ಆಕಾಶ ಮಲ್ಲಿಗೆ..

Share Button

ಹೌದು. ಮನವೆಂಬುದು ಅದೆಷ್ಪೋ ಲಕ್ಷ GBಗಿಂತ ಶಕ್ತಿಯುತ ಚಿಪ್. ಅಂತರಾಳದ ಪದರ ಪದರಗಳಲ್ಲಿ ಅಸಂಖ್ಯಾತ ನೆನಪಿನಲೆಗಳೇಳುತ್ತಲೇ ಇರುತ್ತವೆˌ ಈ ಭರತಕ್ಕೆ ಹುಣ್ಣಿಮೆ ಅಮಾವಾಸ್ಯೆಗಳ ಹಂಗಿಲ್ಲ. ಅವಿರತ ನಿರಂತರ ಅನಂತ. ಎಂದೋ ಎಲ್ಲೋ ಆದ ಅನುಭವದ ನೆನಹು ಇನ್ನೆಂದೋ ಇನ್ನೆಲ್ಲೋ ಧುತ್ತನೆ ಮನದಂಗಳದಲಿ ಪ್ರತ್ಯಕ್ಷ.ಕವಿವಾಣಿ ನುಡಿದಂತೆ “ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮಜಲದಾ ತಂಪು” ಇಂದಿಗೂ ತಾಜಾ ತಾಜಾ ಹಸಿ ಹಸಿ. ಇವತ್ತು ಬರೆಯಹೊರಟಿರುವ ವಿಷಯ ತುಂಬಾ ದಿನದಿಂದ ಮನದಲ್ಲಿತ್ತು. ಮುಂದೂಡೂತ್ತಲೇ  ಇದ್ದೆ. ಇನ್ನೂ ಬರೆಯದಿರಲು ಸಾಧ್ಯವೇ ಆಗಲಿಲ್ಲ. ಹಾಗಾಗಿ ಈಗ ನಿಮ್ಮ ಮುಂದೆ ನನ್ನ ಅಂತರಂಗದಲೆಯ ನರ್ತನ.

ಮನೆಯ ಬಳಿಯೇ  ಉದ್ಯಾನವಿದ್ದರೂ ರಿಂಗ್ ರಸ್ತೆಯಲ್ಲಿ ಗೆಳತಿಯೊಡನೆ ನಡೆದಿತ್ತು ನನ್ನ ಮುಂಜಾವಿನ ವಾಯುವಿಹಾರ. ಗೆಳತಿ ಬೆಂಗಳೂರಿಗೆ ಶಿಫ್ಟ್  ಆದ್ದರಿಂದ ಒಬ್ಬಳೇ ತಾನೇ ಇನ್ನು ಮುಂದೆ ಉದ್ಯಾನವನಕ್ಕೇ ಹೋಗೋಣ ಎಂದು ನಿರ್ಧರಿಸಿದೆ. ಸರಿ ಆ ಬೆಳಿಗ್ಗೆ ಹೊರಟಿತು ನನ್ನ ಸವಾರಿ.ಹಿಂದಿನ ರಾತ್ರಿ ಜೋರಾಗಿ ಮಳೆ ಗಾಳಿ ಬಂದ ಕಾರಣ ವಾತಾವರಣವೆಲ್ಲಾ ತಂಪು ತಂಪು ಹಾಯಿ ಹಾಯಿ. ಗೇಟಿನ ಬಳಿ ಹೋಗುತ್ತಿದ್ದಂತೆ ತಡೆದು ನಿಲ್ಲಿಸಿತು  ಆ ಕಂಪು. ಏನೋ ಪರಿಚಿತ ಅನ್ನಿಸ್ತಿದೆ ಆದರೆ ನಿಖರವಾಗಿ ಗೊತ್ತಾಗ್ತಾಯಿಲ್ಲ.ಒಂದು ಕ್ಷಣ ನೆನಪಿಸಿಕೊಂಡ ನಂತರ ಯಾವುದೋ ಹೂವಿನದು ಅನ್ನಿಸಿತು.ಮೆದುಳಿಗೆ ಮತ್ತಷ್ಟು ಕೆಲಸ ಕೊಡುವಷ್ಟರಲ್ಲಿ ಕಣ್ಣಿಗೆ ಬಿತ್ತು ಆಕಾಶಮಲ್ಲಿಗೆಯ ಮರ. ತಕ್ಷಣ ಹೊಳೆಯಿತು ಅದು ಆಕಾಶಮಲ್ಲಿಗೆ ಹೂವಿನ ನರುಗಂಪು ಎಂದು. ಈ ಸುಗಂಧದ ಬಂಧ ಬಾಲ್ಯದ ನಂಟು. ಚಿಂತಾಮಣಿಯಲ್ಲಿ ಮುಖ್ಯರಸ್ತೆಯಲ್ಲಿ ಬಸ್ ಇಳಿದಾಗಿನಿಂದ ಅಜ್ಜಿಮನೆಯ ದಾರಿಯುದ್ದಕ್ಕೂ ಮತ್ತು ಅಲ್ಲಿದ್ದ ಪಾರ್ಕಿನಲ್ಲೂ ಇವೇ ಮರಗಳು. ಸಾಮಾನ್ಯವಾಗಿ ನಾವು ಹೋಗುತ್ತಿದ್ದುದು ಏಪ್ರಿಲ್ ಮೇ ತಿಂಗಳಾದ್ದರಿಂದ ಮರತುಂಬಾ ನಕ್ಷತ್ರದಂತಹ ಹೂಗಳುˌ! ಬೆಳಿಗ್ಗೆ ರಸ್ತೆಯಿಡೀ ಬಿದ್ದಿರುತ್ತಿದ್ದವು. ನೋಡಲು ಥೇಟ್ ಸುಗಂಧರಾಜದಂತೆಯೇ! ಅದರೆ ಅಷ್ಟು ತೀಕ್ಷ್ಣ ಪರಿಮಳವಿಲ್ಲ. ದೇವರ ಪೂಜೆಗೆ ಅರ್ಹವಿಲ್ಲ ಅಂತಿದ್ರು ದೊಡ್ಡವರು. ಬೆಳಗಿನ ಕಾಫಿಯ ರೌಂಡಾದ ನಂತರ ಸ್ನಾನಕ್ಕೆ ದೊಡ್ಡವರ ಕ್ಯೂ ಇರುತ್ತಿದ್ದುದರಿಂದ ನಾವು ನಾಲ್ಕೈದು ಜನ 1 ರೌಂಡ್ ಹೊರಡುತ್ತಿದ್ದೆವು . ತುಳಿತಕ್ಕೆ ಸಿಗದೆ ಪಕ್ಕದಲ್ಲಿ ಬಿದ್ದ  ಹೂವುಗಳನ್ನು ಆರಿಸಿ ತೊಟ್ಟ ಲಂಗಗಳಲ್ಲಿ ಉಡಿ ತುಂಬಿಸಿಕೊಂಡು ತರುತ್ತಿದ್ದೆವು. ಆ ನಂತರ ರಂಗವಲ್ಲಿ ಚಿತ್ತಾರ ಮಾಡಿಯೋ ಮಾಲೆಯೋ ಕಟ್ಟುತ್ತಿದ್ದೆವು. ದೇಟು (ತೊಟ್ಟು) ಉದ್ದವಾದ್ದುದರಿಂದ ಹೊಸದಾಗಿ ಹೂ ಕಟ್ಟಲು ಕಲಿಯುವವರಿಗೆ ಸುಲಭ ಆಗುತ್ತಿತ್ತು..ನನ್ನ ಕಸಿನ್ ಗಳು ಸುಮಾರು ಜನ ಈ ಹೂವಿನಿಂದಲೇ ಕಟ್ಟುವುದನ್ನು ಕಲಿತರು. ಬೇರೆ ಬೇರೆ ರೀತಿಯ ದಂಡೆ ತೋಮಾಲೆ ಇವುಗಳನ್ನು ಕಟ್ಟಲು ನಾನು ಕಲಿತದ್ದೂ ಆಕಾಶಮಲ್ಲಿಗೆ ಹೂವನ್ನು ಕಟ್ಟಿಯೇ.. ..ಅಜ್ಜಿಯ ಮನೆಯ ಬೇಸಿಗೆಯ ರಜೆಯ ಮಜಾವನ್ನು ಮೊಗೆದುಕೊಡುವ , ಅಜ್ಜಿಮನೆ ಎಂದ ತಕ್ಷಣ ನೆನಪಿಗೆ ಬರುತ್ತಿರುತ್ತದೆ ಈ ಹೂವಿನ ವಿಷಯ.

ಅಜ್ಜಿ ತಾತಂದಿರ ಪ್ರೀತಿಯ, ಸೋದರ ಮಾವ ಅತ್ತೆಯರ ವಾತ್ಸಲ್ಯ, ರಜೆಗೆಂದೇ ಬರುತ್ತಿದ್ದ ಚಿಕ್ಕಮ್ಮ  ದೊಡ್ಡಮ್ಮಂದಿರ ಅವರ ಮಕ್ಕಳು ನಿಜಕ್ಕೂ ಅವು ಚಿನ್ನದ ದಿನಗಳೇ . ಯಾವ ಬೇಸಿಗೆ ಶಿಬಿರಗಳು ಅಜ್ಜಿ ಮನೆಯ ವಾಸ್ತವ್ಯದ ಸುಖವನ್ನು ಕಟ್ಟಿಕೊಡಲು ಸಾಧ್ಯ?

ಆಕಾಶ ಮಲ್ಲಿಗೆ

ನಂತರದ ದಿನಗಳಲ್ಲಿ ಅದರ ಒಡನಾಟವೇ ಇಲ್ಲ.ˌದಾರಿಯಲ್ಲಿ ವಾಹನಗಳಲ್ಲಿ ಹೋಗುವಾಗ ರಸ್ತೆ ಬದಿಯಲ್ಲಿ ಬಿದ್ದ ಹೂ ಕಂಡರೂ ಸುವಾಸನೆಯನ್ನು ಆಘ್ರಾಣಿಸಲಾಗಲೀ ಆಯ್ದುಕೊಳ್ಳುವುದಕ್ಕೇ ಆಗಲಿ ಮನಸೂ ಬಂದಿರಲಿಲ್ಲ ಸಮಯವೂ ಕೂಡಿಬಂದಿರಲಿಲ್ಲ.  ಹಾಂ! “ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ” ಹಾಡು ಕೇಳಿದಾಗಲೆಲ್ಲಾ ಈ ನೆನಪು ಸುಳಿದು ಹೋಗುತ್ತಿದ್ದುದು ಉಂಟು. 35_40 ವರ್ಷಗಳ ಹಿಂದೆ ಆಘ್ರಾಣಿಸಿದ ಆ ಕಂಪು ಇನ್ನೂ ಮನದಲ್ಲಿ ಉಳಿದಿದೆಯೆಂದರೆ ಮಾನವನ ಮಿದುಳು ಚಮತ್ಕಾರವಲ್ಲದೇ ಇನ್ನೇನು?

ಆಗತಾನೇ ಬಿದ್ದಿದ್ದ ಕಾಲ್ತುಳಿತಕ್ಕೆ ಸಿಕ್ಕದ ಹೂಗಳನ್ನು ಆರಿಸಿಕೊಂಡೆ.  ಕೆಲವರು ವಿಚಿತ್ರವಾಗಿ ನೋಡುತ್ತಾ ಹೋದದ್ದೂ ಉಂಟು ಪೂಜೆಗೂ ಬೇಡದ ನೆಲಕ್ಕೆ ಬಿದ್ದ ಹೂವನ್ನು ಏಕಪ್ಪಾ ಆರಿಸಿಕೊಳ್ಳುತ್ತಿದ್ದಾರೆ ಈಕೆ ಎಂದುಕೊಂಡಿರಬಹುದು.  ಫೋಟೋ ತೆಗೆದು ಹೂದಾನಿಯಲ್ಲಿಟ್ಟೆ. 3_4 ದಿನಗಳವರೆಗೂ ಬಾಡದೆ ಮನೆಯೆಲ್ಲಾ ಆ ಮಂದ್ರ ಪರಿಮಳ ಆವರಿಸಿತ್ತು ಅಂತೇ ಮನದ ತುಂಬಾ ಕಳೆದ ಆ ಬಾಲ್ಯದ ದಿನಗಳ ಮೆಲುಕೂ!

ಜೀವನವೇ ಹೀಗೇ….. ಬಾಳ ಕಡಲಿನಲಿ ನೆನಪಿನ ಹಾಯಿದೋಣಿಯ ಯಾನ.  ಒಂದೊಂದು ವಸ್ತು ಊಟ ತಿಂಡಿ ಒಂದೊಂದು ನೆನಪು ತರುತ್ತದೆ ಒಂದೊಂದು ರೀತಿಯ ಸ್ಮರಣೆಗೆ ಜಾರಿಸುತ್ತದೆ . ಕಳೆದ ದಿನಗಳ ನೆನಪು ಮುಗುಳು ನಗೆ ತರಿಸುತ್ತದೆ ಅಂದು ನಮ್ಮೊಂದಿಗಿದ್ದವರು ಇಂದಿಲ್ಲವೆಂದಾಗ ನನಗೇ ಅರಿವಿಲ್ಲದಂತೆ ಕಂಬನಿ ಕೆನ್ನೆಗುಂಟ ಇಳಿಯುತ್ತದೆ.

ಸುಜಾತಾ

7 Responses

  1. Anonymous says:

    ಪ್ರಕಟಿಸಿದ್ದಕ್ಕಾಗಿ ಸಂಪಾದಕಿಯವರಿಗೆ ಅನಂತ ಧನ್ಯವಾದಗಳು.

    ಸುಜಾತಾ ರವೀಶ್

  2. ನಾಗರತ್ನ ಬಿ. ಅರ್. says:

    ಆಕಾಶ ಮಲ್ಲಿಗೆಯ ಸುತ್ತ ತಮ್ಮ ನೆನಪುಗಳನ್ನು ಹಂಚಿಕೊಂಡಿರುವ ಲೇಖನ ಸರಳ ಸುಂದರ ವಾಗಿದೆ ಮೇಡಂ.

  3. ಕೆ. ರಮೇಶ್ says:

    ಸುಂದರ ಅನುಭವ ಗಳ ಮೆಲುಕಿನ ಲೇಖನ.

  4. ನಯನ ಬಜಕೂಡ್ಲು says:

    Beautiful

  5. . ಶಂಕರಿ ಶರ್ಮ says:

    ಸುಂದರ ನೆನಪುಗಳ ಚಂದದ ಚಿತ್ತಾರ! ಹೌದು… ಸಿಹಿಯಾದ ಬಾಲ್ಯದ ನೆನಪುಗಳೆಂದರೆ ಯಾವಾಗಲೂ ಮನಸ್ಸು ಮಲ್ಲಿಗೆಯಂತೆ ಅರಳುತ್ತದೆ. ಬಹಳ ಅತ್ಮೀಯವಾದ ಸೊಗಸಾದ ಲೇಖನ.. ಧನ್ಯವಾದಗಳು ಸುಜಾತಾ ಮೇಡಂ ಅವರಿಗೆ.

  6. padmini says:

    ನೆನಪುಗಳ ಚಂದದ ಚಿತ್ತಾರ

  7. Padma Anand says:

    ಲೇಖನದಲ್ಲಿ ಹೂವಿನ ಪರಿಮಳದೊಂದಿಗೆ ಬಾಳಿನಲ್ಲಿ ನೆನಪುಗಳ ಪ್ರಾಮುಖ್ಯತೆಯನ್ನೂ ಸೊಗಸಾಗಿ ಚಿತ್ರಿಸಿದ್ದೀರಿ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: