ಕೆ ಎಸ್‌ ನ ಕವಿನೆನಪು 37: ಮೈಸೂರ ಮಲ್ಲಿಗೆ ..ಮತ್ತಷ್ಟು ಸಂಗತಿಗಳು

Share Button


ಮೈಸೂರ ಮಲ್ಲಿಗೆಯ ಪ್ರತಿಗಳು ಅರವತ್ತರ ದಶಕದಲ್ಲಿ ಮದುವೆಯ ಉಡುಗೊರೆಯಾಗಿಯೂ ಜನಪ್ರಿಯವಾಯಿತೆಂಬುದು ಎಲ್ಲರಿಗೂ ತಿಳಿದ ವಿಷಯವೇ.”ರಾಯರು ಬಂದರು….” ಭಾವಗೀತೆಯನ್ನು ಎಚ್ ಎಮ್ ವಿ ಸಂಸ್ಥೆಯವರು ಮೊದಲು ಧ್ವನಿಮುದ್ರಣ ಮಾಡಿದರು.ಆಕಾಶವಾಣಿಯ ಮೂಲಕ ಜಯವಂತಿದೇವಿ ಹಿರೇಬೆಟ್ (ಖ್ಯಾತ ಹಾಸ್ಯ ಸಾಹಿತಿ ಪಡುಕೋಣೆ ರಮಾನಂದ ರಾವ್ ಮಗಳು) ಹಾಡಿ ಜನಪ್ರಿಯಗೊಳಿಸಿದ “ಹತ್ತು ವರುಷದ ಹಿಂದೆ” ಭಾವಗೀತೆ ಅರವತ್ತರ ದಶಕದಲ್ಲಿ ಮನೆಮಾತಾಗಿತ್ತು.

ಆದರೂ ಮೈಸೂರ ಮಲ್ಲಿಗೆಯ ಗೀತೆಗಳು ಜನರ ಮನೆಮನೆ ತಲುಪಿದ್ದು ಕ್ಯಾಸೆಟ್ ಸಂಸ್ಕೃತಿ ನೆಲೆಯೂರಿದಾಗ ಎಂಬುದು ಸತ್ಯ. 1982 ರಲ್ಲಿ ಮೈಸೂರು ಮಲ್ಲಿಗೆ ಕ್ಯಾಸೆಟ್ ಹೊರಬಂದಾಗ ಅದರ ದನಿ ಎಲ್ಲೆಡೆ ಸ್ವೀಕೃತವಾಯಿತು. ಕರ್ಣಾಟಕದ ಮೂಲೆ ಮೂಲೆಯ ರಸ್ತೆ ಬದಿ ಹೋಟೆಲುಗಳಲ್ಲಿ ,ಕಾರುಗಳಲ್ಲಿ, ಮನೆಮನೆಗಳಲ್ಲಿ ಮಲ್ಲಿಗೆಯ ಪರಿಮಳ ಪಸರಿಸಿತು.

ಮೈಸೂರ ಮಲ್ಲಿಗೆಯ ಗೀತೆಗಳನ್ನು ಬಳಸಿಕೊಂಡು 1991 ರಲ್ಲಿ ನಾಗಾಭರಣ ನಿರ್ದೇಶನದಲ್ಲಿ ‘ಮೈಸೂರು ಮಲ್ಲಿಗೆ’ ಹೆಸರಿನಲ್ಲಿ ಒಂದು ಚಲನಚಿತ್ರವೂ ತೆರೆಕಂಡಿತೆಂದು ಈ ಹಿಂದೆ ತಿಳಿಸಿದೆ. ಹಿನ್ನಲೆಗೆ ಒಂದು ಯುಕ್ತ ಕಥೆಯನ್ನು ಶೋಧಿಸಿ, ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಆಧರಿಸಿ ಚಲನಚಿತ್ರ ಮಾಡುವ ತೀರ್ಮಾನಕ್ಕೆ ಚಿತ್ರತಂಡ ಬಂತು. ಅದೇ ರೀತಿ ಚಿತ್ರ ತಯಾರಾಗಿ, ತೆರೆಕಂಡು ಯಶಸ್ವಿಯಾಗಿ ರಾಷ್ಟ್ರೀಯ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆಯಿತು. ನಮ್ಮ ತಂದೆಯರಿಗೆ ಅತ್ಯುತ್ತಮ ಗೀತರಚನಕಾರ ಪ್ರಶಸ್ತಿಯೂ ದೊರೆಯಿತು.

ಆದರೆ ಈ ಗೀತೆಗಳನ್ನು ಬಹುಪಾಲು ಕಾವ್ಯಾಭಿಮಾನಿಗಳು ಒಂದು ರಮ್ಯಭಾವದಲ್ಲಿ ಕಲ್ಪಿಸಿಕೊಂಡು ಸಂತಸಪಡುತ್ತಿದ್ದರು.ಅವರಿಗೆ ಈ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ರುಚಿಸಲಿಲ್ಲ. ಎಲ್ಲಿಯ ಸ್ವಾತಂತ್ರ್ಯ ಹೋರಾಟ? ಮತ್ತು ಎಲ್ಲಿಯ ಮೈಸೂರ ಮಲ್ಲಿಗೆಯ ರಮ್ಯಗೀತೆಗಳು ? ಎಂದು ಬೇಸರಿಸಿಕೊಂಡರು. ಹಲವರು ನಮ್ಮ ತಂದೆಯವರ ಹತ್ತಿರ ಅಸಮಾಧಾನ ವ್ಯಕ್ತಪಡಿಸಿದರು ಕೂಡ. ಹಾಡುಗಳಿಗೆ ಅನುಮತಿ ಪಡೆದು, ನಂತರ ಚಿತ್ರಕಥೆ ಯೋಜಿತವಾದ ಸಂದರ್ಭದಲ್ಲಿ ಕವಿಯ ಪಾತ್ರವೇನು?  ”ಹಾಡು ಮಾತ್ರ ನನ್ನದು :ಕಥೆ ಅವರದ್ದು ನನಗೂ ಅದಕ್ಕೂ ಸಂಬಂಧವಿಲ್ಲ “ ಎಂದು ಸಮಜಾಯಿಷಿ ಕೊಡುವುದು ಅವರಿಗೆ ಅನಿವಾರ್ಯವಾಯಿತು.

ಆದರೆ ಈ ಚಲನಚಿತ್ರಕ್ಕಿಂತ ನಮ್ಮ ಕುಟುಂಬ ಸದಸ್ಯರ ಮಾನಸಿಕ ಸ್ಥಿತಿಯ ಮೇಲೆ ಒತ್ತಡ ಬೀರಿದ ಹಾಗೂ ಕೆಲವೊಮ್ಮೆ ಕಸಿವಿಸಿ ತಂದ ಪ್ರಯತ್ನ, ನಮ್ಮ ತಂದೆಯವರ ನಿಧನಾನಂತರ ರಂಗದ ಮೇಲೆ ಬಂದ “ಮೈಸೂರು ಮಲ್ಲಿಗೆ” ನಾಟಕ. ಎಲ್ಲ ಮನೆಗಳಲ್ಲೂ ಸರ್ವೇಸಾಧಾರಣವಾಗಿರಬಹುದಾದ ಭಿನ್ನಾಭಿಪ್ರಾಯ, ಮುನಿಸುಗಳಂಥ  ನಮ್ಮ ಕುಟುಂಬದ  ಸಣ್ಣಸಣ್ಣ ವಿದ್ಯಮಾನಗಳನ್ನೂ, ಸಂಗತಿಗಳನ್ನೂ ಏನೋ ಹೊಸದಾಗಿ ಸಂಶೋಧಿಸಿದ್ದೇವೆಂದು ಪರಿಭಾವಿಸಿ, ನಾಟಕದಲ್ಲಿ ತಂದು ಅದಕ್ಕೆ “ಕಾಲ್ಪನಿಕ ನಾಟಕ”  ಎಂಬ ಗುರಾಣಿ ಹಿಡಿದ ನಾಟಕಕಾರ ,ನಿರ್ದೇಶಕ ನಮ್ಮ ಕುಟುಂಬದ ಸದಸ್ಯರ ಮೇಲೆ ಎಬ್ಬಿಸಿರುವ ಅವಾಂತರ ವರ್ಣನಾತೀತ.

ನಾಟಕ ಮೊದಲ ಬಾರಿ ನೋಡಿದ ನನ್ನ ಪರಿಚಿತರೆಲ್ಲ “ಹೌದೇ?ನಿಜವೇ ? ಸುಳ್ಳಿದ್ದರೆ ಏಕೆ ಸುಮ್ಮನಿದ್ದೀರಿ?”ಎಂಬ ಪ್ರಶ್ನೆ , ಅನುಮಾನಗಳ ಬಾಣವನ್ನೇ ಸುರಿಸಿದರು. ಇದೇ ಅನುಭವ ನನ್ನ  ಇಬ್ಬರು ಅಣ್ಣಂದಿರು ಹಾಗೂ ತಮ್ಮನಿಗೂ ಆಗಿದೆ. ದುರದೃಷ್ಟವೆಂದರೆ ನಾಟಕ ರಚಿಸಿದ ರಾಜೇಂದ್ರ ಕಾರಂತ, ಹಾಗೂ ನಿರ್ದೇಶಿಸಿದ ಬಿ ವಿ ರಾಜಾರಾಂ ಇಬ್ಬರೂ ನನ್ನ ಆತ್ಮೀಯ ಸ್ನೇಹಿತರೇ. ನಮ್ಮಅಣ್ಣ ಇಬ್ಬರನ್ನೂ ಕಂಡು ಇದರ ಬಗ್ಗೆ ಕಟುವಾಗಿ ಖಂಡಿಸಿದಾಗ “ಇದು ಕಾಲ್ಪನಿಕ ಕಥೆ ,ಏನಾದರೂ ಸಾಮ್ಯತೆಯಿದ್ದರೆ ಅದು ಕಾಕತಾಳೀಯ” ಎಂಬ ಸಿನಿಮಾ ಸಂಭಾಷಣೆಯನ್ನೇ ಉಲಿದರಂತೆ. ”ಕವಿಯ ಹಾಡುಗಳನ್ನು ಬಳಸಿಕೊಂಡು ,ಮೈಸೂರು ಮಲ್ಲಿಗೆ ಹೆಸರಿಟ್ಟು ಕಾಲ್ಪನಿಕ ಎಂದು ಹೇಗೆ ಹೇಳುತ್ತೀರಿ”, ಎಂದು ವಾದಿಸಿದಾಗ, ಅಂಥ ಕೆಲವು ದೃಶ್ಯ ಬದಲಾಯಿಸುವುದಾಗಿ ಒಪ್ಪಿಕೊಂಡರು.

ನಾನು ಮೊದಲ ಬಾರಿ ನಾಟಕ ನೋಡಿದ್ದು 2015 ರ ಜನವರಿಯಲ್ಲಿ. ಬಹುಶಃ  ಆಗ ಹಲವು ಬದಲಾವಣೆ ಮಾಡಿದ್ದರು ಎಂದು ತೋರುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ಒಂದೆರಡು ಕಡೆ ಕುಹಕದ ಮಾತುಗಳು ಉಳಿದಿದೆ. ಹೊಸದಾಗಿ ನೋಡಿದವರು ಇಂದೂ ಅದರ ಬಗ್ಗೆ ಕೇಳುತ್ತಿರುತ್ತಾರೆ. ಈಗ ನಾವೂ ಆ ನಾಟಕದಿಂದ ಅಂತರವನ್ನು ಕಾಯ್ದುಕೊಳ್ಳುತ್ತಿದ್ದೇವೆ.

ಆದರೂ ಜನ ಬಹಳ ಅಭಿಮಾನದಿಂದ ಹಾಗೂ ಕುತೂಹಲದಿಂದ ನಾಟಕವನ್ನು ಆಸ್ವಾದಿಸುತ್ತಿದ್ದಾರೆ. ಆ ಕಾರಣಕ್ಕಾಗಿ ನಿರ್ದೇಶಕರು ಹಾಗೂ ರಚಿಸಿದವರು ಅಭಿನಂದನಾರ್ಹರೇ.

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:     http://surahonne.com/?p=31606


-ಕೆ ಎನ್ ಮಹಾಬಲ

(ಕೆ ಎಸ್ ನ ಪುತ್ರ, ಬೆಂಗಳೂರು)

3 Responses

  1. ನಯನ ಬಜಕೂಡ್ಲು says:

    ಮೈಸೂರು ಮಲ್ಲಿಗೆ ಯ ಹಾಡುಗಳು ಎಷ್ಟು ಕೇಳಿದರೂ ಮನ ತಣಿಯದು ಅಷ್ಟು ಸುಂದರ ಸಾಹಿತ್ಯ ಹಾಗೂ ಇಂಪು

  2. Hema, hemamalab@gmail.com says:

    ಗುಲಾಬಿಯ ಜೊತೆಗೆ ಮುಳ್ಳು ಇರುವುದು ಗೊತ್ತು..ಆದರೆ ‘ಮಲ್ಲಿಗೆ’ಯ ಜೊತೆಗೂ ಮುಳ್ಳು ಸೇರಿಕೊಂಡಂತಾಯಿತು

  3. ಶಂಕರಿ ಶರ್ಮ says:

    ‘ಮೈಸೂರು ಮಲ್ಲಿಗೆ’ ಯಿಂದಾಗಿ ತಮ್ಮ ಕುಟುಂಬದವರೆಲ್ಲಾ ಅನುಭವಿಸಿದ ಮಾನಸಿಕ ಹಿಂಸೆಯು ನಿಜಕ್ಕೂ ಬೇಸರ ತಂದಿತು. ನಮಗೆಲ್ಲಾ ದೂರದ ಬೆಟ್ಟ ನುಣ್ಣಗೆ…ಬಳಿ ಸಾರಿದರೆ ಮಾತ್ರ ಮುಳ್ಳುಗಳನ್ನು, ಬಂಡೆಗಳನ್ನು ಕಾಣಬಹುದು! ಜೀವನಾನುಭವದ ಲೇಖನ ಮನದುಂಬಿತು ಸರ್.

Leave a Reply to Hema, hemamalab@gmail.com Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: