ಸುರಹೊನ್ನೆಯ ಜೊತೆಗಿನ ನನ್ನ ಒಡನಾಟ, ಪಯಣ

Share Button

ಫೇಸ್ ಬುಕ್ ಪ್ರಪಂಚಕ್ಕೆ ಕಾಲಿಟ್ಟಾಗ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಇದ್ದ ಕಾರಣ ಪರಿಚಯವಾದ ಮೊದಲ ಸಾಥಿಯೆ ಸುರಹೊನ್ನೆ ಅಂತರ್ಜಾಲ ಪತ್ರಿಕೆ. ಇಲ್ಲಿ ಮೊದಲು ಗಮನ ಸೆಳೆದದ್ದು ಲೋಗೋದಲ್ಲಿ ಇರುವ- “ಸುರಹೊನ್ನೆ ಕನ್ನಡ ಅಕ್ಷರದ ಮೇಲೆ ಅಕ್ಕರೆ ಉಳ್ಳವರಿಗಾಗಿ ಮೀಸಲಾದ ಜಾಲತಾಣ” ಈ ವಾಕ್ಯಗಳು. ಈ ಪತ್ರಿಕೆಯ ಅಚ್ಚುಕಟ್ಟುತನ, ಶಿಸ್ತು, ಹೊಸಬರ ಬರಹಗಳಿಗೆ ಆಸ್ಥೆಯಿಂದ ನೀಡುತ್ತಿದ್ದ/ನೀಡುತ್ತಿರುವ ಅವಕಾಶ, ತಪ್ಪುಗಳನ್ನು ತಿದ್ದುವ ರೀತಿ, ನೀಡುವ ಪ್ರೋತ್ಸಾಹ ಎಲ್ಲವೂ ಈ ಪತ್ರಿಕೆಯೊಂದಿಗಿನ ಸ್ನೇಹವನ್ನು ಗಟ್ಟಿಗೊಳಿಸುತ್ತಾ ಸಾಗಿತು. ಕೇವಲ ಓದುಗಳಾಗಿ ಇದ್ದ ನನ್ನನ್ನು ಬರಹಲೋಕಕ್ಕೆ ಸೆಳೆದ ಪತ್ರಿಕೆ ಎಂಬ ಅಭಿಮಾನ. ಬರಹದ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೇ ಆದದ್ದು ಸುರಹೊನ್ನೆಯಿಂದ ಆದಕಾರಣ ಈ ಪತ್ರಿಕೆಯ ಪ್ರತಿ ಗೌರವ ಭಾವ.

ಇವತ್ತಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತಾನು ಬೆಳೆದರೆ ಸಾಕು, ಬೇರೆ ಯಾರೂ ಮುಂದೆ ಬರಬಾರದು ಅನ್ನೋ ಮನೋಭಾವದವರೇ ತುಂಬಿದ್ದಾರೆ. ಇಂತಹವರ ನಡುವೆ ಬೇರೆಯವರನ್ನು ಪ್ರೋತ್ಸಾಹಿಸಿ, ಪರಿಚಯಿಸುತ್ತಿರುವ ಸಂಪಾದಕಿ ಇಲ್ಲಿ ವಿಶಿಷ್ಟವಾಗಿ, ವಿಶೇಷವಾಗಿ ಕಾಣುತ್ತಾರೆ. ಸ್ವತಃ ಸಂಪಾದಕಿ ಕೂಡ ಉತ್ತಮ ಬರಹಗಾರ್ತಿ, ಲೇಖಕಿ. ಇವರ ತಮ್ಮ ಪ್ರವಾಸ ಕಥನಗಳ ಮೂಲಕ ಓದುಗರ ಗಮನ ಸೆಳೆದಿದ್ದಾರೆ.

ಹೊಸ ಹೊಸ ಲೇಖಕ, ಲೇಖಕಿ, ಕವಿ, ಕವಯಿತ್ರಿಯರನ್ನು ಸುರಹೊನ್ನೆ ನನಗೆ ಸ್ನೇಹಿತರನ್ನಾಗಿ ನೀಡಿದೆ. ಇದಕ್ಕಿಂತ ಹೆಚ್ಚಿನದು ಇನ್ನೇನಿದೆ?. ಅದು ಯಾಕೋ ಸುರಹೊನ್ನೆಯಷ್ಟು ಬೇರೆ ಯಾವ ಅಂತರ್ಜಾಲ ಪತ್ರಿಕೆಗಳು, ಗುಂಪುಗಳು ಇಷ್ಟವಾಗಲಿಲ್ಲ.  ಅಂತರ್ಜಾಲ ಪತ್ರಿಕೆಯನ್ನು ನಿರ್ವಹಿಸುವುದು ಸುಲಭದ ಕೆಲಸವೇನೂ ಅಲ್ಲ. ಇಲ್ಲಿ  ಶ್ರಮ, ಸಮಯ, ಕೆಲವೊಮ್ಮೆ ಪುಟ್ಟದಾಗಿಯಾದರೂ ಖರ್ಚಿಗಾಗಿ ಹಣವನ್ನು ತ್ಯಾಗ ಮಾಡಬೇಕಾಗುತ್ತದೆ, ಇಲ್ಲಿ ಯಾರ ಮನಸಿಗೂ ನೋವಾಗದಂತೆ ಎಲ್ಲವನ್ನು ನಿಭಾಯಿಸಬೇಕಾಗುತ್ತದೆ. ಮನೆ ಸಂಸಾರಗಳ ನಡುವೆ ಸಂಪಾದಕಿ ಹೇಮಮಾಲಾ ಬಿ. ಅವರು ಇವೆಲ್ಲವನ್ನೂ ಸಮರ್ಪಕವಾಗಿ  ನಿರ್ವಹಿಸುತ್ತಿರುವ ರೀತಿ ಶ್ಲಾಘನೀಯ. ಮೊನ್ನೆ ಮೊನ್ನೆ ಅವರು ಮಾಡಿದ ಇನ್ನೊಂದು ಉತ್ತಮ, ಎಲ್ಲರಿಗೂ ಸಂತೋಷವನ್ನು ತಂದಂತಹ ಕೆಲಸ 25 ಕ್ಕಿಂತಲೂ ಹೆಚ್ಚು ಬರಹಗಳನ್ನು ಬರೆದವರನ್ನು ಗುರುತಿಸಿ “ಸುರಹೊನ್ನೆಯ ಸಿರಿ” ಅನ್ನುವ ಗೌರವವನ್ನು ಇತ್ತು ಅಭಿನಂದಿಸಿದ್ದು . ನನಗೆ ಹಾಗೂ ಶಂಕರ ಶರ್ಮಾ ಅವರಿಗೂ ನಾವು ಊಹಿಸದೆ ಇದ್ದಂತಹ ಒಂದು ಅಭಿನಂದನೆ “ಸುರಹೊನ್ನೆಯ ಸುರಭಿ” .

ಬಹಳ ಮಂದಿ ದೊಡ್ಡ ಲೇಖಕ ಲೇಖಕಿಯರ ಸರಳತೆ, ವಿಶೇಷತೆ ನನಗೆ ಇಲ್ಲಿ ಪರಿಚಯವಾಯಿತು, ಅವರ ಒಡನಾಟ ದೊರೆಯಿತು. ಇಷ್ಟೆಲ್ಲಾ ಅದ್ಭುತ  ವಿಚಾರಗಳನ್ನು  ನಮಗಿತ್ತ  ಸುರಹೊನ್ನೆಗೆ ಸದಾ ನಾನು ಆಭಾರಿ. ಇವರ ಜೊತೆ ಓದುಗಳಾಗಿ, ಜೊತೆಗೆ ಆಗೊಮ್ಮೆ ಈಗೊಮ್ಮೆ ಬರಹಗಳ ಮೂಲಕವೂ ಸದಾ ಕೈಜೋಡಿಸುವ ಮನಸ್ಸಿದೆ. ಜೊತೆಗೆ ಬರೆಯುವ ಎಲ್ಲಾ ಸ್ನೇಹಿತರಿಗೂ ನಿಷ್ಪಕ್ಷಪಾತವಾಗಿ ಪ್ರೋತ್ಸಾಹ ನೀಡುವ ಹಂಬಲ ಇದೆ.

ಸುರಹೊನ್ನೆ ಯಾವತ್ತೂ ಯಾವುದೋ ಒಂದು ಗುಂಪು ಎಂದು ಅನ್ನಿಸಲೇ ಇಲ್ಲ. ಒಂದು ಮನೆಯಂತೆ,  ಇಲ್ಲಿ ಎಲ್ಲರೂ ನಮ್ಮವರೇ ಅನ್ನುವ ಭಾವವೇ ಮೊದಲಿನಿಂದಲೂ ಮನಸ್ಸಿನಲ್ಲಿ ಇತ್ತು. ಈಗ ಅದು ಮತ್ತಷ್ಟು ಗಟ್ಟಿಗೊಂಡಿದೆ. ಎಷ್ಟೇ ಬಿಡುವಿಲ್ಲದ ಪರಿಸ್ಥಿತಿ ಇರಲಿ ಗುರುವಾರ ಬಂತು ಅಂದರೆ ಈ ಪತ್ರಿಕೆಯಕಡೆಗೆ ಸೆಳೆತ. ಎಷ್ಟೇ ತಡವಾದರೂ ಇಲ್ಲಿನ ಬರಹಗಳನ್ನು ಓದದೆ ಇದ್ದಲ್ಲಿ ಏನನ್ನೋ ಕಳೆದುಕೊಂಡ ಭಾವ – ಕಾರಣ , ಯಾವ ಸ್ವಾರ್ಥವೂ ಇಲ್ಲದೆ, ಅವಕಾಶಗಳನ್ನು ಇತ್ತು, ನಮ್ಮ ಬರಹಗಳಲ್ಲಿ ಇರುವ ತಪ್ಪುಗಳನ್ನು ತಿದ್ದಿ, ಪ್ರಕಟಿಸುವಲ್ಲಿ ಸಂಪಾದಕಿ ತೋರುವ  ಆಸ್ಥೆಯ ಮುಂದೆ ಕೊನೆ ಪಕ್ಷ ಅದನ್ನು ಓದಿ ಪ್ರತಿಕ್ರಿಯಿಸಲು ಆಗದೆ ನಮ್ಮಿಂದ ಅನ್ನೋ ಅಂಶ  ಕಾಡುತ್ತದೆ. ಹಾಗಾಗಿ ಬರಹಗಳನ್ನು ಓದುವ ಹಂಬಲ. ಇದರಿಂದ ಎಷ್ಟೊಂದು ಅಪರೂಪದ ವಿಚಾರಗಳನ್ನು ತಿಳಿದುಕೊಂಡಿದ್ದೇನೋ ಇಲ್ಲಿ ಹೇಳಿ ಮುಗಿಯದು. ಇಲ್ಲಿನ ಲೇಖನಗಳನ್ನು ಓದಿ ಮನಸ್ಸಿಗೆ ಬಂದ ಅನಿಸಿಕೆಯನ್ನು ನೇರವಾಗಿ ಹೇಳುವುದೇ ನಾನು ಈ ಪತ್ರಿಕೆಗೋಸ್ಕರ ನೀಡಬಹುದಾದಂತಹ  ಬೆಂಬಲ. ಒಟ್ಟಿನಲ್ಲಿ ಸುರಹೊನ್ನೆ ಅಂತರ್ಜಾಲ ಪತ್ರಿಕೆಯ ಜೊತೆಗಿನ ಒಡನಾಟ, ಪ್ರಯಾಣ ನನ್ನ ಪಾಲಿಗಂತೂ ಬಹಳ ಸುಂದರ. ಇಲ್ಲಿ ಯಾರು ಯಾರಿಗೂ ಏನೂ ಆಗಬೇಕಾಗಿಲ್ಲ ಆದರೂ ಹೆಚ್ಚಿನವರ ನಡುವೆ ಸ್ನೇಹದ ನಂಟು, ಬಾಂಧವ್ಯ ಬೆಸೆದಿದೆ.

ಒಂದು ಸತ್ಯ ಏನೆಂದರೆ ಹಣದಿಂದ ಎಲ್ಲವನ್ನೂ ಅಳೆಯುವವರಿಗೆ, ಬರೆದದ್ದಕ್ಕೆಲ್ಲಾ ಸಂಭಾವನೆಯನ್ನು ನಿರೀಕ್ಷಿಸುವವರಿಗೆ, ವ್ಯಾಪಾರಿ ಮನೋಭಾವದವರಿಗೆ, ಈ ಬಳಗ ರುಚಿಸದು. ಓದಿನ ತುಡಿತ, ಹೊಸ ಹೊಸ ಬರಹಗಳನ್ನು ಆಸ್ವಾದಿಸುವ ಹಂಬಲ ಹೊಂದಿರುವ ಮನಸ್ಸು ಈ ಬಳಗವನ್ನು ತೊರೆದು ಸಾಗುವ ಮನಸ್ಸು ಮಾಡದು. ಇಲ್ಲಿ ಸಿಗುವ ಗೌರವ, ಮನ್ನಣೆ, ಗುರುತಿಸಿಕೊಳ್ಳುವಿಕೆಯೆ ದೊಡ್ಡ ಸಂಭಾವನೆ. ಅದಲ್ಲದೆ ಧ್ಯೇಯ ವಾಕ್ಯವೇ ಸಾರಿ ಹೇಳುತ್ತದೆ ಈ ವೇದಿಕೆ ಹವ್ಯಾಸಿ ಓದುಗರು ಹಾಗೂ ಬರಹಗಾರರಿಗಾಗಿ ಅನ್ನುವುದನ್ನು. ಇಲ್ಲಿ ಒಂದು ನೆಮ್ಮದಿ ಇದೆ, ಸಂತೋಷ ಇದೆ, ಯಾರಲ್ಲೂ ಸ್ಪರ್ಧಾ ಮನೋಭಾವ ಇಲ್ಲ, ಮನಸ್ಸಿಗೆ ನೋವಾಗುವಂತಹ ಘಟನೆಗಳು ಸಂಭವಿಸಲು ಅವಕಾಶವೇ ಇಲ್ಲ. ಇವೆಲ್ಲವೆ ಇಲ್ಲಿನ ಹವ್ಯಾಸಿ ಓದುಗರಿಗೆ ಹಾಗೂ ಬರಹಗಾರರಿಗೆ ಸಿಗುವ ಸಂಭಾವನೆ.

– ನಯನ ಬಜಕೂಡ್ಲು

5 Responses

  1. B.k.meenakshi says:

    ನಯನರವರೆ ಸುರಹೊನ್ನೆಯೊಂದಿಗಿನ ನಿಮ್ಮ ಒಡನಾಟ ಅನುಪಮ ಹಾಗೂ ಅಭಿಮಾನಪೂರ್ವಕವಾಗಿದೆ. ನಿಮ್ಮ ಲೇಖನ ತುಂಬ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು
    ಸುರಹೊನ್ನೆಯಬಳಗ ಹಾಗೂ ಓದುಗ ಲೇಖಕ ಬಳಗಕ್ಕೂ ಸಂಕ್ರಮಣದ ಶುಭಾಶಯಗಳು.

  2. ಬಿ.ಆರ್.ನಾಗರತ್ನ says:

    ವಾವ್ ಸುರಹೊನ್ನೆ ಎಂಬ ಅಂತರ್ಜಾಲ ಪತ್ರಿಕೆಯೊಡನೆ ತಮ್ಮ ಸಂಬಂಧ ಅದರ ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿರುವ ರೀತಿ ಬಹಳ ಚೆನ್ನಾಗಿ ಮೂಡಿ ಬಂದಿದೆ ಮೇಡಂ ಅಭಿನಂದನೆಗಳು.

  3. Hema says:

    ಈ ಪ್ರೀತಿಗೆ, ಅಭಿಮಾನಕ್ಕೆ ಅಭಾರಿ ನಯನಾ.ನಮ್ಮ ಶ್ರಮ ಸಾರ್ಥಕವಾಯಿತು.

  4. ಶಂಕರಿ ಶರ್ಮ, ಪುತ್ತೂರು says:

    ನಮ್ಮೆಲ್ಲರ ಪ್ರೀತಿಯ, ಹೆಮ್ಮೆಯ ಸುರಹೊನ್ನೆಯ ಹುಟ್ಟುಹಬ್ಬದ ಪ್ರಯುಕ್ತ ಬಹಳ ಚಂದದ, ವರ್ಣಮಯವಾದ , ತುಂಬು ಅಭಿಮಾನದ ಲೇಖನದ ಉಡುಗೊರೆಯನ್ನು ನೀಡಿರುವಿರಿ.. ನಯನ ಮೇಡಂ..ಧನ್ಯವಾದಗಳು

  5. Anonymous says:

    Very well Said

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: