ಬಾರೋ ಸಾಧನಕೇರಿಗೆ…

Share Button



ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ ಈ ಭಾವಗೀತೆಯ ಸಾಲು ಯಾರಿಗ ತಾನ ಮರಿಲಿಕ್ಕ ಸಾಧ್ಯ? ಈ ಹಾಡು ಕೇಳ್ಲಿಕ್ಹತ್ರ ನಮ್ ಬೇಂದ್ರೆ ಅಜ್ಜನ ನೆನಪು ಆಗಲಾರದ ಇರ್ಲಿಕ್ಕೆ ಸಾಧ್ಯ ಏನು? ನಮ್ ಬೇಂದ್ರೆ ಅಜ್ಜ ಅಂದ್ರ ಯಾರಂತ ಗೊತ್ತಿಲ್ಲೇನು ನಿಮಗ?! ಅರೆ ಅವರು ಬ್ಯಾರೆ ಯಾರು ಅಲ್ಲ, ಮತ್ತ ಅವರು ಅಂಬಿಕಾಳ ತನಯ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ) ಧಾರವಾಡದ ಕಲ್ಲು-ಮಣ್ಣು, ಗಿಡ-ಮರ, ಕೆರೆ ಯಾರಿಗ ಬೇಕಾದ್ರು ಕೇಳ್ರಿ ಹೇಳ್ತಾರ. ಯಾಕಂದ್ರ ನಮ್ಮ ಬೇಂದ್ರೆ ಅಜ್ಜಗೂ ಧಾರವಾಡಕ್ಕೂ ಇರೊ ನಂಟು ಅಂಥಾದ್ದು. ಮುಗಿಲ ಮಾರಿಯ ರಾಗರತಿಗೆ… ಅಂತ ಸಾಧನಕೇರಿಯ ಸೂರ್ಯಾಸ್ತವನ್ನ ವರ್ಣಿಸಿದ್ರು. ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು ಅಂತ ಬಡತನದಾಗೂ ಇರೊ ಪ್ರೀತಿಯ ಶ್ರೀಮಂತಿಕೆಯನ್ನ ಆನಂದಿಸಿದ್ರು. ನೀ ಹಿಂಗ ನೋಡಬ್ಯಾಡ ನನ್ನ ತಿರುಗಿ ನಾ ಹ್ಯಾಂಗ ನೋಡಲೆ ನಿನ್ನ ಅಂತ ದುರುಗುಟ್ಟಿ  ನೋಡ್ಲಿಕತ್ತಿದ್ದ  ತಮ್ಮ ಮುದ್ದಿನ ಹೆಂಡತಿಯ ಕೋಪದ ಪರಿಯನ್ನ ತಿಳಿಸಿದ್ರು.  ಘಮ ಘಮಾಡಸ್ತಾವ   ಮಲ್ಲಿಗಿ  ನೀವು ಹೊರಟಿದ್ದೀರಿ ಎಲ್ಲಿಗಿ ಅಂತ ಮಲ್ಲಿಗೆಯ ಕಂಪು ಎಲ್ಲೆಲ್ಲೂ ಹರಡಿದ್ರು ನಮ್ ಬೇಂದ್ರೆ ಅಜ್ಜ. ಅವರ ಬಗ್ಗೆ ಎಷ್ಟು ಹೊಗಳಿದ್ರು ಕಮ್ಮಿನೇ.

ಸ್ವಲ್ಪ ನಮ್ಮ ಧಾರವಾಡ ಜಿಲ್ಲೆಯ ಭೌಗೋಳಿಕ ಲಕ್ಷಣಗಳು ಮತ್ತು ಸಂಬಂಧಿಸಿದ ಇನ್ನಿತರ ವಿಚಾರಗಳ ಬಗ್ಗೆ ಒಂದು ಕಿರು ಪರಿಚಯ ಹೇಳಿ ಮುಂದ ಹೋಗ್ತಿನಿ. ನೋಡ್ರಿ ಧಾರವಾಡ ಜಿಲ್ಲೆ ಉತ್ತರ ಕರ್ನಾಟಕದ ಒಂದು ಪ್ರಮುಖ ಭಾಗ ಅಂತ ನಮಗ ಗೊತ್ತೇ ಅದ. ಧಾರವಾಡ ಜಿಲ್ಲೆಗೆ ಸ್ವಾತಂತ್ರ್ಯ ಪೂರ್ವದ ಇತಿಹಾಸ ಅದ. ಹುಬ್ಬಳ್ಳಿ ಅಪ್ಪಟ ಬಯಲು ಸೀಮೆ ಆದ್ರ, ಧಾರವಾಡ ಅರೆ ಮಲೆನಾಡು. ಬ್ಯಾಸಿಗಿ ಬಂತಂದ್ರ ಮುಂಜಾನಿ ರಣರಣ ಬಿಸಿಲು, ಸಂಜಿಕ ತಂಪನ ಘಾಳಿ(ಗಾಳಿ). ಮಳಿಗಾಲದಾಗ ಹುಬ್ಬಳ್ಳಿಗ ಹೋಲಿಸಿದ್ರ ಧಾರವಾಡದಾಗ ಸ್ವಲ್ಪ ಮಳಿ ಜಾಸ್ತಿ. ಇನ್ನು ಛಳಿಗಾಲ(ಚಳಿ) ಬಂತಂದ್ರ ನಸುಕಲೇ ವಾಕಿಂಗ್ ಹೋದ್ರ ಹಲ್ಲು ಕಟರ್ ಕಟರ್ ಅಂತಾವ, ಮೈಮ್ಯಾಲ ಮುಳ್ಳು ಬರ್ತಾವ. ಮೇ ತಿಂಗಳಾಗ ರೋಡ ತುಂಬೆಲ್ಲಾ ಗುಲ್ ಮೊಹರ್ ನ ರಂಗೋಲಿ ಕಣ್ಮನ ಸೆಳಿತಾವ.

ದ.ರಾ.ಬೇಂದ್ರೆ ಅವರ ಮನೆ- ಶ್ರೀಮಾತಾ

ಧಾರವಾಡ ಜೆಲ್ಲೆಯಾಗ ಧಾರವಾಡ ನಗರ ಜಿಲ್ಲಾಡಳಿತ ಕೇಂದ್ರ ಆದ್ರ, ಹುಬ್ಬಳ್ಳಿ ತಾಲೂಕು ಮತ್ತು; ಕಲಘಟಗಿ, ಕುಂದಗೋಳ ಎರಡೂ  ಪಂಚಾಯತ್ ಪಟ್ಟಣಗಳು. ಇನ್ನು ಭಾಷಾ ವಿಚಾರಕ್ಕ ಬಂದ್ರ, ಹುಬ್ಬಳ್ಳಿಗಿಂತ ಸ್ವಲ್ಪ ಮೆದು. ಯಾಕಂದ್ರ ರುಚಿಯಾದ, ಸಿಹಿಯಾದ ಧಾರವಾಡ ಪೇಢಾ ತಿಂದವರ ಮಾತು-ಮನಸ್ಸು ಮೆದು ಇರಲೇ ಬೇಕಲ್ಲ.

ಯಾಕ ಬಾಯಾಗ ನೀರು ಬರ್ಲಿಕತ್ತದ ಏನು?! ಧಾರವಾಡ ಪೇಢಾ ಹೆಸರು ಕೇಳಿ!! ಹಂಗಂದ್ರ, ಕೇಳ್ರಿ ಇಲ್ಲಿ ಧಾರವಾಡ ಪೇಢಾದ ಸರಿ ಸುಮಾರು 175  ವರ್ಷಗಳ ಇತಿಹಾಸ… ಸುಮಾರು ಹತ್ತೊಂಬತ್ತನೆಯ ಶತಮಾನದಾಗ ಶ್ರೀ ರಾಮ್  ರತನ್    ಠಾಕೂರ್  ಅವ್ರು ಜೀವನೋಪಾಯಕ್ಕಾಗಿ ಉದ್ಯೋಗ ಅರಸಿ ನಮ್ ಧಾರವಾಡಕ್ಕ ಬಂದು ನೆಲೆಸಿದ್ರು. ರಾಮ್ ರತನ್ ಅವ್ರನ್ನ ಜನ ಪ್ರೀತಿಯಿಂದ ಬಾಬು ಸಿಂಗ್ ಠಾಕೂರ್ ಅಂತಲೂ ಕರೀತಾರ. ಸಣ್ಣ ಪ್ರಮಾಣದ ಗೃಹ ಉದ್ಯೋಗ ಪ್ರಾರಂಭ ಮಾಡಬೇಕು ಅಂತ ಮನಸ್ನಾಗ ಹೊಳೆದಾಗ ಅಲ್ಲಿಂದ ಅನ್ವೇಷಣೆ ಆಗಿದ್ದು ಇದೇ ನಮ್ ಧಾರವಾಡ ಪೇಢಾ. ಈ ಪೇಢಾ ಕೇವಲ ಹಾಲು ಮತ್ತು ಸಕ್ಕರಿ ಈ ಎರಡೇ ಎರಡು ಪದಾರ್ಥಗಳನ್ನ ಬಳಸಿ ಮಾಡತಕ್ಕಂತ ಒಂದು ಸಿಹಿ ತಿನಿಸು. ಇದಕ್ಕ ಏನರ ಹೆಸರು ಇಡಬೇಕಲ್ಲ ಅಂತ ಯೋಚನೆ ಬಂದಾಗ ಅವರಿಗೆ ಹೊಳೆದಿದ್ದು ಈ ಊರಿನ ಹೆಸರು. ಯಾಕಂದ್ರ ಅವರಿಗೆ ಕಷ್ಟ ಕಾಲದಾಗ ಕೈ ಹಿಡಿದ ಊರು ನಮ್ ಧಾರವಾಡ. ಆಗಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಯವರು ಧಾರವಾಡಕ್ಕ ಬಂದಾಗ ಬಾಬು ಸಿಂಗ್ ಠಾಕೂರರು ತಯಾರಿಸಿದ ಪೇಢಾ ತಿಂದು ಖುಷಿಯಾಗಿ ಅವರಿಗೆ ಮನಸಾರೆ ಹೊಗಳಿದ್ರಂತ. ಅಷ್ಟು ಫೇಮಸ್ ರೀ ನಮ್ ಧಾರವಾಡ ಪೇಢಾ.

ಕೆಲವೇ ದಿನಗಳ ನಂತರ ಈ ಧಾರವಾಡ ಪೇಢಾ ಕ್ಕ ಒಂದು ಸಣ್ಣ ತಿರುವು ಸಿಕ್ತು. ಅಂದ್ರ ಠಾಕೂರ್ ಪೇಢಾ ಕ್ಕ ಒಂದು ಪ್ರತಿಸ್ಪರ್ಧಿ ಬಂತು ಅಂತ ಹೇಳಿದ್ರ ತಪ್ಪಾಗ್ಲಿಕ್ಕಿಲ್ಲ. ಅದೇನಪಾ ಅಂದ್ರ, ಇಸ್ವಿ ಸನ್ 1933ರಲ್ಲಿ ಶ್ರೀ ಅವಧ್ ಬಿಹಾರಿ ಮಿಶ್ರಾ ರವರು ಉತ್ತರ ಭಾರತದಿಂದ ವ್ಯಾಪಾರಕ್ಕಾಗಿ ಹಣಗಳಿಸುವ ಮಹತ್ವಾಕಾಂಕ್ಷೆಯಿಂದ ನಮ್ಮ ಧಾರವಾಡಕ್ಕ ಬಂದ್ರು. ಅವರು ಬಾಬು ಸಿಂಗ್ ಠಾಕೂರ್ ರವರ ಐಡಿಯಾ ಬಳಸಿ ಇದ ಸೇಮ್ ಪೇಢಾ ತಯಾರಿಸಿ ಅದಕ್ಕ ಮಿಶ್ರಾ ಪೇಢಾ ಅಂತ ನಾಮಕರಣ ಮಾಡಿದ್ರು. ಮೊದಮೊದಲು ಸಣ್ಣ ಪ್ರಮಾಣದಾಗ ಮಾರಾಟ ಮಾಡ್ತಿದ್ದವ್ರು ಈಗ ಬಹು ದೊಡ್ಡ ಕಾರ್ಖಾನೆ ಅದ. ಪೇಢಾ ಅಲ್ಲದ ಇನ್ನೂ ಅನೇಕ ಲಘು ತಿನಿಸುಗಳನ್ನ ತಯಾರು ಮಾಡ್ತಾರ. ಮಿಶ್ರಾದವ್ರದ್ದು ಈಗ ದೇಶದೆಲ್ಲೆಡೆ ವ್ಯಾಪಾರ ವಹಿವಾಟು ನಡಿಲಿಕತ್ತದ.

ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ(KUD) ಇದು ಕರ್ನಾಟಕದಲ್ಲಿ ಎರಡನೇ ಸ್ಥಾನದಾಗ ಅದ. ಇಲ್ಲಿ  ಸ್ನಾತಕೋತ್ತರ ಪದವಿ ಹಾಗೂ ವೃತ್ತಿ ಶಿಕ್ಷಣಕ್ಕಾಗಿ ದೇಶದ ನಾನಾಕಡೆಯಿಂದ ವಿದ್ಯಾರ್ಥಿಗಳು ಬರ್ತಾರ. KUD ಯ  ಮತ್ತೊಂದು ಭಾಗವೇ ಕರ್ನಾಟಕ ಕಾಲೇಜು ಧಾರವಾಡ (KCD) ಪದವಿಪೂರ್ವ ಹಾಗೂ ಪದವಿ ಶಿಕ್ಷಣಕ್ಕೆ ಫೇಮಸ್.
ಆಮೇಲೆ ಈ ಊರಾಗ ಕರ್ನಾಟಕ ಕೃಷಿ ಮಹಾವಿದ್ಯಾಲಯ ಸಹ ಅದ. ಕೃಷಿ ವಿಜ್ಞಾನ ಕ್ಷೇತ್ರದಾಗ ಸಾಧನೆ ಮಾಡಬೇಕು ಅಂದ್ಕೊಂಡವ್ರು ಇಲ್ಲಿ ಕಲಿಲಿಕ್ಕೆ ಬರ್ತಾರ.

ಧಾರವಾಡದ ಮತ್ತೊಂದು ಹೆಮ್ಮೆಯ ವಿಷಯ ಅಂದ್ರ ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಬೆಂಚ್ ಹೊಂದಿರೊದು. ಭಾಳ ವರ್ಷದಿಂದ ಹಗಲು ರಾತ್ರಿಯೆನ್ನದ ಹೋರಾಟಕ್ಕ ಸಂದ ಫಲ ಈ ಉಚ್ಛ ನ್ಯಾಯಾಲಯ. ಅದರ ಕೀರ್ತಿ ಹೆಸರಾಂತ ವಕೀಲರಾದ ಶ್ರೀ ಶಿವರಾಜ್ ಪಾಟೀಲ್ ರಿಗೆ ಸಲ್ಲತಕ್ಕದ್ದು.

ಬೇಂದ್ರೆ ಅಜ್ಜಾರ ಜೋಡಿನೆ ಹಲವಾರು ಕವಿಗಳನ್ನ ಕಂಡ ನಾಡು ನಮ್ಮ ಧಾರವಾಡ. ಆನಂದಕಂದ ಕಾವ್ಯನಾಮದಿಂದ ಜನಪ್ರಿಯರಾಗಿರೊ ಬೆಟಗೇರಿ ಕೃಷ್ಣಶರ್ಮ, ಹಂಗೆನೆ ಇತ್ತೀಚಿನ ವರ್ಷಗಳಲ್ಲಿ ಹೆಸರುವಾಸಿಯಾದ ಚೆನ್ನವೀರ ಕಣವಿಯವರು ನಮ್ಮ ಧಾರವಾಡದವರು.

ಹಿಂದೂಸ್ತಾನಿ ಸಂಗೀತದ ತವರೂರು ನಮ್ಮ ಧಾರವಾಡ. ಹಿಂದೂಸ್ತಾನಿ ಸಂಗೀತದ ಘಟಾನುಘಟಿಗಳ ಬಗ್ಗೆ ಮೊದಲನೇ ಲೇಖನದಾಗ ಸಂಕ್ಷಿಪ್ತವಾಗಿ ಹೇಳಿದ್ದೆ. ಅವರಂತೆಯೇ ಹಿಂದೂಸ್ತಾನಿ ಸಂಗೀತ ಕ್ಷೇತ್ರದಾಗ ನಾಡಿಗೆ ಇನ್ನೂ ಅನೇಕ ದಿಗ್ಗಜರನ್ನ ನೀಡಿದಂತಹ ಊರು ನಮ್ ಧಾರವಾಡ. ಶ್ರೀ ರಾಮಚಂದ್ರ  ಕಂದಗೋಳ್ಕರ್ ಸೌಂಶಿ  ಅಲಿಯಾಸ್ ಪಂಡಿತ್ ಸವಾಯಿ  ಗಂಧರ್ವ,  ಪಂಡಿತ ಮಲ್ಲಿಕಾರ್ಜುನ ಮನ್ಸೂರ್ಪಂಡಿತ ಬಸವರಾಜ ರಾಜಗುರು ಇವರುಗಳ ಕಿರಾಣಾ ಘರಾಣಾಕ್ಕ ತಲೆದೂಗದವರಿಲ್ಲ. ಅಹೋರಾತ್ರಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಅಭಿಮಾನಿಗಳನ್ನ ಸಂಗೀತದ ಕಡಲೊಳಗ ತೇಲುವ ಹಂಗ ಮಾಡ್ತಿದ್ರು. ಆಗೆಲ್ಲಾ ಎಲ್ಲಾರ ಮನಿಯೊಳಗ ಮೂರ್ಖರ ಪೆಟ್ಟಿಗೆ ಇರ್ಲಿಲ್ಲ. ಹಂಗಾಗಿ ಸಂಗೀತ ಕಾರ್ಯಕ್ರಮ ಅದ ಅಂತ ಗೊತ್ತಾದ್ರ ಸಾಕು ಮನಿ ಮಂದಿಯೆಲ್ಲಾ ಲಗುಲಗು ಊಟ ಮುಗಿಸಿ ಕವಳ ಜಗ್ದು, ಕಲಾಭವನಕ್ಕ ಹೋಗ್ತಿದ್ರು ಸಂಗೀತ ಕೇಳ್ಲಿಕ್ಕೆ.

ಇನ್ನು ಮನರಂಜನೆ ವಿಚಾರಕ್ಕ ಬಂದ್ರ, ಧಾರವಾಡ ಆಕಾಶವಾಣಿ ಸರ್ವಕಾಲಕ್ಕೂ ಹಚ್ಚ ಹಸಿರು. “ನಮಸ್ಕಾರ, ಕೇಳುಗರಿಗಾಗಿ  ಧಾರವಾಡ ಆಕಾಶವಾಣಿಗೆ ಸುಸ್ವಾಗತ.. ಇದು ಎಫ್ ಎಮ್ ಕಂಪನಾಂಕ103  ಮೆಗಾಹರ್ಟ್”  ಅಂತ ರೆಡಿಯೋ ಒಳಗಿಂದ ಹಿಂಗ ಧ್ವನಿ ಕೇಳಿದ್ರ ಆಹಾ ಎಂಥಾ ಭಾವ ಪರವಶತೆ ಅಂತೀರಿ!!

ಹ್ಞಂ ಅಂದಂಗ ಹುಬ್ಬಳ್ಳಿಯ ಬಸವೇಶ್ವರ ಖಾನಾವಳಿ ಥರಾ ಇಲ್ಲೂ ಒಂದು ಫೇಮಸ್ ಖಾನಾವಳಿ ಅದ. ಅದ್ರ ಹೆಸರು  ಬಸಪ್ಪ  ಖಾನಾವಳಿ ಅಂತ. ಇದು ಹುಬ್ಬಳ್ಳಿಯ ಬಸವೇಶ್ವರ ಖಾನಾವಳಿಗಿಂತಲೂ ಹಳೇದು. ಇಲ್ಲಿನ ಪದರ ಚಪಾತಿ, ಸಜ್ಜೆ ರೊಟ್ಟಿ, ಚೌಳಿಕಾಯಿ ಪಲ್ಯ ಅಂದ್ರ ಏನ್ ಕೇಳ್ತಿರಿ… ಮ್ ಆಹಾ!! ಏನ್ ರುಚಿ!!

ಇದು ಹೇಳ್ಲಿಕ್ಹತ್ರ ಮುಗಿಲಾರದ ಕತಿ… ಇನ್ನು ಕೊನೆಯದಾಗಿ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ನಮ್ ಧಾರವಾಡದ ಸೀರಿ ಬಗ್ಗೆ ಹೇಳ್ಲಿಲ್ಲ ಅಂದ್ರ ನಮ್ ವಿವರಣೆ ಅಪೂರ್ಣ. ಇಳಕಲ್ ಸೀರಿ ನೋಡಿರ ಬೇಕಲ್ಲ ನೀವು..!! ಇಳಕಲ್ ಮಾದರಿ ಬಾರ್ಡರ್ ಕಾಟನ್ ಸೀರಿ ಮ್ಯಾಲ ವೀಷೇಶವಾದ ಚಿತ್ತಾಕರ್ಷಕ ಕಸೂತಿ ಹಾಕಿರ್ತಾರ. ಅದಕ್ಕ ಧಾರವಾಡ ಕಸೂತಿ ಅಂತ ಹೆಸರು. ನಮ್ಮೂರ ಹೆಣ್ಣುಮಕ್ಕಳಿಗೆ ಈ ಧಾರವಾಡ ಕಸೂತಿ ಸೀರಿ ಅಂದ್ರ ಒಂದು ನಮೂನಿ ಸೆಂಟಿಮೆಂಟ್ ನೋಡ್ರಿ. ಮತ್ತ ಮತ್ತ ಬರ್ತಾ ಇರ್ರಿ. ಮರೀಬ್ಯಾಡ್ರಿ.

-ಮೇಘನಾ ದುಶ್ಯಲಾ 

11 Responses

  1. Dharmanna dhanni says:

    ಈ ಬರಹ ಧಾರವಾಡ ಬಗ್ಗೆ ಮಾಹಿತಿ ಮಾಡಿತು.ಆದರೆ ಧಾರವಾಡಕ್ಕೆ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರವರು ಪತ್ನಿ ಜೊತೆ ಆಗಮಿಸಿ ಒಂದು ವಾರ ಕಾಲ ವಿಶ್ರಾಂತಿ ಪಡೆದಿದ್ದರು.ಇದನ್ನು ತಿಳಿಸದೆ ಇರಯವುದು ಅಪೂರ್ಣವೆನಿಸಿತು. ತಿಳಿಸಬೆಕಿತ್ತು.

    • Anonymous says:

      Dharmanna Dhanni ನನಗೆ ಈ ವಿಚಾರ ತಿಳಿದಿಲ್ಲ. ನೀವು ತಿಳಿಸಿದಿರಲ್ಲಾ ತುಂಬಾ ಧನ್ಯವಾದಗಳು

  2. ನಯನ ಬಜಕೂಡ್ಲು says:

    ಪೇಡ ದಷ್ಟೇ ಸಿಹಿ ಸಿಹಿಯಾದ ಬರಹ.

    • Anonymous says:

      Nayana Bajakudlu ಬರ್ರಿ ಮತ್ತ ಧಾರವಾಡಕ್ಕ ಪೇಡಾ ಪಾಪಡಿ ಕೊಡ್ಸತೇನಿ

      ಧನ್ಯವಾದಗಳು ❤

  3. ಬಿ.ಆರ್.ನಾಗರತ್ನ says:

    ವಾವ್ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗೆಳತಿ.

  4. ASHA nooji says:

    ಚೆನ್ನಾಗಿ ಬರೆದಿರುವಿರಿ

  5. Krishnaprabha says:

    ಚಂದದ ಬರಹ

  6. Malatesh M Hubli says:

    ಚಂದ ಬರಹ

  7. ಶಂಕರಿ ಶರ್ಮ says:

    ಧಾರವಾಡದ ಬಗ್ಗಿ , ಅಲ್ಲಿನ ಪೇಡಾ ಬಗ್ಗಿ ಬರ್ದು ನಮ್ ಬಾಯಲ್ಲಿ ನೀರು ಬರ್ಸಿದ್ರಿ ಕಣ್ರೀ.. ! ತುಂಬಾ ಆತ್ಮೀಯವಾಗಿ ಓದಿಸಿತು ಮೇಡಂ ತಮ್ಮ ಲೇಖನ..ಸೂಪರ್ ಆತ್ರೀ..!

  8. K vishwanatha says:

    “ನೀ ಹೀಂಗ ನೋಡಬೇಡ ನನ್ನ” ಬೇಂದ್ರೆಯವರ ಮಗ ಗತಿಸಿದ ದುಃಖವನ್ನು ಕವಿತೆಯಾಗಿಸಿದ್ದು ಅಂತ ಎಲ್ಲೋ ಕೇಳಿದ ನೆನಪು ! ಈ ಬಗ್ಗೆ ಏನಾದರೂ ಮಾಹಿತಿ ಇದ್ದರೆ ತಿಳಿಸ್ತೀರಾ ಮೇಡಂ!?

    ನಯನಕ್ಕ ನಿಮ್ಮೂರಿಗೆ ಬಂದಾಗ ಧಾರವಾಡ ಪೇಡ ಕೊಡಿಸ್ತೀನಿ ಅಂದ್ರಲ್ಲ ! ನನಗೂ ಅವರ ಹತ್ರ ಕೊಟ್ಟು ಕಳಿಸ್ತೀರಾ ಮೇಡಂ . ಅವರು ನಮ್ಮ ಹತ್ತಿರದ ಊರಿನವರು .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: