು ಮನೆಯಲ್ಲಿ ಓಡಾಡಿಕೊಂಡಿದ್ದೆ. ಅದೇನೋ ‘ಮಡಿ’ಯಂತೆ ಮನೆ ಯಜಮಾನ ನನ್ನನ್ನು ಎತ್ತಿ ಮನೆಮುಂದೆ ಬಲಭಾಗದ ಹಜಾರದ ಪಡಸಾಲೆಯಲ್ಲಿ ಇಟ್ಟು ಒಂದು ದೊಡ್ಡ ಬುಟ್ಟಿಯನ್ನು ಮುಚ್ಚಿಬಿಟ್ಟರು. ಶ್ರಾದ್ಧಕಾರ್ಯ ಮುಗಿದ ಮೇಲೆ ಸಂಜೆಯ ವೇಳೆ ನನಗೆ ಬಿಡುಗಡೆ ಸಿಕ್ಕಿತು. ಇದು ಇಲ್ಲಿಗೇ ಮುಗಿಯಲಿಲ್ಲ. ಶತಮಾನಗಳಾದರೂ ಬೆಕ್ಕಿರಲಿ, ಇಲ್ಲದಿರಲಿ ಎಲ್ಲಾ ಸಂಪ್ರದಾಯಸ್ಥರ ಮನೆಯಲ್ಲಿ ಶ್ರಾದ್ಧದ ದಿನ ಮನೆಯ ಹಜಾರದ ಪಡಸಾಲೆಯ ಬಲಭಾಗದಲ್ಲಿ ಒಂದು ಖಾಲಿ ಬಟ್ಟೆ ಮಗುಚಿ ಇಡುತ್ತಾರೆ. ಯಾರಿಗೂ ಇದರ ಬಗ್ಗೆ ಗೊತ್ತಿಲ್ಲ. ಯಾರಾದರೂ ಪ್ರಶ್ನಿಸಿದರೆ ಶತಮಾನಗಳಿಂದ ಈ ಪದ್ಧತಿ ಇದೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಮನೆಯ ಮುದಿ ಹಿರಿಯರು! ನಾನು ಮಾತ್ರ ಮುಸಿ ಮುಸಿ ನಗುತ್ತಿರುತ್ತೇನೆ. ಇದೇ ಮಾನವರ ಮಿದುಳು !

ನಾನು ಯಾಕಾದರೋ ಈ ಭಾರತದಲ್ಲಿ ಹುಟ್ಟಿದೆ ಎಂದು ಪರಿತಪಿಸುತ್ತಿದ್ದೇನೆ. ನಾಯಿಗಳಿರುವ ಮರ್‍ಯಾದೆ, ಸವಲತ್ತು, ಮುದ್ದು ನಮಗಿಲ್ಲ. ಅದೇ ಅಮೇರಿಕ ಮತ್ತು ಇನ್ನಿತರ ದೇಶಗಳಲ್ಲಿ ನಾವೇ ನಂಬರ್ ಒನ್ ಪೆಟ್. ಅಮೇರಿಕದಲ್ಲೇ ನಾವು ಒಂಭತ್ತು ಕೋಟಿ ಇದ್ದೇವೆ. ನಮ್ಮಿಂದ ಲಕ್ವ ಮತ್ತು ಹೃದಯಾಘಾತ 30 ಪ್ರತಿಶತ ಕಡಿಮೆಯಾಗುತ್ತದಂತೆ. ಅವರಿಗಿರುವ ಬುದ್ಧಿ ನಿಮಗಿಲ್ಲ ಎಂದೇ ನಮ್ಮ ವಿಷಾದ. ಕರಿಬೆಕ್ಕು ಅಮೇರಿಕದಲ್ಲಿ ಅಶುಭ ಆದರೆ ಇಂಗ್ಲೆಂಡಿನಲ್ಲಿ, ಆಸ್ಟ್ರೇಲಿಯಾದಲ್ಲಿ ಶುಭ. ಇದೇನೋ ವಿಚಿತ್ರ ನನಗರ್ಥವಾಗಲ್ಲ. ಮಾನವರ ಮಿದುಳು ಬರೀ ಗೊಂದಲದ ಗೂಡೇ ಎಂದು ನನಗನ್ನಿಸುತ್ತದೆ. ಇನ್ನು ಇಸ್ರೇಲ್ ದೇಶದ ಜನಸಂಖ್ಯೆ ಕೇವಲ 80 ಲಕ್ಷ. ಅಲ್ಲಿ 25 ಲಕ್ಷ ನಾವಿದ್ದೇವೆ. ಅಂದರೆ ನಮ್ಮ ಜನಪ್ರಿಯತೆ ಎಷ್ಟೆಂದು ತಿಳಿಯಿತಾ ನಿಮಗೆ?

ಬೇರೆ ಬೇರೆ ದೇಶಗಳಲ್ಲಿ ನಾನು ಎದ್ದ ಕೂಡಲೇ ನನ್ನನ್ನು ಮುದ್ದು ಮಾಡುತ್ತಾರೆ. ಇಲ್ಲೋ ಮನೆ ಯಜಮಾನಿಯ ಕಣ್ಣಿಗೆ ಬಿದ್ದರೆ ಮುಗಿಯಿತು. ದರಿದ್ರ ಇದರ ಮುಖ ನೋಡಿಯಾಯಿತು. ಇವತ್ತು ಎಲ್ಲ ಕೆಲಸ ಹಾಳೇ ಎಂದು ಮನಸಾರೆ ಶಪಿಸುತ್ತಾಳೆ. ಬೆಳಿಗ್ಗೆ ನರಿಮುಖ ಕಂಡರೆ ಅದೃಷ್ಟವಂತೆ. ಈ ಮಾನವರ ಮಿದುಳಿಗೆ ನಾನೇನು ಹೇಳಲಿ? ನಾನು ಯಾವ ದೇವರ ವಾಹನವೂ ಅಲ್ಲವಾದ್ದರಿಂದ ಯಜಮಾನಿತಿಗೆ ನನ್ನ ಮೇಲೆ ತಾತ್ಸಾರ ಅನಿಸುತ್ತೆ.

ಇನ್ನು ಯಾವ ಪ್ರಾಣಿ, ಪಕ್ಷಿಗಳ ಬಗ್ಗೆಯೂ ನಮ್ಮ ಮೇಲಷ್ಟು ಅಪಹಾಸ್ಯ ಕೋಪದ ಗಾದೆಗಳು ನಿಮಗೆ ಹೊಳೆದಿಲ್ಲ. ಇದರಲ್ಲಿ ಕೇವಲ ಕೆಲವನ್ನು ನಿಮ್ಮ ಗಮನಕ್ಕೆ ತರಲು ಇಷ್ಟಪಡುತ್ತೇನೆ. ಅದೂ ಬಹಳ ಖೇದದಿಂದ.ಯಾರಾದರೂ ಏನಾದರೂ ಮಾಡುತ್ತಿದ್ದರೆ ಬೇರೆಯವರಿಗೆ ಗೊತ್ತಾಗುತ್ತಿಲ್ಲ ಎಂಬ ಭ್ರಮೆ ಇದ್ದರೆ ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ? ಎಂದು ಹಾಸ್ಯ ಮಾಡುತ್ತೀರಾ. ನಾವು ಹಾಲನ್ನು ಸಂಪೂರ್ಣ ಅಸ್ವಾದಿಸಕ್ಕೆ ಕಣ್ಣು ಮುಚ್ಚುತ್ತೇನೆ. ವಿನಃ ಅದರಲ್ಲಿ ಬೇರಾವ ದುರುದ್ದೇಶವಾಗಲೀ, ಉಪಾಯವಾಗಲೀ ಇಲ್ಲ. ನೀವು ಸಂಗೀತ ಕೇಳುವಾಗ ಇಲ್ಲ ಒಳ್ಳೆಯ ಮಸಾಲೆ ದೋಸೆ ಸವಿಯುವಾಗ ಕಣ್ಣು ಮುಚ್ಚಿ ಆಸ್ವಾದಿಸುವುದಿಲ್ಲವೇ? ನಿಮಗ್ಯಾಕೆ ಮತ್ಸರ ನನಗರ್ಥವಾಗಲ್ಲ.

ಇನ್ನು ಕೆಲವರು ಸುಮ್ಮನೆ ಚಡಪಡಿಸುತ್ತಿದ್ದರೆ ಬಾಲಸುಟ್ಟ ಬೆಕ್ಕಿನ ಹಾಗೆ ಎನ್ನುತ್ತೀರಿ. ನಿಮ್ಮ ಹಿಂಬದಿ ಸುಟ್ಟರೆ ನೀವು ನಮಗಿಂತ ವಿಕಾರವಾಗಿ ವರ್ತಿಸುತ್ತೀರಿ ತಿಳಿದಿರಲಿ. ಮಾರ್ಜಾಲ ಸನ್ಯಾಸಿ ಎಂಬ ಕೆಟ್ಟ ಬಿರುದು ನಮಗೆ ಕೊಟ್ಟಿದ್ದೀರಿ. ಒಂದು ವೇಳೆ ನಮ್ಮ ಸ್ನೇಹಿತರು ಬರಗಾಲದ ಪರಿಸ್ಥಿತಿಯ ಸುಳಿಯಲ್ಲಿ ಅನಿವಾರ್ಯತೆಯಿಂದ ಬೇಟೆಯಾಡಲು ಈ ಉಪಾಯ ಬಳಸಿರಬಹುದು. ಅದನ್ನೇ ನೀವು ನಿಮ್ಮ ಅನುಕೂಲಕ್ಕೆ ಬಳಸಿ ನಮಗೆ ಅವಮಾನ ಮಾಡುತ್ತಿದ್ದೀರಿ.

ಯಾರಾದರೂ ಕಚ್ಚಾಡುತ್ತಿದ್ದರೆ ನಾಯಿ ಬೆಕ್ಕುಗಳ ಹಾಗೆ ಕಚ್ಚಾಡುತ್ತಿದ್ದಾರೆ ನೋಡಿ ಎಂದು ಹಾಸ್ಯ ಮಾಡುತ್ತೀರ. ನಿಮ್ಮಲ್ಲಿ ದಾಯಾದಿ ಕಲಹ ಇಲ್ಲವೇ? ಕುರುಕ್ಷೇತ್ರ ಯುದ್ಧ ಮರೆತಿಲ್ಲ ತಾನೇ? ಯಾರ ಮನೆಯಲ್ಲಿ ಜಗಳ ಇಲ್ಲ? ಅತ್ತೆ ಸೊಸೆ ನಮಗಿಂತ ಜಾಸ್ತಿ ಕಚ್ಚಾಡುತ್ತಿಲ್ಲವೇ? ಸ್ವಲ್ಪ ಯೋಚಿಸಿ. ಇನ್ನು ಜೋರಾಗಿ ಮಳೆ ಬಂದರೆ ರೈನಿಂಗ್ ಕೇಟ್ಸ್ ಅಂಡ್ ಡಾಗ್ಸ್ ಎಂದು ಒದರುತ್ತೀರಿ. ಮಳೆ ಒಳ್ಳೆಯದಲ್ಲವೇ? ಡಾನ್ಸ್ ಪದ ಕಿತ್ತು ಹಾಕಿದರೆ ನಿಮಗೇ ಕ್ಷೇಮ ನೆನಪಿರಲಿ. ಬೆಕ್ಕಿಗೆ ಒಂಭತ್ತು ಜೀವಗಳು ಎಂದು ಹಂಗಿಸುತ್ತೀರಿ. ಇದು ಮಾತ್ರ ನಿಜ. ನಮಗೆ ಜಿಗಿಯುವ, ಓಡುವ, 32 ಅಂತಸ್ತಿನಿಂದ ಜಿಗಿದರೂ ಉಳಿಯುವ ದೈವದತ್ತವಾದ ವರ ಇದೆ. ನಿಮಗೇಕೆ ಮತ್ಸರ? ಇಲ್ಲಿ ಒಂದು ವಿಷಯ ಪ್ರಸ್ತಾಪಿಸಲೇಬೇಕು. ಈಗ್ಗೆ ಕೆಲ ದಿನಗಳ ಹಿಂದೆ ನನ್ನ ಸಹಪಾಠಿಗೆ ಅಮೇರಿಕದ ಓರ್ವ ಮಹಾನುಭಾವ ಹದಿನಾಲ್ಕು ಲಕ್ಷ ಖರ್ಚು ಮಾಡಿ ಕಿಡ್ನಿ ಕಸಿ ಮಾಡಿಸಿ 10 ನೇ ಜೀವ ದಾನಮಾಡಿದ. ಭಾರತದಲ್ಲಿ ನೀವು ಯಾರಿಗಾದರೂ ಅಪರಿಚತರಿಗೆ ಈ ರೀತಿ ಮಾಡಿದ್ದೀರಾ? ಕನಸಿನಲ್ಲಿಯೂ ಇಲ್ಲ ನೆನಪಿರಲಿ!

ಮನೆಯೊಡತಿ ಕಣ್ಣು ಇಂಗಿ ಹೋಗಲಿ ಎಂದು ನಾವು ಶಾಪ ಹಾಕುತ್ತೇವೆ ಎಂದು ನಮ್ಮ ಮೇಲೆ ಇಲ್ಲದ ಆಪಾದನೆ ಮಾಡುತ್ತೀರ. ಪಾಪ ಇಷ್ಟಕ್ಕೂ ಮನೆಯೊಡತಿಯ ಕಣ್ಣು ಟಿ.ವಿ. ಪರದೆಯ ಮೇಲೋ, ಪಕ್ಕದ ಮನೆಯ ಕಿಟಕಿಯ ಮೇಲೋ ಇರುತ್ತೆ. ನಾವು ನಮ್ಮ ಕೆಲಸ ಮುಗಿಸಿ ಜಾಗ ಖಾಲಿ ಮಾಡುತ್ತೇವೆ. ಇದರಲ್ಲೇನು ತಪ್ಪು ನನಗೆ ತಿಳಿಯೊಲ್ಲ. ಸುಮ್ಮಸುಮ್ಮನೆ ಶಾಪ ಕೊಡಬೇಡಿ. ಇದು ಸಾಲದೆಂಬಂತೆ ಇನ್ನೊಂದು ಉದಾಹರಣೆ ಕೇಳಿ. ಅಕಸ್ಮಾತ್ ಯಜಮಾನ ಯಾ ಯಜಮಾನಿಯ ಏಟಿಗೆ ನಾವೇನಾದರೂ ಸತ್ತೆವು ಅನ್ನಿ’ ನಮಗಂತೂ ಇರುವಾಗ ಯಾವ ಮರ್ಯಾದೆ ಇಲ್ಲ, ಆದರೆ ಅವರ ಪ್ರಾಯಶ್ಚಿತ್ತಕಾಗಿ ಚಿನ್ನದ ಬೆಕ್ಕನ್ನು ಒಬ್ಬ ಬ್ರಾಹ್ಮಣನಿಗೆ ದಾನ ಮಾಡುತ್ತಾರಂತೆ. ಇದಕ್ಕಿಂತ ಮೂರ್ಖತನ ನಡೆ ಇನ್ನೊಂದಿದೆಯೇ? ನೀವೇ ಯೋಚಿಸಿ.

ಇನ್ನು ಅತ್ತೆ ಮೇಲೆ ಕೋಪ ಕೊತ್ತಿಯ (ಬೆಕ್ಕಿನ) ಮೇಲೆ ಎಂದು ಹಿಯ್ಯಾಳಿಸುತ್ತೀರಾ. ನಿಮಗೆ ಈ ವಿಶಾಲ ಜಗತ್ತಿನ ಕೋಟ್ಯಾಂತರ ಪ್ರಾಣಿಗಳಲ್ಲಿ ಬೇರೆ ಯಾವ ಪ್ರಾಣಿಯೂ ಸಿಗಲಿಲ್ಲವೇ? ಗಂಡಕೂಡ ಒಂದು ಪ್ರಾಣಿ ಎಂಬುದನ್ನು ಯಜಮಾನಿಗೆ ನಾವು ನೆನಪಿಸಬಯಸುತ್ತೇವೆ. ಕಾರಣ ಸ್ಪಷ್ಟ. ಅವನು ಅತ್ತೆ ಸೊಸೆ ಕದನದಲ್ಲಿ ಮಧ್ಯ ಪ್ರವೇಶ ಮಾಡುವುದೇ ಇಲ್ಲವಲ್ಲ. ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ನಾಟಕ ಮಾಡುತ್ತಾನಲ್ಲ ಇದಕ್ಕೆ ಏನು ಹೇಳುವಿರಿ?
ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ ಎಂದು ಬಹಳ ಹಗುರಾಗಿ ಹೇಳ್ತೀರಲ್ಲ. ಇಲಿಗಳು ನಮ್ಮ ಪ್ರಧಾನ ಆಹಾರ ಅದನ್ನು ಹಿಡಿಯಲು ನಾವೆಷ್ಟು ಕಷ್ಟ ಪಡುತ್ತೇವೆಂಬುದು ನಮಗೇ ಗೊತ್ತು. ಮೂಷಕ ಸಂಹಾರದಿಂದ ಪ್ರಕೃತಿಯ ಸಮತೋಲನ ಉಳಿದಿದೆ. ನಾವಿಲ್ಲದಿದ್ದರೆ ಅದರ ದುಷ್ಪರಿಣಾಮ ಎದುರಿಸಲು ನೀವು ನಿಶ್ಯಕ್ತರು. ಕಿಂದರಿಜೋಗಿ ಈಗಿಲ್ಲ ನೆನಪಿರಲಿ!
ಇನ್ನು ಯಾರಾದರೂ ಒಂದು ಕೆಲಸ ಯಾರ ಕೈಲಿ ಮಾಡಿಸಬೇಕೆಂಬ ಜಿಜ್ಞಾಸೆ ಆದಾಗ ಬೆಕ್ಕಿಗೆ ಗಂಟೆ ಕಟ್ಟುವರಾರು? ಎಂದು ಹಾಸ್ಯ ಮಾಡುತ್ತೀರಿ. ನಿಮಗೆ ಬೇರಾವ ಪ್ರಾಣಿಯೂ ಸಿಗಲಿಲ್ಲವೇ? ನಮ್ಮ ಊಟಕ್ಕೆ ಮಣ್ಣು ಹಾಕಲು ಈ ರೀತಿಯ ಪರಿಹಾಸ್ಯ ಸರಿಯಲ್ಲ ಎಂದು ತಿಳಿಸಲು ಇಚ್ಛೆಪಡುತ್ತೇವೆ. ಇದಲ್ಲದೆ ಬೆಕ್ಕಿಲ್ಲದ ಮನೆಯಲ್ಲಿ ಇಲಿ ಪಲ್ಟಿ ಹೊಡಿಯುತ್ತಿತ್ತಂತೆ, ನೂರು ಇಲಿಗಳನ್ನು ತಿಂದು ಬೆಕ್ಕು ಯಾತ್ರೆ ಹೊರಟಿತ್ತಂತೆ ಎಂಬ ಗಾದೆ ಮಾಡಿದ್ದೀರ, ಇದರ ಬಗ್ಗೆ ನಾನು ಮಾತಾಡೊಲ್ಲ.

ನಮಗೋಸ್ಕರ ಮುಂಬೈ ನಗರದಲ್ಲಿ ಕ್ಯಾಟ್‌ಕೆಫೆ ಸ್ಟುಡಿಯೋ ಎಂಬ ದುಬಾರಿ ರೆಸ್ಟೋರೆಂಟ್ ಇದೆ. ನೆನಪಿದೆಯಾ. ನಾವು 40 ಕ್ಕೂ ಹೆಚ್ಚು ಮಂದಿ ಅಲ್ಲಿ ಎಲ್ಲ ಗ್ರಾಹಕರನ್ನೂ ರಂಜಿಸುತ್ತೇವೆ. ಎಲ್ಲರಿಗೂ ನಮ್ಮನ್ನು ನೋಡಿದರೆ ಅವರ ಬೇಸರ, ದುಮ್ಮಾನ ಎಲ್ಲ ದೂರವಾಗುತ್ತಂತೆ. ಆ ಮಾಲೀಕನಿಗಿರುವಷ್ಟು ನಮ್ಮ ಬಗ್ಗೆ ಸಾಮಾನ್ಯ ತಿಳುವಳಿಕೆ ಉಳಿದವರಿಗಿಲ್ಲವೆಂದು ನಾವು ಖೇದ ಪಡುತ್ತೇವೆ. ನಮ್ಮನ್ನು ಮನೆಮಂದಿಗಿಂತ ಹೆಚ್ಚು ಪ್ರೀತಿ ವಾತ್ಸಲ್ಯದಿಂದ ಆ ರೆಸ್ಟೋರೆಂಟ್‌ನವರು ನೋಡಿಕೊಳ್ಳುತ್ತಿದ್ದಾರೆ. ಇದಲ್ಲದೆ ಹತ್ತಾರು ಆಂಗ್ಲ ಗಾದೆಗಳು ನಮ್ಮ ಬಗ್ಗೆ ಬಂದಿದೆ. ಇದರ ಬಗ್ಗೆ ವ್ಯಾಖ್ಯಾನ ಮಾಡದಿರುವುದು ಒಳ್ಳೆಯದು.

ನಾವು ಒಂದು ವಿಷಯಕ್ಕೆ ನಿಮ್ಮನ್ನು ಕ್ಷಮಿಸುವುದಿಲ್ಲ ಬಿಡಿ. ಗಣಕಯಂತ್ರದ ನಿರ್ವಹಣೆಗೆ ಯಃಕಿಶ್ಚಿತ್ ಮೂಷಕ (Mouse) ಶರಣಾಗಿದ್ದೀರಲ್ಲ. ಇದು ನಿಮ್ಮ ಕರ್ಮ ಅನ್ನದೆ ಇನ್ನೇನನ್ನಲಿ?ಇಷ್ಟೆಲ್ಲಾ ವ್ಯಾಖ್ಯಾನಗಳ ನಂತರವೂ ನೀವು ನಮ್ಮ ಬಗ್ಗೆ ಸ್ವಲ್ಪ ಯೋಚಿಸಿ ನಿಮ್ಮ ಕುಟುಂಬ ಸದಸ್ಯರಿಗಿರುವ ಸ್ಥಾನಮಾನ, ಮರ್‍ಯಾದೆ ನಮಗೆ ನೀಡಿ ಗೌರವದಿಂದ ನಡೆಸಿಕೊಳ್ಳುತ್ತೀರೆಂದು ನಂಬೋಣವೇ? ಇಲ್ಲಿಗೆ ಸಾಕೋ ಇಲ್ಲ ಇನ್ನು ಬೇಕೋ? ಬೇಗ ಹೇಳಿ.

-ಕೆ. ರಮೇಶ್

6 Responses

  1. ಬೆಕ್ಕಿನ ಸ್ವಗತ ಚೆನ್ನಾಗಿ ಓದಿ
    ಸಿಕೊಂಡು ಹೋಯಿತು ಸಾರ್ ಮಾ ರ್ಜಾಲ ಹೇಳಿದಂತೆ ಯೋಚಿಸಿ ಬೇಕಾದ ವಿಷಯ. ಧನ್ಯವಾದಗಳು.

  2. ನಯನ ಬಜಕೂಡ್ಲು says:

    Beautiful article. ನವಿರಾದ ತಿಳಿ ಹಾಸ್ಯವೂ ಬೆರೆತಿದೆ.

  3. Hema says:

    ಕುತೂಹಲಕಾರಿಯಾದ ಮಾಹಿತಿಯುಳ್ಳ ಸೊಗಸಾದ ಬರಹ..

  4. . ಶಂಕರಿ ಶರ್ಮ says:

    ತಿಳಿ ಹಾಸ್ಯಭರಿತ ಮಾರ್ಜಾಲ ಸ್ವಗತ ಬಹಳ ಇಷ್ಟವಾಯ್ತು. ಈ ಬೆಕ್ಕು ಇದೆಯಲ್ಲಾ.. ನನ್ನ ಪ್ರೀತಿಯ ಪೆಟ್. ಎರಡು ಮರಿಗಳೊಂದಿಗೆ ಮನೆ ಪ್ರವೇಶ ಮಾಡಿದ ಅದರಮ್ಮ ಮರಿಗಳನ್ನು ನನಗೊಪ್ಪಿಸಿ ಹೋಗಿದೆ. ಈಗ ನಮ್ಮ ಚುಕ್ಕಿ ಮನೆಯ ಕೇಂದ್ರ ಬಿಂದು! ಸೊಗಸಾದ ಲೇಖನಕ್ಕೆ ಧನ್ಯವಾದಗಳು ಸರ್.

  5. Padma Anand says:

    ಮಾರ್ಜಾಲ ಸ್ವಗತ ಸೊಗಸಾಗಿ, ಇನ್ನೂ ಬೇಕು, ಬೇಕು ಅನ್ನುವಂತಿದೆ.

  6. Mittur Nanajappa Ramprasad says:

    ನ್ಯಾಯಸಮ್ಮತದ ಹೇಳಿಕೆಯಾಗಿದೆ ಮಾರ್ಜಾಲದ ಎಕಾಲಾಪವು

    ನ್ಯಾಯಸಮ್ಮತದ ಹೇಳಿಕೆಯಾಗಿದೆ ಮಾರ್ಜಾಲದ ಎಕಾಲಾಪವು/
    ಪೂರ್ವಗ್ರಹವಿಲ್ಲದೆ ವಿಮರ್ಶಿಸಿದರೆ ಅರಿವಾಗುವುದು ಯಥಾರ್ಥವು/
    ನ್ಯಾಯಸಮ್ಮತದ ಹೇಳಿಕೆಯಾಗಿದೆ ಮಾರ್ಜಾಲದ ಎಕಾಲಾಪವು/
    ಮುನ್ನೊಲವಿಲ್ಲದೆ ಪರಿಶೀಲಿಸಿದರೆ ಮನವಾಗುವುದು ವಾಸ್ತವಿಕವು/

    ಯಾವ ಪ್ರಸಂಗವು ಮಾರ್ಜಾಲಗಳ ಪರಿಹಾಸ್ಯಕೆ ಕಾರಣವಾಗಿದೆ/
    ಇಲ್ಲ ಮೂಡ ಪದ್ದತಿಗಳ ಪರಿಣಾಮದ ಬೋನಲ್ಲಿ ಸೆರೆಯಾಗಿವೆ/
    ಈ ಪರಂಪರೆಯ ಅನ್ವೇಷಿಸದೆ ಕೊತ್ತಿಗಳಿಗೆ ತೊಳಲಾಟವಾಗಿದೆ/
    ಇಲ್ಲ ಮಾನವನ ಅಹಂನಲ್ಲಿ ಸಕಾರಣಗಳಿಲ್ಲದೆ ನರಳಾಡುತಿವೆ/

    ಬೆಕ್ಕಿನ ಸ್ವಗತವನು ಅಲಿಸಿ ಮಾರ್ಪಡುವುದೆ ಮಾನವನ ವರ್ತನೆ/
    ಯಾವ ನ್ಯಾಯಾಲಯ ಬೆಂಬಲಿಸುವುದು ಸೂಕ್ತವಾದ ತೀರ್ಮಾನವ/
    ಅಸತ್ಯದ ಅಪವಾದಗಳಲ್ಲಿ ಬೆಕ್ಕುಗಳಿಗಾಗಿದೆ ವಿಪರೀತ ಯಾತನೆ //
    ಯಾವ ನ್ಯಾಯಾಲಯ ಸಮರ್ಥಿಸುವುದು ಯುಕ್ತವಾದ ನಿರ್ಣಯವ/

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: