ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 1

Share Button

ಮೈಸೂರು ಸಾಹಿತ್ಯ ದಾಸೋಹಿಗಳ,ಸವಿಗನ್ನಡ ಪತ್ರಿಕಾ ಬಳಗದ, ವನಿತಾ ಸದನ ಶಾಲಾ ಬಳಗದ,ಕುಟುಂಬದ ಸದಸ್ಯರ, ಬಂಧುಗಳ, ಸ್ನೇಹಿತರ, ಶುಭ ಹಾರೈಕೆಗಳೊಂದಿಗೆ, 8 – 10 ವರ್ಷಗಳ ಕನಸನ್ನು ನನಸಾಗಿಸಿಕೊಳ್ಳಲು, ಜೂನ್ 7, 2019ರ ಶುಕ್ರವಾರದಂದು ಮೈಸೂರಿನಿಂದ ಬೆಂಗಳೂರಿಗೆ ಹೊರಟಾಗ ಮನದಲ್ಲಿ ಧನ್ಯತಾ ಭಾವ, ಧಾರ್ಮಿಕ ಭಾವ, ಸಂತೋಷ, ಕುತೂಹಲ, ಗಾಬರಿ, ಆತಂಕಗಳ ಮಿಶ್ರಭಾವಗಳು ತಾಕಲಾಟವಾಡುತ್ತಿದ್ದುದು ಸುಳ್ಳಲ್ಲ.ಕಳೆದ ಒಂದು, ಒಂದೂವರೆ ತಿಂಗಳುಗಳಿಂದ ಎಷ್ಟೇ ವಾಕಿಂಗ್, ಯೋಗ, ಪ್ರಾಣಾಯಾಮಗಳು, ಚಾಮುಂಡಿಬೆಟ್ಟ ಹತ್ತಿ ಇಳಿಯುವುದು ಎಂದು ದೈಹಿಕ, ಮಾನಸಿಕ ತರಬೇತಿಯಲ್ಲಿ ತೊಡಗಿಕೊಂಡಿದ್ದರೂ, ಎಷ್ಟೇ ಹಣೆಯಲ್ಲಿ ಬರೆದಂತೆ ಆಗುತ್ತದೆ ಎಂಬ ನಿರ್ಲಿಪ್ತ ಭಾವ ಬೆಳೆಸಿಕೊಳ್ಳಲು ಪ್ರಯತ್ನಿಸಿದರೂ ಮನಸ್ಸು ತನ್ನದೇ ಧಾಟಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು.

ಇರಲಿ, 9ರ ಭಾನುವಾರ ಮತ್ತೊಮ್ಮೆ ನಮ್ಮ ಕುಟುಂಬದ ಸಹ ಯಾತ್ರಿಗಳಾದ ಬಂಧು ಶ್ರೀಯುತ.ನಾಗೇಂದ್ರ, ಮೈದುನ  ಶ್ರೀನಿವಾಸ ಮತ್ತು ಓರಗಿತ್ತಿ ಆಶಾ ಅವರುಗಳನ್ನು ಭೇಟಿಯಾಗಿ, ‘ಚಾಯ್ ಪೆ ಚರ್ಚಾ’ಮಾಡಿ ತೆಗೆದುಕೊಳ್ಳಬೇಕಾದ ವಸ್ತುಗಳ ಲಿಸ್ಟ ಅನ್ನು ಮತ್ತೊಮ್ಮೆ ಚಕ್ ಮಾಡಿ, ತಯ್ಯಾರಿ ಸಾಕಷ್ಟು ಭರ್ಜರಿಯಾಗಿಯೇ ಇದೆ, ಎನ್ನಿಸಿದಾಗ ಮನದ ಆತಂಕ ಸ್ವಲ್ಪ ಇಳಿಯಿತು. ದಿ.11.6.19ನೇ ಮಂಗಳವಾರ, ಪತಿ ಮಕ್ಕಳಿಂದ ಬೀಳ್ಕೊಂಡು ಕಠ್ಮಂಡುವಿನ ವಿಮಾನ ಏರಿದಾಗ ಜಗದೀಶ್ವರನಿಗೆ ಹತ್ತಿರವಾಗುತ್ತಿದ್ದೇನೆ ಎಂಬ ಭಾವ ಮನಸ್ಸನ್ನಾಕ್ರಮಿಸಿತು.

ಕಠ್ಮಂಡುವಿನಲ್ಲಿ ರಾತ್ರಿ, ಸುಮಾರು ಎಂಟೂವರೆ ಗಂಟೆಯ ಹೊತ್ತಿಗೆ ಇಳಿದು ವಿಮಾನ ನಿಲ್ದಾಣದಿಂದ ಹೊರ ಬಂದಾಗ ಟೂರ್ ಪ್ರತಿನಿಧಿಗಳು ಒಂದೊಂದು ಶಲ್ಯವನ್ನು ಹೊದ್ದಿಸಿ ಹಾರ್ದಿಕವಾಗಿ ಸ್ವಾಗತಿಸಿದಾಗ, ನಮ್ಮ ವಿಮಾನದಲ್ಲೇ ಬಂದ ಹಲವಾರು ಮಂದಿ ನಮ್ಮ ಕೈಲಾಶ್ ಮಾನಸ ಸರೋವರ ಯಾತ್ರೆಯ ಸಹ ಯಾತ್ರಿಕರು ಎಂಬ ಅರಿವಾಯಿತು. ಅಲ್ಲಿಂದ ಹೋಟಲ್ ತಲುಪಿ, ವಿಶ್ರಾಂತಿ ಪಡೆದು ಮಾರನೆಯ ದಿನ ಬೆಳಗ್ಗೆ ಕಠ್ಮಂಡುವಿನ ಪುರಾತನ ಹಿಂದೂ ದೇವಾಲಯ ಪಶುಪತಿನಾಥ ಮಂದಿರ, ಸುಂದರ ಜಲನಾರಾಯಣ ಸರೋವರ,ಬೌದ್ಧನಾಥ ಸ್ತೂಪಗಳನ್ನು ನೋಡಿಕೊಂಡು ಹೋಟಲಿಗೆ ಹಿಂತಿರುಗಿ ಊಟಮಾಡಿ ಒಂದರ್ಧ ಗಂಟೆವಿಶ್ರಮಿಸಿಕೊಂಡು ಸುಮಾರು ಮೂರು ಗಂಟೆಯ ಹೊತ್ತಿಗೆ ಓರಿಯಂಟೇಶನ್‍ಗೆಂದು, ಎಲ್ಲರೂ ಹೋಟೆಲ್‍ನ ಹಾಲ್‍ನಲ್ಲಿ ಜಮಾಯಿಸಿದಾಗ, ನಮ್ಮ 42 ಜನ ಸಹಯಾತ್ರಿಕರ ಮುಖ ಪರಿಚಯಗಳಾಯಿತು. ನಮ್ಮ ಮುಂದಿನ ಪ್ರಯಾಣದ ರೂವಾರಿಗಳಾದ ‘ಫಿಶ್ ಟೈಲ್’ ಕಂಪನಿಯ ಶ್ರೀಯುತ ಪಾಂಡೆಯವರು ಮರುದಿನದಿಂದ ಪ್ರಾರಂಭಗೋಳ್ಳುವ ನಮ್ಮ ಯಾತ್ರೆಯ ಸಾಧಕ ಬಾಧಕಗಳು, ಅನುಸರಿಸಬೇಕಾದ ಕಟ್ಟುನಿಟ್ಟಿನ ಆರೋಗ್ಯ ಸೂತ್ರಗಳೆಲ್ಲವನ್ನು ವಿವರವಾಗಿ ವಿವರಿಸಿದಾಗ, ನನ್ನಲ್ಲಿ, – ಅಯ್ಯೋ, ಈ ಯಾತ್ರೆ ನನ್ನಿಂದ ಸಾಧ್ಯವೇ – ಎಂಬ ಉದ್ಗಾರ ಹೊರಟ್ಟಿದ್ದು ಸುಳ್ಳಲ್ಲ. ಇರಲಿ, ಬಂದಾಗಿದೆ, ಈಶ್ವರನ ಇಚ್ಛೆ ಹೇಗಿದೆಯೋ ಹಾಗೆ ನಡೆಯಲಿ, ಎಂದು ಮನಸ್ಸನ್ನು ನಾನೇ  ಸಮಾಧಾನಗೊಳಿಸಿಕೊಂಡೆ.

ಕಠ್ಮಂಡುವಿನ ಪುರಾತನ ಹಿಂದೂ ದೇವಾಲಯ ಪಶುಪತಿನಾಥ ಮಂದಿರ

ಆಮ್ಲಜನಕದ ಕೊರತೆಗೆ, ಹವಾಮಾನ ವೈಪರೀತ್ಯಗಳಿಗೆ ದೇಹವನ್ನು ಅನುಗೊಳಿಸಲು ಅಂದಿನಿಂದಲೇ ಮಾತ್ರೆಗಳನ್ನು ತೆಗೆದುಕೊಳ್ಳಲು ಶ್ರೀಯುತ. ಪಾಂಡೆ ಅವರ ಸಲಹೆಯಂತೆ ಪ್ರಾರಂಭಿಸಿದಾಗ,ಮನದಲ್ಲಿ ಅದರ ಸೈಡ್ ಎಫೆಕ್ಟಗಳನ್ನು ಹೇಗೆ ಎದುರಿಸುವುದಪ್ಪಾ ಎನ್ನುತ್ತಾ ಹಾಸಿಗೆಯಲ್ಲಿ ಮೈ ಚೆಲ್ಲಿದಾಗ ಹಿಂದಿನದೆಲ್ಲಾ ಸಿನಿಮಾ ರೀಲುಗಳಂತೆ ಕಣ್ಣ ಮುಂದೆ ಬರತೊಡಗಿತು.

9-10 ವರ್ಷಗಳ ಹಿಂದಿನ ಮಾತು. ನನ್ನವರ ಭಾವಾಜಿಯವರಾದ ಶ್ರೀಯುತ.ಶಾತಾರಾಂ ಅವರು, ತಮ್ಮ ಗೆಳೆಯರೊಂದಿಗೆ ಕೈಲಾಶ ಮಾನಸ ಸರೋವರ ಯಾತ್ರೆಗೆ ಹೋಗಿ ಬಂದು, ಅಲ್ಲಿನ ಅನುಭವಗಳನೆಲ್ಲಾ ಸವಿಸ್ತಾರವಾಗಿ ಹೇಳಿದ್ದರಿಂದ ನಮ್ಮಿಬ್ಬರಲ್ಲೂ ಅಲ್ಲಿಗೆ ಹೋಗಲೇ ಬೇಕೆನ್ನುವ ಹೆಬ್ಬಯಕೆ ಚಿಗುರೊಡೆಯಿತು.

ಆದರೆ, ಏನೆಂದರೂ ಹಣ ಕಾಸಿನ ವಿಚಾರ ತೆಗೆದುಕೊಂಡರೆ ಇದು ಸ್ವಲ್ಪ ತುಟ್ಟಿಯಾದ ಯಾತ್ರೆಯೆಂದೇ ಹೇಳಬಹುದು.  ಆಗಿದ್ದ ಸಂಸಾರದ ಜವಾಬ್ದಾರಿಗಳು, ಆರ್ಥಿಕ ಪರಿಸ್ಥಿತಿಗಳು, ನಮ್ಮವರು ಇನ್ನೂ ಕೆಲಸದಲ್ಲಿದುದರಿಂದ ರಜೆಯ ಸಮಸ್ಯೆ, ಪೂರ್ವ ತಯ್ಯಾರಿಗಾಗಿ ಸಮಯದ ಕೊರತೆ ಮುಂತಾದ ಹತ್ತು
ಹಲವಾರು ಕಾರಣಗಳಿಂದಾಗಿ ಚಿಗುರೊಡೆದ ಬಯಕೆಯನ್ನು ಮನದಲ್ಲೇ ಬಚ್ಚಿಟ್ಟುಕೊಳ್ಳ ಬೇಕಾಯಿತು. 2010ರಲ್ಲಿ ನನ್ನವರಾದ ಆನಂದ ಅವರು ನಿವೃತ್ತಿ ಹೊಂದಲಾಗಿ, ಬರುವ ಜೂನ್‍ನಲ್ಲಿ ಹೊರಟೇ ಬಿಡೋಣವೆಂದು ಬುಕ್ ಸಹ ಮಾಡಿಸಿದ್ದಾಗ್ಯೂ, ಮೆಡಿಕಲ್ ಟೆಸ್ಟ್ ನಲ್ಲಿ ನನ್ನವರಿಗೆ ಹೃದಯದಲ್ಲಿ ಬ್ಲಾಕೇಜುಗಳು ಇವೆಯೆಂದು ತಿಳಿದು ಬಂದದ್ದರಿಂದ ಆಗ ಹೋಗಲಾಗಲೇ ಇಲ್ಲ.  ನಂತರ ಇವರ ಹೃದಯದ ಆಪರೇಷನ್ ಆಗಿ, ಸಂಪೂರ್ಣವಾಗಿ ಗುಣಮುಖರಾದಾಗ, ನನಗೆ ಈಶ್ವರ, ಅಲ್ಲಿಂದಲೇ ಆಶೀರ್ವದಿಸಿ, ನನ್ನವರಿಗೆ ಉಂಟಾಗಬಹುದಾದ ತೊಂದರೆಗಳನ್ನೆಲ್ಲಾ ನಿವಾರಿಸಿದನೆಂಬ ಭಾವ ಆವರಿಸಿತು.

ಮತ್ತೆ ಒಂದೆರಡು ವರುಷಗಳ ನಂತರ ನಮ್ಮವರಂತೂ ಬರುವಂತಿರದ್ದಿದುದರಿಂದ (ಹೃದಯದ ತೊಂದರೆ ಇರುವವರನ್ನು ಹೋಗಲು ಬಿಡುವುದಿಲ್ಲ) ಯಾರಾದರೂ ಜೊತೆ ಸಿಕ್ಕಿದರೆ ಹೋಗಬೇಕೆಂಬ ತುಡಿತ ಹೆಚ್ಛಾಗತೊಡಗಿತು. ಈಗ ನಮ್ಮ ಬಂಧು, ಶ್ರೀಯುತ.ನಾಗೇಂದ್ರ ಅವರಿಗೆ ಹೋಗುವ ಇಚ್ಛೆಯಿದೆ ಎಂದು ತಿಳಿದು, ಮನೆಯವರ ಮುಂದೆ ನನ್ನ ಆಸೆಯನ್ನು ತೆರೆದಿಟ್ಟೆ. ಅಷ್ಟರಲ್ಲೇ ತಾಯಿಯಂತೆ ಗೌರವಿಸುವ ಮೈದುನ ಶ್ರೀನಿವಾಸ ಮತ್ತು ಹಿರಿಯಕ್ಕನಂತೆ ಅಕ್ಕರೆ ತೋರುವ ಓರಗಿತ್ತಿ ಆಶಾ ಸಹ ಬರುವ ಆಸೆ ವ್ಯಕ್ತಪಡಿಸಿದ್ದರಿಂದ, ಗಂಡ, ಮಕ್ಕಳು ನಕಾರಾತ್ಮಕವಾದ ಯಾವುದೇ ರಾಗ ಹಾಡುವಂತಿರಲಿಲ್ಲ.

ಇಷ್ಟಾಗ್ಯೂ, ಖರ್ಚು ವೆಚ್ಛಗಳ ಪಟ್ಟಿ ಹಾಕಲಾಗಿ ಮನ ಸಂಕೋಚಗೊಂಡದ್ದು ಸುಳ್ಳಲ್ಲ. ಮಗನಾದರೂ (ಅವನದ್ದೊಂದು ಹುಚ್ಚು ಪ್ರೀತಿ), – ಇಷ್ಟು ರಿಸ್ಕ್ ಇರುವ ಯಾತ್ರೆಗೆ ಯಾಕೆ ಹೋಗಬೇಕು? ನಾನಂತೂ ಒಂದು ಪೈಸೆ ಕೂಡ ಕೊಡುವುದಿಲ್ಲ – ಎನ್ನುತ್ತಾ ತನ್ನದೇ ರೀತಿಯಲ್ಲಿ ನನ್ನ ಯಾತ್ರೆಯನ್ನು ತಡೆಯಲು ಪ್ರಯತ್ನಿಸಿದನಾದರೂ, ಮಗಳು ಮತ್ತು ಸೊಸೆ ತಮ್ಮ ಪೂರ್ಣ ಸಹಕಾರವನ್ನು ಘೋಷಿಸಿದರು. ನನ್ನವರಂತೂ, ಅವರಿಗೆ ಆತಂಕವಿದ್ದರೂ ತೋರಗೊಡದೆ ಸಹಕರಿಸಿದರು. ದುಡ್ಡು ಕಟ್ಟಿದ್ದಾಯಿತು. ನನ್ನ ತಯ್ಯಾರಿ ಪ್ರಾರಂಭವಾಯಿತು.

ದಿನಾ ಬೆಳಗ್ಗೆ ವಾಕಿಂಗ್, ಪ್ರಾಣಾಯಾಮ, ಸಂಜೆ ಯೋಗ ತರಗತಿಗಳು, ವಾರಕೊಮ್ಮೆ ಚಾಮುಂಡಿ ಬೆಟ್ಟ ಹತ್ತಿ ಇಳಿಯಿವುದು, ಯೋಗ ಶಿಕ್ಷಕರಿಂದ ಮತ್ತು ಪ್ರಾಣಾಯಾಮ ಶಿಕ್ಷಕರಿಂದ ಟಿಪ್ಸ್ ಗಳು,ಎಲ್ಲವೂ ನಡೆಯತೊಡಗಿದವು.  ಮಗಳು ಮೇಲು ಖರ್ಚಿಗೆ ಬೇಕಾಗುವ ಎಲ್ಲ ಹಣವನ್ನೂ ತಾನು ಕೊಡುತ್ತೇನೆಂದು ಹೇಳಿ ಹಣ ಟ್ರಾನ್ಸಫರ್ ಮಾಡಿಯೇ ಬಿಟ್ಟಳು. ಆದರೂ ಚುಡಾಯಿಸುವುದನ್ನು ಮರೆಯಲಿಲ್ಲ – ಅಲ್ಲಿಒಂದೆರಡು ದಿನಗಳು 15 – 20 ಕಿ.ಮೀ. ನಡೆಯಬೇಕಂತೆ, ಇಲ್ಲಿ ಒಮ್ಮೆ ನಡೆದು ತೋರಿಸು, ನೋಡೋಣ ಎಂದಳು.  ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿ, ಒಂದು ದಿನ ನಮ್ಮ ಮನೆಯ ಹತ್ತಿರವಿರುವ ಲಿಂಗಾಂಬುಧಿ ಪಾರ್ಕಿನಲ್ಲಿ 24 ಕಿ.ಮೀ.ಗಳಷ್ಟು ವಾಕಿಂಗ್ ಮಾಡಿದ್ದಾಯಿತು.ಮಧ್ಯದಲ್ಲೊಂದು ಬ್ರೇಕ್. ನನ್ನವರು ಫ್ಲಾಸ್ಕಿನಲ್ಲಿ ಬಿಸಿ ಬಿಸಿ ಕಾಫಿ,ಬ್ರೆಡ್ಡುಗಳನ್ನು ತಂದುಕೊಟ್ಟು ಪ್ರೋತ್ಸಾಹ ನೀಡಿದರು.

ಒಂದು ಶನಿವಾರ ಸೊಸೆ¸  ಮಗನೊಂದಿಗೆ ಬಂದು, ಟ್ರಾವಲ್ಸ್ ನವರು ಕೊಟ್ಟಿದ್ದ ವಿವರಗಳಲ್ಲಿ ಬರೆದಿದ್ದ, ಎಲ್ಲಾ ವಸ್ತುಗಳನ್ನೂ ತನ್ನ ಕಡೆಯಿಂದ ಕೊಡಿಸುವುದಾಗಿ, ನನಗೆ ಒಂದಿನಿತೂ ಸಂಕೋಚವಾಗದಂತೆ ತಿಳಿಸಿ, ಡೆಕತ್ಲಾನ್ ಅಂಗಡಿಗೆ ಕರೆದೊಯ್ದು, ಬೆಚ್ಛಗಿರುವ, ವಾಟರ್ ಫ್ರೂಫ್ ಪ್ಯಾಂಟುಗಳು, ವಾಟರ್ ಫ್ರೂಫ್ ಶೂಗಳು, ಉಲ್ಲನ್ ಸಾಕ್ಸಗಳು, ಮಂಕಿ ಕ್ಯಾಪ್, ಜರ್ಕಿನ್, ಬೇಗ ಒಣಗುವಂತಹ ಟವಲ್ ಮತ್ತು ಕೈ ಚೌಕಗಳು, ಬಾಯಿಗೆ, ಮೂಗಿಗೆ ಧೂಳು ಹೋಗದಂತೆ ಧರಿಸಲು ಮಾಸ್ಕ,
ಕೈಗವಸುಗಳು, ಆಮ್ಲಜನಕದ ಕೊರತೆಯುಂಟಾದಾಗ ಆಘ್ರಾಣಿಸಲು ದೊಡ್ಡ ದೊಡ್ಡ ಕರ್ಪೂರದ ಬಿಲ್ಲೆಗಳು. . . ಅಯ್ಯೋ, ಒಂದೇ,ಎರಡೇ, ಇನ್ನೂ ಹಲವಾರು ವಸ್ತುಗಳನ್ನು ತೆಗೆಸಿಕೊಟ್ಟು, ಮಿಕ್ಕವುಗಳನ್ನು ತಾನು ಲಿಸ್ಟ್‌ ಮಾಡಿಕೊಂಡಿರುವುದಾಗಿಯೂ, ನಾವುಗಳು ಹೊರಡುವಷ್ಟರಲ್ಲಿ ತಂದಿಡುವುದಾಗಿಯೂ
ತಿಳಿಸಿ ಬೆಂಗಳೂರ ಕಡೆ ಪ್ರಯಾಣ ಬೆಳೆಸಿದಳು.

ಎಲ್ಲರ ಸಹಕಾರಕ್ಕೆ ಮನ ತುಂಬಿ ಬರುತ್ತಿತ್ತಾದರೂ, ಮನದಲ್ಲಿ ಆಗಾಗ್ಗೆ ಆತಂಕ ಮೂಡುತ್ತಿತ್ತು. ಆದರೆ ಇವೆಲ್ಲವುಗಳ ಫಲಶ್ರುತಿಯೋ ಎಂಬಂತೆ ಇಂದಿಲ್ಲಿ ಬಂದು ಮಲಗಿದ್ದೇನೆ. ನಾಳೆಯಿಂದ ನಮ್ಮ ಯಾತ್ರೆ ನಿಜ ಅರ್ಥದಲ್ಲಿ ಪ್ರಾರಂಭವಾಗಲಿದೆ ಎಂದು ಯೋಚಿಸುವಾಗ ನಿಜಕ್ಕೂ ಮನ ರೋಮಾಂಚನಗೊಳ್ಳುತ್ತಿದೆ. ದೇವರ ಸ್ಮರಣೆಯೊಂದಿಗೆ ನಿದ್ರಿಸೋಣ, ಬೆಳಗ್ಗೆ ಬೇಗ ಏಳ ಬೇಕು, ಅಂದುಕೊಳ್ಳುತ್ತಲೇ ನಿದ್ರಾ ದೇವಿಯ ಮೋಡಿಗೆ ಯಾವಾಗ ಒಳಗಾದೆನೋ ತಿಳಿಯಲೇ ಇಲ್ಲ.

(ಮುಂದುವರಿಯುವುದು)

-ಪದ್ಮಾ ಆನಂದ್

6 Responses

  1. ನಾಗರತ್ನ ಬಿ. ಅರ್. says:

    ಹಿಮಗಿರಿಯ ಹಂದರದಲ್ಲಿಈಗ ತಾನೇ ಪ್ರವಾಸದ ಬಳ್ಳಿಹಬ್ಬಿಸಿ ಕೂತೂಹಲ ಕೆರಳಿಸಿದ್ದೀರಾ ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ ಗೆಳತಿ.

  2. ನಯನ ಬಜಕೂಡ್ಲು says:

    ನಿಮ್ಮ ಉತ್ಸಾಹಕ್ಕೊಂದು ಸಲಾಂ. ಮುಂದಿನ ಕಂತಿಗೆ ಕಾಯುತ್ತಿದ್ದೇನೆ.

  3. . ಶಂಕರಿ ಶರ್ಮ says:

    ಪ್ರವಾಸದ ಪ್ರಾರಂಭವೇ ಕುತೂಹಲ ಹುಟ್ಟಿಸಿದೆ. ತಮ್ಮ ಉತ್ಸಾಹವನ್ನು ಮೆಚ್ಚಲೇಬೇಕು. ಸೊಗಸಾದ ನಿರೂಪಣೆ.

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: