ಶಾಲೆಯ ಪುನರಾರಂಭ ಹಾಗೂ ಮಕ್ಕಳ ಯೋಗಕ್ಷೇಮ

Share Button

2020 ರ ವರ್ಷ ಇಡೀ ಜಗತ್ತಿನ ಜನರೆಲ್ಲಾ ಕಂಗೆಡುವಂತೆ ಮಾಡಿದ್ದು , ಅನುಭವಿಸಿದ ಕಷ್ಟ- ನಷ್ಟಗಳ ನಡುವೆ ಎಲ್ಲಾ ಕ್ಷೇತ್ರಗಳೂ ಕ್ರಮೇಣವಾಗಿ ಯಥಾಸ್ಥಿತಿಗೆ ಬರುವಂತಾಗಿ , ಸೂಕ್ತ ಕ್ರಮಗಳನ್ನು ಅಳವಡಿಸಿಕೊಂಡು ಹೊಸ ರೀತಿಯ ಜೀವನಶೈಲಿಗೆ ನಮ್ಮನ್ನು ನಾವು ಹೊಂದಾಣಿಕೆ ಮಾಡಿಕೊಂಡೆವು. ಕಾರಣ ಪರಿಸ್ಥಿಗೆ ತಕ್ಕಂತೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಆದರೆ  ಬಹುಮುಖ್ಯವಾಗಿ ಆತಂಕಗಳಿದ್ದದ್ದು ನಮ್ಮ ಪುಟ್ಟ ಮಕ್ಕಳ ಬಗ್ಗೆ. ಕೋರೋನ ರಜೆ ಘೊಷಣೆಯಾದ ಮೇಲೆ ಮಕ್ಕಳನ್ನು ಪಠ್ಯದ ಕಡೆ ಸೆಳೆಯುವ ಸಲುವಾಗಿ ಅನೇಕ ಯೋಜನೆಗಳು, ಆನ್ಲೈನ್ ತರಗತಿಗಳು ನಡೆದರೂ ಅವುಗಳಿಂದ ಎಲ್ಲಾ ಮಕ್ಕಳಿಗೆ ಅನುಕೂಲವಾಗಲಿಲ್ಲ. ಹಲವಾರು ಲೋಪದೋಷಗಳಿದ್ದಾಗ್ಯೂ ಸಂಕಷ್ಟ ಪರಿಸ್ಥಿತಿ ಯಲ್ಲಿ ಶಾಲೆಗಳನ್ನು ತೆರೆಯುವಂತಿರಲಿಲ್ಲ.

ಆದರೆ  ಈಗ ಪುನಃ ವಿದ್ಯಾಗಮ -2 ಕಲಿಕಾ ಕಾರ್ಯಕ್ರಮ ಆರಂಭ ಮಾಡುವ ಅವಕಾಶ ಆರನೇ ತರಗತಿಯಿಂದ ಒಂಭತ್ತನೇ ತರಗತಿಗಳಿಗೆ ದೊರೆತಿದೆ. ಶಾಲೆಗಳು ಮುಚ್ಚಿ ಒಂಭತ್ತು ತಿಂಗಳ ನಂತರ ಮೊದಲ ಬಾರಿಗೆ ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಶಿಕ್ಷಕರಾಗಿ ಸನ್ನದ್ಧರಾಗಿ, ಪೂರ್ವ ತಯಾರಿ ಮಾಡಿಕೊಂಡರೂ ಒಂದೆಡೆ ಆತಂಕವೂ ಮತ್ತೊಂದೆಡೆ ಸಂತಸವೂ ಇದೆ.

ಮಕ್ಕಳ ಭವಿಷ್ಯದ ಬಗ್ಗೆ ಪೋಷಕ ವರ್ಗದಲ್ಲಿ ಹಲವಾರು ಗೊಂದಲಗಳಿದ್ದವು. ಆನ್ಲೈನ್ ತರಗತಿಗಳಿಂದ ಮಕ್ಕಳು ಮಾನಸಿಕವಾಗಿ ಹಾಗೂ  ದೈಹಿಕವಾಗಿ  ಹೆಚ್ಚು ತೊಂದರೆಗೊಳಗಾಗಿದ್ದು  ಇದಕ್ಕೆ ಕಾರಣ. ಶಾಲೆಗಳು ತೆರೆದು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂಬ ಅನಿಸಿಕೆ ಎಲ್ಲರಿಂದಲೂ  ಬಂದಾಗ, ಶಿಕ್ಷಕಿಯಾಗಿ ನನಗೂ ಸಂತಸವಾಗಿತ್ತು.

2021 ರ ಮೊದಲ ದಿನ ವರ್ಷದ ಆರಂಭದ ಜೊತೆಗೆ ಮಕ್ಕಳ ಮತ್ತು ನಮ್ಮ ಪುನರ್ ಭೇಟಿ ಅಮೋಘವಾಗಿತ್ತು. ಕೊಠಡಿಗಳು, ಶೌಚಾಲಯಗಳು, ಆವರಣ, ಕಾರಿಡಾರ್ ಎಲ್ಲವನ್ನೂ ಸ್ಯಾನಿಟೈಸ್ ಮಾಡಿಸಿ ಶಾಲೆಯನ್ನು ತಳಿರು ತೋರಣಗಳಿಂದ ಅಣಿಮಾಡಿಕೊಂಡೆವು. ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಶಾಲೆಗೆ ಸ್ವಾಗತಿಸಿದೆವು. ಸೂಕ್ತ ಮುನ್ನೆಚ್ಚರಿಕೆ  ಕ್ರಮಗಳನ್ನು ಸೂಚಿಸಿದೆವು.

ಪೋಷಕರಾಗಿ/ ಶಿಕ್ಷಕರಾಗಿ ಮಕ್ಕಳಿಗೆ ನಾವು ಕೆಲವು ವಿಚಾರಗಳನ್ನು ಕಲಿಸಬೇಕಿದೆ. ಎಲ್ಲಾ ಮಕ್ಕಳಿಗೂ ಸಮಯಪಾಲನೆ , ಶಿಸ್ತು, ಸ್ವಚ್ಛತೆ, ಜೀವನ ಪಾಠ ಅತ್ಯಂತ ಅವಶ್ಯಕತೆ ಇದೆ.  ಓದಿನ ಜೊತೆಯಲ್ಲಿ ಈ ಎಲ್ಲಾ ಅಂಶಗಳಿಗೆ ಹೆಚ್ಚು ಒತ್ತುಕೊಡಬೇಕಾಗಿದೆ. ಕೋವಿಡ್ -19  ಕಲಿಸಿದ ಪಾಠ ಜೀವನದಲ್ಲಿ ಮರೆಯಲಾರದ್ದು.

“ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ
ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ
ಎತ್ತಲಿದಕೆಲ್ಲ ಕಡೆ” – ಮಂಕುತಿಮ್ಮ

ಡಿವಿಜಿಯವರ ಈ ನುಡಿಮುತ್ತುಗಳು ಅಕ್ಷರಶಃ ವಾಸ್ತವತೆಗೆ ಹಿಡಿದ ಕನ್ನಡಿಯಾಗಿವೆ. ಕೋವಿಡ್ 19 ರ ಆಪತ್ತುಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಕಾಣದ ವೈರಾಣುವಿನ ಭಯಕ್ಕೆ ಒಳಮನೆಯನೊಕ್ಕು ಕಾಲ ಕಳೆದ ದಿನಗಳು ಇನ್ನೆಂದೂ ಮರೆಯುವಂತಿಲ್ಲ.

ಸಾವಿನ ಭಯವನ್ನು ಕಣ್ಮುಂದೆ ಇಟ್ಟ ಕಳೆದ ವರ್ಷ ಮತ್ತೆಂದೂ ಬಾರದಿರಲಿ . ಈ ಎಲ್ಲಾ ಸಂದಿಗ್ಧ ಪರಿಸ್ಥಿತಿಯಲ್ಲಿ  ಮಕ್ಕಳ ಭವಿಷ್ಯ ಮೂಲೆಗುಂಪಾಗಬಾರದು. ಕೇವಲ ಪಠ್ಯಕ್ಕೆ ಸೀಮಿತಗೊಳ್ಳದ ಶಿಕ್ಷಣ ನೀಡಬೇಕು. ಉರುಹೊಡೆದು ,ಪರೀಕ್ಷೆ ಬರೆದು ಅಂಕಗಳನ್ನು ಗಳಿಸಿದರೇನು ಫಲವಿಲ್ಲ ; ” ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ “. ಮಕ್ಕಳಿಗೆ ಮನೆಯಿಂದಲೇ ಆರಂಭವಾಗಲಿ ಜೀವನ ಪಾಠ. ಅನುಭವಗಳು ಕಲಿಸುವ ಪಾಠ ಜೀವನ ಪರ್ಯಂತ ಶಾಶ್ವತವಾಗಿ ಇರುತ್ತವೆ.

ಹಾಗೆಯೇ ಮಕ್ಕಳ ಭವಿಷ್ಯಕ್ಕಾಗಿ ನಾವು ಸುಮ್ಮನೇ ಚಿಂತಾಕ್ರಾಂತರಾಗುವುದು ಅವಶ್ಯಕವಿಲ್ಲ. ಓದುವುದು ಕೇವಲ ಹಣಸಂಪಾದನೆಗಾಗಿ ಎಂಬ ಮನೋಭಾವ ಖಂಡಿತಾ ಬೇಡ. ಜೀವನ ಸಾಗಿಸಲು ಹಣ, ಬೇರೆ ಬೇರೆ ವಸ್ತುಗಳು ಬೇಕು ನಿಜ . ಆದರೆ, ಅವನ್ನು ಗಳಿಸಿದ ಮಾರ್ಗ ಯಾವುದು ಎಂಬುದು ಅದಕ್ಕಿಂತ ಹೆಚ್ಚು ಮುಖ್ಯ. ಆದ್ದರಿಂದ ಪೋಷಕರಾಗಿ /ಶಿಕ್ಷಕರಾಗಿ ನಮ್ಮ ಮಕ್ಕಳನ್ನು  ಉತ್ತಮ ಪ್ರಜೆಗಳನ್ನಾಗಿ ಸನ್ನದ್ಧಗೊಳಿಸುವ ಕಾರ್ಯ ನಿರ್ವಹಿಸೋಣ.

” Of children’s future , do not be over concerned.
Various are the ways to prosperity in the world.
Did the sons of Kuru and Pandu enjoy
Kingship?
Refuge to one is oneself
– Mankuthimma.

2021 ಹೊಸತನದೊಂದಿಗೆ ಕಳೆದ ವರ್ಷದ ನೋವನ್ನೆಲ್ಲ ಮರೆತು ಉಜ್ವಲ ಭವಿಷ್ಯಕ್ಕಾಗಿ ನಾವು ಜೊತೆಗೆ ನಮ್ಮ ಮಕ್ಕಳೂ ಸಿದ್ಧವಾಗಿರೋಣ.

-ಸರಿತಾ ಮಧು , ತರಿಕೆರೆ

10 Responses

  1. Anonymous says:

    Good one …very good writing…better to be published in news paper…

  2. Hema says:

    ಸಕಾಲಿಕವಾದ ಚೆಂದದ ಬರಹ .

  3. ನಯನ ಬಜಕೂಡ್ಲು says:

    ತುಂಬಾ ಚಂದದ ಬರಹ. ಬಹಳಷ್ಟು ಮಂದಿಯ ಅನುಭವಗಳೂ ನಿಮ್ಮ ಬರಹದಲ್ಲಿ ಬರೆದಿರುವುದೇ ಆಗಿದೆ.

  4. B.k.meenakshi says:

    ಒಳ್ಳೆಯ ಲೇಖನ. ಚೆನ್ನಾಗಿ ಮೂಡಿ ಬಂದಿದೆ

  5. Dharmanna dhanni says:

    ಒಳ್ಳೆಯ ಬರಹ.ಮಕ್ಕಳ ಬಗ್ಗೆ ಕಾಳಜಿ ವಹಿಸಿತು. ಲೇಖಕಿಯವರಿಗೆ ಧನ್ಯವಾದಗಳು

  6. ಶಂಕರಿ ಶರ್ಮ, ಪುತ್ತೂರು says:

    ಈಗಿನ ಈ ಸಂಕಷ್ಟದ ಸಮಯದ ಭೀಕರತೆಯ ಅರಿವು ಈಗಾಗಲೇ ಸಾಕಷ್ಟು ಪರಿಣಾಮವನ್ನು ಬೀರಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಯೊಂದೂ ಆಯೋಮಯ ಪರಿಸ್ಥಿತಿ.. ಮಕ್ಕಳ ಭವಿಷ್ಯದ ಬಗೆಗೆ ಪೋಷಕರ ಚಿಂತೆ. ಎಲ್ಲವೂ ಬೇಗ ಕೊನೆಗೊಂಡು ನೆಮ್ಮದಿಯ ಜೀವನ ಮರುಕಳಿಸುವುದೆಂಬ ಧನಾತ್ಮಕ ಚಿಂತನೆಯಿದೆ ಎಲ್ಲರಲ್ಲೂ. ಸೊಗಸಾದ ಸಕಾಲಿಕ ಲೇಖನ..ಧನ್ಯವಾದಗಳು ಮೇಡಂ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: