ಪುಸ್ತಕ ಪರಿಚಯ-‘ಮಗ್ಗ’ ಲೇಖಕಿ :- ಸ್ನೇಹಲತಾ ದಿವಾಕರ್ ಕುಂಬ್ಳೆ

Share Button

ಪುಸ್ತಕ :- ಮಗ್ಗ  (ಕಥಾಸಂಕಲನ)
ಲೇಖಕಿ :- ಸ್ನೇಹಲತಾ ದಿವಾಕರ್ ಕುಂಬ್ಳೆ
ಪ್ರಕಾಶಕರು :- ಸಿರಿವರ ಪ್ರಕಾಶನ

ಗಡಿನಾಡಿನ ಸಾಹಿತ್ಯಾಸಕ್ತ ಕನ್ನಡಾಭಿಮಾನಿ ಬರಹಗಾರರು ಹಾಗೂ ಓದುಗರ ಸಾಲಿಗೆ ಸೇರ್ಪಡೆಯಾಗುವ  ಇನ್ನೊಂದು ಹೆಸರು ಸ್ನೇಹಲತಾ ದಿವಾಕರ್ ಕುಂಬ್ಳೆ. “ಮಗ್ಗ” ಇವರು ಬರೆದಿರುವ ಕಥಾ ಸಂಕಲನ. ಇದರಲ್ಲಿ ಇವರು ಬೇರೆ ಬೇರೆ ಪತ್ರಿಕೆಗಳಿಗೆ ಬರೆದಿರುವ ಹತ್ತು ಕಥೆಗಳಿವೆ.

“ಹಸಿವು” ಎಂಬ ಹೊಟ್ಟೆಯ ಸಂಕಟ, ತಲ್ಲಣ ಮನುಷ್ಯನನ್ನು ಯಾವ ಮಟ್ಟಿಗೆ ನೀಚನನ್ನಾಗಿಸುತ್ತದೆ ಅನ್ನೋದನ್ನ ಅನಾವರಣಗೊಳಿಸುವ ಒಂದು ಕತೆ. ಇಂತಹ ಸ್ಥಿತಿ ಬಹುಶಃ ಇವತ್ತಿನ ದಿನಗಳಲ್ಲಿ ಕಾಣಲು ಸಿಗದೇನೋ. ಹಸಿವು ಎಂಬ ಯಾತನೆಯ ಅರಿವಿದ್ದರೆ ಖಂಡಿತ ನಾವು ಆಹಾರವನ್ನು ಹಿತಮಿತವಾಗಿ ಬಳಸುವುದನ್ನು ರೂಢಿ ಮಾಡಿಕೊಳ್ಳುತ್ತೇವೆ. ಅನಗತ್ಯ ಹಾಳುಮಾಡಿ ಚೆಲ್ಲಾಡುವುದನ್ನು ನಿಲ್ಲಿಸುತ್ತೇವೆ ಅನ್ನುವ ಅಂಶ ಈ ಕಥೆಯನ್ನು ಓದುವಾಗ ಮನಸ್ಸಿಗೆ ಬಂತು.

ಕಷ್ಟವೇಕೆ ಒಮ್ಮೆ ಆವರಿಸಿದವರ ಬದುಕಲ್ಲೇ ಮತ್ತೆ ಮತ್ತೆ ಅಪ್ಪಳಿಸಿ ಸರ್ವನಾಶ ಮಾಡುತ್ತದೆ ಅನ್ನುವ ಪ್ರಶ್ನೆಯನ್ನು ಮನಸ್ಸಿನಲ್ಲಿ ಹುಟ್ಟುಹಾಕುವ ಒಂದು ಕಥೆ. ಬರಗಾಲ ಆವರಿಸಿ, ಕಾಲರಾದಂತಹ ಪಿಡುಗು ಇಡೀ ಊರಿಗೆ ಊರನ್ನೇ ಬಲಿ ತೆಗೆದುಕೊಳ್ಳುವ, ಖಾಲಿ ಹೊಟ್ಟೆಯ ತಳಮಳ, ಹಸಿವಿನ ಯಾತನೆ, ಬಡತನದ ಪರಿಸ್ಥಿತಿ ಎಷ್ಟು ಕೆಟ್ಟದಾಗಿರುತ್ತದೆ ಅನ್ನುವ ಅಂಶಗಳನ್ನು ಸ್ನೇಹಲತಾ ಅವರು ತಮ್ಮ ಕಥೆಗಳಲ್ಲಿ ಉಲ್ಲೇಖಿಸುವ ರೀತಿ ಹೃದಯಸ್ಪರ್ಶಿಯಾಗಿರುತ್ತದೆ. ಅದರಲ್ಲಿರುವ ಸೆಳೆತ ಓದುಗನ ಮನಸ್ಸನ್ನು ಒಮ್ಮೆ ಅಲುಗಾಡಿಸಿ ಬಿಡುತ್ತದೆ.

ಈ ಬದುಕಲ್ಲಿ ಎಲ್ಲವೂ ನಿಗೂಢ. ಒಂದು ಹೆಣ್ಣಿಗೆ ಮದುವೆಯಾಗಿ ಮಕ್ಕಳಾಗಲಿಲ್ಲ ಎಂದಾದಲ್ಲಿ ಎಲ್ಲರೂ ಆಕೆಯನ್ನು ಬಂಜೆ ಎನ್ನುತ್ತಾರೆಯೇ ಹೊರತು ಗಂಡಿಗೆ ದೋಷವಿದ್ದರೂ ಅದರ ಬಗ್ಗೆ ಚಕಾರವೆತ್ತುವುದಿಲ್ಲ. ಗಂಡಿದ್ದಾದರೆ ಅದು ದೋಷವೇ ಅಲ್ಲ. ನಮ್ಮ ಸುತ್ತಮುತ್ತಲಿನ ಕುಟುಂಬಗಳಲ್ಲಿ ಅವೆಷ್ಟೋ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಇಲ್ಲೆಲ್ಲ ಹೆಣ್ಣನ್ನೇ ದೋಷಿಯಾಗಿಸಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆಯೇ  ಹೊರತು ಗಂಡಿನ ದೌರ್ಬಲ್ಯವನ್ನು  ಎಲ್ಲಿಯೂ ಹೊರಬರಲು ಬಿಡುವುದೇ ಇಲ್ಲ. ಇದೊಂದು ಕೊಳಕು ಸ್ಥಿತಿ, ಅಮಾನವೀಯ ಕೃತ್ಯ. ಬಹಳ ಹಿಂದಿನಿಂದಲೂ ಇಂತಹ ಘಟನೆಗಳು ಘಟಿಸುತ್ತಲೆ ಬಂದಿವೆ. ಆದರೆ ಈ ವಿಚಾರವಾಗಿ ಹೆಣ್ಣಿನ ಶೋಷಣೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಹೆಣ್ಣು ಎಂದರೆ ತ್ಯಾಗ, ಸಹನೆ, ಎಲ್ಲವನ್ನು ಬಾಯಿಮುಚ್ಚಿ ಸಹಿಸಿ ಬದುಕು ನಡೆಸುವ ತ್ಯಾಗಮಯಿ. ಅವಳ ತ್ಯಾಗವನ್ನು ಅಕ್ಕನಾಗಿ, ಅಮ್ಮನಾಗಿ, ಹೆಂಡತಿಯಾಗಿ, ಅತ್ತಿಗೆ ನಾದಿನಿಯಾಗಿ ಹೀಗೆ ಹಲವಾರು ರೂಪಗಳಲ್ಲಿ ಕಾಣಬಹುದು. ಇಲ್ಲೊಂದು ತಂಗಿಯರ ಉತ್ತಮ ಭವಿಷ್ಯಕ್ಕಾಗಿ, ಸ್ವಂತ ಅಣ್ಣ ನಡೆಸುವ ದೌರ್ಜನ್ಯವನ್ನು ಬಾಯಿ ಮುಚ್ಚಿ ಸಹಿಸಿಕೊಂಡು ಹೋಗುವ ಒಬ್ಬಳು ಹೆಣ್ಣುಮಗಳ ಕಥೆ ಹೆಣ್ಣಿನ ನೂರಾರು ತ್ಯಾಗಗಳ ಕುರಿತಾಗಿ ಓದುಗರ ಮನಸ್ಸನ್ನು ತಟ್ಟುತ್ತದೆ.

ಬಡತನ ಒಂದು ಶಾಪ. ಕೆಲವರ ಬದುಕಲ್ಲಿ ಇದು ಕಾಡುವ ರೀತಿ ಬಹಳ ಹೃದಯ ವಿದ್ರಾವಕ. ಹೊತ್ತಿನ ಪ್ರತಿಯೊಂದ ತುತ್ತಿಗೂ ಒದ್ದಾಡುವ ಮಂದಿಯೂ ಈ ಸಮಾಜದಲ್ಲಿ ಇದ್ದಾರೆ. ಓಟು ಬೇಕಾದಾಗ ಬಡವನ ಮನೆ ಬಾಗಿಲಿಗೂ ಬಂದು ಅಂಗಲಾಚುವ ಅಭ್ಯರ್ಥಿಗಳಿಗೆ ಗೆದ್ದ ಮೇಲೆ ಆ ಬಡವನ ನೆನಪೇ ಇರುವುದಿಲ್ಲ. ಈ ಕಥಾ ಸಂಕಲನದಲ್ಲಿ ಸಾಮಾನ್ಯ ಜನರ ಬದುಕಿನ ಚಿತ್ರಣ, ಕಷ್ಟ, ಪಾಡು ಮನಸ್ಸನ್ನು ಆರ್ದ್ರವಾಗಿಸುವಷ್ಟು ಅನಾವರಣಗೊಂಡಿದೆ.

ಸ್ನೇಹಲತಾ ದಿವಾಕರ್ ಕುಂಬ್ಳೆ

“ಮಗ್ಗ ” ಕಥಾಸಂಕಲನದ ಕಥೆಗಳಲ್ಲಿ ಅಪ್ಪಟ ಗ್ರಾಮೀಣ ಪರಿಸರದ ಸೊಗಡು ತುಂಬಿದೆ. ಸ್ಥಳೀಯ ಭಾಷೆ, ಸ್ಥಳೀಯ ಜೀವನ ಶೈಲಿ, ದಿನನಿತ್ಯದ ಆಗುಹೋಗುಗಳು ಹೀಗೆ ನಮ್ಮ ಸುತ್ತಮುತ್ತ ನಡೆಯುವ ಸಾಮಾನ್ಯ ವಿಚಾರಗಳೇ ಸುಂದರವಾದ ಕತೆಯ ರೂಪ ಪಡೆದಿವೆ.

– ನಯನ ಬಜಕೂಡ್ಲು

5 Responses

  1. Anonymous says:

    ಇವರ ಮಗ್ಗ ಕಥೆ ಓದಿರುತ್ತೇನೆ. ನನಗೆ ತಂದು ಕೊಟ್ಟಿದ್ದಾರೆ.
    ಬಹಳ ಚೆನ್ನಾಗಿದೆ. ಆ ಬಗ್ಗೆ ಅವರಿಗೆ ಬರಹ ಮೂಲಕ ತಿಳಿಸಿರುತ್ತೇನೆ.

  2. Dharmanna dhanni says:

    ಅರ್ಥಪೂರ್ಣವಾಗಿದೆ. ಬರಹ

  3. Meghana Kanetkar says:

    ಚಂದದ ಪರಿಚಯ.. ಸ್ನೆಹಲತಾ ದಿವಾಕರ್ ರವರ ಬಗ್ಗೆ ಕೇಳ್ಪಟ್ಟಿರುವೆ. ಆದರೆ ಇದುವರೆಗೂ ಅವರ ಯಾವುದೇ ಪುಸ್ತಕವನ್ನು ನಾನು ಓದಿಲ್ಲ. ಖಂಡಿತ ‘ಮಗ್ಗ’ ಮತ್ತವರ ಇತರ ಕೃತಿಗಳನ್ನು ಕೊಂಡು ಓದುವೆ. ಮಾಹಿತಿಗಾಗಿ ಧನ್ಯವಾದಗಳು

  4. ASHA nooji says:

    ಸೂಪರ್ ಬರಹ

  5. ಶಂಕರಿ ಶರ್ಮ says:

    ಸ್ನೇಹಲತ ದಿವಾಕರ್ ಅವರ ಕಥಾಸಂಕಲನದ ಪ್ರತಿಯೊಂದು ಕಥೆಯನ್ನೂ ಅಚ್ಚುಕಟ್ಟಾಗಿ ಪರಿಚಯಿಸಿ ವಿಮರ್ಶಿಸಿದ ಪರಿ ಬಹಳ ಸೊಗಸು..ನಯನಾ ಮೇಡಂ ಅವರಿಗೆ ಧನ್ಯವಾದಗಳು.

Leave a Reply to Meghana Kanetkar Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: