ಜ್ಯೋತಿರ್ಲಿಂಗ 9: ಕೇದಾರೇಶ್ವರ

Share Button

ಹಿಮಗಿರಿಗಳ ಮಡಿಲಲ್ಲಿ ನೆಲೆಯಾಗಿರುವ ಕೇದಾರೇಶ್ವರ ಜ್ಯೋತಿರ್ಲಿಂಗ. ಮುಂಜಾನೆಯ ಸಮಯ. ರವಿಯ ಹೊಂಬೆಳಕಿನಲ್ಲಿ ಫಳಫಳನೆ ಹೊಳೆಯುತ್ತಿರುವ ಪರ್ವತಗಳು ಚಿನ್ನದ ಕಳಶಗಳಂತೆ ಕಂಗೊಳಿಸುತ್ತಿವೆ. ಬೆಳಗಿನ ನಿರ್ವಾಣ ಪೂಜೆಯ ಸಮಯ – ಯಾವ ಆಭೂಷಣಗಳನ್ನೂ ಧರಿಸದ ಶಿವನು ಪಿಂಡದ ಸ್ವರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ರುದ್ರಾಭಿಷೇಕ ಮಾಡುತ್ತಾ, ಮಂತ್ರಗಳನ್ನು ಪಠಿಸುತ್ತಿರುವ ಪುರೋಹಿತರು, ಗಂಟೆ ಜಾಗಟೆಗಳ ಸದ್ದು, ಧೂಪದ ಸುಗಂಧವನ್ನು ಎಲ್ಲೆಡೆ ಹೊತ್ತೊಯ್ಯುತ್ತಿರುವ ತಂಗಾಳಿ, ಕರ್ಪೂರದಾರತಿಯನ್ನು ಬೆಳಗುತ್ತಿರುವ ಸಾಧು ಸಂತರು, ಎಲ್ಲವನ್ನೂ ನೋಡುತ್ತಾ ಭಕ್ತಿ ಭಾವದಿಂದ ತಲೆ ಬಾಗಿ ನಿಂತಿರುವ ಭಕ್ತರು. ಖರ್ಚ್‌ಕುಂಡ್ ಮತ್ತು ಭರತ್‌ಕುಂಡ್ ಪರ್ವತಗಳ ನಡುವೆ ಅತ್ಯಂತ ಎತ್ತರವಾದ ಪ್ರದೇಶದಲ್ಲಿ ನೆಲೆಯಾಗಿರುವ ಭವ್ಯವಾದ ಕೇದಾರ ಗಿರಿ ಶಿಖರವು ಸೃಷ್ಟಿಯ ರಹಸ್ಯದ ಪುಟಗಳನ್ನು ನಮ್ಮ ಮುಂದೆ ತೆರೆದಿಡುವಂತೆ ತೋರುತ್ತಿತ್ತು. ಶಿವನ ರುದ್ರ ರೂಪದ ಪ್ರತೀಕವಾಗಿ ನಿಂತಿರುವ ‘ರುದ್ರ ಪ್ರಯಾಗ’. ಆದಿ ಅಂತ್ಯವಿಲ್ಲದ – ಅನಂತವಾದ ಆದಿದೈವ ಶಿವನು ಜ್ಯೋತಿಸ್ವರೂಪನಾಗಿ ನೆಲಸಿರುವ ಪವಿತ್ರ ತಾಣವಿದು.

ಹಿಮಗಿರಿಯ ಶಿಖರಗಳ ಮಧ್ಯೆ, ಗರ್ವಾಲ್ ಪ್ರಾಂತ್ಯದ ಬಳಿ, ರುದ್ರಪ್ರಯಾಗ ಎಂಬ ಪ್ರದೇಶದಲ್ಲಿರುವ ಚಮೋಲಿ ಜಿಲ್ಲೆಯಲ್ಲಿ, ಕೇದಾರ ಗಿರಿಯಲ್ಲಿ ಜೋತಿಸ್ವರೂಪನಾದ ಕೇದಾರೇಶ್ವರನು ನೆಲಸಿರುವನು. ‘ಕೇ’ ಎಂದರೆ ಸ್ವರ್ಗ, ‘ದಾರ’ ಎಂದರೆ ದ್ವಾರ, ಕೇದಾರ ಎಂದರೆ ಸ್ವರ್ಗದ ದ್ವಾರ ಎಂಬ ಅರ್ಥ. ಕೇದಾರದ ಸುತ್ತಲೂ ಹಿಮವನ್ನು ಹೊದ್ದು ಮಲಗಿರುವ ಪರ್ವತ ಶ್ರೇಣಿಗಳು – ಮುಂಜಾನೆ ಚಿನ್ನದ ಕಳಶಗಳಂತೆ ಕಂಗೊಳಿಸಿದರೆ, ಮಧ್ಯಾಹ್ನ ಬೆಳ್ಳಿಯ ಗೋಪುರಗಳಂತೆ ಫಳಫಳನೆ ಹೊಳೆಯುವುವು. ಈ ಪರ್ವತ ಶ್ರೇಣಿಗಳ ಮಡಿಲಲ್ಲಿ ಜನಿಸಿದ ಐದು ನದಿಗಳು ಈ ಕ್ಷೇತ್ರಕ್ಕೆ ವಿಶೇಷ ಮೆರಗು ನೀಡಿವೆ. ಪಂಚ ಕನ್ಯೆಯರಂತೆ ಕಂಗೊಳಿಸುವ- ಮಂದಾಕಿನಿ, ಮಧುಗಂಗಾ, ಕ್ಷೀರಗಂಗಾ, ಸರಸ್ವತಿ ಹಾಗೂ ಸ್ವರ್ಣಗೌರಿ-ಗಳ ಸಂಗಮದ ಪವಿತ್ರ ಕ್ಷೇತ್ರ ಕೇದಾರ.

ಕೇದಾರ ಕ್ಷೇತ್ರ

ಸಮುದ್ರ ಮಟ್ಟದಿಂದ, 11,700 ಅಡಿ ಎತ್ತರದಲ್ಲಿರುವ ಈ ದೇಗುಲ – ಯಮುನೋತ್ರಿ, ಗಂಗೋತ್ರಿ, ಕೇದಾರ ಮತ್ತು ಬದರಿ ಎಂಬ ಚಾರ್‌ಧಾಮ್‌ನ ಪವಿತ್ರಕ್ಷೇತ್ರಗಳಲ್ಲೊಂದಾಗಿದೆ. ಚಳಿಗಾಲದಲ್ಲಿ, ಹೆಚ್ಚು ಹಿಮಪಾತವಾಗಿ, ಕೇದಾರದ ಹಾದಿಯು ಮುಚ್ಚಿಹೋಗುವುದರಿಂದ , ಈ ದೇವಾಲಯದ ಬಾಗಿಲು, ಅಕ್ಷಯ ತೃತೀಯಾದಿಂದ ಕಾರ್ತೀಕ ಮಾಸದವರೆಗೆ (ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ) ಮಾತ್ರ ತೆರೆದಿರುವುದು. ಮುಂದಿನ ಆರು ತಿಂಗಳು ಊಖಿ ಮಠದಲ್ಲಿ ಕೇದಾರೇಶ್ವರನ ವಾಸ.

ಈ ಕ್ಷೇತ್ರದ ಪೌರಾಣಿಕ ಹಿನ್ನೆಲೆಯನ್ನು ಕೇಳೋಣ ಬನ್ನಿ – ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿರುವಂತೆ, ಕೇದಾರ ಕ್ಷೇತ್ರವು ಅತ್ಯಂತ ಪ್ರಾಚೀನವಾದ ಕ್ಷೇತ್ರ. ಆದಿಗುರು ಶಿವನಷ್ಟೇ ಪ್ರಾಚೀನವಾದುದು, ಸೃಷ್ಟಿಯ ಆರಂಭ ಇಲ್ಲಿಂದಲೇ ಆಯಿತು ಎಂಬ ಪ್ರತೀತಿಯೂ ಇದೆ. ಪುರಾಣಗಳಲ್ಲಿ ಪ್ರಸ್ತಾಪಿಸಿರುವಂತೆ ಭಗವಾನ್ ವಿಷ್ಣುವಿನ ಅವತಾರವಾದ ನರ ಮತ್ತು ನಾರಾಯಣರು ಪವಿತ್ರವಾದ ಈ ಕ್ಷೇತ್ರದಲ್ಲಿ ಕಠಿಣವಾದ ತಪಸ್ಸನ್ನು ಆಚರಿಸಿದರು. ಅವರ ಭಕ್ತಿಗೆ ಮೆಚ್ಚಿದ ಶಿವನು, ಜ್ಯೋತಿ ಸ್ವರೂಪನಾಗಿ ಪ್ರಕಟವಾಗಿ ಇಲ್ಲಿಯೇ ನೆಲಸಿರುವನು. ಸತ್ಯಯುಗದಲ್ಲಿ ಈ ಪ್ರದೇಶವನ್ನು ರಾಜಾ ಕೇದಾರನು ಆಳುತ್ತಿದ್ದುದರಿಂದ ಕೇದಾರವೆಂಬ ಹೆಸರು ಬಂತೆಂಬ ಪ್ರತೀತಿಯಿದೆ.

ದ್ವಾಪರ ಯುಗದಲ್ಲಿ, ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದಲ್ಲಿ, ಕೌರವರನ್ನು ಸೋಲಿಸಿದ ಪಾಂಡವರು, ತಮ್ಮ ಗುರುಗಳನ್ನು, ಸಹೋದರರನ್ನು, ಬಂಧು ಬಾಂಧವರನ್ನು ಯುದ್ಧದಲ್ಲಿ ಹತ್ಯೆ ಮಾಡಿದುದರಿಂದ ಉಂಟಾದ ಪಾಪ ಪರಿಹಾರಕ್ಕಾಗಿ, ವ್ಯಾಸ ಮಹರ್ಷಿಗಳ ಸಲಹೆಯಂತೆ, ಶಿವನ ಮೊರೆ ಹೋಗುವರು. ಯುದ್ಧದಲ್ಲಿ, ಪಾಂಡವರ ತಂತ್ರಗಾರಿಕೆಯ ವಿವರಗಳನ್ನು ನೆನಪು ಮಾಡಿಕೊಳ್ಳೋಣವೇ? ಭೀಷ್ಮನನ್ನು ಗೆಲ್ಲಲು, ಶಿಖಂಡಿಯನ್ನು ಮುಂದೆ ನಿಲ್ಲಿಸಿದರು, ಗುರುಗಳಾದ ದ್ರೋಣಾಚಾರ್ಯರನ್ನು ಸೋಲಿಸಲು – ‘ಅಶ್ವತ್ಥ್ಥಾಮೋ ಹತಃ ಕುಂಜರಃ’ ಎಂದು ಧರ್ಮರಾಯನೇ ಘೋಷಿಸಿದಾಗ, ದ್ರೋಣರು ತನ್ನ ಪುತ್ರ ಅಶ್ವತ್ಥಾಮನೇ ಹತನಾದನು ಎಂದು ಭಾವಿಸಿ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಮಾಡಿದರು. ದಾನಶೂರನಾದ ಕರ್ಣನನ್ನು ವಧಿಸಲು, ಮಾತೆ ಕುಂತಿಯನ್ನು ಅವನ ಬಳಿ ಕಳುಹಿಸಿ-‘ಒಮ್ಮೆ ಹೂಡಿದ ಅಸ್ತ್ರವನ್ನು ಮತ್ತೊಮ್ಮೆ ಹೂಡುವುದಿಲ್ಲ’, ಎಂಬ ವಚನವನ್ನು ಪಡೆದರು. ಜೊತೆಗೆ ಸೂರ್ಯದೇವನು ತನ್ನ ಮಗನ ರಕ್ಷಣೆಗೆಂದೇ ನೀಡಿದ್ದ ಕವಚವನ್ನು ಇಂದ್ರನು ಬೇಡಿ ಪಡೆದನು. ದುರ್ಯೋಧನನೊಂದಿಗೆ ನಡೆದ ಗಧಾಯುದ್ಧದಲ್ಲಿ, ಭೀಮನು ಅವನ ತೊಡೆಯ ಮೇಲೆ ಪ್ರಹಾರ ಮಾಡಿ ಹತ್ಯೆ ಮಾಡಿದ್ದು ನಿಯಮಬಾಹಿರವಾಗಿತ್ತು.

ಹೀಗೆ ಹತ್ತು ಹಲವು ಕುತಂತ್ರಗಳಿಂದ ಯುದ್ಧದಲ್ಲಿ ಜಯಿಸಿದ ಪಾಂಡವರ ಅಪರಾಧಗಳನ್ನು ಕ್ಷಮಿಸಲು ಮನಸ್ಸಿಲ್ಲದ ಶಿವನು, ಕಾಶಿಯಿಂದ ಪಲಾಯನ ಮಾಡಿ, ಗುಪ್ತ ಕಾಶಿಯಲ್ಲಿ ವಿರಮಿಸುವನು. ಆದರೆ ಪಾಂಡವರು ಶಿವನನ್ನು ಅರಸುತ್ತಾ ಗುಪ್ತಕಾಶಿಗೆ ಬಂದಾಗ, ಶಿವನು ಅವರಿಗೆ ದರ್ಶನ ನೀಡಲು ಇಚ್ಛಿಸದೇ ಕೇದಾರಕ್ಕೆ ತೆರಳುವನು. ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ಹಸುಗಳ ಜೊತೆ, ನಂದಿಯ ರೂಪದಲ್ಲಿ ಕೂಡಿಕೊಳ್ಳುವನು. ಅಲ್ಲಿಗೂ ಬಂದ ಪಾಂಡವರಿಗೆ, ಆ ಹಸುಗಳ ಮಧ್ಯೆ, ಇದ್ದ ಶಿವನನ್ನು ಗುರುತಿಸಲಾಗದೆ ಚಡಪಡಿಸುವರು. ಆಗ ಭೀಮನು, ತನ್ನ ಗಾತ್ರವನ್ನು ಹಿಗ್ಗಿಸಿ, ಹಸುಗಳು ಹಾದುಹೋಗುತ್ತಿದ್ದ ಸ್ಥಳದಲ್ಲಿ, ಎರಡು ಗಿರಿಗಳ ನೆತ್ತಿಯ ಮೇಲೆ ತನ್ನ ಕಾಲುಗಳನ್ನಿಟ್ಟು ನಿಲ್ಲುವನು. ಎಲ್ಲಾ ಹಸುಗಳೂ, ಅವನ ಕಾಲಡಿಯಿಂದ ಹಾದು ಹೋದರೆ, ವೃಷಭ ರೂಪಿಯಾದ ಶಿವನು ಮಾತ್ರ ಕದಲದೇ ಅಲ್ಲಿಯೇ ನಿಲ್ಲುವನು. ಭೀಮನ ಕಾಲಿನ ಕೆಳಗೆ , ಆದಿದೈವನಾದ ಶಿವನು ನುಸುಳಿ ಹೋಗುವುದಾದರೂ ಹೇಗೆ? ತಕ್ಷಣವೇ ಭೀಮನು ಆ ಎತ್ತಿನ ಕೊಂಬುಗಳನ್ನ್ನು ಹಿಡಿದಾಗ, ಪರಶಿವನು ಭೂಮಿಯೊಳಗೆ ಅಂತರ್ಧಾನನಾಗಿ, ಹಿಮಾಲಯದ ಐದು ಕ್ಷೇತ್ರಗಳಲ್ಲಿ ಐದು ಅಂಗಗಳ ರೂಪದಲ್ಲಿ ಪ್ರತ್ಯಕ್ಷನಾಗುವನು. ಕೇದಾರದಲ್ಲಿ ತ್ರಿಭುಜಾಕಾರದ ಬೆನ್ನಿನ ಭಾಗ, ತುಂಗಾನಾಥದಲ್ಲಿ ತೋಳುಗಳು, ಮಧ್ಯಮಹೇಶ್ವರದಲ್ಲಿ ಉದರ ಭಾಗ, ರುದ್ರಾನಾಥದಲ್ಲಿ ತಲೆಯ ಭಾಗ ಹಾಗೂ ಕಲ್ಪೇಶ್ವರದಲ್ಲಿ ಜಟೆಗಳೂ ಪೂಜಿಸಲ್ಪಡುತ್ತಿವೆ. ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ಶಿವನ ಮುಖಾರವಿಂದ ಗೋಚರಿಸಿತೆಂಬ ನಂಬಿಕೆಯೂ ಇದೆ.. ಪಾಂಡವರು ಈ ಐದು ಪುಣ್ಯ ಕ್ಷೇತ್ರಗಳಿಗೆ ತೆರಳಿ, ಶಿವನ ಆಲಯಗಳನ್ನು ನಿರ್ಮಿಸಿ, ಆ ಮಹಾದೇವನನ್ನು ಆರಾಧಿಸಿ ತಮ್ಮ ಪಾಪಗಳಿಂದ ಮುಕ್ತರಾಗುವರು.

ಕೇದಾರೇಶ್ವರ

ಮತ್ತೊಂದು ಐತಿಹ್ಯ ಹೀಗಿದೆ. ಮಹಾವಿಷ್ಣುವು ಶಿವನನ್ನು ಒಂದು ಸಾವಿರದ ಒಂದು ಬ್ರಹ್ಮ ಕಮಲಗಳಿಂದ ಪೂಜಿಸುವ ಸಂಕಲ್ಪ ಮಾಡಿ ಪೂಜೆ ಆರಂಭಿಸುವನು. ಆದರೆ ಅವನ ಬಳಿ ಇದ್ದದ್ದು ಒಂದು ಸಾವಿರ ಬ್ರಹ್ಮ ಕಮಲಗಳು ಮಾತ್ರ. ಒಂದು ಕಮಲ ಕಡಿಮೆಯಾಗಿದ್ದರಿಂದ ‘ಕಮಲ ನಯನ’ ಎಂಬ ನಾಮಧೇಯ ಹೊತ್ತ ವಿಷ್ಣುವು, ತನ್ನ ಒಂದು ನೇತ್ರವನ್ನೇ ಕಿತು, ಪರಶಿವನಿಗೆ ಅರ್ಪಿಸಿ ಪೂಜೆಯನ್ನು ಸಂಪೂರ್ಣಗೊಳಿಸುವನು. ಆಗ ಪ್ರಸನ್ನಗೊಂಡ ಶಿವನು ವಿಷ್ಣುವಿಗೆ ಸುದರ್ಶನ ಚಕ್ರವನ್ನು ದಯಪಾಲಿಸಿದನೆಂಬ ನಂಬಿಕೆಯೂ ಇದೆ.

ಕೇದಾರೇಶ್ವರ ಜ್ಯೋತಿರ್ಲಿಂಗವು ಮಂದಾಕಿನೀ ನದೀ ತೀರದಲ್ಲಿ ನೆಲೆಯಾಗಿದೆ.. ಪರ್ವತಗಳ ಕಣಿವೆಗಳಲ್ಲಿ ಹರಿಯುವ ನದಿಗಳು, ಹಚ್ಚ ಹಸಿರು ಹುಲ್ಲುಗಾವಲುಗಳು, ಈ ಪ್ರದೇಶದ ಚೆಲುವನ್ನು ಇಮ್ಮಡಿಗೊಳಿಸಿವೆ. ಪಾಂಡವರು ನಿರ್ಮಿಸಿದ್ದ ಪಂಚ ಕೇದಾರ ದೇಗುಲಗಳನ್ನು ಎಂಟನೇ ಶತಮಾನದಲ್ಲಿ ಜೀರ್ಣೋದ್ಧಾರ ಮಾಡಿದ ಕೀರ್ತಿ ಶಂಕರರಿಗೆ ಸಲ್ಲುವುದು. ಕೇದಾರನಾಥ ಮಂದಿರವು ಸಮುದ್ರ ಮಟ್ಟದಿಂದ 11,700 ಅಡಿ ಎತ್ತರದಲ್ಲಿದ್ದರೆ, ತುಂಗಾನಾಥ ಮಂದಿರವು 12,070 ಅಡಿ ಎತ್ತರದಲ್ಲಿದೆ. ಮಧ್ಯಮಹೇಶ್ವರ ದೇಗುಲವು 11,677 ಅಡಿ ಎತ್ತರದಲ್ಲಿದ್ದು, ರುದ್ರನಾಥ ದೇವಾಲಯವು 11, 677 ಅಡಿ ಎತ್ತರದಲ್ಲಿದೆ ಹಾಗೂ ಕಲ್ಪನಾಥ ದೇವಾಲಯವು 7,200 ಅಡಿ ಎತ್ತರದಲ್ಲಿದೆ. ಈ ಪ್ರದೇಶಗಳಿಗೆ ಭೇಟಿ ನೀಡುವ ಚಾರಣಿಗರಿಗೆ, ಹಾದಿ ದುರ್ಗಮವೇ ಸರಿ. ಆದರೆ, ನಿಸರ್ಗ ಪ್ರೇಮಿಗಳಿಗೆ ಪಂಚ ಕೇದಾರದ ಪ್ರವಾಸ ರಸದೌತಣವೆಂದು ಹೇಳಬಹುದು.

ಕೇದಾರೇಶ್ವರ ದೇಗುಲವು ಸುಮಾರು ನಾನ್ನೂರು ವರ್ಷಗಳ ಕಾಲ ಹಿಮದಡಿಯಲ್ಲಿ ಸಿಲುಕಿಕೊಂಡಿತ್ತು ಎಂಬ ಉಲ್ಲೇಖವಿದೆ. ಪುರಾತತ್ವಶಾಸ್ತ್ರಜ್ಞರು ದೇಗುಲದ ಗೋಡೆಗಳ ಮೇಲೆ ಹಿಮದ ಹೆಜ್ಜೆ ಗುರುತುಗಳನ್ನು ದಾಖಲಿಸಿದ್ದಾರೆ. ಕೆಲವು ಇತಿಹಾಸ ತಜ್ಞರ ಪ್ರಕಾರ, ಈ ದೇಗುಲವು ಒಂದು ಸಾವಿರ ವರ್ಷ ಪ್ರಾಚೀನವಾದುದು ಹಾಗೂ ಮಾಳ್ವದ ರಾಜನಾಗಿದ್ದ ಭೋಜನು ಈ ದೇಗುಲವನ್ನು ನಿರ್ಮಿಸಿದನು ಎಂದು ದಾಖಲಿಸಿದ್ದಾರೆ. ಆರು ಅಡಿ ಎತ್ತರದ, ಆಯತಾಕಾರದ ಅಡಿಪಾಯದ ಮೇಲೆ ಕತ್ಯೂರೀ ಶೈಲಿಯಲ್ಲಿ ನಿರ್ಮಿತವಾಗಿರುವ ಈ ದೇಗುಲ 85 ಅಡಿ ಎತ್ತರವಾಗಿದ್ದು, 187 ಅಡಿ ಅಗಲವಾಗಿದೆ. ಗೋಡೆಯ ದಪ್ಪ 12 ಅಡಿಗಳು, ಬೃಹದಾಕಾರದ ಕಲ್ಲುಗಳಿಂದ ಈ ದೇವಾಲಯವನ್ನು ಕಟ್ಟದ್ದಾರೆ. ಅಂತಹ ಭಾರೀ ಗಾತ್ರದ ಕಲ್ಲುಗಳನ್ನು ಹೇಗೆ ಸಾಗಿಸಿರಬಹುದು ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ದೇಗುಲದ ಪ್ರಾಂಗಣದಲ್ಲಿ, ಪಂಚ ಪಾಂಡವರ ಮೂರ್ತಿಗಳು, ದ್ರೌಪದಿ ಹಾಗೂ ಕುಂತಿಯ ಶಿಲ್ಪಗಳೂ ಕಂಡು ಬರುತ್ತವೆ. ಹಾಗೆಯೇ ಕೃಷ್ಣನ ಶಿಲ್ಪ, ವೀರಭದ್ರನ ಮೂರ್ತಿಯೂ ಕೆತ್ತಲ್ಪಟ್ಟಿದೆ. ಗರ್ಭಗೃದಲ್ಲಿ ನಾಲ್ಕು ಸ್ತಂಭಗಳಿದ್ದು, ಸಭಾ ಮಂಟಪವು ವಿಶಾಲವಾಗಿದೆ. ದೇಗುಲದ ಪ್ರಾಕಾರದಲ್ಲಿ ಎಂಟು ಮೂರ್ತಿಗಳು ಕಲಾತ್ಮಕವಾಗಿ ರಚಿಸಲ್ಪಟ್ಟಿವೆ.

ಅನತಿ ದೂರದಲ್ಲಿ, ಶಿವನ ಉಗ್ರ ಅವತಾರವಾದ ಭೈರವನ ಮೂರ್ತಿಯೂ ಇದೆ. ಶಿವನು ಸಮಾಧಿಸ್ಥನಾದಾಗ, ಹಗಲಿರುಳೆನ್ನದೆ ತನ್ನ ಆರಾಧ್ಯ ದೈವವಾದ ಪರಶಿವನನ್ನು ಸಂರಕ್ಷಿಸಿದವನು ಇವನು. ದೇಗುಲದ ಮುಂಭಾಗದಲ್ಲಿರುವ ನಂದಿಯ ವಿಗ್ರಹವು ತನ್ನ ಸ್ವಾಮಿಯ ಸೇವೆ ಮಾಡಲು ಸಿದ್ಧವಾಗಿ ನಿಂತಿದೆ. ಇಲ್ಲಿನ ಮತ್ತೊಂದು ವಿಶೇಷವಾದ ಸ್ಥಳ – ಶಂಕರರ ಸಮಾಧಿ. ಕೇರಳದಲ್ಲಿ ಜನಿಸಿದ ಶಂಕರರು ಧರ್ಮ ಪ್ರಚಾರಕ್ಕಾಗಿ ಇಡೀ ಭಾರತವರ್ಷವನ್ನೇ ಸುತ್ತಿ ಕೊನೆಗೆ ಅವರು ಸಮಾಧಿಸ್ಥರಾಗಲು ಆಯ್ದುಕೊಂಡ ಸ್ಥಳ ಕೇದಾರ. ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಶಿವನಲ್ಲಿ ಐಕ್ಯರಾದ ಪುಣ್ಯ ಸ್ಥಳ. ಇತ್ತೀಚಿಗೆ, ಪ್ರಧಾನಿ ಮೋದಿಯವರು ಶಂಕರರ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಿದ್ದಾರೆ.

ಅಕ್ಷಯ ತೃತೀಯಾದಂದು, ಕೇದಾರನಾಥನನ್ನು ಊಖಿ ಮಠದ ಓಂಕಾರೇಶ್ವರ ದೇಗುಲದಿಂದ ಡೋಲಿಯಲ್ಲಿ ಹೊತ್ತು, ಶೋಭಾ ಯಾತ್ರೆಯಲ್ಲಿ ಭಕ್ತರು ಸಾಗುವರು. ಇಂಪಾದ ಮಿಲಿಟರಿ ಬ್ಯಾಂಡಿನ ಹಿಮ್ಮೇಳದೊಂದಿಗೆ, ‘ಹರಹರ ಮಹಾದೇವ್’ಎಂಬ ಯಾತ್ರಿಗಳ ಜಯಘೋಷವು ಮುಗಿಲು ಮುಟ್ಟುವುದು. ಗೌರಿಕುಂಡದ ಬಿಸಿನೀರು ಬುಗ್ಗೆಗಳಲ್ಲಿ ಪುಣ್ಯಸ್ನಾನ ಮಾಡುವ ಭಕ್ತರು ತಮ್ಮ ಹದಿನಾಲ್ಕು ಗಂಟೆಗಳ ಯಾತ್ರೆಯನ್ನು ಮುಂದುವರೆಸುವರು. ಕೆಲವರು ಕಾಲ್ನಡಿಗೆಯಲ್ಲಿ ಯಾತ್ರೆ ಮುಂದುವರೆಸಿದರೆ, ಮತ್ತೆ ಕೆಲವರು ಕುದುರೆಗಳ ಮೇಲೆ ಹಾಗೂ ಡೋಲಿಗಳಲ್ಲಿ ಪಯಣಿಸುವರು. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರಿಗೆ ‘ಪಾಟಾಗ್ರಾಂ’ ಎಂಬ ಸ್ಥಳದಿಂದ ಹೆಲಿಕಾಪ್ಟರ್ ಸೌಲಭ್ಯವೂ ಇದೆ. ಎಲ್ಲರಿಗೂ ಕೇದಾರನಾಥನ ದರ್ಶನ ಮಾಡುವ ಕಾತುರ. ಕರ್ನಾಟಕದ ವೀರಶೈವ ಜಂಗಮರಿಂದಲೇ ಪಂಚ ಕೇದಾರದ ಎಲ್ಲಾ ದೇಗುಲಗಳಲ್ಲೂ ಪೂಜೆ ಸಲ್ಲುವುದು. ದೇಗುಲದಲ್ಲಿ ಅಖಂಡ ಜ್ಯೋತಿ ಬೆಳಗುತ್ತಿರುವುದು. ಈ ನಂದಾದೀಪವನ್ನು ಆರು ತಿಂಗಳ ಕಾಲ ಅಲ್ಲಿನ ಪುರೋಹಿತರು ಬೆಳಗಿದರೆ ಮತ್ತೆ ಮುಂದಿನ ಆರು ತಿಂಗಳು ದೇವ ಜ್ಯೋತಿಯು ಬೆಳಗುತ್ತಲೇ ಇರುವುದೆಂಬ ನಂಬಿಕೆ.

2013 ರಲ್ಲಿ ಸಂಭವಿಸಿದ ಭಯಂಕರ ಮೇಘಸ್ಪೋಟದಿಂದ ಜರುಗಿದ ಅಪಘಾತಗಳನ್ನು ಹೇಳಲು ಆಸಾಧ್ಯ. ಪವಾಡವೆನ್ನುವಂತೆ ಪ್ರವಾಹದಲ್ಲಿ ಕೊಚ್ಚಿ ಬಂದ ಬಂಡೆಯೊಂದು ದೇಗುಲದ ಹಿಂಬದಿಯಲ್ಲಿ ನಿಂತು ದೇಗುಲವನ್ನು ಹಾಗೂ ದೇಗುಲದಲ್ಲಿ ಆಶ್ರಯ ಪಡೆದ ಯಾತ್ರಿಗಳನ್ನೂ ರಕ್ಷಿಸಿದೆ. ಭೂ ವಿಜ್ಞಾನಿಗಳ ಪ್ರಕಾರ – ಈ ಪ್ರದೇಶವು ಸುರಕ್ಷಿತವಲ್ಲ, ಮುಂದೆಯೂ ಗ್ಲೇಸಿಯರ್‌ನಿಂದ, ಮೇಘಸ್ಪೋಟದಿಂದ ಅವಾಂತರಗಳು ಜರುಗಬಹುದು. ಪೌರಾಣಿಕ ಆಧಾರಗಳ ಪ್ರಕಾರ ಯಾವಾಗ ನರ ಮತ್ತು ನಾರಾಯಣ ಶಿಖರಗಳು ಕೂಡಿಕೊಳ್ಳುತ್ತವೆಯೋ ಅಂದೇ ಈ ದೇವಭೂಮಿ ಸಂಪೂರ್ಣವಾಗಿ ಧ್ವಂಸವಾಗುವುದಂತೆ.

ಹವಾಮಾನ ವೈಪರೀತ್ಯದಿಂದಾಗಿ ನಮ್ಮ ಹೆಲಿಕಾಪ್ಟರ್ ರದ್ದಾಗಿದ್ದರಿಂದ, ನಮಗೆ ಕೇದಾರೇಶ್ವರನ ದರ್ಶನ ಮಾಡುವ ಭಾಗ್ಯ ಮತ್ತೆ ದೊರೆಯಿತು. ಸಂಜೆ, ನಾವು ದೇಗುಲದ ಬಳಿ ಹೋದಾಗ, ನಾವು ಕಂಡ ದೃಶ್ಯ ಅಲೌಕಿಕ, ಅವಿಸ್ಮರಣೀಯ. ಹಿಮ ಪರ್ವತದ ಶಿಖರಗಳು ಬೆಂಕಿಯ ಜ್ವಾಲೆಗಳ ಹಾಗೆ ಪ್ರಜ್ವಲಿಸುತ್ತಿದ್ದವು, ದೇಗುಲದ ಮುಂದೆ ಐದಾರು ಮಂದಿ ಭಸ್ಮಧಾರಿಗಳಾದ ಸನ್ಯಾಸಿಗಳು, ತ್ರಿಶೂಲವನ್ನು ಕೈಗಳಲ್ಲಿ ಹಿಡಿದು, ಢಮರುಗದ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರು. ಸಾಲು ಸಾಲಾಗಿ ನಿಂತಿದ್ದ ಭಕ್ತರು, ಹರ ಹರ ಮಹಾದೇವ್ ಎಂಬ ಘೋಷಣೆಯನ್ನು ಕೂಗುತ್ತಿದ್ದರು. ಗರ್ಭಗುಡಿಯಿಂದ ಮಂತ್ರ ಪಠಣ ಕೇಳಿ ಬರುತ್ತಿತ್ತು. ಮುಂಜಾನೆ ತ್ರಿಕೋನಾಕಾರದ ಶಿವನ ಬೆನ್ನಿನ ಭಾಗವನ್ನು ನೋಡಿದ್ದ ನಮಗೆ ಈಗ ಸರ್ವಾಲಂಕಾರ ಭೂಷಿತನಾದ ಶಿವನ ದರ್ಶನ ಭಾಗ್ಯ ದೊರೆಯಿತು. ವಿಧವಿಧವಾದ ಪುಷ್ಪಗಳಿಂದ, ಹಲವು ಬಗೆಯ ಆಭೂಷಣಗಳಿಂದ ಶಿವನು ಅಲಂಕೃತನಾಗಿದ್ದನು ಈ ‘ಶೃಂಗಾರ ಪೂಜೆಯನ್ನು’ ನೋಡಿ ಪುನೀತರಾದೆವು. ನನ್ನ ಹಿಂದೆ ಸರತಿಯ ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಆನಂದ ಬಾಷ್ಪವನ್ನು ಸುರಿಸುತ್ತಿದ್ದಳು. ಆ ಕ್ಷಣ, ನಮಗೆ ಅದು ಶಿವನ ಕೈಲಾಸ ಪರ್ವತದ ಹಾಗೇ ಭಾಸವಾಗುತ್ತಿತ್ತು. ಯಾರಿಗೂ ಅಲ್ಲಿಂದ ಕದಲುವ ಮನಸ್ಸೇ ಇರಲಿಲ್ಲ. ಅದು ನಮ್ಮ ಜೀವನದ ಅತ್ಯಂತ ಮಹತ್ವದ ಘಳಿಗೆಯಾಗಿತ್ತು. ಇಂದಿಗೂ, ಕೇದಾರದ ನೆನಪಾದಾಗ, ಆ ದೃಶ್ಯ ಮನದಲ್ಲಿ ಸಂತಸದ ಹೊನಲನ್ನೇ ಹರಿಸುವುದು.

ಈ ಲೇಖನ ಸರಣಿಯ ಹಿಂದಿನ ಲೇಖನ ( ಜ್ಯೋತಿರ್ಲಿಂಗ 8) ಇಲ್ಲಿದೆ: http://surahonne.com/?p=34671

ಡಾ.ಗಾಯತ್ರಿದೇವಿ ಸಜ್ಜನ್

8 Responses

  1. sudha says:

    ನಮಸ್ಕಾರ. ಕೇದಾರನಾಥದ ಚಿತ್ರಣ ಬಹಳ ಚೆನ್ನಾಗಿದೆ. ನಾನು ಅಲ್ಲಿಯೇ ಇದ್ದ ಹಾಗೆ ಅನ್ನಿಸಿತು.

  2. ನಯನ ಬಜಕೂಡ್ಲು says:

    Very nice

  3. ನಾಗರತ್ನ ಬಿ. ಅರ್. says:

    ಕೇದಾರನಾಥ ದೇವಾಲಯದ ಹಿನ್ನೆಲೆ… ಅಲ್ಲಿನ ಪ್ರಕೃತಿ ಸೌಂದರ್ಯ ಪೂಜಾ ಕೈಂಕರ್ಯಗಳು… ಸುತ್ತ ಮುತ್ತ ಲಿನ ಪ್ರದೇಶ ದ ಪರಿಚಯ… ಹಾಗೂ ಆ ದೇವನನ್ನು ನೋಡಿ ದಾಗಿ ಆದ ಆನಂದ.. ಎಲ್ಲವನ್ನೂ ಉತ್ತಮ ನಿರೂಪಣೆಯೊಂದಿಗೆ ಅನಾವರಣ ಗೊಳಿಸಿರುವ ನಿಮಗೆ ಧನ್ಯವಾದಗಳು ಮೇಡಂ.

  4. ವಂದನೆಗಳು ನಿಮ್ಮ ಪ್ರೋತ್ಸಾಹದ ನುಡಿಗಳಿಗೆ

  5. Hema says:

    ಸೊಗಸಾದ ಬರಹ.. ೨೦೧೬ ರಲ್ಲಿ ನಾವು ಕೇದಾರನಾಥನ ಸನ್ನಿಧಿಯಲ್ಲಿ ಪುಳಕಿತರಾಗಿದ್ದುದನ್ನು ನೆನಪಿಸಿತು.

  6. Padmini Hegade says:

    ಉತ್ತಮ ನಿರೂಪಣೆ!

  7. . ಶಂಕರಿ ಶರ್ಮ says:

    ಕೇದಾರನಾಥ ದೇಗುಲದ ವಿಸ್ತೃತ ಮಾಹಿತಿಗಳುಳ್ಳ ಸೊಗಸಾದ ಲೇಖನ.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: