‘ನೆಮ್ಮದಿಯ ನೆಲೆ’-ಎಸಳು 6

Share Button

ಹುಟ್ಟಿ ಬೆಳೆದ ಮನೆಯನ್ನು, ಹೆತ್ತವರನ್ನು, ಒಡಹುಟ್ಟಿದವರನ್ನು ಬಿಟ್ಟು ಹೋಗುವಾಗ ನನಗೂ ಎಲ್ಲರಂತೆ ದುಃಖ ಮಡುಗಟ್ಟಿತ್ತು. ತಡೆಯಲಾರದೆ ಅಮ್ಮನನ್ನು ಅಪ್ಪಿಕೊಂಡು ಅತ್ತುಬಿಟ್ಟೆ. ಅಲ್ಲಿಯೇ ಇದ್ದ ಅಪ್ಪ ಶಲ್ಯದಲ್ಲಿ ಮುಖ ಮರೆಮಾಡಿಕೊಂಡು ದುಃಖವನ್ನು ತಡೆಯುತ್ತಿದ್ದರು. ಒಡಹುಟ್ಟಿದವರ ಕಣ್ಣುಗಳಲ್ಲೂ ನೀರು ತುಂಬಿತ್ತು. ಆದರೆ ಅವರು ತಮ್ಮ ಸಂಗಾತಿಗಳೊಡನೆ ನನ್ನ ಜೊತೆಯಲ್ಲಿ ಬಂದು ಅತ್ತೆಯ ಮನೆಯವರೆಗೆ ಬಿಟ್ಟು ಬರಲು ಹೊರಟಿದ್ದಾರೆಂಬ ಸತ್ಯ ಅರಿವಾಗಿ ಅಚ್ಚರಿಯಾಯಿತು. “ಇದು ನಿಜವೇ?” ಎಂದು ಅಕ್ಕನನ್ನು ಪಿಸುದನಿಯಲ್ಲಿ ಕೇಳಿದಾಗ “ಹಾ ! ನಿನ್ನನ್ನು ಕರೆದುಕೊಂಡು ಹೋಗುವುದಕ್ಕಿಂತ ನಿನ್ನ ಅತ್ತೆಯ ಮನೆಯವರ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಕುತೂಹಲ ಅವರಿಗಿದ್ದಂತಿದೆ. ನೀನೇನೂ ಅಡ್ಡ ಮಾತನಾಡಬೇಡ ” ಎಂದಳು.

ಕತ್ತಲಾಗುವುದರೊಳಗೆ ಊರು ಸೇರಬೇಕೆಂಬ ಮಾವನವರ ಸೂಚನೆಯಂತೆ ಹೊರಟ ನಾವು ದಾರಿ ಸವೆಸಿದ್ದೇ ಗೊತ್ತಾಗಲಿಲ್ಲ. ಅಷ್ಟರಮಟ್ಟಿಗೆ ಬಸ್ಸಿನಲ್ಲಿ ಮಾತುಕತೆ, ಹರಟೆ, ನಗೆ ತುಂಬಿತ್ತು.

ಅತ್ತೆ ಮನೆ ತಲುಪಿದ ನನ್ನನ್ನು ಶಾಸ್ತ್ರೋಕ್ತವಾಗಿ ಮನೆ ತುಂಬಿಸಿಕೊಂಡರು. ಹೊಸ್ತಿಲಲ್ಲಿದ್ದ ಪಡಿಯಕ್ಕಿ ಒದ್ದು ಮನೆಯೊಳಗೆ ಪ್ರವೇಶಿಸುತ್ತಿದ್ದ ನನಗೆ ಆ ಮನೆ ಮೈಸೂರಿನಲ್ಲಿದ್ದ ನಾನು ಹುಟ್ಟಿಬೆಳೆದ ಮನೆಯಂತೆಯೇ ಗೋಚರಿಸಿತು. ಕೈಕಾಲು ತೊಳೆಯುತ್ತಿದ್ದಾಗ ಗಮನಕ್ಕೆ ಬಂದಿದ್ದು ತೊಟ್ಟಿಮನೆ, ದೇವರ ಕೋಣೆಯನ್ನು ಪ್ರವೇಶಿಸುವಾಗ ಕಂಡದ್ದು ಅದೇ ರೀತಿಯ ಸ್ವಲ್ಪಹಿತ್ತಲು, ಬಾವಿ. ನಮ್ಮದೋ ಪೂರಾ ಹೆಂಚಿನ ಮನೆ, ಆದರಿದು ಆರ್.ಸಿ.ಸಿ. ಮನೆ. ಶಾಸ್ತ್ರಿಗಳು ಹೈನುಗಾರಿಕೆಯನ್ನೂ ಮಾಡುತ್ತಾರೆ ಎಂದಿದ್ದರು. ಆದರೆ ಹಸುಗಳ ಕೊಟ್ಟಿಗೆ ಎಲ್ಲೂ ಕಾಣಬರಲಿಲ್ಲ. ನೋಡೋಣ ದಿನಗಳೆದಂತೆ ಎಲ್ಲವೂ ತಿಳಿಯುತ್ತೆ ಅಂದುಕೊಂಡೆ. ಅಷ್ಟರಲ್ಲಿ ನನ್ನಣ್ಣ ರಾಘವ ಮಾವನವರನ್ನು “ಹಸುಗಳನ್ನು ಸಾಕಿದ್ದಾರೆಂದಿದ್ದರು ಶಾಸ್ತ್ರಿಗಳು. ಎಲ್ಲಿ ಕಾಣುತ್ತಿಲ್ಲವಲ್ಲಾ? ” ಎಂದು ಕೇಳಿದರು.

“ಓ ಅದು ಒಂದು ಫರ್ಲಾಂಗ್ ದೂರದಲ್ಲಿ ನಮ್ಮ ಜಮೀನಿದೆ. ಅಲ್ಲಿ ಒಕ್ಕಲುಮಕ್ಕಳ ಕುಟುಂಬವಿದೆ. ಹಸುಗಳ ಸಾಕಾಣಿಕೆ, ಹಾಲುಕರೆದು ವಿತರಣೆಯ ಕಾರುಬಾರೆಲ್ಲ ಅವರದ್ದೇ ಎಂದರು.” ಅಣ್ಣನಿಗೆ ಉತ್ತರ ಸಿಕ್ಕಿದಂತಾಯಿತು. ನನ್ನ ಅನುಮಾನವೂ ಪರಿಹಾರವಾಯಿತು.

ಎಲ್ಲರೊಡಗೂಡಿ ದೇವಸ್ಥಾನಕ್ಕೆ ಹೋಗಿ ಶ್ರಿಕಂಠೇಶ್ವರನ ದರ್ಶನ ಪಡೆದುಬಂದೆವು. ಬರುವಷ್ಟರಲ್ಲಿ ಬಿಸಿಬಿಸಿ ಗಸಗಸೆ ಪಾಯಸ, ಚಿತ್ರಾನ್ನ, ತರಕಾರಿ ಹಾಕಿದ ಕೂಟು, ಸೌತೇಕಾಯಿ ಕೋಸಂಬರಿ, ಉಪ್ಪಿನಕಾಯಿ, ಮೊಸರು, ಸಿದ್ಧವಾಗಿತ್ತು. “ಮಧ್ಯಾಹ್ನದ ಊಟ ಹೆವಿಯಾಗಿದ್ದರಿಂದ ಈಗ ಸರಳ ಊಟ ಆಗಬಹುದೇ? ” ಎಂದು ಎಲ್ಲರನ್ನೂ ಊಟಕ್ಕೆ ಆಹ್ವಾನಿಸಿದರು ನನ್ನವರ ದೊಡ್ಡ ಅತ್ತಿಗೆಯವರು. ಮನಸ್ಸಿನಲ್ಲಿ ದುಗುಡ ತುಂಬಿದ್ದರಿಂದ ನನಗೆ ಮಧ್ಯಾಹ್ನ ಊಟವನ್ನು ಸರಿಯಾಗಿ ಮಾಡಲಾಗಿರಲಿಲ್ಲ. ಈಗ ಹೊಟ್ಟೆ ತಾಳಹಾಕುತ್ತಿತ್ತು. ಎಲ್ಲರೊಟ್ಟಿಗೇ ಊಟಕ್ಕೆ ಕೂಡಬಹುದೋ ಏನೋ? ಯಾರನ್ನು ಕೇಳುವುದು ಎನ್ನುವ ಜಿಜ್ಞಾಸೆಯಲ್ಲಿದ್ದ ನನ್ನನ್ನು ನನ್ನವರ ಅಕ್ಕ ಹತ್ತಿರ ಬಂದು “ಬಾ ಇಲ್ಲಿ ಅಂಥಹ ಕಟ್ಟುಪಾಡುಗಳೇನೂ ಇಲ್ಲ”. ಎಂದು ಕೈಹಿಡಿದು ಪಂಕ್ತಿಯಲ್ಲಿ ಕೂಡಿಸಿಯೇ ಬಿಟ್ಟರು. ಸಂಕೋಚಬಿಟ್ಟು ಎಲ್ಲರೊಡನೆ ಊಟ ಮಾಡಿದೆ. ಅಡುಗೆ ತುಂಬಾ ಚೆನ್ನಾಗಿತ್ತೆಂದ ನನ್ನ ಅತ್ತಿಗೆಯರ ಮಾತಿಗೆ “ಹಾ ಅತ್ತೆಯವರ ಕೈ ರುಚಿ ಬೊಂಬಾಟ್, ನಾವೆಲ್ಲರೂ ಇಲ್ಲಿಗೆ ಬಂದರೆ ತಿಂದು ಹೋಗುವುದಷ್ಟೇ ಕೆಲಸ. ತಾಯಿಯ ಮನೆಗೆ ಹೋದಷ್ಟೇ ಸುಖ. ನಾವೇನಾದರೂ ಮಾಡಲು ಮುಂದಾದರೆ ಅತ್ತೆಯವರು ನನ್ನ ಕೈಲಾಗುವಷ್ಟು ದಿನ ಮಾಡಿ ಹಾಕುತ್ತೇನೆ, ಆಮೇಲೆ ನೀವುಗಳೇ ಅಲ್ಲವೇ ಎಂದು ಬಾಯಿ ಮುಚ್ಚಿಸುತ್ತಾರೆ ಎಂದರು “ನನ್ನವರ ಅತ್ತಿಗೆ. ಅದನ್ನು ಕೇಳಿದ ನನ್ನ ಅತ್ತಿಗೆಯಂದಿರು ಮೌನ ತಾಳಿದರು.

ಚಿತ್ರಕೃಪೆ: ಅಂತರ್ಜಾಲ

ಅವರ ಮನೆಯ ಪದ್ಧತಿಯಂತೆ ಅಲ್ಲೇ ನನ್ನ ಪ್ರಥಮ ರಾತ್ರಿಗೆ ಏರ್ಪಾಡು ಮಾಡಿದ್ದರು. ನನಗೋ ಹೊಸಜಾಗ, ನನ್ನ ಕೈಹಿಡಿದವರೋ ಮೈಸೂರಿನಲ್ಲೇ ಕೆಲಸ ಮಾಡುತ್ತಿದ್ದರೂ ಒಂದು ದಿನವೂ ನಮ್ಮ ಮನೆಯ ಕಡೆ ಸುಳಿದಿರಲಿಲ್ಲ. ನನ್ನ ಸಹಪಾಠಿಗಳಲ್ಲಿ ಕೆಲವರಿಗೆ ಮದುವೆಯಾಗಿತ್ತು. ಅವರುಗಳ ಅನುಭವವನ್ನು ಕೇಳಿದ್ದ ನನ್ನೆದೆ ನಗಾರಿಯಂತೆ ಬಡಿದುಕೊಳ್ಳುತ್ತಿತ್ತು. ಹೀಗೆ ಚಡಪಡಿಸುತ್ತಿರುವಾಗಲೇ ನನ್ನ ಅತ್ತಿಗೆಯಂದಿರು ನೆನಪಾದರು. ಅವರಾದರೋ ನನ್ನೊಡನೆ ಇರಲಿಲ್ಲ. “ಸುಕನ್ಯಾ ಬಾಯಿಲ್ಲಿ” ಎಂದು ನನ್ನನ್ನು ಕರೆಯುತ್ತಾ ಹಾಲಿನಲ್ಲಿದ್ದ ಮೆಟ್ಟಿಲು ಹತ್ತುತ್ತಾ ನಡೆದಿದ್ದರು ನನ್ನವರ ದೊಡ್ಡ ಅತ್ತಿಗೆ. ಮಾತಾಡದಂತೆ ಅವರನ್ನು ಹಿಂಬಾಲಿಸಿದೆ. “ನೋಡು ಈ ಮನೆಯಲ್ಲಿ ಯಾರಿಗೂ ಅತಿಯಾದ ಶಾಸ್ತ್ರ ಸಂಪ್ರದಾಯಗಳು ಹಿಡಿಸೋಲ್ಲ. ಆ ರೂಮಿನಲ್ಲಿ ದಯಾ ಇದ್ದಾನೆ ಹೋಗು, ನಿಮ್ಮಿಬ್ಬರ ದಾಂಪತ್ಯ ಜೀವನ ಸುಖಮಯವಾಗಿರಲಿ” ಎಂದು ಹಾರೈಸಿ ಹಿಂದಿರುಗಿದರು.

ಅಂಜುತ್ತಲೇ ಅಳುಕುತ್ತಲೇ ರೂಮಿನೊಳಕ್ಕೆ ಅಡಿಯಿಟ್ಟೆ. “ಸುಕನ್ಯಾ ಬಾ, ಇಲ್ಲಿ ಯಾರೂ ಯಾರ ಮೇಲೂ ದಬ್ಬಾಳಿಕೆ ನಡೆಸೋಲ್ಲ. ನೀನು ಬಹಳ ಹೆದರಿಕೊಂಡಂತೆ ಕಾಣುತ್ತಿದ್ದೀ. ಜೀವನ ಪರ್ಯಂತ ನನ್ನೊಡನೆ ಇರಲು ಸಮ್ಮತಿಯಿತ್ತ ಮೇಲೆ ಅವಸರದ ಆಂಜನೇಯ ನಾನೇಕಾಗಲಿ” ಎಂದು ಸೌಜನ್ಯದಿಂದಲೇ ನಡೆದುಕೊಂಡರು.

ಮಾರನೆಯ ದಿನ ಅಣ್ಣ ಅತ್ತಿಗೆಯರು ಮೈಸೂರಿಗೆ ಹಿಂತಿರುಗಿದರು. ಅತ್ತೆಯ ಮನೆಯ ಕುಟುಂಬದವರೊಡನೆ ಒಡನಾಟದಲ್ಲಿ ದಿನಗಳುರುಳಿದ್ದೇ ತಿಳಿಯಲಿಲ್ಲ. ನನ್ನವರ ರಜೆಯೂ ಮುಗಿದು ಅವರು ಕೆಲಸಕ್ಕೆ ಹಾಜರಾಗಬೇಕಾದ ದಿನವೂ ಹತ್ತಿರ ಬಂತು. ಈ ಅಂತರದಲ್ಲಿ ನನಗೆ ನನ್ನತ್ತೆಯವರ ಬಗ್ಗೆ ಹೆಚ್ಚಿನ ಸಂಗತಿಗಳು ಅರಿವಾಗಿತ್ತು. ಅವರು ನೋಡಲು ಸುಂದರಿಯಷ್ಟೇ ಅಲ್ಲ, ಅತ್ಯಂತ ಸಹನಾಶೀಲ ಮಹಿಳೆಯಾಗಿದ್ದರು. ಮನೆಯ ಜವಾಬ್ದಾರಿಯುತ ಯಜಮಾನಿಯಾಗಿದ್ದರು. ಯಾವುದೇ ಹಮ್ಮು, ಬಿಮ್ಮು ಇಲ್ಲದೆ ಎಲ್ಲರೊಡನೆ ಹೊಂದಿಕೊಳ್ಳುವ ಸ್ವಭಾವದವರು. ಮನೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ಒಂದಲ್ಲ ಒಂದು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಯಾರಿಗೂ ಯಾವುದೇ ಕೆಲಸ ಮಾಡೆಂದು ಒತ್ತಾಯಿಸುತ್ತಿರಲಿಲ್ಲ.

ಬೆಳಗ್ಗೆ ಏಳುಗಂಟೆಗೆ ಮನೆಬಿಟ್ಟು ಹೋಗುತ್ತಿದ್ದ ನನ್ನವರು ಮತ್ತೆ ಹಿಂತಿರುಗಿ ಮನೆಗೆ ಬರುತ್ತಿದ್ದುದು ರಾತ್ರಿ ಒಂಬತ್ತು ಗಂಟೆಯಾಗುತ್ತಿತ್ತು. ನನಗೆ ಇದು ಸೊಜಿಗದ ಸಂಗತಿಯಾಗಿತ್ತು. ಏಕೆಂದರೆ ಪದವೀಧರೆಯಾಗಿದ್ದ ನನಗೆ ಕಾಲೇಜಿನ ಟೈಮಿಂಗ್ಸಿನ ಬಗ್ಗೆ ತಿಳಿದಿತ್ತು. ವಾರದಲ್ಲಿ ಒಬ್ಬರು ಲೆಕ್ಚರರ್ ಎಷ್ಟು ಗಂಟೆಗಳ ಕಾಲ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ? ಲೈಬ್ರರಿಗೆ ರೆಫರೆನ್ಸಿಗಾಗಿ ಹೋದರೂ, ಬಸ್ಸು ಸಿಗುವುದು ತಡವಾದರೂ ಇಷ್ಟು ಹೊತ್ತು ಏಕಾಗುತ್ತದೆ? ಹೀಗೆ ಏನೇನೋ ಆಲೋಚನೆಗಳು ಬರತೊಡಗಿದವು. ಅಕ್ಕಪಕ್ಕದವರು ಆಗಾಗ ಮನೆಗೆ ಬಂದು ಹೋಗುವುದು ಇದ್ದರೂ ನಾನು ಬಯಸುವಂತಹ ಗೆಳತಿಯರ್‍ಯಾರೂ ಸಿಗಲೇ ಇಲ್ಲ. ಕೆಲವರು ಪರವಾಗಿಲ್ಲ ಎಂದುಕೊಂಡರೂ ಇವರೊಡನೆ ಒಡನಾಟ ಮುಂದುವರೆಸಬಹುದೋ ಅಂದುಕೊಳ್ಳುವಷ್ಟರಲ್ಲಿ ಅವರು ತೋರುತ್ತಿದ್ದ ಜೋಯಿಸರ ಮನೆಯ ಸೊಸೆ ಎಂಬ ಅತೀವ ಗೌರವ ನನಗೆ ಮುಜುಗರ ತರಿಸುವಂತಾಗುತ್ತಿತ್ತು. ಕಾಲಕ್ರಮೇಣ ಸರಿಹೋಗಬಹುದು ಎಂಬ ಆಶಾಭಾವನೆ ಹೊಂದಿದ್ದೆ.

ಒಂದು ದಿನ ಮಧ್ಯಾಹ್ನ ನನ್ನ ರೂಮಿನಲ್ಲಿಟ್ಟಿದ್ದ ಕುಡಿಯುವ ನೀರು ಮುಗಿದುಹೋಗಿತ್ತು. ಜಗ್ಗನ್ನು ತುಂಬಿಸಿಕೊಂಡು ಬರೋಣವೆಂದು ಅಡುಗೆ ಮನೆ ಕಡೆಗೆ ಹೋಗುತ್ತಿದ್ದ ನನಗೆ ಅತ್ತೆ ಮಾವನವರು ಮಾತನಾಡುತ್ತಿದ್ದುದು ಕೇಳಿಸಿತು. ಅಲ್ಲೇ ನಿಂತೆ. ಅತ್ತೆಯವರು “ಅಲ್ರೀ ನಮ್ಮ ದಯಾನಂದನಿಗೆ ಬುದ್ಧಿ ಇಲ್ಲವೇ ಇಲ್ಲ. ಮೈಸೂರಿನಲ್ಲಿ ಮನೆಮಾಡಿ ಸೊಸೆಯನ್ನು ಕರೆದುಕೊಂಡು ಹೋಗುವುದು ಬಿಟ್ಟು ಅದ್ಯಾಕಿಲ್ಲಿ ಅವಳನ್ನು ಕಟ್ಟಿಹಾಕಿದ್ದಾನೋ ಕಾಣೆ. ಪಾಪ ಆ ಮಗು ಚಡಪಡಿಸುತ್ತಿರುತ್ತದೆ”. ಎಂದರು. ಅದಕ್ಕೆ ಮಾವನವರು “ಇರಲಿ ಬಿಡು ಶಾರದೆ, ಇಷ್ಟು ಮಕ್ಕಳಲ್ಲಿ ಯಾರ ಸಂಸಾರವೂ ಒಂದು ವಾರಕ್ಕಿಂತ ಹೆಚ್ಚಾಗಿ ಇಲ್ಲಿ ನಮ್ಮೊಡನೆ ಇದ್ದದ್ದೇ ಇಲ್ಲ. ಈ ಮಗು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದೆ. ಮುಂದೆ ಮಕ್ಕಳು ಮರಿಯಾದಾಗ ಅವುಗಳ ವಿದ್ಯಾಭ್ಯಾಸದ ಸಲುವಾಗಿ ಹೋಗಲೇಬೇಕಾದೀತು. ಆಗ ಹೋಗುತ್ತಾರೆ. ಇರುವಷ್ಟು ದಿನ ನಮ್ಮೊಡನೆ ಇರಲಿ. ನೀನೂ ದಯಾನಂದನನ್ನು ಈ ಬಗ್ಗೆ ಒತ್ತಾಯಿಸಬೇಡ. ಆ ಮಗು ಏನು ಕೆಲಸ ಮಾಡದಿದ್ದರೂ ಪರವಾಗಿಲ್ಲ. ನಮ್ಮ ಕಣ್ಮುಂದೆ ಒಡಾಡಿಕೊಂಡಿದ್ದರೆ ಅಷ್ಟೇ ಸಾಕು. ಹಾ ! ಶಾರದೆ ಮರೆತಿದ್ದೆ, ಇವತ್ತು ದೇವಸ್ಥಾನದಲ್ಲಿ ಕಾಣಿಕೆಯ ಹುಂಡಿಯ ಹಣವನ್ನು ಎಣಿಕೆ ಮಾಡುತ್ತಾರೆ. ಆದ್ದರಿಂದ ಸಂಜೆ ನಾನು ಬರುವುದು ತಡವಾಗಬಹುದು, ನಾನು ಬರಲೇ “ಎಂದು ಹೊರಟರು.

ನಾನು ಎಚ್ಚೆತ್ತು ಅಲ್ಲೇ ಮರೆಯಾಗಿ ನಿಂತೆ ಅವರು ಹೊರ ನಡೆದರು. ನಾನು ಅವರಿಬ್ಬರ ನಡುವಿನ ಮಾತುಕತೆಯನ್ನು ಕೇಳಿ ಮನದಲ್ಲೇ “ಪ್ರತಿಯೊಬ್ಬ ತಂದೆತಾಯಿಯೂ ಮಕ್ಕಳು ತಮ್ಮೊಡನೆ ಇದ್ದರೆ ಚೆನ್ನ ಎಂದು ಬಯಸುವುದು ಸಹಜ. ಆದರೆ ಎಲ್ಲರೂ ಒದಗುವ ಪರಿಸ್ಥಿತಿಗೆ ತಲೆಬಾಗಿ ಮೌನ ವಹಿಸುತ್ತಾರೆ. ಈಗ ನನ್ನವರ ಬಯಕೆಯಂತೆ ಸಾಧ್ಯವಾದಷ್ಟು ಸಮಯ ಇವರೊಡನೆ ಇರೋಣವೆಂದು” ತೀರ್ಮಾನಿಸಿದೆ. ಮಿತಭಾಷಿಯಾದ ನನ್ನವರು ಯಾವ ನಿರ್ಬಂಧವಾಗಲೀ ನನ್ನಮೇಲೆ ಹೇರದಿದ್ದರೂ ನಾನು ಮುಂದೆ ಓದನ್ನು ಮುಂದುವರೆಸುವುದಾಗಲೀ, ಕೆಲಸಕ್ಕೆ ಸೇರುವುದಾಗಲೀ ಅವರಿಗೆ ಇಷ್ಟವಾಗದೆಂಬ ಅಂಶ ಮನದಟ್ಟಾಗಿತ್ತು. ಈಗ ಇರುವುದೆಂದರೆ ನಾನು ನನ್ನನ್ನು ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಈ ಹಿರಿಯ ಜೀವಿಗಳ ಕಳವಳವನ್ನು ದೂರ ಮಾಡಬೇಕೆಂದು ನಿರ್ಧರಿಸಿದೆ.

ಮನೆಯಲ್ಲಿ ಒಂದು ಪುಸ್ತಕ ಭಂಡಾರವೇ ತುಂಬಿತ್ತು. ಆದರೆ ಅವುಗಳು ಒಂದು ಕ್ರಮವರಿತು ಜೋಡಣೆಯಾಗಿರಲಿಲ್ಲ. ಇದನ್ನೆಲ್ಲ ಸರಿಪಡಿಸಿದರೆ ಹೇಗೆ? ಎಂಬ ಆಲೋಚನೆ ಬಂತು. ತಡಮಾಡದೆ ಆ ಕೆಲಸವನ್ನು ಕೈಗೆತ್ತಿಕೊಂಡೆ. ಬಾಷೆ, ವಿಷಯಗಳನ್ನು ಆಧರಿಸಿ ವಿಭಾಗ ಮಾಡಿದೆ. ಹರಿದು ಹೋಗಿದ್ದ ಪುಟಗಳನ್ನು ಅಂಟುಹಾಕಿ ಸರಿಪಡಿಸಿದೆ. ಬೈಂಡುಹಾಕಿ ಅದರ ಮೇಲೆ ನಂಬರುಗಳನ್ನು ಕ್ರಮವಾಗಿ ನಮೂದಿಸಿದೆ. ಒಪ್ಪವಾಗಿ ಅವುಗಳನ್ನು ಜೋಡಿಸಿಟ್ಟೆ. ಅದನ್ನು ನೋಡಿದ ನನ್ನವರು “ವೆರಿಗುಡ್ ಸುಕನ್ಯಾ, ನಾನು ಎಷ್ಟೋ ಸಾರಿ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಅಂದುಕೊಳ್ಳುತ್ತಿದ್ದೆ. ಆಗುತ್ತಲೇ ಇರಲಿಲ್ಲ. ಪ್ರತಿದಿನವೂ ಓಡಾಟ, ರಜೆಯಿದ್ದಾಗ ಊರಿನಲ್ಲಿನ ಗೆಳೆಯರೊಡನೆ ತಿರುಗಾಟದಲ್ಲೇ ಕಾಲ ಕಳೆದುಹೋಗುತ್ತಿತ್ತು. ಈ ಕೆಲಸ ಮುಂದುಮುಂದಕ್ಕೆ ಹೋಗುತ್ತಿತ್ತು. ಇವತ್ತು ನಿನ್ನ ಕೈಯಿಂದ ಇದಕ್ಕೊಂದು ರೂಪ ಬಂತು ಥ್ಯಾಂಕ್ಸ್ “ಎಂದರು.

“ಇದಕ್ಕೆಲ್ಲಾ ಥ್ಯಾಂಕ್ಸ್ ಏಕೆ, ಮನೆಯಲ್ಲಿ ಅತ್ತೆಯವರೇ ಎಲ್ಲಾ ಮನೆಗೆಲಸಗಳನ್ನು ಮಾಡಿಬಿಡುತ್ತಾರೆ. ತೀರಾ ಒತ್ತಾಯಮಾಡಿದರೆ ಚಿಕ್ಕಪುಟ್ಟ ಕೆಲಸಗಳನ್ನಷ್ಟೇ ನನಗೆ ಬಿಡುತ್ತಾರೆ. ಹೊರಗಿನ ಕೆಲಸಕ್ಕೆ ಕೆಲಸದ ಆಳುಗಳಿದ್ದಾರೆ. ಕಾಲಕಳೆಯಲು ಹೀಗೇ ಒಂದೊಂದೇ ಹುಡುಕಿಕೊಳ್ಳುತ್ತಿದ್ದೇನೆ” ಎಂದೆ. ಆಗಲಾದರೂ ಕಾಲೇಜಿನಿಂದ ಸಂಜೆ ಬೇಗ ಬರುತ್ತೇನೆಂದು ಹೇಳುತ್ತಾರೇನೋ ಎಂದು ನಿರೀಕ್ಷಿಸಿದ್ದೆ. ಆದರೆ ಅವರು “ಒಳ್ಳೆಯದು, ಹಾಗೇ ಮಾಡು. ಇಲ್ಲಿ ಸ್ತ್ರೀ ಸಮಾಜಗಳಿವೆ. ಅಲ್ಲಿ ಏನೇನೋ ಕಲಿಸುತ್ತಾರೆ. ಅಮ್ಮ ಒಮ್ಮೊಮ್ಮೆ ಅಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿರುತ್ತಾರೆ. ನೀನೂ ಅಲ್ಲಿಗೆ ಸೇರಿಕೋ. ಅಲ್ಲಿ ತರಗತಿಗಳು ನಡೆಸುತ್ತಾರಂತೆ, ನಿನಗ್ಯಾವುದಾದರೂ ಕಲಿಯುವ ಆಸಕ್ತಿಯಿದ್ದರೆ ಸೇರಿಕೋ” ಎಂದರು. ನನಗೂ ಉಳಿದಿರುವುದೆಂದರೆ ಅವುಗಳೇ ಎನ್ನಿಸಿತು.

ಇದೇ ಒಳ್ಳೆಯ ಸಮಯವೆಂದು “ನೀವು ಏನೂ ತಿಳಿದುಕೊಳ್ಳದಿದ್ದರೆ ಒಂದು ಮಾತು, ಕೇಳಬಹುದೇ?” ಎಂದೆ.
“ಅಯ್ಯೋ ಅದಕ್ಯಾಕಿಷ್ಟು ಸಂಕೋಚ, ಕೇಳು” ಎಂದರು.

“ಏನಿಲ್ಲ ನೀವು ಕಾಲೇಜಿನ ಕೆಲಸ ಮುಗಿದಮೇಲೆ ಅಂಗಡಿಯೊಂದರಲ್ಲಿ ಲೆಕ್ಕಪತ್ರ ಬರೆಯಲು ಹೋಗುತ್ತೀರಂತೆ. ನಾನು ನಿಮ್ಮ ಹಾದಿಯನ್ನು ಕಾಯುತ್ತಾ ಘಳಿಗೆ ಘಳಿಗೆಗೂ ಟೈಮ್ ನೋಡುತ್ತಿದ್ದುದನ್ನು ಕಂಡು ಮಾವನವರು ಈ ವಿಷಯ ಹೇಳಿದರು. ಅದು ಅಷ್ಟೊಂದು ಅಗತ್ಯವೇ? ಇಡೀ ದಿನ ಕೆಲಸ ಮಾಡಿರುತ್ತೀರಿ, ಮೇಲೆ ಓಡಾಟ, ಆಯಾಸವಾಗಿರುವುದಿಲ್ಲವೇ? ತಪ್ಪು ತಿಳಿಯಬೇಡಿ. ಇದನ್ನು ನೀವು ಹೇಳಿಲ್ಲವೆಂದು ಆಕ್ಷೇಪಿಸುತ್ತಿಲ್ಲ” ಎಂದೆ.

“ಈ ಪ್ರಶ್ನೆಯನ್ನು ನಾನೇ ನಿನ್ನನ್ನು ಕೇಳಬೇಕೆಂದುಕೊಂಡಿದ್ದೆ” ಎಂದರು.
“ಅರೆ, ನನ್ನನ್ನೇ ಏಕೆ? “ಎಂದೆ.

“ನಿಮ್ಮ ತಂದೆಯವರು ಮಾಸ್ತರರಾಗಿ ನಿವೃತ್ತರಾಗಿದ್ದಾರೆ. ಅವರಿಗೆ ಪೆನ್ಷನ್ ಬರುತ್ತಿದೆ. ಆಸ್ತಿಪಾಸ್ತಿಯೂ ಅವರಿಗಿದೆ. ನಮಗಿಂತಲೂ ಹೆಚ್ಚೇ ಇದೆ. ತಮ್ಮ ಎಲ್ಲ ಕರ್ತವ್ಯಗಳನ್ನೂ ಮುಗಿಸಿದ್ದಾರೆ. ಆದರೂ ಹೋಟೆಲ್ ಒಂದರಲ್ಲಿ ಲೆಕ್ಕಪತ್ರಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಾರೆ” ಏಕೆ?

“ಹೌದು, ಈ ವಿಷಯವಾಗಿ ನಮ್ಮಪ್ಪನನ್ನೂ ನಾನೂ ಅನೇಕ ಸಾರಿ ಕೇಳಿದ್ದೆ. ಅದಕ್ಕವರು ‘ಮಗಳೇ ಬಾಯಿಲ್ಲಿ, ಜಮೀನು, ಮನೆ, ಎಲ್ಲವೂ ನಮ್ಮ ತಾತನಿಂದ ವಂಶಪಾರಂಪರ್ಯವಾಗಿ ನನಗೆ ಬಂದದ್ದು. ಇನ್ನೊಂದು ಭಾಗದ ಜಮೀನು ನಿಮ್ಮ ಅಮ್ಮನೊಡನೆ ಅವಳ ತೌರಿನಿಂದ ಬಂದದ್ದು. ಅವುಗಳಿಂದ ದೊರಕಿದ ಉತ್ಪನ್ನವನ್ನು ಬಳಸಿಕೊಂಡಿದ್ದೇನೆ. ಹಾಗೆಯೇ ಅವುಗಳನ್ನು ನಿರ್ವಹಿಸಲು, ಕಳೆಯದಂತೆ ನೋಡಿಕೊಳ್ಳಲು ಖರ್ಚನ್ನೂ ಮಾಡಿದ್ದೇನೆ. ನನ್ನ ಮಾಸ್ತರ್‌ಗಿರಿ ಮಕ್ಕಳಷ್ಟೇ ನನ್ನ ಸ್ವಯಾರ್ಜಿತ. ಆದ್ದರಿಂದ ನನ್ನ ಸ್ವಂತ ದುಡಿಮೆಯಿಂದ ಒಂದಿಷ್ಟಿರಲೆಂದು ನಾನು ಲೆಕ್ಕ ಬರೆಯುವ ಕೆಲಸ ಮಾಡಿ ಸ್ವಲ್ಪ ಗಳಿಸುತ್ತೇನೆ. ನಾಳೆ ಆಸ್ತಿಯನ್ನು ವಿಭಾಗ ಮಾಡಿದರೆ ನನ್ನ ಗಳಿಕೆಯೇನಿಲ್ಲ ಎಂಬ ಭಾವನೆ ಬರಬಾರದು. ನಮ್ಮ ಮುಪ್ಪಿನ ಕಾಲಕ್ಕೆ ಇದೇ ನಮಗೆ ಆಸರೆಯಾಗಲೆಂಬ ದೂರದ ಆಲೋಚನೆ ಇದು. ಕೈಯಲ್ಲಾಗುವವರೆಗೆ ಮಾಡುತ್ತೇನೆ. ಇದರಲ್ಲಿ ನನಗೆ ಯಾವುದೇ ಕೀಳರಿಮೆ ನನಗಿಲ್ಲ” ಎಂದಿದ್ದರು. ಅದನ್ನು ನನ್ನವ೪ರ ಮುಂದೆ ಹೆಳಿದಾಗ ಅವರು “ಹಾ ಹಾ ಅದೇ ಅಭಿಪ್ರಾಯವೇ ನನ್ನದೂ ಕೂಡ. ಮುಂದೆ ನಿನಗೇ ಗೊತ್ತಾಗುತ್ತೆ. ಇವುಗಳ ಬಗ್ಗೆ ಅನಾವಶ್ಯಕವಾಗಿ ತಲೆ ಕೆಡಿಸಿಕೊಳ್ಳಬೇಡ. ನಿನಗೆ ಹೇಗನ್ನಿಸುತ್ತೋ ಹಾಗೆ ಕಾಲಕಳೆ. ಇಲ್ಲಿ ಯಾರೂ ನಿನ್ನನ್ನು ಆಕ್ಷೇಪಿಸುವವರಿಲ್ಲ” ಎಂದರು.

ಚಿತ್ರಕೃಪೆ: ಅಂತರ್ಜಾಲ

ಅತ್ತೆಯವರ ಜೊತೆಯಲ್ಲಿ ನಮ್ಮ ಮನೆಯ ಸಮೀಪವೇ ಇರುವ ಒಂದು ಸ್ತ್ರೀ ಸಮಾಜಕ್ಕೆ ಹೋದೆ. ಅಲ್ಲಿ ಹೊಲಿಗೆ ತರಬೇತಿ, ಕಸೂತಿ, ಬ್ಯಾಸ್ಕೆಟ್ ಹೆಣಿಕೆ, ಪೇಪರ್ ಚೀಲಗಳ ತಯಾರಿಕೆ,, ಇತ್ಯಾದಿ ತರಗತಿಗಳನ್ನು ನಡೆಸುತ್ತಿದ್ದರು. ಆಗ ಅಲ್ಲಿನ ಕಾರ್ಯದರ್ಶಿಗಳನ್ನು ಕಂಡು “ಇಲ್ಲಿ ನಿಟ್ಟಿಂಗ್, ಕ್ರೋಷಾವರ್ಕ್ ಹೇಳಿಕೊಡುವವರಿಲ್ಲವೇ?” ಎಂದು ಕೇಳಿದೆ. ಅವರು “ಇಲ್ಲಮ್ಮ” ಎಂದರು. “ಹಾಗಾದರೆ ನಾನು ಅಂಥಹ ತರಗತಿಗಳನ್ನು ತೆಗೆದುಕೊಳ್ಳಬಹುದೇ? ನನಗೆ ಅದರಲ್ಲಿ ಟ್ರೈನಿಂಗಾಗಿದೆ .ಇಲ್ಲಿ ಯಾರಾದರೂ ಕಲಿಯಲು ಅಪೇಕ್ಷೆಯಿದ್ದರೆ ಹೇಳಿ “ಎಂದೆ. ಆಗ ಅಲ್ಲಿದ್ದ ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆಯುತ್ತಿರುವ ಮಹಿಳೆಯರನೇಕರು ಮುಂದೆಬಂದು  “ನಿಮಗೆ ಬರುತ್ತಾ ಮೇಡಂ, ನಮಗೆಲ್ಲಾ ಕಲಿಯಬೇಕೆಂಬ ಆಸೆಯಿತ್ತು. ಪಕ್ಕದೂರಿನ ಸ್ತ್ರೀ ಸಮಾಜದಲ್ಲೊಬ್ಬರು ಹೇಳಿಕೊಡುವವರಿದ್ದಾರೆ. ಆದರೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ಸುಮ್ಮನಿದ್ದೆವು. ಖಂಡಿತ ನಾವೆಲ್ಲರೂ ಕಲಿಯಲು ಸೇರಿಕೊಳ್ಳುತ್ತೇವೆ” ಎಂದು ಒಕ್ಕೊರಲಿನಿಂದ ಹೇಳಿದರು.

“ಮಗೂ ಸುಕನ್ಯಾ, ಭಲೇ ನಿನಗೆ ಇವೆಲ್ಲಾ ಬರುತ್ತಾ? ಎಂದೂ ಹೇಳಲೇ ಇಲ್ಲ. ಒಳ್ಳೆಯದಾಯ್ತು ಬಿಡು. ನೀನು ಕಲಿತಿದ್ದು ನಾಲ್ಕು ಜನರಿಗೆ ಹೇಳಿಕೊಟ್ಟ ಹಾಗೂ ಆಗುತ್ತೆ. ನಿನಗೂ ಸಮಯದ ಸದುಪಯೋಗವಾಗುತ್ತೆ. ಇಲ್ಲಿ ನಡೆಸುತ್ತಿರುವ ತರಗತಿಗಳಲ್ಲಿ ನಿನಗೇನಾದರೂ ಕಲಿಯಬೇಕೆನ್ನಿಸಿದರೂ ಕಲಿಯಬಹುದು” ಎಂದರು ನನ್ನತ್ತೆಯವರು. ನಾನು ಅವರ ಮಾತಿಗೆ “ನನಗೆ ಸ್ವಲ್ಪ ಮಟ್ಟಿಗೆ ಇವು ಗೊತ್ತಿವೆ. ಅಮ್ಮ ಕಲಿಸಿದ್ದಾರೆ” ಎಂದೆ.

ಅಲ್ಲಿನ ಕಾರ್ಯದರ್ಶಿಗಳು ಇದೆಲ್ಲವನ್ನೂ ಕೇಳಿಸಿಕೊಂಡು “ಒಳ್ಳೆಯದಾಯಿತು, ಆದರೆ ಒಂದು ಮಾತು. ನಾವು ಕೊಡುವ ಸಂಬಳ ಕಮ್ಮಿ” ಎಂದರು. ನಾನು “ಅದರ ಬಗ್ಗೆ ನನ್ನದೇನೂ ತಕರಾರಿಲ್ಲ. ಯಾವಾಗಿನಿಂದ, ಎಷ್ಟು ಗಂಟೆಗೆ ಬರಲಿ?” ಎಂದೆ. “ನಾಳೆ ನಮ್ಮ ಸಮಾಜದ ಅಧ್ಯಕ್ಷರನ್ನು ಕೇಳಿ ತಿಳಿಸುತ್ತೇನೆ. ನಿಮ್ಮ ಹೆಸರು, ವಿಳಾಸ, ಫೋನ್ ನಂಬರ್ ಕೊಟ್ಟು ಹೋಗಿ ” ಎಂದರು. ಅದರಂತೆ ಕೊಟ್ಟು ಅತ್ತೆಯವರೊಡನೆ ಮನೆಗೆ ಹಿಂತಿರುಗಿದೆ.

ಫೋನಿನಲ್ಲಿ ಈ ಸುದ್ಧಿಯನ್ನು ಹೆತ್ತವರೊಡನೆ ಹಂಚಿಕೊಂಡೆ. ಅಮ್ಮ “ಕೂಸೇ, ಒಳ್ಳೆಯ ಮನೆ ಸಿಕ್ಕಿದೆ, ನನ್ನ ಅಳಿಯನ ಆಸೆಯನ್ನು ನಿರಾಸೆಗೊಳಿಸಬೇಡ. ಬೇಸರ ಎನ್ನುವ ಪದದ ಉಪಯೋಗವನ್ನೇ ಮಾಡಬೇಡ. ನಮಗೆ ನಿನ್ನನ್ನು ನೋಡಬೇಕೆನ್ನಿಸಿದರೆ ಅಲ್ಲಿಗೆ ಬಂದುಬಿಡುತ್ತೇವೆ. ನೀನೂ ಬಂದು ಹೋಗುತ್ತಿರು” ಎಂದು ಉತ್ಸಾಹದ ಮಾತುಗಳನ್ನಾಡಿ ಹುರಿದುಂಬಿಸಿದರು. ನನ್ನವರಿಗೂ ಸುದ್ಧಿ ತಿಳಿಸಿದೆ ಅವರು “ಸರಿ” ಎಂದರಷ್ಟೆ. ಒಂದೆರಡು ದಿನಗಳ ನಂತರ ಸಮಾಜದ ಅಧ್ಯಕ್ಷರಿಂದ ಫೋನ್ ಬಂತು. “ಮುಂದಿನ ತಿಂಗಳಿನಿಂದ ನೀವು ಬರಬಹುದು. ವಾರಕ್ಕೆ ನಾಲ್ಕು ತರಗತಿಗಳು, ಎರಡುದಿನ ನಿಟ್ಟಿಂಗಿಗೆ, ಎರಡು ದಿನ ಕ್ರೋಷಾವರ್ಕ್. ಅಷ್ಟಕ್ಕೆ 50 ರುಪಾಯಿ ಸಂಭಾವನೆ. ತರಗತಿಯ ಸಮಯ ಮಧ್ಯಾಹ್ನ 3 ರಿಂದ 4 ರವರೆಗೆ. ಆಗಬಹುದೇ? “ಎಂದು ಕೇಳಿದರು. ನನಗೆ ಹಣಕ್ಕಿಂತ ಜನರೊಡನೆ ಬೆರೆಯುವ ಅವಕಾಶ ಬೇಕಾಗಿತ್ತು. ಸಮ್ಮತಿಯಿತ್ತೆ. ಅತ್ತೆಯವರನ್ನು “ಈ ವಿಷಯವನ್ನು ಮಾವನವರಿಗೆ ತಿಳಿಸಬೇಕೇ? “ಎಂದು ಕೇಳಿದೆ. ಅವರದಕ್ಕೆ “ಈ ಮನೆಯಲ್ಲಿ ಯಾರೂ ಯಾರಮೇಲೂ ದರ್ಬಾರು ನಡೆಸೋಲ್ಲ. ಅವರವರ ಜಾಗ್ರತೆಯಲ್ಲಿ ಅವರಿರಬೇಕಷ್ಟೇ. ನಿನಗೆ ಒಪ್ಪಿತವಾದರೆ ಸಾಕು, ಹೋಗಿ ಬಾ, ಜೋಪಾನ” ಎಂದು ತಲೆ ನೇವರಿಸಿದಾಗ ಮನಸ್ಸು ಹರ್ಷದಿಂದ ಕುಣಿಯುವಂತಾಯಿತು.

ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ:   http://surahonne.com/?p=31233

(ಮುಂದುವರಿಯುವುದು)
-ಬಿ.ಆರ್ ನಾಗರತ್ನ, ಮೈಸೂರು

7 Responses

  1. Dharmanna dhanni says:

    ತುಂಬಾ ಅರ್ಥಪೂರ್ಣವಾಗಿದೆ

  2. ನಯನ ಬಜಕೂಡ್ಲು says:

    ಕಥೆ ಸಾಗುತ್ತಿರುವ ರೀತಿ ಬಹಳ ಸೊಗಸಾಗಿದೆ. ಮದುವೆಯಾಗಿ ಗಂಡನ ಮನೆ ಸೇರುವ ಹೆಚ್ಚಿನ ಹೆಣ್ಣು ಮಕ್ಕಳ ಮೇಲೆ ಮೊದ ಮೊದಲು ಆ ಮನೆಯವರು ಅಧಿಕಾರ ಚಲಾಯಿಸುವ ಪ್ರಯತ್ನ ವನ್ನೇ ಮಾಡುತ್ತಿರುತ್ತಾರೆ, ಆದರೆ ಕೆಲವೊಂದು ಕುಟುಂಬಗಳಲ್ಲಿ ಈ ಕಥೆಯಲ್ಲಿ ಬಂದಂತಹ ಸ್ವಾತಂತ್ರ್ಯ ವಿದೆ.

  3. ಶಂಕರಿ ಶರ್ಮ says:

    ಈ ಸಲಯ ಕಥಾಭಾಗವು ಬಹಳ ಚೆನ್ನಾಗಿ ಮೂಡಿಬಂದಿದೆ. ಸೊಗಸಾದ ನಿರೂಪಣೆ ಮುಂದೇನಾಗುವುದೋ ಎನ್ನುವ ಕಾತರ.. ಚಂದದ ಧಾರಾವಾಹಿ…ಧನ್ಯವಾದಗಳು ಮೇಡಂ.

  4. Anonymous says:

    ಸಾಹಿತ್ಯ ಸಹೃದಯರಿಗೆ ನನ್ನ ಧನ್ಯವಾದಗಳು

  5. ASHA nooji says:

    ಸುಂದರ ಜೀವನದ ಕಥೆ …ಓದಿ ಖುಷಿ ಆಯಿತು ..

  6. Anonymous says:

    ಧನ್ಯವಾದಗಳು ಮೇಡಂ

  7. ಮಾಲತಿ says:

    ಚೆನ್ನಾಗಿ ಕಥೆ ಸಾಗುತ್ತಿದೆ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: