ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 18 : ಕೃಷ್ಣಾವತಾರದ ಕೊನೆ

Share Button

ಸುದಾಮನ ಮಂದಿರದಿಂದ ಮುಂದುವರಿದು  ಸುಮಾರು 125 ಕಿ.ಮೀ  ಪ್ರಯಾಣಿಸಿ  ‘ಭಾಲ್ಕಾ ತೀರ್ಥ್’ ಎಂಬ ಸ್ಥಳ ತಲಪಿದೆವು. ಶ್ರೀಕೃಷ್ಣಾವತಾರವು ಕೊನೆಗೊಂಡ ಸ್ಥಳವಿದು ಎಂಬುದು ಸ್ಥಳಪುರಾಣ.

ಕುರುಕ್ಷೇತ್ರ ಯುದ್ದದ ಸಮಯದಲ್ಲಿ, ದುರ್ಯೋಧನನು ಮರಣಿಸುವ  ಒಂದು ದಿನ ಮೊದಲು  ಗಾಂಧಾರಿಯ ಬಳಿ ಶ್ರೀಕೃಷ್ಣನು ಹೋಗಿದ್ದಾಗ, ತನ್ನ ಮಕ್ಕಳನ್ನು ಕಳೆದುಕೊಂಡ ದು:ಖದಲ್ಲಿದ್ದ ಗಾಂಧಾರಿಯು,  ‘ನಿನಗೆ ಗೊತ್ತಿಲ್ಲದ , ಅರಿಯದ ವಿಚಾರಗಳೇನೂ ಇಲ್ಲ, ನೀನು ಮನಸ್ಸು ಮಾಡಿದ್ದರೆ ಯುದ್ದವಾಗದಂತೆ ತಡೆಯಬಹುದಿತ್ತು, ನಿನ್ನ  ರಾಜ್ಯವೂ, ನಿನ್ನ  ವಂಶವೂ ನಿನ್ನ ಕಣ್ಮುಂದೆಯೇ ಅಳಿಯಲಿ’  ಎಂದು ಶಪಿಸುತ್ತಾಳೆ.   ಶ್ರೀಕೃಷ್ಣನು ತ್ರಿಕಾಲಜ್ಞಾನಿ.   ಅಧರ್ಮ ಮಾರ್ಗದಲ್ಲಿ ನಡೆಯುತ್ತಾ ದುರಹಂಕಾರಿಗಳಾಗಿದ್ದ ಯದು ಕುಲದ ಅಂತ್ಯ ಹೀಗೆಯೇ ಆಗುತ್ತದೆ ಎಂದು ತಿಳಿದಿದ್ದ ಕಾರಣ ‘ತಥಾಸ್ತು’ ಅಂದನಂತೆ.

ಇದಾಗಿ 36 ವರ್ಷಗಳ ನಂತರ ಯಾದವರ ಅಂತ್ಯವಾದುದು ಇನ್ನೊಂದು ಕತೆ. ಶ್ರೀಕೃಷ್ಣ ಹಾಗೂ ಜಾಂಬವತಿಯರ ಮಗನಾದ ಸಾಂಬನು ಕುಚೇಷ್ಟೆ ಸ್ವಭಾವದ  ಹುಂಬ.  ತನ್ನ ಗೆಳೆಯರೊಂದಿಗೆ ಸೇರಿಕೊಂಡು, ದ್ವಾರಕೆಗೆ ಬರುತ್ತಿದ್ದ ಋಷಿಮುನಿಗಳನ್ನು ಪೀಡಿಸುತ್ತಿದ್ದ. ಒಮ್ಮೆ ತನ್ನ ಹೊಟ್ಟೆಗೆ ಒನಕೆಯೊಂದನ್ನು ಕಟ್ಟಿಕೊಂಡು, ದ್ವಾರಕೆಗೆ ಬಂದಿದ್ದ ದೂರ್ವಾಸ ಮುನಿಗಳ ಬಳಿ ತನಗೆ ಹುಟ್ಟುವ ಮಗು ಗಂಡೇ, ಹೆಣ್ಣೇ ಎಂದು ಕೇಳಿದನಂತೆ.  ತಮ್ಮ ದಿವ್ಯಜ್ಞಾನದಿಂದ ವಿಷಯ ಅರಿತ ದೂರ್ವಾಸ ಮುನಿಗಳು ‘ನಿನ್ನ ಹೊಟ್ಟೆಯಲ್ಲಿ ನಿಮ್ಮ ಕುಲವನ್ನು ನಾಶಮಾಡುವ ಒನಕೆ ಹುಟ್ಟಲಿದೆ’ ಎಂದು ಶಪಿಸಿದರು.  ಆಮೇಲೆ ಸಾಂಬನು ಒನಕೆಗೆ ಜನ್ಮ ಕೊಟ್ಟ. ಹಿರಿಯರ ಆದೇಶದಂತೆ, ಆ ಒನಕೆಯನ್ನು ತೇದು, ಪುಡಿಮಾಡಿ ಸಮುದ್ರಕ್ಕೆ ತೇಲಿ ಬಿಟ್ಟರು. ತೇದು ತೀರಾ ಚಿಕ್ಕದಾದ ಒನೆಕೆಯ ತುಂಡನ್ನು  ಸಮುದ್ರಕ್ಕೆ ಎಸೆದರು. ಸಮುದ್ರಕ್ಕೆ ಎಸೆದಿದ್ದ  ಒನಕೆಯ ಚಿಕ್ಕ ತುಂಡನ್ನು ಒಂದು ಮೀನು ನುಂಗಿತ್ತು. ಆ ಮೀನು ‘ಜರಾ’ ಎಂಬ ಬೇಟೆಗಾರನಿಗೆ ಸಿಕ್ಕಿತ್ತು. ಆತ ಮೀನನ್ನು ಕತ್ತರಿಸಿದಾಗ ಸಿಕ್ಕಿದ ಒನಕೆಯ ಚೂರನ್ನು ತನ್ನ ಬಾಣದ ತುದಿಗೆ ಕಟ್ಟಿಕೊಂಡಿದ್ದ.

ತೀರಕ್ಕೆ ರಾಚಿದ ಒನಕೆಯ ಪುಡಿಯಿಂದ ಸಮುದ್ರ ತೀರದಲ್ಲಿ  ಜೊಂಡು ಹುಲ್ಲಿನ ಜಾತಿಯ ಸಸ್ಯಗಳು ಹುಟ್ಟಿಕೊಂಡುವು. ಮುಂದೆ ಯಾವುದೋ ಕ್ಷುಲ್ಲಕ ಕಾರಣ ಯಾದವರಲ್ಲಿ ತಮ್ಮ ತಮ್ಮಲ್ಲೆ ಜಗಳವಾದಾಗ, ಅದೇ ಜೊಂಡು ಹುಲ್ಲಿನಿಂದ ಪರಸ್ಪರ ಬಡಿದಾಡಿಕೊಂಡು ಸತ್ತರು. ಶ್ರೀಕೃಷ್ಣನು ದ್ವಾರಕಾ ಪಟ್ಟಣವನ್ನು  ನಿರ್ಮಾಣ ಮಾಡಲು ಸಮುದ್ರರಾಜನ ಬಳಿ ಸ್ಥಳವನ್ನು ಕೇಳಿ ಪಡೆದಿದ್ದ. ಸಮುದ್ರ ರಾಜನು ಕೆಲವು ವರ್ಷಗಳ ವರೆಗೆ ಮಾತ್ರ  ಕೊಡುತ್ತೇನೆಂಬ ಷರತ್ತಿನ ಮೇಲೆ ‘ಕುಶಸ್ಥಲಿ’ ಎಂಬ ಸ್ಥಳವನ್ನು ಬಿಟ್ಟು ಕೊಟ್ಟಿದ್ದ, ಆ ಜಾಗದಲ್ಲಿ ಶ್ರೀಕೃಷ್ಣ ದ್ವಾರಕೆಯನ್ನು ನಿರ್ಮಿಸಿದ್ದ. ಕೊಟ್ಟ ಅವಧಿ ಮುಗಿಯಿತು ಎಂದು ಸಮುದ್ರರಾಜನು ಭೂಮಿಯನ್ನು ಹಿಂತಿರುಗಿ ಪಡೆದ.  ಹೀಗೆ ದ್ವಾರಕೆ ಮುಳುಗಿತು.  ಅಲ್ಲಿಗೆ ಗಾಂಧಾರಿಯ ಶಾಪ ಹಾಗೂ ದೂರ್ವಾಸರ ಶಾಪ ಬಹುತೇಕ ನೆರವೇರಿದಂತಾಯಿತು.

ತನ್ನ ಅವತಾರ ಸಮಾಪ್ತಿಯಾಗುವ ವಿಚಾರ ತಿಳಿದಿದ್ದ ಶ್ರೀಕೃಷ್ಣನು ಕಾಡಿನಲ್ಲಿ ಮರವೊಂದರ ಕೆಳಗೆ ಅನ್ಯಮನಸ್ಕನಾಗಿ ಕುಳಿತಿದ್ದ.  ಅವನ ಎಡಗಾಲಿನ ಹೆಬ್ಬೆರಳನ್ನು ಪಾರ್ಶ್ವದಿಂದ ನೋಡಿದ್ದ ‘ಜರಾ’ ಎಂಬ ಬೇಟೆಗಾರ, ಅದು   ಚಿಗರೆಯ ಕಿವಿ ಇರಬೇಕೆಂದು ಭಾವಿಸಿ ತನ್ನ ಬಾಣ ಹೂಡಿದ.  ಅವನ ಬಾಣದ ತುದಿಯಲ್ಲಿದ್ದ ಒನಕೆಯ ಚಿಕ್ಕ ತುಂಡು  ಶ್ರೀಕೃಷ್ಣನ ಅಂತ್ಯಕ್ಕೆ ಕಾರಣವಾಯಿತು. ತನ್ನಿಂದಾದ  ಅಚಾತುರ್ಯಕ್ಕೆ ಬಹಳಷ್ಟು ಬೇಸರಪಟ್ಟ ‘ಜರಾ’ ನನ್ನು ಶ್ರೀಕೃಷ್ಣನು ಮನ್ನಿಸಿ, ಆತನು ಹಿಂದಿನ ಜನ್ಮದಲ್ಲಿ ‘ವಾಲಿ’ಯಾಗಿದ್ದನೆಂದೂ, ತನ್ನ ರಾಮಾವತಾರದಲ್ಲಿ ಸುಗ್ರೀವನಿಗೆ ಸಹಾಯ ಮಾಡಲೆಂದು ರಾಮನು ವಾಲಿಯನ್ನು ಕೊಂದಿದ್ದ ಫಲವಾಗಿ, ಈ ಜನ್ಮದಲ್ಲಿ  ‘ಜರಾ’ನಿಂದ ನನಗೆ ಸಾವು, ಇದು ತನ್ನದೇ ನಿರ್ಣಯ, ಹಾಗಾಗಿ  ನೀನು ಚಿಂತಿಸಬೇಡ ಎಂದು ಸಮಾಧಾನಿಸುತ್ತಾನೆ. ಈ ಸ್ಥಳ ಈಗಿನ ‘ ಭಾಲ್ಕಾ ತೀರ್ಥ್’ ಎಂಬಲ್ಲಿದೆ.


ಶ್ರೀಕೃಷ್ಣನ ಅಂತ್ಯವಾದ ವರ್ಷ ಕ್ರಿ.ಪೂ.3102 ಎಂದೂ, ಅದು ದ್ವಾಪರಯುಗದ ಕೊನೆ ಎಂದೂ  ಅಂದಾಜಿಸುತ್ತಾರೆ. ಹೀಗೆ  ಗಾಂಧಾರಿಯ ಶಾಪ, ದೂರ್ವಾಸರ ಕೋಪ, ಸಾಂಬನ  ಹುಂಬತನ, ಯಾದವರ ಕಲಹ, ತ್ರೇತಾಯುಗದ ನಂಟು…. ಇವೆಲ್ಲವನ್ನೂ   ‘ ಭಾಲ್ಕಾ ತೀರ್ಥ್’ ನೆನಪಿಸುತ್ತದೆ. ಪ್ರಸ್ತುತ ಅಲ್ಲಿರುವ ಮಂದಿರದಲ್ಲಿ  ಶ್ರೀಕೃಷ್ಣನು ಮರದ ಅಡಿಯಲ್ಲಿ ಕುಳಿತಿರುವಂತಹ ಹಾಗೂ ಪಕ್ಕದಲ್ಲಿ ‘ಜರಾ’ ಕೈಮುಗಿದುಕೊಂಡಿರುವ ವಿಗ್ರಹಗಳಿವೆ. ಪಕ್ಕದಲ್ಲಿ, ಅಂದು ಶ್ರೀಕೃಷ್ಣ ಕುಳಿತಿದ್ದನೆನ್ನಲಾದ ಮರದ ಬೊಡ್ಡೆಯೂ ಇದೆ.

(ಮುಂದುವರಿಯುವುದು)

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ :   http://surahonne.com/?p=31853

– ಹೇಮಮಾಲಾ.ಬಿ

4 Responses

  1. ಬಿ.ಆರ್.ನಾಗರತ್ನ says:

    ಪ್ರವಾಸ ಕಥನ ಆಕರ್ಷಕವಾಗಿ ಪೌರಾಣಿಕ ಕಥೆಗಳ ಹಿನ್ನೆಲೆಯಲ್ಲಿ ಚೆಂದವಾಗಿ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ ಸಫಲವಾಗಿದೆ.ಅಭಿನಂದನೆಗಳು ಗೆಳತಿ ಹೇಮಾ.

  2. sudha says:

    i am recollecting bhalka tirth from your description. thanks hemamala. a historical place.

  3. ನಯನ ಬಜಕೂಡ್ಲು says:

    ತುಂಬಾ ಆಕರ್ಷಕ ಹಾಗೂ ಮಾಹಿತಿ ಪೂರ್ಣ

  4. ಶಂಕರಿ ಶರ್ಮ says:

    ‘ಭಾಲ್ಕಾ ತೀರ್ಥ್’ ಬಗೆಗೆ ಸೊಗಸಾದ ವಿವರಣೆ ಪೂರಕ ಚಿತ್ರದೊಂದಿಗೆ ಮನಮುಟ್ಟಿತು. ಪ್ರವಾಸ ಕಥನ ಬಹಳ ಚೆನ್ನಾಗಿದೆ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: