ಪರಮ ಪುರುಷ ಪರಾಶರ

Share Button

ಪುರಾಣಗಳು ಹದಿನೆಂಟು. ಅವುಗಳಲ್ಲಿ ಮಹಾಭಾರತವು ಶ್ರೇಷ್ಠವಾದುದು, ‘ಪಂಚಮ ವೇದ’ ಎಂದು  ಕರೆಯಲ್ಪಡುವ ಈ ಉದ್ಗೃಂಥವು ವೇದ, ಉಪನಿಷತ್ತುಗಳ ಸಾರ. ತತ್ವದರ್ಶನಗಳನ್ನು ಸಾವಿರಾರು ವರ್ಷಗಳಿಂದ ಪ್ರಸಾರ ಮಾಡುತ್ತಾ ಬಂದಿದೆ. ಸಹಸ್ರ ಸಹಸ್ರ ಜನರ ಜ್ಞಾನದಾಹವನ್ನು ತಣಿಸಿದೆ. ಅದೆಷ್ಟೋ ಜನರ ಸುಪ್ತ ಪ್ರತಿಭೆಗಳನ್ನು ಬೆಳಗಿಸಿದೆ.  ‘ಮಹಾಭಾರತ’ ಎಂಬ ಹೆಸರಿನಿಂದಲೇ ಈ ಗ್ರಂಥದ ಉತ್ಕೃಷ್ಟತೆಯನ್ನು ಅಳೆಯಬಹುದಾಗಿದೆ. ಮಹಾಭಾರತದಲ್ಲಿ ಎಲ್ಲವೂ ಇದೆ. ಅದರಲ್ಲಿ ಇಲ್ಲದುದು ಹೊರಗೂ ಇಲ್ಲ’ ಎಂಬುದು ಪ್ರಾಜ್ಞರ ಹೇಳಿಕೆ. ಪ್ರಾಚೀನ ಭಾರತದ ಧಾರ್ಮಿಕ, ಸಾಂಸ್ಕೃತಿಕ ಜಗತ್ತನ್ನು ಬಹಳ ಕುತೂಹಲ ಭರಿತವೂ ಸುಂದರವೂ ಆಗಿ ನಮ್ಮ ಮುಂದೆ ತೆರೆದಿಡುವ ಈ ಮಹಾಗ್ರಂಥದ ಕರ್ತೃ ವೇದವ್ಯಾಸ.

ನಾವು ಪುರಾಣಗಳನ್ನು ಓದುವಾಗ, ನಮಗದರ ಲಾಭವಾದಾಗ, ಅದನ್ನು ಬರೆದವರನ್ನು ನೆನೆಯಬೇಕಲ್ಲವೇ ? ಖಂಡಿತ ಬೇಕು. ಇದೇ ಅಂಕಣದಲ್ಲಿ ಈ ಹಿಂದೆ ವೇದವ್ಯಾಸನ ಬಗ್ಗೆ ಸಂಕ್ಷಿಪ್ತವಾಗಿ ತಿಳಿದಿದ್ದೇವೆ. ಈ ಬಾರಿ ವೇದವ್ಯಾಸ ಜನಕನ ಬಗ್ಗೆ ಒಂದಿಷ್ಟು ತಿಳಿಯುವ ಕುತೂಹಲವಾಗಿದೆ. ಈ ನಿಟ್ಟಿನಲ್ಲಿ ನನಗೊಂದು ಸನ್ನಿವೇಶ, ನೆನಪಿಗೆ ಬರುತ್ತಿದೆ. 

ನನ್ನ ಬಾಲ್ಯದಲ್ಲಿ…, ನಾವು ಮಕ್ಕಳೆಲ್ಲ ಚಿಕ್ಕವರಿದ್ದಾಗ ನನ್ನ ತಂದೆಯವರು ಆಗಾಗ ಒಂದು ಮಾತು (ಅದೂ….. ಊಟ ಮಾಡುವಾಗ) ಹೇಳುತ್ತಿದ್ದರು. ಅದೇನೆಂದರೆ ನಾವು ಊಟ ಮಾಡುವಾಗ ‘ಅನ್ನಪೂರ್ಣೆ’ಯನ್ನು ಸ್ಮರಿಸಬೇಕಾದ್ದು ಅವಶ್ಯ. ಅದರ ಜೊತೆಗೆ, ಗದ್ದೆಯನ್ನು ಉತ್ತು ಬೇಸಾಯ ಮಾಡಿದ ಎತ್ತುಗಳು ನೆನೆಯಬೇಕಂತೆ. ಹೌದು. ನಾವೆಲ್ಲ ಆಹಾರ ಸೇವಿಸುವಾಗ ಬೇಸಾಯ ಮಾಡಿದ ರೈತನನ್ನೂ ಗದ್ದೆ ಉಳುಮೆ ಮಾಡಿದ ಎತ್ತುಗಳನ್ನೂ ನೆನೆಯಲೇಬೇಕು. ‘ಅದು ಹೇಗೆ ಬಂತು? ಅದರ ಶ್ರಮ ಎಷ್ಟು?  ಎಂಬುದಾಗಿ ಪ್ರತಿಯೊಬ್ಬನೂ ತಿಳಿದಿರಲೇಬೇಕಾದ್ದು ಅಗತ್ಯ. ಪಿತೃವಾಕ್ಯ ಪರಿಪಾಲನೆ ಮಾಡಿದವ ರಾಮನಾದರೆ ಪರಾಶರರು, ತನ್ನ ತಂದೆಯನು ಕೊಂದ ರಾಕ್ಷಸ ಸಂತತಿಯನ್ನೇ ನಾಶಮಾಡಲು ಹೊರಟ ಪಿತೃಪ್ರೇಮಿ.  ಅದು ಹೇಗೆ ನೋಡೋಣ.

ಗೋತ್ರ ಪ್ರವರ್ತಕನಾದ ವಸಿಷ್ಠನನ್ನು ತಿಳಿಯದವರಿಲ್ಲ, ಮಹಾಮುನಿ  ವಸಿಷ್ಠನ ಮಗ ‘ಶಕ್ತಿ’ ಮಹರ್ಷಿ. ಶಕ್ತಿಯ ಮಗನೇ ಪರಾಶರ, ಅಂದರೆ, ಈತನ ಅಜ್ಜ ವಸಿಷ್ಠ ಎಂದಾಯ್ತು. ಪರಾಶರನ ತಾಯಿ ಅದೃಶ್ಯಮತಿ. ಈಕೆಯ ಹೊಟ್ಟೆಯಲ್ಲಿದ್ದಾಗಲೇ ಪರಾಶರರು ವೇದಾಧ್ಯಯನ ಮಾಡುವುದನ್ನು ವಸಿಷ್ಠರು ಕೇಳಿದರಂತೆ.

ಪರಾಶರನ ತಂದೆಯಾದ ಶಕ್ತಿ ಮಹರ್ಷಿಯನ್ನು ರಾಕ್ಷಸನೊಬ್ಬನು ಕೊಲ್ಲಲು  ರಾಕ್ಷಸ ಸಂತತಿಯನ್ನೇ  ನಾಶಮಾಡುವುದಾಗಿ ಪರಾಶರನು ಒಂದು ಯಜ್ಞವನ್ನು ಕೈಗೊಂಡನು. ಆ ಯಜ್ಞದಿಂದ ರಾಕ್ಷಸರು ಮಾತ್ರವಲ್ಲ ಇಡೀ ಲೋಕವೇ ದಹಿಸುವ ಸನ್ನಾಹದಲ್ಲಿತ್ತು. ಇದನ್ನು ಮನಗಂಡ ವಸಿಷ್ಠರು ಹಾಗೂ ಅವರ ಸೋದರನಾದ ಪುಲಸ್ತ್ಯರು ಇದನ್ನು ತಡೆಯಲೇಬೇಕೆಂದು ನಿರ್ಧರಿಸಿದರು. ವಸಿಷ್ಠ ಮತ್ತು ಪುಲಸ್ತ್ಯರಿಗೆ ಗೌರವ ಕೊಟ್ಟು ಪರಾಶರನು ರಾಕ್ಷಸ ಕುಲವನ್ನೇ ನಾಶಮಾಡಲು ಕೈಗೊಂಡ ಯಜ್ಞವನ್ನು ಕೈಬಿಟ್ಟರು. ಇದರಿಂದಾಗಿ ‘ಸಮಸ್ತಲೋಕ ಸುಖಿನೋಭವಂತು’ ಲೋಕಕ್ಕೆ ಬರಬಹುದಾದ ಅನಾಹುತ  ತಪ್ಪಿ ಕ್ಷೇಮವಾಯ್ತು. ಪುಲಸ್ಯರಿಂದ ಪರಾಶರರಿಗೆ ದಿವ್ಯಜ್ಞಾನ ಲಭಿಸಿತು. ಜನಕ ಮಹಾರಾಜ ಮತ್ತು ಪರಾಶರರ ಮುನಿಗಳ ನಡುವೆ ನಡೆದ ಸಂಭಾಷಣೆಯೇ ‘ಪರಾಶರ ಗೀತೆ’ ಎಂದು ಹೆಸರಿಸಲ್ಪಟ್ಟಿತು.

ಪರಾಶರರು ಮೈತ್ರೇಯ ಮುನಿ (ಅವರ ಶಿಷ್ಯ) ಪಾಠ ಮಾಡಿದ ಜ್ಯೋತಿಶ್ಯಾಸ್ತವು ‘ಪರಾಶರ ಹೋರಾಶಾಸ್ತ್ರ’  ಎನಿಸಲ್ಪಟ್ಟಿತು. ಅಲ್ಲದೆ ವಿಷ್ಣು ಪುರಾಣವನ್ನು ಸಂಪೂರ್ಣವಾಗಿ ತನ್ನ ಶಿಷ್ಯರಿಗೆ ಪರಾಶರರು ಉಪದೇಶಿಸಿದರು.

PC: Internet

ಪರಾಶರರು ಯಮುನಾ ನದಿಯನ್ನು ದಾಟುತ್ತಿದ್ದಾಗ ಸತ್ಯವತಿಯನ್ನು ನೋಡಿದವರು “ಈಕೆಯ ಉದರದಲ್ಲಿ ಲೋಕವನ್ನು ಬೆಳಗಬಲ್ಲ ಯೋಗಿವರ್ಯನು ಜನಿಸುವನೆಂದು ದಿವ್ಯಜ್ಞಾನ  ಹೊಂದಿದವರಾಗಿ ಒಂದು ದ್ವೀಪದಲ್ಲಿ ಕತ್ತಲನ್ನುಂಟುಮಾಡಿ ಆಕೆಯನ್ನು ಕೂಡಿದರು. ಕೂಡಲೇ ಆಕೆ ಗರ್ಭಿಣಿಯಾಗಿ ವೇದವ್ಯಾಸರನ್ನು ಹೆತ್ತಳು.  

ಹುಟ್ಟಿದ ಕೂಡಲೇ ಆ ಮಗುವು ಅಳುವುದನ್ನು ಬಿಟ್ಟು ತಾಯಿಗೆ ನಮಸ್ಕರಿಸಿತು. ತಂದೆ ಆ ಸತ್ಯವತಿ (ಮತ್ಸಗಂಧಿ)ಯನ್ನು ಯೋಜನಗಂಧಿಯನ್ನಾಗಿ ಮಾಡಿದರು. ಪರಾಶರ-ಎಂದರೆ ತನ್ನ ಮಗನಾದ ‘ಶಕ್ತಿ’ಯು ಸತ್ತಾಗ ಜೀವಿತಾಸೆಯನ್ನು ತೊರೆದ ವಸಿಷ್ಠನಿಗೆ ಗೃಹಸ್ಥಾಶ್ರಮವನ್ನು ನೆಲೆಗೊಳಿಸಿದವನೆಂದು ಅರ್ಥ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

6 Responses

  1. ಧನ್ಯವಾದಗಳು ಹೇಮಮಾಲಾ ಹಾಗೂ ಓದುಗರಿಗೆ.

  2. ನಾಗರತ್ನ ಬಿ.ಆರ್. says:

    ಪೌರಾಣಿಕ ಕಥೆಗಳನ್ನು ಓದಿದ್ದರೂ ಮತ್ತೆ ಮತ್ತೆ ನೆನಪು ಮೂಡಿಸುವ ಈ ಅಂಕಣ ಬಹಳ ಮುದಕೊಡುತ್ತದೆ.ಧನ್ಯವಾದಗಳು ಮೇಡಂ.

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. ಶಂಕರಿ ಶರ್ಮ says:

    ಪರಾಶರ ಹಿನ್ನೆಲೆ, ಅವರ ಅದ್ಭುತ ಶಕ್ತಿ ಬಗೆಗೆ ಕೂಲಂಕುಷವಾಗಿ ತಿಳಿಸುವ ಸೊಗಸಾದ ಪೌರಾಣಿಕ ಲೇಖನ…ಧನ್ಯವಾದಗಳು ವಿಜಯಕ್ಕಾ

  5. B c n murthy says:

    ಪುರಾಣದ ಕಥೆಗಳ ಪಾತ್ರ, ವಿಚಾರಗಳು ಉತ್ತಮವಾಗಿವೆ.ಈ ಬಾರಿಯ ಪರಾಶರರ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು

  6. Padmini Hegde says:

    ಪರಾಶರರ ಬಗ್ಗೆ ತಿಳಿಸಿದವಿಚಾರಗಳು ಉತ್ತಮವಾಗಿವೆ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: