ಹೊಸಬದುಕಿನ ಹೊಂಬೆಳಗು

Share Button
PC: Internet

ನಮ್ಮ ಪರಿಚಿತ ವಲಯದಲ್ಲಿ, ‘ಅವರಿಗೆ ಕಿಡ್ನಿ ಪ್ರಾಬ್ಲೆಂ ಇದೆಯಂತೆ..ಡಯಾಲಿಸಿಸ್ ಮಾಡಿಸಬೇಕಂತೆ…ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿಸಬೇಕಂತೆ..’ ಇತ್ಯಾದಿ ಕೇಳಿರುತ್ತೇವೆ. ಹಾಗೆಯೇ, ಕೆಲವೊಮ್ಮೆ ಯಾವುದೋ ಕಾರಣಕ್ಕೆ ಆಕಸ್ಮಿಕವಾಗಿ ಮಿದುಳು ನಿಷ್ಕ್ರಿಯ (Brain Dead ) ಆದವರ ಕಣ್ಣು, ಕಿಡ್ನಿ, ಹೃದಯ ಮೊದಲಾದ ಅಂಗಗಳನ್ನು ಅಗತ್ಯವಿದ್ದವರಿಗೆ ಕಸಿ ಮಾಡಿ ಇನ್ನೊಬ್ಬರ ಜೀವನಕ್ಕೆ ಬೆಳಕಾದರು ಅಂತಲೂ ಕೇಳಿದ್ದೇವೆ. ನೆಮ್ಮದಿಯ ಜೀವನಕ್ಕೆ ‘ಆರೋಗ್ಯ ಭಾಗ್ಯ’ ಅತ್ಯವಶ್ಯ. ವಿವಿಧ ದೀರ್ಘಕಾಲೀನ ಖಾಯಿಲೆಯಿಂದ ಬಳಲುವವರ ನೋವು ಅನುಭವಿಸಿದವರಿಗೇ ಗೊತ್ತು. ತಮ್ಮ ಮಗುವಿನ ಜನನದ ನಂತರ ಆರಂಭವಾದ ಕಿಡ್ನಿ ಸಮಸ್ಯೆಯೊಂದಿಗೆ ಹೋರಾಡಿ ಗೆದ್ದ ಸ್ನೇಹಿತೆಯೊಬ್ಬರ ಅನುಭವ ಕಥನ ಇಲ್ಲಿದೆ. ಅವರು ತಮ್ಮ ಕಿಡ್ನಿ ಖಾಯಿಲೆಯನ್ನು ಗೆದ್ದು ಇದೀಗ ಸಂಪೂರ್ಣವಾಗಿ ಗುಣಮುಖರಾಗುತ್ತಿರುವ ಹಂತದಲ್ಲಿದ್ದಾರೆ. ಅವರ ಯಶೋಗಾಥೆಯ ಬಗ್ಗೆ ತಿಳಿಸಿದರೆ, ಇದೇ ಖಾಯಿಲೆ ಇರುವ ಯಾರಿಗಾದರೂ ಮಾಹಿತಿ ಕೊಟ್ಟಂತಾಗುತ್ತದೆ ಎಂಬ ಆಶಯದಿಂದ ಅವರ ಬಳಿ ಕೇಳಿ ತಿಳಿದ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇನ್ನು ಮುಂದಿನ ಸಾಲುಗಳು ಅವರ ಮಾತಿನಂತೆ ಇವೆ.

”2005 , ಸೆಪ್ಟೆಂಬರ್ ತಿಂಗಳಲ್ಲಿ, ನಾನು ಚೊಚ್ಚಿಲ ಬಸುರಿ. ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ನಾನು ಆಫೀಸು, ಮನೆಕೆಲಸಗಳನ್ನು ಸಮದೂಗಿಸಿಕೊಳ್ಳುತ್ತಾ, ಆರೋಗ್ಯವಂತ ಮಗುವಿನ ನಿರೀಕ್ಷೆಯಲ್ಲಿದ್ದೆ. ಸೆಪ್ಟೆಂಬರ್ 20, 2005 ರಂದು ನನ್ನ ಮಗನ ಜನನವಾಯಿತು. ಮಗ ಹುಟ್ಟಿದ ಸಂತೋಷ ಒಂದೆಡೆಯಾದರೆ, ಅದೇ ಡಾಕ್ಟರ್ ಹೇಳಿದರು ‘ನೀವು ಎರಡನೇ ಮಗುವನ್ನು ಮಾಡಿಕೊಳ್ಳುವಂತಿಲ್ಲ, ನಿಮ್ಮ ಹೈಬಿಪಿಯಿಂದಾಗಿ ಕಿಡ್ನಿ ಡ್ಯಾಮೇಜ್ ಆಗಬಹುದು, ನೆಫ್ರಾಲೊಜಿಸ್ಟ್ ರನ್ನು ಆದಷ್ತು ಬೇಗ ಕನ್ಸಲ್ಟ್ ಮಾಡಿ ಅಂತ. ಮಗನ ತೂಕ ಕೇವಲ 1.2 ಕಿಲೋ ಇತ್ತಷ್ಟೆ. ಅವನನ್ನು ಬೇರೆ ಹಾಸ್ಪಿಟಲ್ ನಲ್ಲಿ ಇನ್ಕ್ಯುಬೇಟರ್ ನಲ್ಲಿ ಇರಿಸಿ ಪೋಷಿಸಲಾಯಿತು. ನಾನು ಬೇರೆ ಆಸ್ಪತ್ರೆಗೆ ಅಡ್ಮಿಟ್ ಆದೆ. ಮಗುವಿಗೆ ಎದೆಹಾಲು ಕುಡಿಸಲು ಆಗದಷ್ಟು ನಿತ್ರಾಣದಿಂದ ನಾನು ಬಳಲುತ್ತಿದ್ದ ಕಾರಣ , ಡಬ್ಬದ ಹಾಲಿಗೆ ಮೊರೆಹೋಗಬೇಕಾಯಿತು. ಹಾಗೆಯೇ ಮೂರು ತಿಂಗಳು ಕಳೆಯಿತು. ನಿಧಾನವಾಗಿ ನನ್ನ ಮತ್ತು ಮಗುವಿನ ಆರೋಗ್ಯ ಚೇತರಿಸಿಕೊಳ್ಳುತಿತ್ತು. ಆದರೆ, ನಾನು ಅವನ ಶುಶ್ರೂಷೆಯಲ್ಲಿ ಬಿಪಿ ಮಾತ್ರೆ ತೆಗೆದುಕೊಳ್ಳುವುದನ್ನು ಮರೆತೆ.

ಮಗ ಹಾಲು ಕುಡಿಯಲು ಆರಂಭಿಸಿದ್ದ. ಅವನಿಗೆ ನಾಲ್ಕು ತಿಂಗಳಾಗುತ್ತಿದ್ದಂತೆ, ನನಗೆ ಕೆಲಸಕ್ಕೆ ತೆರಳಬೇಕಾದ ಅನಿವಾರ್ಯತೆ ಶುರುವಾಯಿತು. ಕೆಲಸದ ಒತ್ತಡದಲ್ಲಿ, ಅವನ ಆಟಗಳನ್ನು ಮಿಸ್ ಮಾಡಿಕೊಂಡೆ ಹಾಗೆಯೇ ನನ್ನ ಬಿಪಿ ರೀಡಿಂಗ್ ವ್ಯತ್ಯಾಸವಾಗತೊಡಾಗಿತು. ನನ್ನ ಮಗ ಐದು ತಿಂಗಳ ನಂತರ, ಹೆಲ್ತಿ ಬೇಬಿ ಆಗಿಬಿಟ್ಟ. ಆಗ ಎಲ್ಲ ನಾನು ಸ್ವಲ್ಪ ನನ್ನ ಆರೋಗ್ಯದ ಕಡೆ ಗಮನ ಹರಿಸತೊಡಗಿದೆ. ಅಷ್ಟರಲ್ಲಿ ಅನಾಹುತ ಆಗಿಯೇ ಹೋಗಿತ್ತು!

ನನ್ನ ಮಗನಿಗೆ ಒಂದು ವರ್ಷವಾದ ನಂತರ, ನನ್ನ ಡಾಕ್ಟರ್ ವಿಸಿಟ್ ಎರಡು ತಿಂಗಳಿಗೊಮ್ಮೆ ಬ್ಲಡ್ ರಿಪೋರ್ಟ್ ಜೊತೆ ಶುರುವಾಯ್ತು. ಮನೆಯಲ್ಲಿ ನಾರ್ಮಲ್ ಇರುತ್ತಿದ್ದ ಬಿಪಿ ರೀಡಿಂಗ್ ಡಾಕ್ಟರ್ ಪರಿಶೀಲಿಸಿದಾಗ ಜಾಸ್ತಿ ಇರುತ್ತಿತ್ತು. ಬಿಪಿ ಮಾತ್ರೆಯ ಡೋಸೇಜ್ ಜಾಸ್ತಿ ಆಗುತ್ತಾ ಹೋಯಿತು. ಊಟದ ಪಥ್ಯ ಶುರುವಾಗಿಯೇ ಬಿಟ್ಟಿತ್ತು. ‘ಹಣ್ಣು ತಿನ್ನುವ ಹಾಗಿಲ್ಲ, ರಾಗಿ ಬೇಡ, ನೀರು ದಿನಕ್ಕೆ ಒಂದು ಲೀಟರ್, ಹೈ ಪ್ರೊಟೀನ್ ಫುಡ್ ಬೇಡ ‘ ಅಂತ ….. ಬೇಡಗಳೇ ಜಾಸ್ತಿ ಆಗಿ ಬೇಕು ಎನ್ನುವುದು ಕಡಿಮೆಯಾಯ್ತು.

2006ಕ್ಕೆ ಶುರುವಾದ ನನ್ನ ಡಯಟ್ 2017 ಮೇ ತಿಂಗಳಲ್ಲಿ ಕೊನೆಯಾಯಿತು. ಅಷ್ಟರಲ್ಲಿ ಹೋಗದ ಜಾಗವಿಲ್ಲ, ನೋಡದ ಡಾಕ್ಟರ್ ಇಲ್ಲ ಎಂಬಂತಾಗಿತ್ತು ನನ್ನ ಪರಿಸ್ಥಿತಿ. ಕೇರಳ ಕೋಟೆಕಲ್ ಆಯುರ್ವೇದ ಔಷದಿ ಸ್ವಲ್ಪ ದಿನ ತೆಗೆದುಕೊಂಡೆ, ನಾಸಿಕ್ ಗೆ ಹೋದೆ, ಸಾಗರದ ಹತ್ತಿರ ಚಕ್ಕೆ ಔಷಧಿ ಕುಡಿದೆ, ಒಂದ, ಎರಡ … ಲೆಕ್ಕವಿಲ್ಲದಷ್ಟು ಪ್ರಯತ್ನಗಳನ್ನು ಮಾಡಿಯಾಗಿತ್ತು. ಅಷ್ಟರಲ್ಲಿ 2017 ಫೆಬ್ರವರಿಯಲ್ಲಿ ಎವಿಫ್ (AVF) ಮಾಡಿಸಿ ಅಂದರು ಡಾಕ್ಟರ್.

ಜೂನ್ 01, 2017ರಲ್ಲಿ ನನ್ನ ಡಯಾಲಿಸಿಸ್ (Dialysis) ಪಯಣ ಶುರುವಾಯಿತು. ಆ ದಿನ ಅಳು ಬಂತು. ಡಾಕ್ಟರ್ ನನಗೆ ಧೈರ್ಯತುಂಬುತ್ತಾ ಹೇಳಿದರು ‘ಏನಿಲ್ಲ ಕಿಡ್ನಿ ಮಾಡೋ ಕೆಲಸವನ್ನು ಮೆಷಿನ್ ಮಾಡುತ್ತೆ, ಬಿ ಬ್ರೇವ್ ಅಂತ’. ಆಫೀಸ್ ನಲ್ಲಿ ‘ರಾ ಮೆಟೀರಿಯಲ್ ಇನ್ಚಾರ್ಜ್’ ಆಗಿದ್ದ ನಾನು ಬೇರೆ ಕೆಲಸವನ್ನು ಕೇಳಿ ಲೊ ಪ್ರೊಪೈಲ್ ಹುದ್ದೆಗೆ ಬಂದೆ . ನನಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಬೇಕಿತ್ತು. ಒಂದು ಬಾರಿ ಡಯಾಲಿಸಿಸ್ ಮಾಡಲು ನಾಲ್ಕು ಗಂಟೆ ಬೇಕಾಗುತ್ತಿತ್ತು. ಡಯಾಲಿಸಿಸ್ ಮಾಡಿಸುವ ದಿನಗಳಲ್ಲಿ ಆಫೀಸಿನಲ್ಲಿ ಎರಡು ಗಂಟೆ ಅನುಮತಿ ಕೊಟ್ಟಿದ್ದರು. ಆಫೀಸಿನಿಂದ ನೇರವಾಗಿ ಹಾಸ್ಪಿಟಲ್ ಗೆ ಬಂದು, ಡಯಾಲಿಸಿಸ್ ಮುಗಿಸಿ ಮನೆಗೆ ಬರ್ತಾ ಇದ್ದೆ. ಮಗ ಏಳನೆಯ ಕ್ಲಾಸ್ ನಲ್ಲಿದ್ದ. ಮನೆ, ಆಫೀಸ್ ಎರಡನ್ನೂ ಮ್ಯಾನೇಜ್ ಮಾಡಿಕೊಂಡು ಜೀವನ ಆರಂಭಿಸಿದೆ.

ಡಯಾಲಿಸಿಸ್ ಗೆ ಒಳಪಟ್ಟ ನಂತರ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿದೆ. ಸಾಧ್ಯವಾದಷ್ಟು ಪಾಸಿಟಿವ್ ಆಗಿರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದೆ. ಅಲ್ಲಿಗೆ ಬರುವ ಪೇಷಂಟ್ ಗಳಿಗೂ ಸಹ ಅದನ್ನೇ ಹೇಳುತ್ತಿದ್ದೆ. ಪ್ರತಿ ಪೇಷೆಂಟ್ ಗೆ ಒಬ್ಬ ಅಟೆಂಡೆಂಟ್ ಬಂದು ಏನಾದರೂ ತಿನ್ನಿಸಿ, ಕುಡಿಸಿ ಹೋಗುತ್ತಿದ್ದರು. ನಾನು ಯಾರ ಸಹಾಯವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಊಟದ ಡಬ್ಬಿ ಸಹ ಯಾರ ಸಹಾಯವನ್ನು ಪಡೆಯದೇ ನಾನು ತೆಗೆಯುವಂತಾದ್ದನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದೆ . ಇನ್ನೂ ನೆನಪಿದೆ ನನಗೆ. ವಯಸ್ಸಾದವರೊಬ್ಬರ ಮಗನಿಗೆ ”ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದಾಗ ಅವನು ನನಗೂ ಸೇರಿಸಿ ಹೇಳಿದ ”ನಿಮಗೆಲ್ಲಾ ದುಡ್ಡು ಖರ್ಚು ಮಾಡಿ ಏನು ಪ್ರಯೋಜನ ? ಕಾಯಿಲೆ ಹುಷಾರಾಗಲ್ಲ’‘ ಅಂತ ಒಂದು ಕೆಟ್ಟ ದೃಷ್ಟಿ ಹರಿಸಿ ಹೊರಟುಹೋದ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಒಂದು ಹಿರಿಯ ಜೀವ, ಅವರ ಜೀವನ ಪ್ರೀತಿ, ಅವರು ಬದುಕನ್ನು ನೋಡುವ ರೀತಿ, ನೋವನ್ನೆಲ್ಲಾ ಮರೆಸುವ ಸ್ನೇಹ, ಆತ್ಮೀಯತೆ ನನ್ನಲ್ಲಿ ಅಚ್ಚರಿ ಸಹ ಮೂಡಿಸುತ್ತಿದ್ದುವು. ನಾನು ಕಳೆದುಕೊಂಡದ್ದಕ್ಕಿಂತ ಜೀವನದಲ್ಲಿ ಕಲಿತದ್ದೇ ಹೆಚ್ಚು . ಮೈಸೂರಿನ ‘ಬೃಂದಾವನ್ ಹಾಸ್ಪಿಟಲ್’ ನಲ್ಲಿ ನಾನು ಡಯಾಲಿಸಿಸ್ ಗೆ ಹೋಗುತ್ತಿದ್ದೆ. ನಾನು ಬರುವುದನ್ನು ಕಾಯುತ್ತಿದ್ದ ಬ್ರದರ್ಸ್ ಅಂಡ್ ಸಿಸ್ಟರ್ಸ್, ನನ್ನ ಬ್ಯಾಚ್ ಪೇಷೆಂಟ್ಸ್, ಸ್ವಚ್ಚತಾ ಸಿಬ್ಬಂದಿ…ಹೀಗೆ ಐದು ವರ್ಷ ಮೂರು ತಿಂಗಳು ಡಯಾಲಿಸಿಸ್ ಮಾಡಿಸಿಕೊಂಡ ಆ ಆಸ್ಪತ್ರೆ ನನ್ನ ಎರಡನೇ ತವರು ಮನೆ ಆಗಿತ್ತು.

ಡಯಾಲಿಸಿಸ್ ನ ಆರಂಭದ ಹಂತದಲ್ಲಿ, ತುಂಬಾ ತಲೆನೋವು, ಸುಸ್ತು, ವಾಂತಿ, ನಿದ್ರೆ ಬಾರದೆ ಇರುವುದು ಇತ್ಯಾದಿ ಸಮಸ್ಯೆಗಳಿರುತ್ತಿದ್ದುವು. ಡಯಾಲಿಸಿಸ್ ಆದ ಮೇಲೆ ಆರು ಗಂಟೆಗಳ ಕಾಲ ಕೈಗೆ ಬಿಗಿಯಾಗಿ ಕಟ್ಟಿದ ಬೆಲ್ಟ್ ಅನ್ನು ಬಿಚ್ಚುವಂತಿಲ್ಲ. ಅಲ್ಲಿಯ ವರೆಗೂ ಈ ರೀತಿಯ ಬಾಧೆಗಳಿಂದ ಬಳಲುತ್ತಿದ್ದೆ. ಸುಮಾರು ಆರು ತಿಂಗಳ ವರೆಗೆ ಇವಕ್ಕೆಲ್ಲಾ ಹೇಗೋ ಹೊಂದಿಕೊಂಡೆ. ಹಾಗೂ, ಹೀಗೂ, ನಾಲ್ಕು ವರ್ಷ ಕಳೆದೆ. ಐದನೇ ವರ್ಷ 2021ರಲ್ಲಿ ನನ್ನ ಆರೋಗ್ಯ ಹದಗೆಟ್ಟಿತ್ತು. ಉಸಿರಾಟದ ಸಮಸ್ಯೆಯಾಗಿ ಯುಗಾದಿ ಹಬ್ಬದ ದಿನ ರಾತ್ರಿ ಎರಡು ಗಂಟೆಗೆ ಹಾಸ್ಪಿಟಲ್ ಗೆ ಸೇರಿದೆ. ಐದು ದಿನ ಐಸಿಯುನಲ್ಲಿ ಇದ್ದೆ. ಕೂದಲು ಜಾಸ್ತಿ ಉದುರಲು ಶುರುವಾಗಿತ್ತು . ತ್ವಚೆಯ ಬಣ್ಣ ಕಪ್ಪಾಗತೊಡಗಿದ್ದು ದೇಹದಲ್ಲಿ ನಿಶ್ಯಕ್ತಿ ಆವರಿಸುತ್ತಿತ್ತು . ಮೊದಲಿನ ಲವಲವಿಕೆ ಇರಲಿಲ್ಲ. ಈ ಅವಧಿಯಲ್ಲಿ ಕಿಡ್ನಿ ಕಸಿ (Kidney Transplant) ಟ್ರಾನ್ಸ್ ಪ್ಲಾಂಟ್ ನ ಅಲೋಚನೆಯೂ ಬಂದಿತ್ತು. ಕಿಡ್ನಿ ವೈಫಲ್ಯದಿಂದ ಬಳಲುವವರಿಗೆ ರಕ್ತಸಂಬಂಧಿಗಳು ವೈದ್ಯಕೀಯ ಪರೀಕ್ಷೆಗೊಳಪಟ್ಟು ಸೂಕ್ತವಾದರೆ ಕಿಡ್ನಿ ದಾನ ಮಾಡುವ ಅವಕಾಶವಿದೆ. ಹಾಗಾಗಿ, ಅದೂ ಒಂದು ಪ್ರಯತ್ನ ಎಂಬಂತೆ ನನ್ನ ಅಮ್ಮ, ತಮ್ಮ, ಚಿಕ್ಕಮ್ಮ- ಇವರನ್ನು ಟೆಸ್ಟ್ ಮಾಡಿಸಿಯೂ ಆಗಿತ್ತು. ಆದರೆ ವೈದ್ಯಕೀಯವಾಗಿ ಹೊಂದಿಕೆಯಾಗದೆ ಈ ಪ್ರಯತ್ನದಲ್ಲಿಯೂ ಸೋತಿದ್ದೆ.

”ಕಡವೆರ್ (Cadaver)” ಎಂಬ ವ್ಯವಸ್ಥೆಯ ಮೂಲಕ ಮಿದುಳು ನಿಷ್ಕ್ರಿಯರಾಗಿ ಮರಣಿಸಿದ ಅಪರಿಚಿತ ವ್ಯಕ್ತಿಗಳ ಕಿಡ್ನಿಯನ್ನು ದಾನವಾಗಿ ಪಡೆಯುವ ಅವಕಾಶವಿದೆ. ಇದರ ಪ್ರಯೋಜನ ಪಡೆಯಲು ದಾಖಲೆ ಸಮೇತ ನೋಂದಣಿ ಮಾಡಿಸಿಕೊಳ್ಳಬೇಕು. ನಾನು 2017 ರಲ್ಲಿ ಅಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿದ್ದೆ. ಅಲ್ಲಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಇನ್ನೂ ಬಂದಿರಲಿಲ್ಲ. ಒಟ್ಟಿನಲ್ಲಿ ಮನಸ್ಸು ರೋಸಿ ಹೋಗಿ, ಜೀವನವೇ ಸಾಕೆನಿಸಿತ್ತು. ಒಂದು ದಿನ ಜುಲೈ 2021 ರಲ್ಲಿ ನನ್ನ ಗಂಡನಿಗೆ ಹೇಳಿದೆ ”ಯಾಕೋ ನನಗೆ ಬದುಕಲು ಇಷ್ಟವಿಲ್ಲ, ಜೀವನದಲ್ಲಿ ನಮಗೆ ಅಂತಹ ತೊಂದರೆಗಳೇನಿಲ್ಲ, ಮಗ ಚೆನ್ನಾಗಿ ಓದುತ್ತಾನೆ, ನೀವು ಅವನನ್ನು ನೋಡಿಕೊಳ್ಳಿ” ಅಂತ ನೋವಿನಿಂದ ಹೇಳಿದೆ. ಅಷ್ಟರಲ್ಲಿ Ex-Dialysis Patient ಮತ್ತು ನನ್ನ ಬಂಧು ಒಬ್ಬರು ಬೆಂಗಳೂರಿನಲ್ಲಿರುವ SS SPARSH Hospital ಬಗ್ಗೆ ಹೇಳಿದರು. ಈ ನಡುವೆ ವಕ್ಕರಿಸಿದ ಕೋವಿಡ್ 19 ನಿಂದಾಗಿ, ನನ್ನ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಪ್ರಕ್ರಿಯೆಗೆ ಎರಡು ವರ್ಷ ವ್ಯರ್ಥವಾಯಿತು. ಮೈಸೂರಿನಲ್ಲಿ ಕಿಡ್ನಿ ಬೇಕೆಂದು ಕೇಳಿಕೊಂಡವರ ವೈಟಿಂಗ್ ಲಿಸ್ಟ್ ನಲ್ಲಿ ನಾಲ್ಕನೆಯ ಸ್ಥಾನದಲ್ಲಿ ಇದ್ದ ನಾನು SPARSH ಗೆ ಟ್ರಾನ್ಸ್ ಫರ್ ತೆಗೆದುಕೊಂಡು ನಂಬರ್ ವನ್ ಜಾಗಕ್ಕೆ ಬಂದೆ. ಜುಲೈ 2021 ರ ಮಧ್ಯದಲ್ಲಿ ಎರಡು ದಿನ ಬಿಡುವು ಮಾಡಿಕೊಂಡು ಅಲ್ಲಿಗೆ ಹೋಗೆ ಸಂಬಂಧಿತ ಟೆಸ್ಟ್ ಗಳನ್ನು ಮಾಡಿಸಿಕೊಂಡು ಬಂದೆ. ”ಇನ್ನು ಒಂದು ತಿಂಗಳು ಕಾದು ನೋಡಿ” ಅಂದರು. ಬಂದೆ ನನಗೆ ನಂಬಿಕೆ ಬರಲಿಲ್ಲ. ನೋಡೋಣ ಅಂತ ಅಂದುಕೊಂಡೆ .

SPARSH ನಲ್ಲಿ ಡಾ. ಅರುಣ್ ಕುಮಾರ್ ಅವರು ನನಗೆ ವೈದ್ಯರಾಗಿದ್ದರು. Dr.Arun Kumar is a real inspiration for me! ಅವರ ಮಾತಿನ ಮೋಡಿ, ವ್ಯಕ್ತಿತ್ವ. ಜೀವನ ಶ್ರದ್ಧೆ. ನನ್ನ ಬಾಳಿಗೊಂದು ಭರವಸೆ ಮೂಡಿಸಿತು. ನಾಳೆಯೆಂಬ ಒಳ್ಳೆಯ ದಿನಗಳು ನನಗಾಗಿ ಕಾಯುತ್ತಿವೆ ಅನಿಸತೊಡಗಿತ್ತು . ನಾನು ನೆನಸದ ರೀತಿಯಲ್ಲಿ ಸೆಪ್ಟೆಂಬರ್ 01,2021 ರಂದು ನನಗೆ ಫೋನ್ ಬಂತು . ನನಗೆ ನಂಬಲು ಸಾಧ್ಯವಾಗಲಿಲ್ಲ. ಮುಂದಿನದ್ದೆಲ್ಲ ಈಗ ಚರಿತ್ರೆಗೆ ಸೇರಿದೆ. I met eminent Doctors and sensible staff.

PC: Internet

ಅಲ್ಲಿ ನಾನು ಪ್ರಖ್ಯಾತ ಡಾಕ್ಟರ್ ಗಳನ್ನು ಭೇಟಿ ಮಾಡಿದೆ. ಮೊದಲು ಪೇಷೆಂಟ್ಸ್ ಗಳ ಡೌಟ್ಸ್ ಎಲ್ಲಾ ಕ್ಲಿಯರ್ ಮಾಡ್ತಾರೆ. ಬಹಳ ಕಾಳಜಿಯಿಂದ ಪೇಷೆಂಟ್ಸ್ ಗಳನ್ನು ಮಾನಸಿಕವಾಗಿ ಪ್ರಿಪೇರ್ ಮಾಡಿ ಸಿದ್ಧಗೊಳಿಸುತ್ತಾರೆ. ಸದಾ ಹಸನ್ಮುಖಿಗಳು. ಪಾಸಿಟಿವ್ ವಾತಾವರಣದಲ್ಲಿ ಯಾವ ಪೇಷೆಂಟ್ ಕೂಡ ಬೇಗನೆ ಗುಣವಾಗುತ್ತಾರೆ. ಅದು ಹಾಸ್ಪಿಟಲ್ ಏನೋ ಭಾವನೆ ನನಗೆ ಮೂಡಲಿಲ್ಲ. ಎಲ್ಲೋ ರೆಸಾರ್ಟ್ ಗೆ ಕಾಲಕಳೆಯಲು ಹೋದ ಅನುಭವ . ಅಲ್ಲಿ ಹತ್ತು ದಿನ ಕಳೆದದ್ದೇ ಗೊತ್ತಾಗಲಿಲ್ಲ, ಫೋನ್ ಕೂಡ ಇಲ್ಲದೆ! ಅದು ನನ್ನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಬ್ರದರ್ಸ್, ಸಿಸ್ಟರ್ಸ್, ಸ್ಟಾಫ್, ಎಲ್ಲರೂ ಸಮಯಪ್ರಜ್ಞೆಯಿಂದ, ಕಾಳಜಿಯಿಂದ ನೋವಿಗೆ ಸ್ಪಂದಿಸುವವರಾಗಿದ್ದರು. ಸರ್ಜನ್ ಮತ್ತು ನನ್ನ ಡಾಕ್ಟರ್ ದಿನವೂ ಮೂರು ಬಾರಿ ವಿಸಿಟ್ ಮಾಡ್ತಾ ಇದ್ರು. ನಾನು ಬಹಳ ಬೇಗ ಚೇತರಿಸಿಕೊಂಡೆ ಹಾಗೂ ನನ್ನ ಜೀವನದ ಹೊಸ ಅಧ್ಯಾಯ ಪ್ರಾರಂಭವಾಯಿತು.

ನಾನು ಇನ್ನು ಏನು ಬೇಕಾದರೂ ತಿನ್ನಬಹುದು ಸಾಕೆನ್ನುವಷ್ಟು ನೀರು ಕುಡಿಯಬಹುದು ಎನ್ನುವುದೇ ನನಗೆ ಸಂತೋಷ. ಹತ್ತು ವರ್ಷಗಳ ನಂತರ ರಾಗಿ ತಿಂದೆ. ಎಳನೀರು ಕುಡಿದೆ. ಮನಸ್ಸು ಪ್ರಫುಲ್ಲವಾಗತೊಡಗಿತು. ನಾನು ಮೂರು ತಿಂಗಳ ನಂತರ ಎಲ್ಲರಂತೆ ಇರಬಹುದು. ಇನ್ನೂ ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲವಾದುದರಿಂದ ನಾನು ಸ್ವಲ್ಪ ಕಾಳಜಿ ವಹಿಸಬೇಕಾಗುತ್ತದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಎಲ್ಲರಿಗೂ ಒಳ್ಳೆಯದಾಗಬೇಕೆಂಬುದೇ ನನ್ನ ಆಶಯ. ಅದಕ್ಕೆ SPARSH ನ ವೈದ್ಯರುಗಳು ಹಾಗೂ ಸಿಬ್ಬಂದಿಗಳು ಒಳ್ಳೆಯ ಮಾರ್ಗದರ್ಶನ ನೀಡಿ ಅವರ ಜೀವನದಲ್ಲಿ ಬೆಳಕು ಮೂಡಿಸಬಲ್ಲರು ಎಂದು ಬಲವಾಗಿ ನಂಬಿದ್ದೇನೆ”

ನಿಮ್ಮ ಪ್ರೀತಿಯ ‘ಕಿಡ್ನಿ ಟ್ರಾನ್ಸ್ ಪ್ಲಾಂಟೆಡ್ ‘ ಗೆಳತಿ
ನಿರೂಪಣೆ : ಹೇಮಮಾಲಾ.ಬಿ

8 Responses

  1. ನಯನ ಬಜಕೂಡ್ಲು says:

    ಬದುಕಿನ ಒಂದು ಹೋರಾಟವೇ ಸರಿ. ನಿಜಕ್ಕೂ ಅಗತ್ಯ ಇರುವವರಿಗೆ ಸಹಾಯ ಆಗಬಲ್ಲಂತಹ ಲೇಖನ, ಹಾಗೂ ಧೈರ್ಯ ತುಂಬುವಂತದ್ದು ಕೂಡಾ.

  2. ನಾಗರತ್ನ ಬಿ. ಅರ್. says:

    ಅತ್ಯಂತ ಉಪಯುಕ್ತವಾದ ಸಕಾರಾತ್ಮಕ ಲೇಖನ ಆಪ್ತವಾಗಿ ನಿರೂಪಿಸಿ ಅನಾವರಣಗೊಳಿಸಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಪ್ರಿಯ ಗೆಳತಿ ಹೇಮಾ.

  3. ಕೆ. ರಮೇಶ್ says:

    ಮೈ ನವೀರೇಲಿಸುವ ಲೇಖನ. ಧನ್ಯವಾದಗಳು ಮೇಡಂ

  4. ಡಾ.ಕೃಷ್ಣಪ್ರಭ ಎಂ says:

    ಸರಳ ಸುಂದರ ನಿರೂಪಣೆಯ ಬರಹ

  5. Padma Anand says:

    ಜೀವನದಲ್ಲಿ ಬಂದ ಎಡರು ತೊಡರುಗಳನ್ನು ಮೆಟ್ಟಿ ಜೀವನ ಕಟ್ಟಿಕೊಂಡ ಹೆಣ್ಣುಮಗಳೊಬ್ಬಳ ಯಶೋಗಾಥೆಯ ಸುಂದರ ನಿರೂಪಣೆ. ಆರೋಗ್ಯವೇ ಭಾಗ್ಯ.

  6. . ಶಂಕರಿ ಶರ್ಮ says:

    ನಿಜಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸುವುದು ಹೇಳಿದಷ್ಟು ಸುಲಭವಲ್ಲ. ಅತ್ಯಂತ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಿ ಗೆದ್ದ ಮಹಿಳೆಯ ಈ ಯಶೋಗಾಥೆಯ ಬಗೆಗಿನ ಲೇಖನವು ಬಹಳಷ್ಟು ಉಪಯುಕ್ತ ಮಾಹಿತಿಗಳನ್ನು ಹೊತ್ತು ತಂದಿದೆ. ಧನ್ಯವಾದಗಳು ಹೇಮಮಾಲ ಅವರಿಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: