ಪರಿಸರಕ್ಕಾಗಿ ಪ್ರಾರ್ಥನೆ

Spread the love
Share Button

ಮರಗಳ ‌ಮಾರಣ ಹೋಮ ಮಾಡಿ
ಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿ
ಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆ
ಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲು
ಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ

ಕೈಗಾರೀಕರಣ ಹೆಸರಲ್ಲಿ ಮಾರಣಾಂತಿಕ ರಾಸಾಯನಿಕಗಳ
ನದಿ ಪಾತ್ರಕ್ಕೆ ಯಥೇಚ್ಛವಾಗಿ ಹರಿಯ ಬಿಟ್ಟು
ಕೊಚ್ಚೆ ಕೊಳಕುಗಳನ್ನು ಪವಿತ್ರ ಜಲಕ್ಕೆ ಹಕ್ಕಂತೆ ಸೇರಿಸಿ
ಜಲ‌ಮಾಲಿನ್ಯವ ಉಂಟು ಮಾಡಿದ‌ ಎನಗೆ
ತ್ಯಾಜ್ಯಗಳ ಶುಚಿಗೊಳಿಸಿ ಕೊಳಚೆ ನೀರನು ಶುದ್ಧೀಕರಿಸಿ
ನಿರ್ಮಲ ಸ್ವಚ್ಛ ಜಲವ ಪಡೆಯಲು
ಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ

ಭೂತಾಯಿಯ ಎದೆ ಬಗೆದು ಖನಿಜ ಸಂಪತ್ತುಗಳ ಲೂಟಿ ಮಾಡಿ
ಸೂಕ್ಷ್ಮ ಜೈವಿಕ ಪರಿಸರವ ಅಸಮತೋಲನಗೊಳಿಸಿ
ಮರಗಿಡಗಳ ಕೆಂಪಾಗಿಸಿದ ಕಡು ಪಾಪಿಯಾದ ನನಗೆ
ವಿವೇಚನಾಯುತವಾಗಿ ಸಂಪನ್ಮೂಲಗಳ ಬಳಸಿಕೊಂಡು
ಮತ್ತೆ ಗಿಡಗಳ ಹರಿತ್ತನ್ನು ಕಾಪಾಡಲು
ಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ

ಅತಿ ಇಳುವರಿಯ ಆಸೆಗೆ ಬಿದ್ದು ಬಂಗಾರ ಬೆಳೆಯುವ
ಮಣ್ಣಿಗೆ ವಿಷಕಾರಿ ಔಷಧಗಳ ಸುರಿದು
ಅವೈಜ್ಞಾನಿಕವಾಗಿ ರಸಗೊಬ್ಬರಗಳ ನೀಡಿ
ಹೊಲ‌ಗದ್ದೆಗಳ ಸೌಳಾಗಿಸಿದ ಎನಗೆ
ಪರಂಪರಾಗತ ಕೃಷಿಯ ಅಳವಡಿಸಿಕೊಂಡು
ಇಳೆಯ ನಗಿಸಿ ಸಮೃದ್ಧ ಬೆಳೆ ತೆಗೆಯಲು
ಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ

ವೈಚಾರಿಕತೆಯ ಹೆಸರಲ್ಲಿ ನೀತಿ ನಿಯಮಗಳ ಗಾಳಿಗೆ ತೂರಿ
ಸ್ವಾತಂತ್ರ್ಯದ ಸೋಗಿನಲ್ಲಿ ಸ್ವೇಚ್ಛೆಚಾರವ ಮೆರೆದು
ಕಂದಾಚರವ ಖಂಡಿಸುವ ಭರದಲ್ಲಿ
ಸಂಸ್ಕೃತಿ ಆಚರಣೆಗಳ‌ ಮರೆತು
 ಸಾಂಸ್ಕೃತಿಕ ಹಿಂಜರಿಕೆಗೆ ಕಾರಣಕರ್ತನಾದ ನನಗೆ
ಹಳೆಯ ಬೇರು ಹೊಸ ಚಿಗುರು ಎಂಬಂತೆ
ಉತ್ತಮಪಡಿಸಿ ನಮ್ಮತನವ ಉಳಿಸಿಕೊಳ್ಳಲು
ಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ

ಪ್ರಾರ್ಥನೆ ಭಜನೆಯ ಹೆಸರಲ್ಲಿ ಧ್ವನಿವರ್ಧಕಗಳ ಬಳಸಿ
ದುರಸ್ತಿ ಕಾಣದ ವಾಹನಗಳ‌ ಎರ್ರಾಬಿರ್ರಿ ಓಡಿಸಿ
ನಿರ್ವಹಣೆ ಮಾಡದ ಯಂತ್ರಗಳ‌ ಚಲಾಯಿಸಿ
ಕಿವಿಗಡಚ್ಚಿಕ್ಕುವ ಗಲಾಟೆ ಗದ್ದಲಗಳಿಂದ ಶಬ್ದ ಮಾಲಿನ್ಯಕೆ
ಸಾಕ್ಷಿಯಾದ ಎನಗೆ
ಸಾರ್ವಜನಿಕ ಸಾರಿಗೆ ಬಳಸಿಕೊಂಡು
ವಾಹನಗಳ ದುರಸ್ತಿ ಮಾಡಿಸಿ ಯಂತ್ರಗಳ ಸರಿಯಾಗಿ ನಿರ್ವಹಿಸಿ
ಶಾಂತ ನಾದಮಯ ಪರಿಸರವ ಪಡೆಯಲು
ಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ

-ಕೆ.ಎಂ ಶರಣಬಸವೇಶ

8 Responses

 1. ನಯನ ಬಜಕೂಡ್ಲು says:

  ಎಲ್ಲರೂ ಎಚ್ಛೆತ್ತು ಇಂತಹ ಸಂಕಲ್ಪ ಮಾಡಿದಲ್ಲಿ ಬದಲಾವಣೆ ಬರಬಹುದೇನೋ. ಉತ್ತಮ ಆಶಯವನ್ನೊಳಗೊಂಡ ಕವನ.

 2. ಪರಿಸರಕ್ಕಾಗಿ ಪ್ರಾರ್ಥಿಸುವ ನಿಮಗೆ ದೇವರು ಸಹಸ್ರಸಹಸ್ರ ಅವಕಾಶ ನೀಡಲಿ

 3. ನಾಗರತ್ನ ಬಿ. ಅರ್. says:

  ಅಬ್ಭಾ ನಿಮ್ಮೆಲ್ಲಾ ಆಸೆಗಳನ್ನು ದೇವರು ಪೊರೈಸುವ ಶಕ್ತಿ ಕೊಡಲಿ ಸಾರ್ ಉತ್ತಮ ಸಂದೇಶವನ್ನು ಸಾರುವ ನಿಮ್ಮ ಕವಿತೆ.. ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ಸರ್.

 4. ಪರಿಸರ ಸಂರಕ್ಷಿಸಲು ಹೊರಟಿರುವ ತಮಗೆ ಆ ದೇವನು ಸಹಸ್ರ-ಸಹಸ್ರ ಅವಕಾಶ ನೀಡಲಿ

 5. sudha says:

  ನಮಸ್ಕಾರ. ಬಹಳ ಚೆನ್ನಾಗಿದೆ. ಎಲ್ಲರೂ ಈ ರೀತಿ ಯೋಚನೆ ಮಾಡಿ ಪರಿಸರ ಉಳಿಸುವ ಕೆಲಸ ಮಾಡಬೇಕು ಎಂದು ನನ್ನ ಅನಿಸಿಕೆ.

 6. ಪಾರ್ವತಿ ಮಳೆಮಠ says:

  ಈ ಕವನ ಖಂಡಿತ ಪ್ರತಿಯೊಬ್ಬರಿಗೂ ತುಂಬಾ ಸ್ಪೂರ್ತಿದಾಯಕ. ಪರಿಸರ ಉಳಿಸುವ ನಿಮ್ಮ ಕಾಳಜಿಗೆ ನೂರು ನಮನಗಳು It fulfills to raise awareness about Env protection. This is every ones responsibility if we use three ‘R’s in our daily activities….
  Reduce – use less, buy less, avoide waste Reuse – use things more than once, cloth shopping bag, repair, compost etc
  Recycle – separate waste materials so that the recyclable products can be transformed in to something new.

  ಇದನ್ನ ಪುನಃ ನೆನಪಿಸಿದ್ದಕ್ಕಾಗಿ ಧನ್ಯವಾದಗಳು
  A award winning poem

 7. . ಶಂಕರಿ ಶರ್ಮ says:

  ಸಾರ್ವಕಾಲಿಕ ಕವನ.

 8. Padmini Hegade says:

  ಉತ್ತಮ ಚಿಂತನೆ. ಈಗಲೂ ಕಾಲ ಮಿಂಚಿಲ್ಲ ಸರ್! ಮುಂದಿನ ಅವಕಾಶವನ್ನೂ ಬಳಸಿಕೊಳ್ಳಿ!

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: