ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 16: ಪೋರ್ ಬಂದರ್-ಕೀರ್ತಿಮಂದಿರ್

Share Button

21 ಜನವರಿ 2019 ರಂದು, ಬೆಳಗ್ಗೆ ಬೇಗನೆ ಹೊರಟಿ ದ್ವಾರಕೆಯಿಂದ 60  ಕಿ.ಮೀ ದೂರದಲ್ಲಿರುವ ಪೋರ್ ಬಂದರ್ ತಲಪಿದೆವು.

ಗುಜರಾತಿನ ಆ  ಮನೆಯಲ್ಲಿ ನಾವು ಕಾಲಿಟ್ಟೊಡನೆ, ಇಲ್ಲಿ ಪುಟ್ಟ ಬಾಪು ಅಂಬೆಗಾಲಿಟ್ಟಿರಬಹುದು, ಅಲ್ಲಿ ಬಾಲಕ ಮೋಹನದಾಸ ಓಡಾಡಿರಬಹುದು ಎಂಬ ಊಹೆಯಿಂದ ನಾವು ಪುಳಕಿತರಾಗುತ್ತೇವೆ. ಹದಿನೇಳನೆಯ ಶತಮಾನದಲ್ಲಿ, ಗುಜರಾತ್ ರಾಜ್ಯದ ಪೋರ್ ಬಂದರ್ ನಲ್ಲಿರುವ ಆ ಮನೆಯಲ್ಲಿ, ಸ್ಥಳೀಯ ಮಹಿಳೆಯೊಬ್ಬರು ವಾಸವಾಗಿದ್ದರು. ಶ್ರೀ ಹರ್ ಜೀವನ್ ರಾಯ್ ದಾಸ್ ಗಾಂಧಿ ಎಂಬವರು  ಆ ಮನೆಯನ್ನು ಖರೀದಿಸಿ, ಆಮೇಲೆ ತಮಗೆ ಬೇಕಾದಂತೆ ನವೀಕರಿಸಿದರು. ಅದೇ ಮನೆಯಲ್ಲಿ ಅವರ  ಮುಂದಿನ ತಲೆಮಾರಿನ ಶ್ರೀ ಉತ್ತಮಚಂದ್ ಗಾಂಧಿ, ಅನಂತರ ಶ್ರೀ ಕರಮಚಂದ್ ಗಾಂಧಿ ಹಾಗೂ ಇತರ ಕುಟುಂಬದ ಸದಸ್ಯರೂ ವಾಸಿಸಿದ್ದರು.  ಶ್ರೀ ಕರಮಚಂದ್ ಗಾಂಧಿ ಮತ್ತು ಶ್ರೀಮತಿ ಪುತಲೀಬಾಯಿ ಅವರ ಮಗನಾಗಿ ಜನಿಸಿದ ಶಿಶುವು ಮುಂದೆ ಶ್ರೀ ಮೋಹನದಾಸ ಕರಮಚಂದ್ ಗಾಂಧಿ ಎಂದು ಕರೆಯಲ್ಪಟ್ಟು, ಸಮಾಜ ಸುಧಾರಕನಾಗಿ, ಸ್ವಾತಂತ್ರ್ಯ ಸಂಗ್ರಾಮದ ನಾಯಕನಾಗಿ, ಭಾರತದ ರಾಷ್ಟ್ರಪಿತನಾಗಿ ಲೋಕವಿಖ್ಯಾತರಾದುದು ಈಗ ಇತಿಹಾಸ.

 

ಪೋರ್ ಬಂದರ್ ನಲ್ಲಿ ಗಾಂಧೀಜಿಯವರು ಹುಟ್ಟಿದ ಮನೆ

ಮೋಹನದಾಸ್ ಕರಮಚಂದ್ ಗಾಂಧಿ ಅವರು   1869 ನೇ ಇಸವಿಯ   ಅಕ್ಟೋಬರ್  2 ರಂದು ಜನಿಸಿದರು. ಗಾಂಧೀಜಿಯವರು ಜನಿಸಿದ ಮನೆಯನ್ನು ಸ್ಮಾರಕವಾಗಿ ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ, 1944 ರಲ್ಲಿ ಅಂದಿನ ಪೋರ್ ಬಂದರ್ ನ ಆಢಳಿತಾಧಿಕಾರಿಗಳು, ಗಾಂಧೀಜಿಯವರ ಅನುಮತಿ ಪಡೆದು, ಆ ಮನೆಯನ್ನು ಮೂಲಸ್ವರೂಪದಲ್ಲಿಯೇ ಉಳಿಸಿದರು. ಅಂದಾಜು 250 ವರ್ಷದ , ಗುಜರಾತ್ ನ ‘ಹವೇಲಿ’ ಶೈಲಿಯ , ಈ ಮನೆಯ ಮೂರು ಮಹಡಿಗಳಲ್ಲಿ ಒಟ್ಟಾಗಿ 22  ಚಿಕ್ಕ, ದೊಡ್ಡ ಕೋಣೆಗಳು, ಅಲ್ಲಲ್ಲಿ ಹಸಿರು ಬಣ್ಣದ ಕಿಟಿಕಿಗಳು, ಮರದ ಏಣಿಗಳು, ಅಡುಗೆಕೋಣೆ ಇತ್ಯಾದಿ ಇವೆ. ಕೋಣೆಯೊಂದರಲ್ಲಿ, ಇದು ಗಾಂಧೀಜಿಯವರು ಜನಿಸಿದ ಸ್ಥಳ ಎಂಬ ಮಾಹಿತಿಫಲಕವಿದೆ ಹಾಗೂ ಶಿಶು ಗಾಂಧಿ ಇದ್ದ ನೆಲದ  ಮೇಲೆ  ‘ಸ್ವಸ್ತಿಕ್ ‘ ಆಕಾರದ ಗುರುತನ್ನು ಮೂಡಿಸಿದ್ದಾರೆ.

 

ಸ್ವಸ್ತಿಕ್ ಆಕಾರ ಇರುವಲ್ಲಿ ಗಾಂಧೀಜಿ ಜನಿಸಿದ್ದರು

ಕಾಲಾನಂತರದಲ್ಲಿ, ಗಾಂಧೀಜಿಯವರ ಮನೆಗೆ ಹೊಂದಿಕೊಂಡಂತೆ ಭವ್ಯವಾದ ‘ಕೀರ್ತಿ ಮಂದಿರ್’ ಎಂಬ ಮ್ಯೂಸಿಯಂ ಅನ್ನು ನಿರ್ಮಿಸಿಲಾಯಿತು. ಪ್ರಸ್ತುತ ಕೀರ್ತಿಮಂದಿರದಲ್ಲಿ ಗಾಂಧೀಜಿಯವರ ಜೀವನದ ಪ್ರಮುಖ  ಘಟನಾವಳಿಗಳ ಬಗ್ಗೆ ಸಂಬಂಧಿಸಿದ ಚಿತ್ರಗಳು, ಖಾದಿ ಭಂಡಾರ್ ಹಾಗೂ ಕರಕುಶಲ ವಸ್ತುಗಳು, ಪುಸ್ತಕ ಮಳಿಗೆ,ಕ  ‘ಕಸ್ತೂರಿ ಬಾ’ ಗ್ರಂಥಾಲಯಗಳಿವೆ. ಗುಜರಾತ್ ನ  ಪ್ರಮುಖ ಪಟ್ಟಣಗಳಾದ ಅಹ್ಮದಾಬಾದ್  , ರಾಜ್ ಕೋಟ್, ಜಾಮ್ ನಗರ್ ಮೊದಲಾದ ಪಟ್ಟಣಗಳಿಂದ ಪೋರ್ ಬಂದರ್ ಗೆ ರಸ್ತೆ ಸಂಪರ್ಕವಿದೆ. ದೇಶದ ಪ್ರಮುಖ ನಗರಗಳಿಂದ ರೈಲು ಸಂಪರ್ಕವೂ ಇದೆ.

(ಮುಂದುವರಿಯುವುದು)

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ :  http://surahonne.com/?p=31696

– ಹೇಮಮಾಲಾ.ಬಿ

9 Responses

  1. ಬಿ.ಆರ್.ನಾಗರತ್ನ says:

    ಎಂದಿನಂತೆ ಪ್ರವಾಸ ಕಥನ ಆಕರ್ಷಕವಾಗಿ ಮೂಡಿ ಬಂದಿದೆ ಗೆಳತಿ ಹೇಮಾ ಅಭಿನಂದನೆಗಳು.

  2. ತಿಳಿಯಬೇಕಾದ ಒಳ್ಳೆಯ ಪ್ರವಾಸ ಕಥನ‌ ಹೇಮಮಾಲಾ.
    ಅಭಿನಂದನೆಗಳು.

  3. ನಯನ ಬಜಕೂಡ್ಲು says:

    ಸಾಕಷ್ಟು ಮಾಹಿತಿಗಳನ್ನೊಳಗೊಂಡ ಪ್ರವಾಸ ಕಥನ. ಚೆನ್ನಾಗಿ ಮೂಡಿ ಬರುತ್ತಿದೆ

  4. Savithri bhat says:

    ಸುಂದರ ಪ್ರವಾಸ ಕಥನ,ಚಿತ್ರಗಳು

  5. ಶಂಕರಿ ಶರ್ಮ says:

    ಪ್ರಖ್ಯಾತರು ಜನಿಸಿದ, ಓಡಾಡಿದ ಜಾಗದಲ್ಲಿ ನಾವೂ ಓಡಾಡುವ ಅವಕಾಶವು ಅದ್ಭುತ ಅನುಭವವನ್ನು ನೀಡುತ್ತದೆ. ಅದರಲ್ಲೂ ಮಹಾತ್ಮರೆನಿಸಿದ ಬಾಪೂಜಿಯವರ ಜನ್ಮಭೂಮಿ ಪೋರ್ ಬಂದರಿನಲ್ಲಿ ಓಡಾಡಿದ ಅನುಭವ ಕಥನ ಪುಳಕವನ್ನುಂಟು ಮಾಡಿತು. ಚಂದದ ಲೇಖನಮಾಲೆ.. ಧನ್ಯವಾದಗಳು, ಹೇಮಮಾಲಾ ಅವರಿಗೆ.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: