ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 5

Share Button

ಮುಂದಿನ ಭೇಟಿ ಅರಶಿಯಾಮಕ್ಕೆ ಆಗಿತ್ತು. ಅರಶಿಯಾಮ ಎನ್ನುವ ದೊಡ್ಡ ಬೆಟ್ಟವಿದೆ. ಅರಶಿ ಎಂದರೆ ಜಪಾನಿ ಭಾಷೆಯಲ್ಲಿ ಬಿರುಗಾಳಿ. ಯಾಮ ಎಂದರೆ ಬೆಟ್ಟ ಅಥವಾ ಪರ್ವತ. ಅರಶಿಯಾಮ ಬಹಳ ದೊಡ್ಡ ಸ್ಥಳ. ಇಲ್ಲಿ ಹೋದೊಡನೆಯೇ ನಮಗೆ ಒಂದು ಸೇತುವೆ ಕಾಣಿಸುತ್ತದೆ. ಇದರ ಹೆಸರು ‘ಚಂದ್ರ ಹಾಯುವ ಸೇತುವೆ’ ಅಥವಾ ಮೂನ್ ಕ್ರಾಸಿಂಗ್ ಬ್ರಿಡ್ಜ್. ಜಪಾನೀಯರು ಟೊಗೆಟ್ಸು ಕ್ಯೊ ಸೇತುವೆ ಎಂದು ಕರೆಯುತ್ತಾರೆ.


ನಾವು ಸೇತುವೆಯನ್ನು ದಾಟಿ ಮುಂದಕ್ಕೆ ತೆನ್‌ರಿಯು-ಜಿ ಮಂದಿರಕ್ಕೆ ಹೋದೆವು. ಇದರ ಸುತ್ತ ಸುಂದರ ಜೆನ್ ತೋಟ ಇತ್ತು. ಇದು ಜಪಾನಿನಲ್ಲೇ ಅತ್ಯಂತ ಹಳೆಯದು. ಅಂದರೆ ೧೪ನೇ ಶತಮಾನದ್ದು. ಅಲ್ಲಲ್ಲೇ ಸುಂದರ ಮರಗಳು, ಕಲ್ಲು ಬಂಡೆಗಳು, ಬೋನ್ಸಾಯ್‌ಗಳು ಮತ್ತು ತಿಳಿನೀರಿನ ಕೊಳ ಇದ್ದುವು. ಕಡುರೋಜಾ ಬಣ್ಣದ ಹೂಗಳು, ಆಕಾಶದ ಮೋಡದಂತೆ ಬಿಳಿಯ ಹೂಗಳು, ಮಂದಾನಿಲದಂತೆ ತಿಳಿಯ ರೋಜಾ ಹೂಗಳು ನಮ್ಮನ್ನು ಮುದಗೊಳಿಸಿದವು. ಎಲ್ಲರೂ ಕ್ಲಿಕ್‌ಕ್ಲಿಕ್ ಮಾಡಿದ್ದೇ ಮಾಡಿದ್ದು. ಚೆರ್ರಿ ಮರಗಳೂ ಹೂ ಬಿಟ್ಟಿದ್ದುವು. ತೆನ್‌ರಿಯು-ಜಿ ಜೆನ್ ಮಂದಿರ ಇಲ್ಲಿ ಜ಼ೆನ್ ಗುರುತಿನ ವಿಗ್ರಹ ಇದೆ. ಬಹಳ ಪವಿತ್ರ ಸ್ಥಾನ. ಇಲ್ಲಿ ಪವಿತ್ರ ಕೂರ್ಮ ಇದೆ. ಬಂದವರು ಮೇಣದ ಬತ್ತಿ ಹಚ್ಚಿಟ್ಟು ಪ್ರಾರ್ಥನೆ ಹರಕೆ ಸಲ್ಲಿಸಬಹುದು. ಬತ್ತಿಗಳನ್ನಿಡಲು ನಿಲುಗಡೆ ಇದೆ. ದೇವಾಲಯ ಮರದಿಂದ ಕಟ್ಟಿದೆ. ಅನೇಕ ಬಾರಿ ತೆನ್‌ರಿಯು- ಜಿ ಮಂದಿರ ಅಗ್ನಿ ಅವಘಡಕ್ಕೆ ಒಳಗಾಗಿದೆ, ಈಗ ಇರುವ ಕಟ್ಟಡಗಳು ಮೀಜಿ ಕಾಲದಲ್ಲಿ ನಿರ್ಮಾಣವಾಗಿವೆ. (1868-1912). ಜೆನ್ ತೋಟವನ್ನು ಸೊಗೆಂಚಿ ಎಂದು ಕರೆಯುತ್ತಾರೆ. ಇದೊಂದು ವಿಶ್ವಪಾರಂಪರಿಕ ತಾಣ.


ನಮ್ಮ ಭೇಟಿ ಈಗ ಅರಶಿಯಾಮ ಬೊಂಬಿನ ತೋಪು ಆಗಿತ್ತು. ನಮ್ಮ ಊರಿನಲ್ಲಿ ಮಾವಿನ ತೋಪು ಎಂದು ಕೇಳಿದ್ದೇವೆ. ಆದರೆ ಜಪಾನಿನಲ್ಲಿ ಈ ಬೊಂಬಿನ ತೋಪು ಬಹಳ ಪ್ರಸಿದ್ಧಿ. ಬೊಂಬಿನ ತೋಪಿನ ಹತ್ತಿರ ನೀವು ಹೋಗುತ್ತೀರ. ಮುಂದಕ್ಕೆ ನಿಮಗೆ ಕಾಣುವುದು ಬರಿಯ ಬೊಂಬು ಬೊಂಬು ಬೊಂಬು! ಗಗನಕ್ಕೆ ಚಾಚಿರುವ ತಿಳಿಹಸುರಿನ ಎಳೆಯದಾಗಿ ಕಾಣುವ ಒತ್ತೊತ್ತಾಗಿ ಬೆಳೆದಿರುವ ಬೊಂಬುಗಳು. ಆಕಾಶವನ್ನು ಮುಟ್ಟಲು ಪ್ರಯತ್ನ ಮಾಡುತ್ತಿವೆ ಎನ್ನಿಸಿತು. ಮಧ್ಯದಲ್ಲಿ ನಡೆಯಲು ಉದ್ದದ ರಸ್ತೆ ಮಾಡಿದ್ದಾರೆ. ನಿಮ್ಮ ಕೈಲಾದಷ್ಟು ದೂರ ನಡೆಯಬಹುದು. ಜನದ ಜಾತ್ರೆಯೇ ನೆರೆದಿತ್ತು. ಬಹಳ ಸಣ್ಣ, ಸಪೂರವಾಗಿರುವ ರೂಪದರ್ಶಿಯಂತೆ ಇವೆ ಈ ಬೊಂಬುಗಳು. ಇವುಗಳಲ್ಲಿ ಮುಳ್ಳು ಕಾಣಲಿಲ್ಲ. ಬಣ್ಣ ತಿಳಿಹಸುರು. ಕಣ್ಣಿಗೆ ಹಿತವಾಗಿತ್ತು. ಒಂದೊಂದೂ ಮೂವತ್ತು ಅಡಿಗಿಂತ ಎತ್ತರದಲ್ಲಿತ್ತು.

ತೋಪಿನಲ್ಲಿ ಮೌನ ಮನೆಮಾಡಿತ್ತು. ಆದರೆ ಮಧ್ಯದ ರಸ್ತೆಯಲ್ಲಿ ಜನ ಮಾತಾಡುತ್ತಿತ್ತು. ಎಲ್ಲರ ಮುಖದಲ್ಲಿಯೂ ಆಶ್ಚರ್ಯ ಕಾಣುತ್ತಿತ್ತು. ಕೆಲವರು ಅರಶಿಯಾಮದ ಅಂಗಡಿಗಳಲ್ಲಿ ಬಾಡಿಗೆಗೆ ಸಿಕ್ಕುವ ಕಿಮೋನೋ ಹಾಕಿಕೊಂಡು ಚಿತ್ರ ತೆಗೆಸಿಕೊಳ್ಳುತ್ತಿದ್ದರು. ಕಿಮೋನೋ ಜಪಾನಿ ಹೆಂಗಸರ ಸಾಂಸ್ಕೃತಿಕ ಉಡುಗೆ. ಇದನ್ನು ತೊಡುವುದೂ, ನಡೆಯುವುದೂ ಮತ್ತು ಧರಿಸಿರುವುದು ಅಷ್ಟು ಸುಲಭವಲ್ಲ. ನಮ್ಮ ಒಬ್ಬ ಜಪಾನಿ ಗೈಡ್ ಹೇಳಿದ್ದು ಹೀಗೆ. ಈಗ ಯಾರೂ ಕಿಮೋನೋ ಧರಿಸುವುದಿಲ್ಲ. ನಾನು ನನ್ನ ಘಟಿಕೋತ್ಸವಕ್ಕೆ ಮತ್ತು ಮದುವೆಗೆ ಮಾತ್ರ ಕಿಮೋನೋ ಧರಿಸಿದ್ದೇನೆ. ಕಿಮೋನೋ ಬೆಲೆ ಬಹಳ ದುಬಾರಿ. ಈಗ ಎಲ್ಲರೂ ದಿನನಿತ್ಯದ ವ್ಯವಹಾರಕ್ಕೆ ಪ್ಯಾಂಟು ಮತ್ತು ಷರ್ಟ್ ಧರಿಸುತ್ತಾರೆ. ಅಂತೂ ಬೊಂಬಿನ ತೋಪನ್ನು ನೋಡಿ ಅಚ್ಚರಿಪಟ್ಟು ಅದರೊಟ್ಟಿಗೆ ಫೋಟೋ ಕ್ಲಿಕ್ಕಿಸಿ ಮರಳಿ ನಮ್ಮ ಬಸ್ಸಿನ ಹತ್ತಿರ ಬಂದೆವು.

ಬಸ್ಸಿನ ಹತ್ತಿರ ಬಂದಾಗ ಒಬ್ಬರು ಬಂದಿರಲಿಲ್ಲ. ಆಗ ಡ್ರೈವರ್ ಮತ್ತು ನಮ್ಮ ಮಾರ್ಗದರ್ಶಿ ಇಬ್ಬರ ಮುಖವನ್ನು ನೋಡಿದರೆ ಬಹಳ ಕಷ್ಟ ಮತ್ತು ಯೋಚನೆಯಲ್ಲಿದ್ದಂತೆ ಕಾಣಿಸಿತು. ಇಬ್ಬರೂ ಚಡಪಡಿಸುತ್ತಿದ್ದರು. ಬೇರೆಯವರು ಬಸ್ಸಿನೊಳಗೆ ಆರಾಮಾಗಿ ಕುಳಿತಿದ್ದರು. ಜಪಾನೀಯರು ಒಂದು ನಿಮಿಷವೂ ಎಲ್ಲೂ ತಡ ಮಾಡುವುದಿಲ್ಲ. ಇನ್ನು ಹತ್ತು ನಿಮಿಷ ತಡ ಎಂದರೆ ಅವರಿಗೆ ಹತ್ತು ಗಂಟೆಗಳಂತೆ ಅನ್ನಿಸಬಹುದು. ಬುಲೆಟ್ ರೈಲು ಒಂದೆರಡು ನಿಮಿಷ ತಡವಾದರೆ ಡ್ರೈವರ್ ಕ್ಷಮೆ ಕೇಳುವ ದೇಶ ಇದು! ಐದು ನಿಮಿಡ ತಡವಾದರೆ ಕಚೇರಿಯಲ್ಲಿ ತೋರಿಸಲು ಪತ್ರ ನೀಡುತ್ತಾರೆ! ಒಟ್ಟಿನಲ್ಲಿ ತಡಮಾಡಿದವರು ಬಂದರು. ಅವರೊಬ್ಬ ಯುವಕ! ಇದು ಯುವಜನತೆಯಲ್ಲಿ ಜಾಸ್ತಿಯಾಗುತ್ತಿದೆ ಎಂದು ನನ್ನ ಅಭಿಪ್ರಾಯ. ಬಸ್ಸಿನಲ್ಲಿ ಕುಳಿತಿದ್ದವರು ಹಿರಿಯ ನಾಗರಿಕರು. ಅವರೇ ಸಮಯ ಪಾಲನೆ ಮಾಡಿದ್ದರು. ಸಮಯದ ಶಿಸ್ತು ಇಲ್ಲದ ದೇಶ ಮುಂದೆ ಬರುವುದು ಕಷ್ಟ ಅಲ್ಲವೇ?

ಅರಶಿಯಾಮ ಬೊಂಬಿನ ತೋಪು

ಬೊಂಬಿನ ಕಾಡಿನಿಂದ ಮತ್ತೆ ಕ್ಯೂಟೋ ನಗರಕ್ಕೆ ಬಂದೆವು. ಮಧ್ಯಾಹ್ನದ ಊಟ ‘ತಿಲಗ’ ಹೋಟೆಲಿನಲ್ಲಿತ್ತು. ಅಪ್ಪಟ ದಕ್ಷಿಣ ಭಾರತದ ಶೈಲಿಯ ಊಟ. ಬಿಸಿಬಿಸಿಯಾಗಿ ಮೆಣಸಿನ ತಿಳಿಸಾರು. ಮಜ್ಜಿಗೆ ಹುಳಿಗೆ ಬೆಂಡೆಕಾಯಿ ಹಾಕಿತ್ತು. ಜೊತೆಗೆ ಕೂಟು ಬೇರೆ ಇತ್ತು. ಚಪ್ಪರಿಸಲು ಹಪ್ಪಳ, ಉಪ್ಪಿನಕಾಯಿ. ಮೃದುವಾದ ನಾನ್ ಕೂಡ ಮಾಡಿದ್ದರು. ಎಲ್ಲರೂ ತೃಪ್ತಿಯಿಂದ ಊಟ ಮಾಡಿದರು. ಬೊಂಬಿನ ಕಾಡಿನಲ್ಲಿ ನಡೆದು ಎಲ್ಲರಿಗೂ ಜೋರು ಹಸಿವಾಗಿತ್ತು. ಊಟ ಎಲ್ಲರಿಗೂ ರುಚಿಸಿತು. ಹೊರಗೆ ಮೋಡದ ವಾತಾವರಣ ಇದ್ದದ್ದು ಒಳಗೆ ಕುಳಿತು ಬಿಸಿಬಿಸಿ ಮೆಣಸಿನ ಸಾರನ್ನು ಕುಡಿಯಲು ಪ್ರೇರೇಪಿಸಿತು.

ಮತ್ತೆ ಇನ್ನೊಂದು ಬುದ್ಧನ ದೇವಾಲಯಕ್ಕೆ ಊಟದ ನಂತರ ಹೊರಟೆವು. ಇದರ ಹೆಸರು ಸಂಜುಸಾಂಗೆನ್-ಡೊ. ಇಲ್ಲಿ 1001 ಬುದ್ಧನ ವಿಗ್ರಹಗಳಿವೆ. ಇವಕ್ಕೆ ‘ಕನ್ನೊನ್’ ಎಂದು ಹೆಸರು. ಒಂದು ಬಹಳ ದೊಡ್ಡದಾಗಿದ್ದು, ಕುಳಿತಿರುವ ವಿಗ್ರಹ, ಮಿಕ್ಕವು ನಿಂತ ಭಂಗಿಯಲ್ಲಿವೆ. ಈ ದೇವಾಲಯವನ್ನು ರಾಷ್ಟ್ರೀಯ ನಿಧಿ ಎಂದು ಸರ್ಕಾರ ಪರಿಗಣಿಸುತ್ತದೆ. ಈ ವಿಗ್ರಹಗಳು ಜಪಾನಿ ಸೈಪ್ರಸ್ ಮರದಿಂದ ಕೆತ್ತಲಾಗಿದೆ. ನಿಂತಿರುವ ವಿಗ್ರಹಗಳು ಸಾಲುಸಾಲಾಗಿದ್ದು ಸೈನಿಕರನ್ನು ನೆನಪಿಗೆ ತರುತ್ತದೆ. ಆದರೆ ಎಲ್ಲವೂ ಸುಂದರ ಶಾಂತ ಮೂರ್ತಿಗಳು. ಹನ್ನೆರಡನೆಯ ಶತಮಾನದಲ್ಲಿ ಈ ದೇವಾಲಯವನ್ನು ಕಟ್ಟಲಾಯಿತು. ಆಗ 124 ವಿಗ್ರಹಗಳನ್ನು ಮಾಡಲಾಯಿತು. ಇನ್ನುಳಿದ 876 ವಿಗ್ರಹಗಳನ್ನು ಹದಿಮೂರನೆಯ ಶತಮಾನದಲ್ಲಿ ನವೀಕರಣಗೊಳಿಸುವಾಗ ಮಾಡಲಾಯಿತು.

ದೇವಾಲಯದ ಪ್ರಾಂಗಣದ ಎರಡು ಕಡೆ ವರುಣ ಮತ್ತು ವಾಯುವಿನ ಮೂರ್ತಿಗಳಿವೆ. ಇವು ಮೋಡಗಳ ಮೇಲೆ ನಿಂತಿರುವಂತಿದೆ. ನೋಡಲು ಸೌಮ್ಯವಾಗಿಲ್ಲ, ಭಯ ಹುಟ್ಟಿಸುವಂತಿದೆ. ಹಿಂದಿನ ಕಾಲದಲ್ಲಿ ಮಾನವ ಇವುಗಳಿಗೆ ಹೆದರುತ್ತಿದ್ದುದನ್ನು ಹೀಗೆ ತೋರಿಸಿದ್ದಾರೆ. ಹಿಂದೆ ಇವುಗಳನ್ನು ಪೂಜಿಸುತ್ತಿದ್ದರು. ಸಾವಿರದೊಂದು ವಿಗ್ರಹಗಳ ಮುಂದೆ ರಕ್ಷಣೆ ನೀಡಲು ಇಪ್ಪತ್ತೆಂಟು ಈ ರೀತಿಯ ವಿಗ್ರಹಗಳನ್ನು ಇಟ್ಟಿದ್ದಾರೆ. ಈ ವಿಗ್ರಹಗಳ ಮೂಲ ಪ್ರಾಚೀನ ಭಾರತ. ಇಲ್ಲಿ ಗಣೇಶ ಕೂಡ ಇದ್ದಾನೆ. ವೀರಭದ್ರನೂ ಇಲ್ಲಿದ್ದಾನೆ. ಆದರೆ ಯಾರೂ ಸೌಮ್ಯವಾಗಿಲ್ಲ.ದೇವಾಲಯ ದೊಡ್ಡದು. ಆಧಾರಕ್ಕೆ ಬಹಳ ದೊಡ್ಡ ಮರದ ಕಂಬಗಳಿವೆ. ಮೇಲೆ ಛಾವಣಿ ಮದರಾಸು ತಾರಸಿ ಹಾಗೆ ಕಾಣುತ್ತದೆ. ಮೂಲ ದೇವಾಲಯ ಸುಟ್ಟುಹೋಗಿತ್ತು. ಪುನರ್ ನಿರ್ಮಾಣ 1266 ರಲ್ಲಿ ಆಯಿತು. ದೇವಾಲಯದ ಹಜಾರ 120 ಮೀ ಉದ್ದವಿದೆ. ದೊಡ್ಡ ಮರದ ಕಂಬಗಳ ನಡುವೆ 33 ಸ್ಥಳಗಳಿವೆ. ಆದ್ದರಿಂದ ಈ ಅರ್ಥ ಬರುವ ‘ಸಂಜುಸಂಗೆನ್ ಡೊ’ ಎನ್ನುವ ಪದ ಈ ದೇವಾಲಯದ ಹೆಸರಾಗಿದೆ. ಇಲ್ಲೆಲ್ಲೂ ಚಿತ್ರ ತೆಗೆಯುವ ಹಾಗಿಲ್ಲ. ಮಧ್ಯದಲ್ಲಿ ಕುಳಿತಿರುವ ಬುದ್ಧ ಸಹಸ್ರ ಬಾಹು ಅವಲೋಕಿತೇಶ್ವರ ಬಹಳ ದೊಡ್ಡಮೂರ್ತಿ. ಕೈ ಜೋಡಿಸಿ, ಪದ್ಮಾಸನದಲ್ಲಿ ಕಮಲದ ಮೇಲೆ ಕುಳಿತಿದ್ದಾನೆ. ಬಹಳ ಭವ್ಯವಾಗಿದೆ. ದೇವಾಲಯದಲ್ಲಿ ಮೇಣದ ಬತ್ತಿಯನ್ನು ಕೊಂಡು ಹಚ್ಚಿ ಪ್ರಾರ್ಥನೆ ಸಲ್ಲಿಸಬಹುದು. ಇದಕ್ಕೆ ಒಂದು ಸಾವಿರ ಯೆನ್ ಆಗುತ್ತದೆ.

ನಮ್ಮ ಮುಂದಿನ ಭೇಟಿ ಇನ್ನೊಂದು ದೇವಾಲಯ. ಇದರ ಹೆಸರು ಫುಶಿಮಿ-ಇನಾರಿ-ತೆಷ. ಇನಾರಿ ದೇವಾಲಯ ಎಂದೂ ಕರೆಯುತ್ತಾರೆ. ನಮ್ಮಲ್ಲಿ ಅಕ್ಕಿ, ಧಾನ್ಯಗಳಿಗೆ ಲಕ್ಷ್ಮಿ ದೇವತೆ. ಹಾಗೆಯೇ ಜಪಾನಿನಲ್ಲಿ ‘ಇನಾರಿ’ ಅಕ್ಕಿಯ ದೇವತೆ. ಬಹಳ ದೊಡ್ಡ ಮಂದಿರ, ಬಣ್ಣಬಣ್ಣವಾಗಿತ್ತು. ಈ ಮಂದಿರ ಇನಾರಿ ಎನ್ನುವ ಹೆಸರಿನ 764 ಅಡಿ ಎತ್ತರದ ಬೆಟ್ಟದ ಬುಡದಲ್ಲಿದೆ. ಬೆಟ್ಟದುದ್ದಕ್ಕೂ ಅನೇಕ ಪುಟ್ಟ ಮಂದಿರಗಳಿವೆ. ಇನಾರಿ ಅಕ್ಕಿಯ ದೇವತೆಯಾಗಿದ್ದರೂ ಸಮೃದ್ಧಿಗಾಗಿ ವರ್ತಕರು ಮತ್ತು ವಸ್ತುಗಳ ಉತ್ಪಾದಕರು ಈ ದೇವತೆಯನ್ನು ಪೂಜಿಸುತ್ತಾರೆ. ಮುರಾಕಾಮಿ (965 ಎ.ಡಿ) ಎನ್ನುವ ದೊರೆಯ ಕಾಲದಲ್ಲಿ ದೂತರು ಮುಖ್ಯ ಘಟನೆಗಳನ್ನು ಬರೆದು ಕಾಮಿ ಎನ್ನುವ ದೇವತೆಗೆ ಅರ್ಪಿಸಬೇಕೆಂದು ಆಜ್ಞೆ ಮಾಡಿದ್ದ. ಇನಾರಿಗೂ ಈ ಲೆಕ್ಕ ಸಲ್ಲುತ್ತಿತ್ತು. ಇನಾರಿ ದೇವಾಲಯವನ್ನು ಜಪಾನ್ ಸರ್ಕಾರ ಅತಿ ಮುಖ್ಯವಾದದ್ದು ಎಂದು ಹೇಳಿ ಸಹಾಯ ಮಾಡುತ್ತದೆ. ಮುಖ್ಯ ಮಂದಿರವನ್ನು 1499ರಲ್ಲಿ ಕಟ್ಟಲಾಗಿದೆ. ಬೆಟ್ಟದ ಕೆಳಗೆ ಮುಖ್ಯ ದ್ವಾರವಿದೆ. ಇದಕ್ಕೆ ಟವರ್ ಗೇಟ್ ಎಂದು ಹೆಸರು. ನಂತರ ಹಲವು ಮೆಟ್ಟಿಲುಗಳನ್ನು ಏರಿದ ನಂತರ ದೇವಾಲಯ ಇದೆ. ಇನ್ನೂ ಮುಂದಕ್ಕೆ ನೂರಾರು ‘ಟೋರೀ’ ಗೇಟ್‌ಗಳು ಅಥವಾ ದ್ವಾರಗಳು. ಇವೆಲ್ಲಾ ಹರಸಿಕೊಂಡವರು ಕಟ್ಟಿರುವುದು. ಸಾಲು ಸಾಲಾಗಿ ಇವು ಆಕರ್ಷಿಸುತ್ತವೆ. ಕೇಸರಿ ಬಣ್ಣದಲ್ಲಿವೆ. ಜಪಾನಿ ಭಾಷೆಯಲ್ಲಿ ‘ಸೆನ್ಬನ್ ಟೋರೀ’ ಎಂದು ಹೆಸರು. ಈ ಟೋರಿ ಅಥವಾ ತೋರೀ ಎನ್ನುವ ಪದ ತೋರಣದ ಅಪಭ್ರಂಶ ಎನ್ನುತ್ತಾರೆ. ನಮ್ಮ ದೇಶದ ಬುದ್ಧ ಮಂದಿರಗಳಲ್ಲಿರುವ ತೋರಣ ಬಾಗಿಲುಗಳಂತೆ ಎಂಬ ಭಾವನೆ. ವಿಶೇಷವಾಗಿ ಸಾಂಚಿಯ ಸ್ತೂಪದಂತೆ ಎನ್ನುತ್ತಾರೆ. ನಮ್ಮಲ್ಲಿ ದೇವರಿಗೆ ಹರಕೆ ಹೊತ್ತಿಕೊಳ್ಳುವಂತೆಯೇ ಜಪಾನಿನಲ್ಲಿಯೂ ಹರಕೆ ಮಾಡಿಕೊಳ್ಳುತ್ತಾರೆ. ಹರಕೆಯಂತೆ ಒಂದು ಟೋರಿದ್ವಾರ ಕಟ್ಟಿಸುತ್ತಾರೆ. ಅಂದಾಜು ಒಂದು ಸಾವಿರ ಗೇಟ್‌ಗಳಿವೆ. ಎರಡು ಸಾಲುಗಳಲ್ಲಿವೆ. ಒಂದು ಕಡೆಯಿಂದ ಹೋಗಿ ಇನ್ನೊಂದು ಕಡೆಯಿಂದ ಬರಬೇಕು. ನಮಗೂ ಬೆಟ್ಟ ಹತ್ತಿ ನಡೆದು ಸಾಕಾಯಿತು. ಕಾಲು ಪದ ಹೇಳಲು ಆರಂಭಿಸಿತು. ಮತ್ತೆ ವಾಪಸ್ ಬಂದೆವು. ನಾವು ಇನಾರಿ ದೇವಾಲಯಕ್ಕೆ ಹೋದಾಗ ಪೂಜೆ ನಡೆಯುತ್ತಿತ್ತು. ಧೂಪದ, ಬತ್ತಿಯ ಆರತಿ, ಆಗ ಚಿತ್ರ ತೆಗೆಯುವ ಹಾಗಿಲ್ಲ. ಪೂಜೆ ಮಾಡುವ ಅರ್ಚಕರು ಓಡಾಡುವಾಗ ನಮ್ಮಲ್ಲಿರುವಂತೆಯೇ ಅವರಿಗೆ ದಾರಿ ಬಿಡಿಸುತ್ತಾರೆ. ದೇವಸ್ಥಾನದ ಮುಂದೆ ದೊಡ್ಡ ನರಿಯ ವಿಗ್ರಹ ಇದೆ. ಅದರ ಬಾಯಲ್ಲಿ ಒಂದು ಬೀಗದ ಕೈ ಇದೆ. ಇದು ಅಕ್ಕಿಯ ಉಗ್ರಾಣದ ಕೀಲಿಕೈ. ನರಿ ಭದ್ರವಾಗಿಟ್ಟುಕೊಂಡಿದೆ! ನಮ್ಮಲ್ಲಿ ದೇವತೆಗಳಿಗೆ ಯಾವುದಾದರೂ ಪ್ರಾಣಿ ವಾಹನವಾಗಿ ಅಥವಾ ಭದ್ರತೆ ಇರುವಂತೆ ಇಲ್ಲಿ ಇನಾರಿಗೆ ನರಿ ಸೇವಕನಾಗಿ, ದೂತನಾಗಿ ಇದೆ. ಎಂತಹ ಹೋಲಿಕೆಗಳು ಅಲ್ಲವೇ!

ದ್ವಾರಗಳ ಮೇಲೆ ದಾನಿಯ ಹೆಸರನ್ನು ಕೆತ್ತಲಾಗಿದೆ. ಮರದಿಂದ ಮಾಡಿರುವ ಈ ರೀತಿಯ ಟೋರಿಗಳು 10,000 ಇವೆ. ಇನಾರಿ ಒಂದು ಶಿಂಟೋ ಮಂದಿರ.
ಇನಾರಿಯಲ್ಲಿ ಅನೇಕ ಜಪಾನಿ ಹುಡುಗಿಯರು ಕಿಮೋನೋ ಧರಿಸಿದ್ದರು. ಬಹುಶಃ ನಮ್ಮಲ್ಲಿ ದೇವಸ್ಥಾನಕ್ಕೆ ಜರಿಸೀರೆ ಉಡುವಂತೆ ಇರಬಹುದು. ನಮ್ಮ ಮಾರ್ಗದರ್ಶಿ ಮೀನೂ ಕೆಲವು ವಿಷಯಗಳನ್ನು ತಿಳಿಸಿದಳು. ಈಗ ಯಾರೂ ಕಿಮೇನೋ ಹೊಲಿಸುವುದಿಲ್ಲವಂತೆ. ಬಹಳ ದುಬಾರಿ ಆಗುತ್ತದಂತೆ. ಬಾಡಿಗೆಗೆ ತೆಗೆದುಕೊಳ್ಳುತ್ತಾರಂತೆ. ಬಾಡಿಗೆ 3500 ಯೆನ್. ಅವಳು ಎರಡೇ ಸಲ ಕಿಮೋನೋ ಧರಿಸಿದ್ದಂತೆ. ಒಂದು ಪದವಿ ಪಡೆದಾಗ ಮತ್ತು ಇನ್ನೊಮ್ಮೆ ಅಜ್ಜ, ಅಜ್ಜಿಯನ್ನು ನೋಡಲು ಹೋದಾಗ! ಜಪಾನೀ ಮಹಿಳೆಯರು ನಾನು ನೋಡಿದಂತೆ ಪ್ಯಾಂಟು, ಶರ್ಟು ಧರಿಸುತ್ತಾರೆ. ತಲೆಗೂದಲು ತುಂಡಾಗಿರುತ್ತದೆ. ಕಿಮೋನೋ ಧರಿಸಿದ ಸುಂದರ ಜಪಾನೀ ಹುಡುಗಿಯರು ಇನ್ನೂ ಸುಂದರವಾಗಿ ಕಾಣಿಸಿದರು. ಒಂದೆರಡು ಫೋಟೋಗಳನ್ನು ತೆಗೆದುಕೊಂಡೆ. ಕಿಮೋನೋ ಸೀರೆಗಿಂತ ಓಡಾಡಲು ಕಷ್ಟ ಎನಿಸಿತು. ಅಂತೂ ಪೂರ್ತಿ ಮೈಮುಚ್ಚುವ ಸುಂದರ ದಿರಿಸು. ಕಿಮೋನೋ ಬಟ್ಟೆಯ ತುಂಬಾ ಹೂಗಳು ಇರುತ್ತವೆ, ಅಂದರೆ ಅಚ್ಚಿನಲ್ಲಿ! ನಾವು ಯಾರೂ ಕಿಮೋನೋ ಹಾಕಲಿಲ್ಲ. ದಿರಿಸು ಕಿಮೋನೋ ಆದರೂ ಮುಖ ಅಪ್ಪಟ ಭಾರತದ್ದು ಅಲ್ಲವೇ! ನಮಗೆ ನಮ್ಮ ದೇಶದ ಸೀರೆ, ಚೂಡಿದಾರಗಳೇ ಚೆನ್ನಾಗಿ ಕಾಣಿಸುತ್ತವೆ ಎಂದು ನನ್ನ ಅಭಿಪ್ರಾಯ.

ಬೆಟ್ಟ ಇಳಿದು ವಾಪಸ್ಸು ಹೊರಟೆವು. ಎಲ್ಲೆಲ್ಲೂ ಜನ. ಜಪಾನಿನವರು ಮತ್ತು ಬಿಳಿಯರು ಇದ್ದರು. ನಮ್ಮ ದೇಶದವರು ಅಷ್ಟಾಗಿ ಕಾಣಿಸಲಿಲ್ಲ. ರಸ್ತೆ ಬದಿಯ ಎರಡೂ ಕಡೆ ವಾಸನೆಯ ಅಂಗಡಿಗಳು. ಮೂಗು ಮುಚ್ಚಿ ನಡೆದೆವು. ಮೀನು, ಮಾಂಸ, ಏಡಿ ಇವುಗಳ ಖಾದ್ಯಗಳು. ಜಪಾನಿ ಹೋಟೆಲ್‌ಗಳಲ್ಲಿ ಅಂಗಡಿಯ ಮುಂದೆ ಇಡುವಂತೆ ಶೋಕೇಸಿನಲ್ಲಿ ಒಳಗೆ ಇರುವ ಖಾದ್ಯಗಳ ಮಾದರಿಗಳನ್ನು ಪಟ್ಟಿ ಅಂಟಿಸಿ, ಬೆಲೆ ನಮೂದಿಸಿ ಇಟ್ಟಿರುತ್ತಾರೆ. ಶೋಕೇಸಿನಲ್ಲಿ ನೋಡಿ, ಒಳಗೆ ಹೋಗಿ ಆರ್ಡರ್ ಕೊಡಬಹುದು.

(ಮುಂದುವರಿಯುವುದು)

ಈ ಬರಹದ ಹಿಂದಿನ ಸಂಚಿಕೆಯನ್ನು ಓದಲು ಈ ಕೊಂಡಿಯನ್ನು ಕ್ಲಿಕ್ಕಿಸಿ : http://surahonne.com/?p=33442

-ಡಾ.ಎಸ್.ಸುಧಾ, ಮೈಸೂರು

8 Responses

  1. ನಯನ ಬಜಕೂಡ್ಲು says:

    ಪ್ರಕೃತಿ ಸೌನ್ದರ್ಯ ತುಂಬಿ ತುಳುಕಾಡುತ್ತಿದೆ ಲೇಖನದ ತುಂಬಾ. Very beautiful

  2. ನಾಗರತ್ನ ಬಿ. ಅರ್. says:

    ಪ್ರವಾಸ ಕಥನ ಓದಿಸಿಕೊಂಡು ಹೋಗುತ್ತದೆ.ಈ ಸಾರಿಯ ಬೊಂಬಿನ ಚಿತ್ರ ವಿಮರ್ಶೆ ಜಪಾನಿ ಮಹಿಳೆಯರ ಉಡುಪಿನ ವರ್ಣನೆ ವಾತಾವರಣಕ್ಕೆ ತಕ್ಕಂತೆ ಊಟದಸೊಬಗು ಚೆನ್ನಾಗಿ ಮೂಡಿ ಬಂದಿದೆ.ಅಭನಂದನೆಗಳು.

  3. Padma Anand says:

    ಜಪಾನಿನ ಪ್ರವಾಸ ಕಥನ ಸೊಗಸಾಗಿ ಸಾಗುತ್ತಿದೆ. ಅಲ್ಲಿರುವ ನಮ್ಮ ದೇವರುಗಳ ವಿಭಿನ್ನ ಸ್ವರೂಪ ಹಾಗೂ ಬೊಂಬಿನ ಕಾಡಿನ ವರ್ಣನೆ ಚಂದದಿಂದ ಕೂಡಿದೆ.

  4. ಶಂಕರಿ ಶರ್ಮ says:

    ಚಂದದ ಪೂರಕ ಚಿತ್ರಗಳೊಂದಿಗೆ ಸುಂದರ ಪ್ರವಾಸ ವರ್ಣನೆ.

  5. padmini says:

    very very descriptive!

Leave a Reply to sudha Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: