ಕವಿ ನೆನಪು 27: ಕೆ ಎಸ್‌ ನ ಅವರ ಮತ್ತಷ್ಟು ಆತ್ಮೀಯರು

Share Button

ಕವಿ ಕೆ ಎಸ್‌ ನ


ಬಿ ಆರ್ ಲಕ್ಷ್ಮಣರಾವ್

ಕೆ ಎಸ್ ನ ರವರನ್ನು ತಮ್ಮ ಕಾವ್ಯಗುರುಗಳು ಎಂದೇ ಭಾವಿಸಿ ಗೌರವಿಸಿದವರು ಪ್ರೇಮಕವಿ ಬಿ ಆರ್ ಲಕ್ಷ್ಮಣರಾವ್. ಅವರ ಕಾವ್ಯದ ಮೊದಲ ದಿನಗಳಲ್ಲಿ ಅವರು ಅಡಿಗರ ಸೆಳೆತಕ್ಕೆ ಒಳಗಾಗಿದ್ದವರು. ತಮ್ಮ ಯೌವನದ ದಿನದಲ್ಲೇ ಲಂಕೇಶರು ಹೊರತಂದ ಅಕ್ಷರ ಹೊಸಕಾವ್ಯ ಸಂಕಲನದಲ್ಲಿ ನವ್ಯಕಾವ್ಯದ ಖ್ಯಾತನಾಮರ ಕವನಗಳೊಡನೆ ಗೋಪಿ ಮತ್ತು ಗಾಂಡಲೀನ ,ಟುವಟಾರ ಮುಂತಾದ ಕಾವ್ಯವನ್ನೂ ಹೊಂದಿದ್ದವರು. ಬಿ. ಆರ್.ಎಲ್.ನಂತರದ ದಿನಗಳಲ್ಲಿ ಅವರು ಪ್ರೇಮಕಾವ್ಯಕ್ಕೆ ಒಲಿದು ನಮ್ಮ ತಂದೆಯವರ  ಪ್ರಭಾವಕ್ಕೆ  ಸಿಲುಕಿದವರು.

1984ರ ಅಕ್ಟೋಬರಿನಲ್ಲಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಸಾಹಿತ್ಯ ವಿಚಾರ ಸಂಕಿರಣವನ್ನು ಅವರ ವಾಸಸ್ಥಳ ಚಿಂತಾಮಣಿಯಲ್ಲಿ ಸಂಯೋಜಿಸಿದ್ದವರು. ಕನ್ನಡದ ನಮ್ಮ ತಂದೆ ಸೇರಿದಂತೆ ಹಲವು ಖ್ಯಾತ ಕವಿಗಳನ್ನು ತಮ್ಮೂರಿಗೆ ಕರೆದೊಯ್ದು  ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದವರು ಬಿ. ಆರ್.ಎಲ್.(ಈಗ ಅವರು ಬೆಂಗಳೂರಿಗರು)

ಪ್ರೇಮಕವಿ ಬಿ ಆರ್ ಲಕ್ಷ್ಮಣರಾವ್

ಹಿ ಮ ನಾಗಯ್ಯ

ಪ್ರತಿ ಬಾರಿ “ಸ್ವಾಮಿಗಳೇ” ಎಂದು ಆತ್ಮೀಯವಾಗಿ ಕರೆಯುತ್ತಲೇ ಮನೆಯೊಳಗೆ ಬಂದು ವಿಶ್ವಾಸದ ನಡವಳಿಕೆಗೆ ಹೆಸರಾಗಿದ್ದರು ಹಿ. ಮ. ನಾಗಯ್ಯ. ಕವಿಗಳು ಹಾಗೂ ಪತ್ರಕರ್ತರು.”ಹಿಮಾಲಯ” ಎಂಬ ದಿನಪತ್ರಿಕೆ ಆರಂಭಿಸಿ, ನಷ್ಟ ಅನುಭವಿಸಿ, ಜೀವನೋಪಾಯಕ್ಕಾಗಿ ಜಯನಗರ ಟಿ ಬ್ಲಾಕ್ ನಲ್ಲಿ “ಹಿಮನಾ ಪ್ರಿಂಟರ್ಸ್” ಎಂಬ ಒಂದು ಸಣ್ಣ ಮುದ್ರಣಾಲಯ ಹೊಂದಿದ್ದರು. ನಮ್ಮ ತಂದೆಯವರ ಅಚ್ಚುಮೆಚ್ಚಿನ ಸ್ನೇಹಿತರಲ್ಲಿ ಒಬ್ಬರು. ಅವರ ಮುದ್ರಣಾಲಯ ನಮ್ಮ ತಂದೆಯವರ ಬಿಡುವಿನ ವೇಳೆಯ ಕಾಲ ಕಳೆಯುವ ತಾಣವೂ ಆಗಿತ್ತು.

ಕೇಶವಮೂರ್ತಿ

ನಮ್ಮ ತಂದೆಯವರು ತಮ್ಮ ಅಂತಿಮ ದಿನಗಳಲ್ಲಿ ಒಂದೆರಡು ಬಾರಿ ಹನುಮಂತನಗರದ ವಿನಾಯಕ ನರ್ಸಿಂಗ್ ಹೋಮ್ ಗೆ ಸೇರಬೇಕಾಯಿತು.ಯಾವುದೋ ವಾರ್ತಾವಾಹಿನಿ ಈ ಸುದ್ದಿಯನ್ನು ವರದಿ ಸಮೇತ ಬಿತ್ತರಿಸಿತು. ಇದನ್ನು ನೋಡಿದ ಒಬ್ಬರು ವ್ಯಕ್ತಿ ಆ ವಾರ್ತಾವಾಹಿನಿಯ ಕಛೇರಿಗೆ ಹೋಗಿ ನಮ್ಮ ಮನೆ ವಿಳಾಸ ಪಡೆದು ಮನೆಗೆ ಬಂದರು. ಅವರ ಹೆಸರು ಕೇಶವಮೂರ್ತಿ. ಸುಪ್ರಸಿದ್ಧ ಇಂಜನಿಯರ್. ದೇಶ,ವಿದೇಶಗಳಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದರು ಬಹಳ ಹಿಂದೆ ನಮ್ಮ ತಂದೆ ತಾಯಿ ಮೈಸೂರಿನ ಲಕ್ಷ್ಮೀಪುರಂನಲ್ಲಿ ಇದ್ದಾಗ ನಮ್ಮ ಮನೆಗೆ ವಾರಾನ್ನಕ್ಕೆ ಬರುತ್ತಿದ್ದರಂತೆ. ನಮ್ಮ ತಾಯಿಯವರ ಹತ್ತಿರ ಇದನ್ನು ಸಂತಸದಿಂದ ಜ್ಙಾಪಿಸಿ “ನಾನು  ನರಸಿಂಹಸ್ವಾಮಿಯವರನ್ನು ನೋಡಬೇಕು” ಎಂದರು.

ಅಲ್ಲೇ ಇದ್ದ ನಾನು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ. ದಾರಿಯಲ್ಲಿ ಅವರು “ನಿಮ್ಮ ತಂದೆಯರ ಹತ್ತಿರ ನೋಡಲು ಯಾರೋ ಬಂದಿದ್ದಾರೆ ಎಂದಷ್ಟೇ ಹೇಳಿ, ಉಳಿದದ್ದು ನಾನು ಮಾತನಾಡುತ್ತೇನೆ” ಎಂದರು. ಕೇಶವಮೂರ್ತಿ ನಮ್ಮ ತಂದೆಯವರ ಹತ್ತಿರ “ನರಸಿಂಹಸ್ವಾಮಿಗಳೇ”ಎಂದಾಗ ನಮ್ಮತಂದೆ”. “ಓ ಕೇಶವಮೂರ್ತಿ ,ಯಾವಾಗ ಬಂದೆ?“ ಎಂದು ಕೇಳಿದರು. 52 ವರುಷಗಳ ಭೇಟಿಯ ನಂತರ ಕಣ್ಣು ಕಾಣದಿದ್ದರೂ ಬರಿಯ ದನಿಯ ಸಹಾಯದಿಂದ ಗುರುತಿಸಿದ್ದು ಕೇಶವಮೂರ್ತಿಯವರಿಗೆ ಬಹಳ ಸಂತಸ ತಂದಿತು.

ಇಂದೂ ಕೇಶವಮೂರ್ತಿಯವರು (ಅವರಿಗೀಗ 86 ವರುಷ) ನಮ್ಮ ಮನೆಯ ಎಲ್ಲ ಸಮಾರಂಭಗಳಿಗೂ ಬಂದು ಹರಸುತ್ತಾರೆ.

ವೈ ಕೆ ಮುದ್ದುಕೃಷ್ಣ 

ನಮ್ಮ ತಂದೆಯವರು ಕೊನೆಯ ದಿನಗಳಲ್ಲಿ ಮನೆಯಲ್ಲಿ ಜಾರಿಬಿದ್ದು, ಆಸ್ಪತ್ರೆಗೆ ದಾಖಲಾಗಿ ,ಶಸ್ತ್ರಚಿಕಿತ್ಸೆಗೂ ಒಳಬೇಕಾದಾಗ ನಮ್ಮ ಕುಟುಂಬಕ್ಕೆ ಒತ್ತಾಸೆಯಾಗಿ ನಿಂತವರು ಪ್ರಸಿದ್ಧ ಸುಗಮ ಸಂಗೀತ ಗಾಯಕ ಹಾಗೂ ದಕ್ಷ ಸರ್ಕಾರಿ ಅಧಿಕಾರಿ ವೈ ಕೆ ಮುದ್ದುಕೃಷ್ಣ ಅವರು. ಆಸ್ಪತ್ರೆ ವೆಚ್ಚದ ಬಹುಭಾಗ ಸರಕಾರದಿಂದ ಮರುಪಾವತಿಯಾಗುವಂತೆ ಸಹಕರಿಸಿದವರು. ಆಗ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ವೈ ಕೆ ಎಮ್ ನಮ್ಮ ತಂದೆ ನಿಧನರಾದಾಗ ಸರ್ಕಾರಿ ಗೌರವದೊಡನೆ ಅಂತ್ಯಸಂಸ್ಕಾರ ನಡೆಸಲು ಸಂಬಂಧಪಟ್ಟ ಅಧಿಕಾರಿಗಳೊಡನೆ ಮಾತನಾಡಿದರು. ಚಿತಾಗಾರದಲ್ಲೂ ಕೊನೆಯವರೆಗೂ ಇದ್ದು ಜವಾಬ್ದಾರಿ ಮೆರೆದ ಕವಿಯ ನಿಜ ಅಭಿಮಾನಿ ಮುದ್ದುಕೃಷ್ಣ ಅವರು.

ಹೀಗೆ ನಮ್ಮ ತಂದೆಯವರ ಸ್ನೇಹವರ್ಗದಲ್ಲಿ ಸಹೃದಯೀ ಸಹಕವಿಗಳು, ಕಾವ್ಯದ ಆಸ್ವಾದಕರು, ನಿಜ ಅಭಿಮಾನಿಗಳು, ಆತ್ಮೀಯರು ಇದ್ದರೇ ಹೊರತು ಯಾರೂ ಅವರ ಕಾವ್ಯಪಂಥ ಪ್ರಚಾರಕರಿರಲಿಲ್ಲ. ತಮ್ಮ ಸಮರ್ಥಕರ ಪಡೆ ಕಟ್ಟುವುದು ಅವರಿಗೆ ಎಂದೂ ಬೇಕಿರಲಿಲ್ಲ.

ಮುಂದಿನ ಭಾಗಗಳಲ್ಲಿ ಕವಿಯ ಜೀವನ, ಕೆಲವು  ಮಹತ್ವದ ಪ್ರವಾಸಗಳು ಹಾಗೂ ಕುಟುಂಬದ ಬಗ್ಗೆ ತಿಳಿದುಕೊಳ್ಳಬಹುದು.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=30817

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

3 Responses

  1. ನಯನ ಬಜಕೂಡ್ಲು says:

    ಸಾಕಷ್ಟು ಅಚ್ಚರಿ ಮೂಡಿಸುವ ಲೇಖನ ಸರಣಿ, ಅಚ್ಚರಿ ಏನೆಂದರೆ, ಇಲ್ಲಿ ನಮಗಾಗುತ್ತಿರುವ ದೊಡ್ಡ ದೊಡ್ಡ ಸಾಹಿತಿಗಳು, ಕವಿ ಮಹಾಶಯರುಗಳ ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಪರಿಚಯ. ಸೊಗಸಾಗಿದೆ ಸರ್ ಲೇಖನಗಳು.

  2. Hema says:

    ಲೇಖನ ಸರಣಿ ಸೊಗಸಾಗಿ ಮೂಡಿ ಬರುತ್ತಿದೆ. ನಮಗೂ ಸಾಹಿತ್ಯ ಕ್ಷೇತ್ರದ ದಿಗ್ಗಜರನ್ನು ಸ್ಮರಿಸುವಂತಾಯಿತು.

  3. ಶಂಕರಿ ಶರ್ಮ, ಪುತ್ತೂರು says:

    ನಾಡಿನ ಹೆಮ್ಮೆಯ ಕವಿ, ತಮ್ಮ ಪೂಜ್ಯ ತಂದೆಯವರ ಜೀವನ ಪಥದಲ್ಲಿ ಸಂಧಿಸಿದ ಹಲವಾರು ಸಾಹಿತ್ಯ ದಿಗ್ಗಜರ ಪರಿಚಯವನ್ನು ನಮಗೆ ಅನಾಯಾಸವಾಗಿ ಒದಗಿಸುತ್ತಿರುವಿರಿ..ತಮ್ಮ ಸೊಗಸಾದ ಲೇಖನ ಮಾಲೆಯ ಮೂಲಕ..ಧನ್ಯವಾದಗಳು ಸರ್.

Leave a Reply to ಶಂಕರಿ ಶರ್ಮ, ಪುತ್ತೂರು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: